ಜಾಗ ಕೊಟ್ಟ ಭಟ್ಟರು ಜಗವ ಬಿಟ್ಟರು; ಜಾಗಟೆ ಹೊಡೆಯುತ್ತ”ಅಪ್ಪಟ ಸನ್ಯಾಸಿ” ಜಾಲಿಯಾಗಿಯೇ ಇದ್ದಾನೆ

ಜಾಗ ಕೊಟ್ಟ ಭಟ್ಟರು ಜಗವ ಬಿಟ್ಟರು; ಜಾಗಟೆ ಹೊಡೆಯುತ್ತ”ಅಪ್ಪಟ ಸನ್ಯಾಸಿ” ಜಾಲಿಯಾಗಿಯೇ ಇದ್ದಾನೆ

ಬಹುಕಾಲ ತುಮರಿಯ ಮುಖ ಕಾಣಲಿಲ್ಲ ಎಂಬ ಅನಿಸಿಕೆ ನಿಮ್ಮಲ್ಲಿದ್ದರೆ ಸುಳ್ಳೆಂದು ಹೇಳಲು ನಾನೇನು ವೀರ್ಯಪ್ಪನ್ ಅಲ್ಲ. ಇಂದು ಬರೆಯುವ ಕತೆಗಳು ಸ್ವಂತದ್ದಲ್ಲ; ಸಮಯಾನುಸಾರ ಸಂಗ್ರಹಿಸಿದ್ದು; ಒಂದೇ ಕಂತಿನಲ್ಲಿ ಮುಗಿಯಬಹುದೆಂಬ ಅನಿಸಿಕೆಯಿಲ್ಲ; ಪರವಾಗಿಲ್ಲ ನೀವೂ ಎಲ್ಲ ಓದ್ಕೊಳಿ, ಸನ್ಯಾಸಿ ಎಂದು ಹೇಳಿಕೊಳ್ಳುವ ಅನೇಕರ ಬಣ್ಣಬಣ್ಣದ ಕತೆಗಳನ್ನು ನಿಮಗಾಗಿ ಕೊಡುತ್ತೇನೆ. ಇವೆಲ್ಲ ಆಯಾಯ ಕಾಲಕ್ಕೆ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದ ಬೇರೆ ಬೇರೆ ಲೇಖಕರ ಬರಹಗಳು:

ಕನ್ನಡಪ್ರಭ

ಸನ್ಯಾಸಿ ಮತ್ತು ಇತರೆ ಕಥೆಗಳು
Published: 09 Sep 2014 10:31 AM IST
Updated: 09 Sep 2014 10:39 AM IST

ಆಶ್ರಮದಲ್ಲಿ ಆಗೀಗ ದೇವಮಾನವ ಆಯ್ದ ಭಕ್ತರಿಗೆ ಖಾಸಗಿಯಾಗಿ ಅನುಗ್ರಹ ನೀಡುವುದು ನಡೆದಿತ್ತು. ಬಹಳಷ್ಟು ಸಾರಿ ದೇವಮಾನವ ಆಯ್ದುಕೊಳ್ಳುತ್ತಿದ್ದ ಭಕ್ತರು ಹೆಂಗಸರೇ ಆಗಿರುತ್ತಿದ್ದರು.

ಹರಿದ್ವಾರದ ಆಶ್ರಮವೊಂದರ ಮುಂದುಗಡೆ ಬಸ್ಸೊಂದು ನಿಲ್ಲುತ್ತದೆ. ವಿದೇಶಿಗರು ಇಳಿಯತೊಡಗುತ್ತಾರೆ, ಅವರು ಸಾಮಾನ್ಯ ಪ್ರವಾಸಿಗರಂತೆ ಕಾಣುತ್ತಿಲ್ಲ. 24ರ ಹರೆಯದ ರಷ್ಯನ್ ವಿಕ್ಟರ್ ಶೆವ್‌ತ್ಸೊವ್, ತನ್ನ ಇಂಜಿನಿಯರ್ ಕೆಲಸಕ್ಕೆ ರಜಾ ಹಾಕಿ ವರ್ಷದಲ್ಲಿ ಒಂದು ತಿಂಗಳನ್ನು ಕುಟುಂಬದಿಂದ ದೂರ, ಭಾರತದಲ್ಲಿ ಕಳೆಯುತ್ತಾನೆ. ಅಮೆರಿಕಾದ ಕ್ಯಾಥರೀನ್ ಕೆಲ ವರ್ಷಗಳ ಕೆಳಗೆ ಭಾರತದ ಪ್ರವಾಸ ಕೈಗೊಂಡಿದ್ದಾಗ ಭೇಟಿಯಾದ ಅಮೆರಿಕಾದ ಟಾಮ್‌ರೊಂದಿಗಿನ ಅವಳ ಪರಿಚಯ ಮದುವೆ ತನಕ ಹೋಗುತ್ತದೆ. ಈಗ ಅವಳು ಕುಟುಂಬ ಸಮೇತ ಭಾರತಕ್ಕೆ ಬಂದು ಕೆಲವು ಕಾಲ ಇದ್ದು ಹೋಗುತ್ತಾಳೆ. ವರ್ಷದ ಹಿಂದೆ ಭಾರತಕ್ಕೆ ವಾಸ್ತುಶಾಸ್ತ್ರ ವಿದ್ಯಾರ್ಥಿಯಾಗಿ ಆಗಮಿಸಿದ್ದ ಕೊರಿಯಾದ ಕಿಮ್, ತನ್ನ ವಿದ್ಯಾರ್ಜನೆ ಮುಗಿಸಿ ತವರಿಗೆ ವಾಪಸ್ಸಾದ ಮೇಲೂ ಆಗಾಗ ಭಾರತಕ್ಕೆ ಭೇಟಿ ಕೊಡುತ್ತಾನೆ. ಹೀಗೆ ಗುರುಗಳ ಹುಡುಕಾಟದಲ್ಲಿರುವ ಜನಸಾಮಾನ್ಯರ ಸಾವಿರಾರು ಉದಾಹರಣೆಗಳು ಭಾರತದಲ್ಲಿ ಸಿಗುತ್ತವೆ. ಆಧ್ಯಾತ್ಮದ ಸೆಳೆತವೇ ಅಂತಹದ್ದು. ತಮ್ಮ ಧರ್ಮದಲ್ಲಿ, ತಮ್ಮ ಪ್ರಶ್ನೆಗಳಿಗೆ ಉತ್ತರ ಸಿಗದೆ ಇರುವುದರಿಂದ ಮಾತ್ರವಲ್ಲದೆ ಪ್ರಶ್ನೆ ಕೇಳಲೂ ಸ್ವಾತಂತ್ರ್ಯ ಇಲ್ಲದಿರುವುದರಿಂದ ’ಏನನ್ನೂ ಯಾರ ಮೇಲೂ ಹೇರದೆ ಎಂತವರನ್ನೂ ಸ್ವಾಗತಿಸುವುದರಿಂದಾಗಿಯೇ ಹಿಂದೂ ಧರ್ಮದೆಡೆ ಆಕರ್ಷಿತರಾಗಿ ಶಾಂತಿಯನ್ನು ಅರಸುತ್ತ ಇಲ್ಲಿ ಬಂದಿದ್ದೇವೆ’ ಎನ್ನುತ್ತಾನೆ ಆಸ್ಟ್ರೇಲಿಯಾದ ಮೈಕ್.

’ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಅಂತ ದಾಸರು ಹೇಳಿಲ್ವೆ. ಅಂತೆಯೇ ಭಾರತದಲ್ಲಿ ಗುರುಗಳಿಗೇನೂ ಕೊರತೆಯಿಲ್ಲ, ಇಲ್ಲಿ ಏರಿಯಾಗೊಬ್ಬರಂತೆ ಸಿಗುತ್ತಾರೆ. ನಾಕಾಣೆ ತೆಗೆದುಕೊಂಡು ಮದ್ದು ಮಾಡುವವರಿಂದ ಹಿಡಿದು ಶಾಂತಿ ನೆಮ್ಮದಿಯನ್ನೂ ಲಕ್ಷಾಂತರ ರೂಪಾಯಿಗಳಿಗೆ ಮಾರಾಟ ಮಾಡುವ ಕಾಸ್ಟ್ಲಿ ಗುರುಗಳು ಇಲ್ಲಿ ಸಿಗುತ್ತಾರೆ.

ವಿದೇಶದಲ್ಲಿ ಖ್ಯಾತಿ ಗಳಿಸಿದ, ಹೆಚ್ಚು ವಿದೇಶಿ ವಿನಿಮಯ ಪಾವತಿಸುವ ಭಾರತದ ಶ್ರೀಮಂತ ಗುರುವೊಬ್ಬರು ತಮ್ಮ ಮಂದ ಬೆಳಕಿನ ಕೋಣೆಯಲ್ಲಿ ತಮ್ಮನ್ನು ಭಕ್ತಿಭಾವದಿಂದ ಪೂಜಿಸುತ್ತಿದ್ದ ಫ್ರೆಂಚ್ ಭಕ್ತನನ್ನು ಮುಖಮೇಲೆ ಮಾಡಿ ನೆಲದಲ್ಲಿ ವಿವಸ್ತ್ರನಾಗಿ ಮಲಗಲು ಹೇಳುತ್ತಾರೆ. ಹಾಗೆ ಮಲಗಿದ ನಂತರ ಅವನ ಹಣೆ ಮತ್ತು ಹೊಟ್ಟೆಗೆ ಗಂಧದ ಲೇಪವನ್ನು ಹಚ್ಚಿ ತಮ್ಮ ಪಾದವನ್ನು ಅವನ ಹೊಟ್ಟೆಯ ಮೇಲೆ ಇಡುತ್ತಾರೆ. ಆ ಭಕ್ತನಿಗೆ ವಿಚಿತ್ರವೆನಿಸಿದರೂ ಇದು ಯಾವುದೋ ಹಿಂದೂ ಆಚರಣೆಯ ಭಾಗವಿರಬಹುದೆಂದು ಸುಮ್ಮನಾಗುತ್ತಾನೆ. ಆ ಶ್ರೀಮಂತ ಗುರು ಅವನತ್ತ ಭಾಗಿ ಅವನ ಗುಪ್ತಾಂಗವನ್ನು ತನ್ನ ಮುಷ್ಠಿಯಲ್ಲಿ ಹಿಡಿದಾಗ, ಇದನ್ನು ನಿರೀಕ್ಷಿಸದ ಆ ಫ್ರೆಂಚ್ ಭಕ್ತನಿಗೆ ಆಘಾತದ ಜೊತೆಗೆ ತುಂಬಾ ಇರಿಸುಮುರುಸು ಉಂಟಾಗುತ್ತದೆ. ಆತ ’ಇದು ಆಧ್ಯಾತ್ಮವಲ್ಲ’ ಎನ್ನುತ್ತಾ ಪ್ರತಿಭಟಿಸುತ್ತಾನೆ. ಇದರಿಂದ ಕೊಂಚವು ವಿಚಲಿತಗೊಳ್ಳದ ಆ ಗುರು ಅವನಿಗೆ ಉಪದೇಶ ನೀಡಿ ಅವನ ಬಾಯಿ ಮುಚ್ಚಿಸಿ ಅವನನ್ನು ಬಾಯಿಯಲ್ಲಿ ಚುಂಬಿಸುತ್ತಾನೆ. ಭಕ್ತ ಕೂಡ ಸಮ್ಮೋಹನಕ್ಕೊಳಗಾದವನಂತೆ ಭಾವ ಪರವಶನಾಗಿ ಚುಂಬನ ಕ್ರಿಯೆಯಲ್ಲಿ ಭಾಗಿಯಾಗುತ್ತಾನೆ.

