ಅಡಕೆ ಧಾರಣೆ ನೋಡುವ ಭರದಲ್ಲಿ ಧಾರಣ ಶಕ್ತಿಯನ್ನು ಕಳೆದುಕೊಂಡರು!!

ಅಡಕೆ ಧಾರಣೆ ನೋಡುವ ಭರದಲ್ಲಿ ಧಾರಣ ಶಕ್ತಿಯನ್ನು ಕಳೆದುಕೊಂಡರು!!

ತೊನೆಯಪ್ಪನಿಗೆ ಥೂ ಎನ್ನುವ ಮುನ್ನ ಸಮಾಜ ಎಲ್ಲಿ ಅಂಧಾನುಕರಣೆಗೆ ತೊಡಗಿತು ಎಂದು ಯೋಚಿಸಬೇಕಾಗಿದೆ. ಇದು ಇಂದಿನವರ ತಪ್ಪಲ್ಲ. ಇಂದಿನವರ ಅಜ್ಜನ ಅಜ್ಜನ ಕಾಲಕ್ಕೆ ಧರ್ಮ ದಾರಿತಪ್ಪಿರಲಿಲ್ಲ. ಇಂದಿನ ಪೀಳಿಗೆಗೆ ಧರ್ಮ ಯಾವುದೆಂಬುದೇ ಗೊತ್ತಿಲ್ಲ! ದೊಣ್ಣೆಹಿಡಿದವನ ನೇರಕ್ಕೆ ಯಾವಾಗ ಸಮಾಜ ಅಂಜುತ್ತ ಕುಣಿಯತೊಡಗುತ್ತದೋ ಅಂತಹ ಧರ್ಮ ಅಧರ್ಮವಾಗಿರುತ್ತದೆ; ಅಲ್ಲಿ ದೊಣ್ಣೆನಾಯಕ ಹೇಳಿದ್ದೇ ಧರ್ಮವಾಗುತ್ತದೆ.

ನಮ್ಮ ಸಂಸ್ಕೃತಿಯೇ ಹೊಲಸೆಂಬಂತೆ ಅಸಹ್ಯಪಟ್ಟುಕೊಳ್ಳುವ ಸ್ಥಿತಿ ನಿರ್ಮಾಣವಾದರೆ ಆಗ ಸಂಸ್ಕೃತಿಯನ್ನು ಬಿಟ್ಟುಬಿಡುತ್ತಾರೆ;ಹಾಗೆ ಮಾಡಿದ್ದು ಬ್ರಿಟಿಷರ ಬಹುದೊಡ್ಡ ಸಾಧನೆ. ಹಾಗಾಗಿಯೇ ಭಾರತೀಯರು ಅನೇಕ ವಿಷಯಗಳಲ್ಲಿ ಇಂಗ್ಲೀಷರ/ಪಾಶ್ಚಾತ್ಯರ ಅಂಧಾನುಕರಣೆಗೆ ತೊಡಗಿರುವುದು. ಭಾರತೀಯರಲ್ಲಿ ದಾಂಪತ್ಯ ವಿಚ್ಛೇದನಗಳು ತೀವ್ರಗತಿಯಲ್ಲಿ ಹೆಚ್ಚುತ್ತಿವೆ; ವಿದೇಶೀಯರಲ್ಲಿ ಅದು ತಗ್ಗುತ್ತಿದೆ!

ಯಾವುದೇ ಕುಂದುಕೊರತೆಗಳಿರದೆ ಸಮೃದ್ಧವಾಗಿದ್ದ ಭಾರತ ಕಳಾಹೀನವಾಗಿದ್ದು ಬ್ರಿಟಿಷರಿಂದ. ಯಾವಾಗ ಮೆಕಾಲೆ ಬಂದನೋ ಅಂದಿನಿಂದ ಅಖಂಡ ಭಾರತದ ಚಿತ್ರಣ ಬದಲಾಗಿಹೋಯ್ತು. ಬ್ರಿಟಿಷರು ಭಾರತಕ್ಕೆ ಬಂದಮೇಲೆ ಸರ್ವೆ ಮಾಡಲು ಕಲಿಸಿದರಂತೆ, ಅದಕ್ಕೂ ಮುಂಚೆ ರಾಜಪ್ರಭುತ್ವದಲ್ಲೂ ಭೂಮಿಯನ್ನು ಅಳೆಯುವ ಮಾಪನಗಳು ಇದ್ದವು, ಅವು ಸಮಾಧಾನಕರವಾಗಿದ್ದವು. ಬ್ರಿಟಿಷರು ಏನನ್ನೋ ಕೊಡುಗೆಯಾಗಿ ಕೊಟ್ಟರು ಅನ್ನೋದಕ್ಕಿಂತ, ಹೊಟ್ಟೆತುಂಬ ಉಂಡು-ಊರು ತುಂಬ ಹೇತುಹೋದರು.

ಅವರ ದುರಾಡಳಿತದಲ್ಲಿ ನೆಲದ ಭಾಷೆ ಸಂಸ್ಕೃತವನ್ನು ಮೂಲೆಗುಂಪು ಮಾಡಿದರು. ಬರೇ ಮುತ್ತುರತ್ನ ಬೆಳ್ಳಿಬಂಗಾರಗಳಷ್ಟೇ ಅಲ್ಲ, ನಮ್ಮಲ್ಲಿನ ವೇದ,ಯೋಗ, ಆಯುರ್ವೇದ ಗ್ರಂಥಗಳನ್ನು ಹೊತ್ತೊಯ್ದರು. ನಮ್ಮ ಮೂಲ ಇತಿಹಾಸವನ್ನು ತಿರುಚಿ ಬರೆಸಿದರು. ಬ್ರಿಟಿಷರು ಹೊರಟುಹೋದ ಮೇಲೆ ನಮ್ಮಲ್ಲಿನ ಅವರ ಪಳೆಯುಳಿಕೆಯ ತಲೆಗಳು ಬ್ರಿಟಿಷರು ಹೇಳಿದ್ದೇ ಸರಿ ಎಂದವು. ಮತಧರ್ಮ-ಜಾತಿ ರಾಜಕಾರಣ ಹುಟ್ಟಿಕೊಂಡಿತು. ಗಂಜಿಪಡಿಯ ಮೂಲ ಬೇರು ಸಿಗುವುದು ಆ ಕಾಲದಲ್ಲಿ. ಕೆಲವು ಸಾಹಿತಿಗಳೂ ಸಹ ಜಾತಿ ರಾಜಕಾರಣಕ್ಕೆ ಮುಂದಾದರು.

ಸಕಲವಿಧದಿಂದ ಸಶಕ್ತ-ಸುಪುಷ್ಟವಾಗಿದ್ದ ಭಾರತ ಮಲೇರಿಯಾ ರೋಗಿಯಂತೆ ಅಶಕ್ತತೆಗೆ ಇಳಿಯಿತು. ಏನನ್ನೂ ಓದದವರು ಅಧ್ಯಯನಶೀಲರನ್ನು ಆಡಿಕೊಳ್ಳತೊಡಗಿದರು. “ನಮ್ಮ ತಟ್ಟೇಲಿರೋದನ್ನ ನಾವು ತಿಂತೀವಿ ಅವರ ತಟ್ಟೇಲಿರೋದನ್ನು ಅವರು ತಿಂತಾರೆ” ಅನ್ನೋದಕ್ಕೆ ಆರಂಭಿಸಿದರು. ವಾಸ್ತವವಾಗಿ ಮನುಷ್ಯ ಸಂಬಂಧ ಚಿಗುರಿಕೊಳ್ಳೋದು ಭಾಷೆ ಮತ್ತು ಆಹಾರದಿಂದಲಂತೆ. ತಿನ್ನುವ ಆಹಾರವೇ ಮನಸ್ಸಾಗಿ ಪರಿವರ್ತನೆಗೊಳ್ಳುವುದಂತೆ. ಯಾರು ಯಾವುದನ್ನು ತಿನ್ನಬೇಕು ಯಾವುದನ್ನು ತಿನ್ನಬಾರದು ಎಂದು ಅನುಭವದಿಂದ ತಿಳಿಸಿದವರು ಪೂರ್ವಜ ಋಷಿಗಳು. ಸನ್ಯಾಸಿಗಳು ಈರುಳ್ಳಿ ಉಪ್ಪಿಟ್ಟು ತಿನ್ನಕೂಡದು ಎಂದವರೂ ಆವರೇ!

