ಭಕ್ತೆಯೇ ’ಸೀತೆ’ ತೊನೆಯಪ್ಪನೇ ’ರಾಮ’ ’ಏಕಾಂತ’ದಲ್ಲಿ ವೀರ್ಯಪ್ಪನ್ ಮೇಳ

ಭಕ್ತೆಯೇ ’ಸೀತೆ’ ತೊನೆಯಪ್ಪನೇ ’ರಾಮ’ ’ಏಕಾಂತ’ದಲ್ಲಿ ವೀರ್ಯಪ್ಪನ್ ಮೇಳ

ಗುರುವಿನ ಹಂಗು ಅಷ್ಟೆಲ್ಲ ಏತಕ್ಕೆ ಎಂಬ ಬಗ್ಗೆ ಬಹುಶಃ ಯಾರೂ ಹೆಚ್ಚಿಗೆ ತಲೆಕೆಡಿಸಿಕೊಂಡಿಲ್ಲ. ಗುಮ್ಮಣ್ಣ ಹೆಗಡೇರು ಹೇಳಿದಹಾಗೆ ಸಾಂಸಾರಿಕ ತಾಪತ್ರಯಗಳನ್ನು ಹೇಳಿಕೊಂಡು ಮಂತ್ರಾಕ್ಷತೆ ಪಡೆಯೋದಕ್ಕೆ ಗುರು ಬೇಕು ಎಂದುಕೊಂಡವರೇ ಬಹಳಮಂದಿ; ಹಿಂದೆಲ್ಲ ಅನೇಕ ಗುರುಗಳನ್ನು ಅಂತಹ ಕ್ಷುಲ್ಲಕ ಕೆಲಸಗಳಿಗೆ ದುರುಪಯೋಗಪಡಿಸಿಕೊಂಡಿದ್ದು ನಮ್ಮ ಮತಿಗೆಟ್ಟ ಪ್ರಾಪಂಚಿಕ ಮನೋವೃತ್ತಿಯನ್ನು ತೋರಿಸುತ್ತದೆ.

ಯೋಗದ ಬಗ್ಗೆ ಹೇಳುತ್ತಿದ್ದೆನಲ್ಲ? ಗುರುವಿಗೂ ಅಥವಾ ಸನ್ಯಾಸಿಗೂ ಯೋಗಕ್ಕೂ ಸಂಬಂಧವನ್ನು ಹುಡುಕುತ್ತಿದ್ದೆ. ಅದರ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಆದರೆ ಈಗ ನಿಖರವಾಗಿ ಹೇಳಬಲ್ಲೆ; ಭಾರತೀಯ ಷಟ್ ಶಾಸ್ತ್ರಗಳಲ್ಲಿ ಯೋಗದರ್ಶನ ಬಹಳ ಮಹತ್ವವನ್ನು ಪಡೆದಿದ್ದೇ ಅದಕ್ಕೆ! ಯೋಗದರ್ಶನ ಹೇಳುವಂತೆ ನಮ್ಮ ಶರೀರದಲ್ಲಿ ಒಟ್ಟು 114 ಚಕ್ರಗಳಿವೆ. ಅವುಗಳ ಪೈಕಿ ಎರಡು ಶರೀರದ ಹೊರಗಡೆ ಇವೆ; ನಾಲ್ಕು ಅಷ್ಟೊಂದು ಮಹತ್ವದ ಪಾತ್ರ ನಿರ್ವಹಿಸುವ ಚಕ್ರಗಳಲ್ಲ.

ಇನ್ನುಳಿದ 108 ಚಕ್ರಗಳಲ್ಲಿ ಏಳು ಚಕ್ರಗಳು ಪ್ರಧಾನ ಚಕ್ರಗಳು ಎನಿಸಿವೆ. ಚಕ್ರಗಳೆಂದರೆ ಇವು ವರ್ತುಳಾಕಾರದ ಚಕ್ರಗಳಲ್ಲ; ಇಡಾ, ಪಿಂಗಳಾ ಮತ್ತು ಸುಷುಮ್ನಾ ನಾಡಿಗಳು ಅಲ್ಲಲ್ಲಿ ಸಂಧಿಸುವ ಜಂಕ್ಷನ್ ಗಳು ಎಂದು ತಿಳಿಯಬೇಕು. ಮೂರು ನಾಡಿಗಳ ಬಿಂದುಗಳು ಸೇರುವುದರಿಂದ ಇಲ್ಲೆಲ್ಲ ತ್ರಿಕೋನಗಳು ಏರ್ಪಡುತ್ತವೆ.

ಜಪದ ಸರದಲ್ಲಿ 108 ಮಣಿಗಳು/ರುದ್ರಾಕ್ಷಿಗಳು ಇರೋದಕ್ಕೂ ಇದೇ ಕಾರಣ! ಮೇಲಾಗಿ ಭೂಮಿಯ ವ್ಯಾಸ 12,756km; ಸೂರ್ಯನ ವ್ಯಾಸ ಇದರ ನೂರೆಂಟರಷ್ಟು! ಭೂಮಿಗೂ ಸೂರ್ಯನಿಗೂ ನಡುವಿನ ಅಂತರ ಭೂಮಿಯ ವ್ಯಾಸದ ನೂರೆಂಟರಷ್ಟು! ಇನ್ನೂ ಹಲವು ಕಾರಣಗಳು 108 ಕ್ಕೆ ಸಂಬಂಧಿಸಿವೆ! ಅದರಂತೆ 3ಕ್ಕೂ ಸಹ ಅದೇ ಮಾನ್ಯತೆಯಿದೆ.