ಆಧ್ಯಾತ್ಮದಲ್ಲಿ ಸುಖವನ್ನು ಕಂಡುಕೊಳ್ಳಲು ತನ್ನೂರನ್ನು ತೊರೆದು ಹೃಷಿಕೇಶದ ಆಶ್ರಮವೊಂದರಲ್ಲಿ ಭಗವದ್ ಚಿಂತನೆಯಲ್ಲಿ ಮುಳುಗಿದ್ದ ರಷ್ಯನ್ ಯುವತಿಯೋರ್ವಳು ಆಶ್ರಮದ ಸನ್ಯಾಸಿಗಳಿಂದಲೇ ಅತ್ಯಾಚಾರಕ್ಕೊಳಗಾಗುತ್ತಾಳೆ. ಮತ್ತೊಂದು ಘಟನೆಯಲ್ಲಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಕೆಲಸದಲ್ಲಿರುವ 27 ವರ್ಷದ ಹೆಣ್ಣುಮಗಳೊಬ್ಬಳನ್ನು ಪುಣೆಯಲ್ಲಿನ ಸ್ವಾಮಿಯೊಬ್ಬ ರುದ್ರಾಭಿಷೇಕ ನಡೆಸುವಂತೆ ಕೇಳಿಕೊಳ್ಳುತ್ತಾನೆ. ಆ ಹೆಣ್ಣು ಮಗಳು ಒಂದು ಕ್ಷಣ ದಿಗ್ಮೂಢಳಾಗುತ್ತಾಳೆ. ಆ ಸ್ವಾಮಿ ಹೇಳಿದ ರುದ್ರಾಭಿಷೇಕದಲ್ಲಿ ಅವಳು ಭಕ್ತಿಪೂರ್ವಕವಾಗಿ ತಾನು ನಂಬಿದ್ದ ಸ್ವಾಮಿಗಳ ಗುಪ್ತಾಂಗಕ್ಕೆ ಹಾಲು ಮತ್ತು ಜೇನಿನ ಅಭಿಷೇಕ ಮಾಡಬೇಕಿರುತ್ತದೆ!

ಮೊನ್ನೆಮೊನ್ನೆಯವರೆಗೂ ಟಿವಿ ಚಾನೆಲ್‌ಗಳಲ್ಲಿ ಅಸಂಖ್ಯಾತ ಭಕ್ತವೃಂದಕ್ಕೆ ಪ್ರವಚನ ನೀಡುತ್ತಿದ್ದ ಗುರು ಆಸಾರಾಮ್ ಬಾಪು 16ರ ಹರೆಯದ ಬಾಲಕಿಗೆ ನೀಡಿದ ಲೈಂಗಿಕ ಕಿರುಕುಳದ ದೂರಿನನ್ವಯ ಜೈಲು ಸೇರಿದ್ದಾನೆ. ಕೊನೆ ತನಕವು ತಾನು ನಿರಪರಾಧಿಯೆನ್ನುತ್ತ ಇದೆಲ್ಲ ತನ್ನ ವಿರುದ್ಧದ ಷಡ್ಯಂತ್ರವೆಂದು ಬಡಬಡಿಸುತ್ತಿದ್ದ ಬಾಪುನ ಕರ್ಮಕಾಂಡವನ್ನು ಮಾಧ್ಯಮಗಳು ಬ್ರೇಕಿಂಗ್ ನ್ಯೂಸ್, ಫ್ಲ್ಯಾಷ್ ನ್ಯೂಸ್ ಎಂದು ಕ್ಷಣಕ್ಷಣಕ್ಕೂ ಮರುಪ್ರಸಾರ ಮಾಡುತ್ತಾ ಅವನನ್ನು ಬಿಟ್ಟೂ ಬಿಡದಂತೆ ಕಾಡಿ ಅವನಿಗೆ ಜೈಲು ಸಿಗುವಂತೆ ನೋಡಿಕೊಂಡಿತು. ಇನ್ನು ನಿತ್ಯಾನಂದನಿಗೆ ತಾನು ಧರ್ಮಗುರುವಾಗಿದ್ದಾಗ ಸಿಗದಷ್ಟು ಪ್ರಚಾರ ತನ್ನ ವರ್ಣ’ರಂಜಿತ’ ರಾಸಲೀಲೆಯ ಸಿಡಿಯಿಂದ ಸಿಕ್ಕಿತು. ಆತ ರಾತ್ರೋರಾತ್ರಿ ಪ್ರಸಿದ್ಧಿ ಹೊಂದಿದ.

ಈಗ ದೇವಿಶ್ರೀ ಸರದಿ!

ಇವೆಲ್ಲಾ ಪ್ರಕರಣಗಳಲ್ಲಿ ಮಾಧ್ಯಮಗಳ ಪಾತ್ರ ಬಹಳ ಮಹತ್ತರವಾದುದು. ಕೊಂಚ ಅತಿ ಎನಿಸುವಂತೆ ತೋರಿಸಿದ್ದನ್ನೆ ತೋರಿಸಿದರೂ, ನ್ಯಾಯಕ್ಕಾಗಿ ಹಿಡಿದ ಪಟ್ಟನ್ನು ಬಿಡದೆ ಸರಕಾರದ ಮೇಲೆ ಒತ್ತಡ ಹೇರಿದ ಮಾಧ್ಯಮಗಳ ಸಾಧನೆ ಮೆಚ್ಚತಕ್ಕದ್ದು.

ಆಧ್ಯಾತ್ಮ ಹಾಗೂ ದೇವರ ಹೆಸರಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಇಂತಹ ಧರ್ಮಗುರುಗಳು ಕೇವಲ ಒಂದು ಧರ್ಮಕ್ಕೆ ಮಾತ್ರ ಸೀಮಿತ ಅಂತ ಅಂದುಕೊಂಡರೆ ತಪ್ಪಾಗುತ್ತದೆ. ಇಂತಹವರು ಬಹುತೇಕ ಎಲ್ಲಾ ಧರ್ಮಗಳಲ್ಲೂ ಕಾಣ ಸಿಗುತ್ತಾರೆ.

ಅಪಾರ ಭಕ್ತರನ್ನು ಹೊಂದಿರುವ ಇಂತಹ ಸ್ವಯಂಘೋಷಿತ ದೇವಮಾನವರಿಗೆ ಪುರಾಣ ಪ್ರವಚನಗಳಿಂದ ತಮ್ಮ ಭಕ್ತರನ್ನು ಭಕ್ತಿಯ (ಭಯದ) ನೆರಳಲ್ಲಿಟ್ಟು ಅವರನ್ನು ಶೋಷಣೆಗೊಳಪಡಿಸುವುದು ಬಹಳ ಸುಲಭ. ತಮ್ಮ ತನು-ಮನ-ಧನವನ್ನೆಲ್ಲ ಗುರುಗಳಿಗೆ ಅರ್ಪಿಸಿ ಶರಣು ಬಂದ ಭಕ್ತರನ್ನು ಲೈಂಗಿಕವಾಗಿ ಬಳಸಿಕೊಳ್ಳುವುದು ಅವರಿಗೆ ಕಷ್ಟವೇನಲ್ಲ.

ಸೆಕ್ಸ್ ಮತ್ತು ಹಿಂದೂ ಧರ್ಮವನ್ನು ಪ್ರತ್ಯೇಕಿಸಿ ನೋಡುವುದು ಸ್ವಲ್ಪ ಕಷ್ಟ. ಅಂದಮಾತ್ರಕ್ಕೆ ಇಂತಹ ಡೋಂಗಿ ದೇವಮಾನವರು ಸಾಚಾ ಎನ್ನಲು ಸಾಧ್ಯವಿಲ್ಲ. ಅವರು ಮಾಡುತ್ತಿರುವುದು ಅಪ್ಪಟ ಮೋಸ. ಒಂದು ಸುಂದರ ಹೆಣ್ಣು-ಗಂಡು ತಾನಾಗಿಯೇ ಒಲಿದು ಒಂದಾದರೆ ಅದು ಸೃಷ್ಟಿಯ ಸಹಜ ಹಾಗೂ ಸುಂದರ ಕ್ರಿಯೆ. ಅದು ಬಿಟ್ಟು ಅವಳನ್ನು-ಅವನನ್ನು ಮಾನಸಿಕವಾಗಿ ದುರ್ಬಲಗೊಳಿಸಿ ತನ್ನ ಲೈಂಗಿಕ ವಾಂಛೆಯನ್ನು ತೀರಿಸಿಕೊಳ್ಳುವ ಸಲುವಾಗಿ ಅವರ ತಲೆಯಲ್ಲಿ ಇಲ್ಲಸಲ್ಲದ್ದನ್ನು ಅಥವಾ ಎಷ್ಟೋ ಸಲ ಧರ್ಮವನ್ನೇ ಆಧಾರವಾಗಿಟ್ಟುಕೊಂಡು ಸೆಕ್ಸ್ ವಿಚಾರ ತುಂಬುವುದು ಅತ್ಯಾಚಾರವಲ್ಲದೆ ಮತ್ತಿನ್ನೇನು? ಇದರರ್ಥ ಭಾರತದಲ್ಲಿರುವ ಎಲ್ಲಾ ಹಿಂದೂ ಧರ್ಮದ ಯೋಗಿಗಳು, ಸನ್ಯಾಸಿಗಳು ಕಾಮುಕರೆಂದಲ್ಲ. ಈಗಲೂ ಜನಸಾಮಾನ್ಯರ ಕಷ್ಟದಲ್ಲಿ ಭಾಗಿಯಾಗಿ ಅವರಿಗೆ ನೆರವಾಗುತ್ತ, ಸರಳ ಜೀವನ ನಡೆಸುತ್ತ ಐಹಿಕ ಸುಖಗಳಿಂದ ದೂರವಾಗಿ ಬದುಕುತ್ತಿರುವ ಅನೇಕ ಸಾಧುಗಳು ನಮಗೆ ಸಿಗುತ್ತಾರೆ.

ಆನಂದ್ ಮತ್ತು ಪ್ರಿಯಾ (ಹೆಸರು ಬದಲಾಯಿಸಲಾಗಿದೆ) ದಂಪತಿಗಳು ಮದುವೆಯಾದ ಒಂದು ವರ್ಷದಲ್ಲಿ ತಮ್ಮ ಸಾಂಸಾರಿಕ ಜೀವನದಲ್ಲಿ ನೆಮ್ಮದಿ ಕಳೆದುಕೊಂಡು ಸ್ನೇಹಿತರೊಬ್ಬರ ಸಲಹೆಯಂತೆ ಹಿಮಾಲಯದ ತಪ್ಪಲಿನ ಆಶ್ರಮವೊಂದಕ್ಕೆ ಸೇರಿಕೊಳ್ಳುತ್ತಾರೆ. ಅಲ್ಲಿ ಸೇರಿಕೊಂಡ ನಂತರ ಅವರ ಬದುಕು ಬದಲಾಗಿ ಹೋಗುತ್ತದೆ. ಆಶ್ರಮದಲ್ಲೊಂದು ಮಬ್ಬುಗತ್ತಲ ಕೋಣೆ, ಅದನ್ನು ಧ್ಯಾನ ಮಂದಿರವೆಂದು ಕರೆಯುತ್ತಿದ್ದರು. ಒಮ್ಮೆ ಒಳಹೊಕ್ಕರೆ ಅಲ್ಲಿ ಯಾರ ಮುಖವು ಸರಿಯಾಗಿ ಕಾಣಿಸುತ್ತಿರಲಿಲ್ಲ. ಹಿನ್ನೆಲೆಯಲ್ಲಿ ಕೇಳಿಯೂ ಕೇಳದಂತೆ ತೂರಿ ಬರುತ್ತಿದ್ದ ಶಾಸ್ತ್ರೀಯ ಸಂಗೀತ ಮತ್ತು ಗುರುಗಳ ಅಶರೀರವಾಣಿ. ಆನಂದ್ ಮತ್ತು ಪ್ರಿಯಾ ಧ್ಯಾನದ ಕೋಣೆಯಲ್ಲಿ ಹತ್ತಿರ ಹತ್ತಿರ ಕುಳಿತುಕೊಳ್ಳುತ್ತಾರೆ. ಕೊನೆಯಲ್ಲಿ ಸಂಗೀತದ ಅಬ್ಬರ ಹೆಚ್ಚಾಗುತ್ತಿದ್ದಂತೆ ಭಕ್ತರನ್ನು ತಾಳ ಹಾಕುವಂತೆ ಹೇಳಲಾಗುತ್ತಿತ್ತು. ಈಗ ಎಲ್ಲ ದಂಪತಿಗಳು ಗುಂಪಿನಲ್ಲಿ ಕಳೆದುಹೋಗುತ್ತಾರೆ. ಆ ಸಂದರ್ಭದಲ್ಲಿ ಧ್ಯಾನದ ಉನ್ಮಾದದಲ್ಲಿದ್ದ ಪ್ರಿಯಾಳಿಗೆ ಯಾರೋ ತನ್ನ ಮೈ ಮುಟ್ಟುತ್ತಿದ್ದುದು ಸ್ವಲ್ಪ ಸ್ವಲ್ಪವೇ ತಿಳಿಯುತ್ತಿತ್ತು. ಆ ಕತ್ತಲ ಕೋಣೆಯಲ್ಲಿ ಆಕೃತಿಗಳು ಪರಸ್ಪರ ಆಲಂಗಿಸುವುದು, ಮುತ್ತು ಕೊಡುವುದು ನಡೆಯುತ್ತಿತ್ತು. ಆನಂದ್ ಮತ್ತು ಪ್ರಿಯಾ ದಂಪತಿಗಳು ಕೂಡ ಹಿಮಾಲಯದ ತಪ್ಪಲಿನ ಆ ದೇವಮಾನವನ ಆಣತಿಯಂತೆ ತಮಗೆ ಪರಿಚಯವಿಲ್ಲದ ಸಹವರ್ತಿಗಳೊಡನೆ ಆಶ್ರಮದ ಕ್ರಿಯೆಗಳಲ್ಲಿ ಭಾಗವಹಿಸುತ್ತಾರೆ. ಇದು ಹಳೆಯ ಬಾಂಧವ್ಯಗಳನ್ನು ಕಡಿದು ಹಾಕಲು ಆಶ್ರಮಗಳು ಅನುಸರಿಸುವ ಒಂದು ಪರಿಣಾಮಕಾರಿ ವಿಧಾನ ಎನ್ನುತ್ತಾರೆ ಮನಃಶಾಸ್ತ್ರಜ್ಞರು.