ಇದನ್ನೆಲ್ಲ ವಿಸ್ತರಿಸುವುದಕ್ಕಾಗಿ ಸ್ವಾಮಿ ರಾಮರ ಜೀವನದ ಐದಾರು ಘಟನೆಗಳನ್ನು ಬರೆದುಕೊಳ್ಳುತ್ತೇನೆ.

1. ತಾರಕೇಶ್ವರ ದೇವಸ್ಥಾನದ ಘಟನೆ-ಹಿಮಾಲಯದ ಉನ್ನತ ಸ್ತರಗಳಲ್ಲಿ ಒಂದೆಡೆ ತಾರಕೇಶ್ವರ ದೇವಸ್ಥಾನವಿದೆಯೆಂತೆ. ಗುಡಿಯಿದ್ದ ಜಾಗದಲ್ಲಿ ಹಿಂದೆ ಒಬ್ಬ ಸಿದ್ಧ ಪುರುಷರಿದ್ದರಂತೆ. ಅವರು ದೇಹವನ್ನು ತ್ಯಜಿಸಿದ ಮೇಲೆ ಅವರ ನೆನಪಿನಲ್ಲಿ ಆ ಗುಡಿಯ ನಿರ್ಮಾಣ ಆಗಿದೆಯಂತೆ. ಆ ಗುಡಿಯಿಂದ ಕೆಲವು ಕಿಲೋಮೀಟರುಗಳ ಆಳದಲ್ಲಿರುವ ಪುಟ್ಟ ಹಳ್ಳಿಯಲ್ಲಿ ಗೋವಿನ ಜೋಳ ಬೆಳೆಯುತ್ತದಂತೆ. ಪೈರಿನ ಮೊದಲ ಜೋಳವನ್ನು ತಾರಕೇಶ್ವರ ಸ್ವಾಮಿಗೆ ಅರ್ಪಿಸದಿದ್ದರೆ ಹಳ್ಳಿಯ ಭೂಮಿ ಕಂಪಿಸುತ್ತದೆ ಎಂಬುದು ಅಲ್ಲಿನವರ ಭಾವನೆಯಂತೆ.

ಸ್ವಾಮಿರಾಮರಿಗೆ ಇಂಥದ್ದೆಲ್ಲ ಬಹಳ ಕುತೂಹಲ. ಇನ್ನೂ ಹದಿನಾಲ್ಕರ ಸಾಧುವಾಗಿದ್ದ ಸ್ವಾಮಿರಾಮರು ಪರೀಕ್ಷಿಸುವ ಸಲುವಾಗಿ ತಾರಕೇಶ್ವರ ದೇವಸ್ಥಾನದೆಡೆಗೆ ತೆರಳಿದರಂತೆ. ಪರ್ವತವೇರುತ್ತ ಕತ್ತಲಾವರಿಸಿಬಿಟ್ಟಿತಂತೆ. ಪರ್ವತಮಾರ್ಗದಲ್ಲಿ ಕತ್ತಲಿನಲ್ಲಿ ಒಂದೊಂದು ಹೆಜ್ಜೆಯಿಡುವುದೂ ಜೀವನ್ಮರಣದ ಪ್ರಶ್ನೆ. ಸ್ವಾಮಿರಾಮರಿಗೆ ಮರದ ಹಾವುಗೆ ತಿರುಚಿ ಕಾಲು ಜಾರಿತಂತೆ. ಕತ್ತಲಲ್ಲಿ ಎತ್ತರದಿಂದ ಪ್ರಪಾತಕ್ಕೆ ಬಿದ್ದು ಸತ್ತುಹೋಗುತ್ತೇನೆಂದುಕೊಳ್ಳುವಾಗ ವಯೋವೃದ್ಧ ವ್ಯಕ್ತಿಯೊಬ್ಬರ ಹಸ್ತ ಅವರನ್ನು ಹಿಡಿದು ಕಾಪಾಡಿ, ಕೈಹಿಡಿದು ಗುಡಿಯತ್ತ ಕರೆದೊಯ್ದಿತಂತೆ. ಅಂಬರದ ನಸು ಬೆಳಕಿನಲ್ಲಿ ಆ ವ್ಯಕ್ತಿ ಶ್ವೇತಾಂಬರಧಾರಿ ಎಂಬುದು ಗೊತ್ತಾಯಿತಂತೆ. ಋಷಿಗಳಂತೆ ಗಡ್ಡ-ಮೀಸೆ, ಜಟೆ ಎಲ್ಲವೂ ಇತ್ತಂತೆ.

ಗುಡಿಯೊಳಗೆ ದೀಪ ಉರಿಯುತ್ತಿತ್ತಂತೆ. ಒಳಹೋಗುವ ಮುನ್ನ ಗುಡಿಯವರೆಗೂ ಹಿಂದಿನಿಂದ ಮಾತನಾಡುತ್ತ ಜೊತೆಯಾಗಿದ್ದ ಆ ವ್ಯಕ್ತಿಯನ್ನು ಅಭಿನಂದಿಸುವ ಸಲುವಾಗಿ ತಿರುಗಿ ನೋಡಿದರೆ ಅಲ್ಲಿ ಯಾರೂ ಇರಲಿಲ್ಲವಂತೆ! ಜೋರಾಗಿ ಕೂಗಿ ಕೃತಜ್ಞತೆಗಳನ್ನು ಹೇಳಿದರೂ ಉತ್ತರ ಬರಲಿಲ್ಲವಂತೆ. ಗುಡಿಯ ಪಕ್ಕದ ಇನ್ನೊಂದು ಪುಟ್ಟ ಕೋಣೆಯಲ್ಲಿ ಸಾಧುವೊಬ್ಬ ವಾಸವಿದ್ದನಂತೆ. ವಿಷಯ ಗೊತ್ತಾದಾಗ ಆ ಸಾಧು ಹೇಳಿದ್ದು-“ಅವರೇ ಸಿದ್ಧಿ ಬಾಬಾ” ಅಂತ.

ಗುಡಿ ಬಹಳ ದೊಡ್ಡದಲ್ಲ. ಸಾಮಾನ್ಯವಾಗಿ ಏಳೆಂಟು ಶತಮಾನ ಹಳೆಯದು. ಹರಿದು ಬೀಳುತ್ತಿದ್ದ ಗುಡಿಯಿದ್ದ ಜಾಗದಲ್ಲಿ ದೊಡ್ಡ ಹೊಸ ದೇವಸ್ಥಾನವನ್ನು ಕಟ್ಟುವ ಆಸೆಯಲ್ಲಿ ಕೆಲವು ಬ್ರಾಹ್ಮಣರು ಅಲ್ಲಿ ಕೆಲಸ ಆರಂಭಿಸಿದರಂತೆ. ನೆಲ ಅಗೆಯಲು ಆರಂಭಿಸಿದಾಗ ಹಾವುಗಳೋ ಹಾವುಗಳು!! ಪಾಯ ತೆಗೆಯುವಾಗ ಮಣ್ಣಿನ ಜೊತೆಗೆ ಹಾವುಗಳನ್ನೂ ಎತ್ತಿ ಎತ್ತಿ ದೂರಕ್ಕೆ ಎಸೆದರಂತೆ. [ಶ್ರೀಧರಸ್ವಾಮಿಗಳ ಕಾಲದಲ್ಲಿ ಕರಿಕಾನಮ್ಮನಿಗೆ ದೇವಸ್ಥಾನ ನಿರ್ಮಿಸುವಾಗ ಬೆಟ್ಟದ ಬಂಡೆಯೊಂದನ್ನು ಜನ ಕಡಿದಾಗ ರಕ್ತ ಒಸರಿತ್ತಂತೆ. ನಂತರ ಶ್ರೀಧರರಲ್ಲಿಗೆ ವಿಷಯ ಬಂದಾಗ ಅದನ್ನು ಕಡಿಯದಂತೆ ತಡೆದರೆಂದು ಜನ ಹೇಳುತ್ತಾರೆ]