ಪ್ರಮುಖ ಮೂರು ನಾಡಿಗಳನ್ನು ಬಿಟ್ಟರೆ ಉಳಿದಂತೆ, ಹಸ್ತಿಜಿಹ್ವಾ, ಪೂಷಾ, ಯಶಸ್ವಿನಿ, ಕುಹೂ, ಶಂಖಿಣಿ, ಗಾಂಧಾರಿ, ಸರಸ್ವತಿ, ಪಯಸ್ವಿನಿ, ವಾರುಣಿ, ಶಿವೋದರಿ ಎಂಬ ಅನೇಕ ನಾಡಿಗಳು ಶಿವ ಸಂಹಿತೆಯಲ್ಲಿ ಹೇಳಲ್ಪಟ್ಟಿವೆ. ಈ ಚಕ್ರಗಳೆಲ್ಲ ಶಕ್ತಿ ಕೇಂದ್ರಗಳು. ಒಂದನ್ನು ನಾವಿಲ್ಲಿ ನೆನಪಿಡಬೇಕು, ಶರೀರದಲ್ಲಿ ಋಣಾತ್ಮಕ ಶಕ್ತಿಯನ್ನು ಪಸರಿಸುವ ಕೆಲಸವನ್ನು ಇಡಾ ನಾಡಿ ನಡೆಸುತ್ತದೆ. ಧನಾತ್ಮಕ ಸಂದೇಶಗಳು ಪಿಂಗಳಾ ನಾಡಿಯಲ್ಲಿ ಪ್ರವಹಿಸುತ್ತವೆ. ಸುಷುಮ್ನಾ ಖಾಲಿ ಇದ್ದು, ಗುಪ್ತಚರ ಇಲಾಖೆಯ ಕಾರ್ಯ ನಡೆಸುತ್ತದೆ!

ಸಮಸ್ತ ಶರೀರದ ಒಳಹೊರಗಿನ ಆಗುಹೋಗುಗಳಿಗೆ ಇಡಾ ಮತ್ತು ಪಿಂಗಳಾ ಸ್ಪಂದಿಸುತ್ತವೆ. ಮತ್ತು ಬೆನ್ನುಹುರಿಗುಂಟ ಆರು ಕ್ಷೇತ್ರಗಳಲ್ಲಿ ಇವೆರಡೂ ಸುಷುಮ್ನಾ ನಾಡಿಯೊಂದಿಗೆ ಸಂಗಮಿಸುತ್ತವೆ. ಇಂತಹ ಚಕ್ರಗಳ ಶಕ್ತಿ ಪ್ರಜ್ವಾಲನೆ ಸ್ವಕ್ಷೇತ್ರದಲ್ಲೂ ನಡೆಯುತ್ತದೆ ಮತ್ತು ಶರೀರದ ಹೊರಗಡೆಗೆ ಬ್ರಹ್ಮಾಂಡದಲ್ಲಿರುವ ಅದೇ ಏಳು ಮಹಾನ್ ಚಕ್ರಗಳೂ ಸಹ ಇವುಗಳ ತಾಯಿ ಮನೆಯಂತೆ ವರ್ತಿಸುತ್ತವೆ!

ಈ ಚಕ್ರಗಳು ಘನರೂಪದಲ್ಲಿಲ್ಲ ಅವುಗಳ ಆವಾಸ ನಮ್ಮ ಮನಸ್ಸಿನಂತೆ ಬರಿಗಣ್ಣಿಗೆ ಅಥವಾ ವೈಜ್ಞಾನಿಕ ಉಪಕರಣಗಳಿಗೆ ಕಾಣದ ರೀತಿಯಲ್ಲೆ ಇರುತ್ತದೆ; ಯೋಗಿಗಳು ಅವುಗಳನ್ನು ಕಾಣಬಲ್ಲರು ಅಥವಾ ಅನುಭವವನ್ನು ಪಡೆದುಕೊಳ್ಳಬಲ್ಲರು. ಪಂಚಭೂತಾತ್ಮಕ ಶರೀರದ, ವ್ಯಕ್ತಿತ್ವದಲ್ಲಿರುವ ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಮತ್ತು ಆನಂದಮಯ ಪಂಚಕೋಶಗಳ ಆಡಳಿತಾಧಿಪತ್ಯ ಇಂತಹ ಚಕ್ರಗಳ ನಿತ್ಯ-ನಿರಂತರ ಮನೆವಾರ್ತೆ!!