ಆ ಧ್ಯಾನದ ಕೋಣೆಯಿಂದ ಹೊರಬಂದ ಯಾರೂ ಮುಂಚಿನಂತೆ ಇದ್ದಿರಲು ಸಾಧ್ಯವೇ ಇರಲಿಲ್ಲ. ಆನಂದ್ ಮತ್ತು ಪ್ರಿಯಾರಿಗೂ ಇದು ತಿಳಿದುಹೋಗಿತ್ತು. ಆಶ್ರಮದಲ್ಲಿ ಅವರಿಗೆ ಹಳೆಯದನ್ನೆಲ್ಲ ಮರೆತು ಹೊಸ ಹುಟ್ಟಿನೆಡೆಗೆ ಮುಖ ಮಾಡುವುದನ್ನು ಹೇಳಿಕೊಡಲಾಗುತ್ತಿತ್ತು. ಕೆಲವು ಸಲವಂತು ಭಕ್ತರು ಇತರರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಲಾಗುತ್ತಿತ್ತು. ಅಪೂರ್ಣಗೊಂಡಿದ್ದ ಅವರ ಬದುಕು ಪ್ರತಿಸಲ ಕಾಮಕ್ರೀಡೆಯ ನಂತರ ಪೂರ್ಣಗೊಂಡಂತೆ ಭಾಸವಾಗುತ್ತಿತ್ತು.

ಆಶ್ರಮದಲ್ಲಿ ಆಗೀಗ ದೇವಮಾನವ, ಆಯ್ದ ಭಕ್ತರಿಗೆ ಖಾಸಗಿಯಾಗಿ ಅನುಗ್ರಹ ನೀಡುವುದು ನಡೆದಿತ್ತು. ಬಹಳಷ್ಟು ಸಾರಿ ದೇವಮಾನವ ಆಯ್ದುಕೊಳ್ಳುತ್ತಿದ್ದ ಭಕ್ತರು ಹೆಂಗಸರೇ ಆಗಿರುತ್ತಿದ್ದರು. ಪ್ರಿಯಾ ಹೇಳುವಂತೆ ಅದೊಂದು ಅಸ್ಪಷ್ಟವಾದ ನೆನಪು. ಆ ದಿನ ಆಕೆಗೆ ಗುರುವಿನ ಅನುಗ್ರಹದ ಭಾಗ್ಯವಾಗಿದೆ ಎಂದು ತಿಳಿಸಲ್ಪಟ್ಟಾಗ ಆಕೆಗೆ ಆದ ಸಂತೋಷ ಅಷ್ಟಿಷ್ಟಲ್ಲ. ನಂತರ ಗುರುವಿನೊಡನೆ ಅವರ ಮಂದ ಬೆಳಕಿನ ಖಾಸಗಿ ಕೋಣೆಯಲ್ಲಿ ನಡೆದದ್ದೆಲ್ಲ ಅಷ್ಟಾಗಿ ನೆನಪಿಲ್ಲ. ಆಕೆಯ ಹೊಟ್ಟೆಯ ಮೇಲೆ ಯಾರೋ ಕೈಯಾಡಿಸಿದಂತೆಲ್ಲಾ ಮೈಯಲ್ಲಿ ವಿದ್ಯುತ್ ಸಂಚಾರವಾದಂತೆ ಅನುಭವ, ನಂತರ ನಡೆದಿದ್ದೊಂದೂ ಆಕೆಗೆ ನೆನಪಿಲ್ಲ. ಆಕೆಗೆ ಪ್ರಜ್ಞೆ ಬಂದಾಗ ಬಳಿಯಿದ್ದ ಆಶ್ರಮದ ಇಬ್ಬರು ಹೆಂಗಸರು ಅವಳಲ್ಲಿ ’ನೀನು ಗುರುವಿನ ಅನುಗ್ರಹಕ್ಕೆ ಒಳಗಾಗಿದ್ದೀಯೆ’ ಎನ್ನುತ್ತಾರೆ.

ಮನಃಶಾಸ್ತ್ರಜ್ಞರು ಹೇಳುವಂತೆ, ಆಶ್ರಮದಲ್ಲಿ ದೇವಮಾನವರು ಮಾಡುವುದೆಲ್ಲ ಕಣ್‌ಕಟ್ಟು. ಮುಂಚೆಯೆ ಆಶ್ರಮಗಳಲ್ಲಿ ಅದಕ್ಕೆಂದೆ ಅನೇಕ ಏರ್ಪಾಡುಗಳನ್ನು ಮಾಡಿಕೊಂಡಿರುತ್ತಾರೆ. ಕತ್ತಲಕೋಣೆ, ಸಂಗೀತ, ಮಂದ ಬೆಳಕು, ಧೂಪದ ಹೊಗೆ ಹಾಕುವುದು, ಇತ್ಯಾದಿ.. ಇತ್ಯಾದಿ..

ಬಾಬಾಗಳು ಪ್ರವಚನ ನೀಡುವ ಸಂದರ್ಭದಲ್ಲಿ ತಮ್ಮ ಧ್ವನಿಯಿಂದಲೇ ಭಕ್ತರನ್ನು ಸಮ್ಮೋಹನಕ್ಕೊಳಪಡಿಸುವ ಸಾಧ್ಯತೆಯೂ ಇಲ್ಲದಿಲ್ಲ. ಇವರು ಆಶ್ರಮಕ್ಕೆ ಬರುವ ಭಕ್ತರನ್ನು ಹಂತ ಹಂತವಾಗಿ ಬುಟ್ಟಿಗೆ ಹಾಕಿಕೊಳ್ಳಲು ಮೊದಲೆ ತಯಾರಿ ಮಾಡಿಕೊಂಡಿರುತ್ತಾರೆ. ಕೆಲವು ಆಶ್ರಮಗಳಲ್ಲಿ ಗಾಂಜ, ಅಫೀಮುಗಳಂತಹ ಮಾದಕ ವಸ್ತುಗಳನ್ನೂ ಉಪಯೋಗಿಸುತ್ತಾರೆ. ಭಕ್ತರು ಪಡೆಯುವ ಪ್ರತಿಯೊಂದು ಅತಿಮಾನುಷ ಅನುಭವಗಳಿಗೆ ಬಹುತೇಕ ಇದುವೇ ಕಾರಣವಾಗಿರುತ್ತದೆ. ಇವುಗಳ ಅರಿವಿಲ್ಲದ ಭಕ್ತರು ತಮಗೆ ಜ್ಞಾನೋದಯವಾದಂತೆ, ದೇವರ ದರ್ಶನವಾಗಿದೆಯೆಂದು ನಂಬಿ ಅದಕ್ಕೆ ಕಾರಣಕರ್ತರಾದ ಗುರುಗಳ ದಾಸರಾಗಿಬಿಡುತ್ತಾರೆ. ಅದೇ ಸಮಯಕ್ಕೆ ಅವರುಗಳಿಗೆ ತಾವು ಮಾದಕ ವಸ್ತುಗಳ ದಾಸರಾಗಿರುವುದು ತಿಳಿಯುವುದೇ ಇಲ್ಲ. ಧರ್ಮದಲ್ಲಿ ಮಾದಕ ಪದಾರ್ಥ ಬೆರೆಸುವ ಮೂಲಕ ಕಾರ್ಲ್ ಮಾರ್ಕ್ಸ್ ಹೇಳಿದ ’ಧರ್ಮ ಅಫೀಮಿನಂತೆ’ ಎಂಬ ಮಾತನ್ನು ಅಕ್ಷರಶಃ ಪಾಲಿಸುತ್ತಿದ್ದಾರೆ ಈ ಡೋಂಗಿ ಬಾಬಾಗಳು! ಅಮೆರಿಕಾದ ಕ್ಯಾರೆನ್ ಹೇಳುವಂತೆ ’ಶಕ್ತಿ ಸಂಚಯನಕ್ಕೆ ಕಾಮ ಬಹಳ ಅವಶ್ಯ. ಯೋಗಾಭ್ಯಾಸದಿಂದ ಕುಂಡಲಿನಿಯನ್ನು ಜಾಗೃತಗೊಳಿಸುವ ಸನ್ಯಾಸಿಗಳ ಹಸಿದ ದೇಹಕ್ಕೆ ಕಾಮ ಆಹಾರವಿದ್ದಂತೆ’.

ಪಾಶ್ಚಿಮಾತ್ಯರಿಗೆ ಹಿಂದಿನಿಂದಲೂ ಭಾರತ ಎಂದರೇನೋ ಸೆಳೆತ. ಸ್ವೇಚ್ಛೆ, ಫ್ರೀ ಸೆಕ್ಸ್ ಇರುವ ದೇಶಗಳ ಜನರು ಕೂಡಾ ಭಾರತದ ಆಧ್ಯಾತ್ಮದೆಡೆ ಮುಖ ಮಾಡಿದ್ದಾರೆ. ಬಹುತೇಕ ಪಾಶ್ಚಿಮಾತ್ಯರು ಒಂದಷ್ಟು ಕುತೂಹಲ ಮತ್ತು ಭ್ರಮೆಗಳನ್ನು ಇಟ್ಟುಕೊಂಡೆ ಭಾರತಕ್ಕೆ ಬರುತ್ತಾರೆ. ಇದಕ್ಕೆ ಅನೇಕ ಕಾರಣಗಳನ್ನು ಪಟ್ಟಿ ಮಾಡಬಹುದು. ಅದರಲ್ಲಿ ಸೆಕ್ಸ್ ಕೂಡಾ ಒಂದು. ಸೆಕ್ಸ್ ಅನ್ನುವುದು ಒಂದು ದೈಹಿಕ ಆಕರ್ಷಣೆಯಾದರೂ ಅದರಲ್ಲೂ ಆಧ್ಯಾತ್ಮ ಬೆರೆಸಿ ಮಾನಸಿಕ ನೆಮ್ಮದಿ ಪಡೆಯಬಹುದೆಂಬ ವಾದ. ಮತ್ತೊಂದು ಕಾರಣವನ್ನು ಹೇಳುವುದಾದರೆ ಸಂಗೀತ. ಹಿಪ್ಪಿ ಸಂಸ್ಕ ೃತಿ, ಪಾಶ್ಚಾತ್ಯ ಸಂಗೀತ ಮತ್ತು ಭಾರತದ ಆಧ್ಯಾತ್ಮಗಳ ನಡುವೆ ಸಂಬಂಧವಿದೆಯೆಂದರೆ ನಂಬುವುದು ಕಷ್ಟವಾದರೂ, ನಿಜ.