ತತ್ತಿಯಾಕಾರದ ತಾರಕೇಶ್ವರ ಲಿಂಗ ಎಲ್ಲೋ ಸ್ವಲ್ಪಮಾತ್ರ ತಳನೆಟ್ಟ ಸ್ಥಿತಿಯಲ್ಲಿರಬೇಕೆಂದುಕೊಂಡು, ಲಿಂಗವನ್ನು ಬೇರೆಡೆಗೆ ಎತ್ತಿಟ್ಟುಕೊಳ್ಳುವುದಕ್ಕಾಗಿ ಅಲ್ಲಿಯೂ ಅಗೆದರಂತೆ. ಎಂಟು ಅಡಿಗಳಾಳದವರೆಗೆ ಹೋದರೂ ಲಿಂಗದ ಬುಡ ಕಾಣಲಿಲ್ಲ! ಆ ರಾತ್ರಿ ಕೆಲಸದ ಉಸ್ತುವಾರಿಯ ಎಂಜಿನೀಯರ್ ಗೆ ಕನಸಿನಲ್ಲಿ ದರ್ಶನಕೊಟ್ಟ ಸಿದ್ಧಿ ಪುರುಷರು ಲಿಂಗ ಬಹಳ ಆಳಕ್ಕೆ ಇದೆಯೆಂತಲೂ, ದೊಡ್ಡಗುಡಿಯನ್ನು ಕಟ್ಟುವ ಸಾಹಸ ಬೇಡವೆಂತಲೂ ಹೇಳಿದರಂತೆ. ನಂತರ ಜನರೆಲ್ಲ ಅಲ್ಲಿದ್ದ ಗುಡಿಯನ್ನೇ ದುರಸ್ತಿಗೊಳಿಸಿದರಂತೆ. ಕನಸಿನಲ್ಲಿ ಎಂಜಿನೀಯರ್ ಗೆ ಕಂಡ ಸಿದ್ಧಿಪುರುಷರ ರೂಪವೂ ಮತ್ತು ಸ್ವಾಮಿರಾಮರನ್ನು ಎತ್ತಿಹಿಡಿದು ನಡೆಸಿದ ವ್ಯಕ್ತಿಯ ರೂಪವೂ ಒಂದೇ ರೀತಿ ಇತ್ತೆಂಬುದು ಆಮೇಲೆ ತಿಳಿದುಬಂದ ವಿಷಯ.

2. ತರ್ಕವಿಶಾರದ ಮೂರ್ಖ ಸಾಧು- ಹಿಮಾಲಯದಲ್ಲಿ ಸಾಧು-ಸನ್ಯಾಸಿಗಳಿಗೆ ಕೊರತೆಯೇ? ಸಾಧುಗಳ ನಡುವೆಯೇ ಒಬ್ಬ ನಾಸ್ತಿಕವಾದಿ ’ಸಾಧು’ ವೇಷದವ ಸೇರಿಕೊಂಡಿದ್ದನಂತೆ. ದೇವರು ಮತ್ತು ಅತಿಮಾನುಷ ಶಕ್ತಿ-ಸಹಾಯಗಳ ಬಗ್ಗೆ ಅವನಿಗೆ ನಂಬಿಕೆಯಿರಲಿಲ್ಲ. ಹಿಮಾಲಯದೆಡೆಗೆ ತಪೋನಿರತರಾದ ಸನ್ಯಾಸಿಗಳೆಲ್ಲ ಕೇವಲ ಡಂಬಾಚಾರದವರೆಂದೂ, ಗೃಹಸ್ಥರಿಗೆ ಅವರು ಭಾರವೆಂದೂ, ದಂಡಪಿಂಡಗಳಾಗಿ ಕಾಲಹರಣಮಾಡುತ್ತಾರೆಂದೂ ಹಲವರಲ್ಲಿ ಹೇಳುತ್ತಿದ್ದನಂತೆ.

ಎಲ್ಲದಕ್ಕೂ ವೈಜ್ಞಾನಿಕ ತರ್ಕವನ್ನು ಮುಂದಿಡುತ್ತ ತರ್ಕದಲ್ಲಿ ತನ್ನನ್ನು ಯಾರೂ ಸೋಲಿಸಲು ಸಾಧ್ಯವಿಲ್ಲವೆಂದು ಬೀಗುತ್ತಿದ್ದನಂತೆ; ಒಂದೊಮ್ಮೆ ತರ್ಕದಲ್ಲಿ ತನ್ನನ್ನು ಯಾರಾದರೂ ಸೋಲಿಸಿದರೆ ಜೀವನಪೂರ್ತಿ ಅವರ ಶಿಷ್ಯನಾಗಿ ಬದುಕುವೆ ಎಂದು ಸವಾಲು ಹಾಕಿದ್ದನಂತೆ. ಎಳೆಯ ವಯಸ್ಸಿನಲ್ಲಿದ್ದ ಸ್ವಾಮಿ ರಾಮರಿಗೆ ಅವನನ್ನು ಪರೀಕ್ಷೆಗೆ ಒಡ್ಡುವ ಇಚ್ಛೆಯಾಯಿತು. ನೇರವಾಗಿ ಅದನ್ನು ಹೇಳದೇ, ಸ್ನೇಹದಿಂದಿರುತ್ತ, “ಏಸಿಗೆಯಲ್ಲಿ ಪರ್ವತಪರಿಕ್ರಮ ಬಹಳ ಚೆನ್ನಾಗಿರುವುದರಿಂದ ಹೋಗಿಬರೋಣವೇ”ಎಂದು ಕೇಳಿದರಂತೆ.

ತಾರ್ಕಿಕ ಒಪ್ಪಿಕೊಂಡ ಮೇರೆಗೆ ಪ್ರಯಾಣ ಆರಂಭವಾಯಿತು. ಪರ್ವತ ಏರುತ್ತ ಏರುತ್ತ ಮೇಲೆ ಸಾಗುತಿದ್ದಂತೆ ಮೈಕೊರೆಯುವ ಚಳಿ. ಸಾಧುಗಳಲ್ಲಿ ಲಂಗೋಟಿ, ಕಮಂಡಲ ನೀರು, ಹೆಚ್ಚೆಂದರೆ ಮೇಲೊಂದು ಶಾಲು, ವಾಸ್ತವ್ಯಕ್ಕೆ ಸಣ್ಣ ಟೆಂಟು ಇದಿಷ್ಟೇ ಇರೋದು. ಗೊತ್ತುಗುರಿಯಿಲ್ಲದ ಅಲೆದಾಟ, ಆಹಾರ ಸಿಕ್ಕರೆ ಉಂಟು-ಸಿಗದಿದ್ದರೆ ಇಲ್ಲ.

ತರ್ಕವಿಶಾರದರು ಸ್ವಾಮಿ ರಾಮರ ಜೊತೆಗೂಡಿ ಪರ್ವತವೇರುತ್ತಿದ್ದರು. ಚಳಿಯಲ್ಲಿ ಕಾಲುಗಳೆಲ್ಲ ಕೋಡಿಹೋಗುತ್ತಿದ್ದರೂ ತನಗೆ ಚಳಿಯ ಅನುಭವವೇ ಇಲ್ಲದ ಮಹಾಯೋಗಿಯಂತೆ ಮುನ್ನಡೆಯುತ್ತಿದ್ದರು. ಹಿಮಪಾತ ಆಗಲಿಕ್ಕೆ ಶುರುವಿಟ್ಟಿತಂತೆ. ಹಿಮಾಲಯದಲ್ಲಿ ಹಿಮ ಬೀಳೋದು ಎಷ್ಟುಹೊತ್ತು ಅಂತ ಹೇಳಲಿಕ್ಕಾಗದು. ಹಿಮ ಬೀಳುವಿಕೆ ಹೆಚ್ಚಿ ದಾರಿಯೇ ಕಾಣಿಸದಾದಾಗ ಒಂದೆಡೆಗೆ ಟೆಂಟು ಹಾಕಿ ಇಬ್ಬರೂ ಅದರೊಳಗೆ ಕುಳಿತರು. ನಾಲ್ಕಡಿ ಅಗಲ ಮತ್ತು ಐದಡಿ ಉದ್ದದ ಟೆಂಟು.