ತಾಯಿಯ ಗರ್ಭದಲ್ಲಿ ಅಂಡಾಣು-ವೀರ್ಯಾಣುಗಳ ಸಂಗಮವಾದ ನಂತರದಲ್ಲಿ ಅದು ತಾಯಿಯ ಶರೀರದ ಜೀವಕೋಶಗಳ ಒಂದು ಪ್ರತ್ಯೇಕ ಗುಂಪಾಗಿರುತ್ತದೆ. ಸಾಮಾನ್ಯವಾಗಿ ಜೀವಕೋಶಗಳ ಆ ಗುಂಪು ದ್ವಿಗುಣಗೊಳ್ಳುತ್ತ ಬೆಳೆಯತೊಡಗಿ 48 ದಿನಗಳು ಪೂರೈಸುವಷ್ಟರಲ್ಲಿ ಭ್ರೂಣದ ಆಕಾರಕ್ಕೆ ಬರುತ್ತದೆ. ಹೊರಗಿನ ವಾಯುಮಂಡಲದಲ್ಲಿ ಜನ್ಮತಳೆಯೋದಕ್ಕೆ ತಮತಮಗೆ ತಕ್ಕುದಾದ ಗರ್ಭವನ್ನು ಹುಡುಕುತ್ತಿರುವ ಆತ್ಮಗಳು ಅಲೆಯುತ್ತಿರುತ್ತವೆ. ಕರ್ಮಜಾಲಕ್ಕೆ ಕಟ್ಟುಬಿದ್ದ ಯಾವುದೋ ಒಂದು ಆತ್ಮ ಗರ್ಭವನ್ನು ಪ್ರವೇಶಿಸಿ ಭ್ರೂಣದಲ್ಲಿ ನೆಲೆನಿಲ್ಲುತ್ತದೆ.

48 ದಿನಗಳಿಗೆ ಮೇಲ್ಪಟ್ಟು ಅಂದರೆ ಸುಮಾರು 60-80 ದಿನಗಳಲ್ಲಿ ಯಾವುದಾದರೂ ಆತ್ಮ ತಾಯ ಗರ್ಭವನ್ನು ಪ್ರವೇಶಿಸಿದರೆ, ಜನ್ಮತಳೆಯುವ ವ್ಯಕ್ತಿ ಮಹಾತ್ಮನಾಗಿರುತ್ತಾನೆ. ಅಂತಹ ಮಹಾತ್ಮ ಬಾಲ್ಯದಲ್ಲೇ ಕೆಲವು ವಿಶಿಷ್ಟ ಲಕ್ಷಣಗಳನ್ನು ಪ್ರದರ್ಶಿಸುತ್ತಾನೆ. ಯಾವ ಉಪಕರಣಗಳೂ ಇಲ್ಲದ ಕಾಲಘಟ್ಟದಲ್ಲಿ ಋಷಿಗಳು ತಮ್ಮ ತಪಸ್ಸಿನ ಪೀಠದಲ್ಲಿ ಕಂಡುಕೊಂಡ ಸತ್ಯಗಳನ್ನು ನಾವೆಲ್ಲ ಮರೆತುಬಿಟ್ಟಿದ್ದೇವೆ; ಅದನ್ನು ತಿಳಿದುಕೊಳ್ಳೋದಕ್ಕೂ ನಮಗೆಲ್ಲ ಆಸಕ್ತಿಯಿಲ್ಲ.

ಮರಳಿ ನಾವೀಗ ಚಕ್ರಗಳತ್ತ ಬರೋಣ. ಚಕ್ರಗಳ ಸುದ್ದಿ ಬಂದಾಗ ಸಾಮಾನ್ಯ ಸಾಧು-ಸಂತರೆಲ್ಲ ತಮ್ಮ ಪರಿಶ್ರಮದಿಂದ ಪ್ರಯತ್ನಿಸಿ, ಮೂಲಾಧಾರದಿಂದ ಆಜ್ಞಾ ಚಕ್ರದ ವರೆಗೆ ಶಕ್ತಿಯನ್ನು ಕೊಂಡೊಯ್ಯುತ್ತಾರೆ. ಅಲ್ಲಿಯವರೆಗೆ ಹೋಗುವ ಹಾದಿ ಸುಗಮವಿದೆ. ಆದರೆ ಅಲ್ಲಿಂದಾಚೆಗೆ ಈ ಮೂರು ನಾಡಿಗಳು ಸಹಸ್ರಾರವನ್ನು ತಲುಪುವುದಿಲ್ಲವಾದ್ದರಿಂದ ಸಹಸ್ರಾರಕ್ಕೆ ಯಾವುದೇ ಪೈಪ್ ಅಥವಾ ನೇರ ಹಾದಿ ವ್ಯವಸ್ಥೆ ಇರೋದಿಲ್ಲ.

ತಪಸ್ವಿಗಳು ತಮ್ಮ ಘನಘೋರ ತಪಸ್ಸಿನಿಂದ ಸಹಸ್ರಾರವನ್ನು ತಲುಪುತ್ತಾರೆ. ಆದರೆ ನೂರಕ್ಕೆ ತೊಂಬತ್ತೊಂಬಬತ್ತರಷ್ಟು ಜನರಿಗೆ ಅದು ಸಾಧ್ಯವಾಗೋದಿಲ್ಲ. ಆಜ್ಞಾ ಚಕ್ರದಿಂದ ಸಹಸ್ರಾರಕ್ಕೆ ಜಂಪ್ ಹೊಡೆಯುವುದಷ್ಟೇ ಇರುವ ಏಕೈಕ ಮಾರ್ಗ! ಹೇಗೆ ಮೇಲಕ್ಕೆ ನೆಗೆಯಬೇಕು ಮತ್ತು ಹೇಗೆ ಹಾರಿದರೆ ಗಮ್ಯವನ್ನು ಸೇರಬಹುದು ಎಂಬುದು ನಿಜವಾದ ಸನ್ಯಾಸಿಯ ಅಥವಾ ಆಧ್ಯಾತ್ಮಿಕ ಗುರುವಿನ ಕೃಪೆಯಿಂದಲಷ್ಟೇ ಪಡೆಯುವ ಅರ್ಹತೆಯಾಗಿದೆ!