ಅಮೇರಿಕಾದಲ್ಲಿ ಚಿತ್ರವಿಚಿತ್ರ ಬಟ್ಟೆ ಧರಿಸಿ ದಾಡಿ ಮೀಸೆ ಹುಲುಸಾಗಿ ಬೆಳೆಸಿ ಕೈಯಲ್ಲಿ ಗಿಟಾರು ಮತ್ತು ತೋಳಲ್ಲಿ ಹುಡುಗಿಯರನ್ನು ಬಳಸಿಕೊಂಡ ಹಿಪ್ಪಿಗಳು ಸದಾ ಅಮಲಿನಲ್ಲಿ ತಿರುಗಾಡುತ್ತಿದ್ದ ಕಾಲ ಒಂದಿತ್ತು. 60-70ರ ದಶಕದ ಬಾಲಿವುಡ್ ಚಿತ್ರಗಳಲ್ಲಿ ಅಷ್ಟೇ ಯಾಕೆ ಕನ್ನಡ ಚಿತ್ರಗಳಲ್ಲೂ ಹಿಪ್ಪಿ ಸಂಸ್ಕೃತಿಯ ಪ್ರಭಾವವನ್ನು ಕಾಣಬಹುದು. ಹಿಪ್ಪಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಆಶಾ ಭೋಂಸ್ಲೆ ಹಾಡಿದ ’ಧಮ್ ಮಾರೋ ಧಮ್‌’ ಹಾಡು ಒಂದು ಕಾಲದಲ್ಲಿ ಭಾರತೀಯರನ್ನು ಹುಚ್ಚೆಬ್ಬಿಸಿದ್ದವು. ಅದರಲ್ಲಿ ಗಾಂಜಾ ಸೇವಿಸಿ ಮೈಮೇಲೆ ಪ್ರಜ್ಞೆ‌ಇಲ್ಲದೆ ಕುಡಿದ ಅಮಲಿನಲ್ಲಿ ದೇವರನ್ನು ಆರಾಧಿಸುವ ಬಿಳಿಯರ ಗುಂಪಿನ ನಡುವೆ ’ಹರೇ ಕೃಷ್ಣ ಹರೇ ರಾಮ್‌’ ಎಂದು ತೂರಾಡುತ್ತಾ ಬರುವ ಜೀನತ್ ಅಮಾನ್ ಯಾರಿಗೆ ತಾನೇ ನೆನಪಿಲ್ಲ ಹೇಳಿ!

ಹಿಪ್ಪಿ ಸಂಸ್ಕೃತಿಯ ಬೆಳವಣಿಗೆ 20ನೇ ಶತಮಾನದ ಮಧ್ಯಭಾಗದಲ್ಲಿ ಅಮೇರಿಕಾದಲ್ಲಿ ಕಾಣಿಸಿಕೊಂಡಿತು. ಇದರ ಮೂಲವನ್ನು ಹುಡುಕುತ್ತಾ ಹೋದರೆ 19ನೇ ಶತಮಾನದ ಆದಿಯಲ್ಲಿ ಯುರೋಪ್‌ನ ಸಾಂಸ್ಕೃತಿಕ ಚಳುವಳಿಗೆ ಕಾರಣವಾದ ಭಾರತೀಯ ಸಂಸ್ಕೃತಿಯಿಂದ ಪ್ರೇರಣೆಗೊಂಡ ’ಬೊಹೆಮಿಯನ್‌’ ಸಂಸ್ಕೃತಿಯ ತನಕ ಹೋಗುತ್ತದೆ. ಹಿಪ್ಪಿ ಸಂಸ್ಕೃತಿಯು ’ಮರಳಿ ಪ್ರಕೃತಿಯತ್ತ’ (ಇಛ್ಛ್ಞ ಡ್ಟಿ ಟಿಛಡ್ಡ್ಠಿಜ) ಎಂಬ ತತ್ವವನ್ನೊಳಗೊಂಡಿದೆ. ಸ್ವಾತಂತ್ರ್ಯ, ಸಂಗೀತ, ಮುಕ್ತ ಪ್ರೀತಿ, ಸಸ್ಯಾಹಾರ ಪಾಲನೆ, ಹಂಚಿ ಜೀವಿಸುವಿಕೆ ಇವೆಲ್ಲವೂ ಅದರ ಭಾಗವಾಗಿದೆ. ಅಂದಿನ ಕಾಲದ ರಾಕ್ ಬ್ಯಾಂಡುಗಳಲ್ಲಿ ಹಿಪ್ಪಿ ಸಂಸ್ಕೃತಿಯ ಪ್ರಭಾವವನ್ನು ಕಾಣಬಹುದು. ಲೆಡ್ ಝೆಪೆಲಿನ್, ಡೀಪ್ ಪರ್ಪಲ್‌ನಂತಹ ರಾಕ್ ಆ್ಯಂಡ್ ರೋಲ್ ಬ್ಯಾಂಡುಗಳು ಮತ್ತು ಜಿಮ್ಮಿ ಹೆಂಡ್ರಿಕ್ಸ್‌ನಂಥ ಕಲಾವಿದರು ತಮ್ಮ ಹಾಡುಗಳಲ್ಲಿ ಹಿಪ್ಪಿ ತತ್ವಗಳನ್ನು ಅಭಿವ್ಯಕ್ತಪಡಿಸಿದ್ದಾರೆ. ವಿಯೆಟ್ನಾಮ್ ಯುದ್ಧದ ಸಮಯದಲ್ಲಿ ಹಿಪ್ಪಿಗಳು ಅಮೆರಿಕಾ ಸರ್ಕಾರದ ವಿರುದ್ಧ ನಡೆಸಿದ ’ಆ್ಯಂಟಿ ವಾರ್‌’ ಚಳವಳಿ ಈಗಲೂ ವಿಶ್ವದಾದ್ಯಂತ ಪ್ರಸಿದ್ಧಿ ಹೊಂದಿದೆ. ಅಹಿಂಸೆ ಮತ್ತು ಶಾಂತಿಯನ್ನು ಪ್ರತಿಪಾದಿಸುವ ಹಿಪ್ಪಿ ಸಂಸ್ಕೃತಿಯಲ್ಲಿ ಅನೇಕ ಭಾರತೀಯ ಮೌಲ್ಯಗಳನ್ನು ನಾವು ಕಾಣಬಹುದು.

ಆ್ಯಪಲ್ ಸಹಸಂಸ್ಥಾಪಕ ಸ್ಟೀವ್ ಜಾಬ್ಸ್ ಕೂಡಾ ಒಂದು ಕಾಲದಲ್ಲಿ ಹಿಪ್ಪಿಯಾಗಿದ್ದರೆಂದರೆ ನಿಮಗೆ ಆಶ್ಚರ್ಯವಾಗಬಹುದು. ಆವರು ಭಾರತೀಯ ಸಂಸ್ಕ ೃತಿಯ ಬಗೆಗೂ ಒಲವನ್ನು ಬೆಳೆಸಿಕೊಂಡಿದ್ದರು, ಅಷ್ಟೇ ಅಲ್ಲ ಪಾಲಿಸುತ್ತಲೂ ಇದ್ದರು. ಆ್ಯಪಲ್ ಸಂಸ್ಥೆ ಕಟ್ಟುವ ಮೊದಲು ಜಾಬ್ಸ್‌ರು 1974ರಲ್ಲಿ ’ಮಹಾರಾಜ್ ಜೀ’ ಎಂದೇ ಪ್ರಸಿದ್ಧರಾಗಿದ್ದ ಹಿಮಾಲಯದ ಸ್ವಾಮೀಜಿಯೊಬ್ಬರನ್ನರಸಿ ಭಾರತಕ್ಕೆ ಬಂದಿದ್ದರು.

ಒಟ್ಟಿನಲ್ಲಿ ಅನಾದಿಕಾಲದಿಂದಲೂ ಪಾಶ್ಚಾತ್ಯ ದೇಶಗಳ ಜನರು ಭಾರತೀಯ ಸಂಸ್ಕ ೃತಿ ಎಂದರೆ ಒಂದು ಬಗೆಯ ಕುತೂಹಲ ಮತ್ತು ಪ್ರೀತಿಯಿಂದ ನೋಡುತ್ತಲೆ ಬಂದಿದ್ದಾರೆ. ಚಲನಚಿತ್ರಗಳಲ್ಲಿ, ಸಂಗೀತದಲ್ಲಿ ಇನ್ನಿತರ ಪ್ರಕಾರಗಳಲ್ಲಿ ಭಾರತೀಯ ಅಂಶಗಳನ್ನು ಕಂಡು, ಕೇಳಿ ಒಂಚೂರು ತಿಳಿದುಕೊಂಡಿರುವ ಅಲ್ಲಿನ ಮಂದಿ ಭಾರತದ ಬಗ್ಗೆ, ಆಧ್ಯಾತ್ಮದ ಬಗ್ಗೆ ವಿಚಿತ್ರ ಕಲ್ಪನೆಯೊಂದನ್ನು ಬೆಳೆಸಿಕೊಂಡಿರುತ್ತಾರೆ. ಹೀಗೆ ಆಧ್ಯಾತ್ಮಿಕ ಅನುಭೂತಿಗಾಗಿ ಭಾರತಕ್ಕೆ ಬಂದು ಇಲ್ಲಿನ ಆಚಾರ ವಿಚಾರಗಳಿಗೆ ಮಾರುಹೋಗುವ ಅವರು ಡೋಂಗಿ ಬಾಬಾಗಳಿಂದ ಮೋಸಕ್ಕೆ ಒಳಗಾಗಿ ಹಿಂದೂ ಸಂಸ್ಕ ೃತಿಗೆ ಕಳಂಕ ಬರುವಂತಾಗಿದೆ.

ಬ್ಲೇಡಿನಿಂದ ಕುಯ್ದು ಸರ್ವರೋಗಗಳಿಗೆ ಚಿಕಿತ್ಸೆ ನೀಡುತ್ತಿದ್ದ ಅಸ್ಲಂ ಬಾಬಾ, ಹೀಲಿಂಗ್ ವಿಧಾನದ ಮೂಲಕ ಚಿಕಿತ್ಸೆ ನೀಡುವ ಬೆನ್ನಿಹಿನ್, ತನ್ನ ಪತ್ನಿ (ಮಿರ್ಜಾ ಇಸ್ಮಾಯಿಲ್‌ರ ಮೊಮ್ಮಗಳು)ಯನ್ನು ಜೀವಂತ ಹೂತುಹಾಕಿ ಈಗ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ಶ್ರದ್ಧಾನಂದ ಮುಂತಾದ ಡೋಂಗಿ ಸನ್ಯಾಸಿಗಳಿಂದ ಸಮಾಜದ ಸ್ವಾಸ್ಥ್ಯ ಕೆಡುತ್ತಿದೆ. ಇಂತವರಿಂದ ಯಾರ ಏಳಿಗೆಯನ್ನು ತಾನೆ ಮಾಡಲು ಸಾಧ್ಯ. ಇವುಗಳಿಗೆ ಏಕಮಾತ್ರ ಪರಿಹಾರವೆಂದರೆ ಮೊದಲು ಜನರು ಜಾಗೃತರಾಗಬೇಕು. ಗುರುಗಳೆಂದು ಸಿಕ್ಕಸಿಕ್ಕವರ ಕಾಲಿಗೆ ಅಡ್ಡ ಬೀಳುವುದನ್ನು ಬಿಟ್ಟು ನಮಗೆ ನಾವೇ ಗುರುವಾಗಬೇಕು. ನಮ್ಮ ಜುಟ್ಟನ್ನು ಇನ್ನೊಬ್ಬರ ಕೈಗೆ ಕೊಡುವುದಲ್ಲ.

ಮಾಧ್ಯಮಗಳೆದುರು ಬೆತ್ತಲಾಗಿ ಮೂರು ನಾಲ್ಕು ವಾರ ಬ್ರೇಕಿಂಗ್‌ನ್ಯೂಸ್‌ಗಳಿಗೆ ಆಹಾರವಾಗಿ, ಅನೇಕ ಟಿವಿ ಚಾನೆಲ್‌ಗಳ ಟಾಕ್ ಶೋಗಳಲ್ಲಿ ಟಾಪಿಕ್ ಆಗಿ, ಜನ ಸಾಮಾನ್ಯರ ಬಾಯಲ್ಲಿ ’ಛೀ.. ಥೂ…’ ಅನ್ನಿಸಿಕೊಂಡು ನಂತರ ನಡೆಯುವುದಾದರೂ ಏನು? ಏನೂ ಇಲ್ಲ! ಸುದ್ದಿ ಹಳಸಾಗುತ್ತಲೆ ಮಾಧ್ಯಮದವರು ಈ ಡೋಂಗಿ ಬಾಬಾಗಳತ್ತ ಕಣ್ಣು ಹಾಕುವುದಿರಲಿ ಮೂಸಿಯೂ ನೋಡುವುದಿಲ್ಲ.