ಟೆಂಟಿನ ಸುತ್ತ ನಾಲ್ಕಡಿ ಎತ್ತರಕ್ಕೆ ಹಿಮ ಬಿದ್ದು, ವಾಯು ಸಂಚಾರ ಕ್ಷೀಣವಾಗತೊಡಗಿದಾಗ ಸ್ವಾಮಿರಾಮರು ಹಿಮದೊಳಗೆ ಬಿಲ ಕೊರೆದು ಗಾಳಿ ಓಡಾಡಲು ವ್ಯವಸ್ಥೆ ಮಾಡುತ್ತಿದ್ದರಂತೆ. “ಇದೇ ರೀತಿ ಹಿಮ ಬೀಳುತ್ತಿದ್ದರೆ, ಇನ್ನೇನು ನಾವು ಹಿಮದೊಳಗೆ ಹೂತು ಸತ್ತುಹೋಗುತ್ತೇವೆ” ಎಂದ ಸ್ವಾಮಿರಾಮ,”ನಿಮ್ಮ ತರ್ಕದ ಪ್ರಕಾರ ಹಿಮ ಬೀಳೋದು ನಿಲ್ಲಬಹುದೇ?” ಎಂದು ಕೇಳಿದರಂತೆ. ತರ್ಕವಿಶಾರದರಿಗೆ ಆಗಲೇ ಪುಕ್ಕು ಹತ್ತಿತ್ತು.

ಯಾವುದೇ ಉತ್ತರ ಬಾರದಾಗ ತರ್ಕದ ಸಾಧುವಿನಲ್ಲಿ ಸ್ವಾಮಿರಾಮ ಹೇಳಿದರಂತೆ, “ನಾನು ದೇವರಲ್ಲಿ ನಂಬಿಕೆಯುಳ್ಳವ. ಈಗ ಪ್ರಾರ್ಥಿಸುತ್ತೇನೆ. ಇನ್ನೈದು ನಿಮಿಷದಲ್ಲಿ ಹಿಮಪಾತ ನಿಲ್ಲುತ್ತದೆ. ನಮಗೆ ದೇವರು ರಕ್ಷಣೆ ನೀಡುತ್ತಾನೆ. ಆದರೆ ನಿಮಗೆ ದೇವರಲ್ಲಿ ನಂಬಿಕೆಯಿಲ್ಲ. ಸನ್ಯಾಸಿಗಳನ್ನೆಲ್ಲ ಆಡಿಕೊಳ್ತೀರಿ. ಈಗ ಹೇಳಿ ನೀವು ಏನು ಮಾಡ್ತೀರಿ?”

“ಹೇಗಾದರೂ ಮಾಡಿ ನಾವು ಈ ಅಪಾಯದಿಂದ ಪಾರಾಗಬೇಕು. ನಾನು ನಿಮ್ಮ ಗುರುಗಳನ್ನು ಆಡಿಕೊಂಡಿದ್ದರ ಫಲವೇ ಇರಬೇಕು-ಹೀಗಾಗಿದೆ. ಈಗ ನಾನೂ ಸಹ ಕಾಣದ ದೇವರಲ್ಲಿ ಪ್ರಾರ್ಥಿಸುತ್ತೇನೆ” ಎನ್ನುತ್ತ ಕಣ್ಣಲ್ಲಿ ನೀರುತುಂಬಿಕೊಂಡು ಪ್ರಾರ್ಥಿಸತೊಡಗಿದರಂತೆ. ಸಾವು ಸನಿಹ ಸರಿದುಹೋಗಿದ್ದರೂ ಸ್ವಾಮಿರಾಮರಿಗೆ ತಾರ್ಕಿಕನ ಪುಕ್ಕಲುತನ ಮತ್ತು ಗರ್ವಭಂಗವಾಗಿದ್ದು ಕಂಡಿತು. ದೇವರು ಪರಿಪರಿಯ ಪ್ರಾರ್ಥನೆ ಆಲಿಸಿದನೋ ಎಂಬಂತೆ ಐದಾರು ನಿಮಿಷಗಳಲ್ಲಿ ಹಿಮಪಾತ ನಿಂತುಬಿಟ್ಟಿತು!! ಅಲ್ಲಿಂದಾಚೆಗೆ ತಾರ್ಕಿಕರು ದೇವರಿಲ್ಲ ಎಂಬುದನ್ನು ಬಿಟ್ಟರಂತೆ; ನೈಜ ಸನ್ಯಾಸಿಗಳನ್ನು ಟೀಕಿಸುವುದನ್ನು ನಿಲ್ಲಿಸಿ ಸಾಧನೆಗೆ ತೊಡಗಿಕೊಂಡರಂತೆ.

ಆಗ ಸ್ವಾಮಿ ರಾಮ ಬರೆಯುತ್ತಾರೆ-After we have gone through intellectual gymnastics, we find something beyond the intellect. A stage
comes when intellect cannot guide us, and only intuition can show us the way. Intellect examines,
calculates, decides, accepts, and rejects all that is happening within the spheres of mind, but intuition is an
uninterrupted flow which dawns spontaneously from its source, down deep within. It dawns only when the
mind attains a state of tranquility, equilibrium, and equanimity. That pure intuition expands the human
consciousness in a way that one starts seeing things clearly. Life as a whole is comprehended, and ignorance
is dispelled. After a series of experiences, direct experience becomes a guide and one starts receiving
intuition spontaneously.

Suddenly a thought flashed into my mind, and then I remembered the saying of a great sage called
Tulsidasa: “Without being God-fearing, love for God is not possible, and without love for God, realization
is impossible.” The fear of God makes one aware of God-consciousness, and fear of the world creates fear
and thus danger. This atheistic swami became God-fearing when he experienced God-consciousness.
Intellectual gymnastics is a mere exercise which creates fears, but love of God liberates one from all fears.

ಗಂಜಿಪಡಿಯ ತರ್ಕವಿಶಾರದರನೇಕರು ವಿವೇಕಾನಂದರಂಥವರನ್ನೂ ಆಡಿಕೊಂಡಿದ್ದಾರೆ. ವೇದಾಚರಣೆಗಳನ್ನು ನಡೆಸುವ ವರ್ಗವನ್ನಂತೂ ಇನ್ನಿಲ್ಲದಂತೆ ಆಡಿಕೊಂಡಿದ್ದಾರೆ. ಅವರೆಲ್ಲರ ಲೆಕ್ಕದಲ್ಲೂ ಸಹ ಹೋಮ-ನೇಮ, ಪೂಜೆ ಪುನಸ್ಕಾರಗಳೆಲ್ಲ ’ದಂಡಪಿಂಡಗಳು’, ’ಮೈಗಳ್ಳರು’ ತಮ್ಮ ಹೊಟ್ಟೆಹೊರೆದುಕೊಳ್ಳೋದಕ್ಕೆ ನಡೆಸುವ ಬ್ಯುಸಿನೆಸ್ಸು. ಹಾಗಂದುಕೊಳ್ಳುವ ಗಂಜಿಪಡಿಯವರಿಗೆಲ್ಲ ಇಂಥದ್ದೊಂದು ಅನುಭವ ಆಗಿದ್ದರೆ ಅವರ ಅಂಧಕಾರ ಕಳೆಯುತ್ತಿತ್ತೇನೋ.