ಹಾಗೆ ಅನುಗ್ರಹಿಸುವ ಆಧ್ಯಾತ್ಮಿಕ ಗುರು ಅಕಳಂಕ ಮಹಿಮನಾಗಿರಬೇಕು ಅಂದರೆ ಸಚ್ಚಾರಿತ್ರ್ಯವನ್ನು ಹೊಂದಿರಬೇಕು, ತನಗೆ ದೀಕ್ಷೆ ನೀಡಿದ ಗುರುವನ್ನು ಸ್ಮರಿಸುತ್ತ ಯೋಗದ ನಿಯಮಗಳನ್ನು ಪರಿಪಾಲಿಸುತ್ತ, ಅತ್ಯಂತಿಕ ತಪಸ್ಸಿನಲ್ಲಿ ತನ್ಮಗ್ನನಾಗಿರಬೇಕಾಗುತ್ತದೆ. ಅಂತಹ ಗುರುವು ದೀರ್ಘಕಾಲದ ತನ್ನ ನೈತಿಕ ನಿಷ್ಠೆ, ಧರ್ಮನಿಷ್ಠೆ, ತಪೋಬಲಗಳಿಂದ ಮತ್ತು ಅವನ ಗುರುವಿನ ಕೃಪೆಯಿಂದ ಸಹಸ್ರಾರಕ್ಕೆ ಜಿಗಿಯಲು ಸಾಧ್ಯವಾಗುತ್ತದೆ. ಹಾಗೆ ಸಹಸ್ರಾರಕ್ಕೆ ಜಿಗಿದ ಸನ್ಯಾಸಿ ಬ್ರಹ್ಮಜ್ಞಾನಿಯಾಗುತ್ತಾನೆ.

ಅಲ್ಲಿಂದಾಚೆಗೆ ಅವನಿಗೆ ಮೂರುಕಾಲಗಳ, ದೇಶಗಳ, ಗುಣ[ಸತ್ವ-ರಜ-ತಮ]ಗಳ ಬಾಧೆ ಇರೋದಿಲ್ಲ. ತ್ವಂ ಗುಣತ್ರಯಾತೀತಃ, ತ್ವಂ ದೇಹತ್ರಯಾತೀತಃ[ಸ್ಥೂಲ-ಸೂಕ್ಷ ಮತ್ತು ಕಾರಣ], ತ್ವಮವಸ್ಥಾತ್ರಯಾತೀತಃ [ಜಾಗೃತ್-ಸುಷುಪ್ತಿ-ಸ್ವಪ್ನ] ಎಂದೆಲ್ಲ ಉಪನಿಷತ್ತು ಹೇಳುತ್ತದೆ. ಅದರರ್ಥವೇ ಅದು.

ಮನುಷ್ಯ ಮನಸ್ಸಿನಲ್ಲಿ ಸಹಜವಾಗಿ ಮಲ-ವಿಕ್ಷೇಪ ಮತ್ತು ಅಜ್ಞಾನಗಳು ತುಂಬಿರುತ್ತವೆ. ನಾವಿಂದು ಹೆಣ್ಣು-ಹೊನ್ನು-ಮಣ್ಣಿಗಾಗಿ ಬಡಿದಾಡುತ್ತ ಹಲವು ವ್ಯವಸ್ಥೆಗಳಮೂಲಕ ಹಕ್ಕುಸ್ಥಾಪನೆಗೆ ಮುಂದಾಗುತ್ತೇವೆ. ನಮ್ಮ ಜ್ಞಾನವೆಂದರೆ ಲೌಕಿಕವಾಗಿ ನಾವೇ ತಯಾರಿಸಿಕೊಂಡ ಮಾಹಿತಿ ಪುಸ್ತಕಗಳನ್ನು ಓದಿ, ಪ್ರಾತ್ಯಕ್ಷಿಕೆ ಪಡೆದುಕೊಂಡು, ಮುಂದೆ ಸಂಬಂಧಿತ ಉದ್ಯೋಗವೊಂದನ್ನು ನಡೆಸುತ್ತ ಉದರಂಭರಣೆ ಮಾಡಿಕೊಳ್ಳೋದಷ್ಟೇ; ಆದರೆ ನಿಜವಾದ ಜ್ಞಾನ ಅದಲ್ಲ-ಯಾವುದು ಈ ಪ್ರಪಂಚವನ್ನು ಅಥವಾ ಬ್ರಹ್ಮಾಂಡವನ್ನು ನಿರ್ಮಿಸಿ, ವ್ಯವಸ್ಥಾಪನೆಗೊಳಿಸಿ, ನಿಯಂತ್ರಿಸುವ ಕೆಲಸ ಮಾಡುತ್ತದೋ ಆ ಮೂಲವನ್ನು ಅರಿಯುವುದೇ ನಿಜವಾದ ಜ್ಞಾನ ಮತ್ತು ಅಂತಹ ಜ್ಞಾನವನ್ನು ಪಡೆಯೋದಕ್ಕೆ ಸೂಕ್ತ ಮಾರ್ಗದಲ್ಲಿ ಮುನ್ನಡೆಯಲು ಸಹಕರಿಸುವವನೇ ಆಧ್ಯಾತ್ಮಿಕ ಗುರು, ಧರ್ಮಾಚಾರ್ಯ ಅಥವಾ ಅವನೇ ನಿಜವಾದ ಗುರು ಎನಿಸುತ್ತಾನೆ.