ಮಾಧ್ಯಮಗಳ ಒತ್ತಡಕ್ಕೆ ಮಣಿದು ಕಳಂಕಿತರ ವಿರುದ್ಧ ಚಿಟಿಕೆ ಕ್ರಮ ಕೈಗೊಳ್ಳುತ್ತಿದ್ದ ಸರಕಾರ ಕೂಡಾ ನಂತರ ಸುಮ್ಮನಾಗಿಬಿಡುತ್ತದೆ. ಒಂದಷ್ಟು ದಿನಗಳ ಕಾಲ ಕೋರ್ಟು ಕಚೇರಿ ಅಲೆದು ಫೈನ್ ಕಟ್ಟಿದರೆ ಅಲ್ಲಿಗೆ ಮುಗಿಯಿತು. ತಮ್ಮ ಸಂಗಡಿಗರೊಡನೆ ಬಿಳಿ ಇಲ್ಲ ಕೇಸರಿ ವಸ್ತ್ರಧಾರಿಯಾಗಿ ವೇದಿಕೆ ಏರುವ ಅದೇ ಸ್ವಾಮಿಯವರನ್ನು ಮುಂದಿನ ಜಾತ್ರೆಯಲ್ಲೋ, ಇನ್ಯಾವುದೋ ಧಾರ್ಮಿಕ ಉತ್ಸವದಲ್ಲೋ ಮುಖ್ಯ ಅತಿಥಿಯಾಗಿ ನೋಡುವ ಸೌಭಾಗ್ಯ ಸಾರ್ವಜನಿಕರದ್ದು.

ಈ ಡೋಂಗಿ ದೇವಮಾನವರು ಎಷ್ಟೋ ಸಲ ಸಿಕ್ಕಿಬೀಳದೆಯೂ ಇರಬಹುದು. ಇದಕ್ಕಾಗಿ ಅವರು ಉಪಯೋಗಿಸುವ ಮಾರ್ಗಗಳು ಅನೇಕ. ಮಾಡುವುದೆಲ್ಲ ಮಾಡಿ ಕೊನೆಗೆ ಶೋಷಣೆಗೊಳಗಾದವರಿಗೆ ಏನಾದರೂ ಅನುಮಾನ ಬಂದಿದ್ದು ಗೊತ್ತಾದರೆ ತನ್ನ ಆಧ್ಯಾತ್ಮಿಕ ಜ್ಞಾನವನ್ನು ಉಪಯೋಗಿಸಿಕೊಂಡು ಕಾಮಕೇಳಿಯೂ ಆಧ್ಯಾತ್ಮದ ಆಚರಣೆಯ ಭಾಗವೆಂದು ನಂಬಿಸುತ್ತಾರೆ. ಹಾಗಾಗಿ ತಾವು ಮೋಸ ಹೋಗಿರುವುದೇ ಎಷ್ಟೋ ಬಾರಿ ಭಕ್ತರುಗಳಿಗೆ ತಿಳಿಯುವುದಿಲ್ಲ. ಕೆಲವೊಮ್ಮೆ ಆಶ್ರಮಕ್ಕೆ ಬರುವಾಗಲೇ ಕಾಂಟ್ರ್ಯಾಕ್ಟಿನಲ್ಲಿ ಅದರ ಬಗ್ಗೆ ಉಲ್ಲೇಖಿಸಿ ಮುಂಚೆಯೇ ಸಹಿ ಹಾಕಿಸಿಕೊಂಡು ಬಿಟ್ಟಿರುತ್ತಾರೆ. ಈ ರೀತಿಯಾಗಿ ಕಾಮವನ್ನು ಸಾಮಾನ್ಯ ಸಂಗತಿಯಂತೆ ಬಿಂಬಿಸಲು ಯತ್ನಿಸುತ್ತಾರೆ. ಇನ್ನು ಕೆಲವು ಸಲ ಮೋಸ ಹೋದ ಭಕ್ತರು ತಾವಾಗಿಯೇ ಪೊಲೀಸರಲ್ಲಿಗೆ ಹೋಗಿ ದೂರು ಕೊಡಲು ಹಿಂದೇಟು ಹಾಕುತ್ತಾರೆ.

ಜನ ಹೀಗೆ ಆಗಲು ಬಿಟ್ಟದ್ದಕ್ಕೆ ತಮ್ಮನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಎಲ್ಲಿ ಆಡಿಕೊಳ್ಳುತ್ತಾರೋ ಎಂಬ ಭಯವೇ ಇದಕ್ಕೆಲ್ಲ ಕಾರಣ. ಹಾಗಾಗಿಯೇ ಎಷ್ಟೋ ಜನ ಯಾರಲ್ಲಿಯೂ ಇದರ ಬಗ್ಗೆ ಹೇಳಿಕೊಳ್ಳದೆ ಮುಚ್ಚಿಹಾಕುತ್ತಾರೆ. ಇದು ಅಪಾಯಕಾರಿ. ಮನಸ್ಸಿನೊಳಗೆ ಕೊರಗುವುದರಿಂದ ಮನೋರೋಗಕ್ಕೆ ಇದು ಎಡೆ ಮಾಡಿಕೊಡಬಹುದು.

ರಷ್ಯನ್ ಯುವತಿಯೋರ್ವಳನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಳ್ಳುವ ಸನ್ಯಾಸಿಯೊಬ್ಬ ಅವಳ ಮೈ ದವಡುತ್ತಾ ಮೈ ಮೇಲಿನ ಬಟ್ಟೆಯನ್ನು ತೆಗೆಯಲು ಹೇಳುತ್ತಾನೆ. ನಂತರ ಇನ್ನೂ ಮುಂದುವರೆಯುತ್ತಾನೆ. ಆ ಯುವತಿಗೆ ಮೊದ ಮೊದಲು ಅನುಮಾನ ಬಂದರೂ ಸುಮ್ಮನಾಗುತ್ತಾಳೆ. ಯಾವಾಗ ಸನ್ಯಾಸಿ ತನ್ನ ಜೊತೆ ಮಲಗಿದಂತೆಯೇ ಆಶ್ರಮದ ಇನ್ನಿತರ ಸನ್ಯಾಸಿಗಳೊಡನೆ ಮಲಗಬೇಕೆನ್ನುತ್ತಾನೋ ಆವಾಗ ಅವಳಿಗೆ ತಾನು ಮೋಸ ಹೋದದ್ದು ದೃಢವಾಗುತ್ತದೆ. ಆಕೆ ಕೂಡಲೇ ಆಶ್ರಮ ಬಿಡುತ್ತಾಳೆ. ಇದನ್ನು ಪೊಲೀಸರ ಬಳಿಗೆ ಹೋಗಿ ಏನೆಂದು ಹೇಳುವುದು. ಹೇಳಿದರೂ, ಸಾಕ್ಷ್ಯಪುರಾವೆಗಳಿಲ್ಲದೆ ಅವರು ತಾನೆ ಏನು ಮಾಡಲು ಸಾಧ್ಯ? ಹಿಂದೆ ಈ ರೀತಿಯಾಗಿ ಎಷ್ಟು ಕೇಸುಗಳು ಮುಚ್ಚಿಹೋಗಿವೆಯೋ ಏನೋ!

ಇಷ್ಟಕ್ಕೂ ದೇವರ ಮಧ್ಯವರ್ತಿಗಳಂತೆ ನಟಿಸುತ್ತ ತಮ್ಮ ಜ್ಞಾನವನ್ನು ತೀಟೆ ತೀರಿಸಿಕೊಳ್ಳುವುದಕ್ಕಾಗಿ ತಮಗೆ ಬೇಕಾದ ಹಾಗೆ ತಿರುಚುವ ಇಂತಹ ಕಳ್ಳ ಸನ್ಯಾಸಿಗಳು ಸಿಕ್ಕಿಬಿದ್ದ ನಂತರವೂ ಅವರಿಗೆ ಕೈ ಮುಗಿಯುವುದು ಎಷ್ಟು ಸರಿ! ಜನರ ಮನಸ್ಸು ಅಷ್ಟು ದುರ್ಬಲವೇ?

-ಹರ್ಷವರ್ಧನ್

————–

ಪ್ರಜಾವಾಣಿ
ಸ್ವಾಮೀಜಿಗಳ ವೇಷದಲ್ಲಿ ಕಳ್ಳರು, ಸುಳ್ಳರು, ವಂಚಕರು…
16 Jan, 2011

ಕೇರಳದ ಮಲಪ್ಪುರಂ ಜಿಲ್ಲೆಯ ನಿಲಂಬೂರ್. ಅಲ್ಲಿದ್ದ ಆರ್.ಕೆ.ಮಲಾಯತ್ ಎಂಬ ಜಾದೂಗಾರ 2008ರ ಅಕ್ಟೋಬರ್ ತಿಂಗಳಲ್ಲಿ ಸುದ್ದಿಯಲ್ಲಿದ್ದರು. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದ ಕೆಲವು ಸ್ವಘೋಷಿತ ಸ್ವಾಮೀಜಿಗಳು ಆಗ ಆ ಊರಿನಲ್ಲಿ ಬೀಡುಬಿಟ್ಟಿದ್ದರು. ಮೂರು ದಿನ ಅಲ್ಲಿ ಅವರಿಗೆ ಜಾದೂ ಪಾಠ. ಮಲಾಯತ್ ಜಾದೂ ಕಲಿಸುವ ಗುರು. ತಲೆಗೆ ಐದು ಸಾವಿರ ರೂಪಾಯಿ ಶುಲ್ಕ. ಗಾಳಿಯಿಂದ ವಿಭೂತಿಯನ್ನು ಹಿಡಿದು ಹಣೆಗೆ ಬಳಿದುಕೊಳ್ಳುವುದು, ಖಾಲಿ ನೆಲದ ಮೇಲೆ ಕುಂಕುಮವೋ ವಿಭೂತಿಯೋ ಸುರಿಯುವಂತೆ ಮಾಡುವುದು, ಬಾಯಿಯಿಂದ ಶಿವಲಿಂಗ ಉದ್ಭವವಾಗುವ ಕರಾಮತ್ತು ತೋರಿಸುವುದು ಇವೇ ಮೊದಲಾದ ಜಾದೂಗಳನ್ನು ಮಲಾಯತ್ ಅವರಿಗೆ ಕಲಿಸಿದರು. ಕೆಲವು ಸ್ವಘೋಷಿತ ಸ್ವಾಮೀಜಿಗಳು ಅವನ್ನು ಯಶಸ್ವಿಯಾಗಿ ಕಲಿತರು. ಇನ್ನು ಕೆಲವರು ಅದು ತಮ್ಮ ಕೈಗೆ ಎಟುಕದ ವಿದ್ಯೆ ಎಂದುಕೊಂಡು ಬರಿಗೈಲಿ ಹೋದರು. ಇಂಥ ತಂತ್ರಗಳನ್ನು ತೋರಿಸಿದರೆ ಭಕ್ತ ಮಹಾಶಯರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮತ್ತ ಬರುತ್ತಾರೆಂಬುದು ಆ ಸ್ವಾಮೀಜಿಗಳ ಭಾವನೆ. ಇತ್ತೀಚೆಗೆ ಮಲಾಯತ್ ಹೇಳಿದಂತೆ ತಮ್ಮಿಂದ ಜಾದೂ ಕಲಿತು ಹೋದ ಕೆಲವರು ಈಗ ಪ್ರಭಾವಿ ಸ್ವಾಮೀಜಿಗಳಾಗಿದ್ದಾರೆ.