ಅದೆಲ್ಲಕ್ಕಿಂತ ಮೇಲಾಗಿ ಹಿಮಾಲಯಕ್ಕೆ ಹೋಗುತ್ತೇನೆಂದು ಬೊಗಳೆಬಿಟ್ಟಿದ್ದ ಶೋಭರಾಜಾಚಾರ್ಯರಿಗೆ ಇಂಥದ್ದೊಂದು ಅನುಭವ ಆಗಬೇಕಿತ್ತು; ಹಿಮಾಲಯದ ಟೆಂಟಿನಲ್ಲೇ ’ಏಕಾಂತ’ ಮಾಡುತ್ತಿದ್ದರೋ ಏನೋ ಪಾಪ! 🙂 🙂

3. ಜ್ಯೋತಿಷ್ಯಕ್ಕೂ ಮೀರಿದ ವಿಷಯಗಳಿವೆ-ಸ್ವಾಮಿರಾಮ ಏಳು ವಯಸ್ಸಿನಲ್ಲಿದ್ದಾಗ ಕೆಲವು ಜ್ಯೋತಿಷಿಗಳು ಅವರ ಆಯುಷ್ಯವನ್ನು ಅಳೆದರಂತೆ. ಅವರೆಲ್ಲರ ಒಕ್ಕೊರಲಿನ ಅಭಿಪ್ರಾಯ 28ನೇ ವಯಸ್ಸಿನಲ್ಲಿ ಸ್ವಾಮಿರಾಮ ಸಾಯುತ್ತಾರೆ ಅಂತಾಯ್ತು. ಕೇಳಿಸಿಕೊಂಡ ಸ್ವಾಮಿ ರಾಮ ಗುರುವಿನಲ್ಲಿ ಅದನ್ನು ಹೇಳಿದರು. ತಕ್ಷಣ ಅಲ್ಲಿಗೆ ಬಂದ ಗುರುಗಳು “ನೀನು 28ರಲ್ಲಿ ಸಾಯುವುದಿಲ್ಲ. ಆದರೆ ನಿನಗೆ ಇಪ್ಪತ್ತೆಂಟು ತುಂಬುವುದರೊಳಗೆ ಈ ಜ್ಯೋತಿಷ್ಕರೆಲ್ಲ ತೀರಿ ಹೋಗುತ್ತಾರೆ ಎಂದರಂತೆ.

ಹಿಮಾಲಯದ ಗುಹೆಯಲ್ಲಿ ಗುರುವಿನೊಂದಿಗಿರುತ್ತಿದ್ದಾಗ 28 ತುಂಬಿತು. [ಅಷ್ಟರಲ್ಲೆ ಆ ಜ್ಯೋತಿಷ್ಕರೆಲ್ಲ ತೀರಿಕೊಂಡಿದ್ದರಂತೆ.] ಹಿಮಾಲಯದ 20,000ಅಡಿಗಳ ಎತ್ತರದಲ್ಲಿ ದೇವಿಯ ಗುಡಿಯೊಂದಿದ್ದು, ಅದಕ್ಕೆ ಪೂಜೆ ಸಲ್ಲಿಸಿಬರುವಂತೆ ಗುರುಗಳು ಹೇಳಿದ್ದರಿಂದ ಸ್ವಾಮಿರಾಮ ಏಕಾಂಗಿಯಾಗಿ ಅಲ್ಲಿಗೆ ಹೊರಟರು. 19,000ಅಡಿಯ ಎತ್ತರದ ಕಡಿದಾದ ಪರ್ವತ ಪ್ರದೇಶದಲ್ಲೊಂದು ಕಡೆ ಕಾಲು ಜಾರಿತು.

ಉರುಳುತ್ತ 500ಅಡಿ ಕೆಳಗೆ ಬಂದು ಮುಳ್ಳಿನ ಪೊದೆಯೊಂದಕ್ಕೆ ಸಿಲುಕಿಕೊಂಡರು. ಮುಳ್ಳುಕಂಟಿಯ ಕಾಂಡವೊಂದು ಹೊಟ್ಟೆಯನ್ನು ಬಗೆದು ಒಳಹೊಕ್ಕಿದ್ದರಿಂದ ಹಾಗೆ ನಿಂತಿದ್ದರು. ತಲೆಕೆಳಗಾಗಿ ನೇತುಬಿದ್ದಿದ್ದ ಅವರ ದೇಹದ ಭಾರಕ್ಕೆ ಪೊದೆಯೇ ಕಿತ್ತುಬರುವಂತೆ ಅಲ್ಲಾಡುತ್ತಿತ್ತು. ಕೆಳಗೆ ನೋಡಿದರು-ಆಳ ಪ್ರಪಾತದಲ್ಲಿ ಗಂಗೆ ಹರಿಯುತ್ತಿದ್ದಾಳೆ. ಮೇಲೆ ನೋಡಿದರು ಎತ್ತರದ ಪರ್ವತವಷ್ಟೇ ಕಾಣುತ್ತಿದೆ. ಅಲ್ಲೆಲ್ಲೂ ಯಾರೂ ಇರಲಿಲ್ಲ, ಇನ್ನಾವ ಆಧಾರವೂ ಇರಲಿಲ್ಲ.

20ನಿಮಿಷ ಹಾಗೆ ನೇತಾಡುತ್ತಿದ್ದರು. ಹೊಟ್ಟೆಯಿಂದ ರಕ್ತ ಹರಿದು ಶರೀರ ನಿತ್ರಾಣವಾಗಿತ್ತು. ಮಾತನಾಡುವ ಶಕ್ತಿ ಇರಲಿಲ್ಲ. ಸತ್ತುಹೋಗುತ್ತೇನೆ ಎಂದುಕೊಂಡರು. ಸಾಯುವುದು ದೇಹವಷ್ಟೆ; ಹುಟ್ಟು-ಸಾವಿಲ್ಲದ ಆತ್ಮಕ್ಕದೆಲ್ಲಿಯ ಸಾವು? ದೇಹ ಇದ್ದರೆಷ್ಟು ಬಿಟ್ಟರೆಷ್ಟು ಎಂದುಕೊಂಡರು. ಸಾಧನೆ ಮಾಡದೆ ಜನ್ಮಮುಗಿಸಿದ ಹಾಗಾಗುತ್ತದಲ್ಲ ಅಂತ ಯೋಚಿಸಿದರು. ಹಿಂದೊಮ್ಮೆ ಗುರುಗಳು ಹೇಳಿದ್ದು ನೆನಪಾಯ್ತು. “ಹೀಗೆ ಹೇಳುತ್ತೇನೆಂತ ಯಾವಾಗಲೂ ಇದನ್ನೇ ಬಳಸಬೇಡ. ನಿನಗೆ ಅಂತಹ ಆಪತ್ತು ಬಂದಾಗ ನನ್ನನ್ನು ನೆನೆಸಿಕೋ, ಎಲ್ಲಿದ್ದರೂ ನಾನು ಅಲ್ಲಿಗೆ ಬಂದು ನಿನ್ನನ್ನು ಪಾರುಮಾಡ್ತೇನೆ.”

ಗುರುಗಳನ್ನು ಸ್ವೀಕರಿಸಿದ ಮೇಲೆ ಪರೀಕ್ಷಿಸಬಾರದು ಎಂದು ಯಾವುದೋ ಢೋಂಗಿ ಸನ್ಯಾಸಿ ಹೇಳಿದ್ದು ನೆನಪಾಗುತ್ತಿದೆ. ಹಣ್ಣುಗಳು ಚೆನ್ನಾಗಿವೆಯೆಂದು ಮನೆಗೆ ತಂದ ಒಂದೆರಡು ದಿನಗಳಲ್ಲಿ ಕೆಲವು ಹಣ್ಣುಗಳೊಳಗೆ ಹುಳುಗಳು ಕಾಣಿಸಬಹುದು. ಕೆಲವು ಹಣ್ಣುಗಳು ಭಾಗಶಃ ಕೊಳೆತಿರಬಹುದು, ಇನ್ನೂ ಕೆಲವು ಪೂರ್ತಿ ಕೆಟ್ಟುಹೋಗಿರಬಹುದು. ದುಬಾರಿ ಹಣತೆತ್ತು ತಂದುಕೊಂಡಿದ್ದರೂ ಸಹ, ಕೆಟ್ಟಿರುವ/ಹುಳಬಿದ್ದಿರುವ ಹಣ್ಣುಗಳನ್ನು ತಿನ್ನಲು ಸಾಧ್ಯವೇ? ಎಷ್ಟೇ ವೆಚ್ಚಮಾಡಿ ಪಟ್ಟಾಧಿಕಾರ ಕೊಟ್ಟಿದ್ದರೂ ಪೀಠಕ್ಕೆ ಬಂದವ ಕಳ್ಳಸ್ವಾಮಿಯೆಂದು ಗೊತ್ತಾದಮೇಲೂ ಸಹ ಸುಮ್ಮನಿರುವುದು ನಮ್ಮ ಅಶಕ್ತತೆ ಮತ್ತು ಅಂಧಕಾರವನ್ನು ತೋರುತ್ತದೆ.