ಬ್ರಹ್ಮಜ್ಞಾನವನ್ನು ಪಡೆದುಕೊಂಡ ವ್ಯಕ್ತಿಗೆ ಈ ಪ್ರಪಂಚವೇ ಒಂದು ತಮಾಷೆಯಾಗಿ ಕಾಣುತ್ತದೆ; ಅದೊಂದು ದೊಡ್ಡ ಜೋಕ್ ಎನಿಸುತ್ತದೆ ಎಂದು ಮಹಾತ್ಮ ಋಷಿಗಳು ಹೇಳಿದ್ದಾರೆ. ಕೂಪಮಂಡೂಕಗಳಂತಿರುವ ನಮಗೂ ಮತ್ತು ನಮ್ಮಂತಹ ಬುದ್ದುಗಳನ್ನಾಳುತ್ತಿರುವ ಶತಮೂರ್ಖ ’ಸನ್ಯಾಸಿ’ ತೊನೆಯಪ್ಪನಿಗೂ ಜೋಡಿ ಸರಿಯಾಗಿದೆ! ಇಂತಹ ಚೋರಗುರುವನ್ನು ಇಟ್ಟುಕೊಂಡಷ್ಟೂ ಚಾಂಡಾಲ ಶಿಷ್ಯರು ನಾವಾಗೋದರಲ್ಲಿ ಸಂಶಯವೇ ಇಲ್ಲ!

ಯಾವುದೇ ಗುರು ಪರಂಪರೆಯ ಮೂಲವನ್ನು ತೆಗೆದುಕೊಂಡರೆ ಅದು ಸದಾಶಿವ ನಾರಾಯಣನನ್ನೇ ತಲುಪುತ್ತದೆ! ಅದರರ್ಥ, ಯುಗಗಳ ಹಿಂದೆ ತನ್ನ ಸೃಷ್ಟಿಕ್ರಿಯೆಯಲ್ಲಿ ಮೂಲ ಪುರುಷರನ್ನು ಹುಟ್ಟಿಸಿ, ಅವರಿಗೆ ವಿಶಿಷ್ಟ ಶಕ್ತಿಗಳನ್ನು ಕರುಣಿಸಿ, ಅವರು ತಪಸ್ಸು ನಡೆಸಿದಾಗ ತನ್ನ ಮಾಯೆಯ ಮಿಥ್ಯಾಪ್ರಪಂಚದ ಬಗ್ಗೆ ಆ ಶಕ್ತಿ ಅವರಿಗೆಲ್ಲ ಮಾಹಿತಿ ನೀಡಿತ್ತು. ಹಾಗಾಗಿ ಅವರ ಮೂಲಕ ಇಂದಿನ ತಲೆಗಳಿಯವರೆಗೂ ಅದು ಗುರುವಿನ ರೂಪದಲ್ಲಿ ಅನುಗ್ರಹ ಪೂರ್ವಕವಾಗಿ ಹರಿದುಬಂತು.

ಸೃಷ್ಟಿಕರ್ತ ಹಾಗಾಗಿಯೇ ಗುರುವಿಗೆ ಆ ಸ್ಥಾನವನ್ನು ನೀಡಿದ್ದಾನೆ. ಅದಕ್ಕಾಗಿಯೇ ಜನಸಾಮಾನ್ಯರು ಆಧ್ಯಾತ್ಮಿಕ ಗುರುವನ್ನು ಆಶ್ರಯಿಸಬೇಕಾಗುತ್ತದೆ. ಆಧ್ಯಾತ್ಮಿಕ ಗುರುವಿನ ಆಯ್ಕೆಯಲ್ಲಿ ಅದೇ ಭಗವಂತ ನಮಗೆ ಸ್ವಾತಂತ್ರ್ಯವನ್ನು ನೀಡಿದ್ದಾನೆ. ಹೀಗಾಗಿ ತ್ರಿಕಾಲದಲ್ಲೂ ’ಏಕಾಂತ’ದ ಕಾಳಜಿಯನ್ನೇ ಇರಿಸಿಕೊಂಡು ಈರುಳ್ಳಿ ಉಪ್ಪಿಟ್ಟು ತಿನ್ನುತ್ತ ತನ್ನ ಸ್ವಾರ್ಥಕ್ಕಾಗಿ ದನಕಾಯೋರಂತೆ ನಟಿಸೋರನ್ನೆಲ್ಲ ಗುರುವೆಂದು ಆಯ್ಕೆ ಮಾಡಿಕೊಳ್ಳೋದು ಚಾಂಡಾಲ ಲಕ್ಷಣವಾಗುತ್ತದೆ. ಕಲಿಯುಗ ಹೇಗಿದೆಯೆಂದರೆ ನಿಜವಾದ ಸನ್ಯಾಸಿಗಳು ಈಗ ’ಗುರು’ ಮತ್ತು ’ಏಕಾಂತ’ ಪದಗಳನ್ನೆಲ್ಲ ಬಳಸೋದಕ್ಕೆ ಹಿಂಜರಿಯಬೇಕಾದ ಪ್ರಸಂಗ ಬಂದೊದಗಿದೆ!