ಅರಿಷಡ್ವರ್ಗಗಳನ್ನು ಗೆದ್ದವನು, ಬದುಕಿನ ಗಾಢಾರ್ಥ-ಗೂಡಾರ್ಥವನ್ನು ಬಲ್ಲವನು, ಸ್ಥಾನ-ಮಾನದಲ್ಲಿ ದೇವರಿಗೆ ತುಂಬಾ ಹತ್ತಿರವಾದವನು, ಸಮಾಜದ ಓರೆಕೋರೆಗಳನ್ನು ತನ್ನ ಬೋಧನಾ ಸೂತ್ರಗಳಿಂದಲೇ ತಿದ್ದಬಲ್ಲವನು, ಲೋಕಕಲ್ಯಾಣ ಕಾರ್ಯಕ್ರಮಗಳನ್ನು ಮಾಡುವವನು- ಇವೇ ಮೊದಲಾದ ವ್ಯಾಖ್ಯೆಗಳು ಸ್ವಾಮೀಜಿಗಳಿಗೆ ಉಂಟು. ಬ್ರಹ್ಮಚರ್ಯ ಪಾಲಿಸುವವರೇ ಸನ್ಯಾಸಿಗಳು. ಈ ವ್ಯಾಖ್ಯೆಯ ಚೌಕಟ್ಟನ್ನು ಮೀರಿದವರೆಲ್ಲರನ್ನೂ ಕಳ್ಳ ಸ್ವಾಮೀಜಿ ಅಥವಾ ಕಳ್ಳ ಸನ್ಯಾಸಿ ಎಂದು ಕರೆಯಬೇಕಾಗುತ್ತದೆ.
ಆದರೆ, ಜನಮಾನಸ ಲೈಂಗಿಕ ವಿಚಾರದಲ್ಲಿ ಸಿಕ್ಕಿಬೀಳುವ ಸ್ವಾಮಿಗಳನ್ನು ಬಲು ಬೇಗ ಕಳ್ಳ ಸ್ವಾಮಿಗಳೆನ್ನುತ್ತದೆ. ಅಕ್ರಮ ಆಸ್ತಿ ಮಾಡಿಕೊಂಡ, ರಾಜಕೀಯ ಪ್ರೇರಣೆಯಿಂದ ಹೇಳಿಕೆಗಳನ್ನು ಕೊಡುತ್ತಾ ರಾಜಕಾರಣಿಗಳಿಗೆ ಅನುಕೂಲ ಮಾಡಿಕೊಡುವ, ನಿಯಮಬಾಹಿರವಾಗಿ ಶೈಕ್ಷಣಿಕ ಸಂಸ್ಥೆಗಳನ್ನು ಕಟ್ಟಿದ, ಯಾರೋ ಕಲಿಸುತ್ತಾ ಬಂದ ಯೋಗವಿದ್ಯೆ ತಮ್ಮದೇ ಶೋಧ ಎಂಬಂತೆ ಮಾತನಾಡುವ ಸ್ವಾಮೀಜಿಗಳನ್ನು ಭ್ರಷ್ಟಾಚಾರವನ್ನು ಒಪ್ಪಿಕೊಂಡಷ್ಟೇ ಸಲೀಸಾಗಿ ಸಮಾಜ ಒಪ್ಪಿಕೊಂಡುಬಿಡುತ್ತದೆ. ಕಾಮಿ ಸ್ವಾಮೀಜಿ ಎಂಬುದನ್ನು ದೊಡ್ಡ ಕುತೂಹಲದಿಂದ, ಅಪರಾಧಿ ಎಂಬ ಪಟ್ಟಿಕಟ್ಟುತ್ತಾ ನೋಡುವ ನಮ್ಮ ಸಮಾಜದ ಜನ ಈಗಾಗಲೇ ಪ್ರಭಾವಿಯಾಗಿರುವ ಸ್ವಾಮೀಜಿಗಳ ಅದೆಷ್ಟೋ ಅನೈತಿಕತೆಗೆ ಒಪ್ಪಿಗೆಯ ಮುದ್ರೆ ಒತ್ತಿದ್ದಾಗಿದೆ. ತಾತ್ವಿಕವಾಗಿ ಯಾವುದೇ ಅನೈತಿಕತೆ ಎಸಗುವ ಸ್ವಾಮೀಜಿಯನ್ನು ಕಳ್ಳಸ್ವಾಮಿ ಎಂದೇ ಪರಿಗಣಿಸಬೇಕಾಗುತ್ತದೆ. ಈ ಮಾನದಂಡದಿಂದ ಸೋಸುತ್ತಾ ಹೋದರೆ ಉಳಿದುಕೊಳ್ಳುವ ‘ನಿಜಾರ್ಥದ’ ಸ್ವಾಮೀಜಿಗಳ ಸಂಖ್ಯೆ ತುಂಬಾ ಕಡಿಮೆಯಾದೀತು.

ನಮ್ಮದೇ ಸೃಷ್ಟಿ
ಬೋಧಿಸುವವರನ್ನು ನಾವು ಮೊದಲಿನಿಂದಲೂ ಸೃಷ್ಟಿಸಿಕೊಂಡಿದ್ದೇವೆ. ಪ್ರಜೆಗಳ ಹಿತ ಚಿಂತಿಸಲು ರಾಜನಿಗೆ ಮಂತ್ರಿಯಂತೆ ರಾಜಗುರುವೂ ಬೇಕು. ಜಾತಿಯನ್ನು ರಕ್ಷಿಸಲು ಒಂದು ಪೀಠ, ಸರ್ಕಾರಕ್ಕೆ ದಾರಿ ತೋರಿಸಲು ಇನ್ನೊಂದು ಪೀಠ, ಸಾತ್ವಿಕ ಆಹಾರ ಪದ್ಧತಿ ಸಾರಲು ಒಬ್ಬ ಸ್ವಾಮೀಜಿ, ಯೋಗ ಹೇಳಿಕೊಡಲು ಇನ್ನೊಬ್ಬ ಸ್ವಾಮೀಜಿ, ಔಷಧಿಯಿಲ್ಲದೆ ರೋಗ ವಾಸಿ ಮಾಡಲು ಮಗದೊಬ್ಬ… ಹೀಗೆ ಮನುಷ್ಯ ಬದಲಾದ ಕಾಲಕ್ಕೆ ತಕ್ಕಂತೆ ಸ್ವಾಮೀಜಿಗಳನ್ನು ಸೃಷ್ಟಿಸುತ್ತಲೇ ಬಂದಿದ್ದಾನೆ. ತನ್ನ ಬುದ್ಧಿಶಕ್ತಿಯ ಮಿತಿಯಲ್ಲೇ ಬಗೆಹರಿಸಿಕೊಳ್ಳಬಹುದಾದ ಸಮಸ್ಯೆಗೂ ಪರಿಹಾರ ಕೇಳಲೊಂದು ಆಕೃತಿ ಬೇಕು ಎಂಬ ಮನಃಸ್ಥಿತಿ ಜಾಗತಿಕವಾದದ್ದು. ಹೆಸರಾಂತ ಮನಃಶಾಸ್ತ್ರಜ್ಞ ಕಾರ್ಲ್ ಯೂಂಗ್ ಈ ಅಭಿಪ್ರಾಯವನ್ನು ಪುಷ್ಟೀಕರಿಸಿದ್ದಾರೆ. ಸಿಗ್ಮಂಡ್ ಫ್ರಾಯ್ಡಾ ಗರಡಿಯಲ್ಲಿ ಅರಿವನ್ನು ವಿಸ್ತರಿಸಿಕೊಂಡ ಯೂಂಗ್ ಪ್ರಕಾರ ಮನುಷ್ಯ ಹುಟ್ಟಾ ಧಾರ್ಮಿಕ ಸ್ವಭಾವದವನು. ಈ ಕಾರಣದಿಂದಲೇ ಅವನ ಮನಸ್ಸು ಬೋಧನೆಯನ್ನು ನಿರಂತರವಾಗಿ ಸ್ವೀಕರಿಸಬಯಸುತ್ತದೆ.

ಫಾರ್ಮುಲಾ ಒನ್ ರೇಸಿನಲ್ಲಿ ಕಾರು ಓಡಿಸಿ ಅಸಂಖ್ಯ ಪ್ರಶಸ್ತಿಗಳನ್ನು ಬಾಚಿಕೊಂಡ ಮೈಕಲ್ ಶೂಮಾಕರ್ ತಮ್ಮ ಮಾನಸಿಕ ಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳುವ ಉದ್ದೇಶದಿಂದ ಭಾರತದ ಯೋಗಗುರುವನ್ನು ನೇಮಿಸಿಕೊಂಡಿದ್ದರು. ಆ ಗುರುವಿನಿಂದ ಆಗಾಗ ಶೂಮಾಕರ್‌ಗೆ ಭಾರತೀಯ ತತ್ವಜ್ಞಾನದ ಪಾಠವೂ ನಡೆಯುತ್ತಿತ್ತು. ಲೋಲುಪತೆಯನ್ನು ಮುದ್ದಿಸುವ ಆಧುನಿಕ ಮಾನವ ತನ್ನ ಕಾಲಿಗೇ ಸುತ್ತಿಕೊಂಡ ಸಮಸ್ಯೆಗಳ ಅರಿವನ್ನು ತಂತಾನೇ ಪಡೆಯದಷ್ಟು ಚಟುವಟಿಕೆನಿರತ. ಅದಕ್ಕೇ ಉಸಿರಾಡುವುದನ್ನು ಹೇಳಿಕೊಡಲು, ನೀರು ಕುಡಿಯುವುದನ್ನು ವಿವರಿಸಲು, ಸಾತ್ವಿಕ ಆಹಾರದ ಪಾಠ ಹೇಳಲು, ನಿದ್ದೆ ಮಾಡುವ ಅವಧಿಯನ್ನು ನಿಗದಿಪಡಿಸಲು, ಅಷ್ಟೇ ಏಕೆ ಸಂಭೋಗದಿಂದ ಸಿಗುವ ಸುಖದ ಪ್ರಮಾಣವನ್ನು ವಿಶ್ಲೇಷಿಸಿ ಹೇಳಲು ಬೋಧಕರು ಹುಟ್ಟಿಕೊಂಡಿದ್ದಾರೆ.

ಅವರ ಹುಟ್ಟಿಗೆ ಕಾರಣರಾದವರು ನಾವೇ ಅಲ್ಲವೇ? ಅಂಥವರಿಗೆ ಸ್ವಾಮೀಜಿ, ಗುರೂಜಿ, ಸತ್ಸಂಗ ಗುರು ಎಂದೆಲ್ಲ ಕರೆಯುವ ಮೂಲಕ ಪೀಠದ ಮೇಲೆ ಕೂರಿಸುವುದು ಈಗ ಮಾಮೂಲು.ಹಾಗೆ ನೋಡಿದರೆ ಸ್ವಾಮೀಜಿಗಳು ಲೈಂಗಿಕ ಸುಖ ಬಯಸುತ್ತಿರುವ ಸಂಗತಿ ಹೊಸತೇನೂ ಅಲ್ಲ. ಇಪ್ಪತ್ತನೇ ಶತಮಾನದ ಪ್ರಾರಂಭದಲ್ಲಿ ಪ್ರಕಟಗೊಂಡ ಕನ್ನಡ ಕಾದಂಬರಿಯೊಂದರಲ್ಲಿ ಸ್ವಾಮೀಜಿಯೊಬ್ಬರು ಮನೆಯ ಅಟ್ಟದ ಮೇಲೆ ತೊಟ್ಟಿಲನ್ನು ಕಟ್ಟಿಬಿಟ್ಟಿರುತ್ತಾರೆ. ಮಠಾಧಿಪತಿಯೊಬ್ಬ ಪೀಠದಲ್ಲಿ ಇದ್ದುಕೊಂಡು ಲೈಂಗಿಕ ಸುಖ ಪಡೆಯಲು ಮನಸ್ಸಾಗದೆ ಮಠ ತ್ಯಜಿಸಿ ಮದುವೆ ಮಾಡಿಕೊಳ್ಳುವ ದಿಟ್ಟ ನಿರ್ಧಾರ ತೆಗೆದುಕೊಂಡಾಗ ‘ಅರೆರೆ’ ಎಂಬ ಅಚ್ಚರಿಯ ವ್ಯಕ್ತಪಡಿಸುವ ಜನ ಮತ್ತೊಬ್ಬ ಸ್ವಾಮೀಜಿ ತನ್ನ ನೆಲೆಯ ಪಕ್ಕದ ಜಾಗಗಳನ್ನೆಲ್ಲ ಒತ್ತುವರಿ ಮಾಡಿಕೊಂಡು ಬೇಲಿ ಹಾಕಿಕೊಂಡರೆ ಸುಮ್ಮನೆ ಇರುತ್ತಾರೆ.