ಅಜ್ಜನ ಅಜ್ಜ ವೇದ-ಶಾಸ್ತ್ರಗಳನ್ನೆಲ್ಲ ಅರಿತಿದ್ದ, ಮೆಕಾಲೆಯ ಪ್ರಭಾವದಿಂದಿದ್ದ ಭಾರತದಲ್ಲಿ ಅಜ್ಜ ಸ್ವಲ್ಪ ಕಡಿಮೆ ಓದಿದ, ಅಪ್ಪ ಓದಲಿಲ್ಲ, ತೋಟದಲ್ಲಿ ಕೃಷಿ ನಡೆಸಿದ. ನಾವು ಮಕ್ಕಳಂತೂ ಇನ್ಪೋಸಿಸ್ಸು ವಿಪ್ರೋ. ಹೀಗಾಗಿ ನಮಗೆ ವೇದ-ಶಾಸ್ತ್ರಗಳ ಅರಿವಿಲ್ಲ. ಯಾರೋ ಓದಿಕೊಂಡು ಹೇಳಿದ್ದನ್ನೇ ನಂಬಬೇಕು. ಅವರು ಹೇಳಿದ್ದೇ ವೇದ; ಅದೇ ಶಾಸ್ತ್ರ. ಇಂತಹ ಸಮಾಜದಲ್ಲಿ ಕಳ್ಳ-ಕಾಮುಕನೊಬ್ಬ ಪೀಠಾಧಿಪತಿಯಾಗಿಬಿಡ್ತಾನೆ. ಅವನ ಕುಳ್ಳ ಬಾವ ವಿದ್ವಾನ್ ಎನಿಸಿ ಅದೇ ಮಠದ ದಿವಾನಗಿರಿಗೆ ಏರಿಬಿಡ್ತಾನೆ; ಹಾಳೂರಿಗೆ ಸೂಳೆಯೇ ಮುತ್ತೈದೆ ಎಂಬ ಗಾದೆಯ ಹಾಗೆ. ಇಬ್ಬರೂ ಸೇರಿ ಮಠದ ಸಂಪತ್ತನ್ನು ಕೊಳ್ಳೆಹೊಡೆಯುತ್ತಾರೆ. ತಮ್ಮ ರಾಣಿಯರಿಗೆ ಮನೆಮಾರುಗಳನ್ನು ನಿರ್ಮಿಸಿಕೊಡುತ್ತಾರೆ. ಹಸುವಿನ ಕಿವಿಯೂರಿನಲ್ಲಿ ಶೋಕವಿಲ್ಲದ ಪ್ರದೇಶದಲ್ಲಿ ಮನೆಗಳು ನಿರ್ಮಾಣವಾಗಿದ್ದು ಹಾಗೆ. ನಮ್ಮೂರ ಪಕ್ಕದೂರಲ್ಲಿ ಏನೂ ಇಲ್ಲದ ಜುಗಾರಿ ಮಿತ್ರಮಂಡಳಿಯ ಸ್ತ್ರೀನಿವಾಸನ ಕುಟುಂಬಕ್ಕೆ ಹೊಸ ಬಂಗಲೆ ಎದ್ದಿದ್ದು ಹಾಗೆ.

ಮೂಲಕಥೆಗೆ ಮರಳೋಣ, ಸ್ವಾಮಿರಾಮ ತಮ್ಮ ಗುರುವನ್ನು ಪರೀಕ್ಷಿಸಿದರು. ದೇಹಬಿಡುವಂತಹ ಆಪತ್ತು ಬಂದಿದೆ ಎಂದು ಗುರುವನ್ನು ಜ್ಞಾಪಿಸಿಕೊಂಡರು. ಅರೆಕ್ಷಣದಲ್ಲಿ ಒಂದಷ್ಟು ಹೆಂಗಸರು ಅವರು ನೇತಾಡುತ್ತಿದ್ದ ಪರ್ವತದ ಮೇಲ್ಭಾಗದಲ್ಲಿ ಕಾಣಿಸಿಕೊಂಡರಂತೆ. ತಮ್ಮ ಜಾನುವಾರುಗಳಿಗೆ ಹುಲ್ಲುಕೊಯ್ದುಕೊಂಡು ಹೋಗಲು ಬಂದವರವರು. ಅವರಲ್ಲಿ ಒಬ್ಬಳು ಇನ್ನೊಬ್ಬಳಿಗೆ ಹೇಳಿದಳಂತೆ “ಅಕ್ಕ ನೋಡಲ್ಲಿ, ಮೃತ ಶರೀರ.” ಸ್ವಾಮಿ ರಾಮರಿಗೆ ಅವರ ಮಾತುಗಳು ಕೇಳಿಸಿದವು. ಮಾತನಾಡಲು ಆಗುತ್ತಿರಲಿಲ್ಲ. ಸತ್ತಿಲ್ಲ, ಶವವಲ್ಲ, ಇನ್ನೂ ಜೀವವಿದೆ, ಸಹಾಯಮಾಡಿ ಎನ್ನುವ ಸಲುವಾಗಿ ಕಾಲುಗಳನ್ನು ಅಲ್ಲಾಡಿಸಿದರಂತೆ.

ಗುಂಪಿನಲ್ಲಿದ್ದ ಒಂದಿಬ್ಬರು ಸಾಹಸಿ ಮಹಿಳೆಯರು ತಮ್ಮಲ್ಲಿದ್ದ ಹಗ್ಗವನ್ನು ತಂದು ಸ್ವಾಮಿರಾಮರ ಸೊಂಟಕ್ಕೆ ಸುತ್ತಿ ಮೇಲಕ್ಕೆ ಎಳೆದರಂತೆ. ಅಷ್ಟು ದೂರದಲ್ಲಿರುವ ಹಳ್ಳಿಯ ಕಡೆಗೆ ಕೈ ತೋರಿಸಿ ಅಲ್ಲಿಗೆ ಕರೆದುಕೊಂಡು ಹೋಗಬೇಕಾ? ಎಂದು ಕೇಳಿದರಂತೆ. ಸನ್ಯಾಸಿಯಾಗಿರುವ ತಾನು ಹೆಚ್ಚಿನ ಸಹಾಯ ಪಡೆಯಬಾರದೆಂಬ ಭಾವನೆ ಮತ್ತು ಹೇಗೋ ತಾನೇ ನಡೆದುಹೋಗಬಲ್ಲೆನೆಂಬ ಭಾವನೆ ಸ್ವಾಮಿ ರಾಮರಲ್ಲಿ. ಸಹಾಯ ಬೇಡವೆಂದರು. ಎದ್ದು ನಿಂತು ಹೆಜ್ಜೆ ಹಾಕಿದರು. ಒಂದಷ್ಟು ದೂರ ಹೋಗುವಷ್ಟರಲ್ಲಿ ಮತ್ತೆ ಜಾರಿದರು. ಅವರಲ್ಲಿನ ಚೈತನ್ಯ ಅವರು ಸಾವರಿಸಿಕೊಂಡು ಮುನ್ನಡೆಯಲು ಸಹಾಯಮಾಡಿತು.