ಬ್ರಹ್ಮಜ್ಞಾನಿಯಾದವ ಕಂಡಿದ್ದನ್ನೆಲ್ಲ ಹಲುಬುತ್ತ ತಿರುಗೋದಿಲ್ಲ; ಅವನಿಗೆ ಹಾರ-ತುರಾಯಿ-ಶಾಲು-ಬ್ಲಾಂಕೆಟ್ಟು ಯಾವುದರ ಸನ್ಮಾನವೂ ಬೇಕಾಗಿಲ್ಲ. ಹೊರಜಗತ್ತಿನ ಸಂಪತ್ತಿಗಳು ಇದ್ದರೆಷ್ಟು ಬಿಟ್ಟರೆಷ್ಟು ಎಂಬರ್ಥದಲ್ಲಿ ಅವನಿರುತ್ತಾನೆ. ಮೃದು-ಮಿತ ಭಾಷಿಯಾಗಿರುತ್ತಾನೆ. ಕಂಡವರ ತೃಪ್ತಿಗಾಗಿ ಹಲ್ಲುಕಿಸಿಯೋದಿಲ್ಲ, ಮಾಧ್ಯಮಗಳೆದುರು ಹಲ್ಲುಕಿಸಿಯುತ್ತ ಪೋಸು ಕೊಡೋದಿಲ್ಲ, ಯಾವುದೇ ಮಾಧ್ಯಮದಲ್ಲೂ ಪ್ರಚಾರಪ್ರಿಯನಾಗಿ ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ಭಾಗವಹಿಸೋದಿಲ್ಲ. ಪ್ರಮುಖವಾಗಿ ತನ್ನ ಪರಂಪರೆಯ ಆದಿಗುರು ವಿಧಿಸಿದ ಕಟ್ಟುಕಟ್ಟಳೆಗಳನ್ನು ಚಾಚೂ ತಪ್ಪದೆ ಪಾಲಿಸುತ್ತಾನೆ. ಸನ್ಯಾಸ ಧರ್ಮಕ್ಕೆ ನಿಷಿದ್ಧವಾದ ಕಾರ್ಯಗಳಲ್ಲಿ ಪಾಲ್ಗೊಳ್ಳುವುದಿಲ್ಲ.

ಸ್ವಾಮಿ ರಾಮರ ಗ್ರಂಥಗಳಲ್ಲಿ ಯೋಗದ ಬಗ್ಗೆ, ಸನ್ಯಾಸಿಗಳ ಬಗ್ಗೆ, ಪೀಠ-ಪರಂಪರೆಗಳ ಬಗ್ಗೆ, ಶ್ರೀಚಕ್ರದ ಬಗ್ಗೆ, ಸನ್ಯಾಸಿಗಳ ಅಲೌಕಿಕ ಶಕ್ತಿಯ ಬಗ್ಗೆ, ಬ್ರಹ್ಮಜ್ಞಾನಿಗಳ ಮಹಿಮೆಗಳ ಬಗ್ಗೆ, ಹಿಮಾಲಯದ ಸಂತರ ನಡಾವಳಿಗಳ ಬಗ್ಗೆ ನಿಖರವಾಗಿ ಕಣ್ಣಿಗೆ ಕಟ್ಟುವಂತೆ ಪ್ರತ್ಯಕ್ಷದರ್ಶಿಯಾಗಿ ಎಲ್ಲವನ್ನೂ ಬರೆದಿದ್ದಾರೆ.

ಹಿಮಾಲಯದ ಎತ್ತರದಲ್ಲಿ ಒಮ್ಮೆ ಸಾಗುವಾಗ ಭೂಕುಸಿತ ನಡೆಯತೊಡಗಿತು; ಸ್ವಾಮಿರಾಮ ಮತ್ತವರ ಗುರು ನಡೆಯುತ್ತಿದ್ದ ಸ್ಥಳದಲ್ಲೇ ಭೂಕುಸಿತ ಉಂಟಾಗತೊಡಗಿದಾಗ ಇನ್ನೂ ಆಧ್ಯಾತ್ಮಿಕ ವಿದ್ಯಾರ್ಥಿಯಾಗಿದ್ದ ಸ್ವಾಮಿರಾಮ ತಾವು ಸತ್ತೆವೆಂದು ಭಾವಿಸಿ ಅಂಜುತ್ತ ಗುರುವಿನಲ್ಲಿ ಹೇಳಿದರೆ, ” ಶಾಶ್ವತವಾದದ್ದನ್ನು ಯಾರು ಸಾಯಿಸಬಲ್ಲರು?”[Who will kill the eternal ?] ಎಂದರಂತೆ, ತಕ್ಷಣದಲ್ಲಿ ಅವರು ಆ ಕ್ಷೇತ್ರದಿಂದ ಮುಂದಕ್ಕೆ ಸಾಗಿಹೋಗುವವರೆಗೆ ಭೂಕುಸಿತ ನಿಂತಿತು ಎಂದಿದ್ದಾರೆ!

ಇನ್ನೊಮ್ಮೆ ವಿಪರೀತ ಹಿಮಪಾತವಾಗತೊಡಗಿತ್ತು. ಬಡಪಾಯಿ ಸನ್ಯಾಸಿಗಳಲ್ಲಿ ನೆಪಮಾತ್ರದ ಬಟ್ಟೆಬರೆಗಳನ್ನು ಬಿಟ್ಟರೆ ಇನ್ನೇನಿರಲು ಸಾಧ್ಯ? ಹಿಮಪಾತದಲ್ಲಿ ನಲುಗುತ್ತ ನಡುಗುತ್ತಿದ್ದ ಸ್ವಾಮಿರಾಮ ಮತ್ತೋರ್ವ ಜೊತೆಗಾರ, ಜೊತೆಗಿದ್ದ ಗುರುವಿನಲ್ಲಿ “ತಾವು ತಪೋಧನರು, ತಮ್ಮ ಕರುಣೆಯಿಂದ ಹಿಮಪಾತವನ್ನು ನಿಲ್ಲಿಸಬಾರದೆ?” ಎನ್ನುತ್ತಾರೆ; ಗುರುವು ಆಗಸದೆಡೆಗೆ ನೋಡಿದ ಮರುಕ್ಷಣದಲ್ಲಿ ಹಿಮಪಾತ ನಿಂತುಹೋಗುತ್ತದೆ!