ಕಾಮವಷ್ಟೇ ಯಾಕೆ ಸುದ್ದಿ?
ಭಾರತೀಯ ಮನುಷ್ಯನದ್ದು ಭಕ್ತಿಸಹಜ ಮನಸ್ಸು. ಯಾವುದರಲ್ಲೇ ಆಗಲಿ ಭಕ್ತಿ ನೆಟ್ಟರೆ ಮುಗಿಯಿತು; ಅದರಿಂದ ಕೀಳುವುದು ಕಷ್ಟ.ತುಂಬುಪ್ರಾಯದ ಹುಡುಗಿ ಕಾವಿ ತೊಟ್ಟುಕೊಂಡು ಅಯೋಧ್ಯೆಯು ರಾಮನದ್ದೇ ಹೌದು ಎಂದು ವಾದಿಸುತ್ತಾ ಗಂಟೆಗಟ್ಟಲೆ ನಿರರ್ಗಳವಾಗಿ ಭಾಷಣ ಮಾಡುವುದರ ಮೇಲೆ ಭಕ್ತಿ ಇಟ್ಟವರಿದ್ದಾರೆ. ಲೈಂಗಿಕತೆಯಿಂದಲೇ ಮೋಕ್ಷ ಎಂದು ಪ್ರತಿಪಾದನೆ ಮಾಡುವವರಿಗೆ ಕಿವಿಕೊಟ್ಟವರಿದ್ದಾರೆ. ‘ಮೆಲ್ಲಗೆ ಉಸಿರನ್ನು ಎಳೆದುಕೊಳ್ಳಿ….ಬಿಡಿ’ ಎಂಬ ಪಾಠವನ್ನು ತದೇಕಚಿತ್ತತೆಯಿಂದ ಪಾಲಿಸಿದವರಿದ್ದಾರೆ. ಸ್ವಾಮೀಜಿಗಳ ಬೋಧನೆಗಳ ಪುಸ್ತಕಗಳಿಗೆ ಮೊದಲಿನಿಂದಲೂ ದೊಡ್ಡ ಮಾರುಕಟ್ಟೆ ಇರುವುದೂ ಇದೇ ಕಾರಣಕ್ಕೆ. ಹೀಗೆ ಬೋಧನೆ ಮಾಡುವ ಸ್ವಾಮೀಜಿಗಳ ಸೃಷ್ಟಿಕರ್ತರು ನಾವೇ ಎಂಬುದು ಬಹು ಮುಖ್ಯವಾದ ಸತ್ಯ.

ಸಂತ ಬಿಮಾನಂದ ಜೈ ಮಹಾರಾಜ್ ಎಂಬಾತನನ್ನು ದೆಹಲಿ ಪೊಲೀಸರು ಬಹುಕೋಟಿ ಲೈಂಗಿಕ ಹಗರಣದಲ್ಲಿ ಬಂಧಿಸಿದಾಗ ಜನ ಕುತೂಹಲದ ಕಣ್ಣರಳಿಸಿದ್ದರು. ಯಾಕೆಂದರೆ, ಅವನ ಆ ಜಾಲದಲ್ಲಿ ಗಗನಸಖಿಯೊಬ್ಬಳು ಭಾಗಿಯಾಗಿದ್ದಳು. ‘ಸ್ವಾಮಿ ಜೀ’ ಎಂದೇ ಜನಪ್ರಿಯನಾಗಿದ್ದ ಕುಮಾರ್ ಸಹಾಯ್ ಎಂಬಾತ ಬಾಲಕಿಯೊಬ್ಬಳನ್ನು ಅಪಹರಿಸಿ ಬಂಧನಕ್ಕೊಳಗಾಗಿದ್ದ. ಅಷ್ಟೇ ಏಕೆ, ಕಂಚಿ ಸ್ವಾಮೀಜಿ ಜಯೇಂದ್ರ ಸರಸ್ವತಿ ಅವರ ಮೇಲೂ ಕೊಲೆಯ ಆರೋಪ ಇತ್ತಲ್ಲವೇ? ಅಹಮದಾಬಾದ್‌ನಲ್ಲಿ ಗುರುಕುಲ ನಡೆಸುತ್ತಿದ್ದ ಗುರು ಅಸರಮ್ ಬಾಪು ಇಬ್ಬರು ಹುಡುಗರ ಸಾವಿನ ಪ್ರಕರಣದಲ್ಲಿ ಪೊಲೀಸರ ವಿಚಾರಣೆಗೆ ಒಳಪಟ್ಟಿದ್ದೂ ಸುದ್ದಿಯಾಗಿತ್ತು.

ಸ್ವಾಮೀಜಿಗಳ ಲೈಂಗಿಕತೆ, ಕೊಲೆ ಪ್ರಕರಣಗಳು ಮಾತ್ರ ದೊಡ್ಡದಾಗಿ ಸುದ್ದಿಯಾಗುವುದರಲ್ಲಿ ವಿದ್ಯುನ್ಮಾನ ಮಾಧ್ಯಮದ ಪಾತ್ರ ದೊಡ್ಡದು. ನಿತ್ಯಾನಂದ ಸ್ವಾಮಿಯ ಹಗರಣ ಅಷ್ಟು ಜೋರಾಗಿ ಎದ್ದುಕಾಣಲು ಕಾರಣ ವಾಹಿನಿಗಳು ತೋರಿದ ವಿಡಿಯೋ ಕ್ಲಿಪಿಂಗ್ಸ‌ಇದನ್ನು ನೋಡಿದ್ದೇ ಅನೇಕ ಭಕ್ತರು ಕೆರಳಿದರು. ಆಶ್ರಮದ ಎದುರಿನ ಕಟೌಟ್‌ಗಳನ್ನು ಮುರಿದು, ಹರಿದು, ಬೆಂಕಿ ಇಟ್ಟರು. (ಅದಕ್ಕೆ ಪ್ರಚೋದನೆ ಕೊಡಲಾಯಿತೆಂಬ ಆರೋಪವೂ ಇದೆ. ಅದು ಬೇರೆ ಮಾತು.) ಕೆಲವರು ಆತ ಹಾಗೆ ಎಂದು ತಾವು ಭಾವಿಸಿಯೇ ಇರಲಿಲ್ಲ ಎಂದು ಅಭಿಪ್ರಾಯ ಕೊಟ್ಟರು. ಈ ರೀತಿ ಮಾತನಾಡಿದವರಲ್ಲಿ ಅನೇಕರು ಕೆಲವೇ ದಿನಗಳ ಹಿಂದೆ ನಿತ್ಯಾನಂದ ಲೈಂಗಿಕತೆಯ ಕುರಿತು ನೀಡಿದ ಉಪನ್ಯಾಸ ಕೇಳಿದವರೇ ಆಗಿದ್ದರು.

ಸ್ವಾಮೀಜಿಯ ಹಣೆಪಟ್ಟಿ ಹೊತ್ತ ವ್ಯಕ್ತಿಯಿಂದ ಲೈಂಗಿಕ ಪಾಠವನ್ನು ಮೈಯೆಲ್ಲಾ ಕಿವಿಯಾಗಿ ಕೇಳುವ ಜನ, ಅಕಸ್ಮಾತ್ ಆತ ‘ಒಪ್ಪಿತ ಲೈಂಗಿಕ ಚಟುವಟಿಕೆ’ಯಲ್ಲಿ ತೊಡಗಿಕೊಂಡರೆ ಸಹಿಸುವುದಿಲ್ಲ ಎಂಬುದಕ್ಕೂ ಈ ಪ್ರಕರಣ ಉದಾಹರಣೆಯಾಗುತ್ತದೆ. ಮೊನ್ನೆ ಮೊನ್ನೆ ನಟಿ ರಂಜಿತಾ ಸುದ್ದಿಗೋಷ್ಠಿ ಮಾಡಿದ ನಂತರ ಇದೇ ನಿತ್ಯಾನಂದ ಜನ್ಮದಿನ ಆಚರಿಸಿಕೊಂಡಿದ್ದು, ಅದಕ್ಕೆ ಕನ್ನಡದವರೂ ಸೇರಿದಂತೆ ನಟೀಮಣಿಯರು ಹೋಗಿ ಬಂದದ್ದು ಸುದ್ದಿಯಾಯಿತು. ನಿತ್ಯಾನಂದ ಹಾಗೂ ಆತನ ಭಕ್ತ ಸಮುದಾಯದಲ್ಲಿ ಸುದ್ದಿಯಾಗುತ್ತಿರುವ ನಟಿಯರ ಭಂಡತನ ಎಂಥದು ಎಂಬುದನ್ನು ಈ ಬೆಳವಣಿಗೆ ಪುಷ್ಟೀಕರಿಸುತ್ತದೆ.

ಜನ ಸ್ವಾಮೀಜಿಯನ್ನು ನಂಬುತ್ತಾರೆ. ಅವರ ಮಾತನ್ನು ಕೇಳುತ್ತಾರೆ. ಗೌರವ ಕೊಡುತ್ತಾರೆ. ಅವರಿಗೆ ರಾಜಕೀಯ ಪ್ರಭಾವ ಮೂಡುತ್ತದೆ. ಮಠ ಕಟ್ಟುತ್ತಾರೆ. ಕೇಂದ್ರಗಳು, ಶಾಖೆಗಳು ಕವಲೊಡೆಯುತ್ತವೆ. ಕಪ್ಪುಹಣ ಸಂಗ್ರಹ ಕೇಂದ್ರವಾಗಿಯೂ ಕೆಲಸ ನಿರ್ವಹಿಸುವ ಕೆಲವು ಮಠಗಳಲ್ಲಿ ನೀತಿಬೋಧನೆ ಮಾತ್ರ ನಿರಂತರ. ರಾಜಕಾರಣಿಗಳನ್ನು ಕಾಪಾಡಲು ಮುಂದಾಗುವ ಸ್ವಾಮೀಜಿಗಳೂ ನಮ್ಮ ನಡುವೆ ಇದ್ದಾರೆ. ಇವೆಲ್ಲವೂ ಒಪ್ಪಿತ ಎಂಬಂತೆ ಜಾರಿಯಲ್ಲಿರುವಾಗ ‘ಕಳ್ಳ ಸ್ವಾಮಿ’ ಎಂಬ ಹಣೆಪಟ್ಟಿಗೆ ಯಾರು ಒಳಪಡುತ್ತಾರೆಂಬುದೇ ದೊಡ್ಡ ಜಿಜ್ಞಾಸೆಯಾಗಿ ಕಾಣುತ್ತದೆ.

———–
ಈಗ ತತ್ಕಾಲಕ್ಕೆ ತುಮರಿ ಎಂಡಿಂಗ್ ನೋಟ್ ಬರೆಯುತ್ತಾನೆ:

ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ
ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ
ಮಾಡುವ ನೀಡುವ ನಿಜಗುಣವುಳ್ಳಡೆ ಕೂಡಿಕೊಂಬ ನಮ್ಮ ಕೂಡಲಸಂಗಮದೇವ

-ವಚನ ನೆನಪಿಗೆ ಬಂತು. ಹಸುವಿನ ಕಿವಿಯೂರಿಗೆ ಅಹಹ ಎಂತೆಂತಹ ಸನ್ಯಾಸಿ ವೇಷಗಳೆಲ್ಲ ಬಂದುಹೋದವು ಎಂದರೆ, ತಮ್ಮ ಆದಾಯಕ್ಕಾಗಿ ’ಮಹಾಸ್ವಾಮಿ ವೀರ್ಯಪ್ಪನ್’ಅವರ ಪ್ರತಿನಿಧಿ ಅಧಿಕಾರಿಗಳಾಗಿ ಕೆಲಸ ಮಾಡುವವರು ’ಗೌರವ’ ಕೊಡುವಾಗ ಅವರ ಮುಖಲಕ್ಷಣ ಭಾವವನ್ನು ನೀವೆಲ್ಲ ನೋಡಬೇಕು-ಇಂಗುತಿಂದ ಮಂಗನಂತಿರುತ್ತದೆ; ಪಾಪ ಚಾಕರಿ ಒಪ್ಪಿಕೊಂಡಿದ್ದಾರೆ, ಅಡ್ಡಬೀಳುವ ಮನಸಿಲ್ಲದಿದ್ದರೂ ವಿಧಿಯಿಲ್ಲ ಮಾಡಲೇಬೇಕು, ಅರ್ಹತೆಯಿಲ್ಲದ ಕಳ್ಳರ ಕಾಲಿಗೂ ಎರಗಲೇಬೇಕು.