ಅಷ್ಟೇ ಅಲ್ಲ, ಆಗ ಸಾಕ್ಷಾತ್ ಅವರ ಗುರುವೇ ಅಲ್ಲಿ ಪ್ರತ್ಯಕ್ಷರಾಗಿ ಕೈಹಿಡಿದೆತ್ತಿ ನಡೆಸಿದ್ದೂ ಅಲ್ಲದೆ ಹತ್ತಿರದ ಯಾವುದೋ ಸಾಧುಗಳ ಗುಹೆಯಲ್ಲಿ ಬಿಟ್ಟು, ಕೆಲವು ಎಲೆಗಳನ್ನು ತರಿಸಿ ಅದರ ರಸವನ್ನು ಹೊಟ್ಟೆಯ ಗಾಯಕ್ಕೆ ಹಾಕಿದರಂತೆ. ಗಾಯ ಮಾಯಲು ವಾರಗಳ ಕಾಲ ಬೇಕಾಯಿತು. ಸ್ವಾಮಿರಾಮ ದೇವ ಬಿಡುವವರೆಗೂ ಹೊಟ್ಟೆಯಮೇಲೆ ಗಾಯದ ಗುರುತು ಹಾಗೇ ಇತ್ತೆಂದು ಹೇಳಿದ್ದಾರೆ.

ಸನ್ಯಾಸಿಗಳಿಗೆ ನಿಜವಾದ ಪರೀಕ್ಷೆ ಎಂದರೆ ಇಂತಹ ಸಂದಿಗ್ದದ್ದು. ಮಿಕ್ಕಿದ ವೀರ್ಯ ಪರೀಕ್ಷೆ ಮತ್ತೆಂತದೋ ಪರೀಕ್ಷೆಗಳ ಹೆಸರೂ ಸಹ ಹತ್ತಿರ ಸುಳಿಯಬಾರದು. ಅಂತಹ ಸನ್ನಿವೇಶವನ್ನು ತಂದುಕೊಂಡಿದ್ದಾನೆ ಅಂದರೆ ಸನ್ಯಾಸಿ ಕಳ್ಳನೆಂಬುದರಲ್ಲಿ ಎರಡು ಮಾತಿಲ್ಲ. ಯಾಕೆಂದರೆ ಸನ್ಯಾಸಿಗೆ ಅಂತಹ ಪರೀಕ್ಷೆಯನ್ನೊಡ್ಡುವ ಮನಸ್ಸು ಸಾಮಾನ್ಯವಾಗಿ ಯಾರಿಗೂ ಬರುವುದಿಲ್ಲ; ಬೆಂಕಿ ಇಲ್ಲದೆ ಹೊಗೆ ಏಳುವುದು ಸಾಧ್ಯವೇ ಇಲ್ಲ.

೪. ಆಘೋರಿಯ ದರ್ಶನ-ಸಾಧುವಾಗಿದ್ದಾಗ ಹಿಮಾಲಯದಲ್ಲಿ ಬಹಳ ಅಲೆದಾಡುತ್ತ ನೂರಾರು ಸಾಧು-ಸಂತರ ದರ್ಶನಮಾಡುತ್ತಿದ್ದ ಸ್ವಾಮಿರಾಮರು ಒಮ್ಮೆ ಒಬ್ಬ ಪಂಡಿತರ ಬಳಿಗೆ ತೆರಳಿದರು. ಆ ಪಂಡಿತರು ಅವರ ಗುರುವಿಗೆ ಶಿಷ್ಯರಾಗಿದ್ದರು. ಪಂಡಿತರ ಹಳ್ಳಿಯಿಂದ ಒಂದಷ್ಟು ದೂರದಲ್ಲಿ ಅಘೋರಿಯೊಬ್ಬ ಗುಹೆಯೊಂದರಲ್ಲಿ ವಾಸವಿರುವ ಸುದ್ದಿ ಸ್ವಾಮಿರಾಮರಿಗೆ ತಲುಪಿತ್ತು. ಅಘೋರಿಗಳ ಬಗೆಗೆ ತಿಳಿದುಕೊಳ್ಳುವ ಕುತೂಹಲವೂ ಹೆಚ್ಚಿತ್ತು. ಪಂಡಿತರಲ್ಲಿ ವಿಷಯ ಪ್ರಸ್ತಾಪಿಸಿದಾಗ, ಅವನು ಕೊಳಕನೆಂದೂ, ಹಳ್ಳಿಗರು ಹತ್ತಿರಹೋದರೆ ಕಪ್ಪೆಗಳನ್ನೆಸೆಯುತ್ತ ಅಬ್ಬರಿಸಿ ಸಾಗಹಾಕುತ್ತಾನೆಂದೂ, ಹೋಗುವುದು ಬೇಡವೆಂದೂ ಸಲಹೆ ನೀಡಿದರು. ಸ್ವಾಮಿರಾಮರು ಅವರ ಸಲಹೆಯನ್ನು ತಳ್ಳಿಹಾಕಿ ತೋರಿಸಿರೆಂದು ಹಠಹಿಡಿದರು.

ಇಬ್ಬರೂ ಅಘೋರಿಯಿರುವ ಗುಹೆಯತ್ತ ನಡೆದರು. ಸಾಯಂಕಾಲ ಸಮೀಪಿಸುತ್ತಿತ್ತು. ಗುಹೆಗೆ ಸುಮಾರು ದೂರದಲ್ಲಿ ಗಂಗಾನದಿ ಹರಿಯುತ್ತಿತ್ತು. ಎರಡರ ನಡುವಿರುವ ಬಂಡೆಯೊಂದರಮೇಲೆ ಅಘೋರಿ ಕುಳಿತಿದ್ದ. ಬೆಳೆದ ಗಡ್ಡ-ತಲೆಗೂದಲು, ಲಂಗೋಟಿ ಧರಿಸಿದ್ದ. ಹತ್ತಿರ ಹೋದಾಗ ಮಾತನಾಡಿಸಿದ. ಗುಹೆಯೊಳಗೆ ಒಂದಷ್ಟು ಗೋಣಿಯ ತುಂಡುಗಳನ್ನು ಬಿಟ್ಟರೆ ಯಾವ ಆಹಾರಪದಾರ್ಥಗಳಾಗಲೀ ವಿಶೇಷ ಸಲಕರಣೆಗಳಾಗಲೀ ಇರಲಿಲ್ಲ. ಹರಿಯುವ ನದಿಯಿಂದ ಮಡಕೆಯಲ್ಲಿ ನೀರು ತರುವಂತೆ ಪಂಡಿತನಿಗೆ ಅಘೋರಿ ಸಾಧು ಆಜ್ಞಾಪಿಸಿದ.

ಪಂಡಿತ ಮಡಕೆಯನ್ನೊಯ್ದು ನೀರು ತುಂಬಿಸಿ ತಂದುಕೊಟ್ಟಾಗ, “ಗಂಗಾನದಿಯಲ್ಲಿ ಶವವೊಂದು ತೇಲುತ್ತಿದೆ, ಅದನ್ನು ದಡಕ್ಕೆಳೆದು, ತೊಡೆ ಸೀಳಿ, ಅದರಲ್ಲಿರುವ ಮಾಂಸಖಂಡಗಳನ್ನೆಲ್ಲ ಕತ್ತರಿಸಿ ಮಡಕೆಯಲ್ಲಿ ತುಂಬಿಸಿಕೊಂಡು ಬಾ” ಎಂದು ಆಜ್ಞಾಪಿಸಿದ. ಪಂಡಿತ ತನ್ನಿಂದಾಗದೆಂದೂ ತಾನು ಅಸಹಾಯಕನೆಂದೂ ಹೇಳಿದ. “ತರುತ್ತೀಯೋ ನಿನ್ನನ್ನೇ ಕತ್ತರಿಸಿ ತಿನ್ನಲೋ?” ಎಂದು ಅಘೋರಿ ಆವಾಜು ಹಾಕಿದಾಗ ಜೀವವನ್ನು ಕೈಯಲ್ಲಿ ಹಿಡಿದು ಶವದ ಮಾಂಸವನ್ನು ತರಲು ಒಪ್ಪಿದನಂತೆ-ಆ ಪಂಡಿತ.