ಹಿಮಾಲಯದ ಮಹಿಮಾವಂತರು, ಮಹಾತ್ಮರು ಪರಕಾಯ ಪ್ರವೇಶ ನಡೆಸಿದ ಘಟನೆಗಳ ಬಗ್ಗೆ, ಇಚ್ಛಾಶರೀರ ಧಾರಿಗಳಾದ ಬಗ್ಗೆ, ಇಚ್ಛೆಗನುಸಾರವಾಗಿ ಶರೀರ ವಿಸರ್ಜಿಸಿದ ಬಗ್ಗೆ ಅನೇಕ ಘಟನೆಗಳನ್ನು ಹೇಳಿದ್ದಾರೆ. ಸಹಸ್ರಾರದಲ್ಲಿರುವ ಬ್ರಹ್ಮರಂಧ್ರವನ್ನು ಒಡೆದುಕೊಂಡು ಹೊರಟುಹೋಗುವ ಮಹಾತ್ಮರ ಬಗ್ಗೆ ತಿಳಿಸಿದ್ದಾರೆ.

ಯಾವ ದೃಷ್ಟಿಕೋನದಿಂದ ಅಳತೆ ತೆಗೆದರೂ, ’ಸಾವಿರ ಸುತ್ತು ಹಾಕಿದರೂ ಗಂಟು ಒಂದೇ’ ಎಂಬಂತೆ ಆದಿಶಂಕರರು ಹೇಳಿದ ತತ್ವದಲ್ಲೇ ಎಲ್ಲ ತತ್ವಗಳೂ ವಿಲೀನವಾಗುತ್ತವೆ. ಶಂಕರರು ಹೇಳಿದ ಪರಕಾಯ ಪ್ರವೇಶ ಕೇವಲ ಕಟ್ಟುಕಥೆಯಲ್ಲ ಎಂಬುದನ್ನು ಸ್ವಾಮಿರಾಮ ಸಾಕ್ಷಾತ್ ನೋಡಿ ಹೇಳಿದ್ದಾರೆ. ಚೆನ್ನಾಗಿರುವುದನ್ನೇ ತನ್ನ ಮಗುವಿಗೆ ಕೊಡಬಯಸುವ ಅಮ್ಮನಂತೆ ಈ ಲೋಕದ ಪರಮೋಚ್ಚ ಅಂಶಗಳನ್ನು ಆಯ್ದು, ಸಂಸ್ಕರಿಸಿ, ಸಮೀಕರಿಸಿ ಜೀವನವಿಧಾನವನ್ನು ಹೇಳಿದ ಆ ಮಹಾತ್ಮರು ಹಿಮಾಲಯದ ಕೇದಾರನಾಥದ ಹಿಂಭಾಗದ ಶಿಖರದಲ್ಲಿ ಪರ್ವತವನ್ನೇರುತ್ತ ಗಮ್ಯಸ್ಥಾನಕ್ಕೆ ತೆರಳಿ ತನ್ನ ನಂತರ ಭೌತಿಕ ಶರೀರ ಯಾರಿಗೂ ಸಿಗದಂತೆ ಮಾಡಿಬಿಟ್ಟರು!

ಶರೀರದ ಚಕ್ರಗಳನ್ನೆಲ್ಲ ಸೇರಿಸಿದಂತೆ ಡ್ರೋನ್ ವೀವ್ ಕಲ್ಪಿಸಿಕೊಂಡರೆ ಅದು ಶ್ರೀಚಕ್ರವೇ ಆಗಿರುತ್ತದೆ! ಶೀಚಕ್ರದ ಮಧ್ಯಕೋನದ ಮಧ್ಯಬಿಂದುವು ಶಿವ-ಶಕ್ತಿಯರ ಸಂಗಮದ ಸ್ಥಳ. ಅದೇ ಬ್ರಹ್ಮರಂಧ್ರ! ಅದನ್ನು ಭೇದಿಸುವುದೇ ಬಿಂದುಭೇದನ! ನಿಜವಾದ ಸನ್ಯಾಸಿಯ ಪರಮೋಚ್ಚ ಬಯಕೆಯೇ ಬಿಂದುಭೇದನ ಕ್ರಿಯೆ. ಬಿಂದುವನ್ನು ಭೇದಿಸಿಕೊಂಡು[ಬ್ರಹ್ಮರಂಧ್ರ ಒಡೆದುಕೊಂಡು] ಶಿವಸಾಯುಜ್ಯ ಅಥವಾ ನಾರಾಯಣತ್ವ ಪಡೆದುಕೊಳ್ಳುವುದೇ ನರನಾಗಿ ಜನಿಸಿದ ಸನ್ಯಾಸಿಯ ಗುರಿಯಾಗಿರುತ್ತದೆ.