ಅದಿರಲಿ ಯಾರೋ ಶಾಸ್ತ್ರ ಆಚರಿಸುವವರಂತೆ, ಹಿಂದಿನಿಂದ ಮಠದಲ್ಲಿ ಜೈಕಾರ ಹಾಕುತ್ತಿದ್ದರಂತೆ, ವೀರ್ಯಪ್ಪನ್ ಪ್ರವೇಶವಾದ ಬಳಿಕ ಮಧ್ಯೆ ಕೆಲವು ವರ್ಷ ಮುನಿಸಿಕೊಂಡು ಮನೆಕಡೆ ಇದ್ದರಂತೆ, ಮತ್ತೆ ಆಗಾಗ ಕರೆಸಿಕೊಂಡು ಬಣ್ಣದ ಶಾಲು ಹೊದೆಸಿ ಕಳಿಸಿದ್ದರಿಂದ ಮತ್ತೆ ವೀರ್ಯಪ್ಪನವರಿಗೆ ಜೈಕಾರ ಕೂಗಿದರಂತೆ. ವಯಸ್ಸೂ ಆಗಿತ್ತು-ವೃಷಣದಲ್ಲಿ ಕ್ಯಾನ್ಸರ್ ಆಗಿತ್ತು, ವಯಸ್ಸು ತೀರಾ ಆಗಿದ್ದರಿಂದ ಶಸ್ತ್ರ ಚಿಕಿತ್ಸೆ ಸಾಧ್ಯವಿಲ್ಲ ಅಂತ ಮಂಗಳೂರು ಕಡೆ ವೈದ್ಯರು ಮನೆಗೆ ಕಳಿಸಿದ್ದರಂತೆ, ವೀರ್ಯಪ್ಪನ್ ಸಾಮ್ಗಳು ಭೇಟಿ ಕೊಟ್ಟು ದೊಡ್ಡದಾಗಿ [ಭಸ್ಮಾಸುರ]ಹಸ್ತ ತೋರಿದರೂ ಶಾಸ್ತ್ರ ಆಚರಿಸುವವರಿಗೆ ನಂಬಿಕೆ ಬರಲಿಲ್ಲವಂತೆ, ಅಂದಹಾಗೆ ಬಣ್ಣದ ಅಕ್ಕಿಯ ಪವಾಡ ಅಲ್ಲಿ ನಡೆಯೋದಿಲ್ಲ ಅಂತ ’ರಾಂಗಾನುಗ್ರಹ’ದಲ್ಲಿ ಭೋಂಗು ಬಿಡುವ ಬೊಗಳೆ ದಾಸಯ್ಯಗಳಿಗೂ ಗೊತ್ತಾಗಿರಬೇಕು-ಏನೂ ಬರೆಯಲಿಲ್ಲ, ಅವರು ಸತ್ತುಹೋದಾಗ ಸಾಮ್ಗಳು ಬಹಳ ಖೇದವಾಗಿದೆಯೆಂಬಂತೆ ಹಳದಿಗಳ ಮನಸ್ಸಿಗೆ ನಾಟುವ ಸಚಿತ್ರ ಹೇಳಿಕೆ ನೀಡಿದರು.

ಸರಿಬಿಡಿ ಅದಕ್ಯಾಕೆ ಕ್ಯಾತೆ ಎನ್ನಬೇಡಿ, ಈ ಐನಾತಿ ಸಾಮ್ಗಳ ಮಠದ ಶಿಖರನಗರದ ಶಾಖೆ, ಕಚೇರಿ, ಕಟ್ಟಡ ಎಲ್ಲವೂ ಆ ಭಟ್ಟರ ಕೃಪೆ; ಅವರಿಲ್ಲದಿದ್ದರೆ ಈ ವೀರ್ಯಪ್ಪನ್ ಸಾಮ್ಗಳಿಗೆ ಬೆಂಗಳೂರಿನಲ್ಲಿ ಕಾಲಿಡೋದಕ್ಕೂ ಜಾಗ ಇರಲಿಲ್ಲ. ಅವರೊಮ್ಮೆ ಮನಸ್ಸು ಮಾಡಿ, ಇಂದು ಹಲವುಕೋಟಿ ಹಡೆಯುವ ಜಾಗವನ್ನು ಮಠಕ್ಕೆ ದಾನಪತ್ರದ ಮೂಲಕ ಭಕ್ಷೀಸು ಕೊಟ್ಟರು; ಅಷ್ಟೇ ಅಲ್ಲ, ಮಠದ ಮೂಲ ಕಟ್ಟಡವನ್ನೂ ಕಟ್ಟಿ ಮಠಕ್ಕೊಂದು ಶಾಖೆ ತೆರೆಯೋದಕ್ಕೆ ಅವಕಾಶ ಕಲ್ಪಿಸಿಕೊಟ್ಟರು.

ತನ್ನ ಮನೆಮಂದಿ ಸದಸ್ಯರೆಲ್ಲ ಮಠಕ್ಕೆ ಅಷ್ಟೊಂದು ಕೊಡಬೇಕೆ ಎಂದು ಕೇಳುತ್ತಿದ್ದರೂ ಬಹುಕೋಟಿಗಳ ಮೊತ್ತದ ಅತಿದೊಡ್ಡ ಸೇವೆ ಇಲ್ಲಿಯವರೆಗೆ ಅನನ್ಯ, ಭಟ್ಟರ ಸಾಮಾಜಿಕ ಬದ್ಧತೆ ಅನೂಹ್ಯ. ಕಟ್ಟಡದ ಗೋಡೆಯಲ್ಲಿದ್ದ ಪುಟ್ಟ ಬರಹ ಬಿಟ್ಟರೆ ತಾವು ಕೊಟ್ಟಿದ್ದೆಂದು ಇನ್ನೆಲ್ಲೂ ಬಹುದೊಡ್ಡ ಫಲಕ ಹಾಕಿಸಲಿಲ್ಲ ಭಟ್ಟರು. ಹಿಂದಿನ ಸ್ವಾಮಿಗಳು ಹೋಗಿ ಇಂದಿನ ಸಾಮ್ಗಳು ಬಂದಾಗಿಂದ ಭಟ್ಟರು ಮಠದಲ್ಲಿ ಕಾಣಸಿಕ್ಕಿದ್ದೇ ಕಡಿಮೆ. ಆರಂಭದಲ್ಲೆ ಈ ’ಸನ್ಯಾಸಿ’ ವೇಷದ ಸನ್ಯಾಸಿ ಎಂದು ಗುರುತುಹಾಕಿಕೊಂಡೋರಲ್ಲಿ ಭಟ್ಟರು ಪ್ರಮುಖರು. ಹಾಗಂತ ಅವರು ಯಾರಲ್ಲಿಯೂ ಅದನ್ನು ಹೇಳುತ್ತ ಹೋಗಲಿಲ್ಲ, ಪಕ್ಕದಲ್ಲೇ ತಮ್ಮ ಮನೆಯಿದ್ದರೂ ಮಠದಿಂದ ದೂರವುಳಿದುಬಿಟ್ಟರು.

ತನ್ನ ’ಸಾಚಾತನ’ ಭಟ್ಟರಿಗೆ ಗೊತ್ತಾಗಿಬಿಟ್ಟಿದ್ದರಿಂದ ವೀರ್ಯಪ್ಪನ್ ಸಾಮ್ಗಳಿಗೆ ಭಟ್ಟರನ್ನು ಕಂಡರೆ ಆಗುತ್ತಿರಲಿಲ್ಲ. ಅವರ ಮನೆಜನರನ್ನು ಕಂಡರೂ ಆಗುತ್ತಿರಲಿಲ್ಲ. ಹಳದೀ ಪಟಾಲಮ್ಮುಗಳಲ್ಲಿ ಕೋಡಂಗಿಗಳು ಕಡಿಮೆ ಇದ್ದಾವೆ ಅಂದ್ಕೊಂಡ್ರೇನು? ಭಟ್ಟರ ಮನೆಯ ಪರಿಕರಗಳನ್ನು ಲಪಟಾಯಿಸಿದವರೂ ಇದ್ದಾರೆ, ಆ ಕುಟುಂಬದ ಮಹಿಳೆಯರ ಮೇಲೂ ಕಣ್ಣುಹಾಕಿದವರಿದ್ದಾರೆ. ’ಯಥಾ ಗುರು ತಥಾ ಶಿಷ್ಯ’ ಅಲ್ಲವೇ? ದೂರದಿಂದ ಎಲ್ಲವನ್ನೂ ಅರ್ಥೈಸಿಕೊಳ್ಳುತ್ತಿದ್ದ ಭಟ್ಟರು ತಮ್ಮ ಪರಿವಾರವನ್ನು ಮಠದ ಕಲಾಪಗಳಿಂದ ದೂರವಿರುವಂತೆ ರಕ್ಷಿಸಿಕೊಂಡರು.

ಒಂದೊಮ್ಮೆ ಭಟ್ಟರು ಮೊದಲೇ ಮನಸ್ಸು ಮಾಡಿದ್ದರೆ ಇಡೀ ಜಾಗವನ್ನು ಬೇರೆ ರೀತಿ ಮಾಡಿಬಿಡಬಹುದಿತ್ತು. ವೀರ್ಯಪ್ಪನ್ ಸಾಮಿ ಬೋಳಮೇಲೆ ಕೈಹೊತ್ತು ಡುಮಕಿ ಬಾರಿಸಿಕೊಂಡು ಬೇರೆ ಏನಾದರೂ ಯಾತ್ರೆ ತೆಗೆಯಬೇಕಾಗ್ತಿತ್ತು; ಭಟ್ಟರು ಹಾಗೆ ಮಾಡಲಿಲ್ಲ. ಕೃಶಕಾಯದ ಭಟ್ಟರು ಮೊನ್ನೆ ಹೋಗಿಬಿಟ್ಟರು; ವೀರ್ಯಪ್ಪನ್ ಸಾಮ್ಗಳಿಗೆ ಅದು ಸಂತಾಪ ಸೂಚಿಸುವ, ಅನುಕಂಪ ವ್ಯಕ್ತಪಡಿಸುವ ಸುದ್ದಿಯಾಗಲಿಲ್ಲ. ಇಡೀ ಮಠದ ಅಸ್ತಿಭಾರದಂತಿದ್ದ ವ್ಯಕ್ತಿ ಸತ್ತಿದ್ದು ವೀರ್ಯಪ್ಪನ್ ಬಳಗದ ಯಾರ ಕಡೆಯಿಂದಲೂ ಎಲ್ಲೂ ಸುದ್ದಿಯಾಗದಂತೆ ನೋಡಿಕೊಂಡರು; ಯಾರೂ ಹೇಳಿಕೆ ಕೊಡಲಿಲ್ಲ. ವೀರ್ಯಪ್ಪನ್ ಸಾಮಿಯ ವೀರ್ಯ ಹಾರಿದಾಗಲೆಲ್ಲ ಹಾಗಟೆ ಬಾರಿಸಿ ಜೈಕಾರ ಕೂಗಿದ್ದರೆ ಭಟ್ಟರು ಇದ್ದಾಗಲೂ ಸತ್ತಾಗಲೂ ಹಾರಗಳು ಬೀಳುತ್ತಿದ್ದವು; ಮನೆಯೆಲ್ಲ ತುಂಬಿ ಮುಂದಿರುವ ಬೀದಿಯ ಪಕ್ಕಕ್ಕೆಲ್ಲ ನೆಡುವಷ್ಟು ಪ್ರಶಸ್ತಿ ಫಲಕಗಳು ನೀಡಲ್ಪಡುತ್ತಿದ್ದವು!!

ನಮಗೆ ಶಾಸ್ಚ್ರ ಆಚರಿಸುತ್ತಿದ್ದ ವೃದ್ಧರಮೇಲೂ ಗೌರವವಿದೆ ಮತ್ತು ಕೃಶಕಾಯದ ಭಟ್ಟರಮೇಲೂ ಗೌರವವಿದೆ. ನಾವು ವೀರ್ಯಪ್ಪನ್ ಸಾಮ್ಗಳ ವಿರೋಧಿಗಳೇ ಹೊರತು ಗತಿಸಿದ ಆ ಎರಡು ಜೀವಗಳನ್ನು ಎಂದೂ ವಿರೋಧಿಸಿದವರಲ್ಲ. ಗತಿಸಿದ ಇಬ್ಬರಿಗೂ ಒಮ್ಮೆ ನಮನ ಸಲ್ಲಿಸಿ ಶುಭ ವಿದಾಯ ಕೋರಿ, ಅವರ ಆತ್ಮಗಳಿಗೆ ಸದ್ಗತಿ ಸಿಗಲೆಂದು ಪ್ರಾರ್ಥಿಸೋಣ ಎಂಬಲ್ಲಿಗೆ ಇಂದಿನ ಕಂತು ಮುಕ್ತಾಯಗೊಳ್ಳುತ್ತದೆ.

Thumari Ramachandra
15/03/2017
source: https://www.facebook.com/groups/1499395003680065/permalink/1923935544559340/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s