ಹಾಗೆ ಎಲ್ಲರಲ್ಲೂ ಆಗದ್ದರಿಂದ ಗುರುವೆಂಬ ಗೌರವದಿಂದ, ಸನ್ನಡತೆಯಲ್ಲಿ ಮುನ್ನಡೆದು ಆಧ್ಯಾತ್ಮಿಕ ಪಥದಲ್ಲಿ ಮೇಲಕ್ಕೇರಿದ ಸನ್ಯಾಸಿಗಳು ಮಡಿದಾಗ, ಬ್ರಹ್ಮರಂಧ್ರ ತಾನಾಗಿಯೇ ಒಡೆಯದಿದ್ದ ಪಕ್ಷದಲ್ಲಿ, ಮಹಾಸಮಾಧಿಮಾಡುವ ಮುನ್ನ, ಶಂಖದ ಕೊನೆಯಿಂದ ಅಥವಾ ತೆಂಗಿನಕಾಯಿಯ ಚೂಪಾದ ಮೂಲೆಯಿಂದ ನೆತ್ತಿಯಭಾಗದಲ್ಲಿ ಬ್ರಹ್ಮರಂಧ್ರ ಒಡೆದ ಶಾಸ್ತ್ರವನ್ನು ಪೂರೈಸಲಾಗುತ್ತದೆ.

ಅದಾವುದರ ಪರಿವೆಯೂ ಇಲ್ಲದ ಸಮಾಜದ ಜನ ಕಾವಿಹೊದ್ದ ಜೋಕರ್ ನಂತಹ ಕಳ್ಳನ ಹಾದರದ ಚಾದರದ ಮೇಲೆ ಮಠವನ್ನು ನಡೆಸುತ್ತಿದ್ದಾರೆ ಎಂಬುದನ್ನು ಗಮಿಸಿದರೆ ಪ್ರಾಯಶಃ ಯಾರೋ ಹೇಳಿದಂತೆ ವಿನಾಶಕಾಲೇ ವಿಪರೀತ ಬುದ್ಧಿಃ ಎಂದೆನಿಸುತ್ತದೆ. ಲೌಕಿಕ ಕಾಯಿದೆಗಳಿಂದ ತಪ್ಪಿಸಿಕೊಳ್ಳುವ ಎಲ್ಲ ಮಸಲತ್ತುಗಳನ್ನೂ ಮಟ್ಟುಗಳನ್ನೂ ಕರಗತಮಾಡಿಕೊಂಡ ಕಳ್ಳನನ್ನು ಚಾಣಾಕ್ಷನೆನ್ನುವುದು ಸರಿಯಲ್ಲ. ನಮಗೆ ಲೌಕಿಕ ಚಾಣಾಕ್ಷತನ, ರಾಜಕಾರಣ, ಆಡಂಬರಗಳು ಬೇಕಾಗಿಲ್ಲ, ಮಠದ ಸ್ಥಿರ-ಚರ ಸ್ವತ್ತುಗಳು ಹೆಚ್ಚೋದು ಬೇಕಾಗಿಲ್ಲ; ಸಮಾಜದ ಜನರ ಆತ್ಮೋನ್ನತಿಗೆ ಸರಿಯಾದ ಮಾರ್ಗದರ್ಶನ ಆಗಬೇಕಷ್ಟೆ. ಅದಕ್ಕೆ ತಕ್ಕನಾದ ಗುರುವಿನ ಅಗತ್ಯ ಮಾತ್ರ ನಮಗೆ ಕಾಣುತ್ತದೆ.

ಈ ವೀರ್ಯಪ್ಪನ್ ಪ್ರಯೋಗಿಸಿದ ಹಲವು ಶಸ್ತ್ರಾಸ್ತ್ರಗಳು ಮತ್ತು ಮಟ್ಟು-ಮಸಲತ್ತುಗಳನ್ನು ಗಮನಿಸುವಾಗ ಏಕಾಂತದ ಮಹಿಳೆಯರಲ್ಲಿ ಇವನು “ನಾನೇ ರಾಮ, ನೀನೇ ಸೀತೆ, ಎಲ್ಲವನ್ನೂ ಅರ್ಪಿಸಿಕೋ” ಎಂದಿದ್ದು ಸುಳ್ಳಾಗಿರಲು ಸಾಧ್ಯವೇ ಇಲ್ಲ ಎಂಬುದು ಈ ಕಾಲದ ಬುದ್ಧಿವಂತ ಕತ್ತೆಗಾದರೂ ಅರ್ಥವಾಗಬಹುದು; ಆದರೆ ಆಮಿಷಕ್ಕೋ, ಅನುಕೂಲಕ್ಕೋ, ಅವಕಾಶಕ್ಕೋ ಅವನನ್ನೇ ಆಶ್ರಯಿಸಿದವರಿಗೆ ಅರ್ಥವಾಗೋದಿಲ್ಲ; ಆ ಮೂರ್ಖರು ನಿಂತ ಟೊಂಗೆಯ ಬುಡದ ಭಾಗವನ್ನೇ ಕಡಿಯುತ್ತಿದ್ದಾರೆ ಪಾಪ! ಇದನ್ನೆಲ್ಲ ತಿಳಿದೂ ಏನೂ ಮಾಡದೆ ಕುಳಿತದ್ದು ನಾವು ಮಾಡಿದ ಮಹಾಪಾಪ!!

Thumari Ramachandra
07/01/2017
source: https://www.facebook.com/groups/1499395003680065/permalink/1887166364902925/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s