ಪಂಡಿತ ತಂದ ಶವದ ಮಾಂಸ ತುಂಬಿದ ಮಡಕೆಯನ್ನು ಕಲ್ಲಿನ ಒಲೆಯಮೇಲಿಟ್ಟು, ಬೆಂಕಿ ಉರಿಸಿ, ಮೇಲಿನಿಂದ ಅಗಲವಾದ ಕಲ್ಲೊಂದನ್ನು ಮುಚ್ಚಿದ ಅಘೋರಿ. “ಕ್ಷಮಿಸಿ, ನಾವಿನ್ನು ಹೊರಡುತ್ತೇವೆ” ಎಂದ ಪಂಡಿತನತ್ತ ತಿರುಗಿ, “ಸಾಧುಗಳನ್ನು ನೋಡು ಹಸಿದಿದ್ದಾರೆ, ನೀವು ಹಾಗೆ ಹೋಗುವ ಹಾಗಿಲ್ಲ. ಊಟಮಾಡಬೇಕು” ಎಂದಪ್ಪಣೆ ಮಾಡಿದ. ಉದ್ದದ ಕೆಲವು ಎಲೆಗಳನ್ನು ತರಲು ಅಘೋರಿ ಗುಹೆಯ ಒಳಗಡೆ ನಡೆದಾಗ, ಹೊರಗಡೆ ನಿಂತಿದ್ದ ಸ್ವಾಮಿರಾಮರಲ್ಲಿ ಪಂಡಿತ ಪಿಸುಗುಟ್ಟಿದ-“ನಾನು ಸಾರಿ ಹೇಳಿದೆ, ನೋಡಿ ಈಗ ಶವದ ಮಾಂಸವನ್ನು ತಿನ್ನಬೇಕಾಗಿದೆ. ಇಲ್ಲಿಯವರೆಗೆ ನಮ್ಮ ಕುಲದಲ್ಲಿ ಯಾರೂ ಇಂತಹ ನೀಚ ಕೆಲಸವನ್ನು ಮಾಡಲಿಲ್ಲ. ನಾನು ಬದುಕಿರುವುದೇ ಸಲ್ಲ” ಎನ್ನುತ್ತ ಆತ್ಮಹತ್ಯೆ ಮಾಡಿಕೊಳ್ಳಲು ತಯಾರಿ ನಡೆಸಿದ.

ಅಷ್ಟರಲ್ಲಿ ಮೂರು ಎಲೆಗಳನ್ನು ತಂದು ಹಾಸಿದ ಅಘೋರಿ ಮಡಕೆಯೊಳಗಿನ ಮಾಂಸವನ್ನು ಬಡಿಸುವಂತೆ ಆಜ್ಞೆ ಮಾಡಿದ! ಸ್ವಾಮಿರಾಮರೂ ಸಹ ಎಂತಹ ವಿಪತ್ತಿನಲ್ಲಿ ಸಿಕ್ಕಿಹಾಕಿಕೊಂಡೆವು ಅಂದುಕೊಡರು. ಅಂಜಿಕೆಯಿಂದ ಮಡಕೆಯೊಳಗೆ ಕೈಹಾಕಿ ಬಡಿಸಲು ಹೊರತೆಗೆದರೆ ಮಾಂಸದ ಬದಲಿಗೆ ಅದರಲ್ಲಿ ರುಚಿಕರ ರಸಗುಲ್ಲಾಗಳಿದ್ದವು! ಮೂವರೂ ತಿಂದು ಇನ್ನೂ ಸ್ವಲ್ಪ ಮುಕ್ಕುಳಿಯಿತು. ಅಂದೇ ಹಳ್ಳಿಗೆ ಮರಳಬೇಕೆಂಬ ಅಪೇಕ್ಷೆ ಮುಂದಿಟ್ಟ ಪಂಡಿತನಿಗೆ ಆಘೋರಿ ಹೇಳಿದ-“ನೋಡಯ್ಯ, ಹಿಂದುಗಡೆ ನೀವೆಲ್ಲ ನನ್ನನ್ನು ಕೊಳಕ, ಶವದ ಮಾಂಸ ತಿನ್ನುವವನು ಎಂದೆಲ್ಲ ಆಡಿಕೊಳ್ತೀರಿ ಅಂತ ಗೊತ್ತು. ಅದೆಲ್ಲ ಹಾಗಿರಲಿ, ನಾನು ಏನನ್ನು ತಿಂತೇನೆ ಅಂತ ನಿನಗೀಗ ಗೊತ್ತಾಗಿರಬೇಕಲ್ಲ? ಮಡಕೆಯಲ್ಲಿ ಉಳಿದದ್ದನ್ನು ನಿಮ್ಮ ಹಳ್ಳಿಗೆ ಕೊಂಡೊಯ್ದು ಜನರಿಗೆ ಕೊಡು” ಎಂದು ಆಜ್ಞೆಮಾಡಿದ.

ಆ ರಾತ್ರಿಯನ್ನು ಸ್ವಾಮಿರಾಮ ಅಘೋರಿಯ ಗುಹೆಯಲ್ಲಿಯೇ ಹರಟುತ್ತ ಕಳೆದರು. ಸ್ವಾಮಿರಾಮ ಕೇಳಿದ ಹಲವು ಪ್ರಶ್ನೆಗಳಿಗೆ ಅಘೋರಿ ತನ್ನ ಪಥಕ್ಕೆ ಸಂಬಂಧಿಸಿದಂತೆ ಉತ್ತರ ನೀಡಿದ. ಜನರು ಹತ್ತಿರ ಬಾರದಿರಲಿ ಎಂಬ ಕಾರಣಕ್ಕೆ ಕಪ್ಪೆಗಳನ್ನು ಎಸೆಯೋದಾಗಿ ಹೇಳಿದ. ಶವ ಎಂದರೆ ಯಾರಿಗೂ ಬೇಡದ ವ್ಯರ್ಥ ಪದಾರ್ಥವಾದ್ದರಿಂದ ಅದು ತಮ್ಮ ಆಹಾರವಾಗುತ್ತದೆ ಅಂದ. ಹಲವು ವಸ್ತುಗಳನ್ನು ತನ್ನ ತಂತ್ರಶಕ್ತಿಯಿಂದ ರೂಪಾಂತರಗೊಳಿಸಿದ. ಕಲ್ಲುಗುಂಡುಗಳನ್ನು ಸಕ್ಕರೆಯ ಉಂಡೆಗಳನ್ನಾಗಿ ಪರಿವರ್ತಿಸಿದ! ವಸ್ತುವಿನ ಸ್ವರೂಪ ಸ್ಥಿರವಲ್ಲ, ಅದು ಬದಲಾಗುತ್ತದೆ ಎಂದ. ವಸ್ತು ಯಾವುದೇ ರೂಪದಲ್ಲಿದ್ದರೂ ಎಲ್ಲದರಲ್ಲಿ ಅಡಗಿರುವ ಶಕ್ತಿ ಒಂದೇ ಎಂದ.

ಆಘೋರ ಪಥ ಸ್ವಾಮಿರಾಮರಿಗೆ ಹಿಡಿಸಲಿಲ್ಲ. ಅಥರ್ವವೇದದ ತಂತ್ರಭಾಗದಲ್ಲಿ ಅದು ಕಾಣಿಸಿಕೊಂಡರೂ ಆಚರಣೆಯಲ್ಲಿ ಅದು ಹಿತವಲ್ಲ ಎಂದು ಅವರು ಹೇಳಿದರು. ಯಾಕೆ ಆ ಮಾರ್ಗದಲ್ಲಿ ಸಾಧನೆ ಮಾಡಬೇಕೆಂದು ಕೇಳಿದರು. ತಂತ್ರ ಶಾಸ್ತ್ರ ನಶಿಸಿಹೋಗುತ್ತದೆ; ಅದರಿಂದ ಜನತೆಗೆ ಉಪಯೋಗವಾಗಬೇಕು; ಹಾಗಾಗಿ ಅಘೋರಿಗಳು ಅದನ್ನು ಬಳಕೆಯಲ್ಲಿಟ್ಟಿದ್ದಾರೆ ಎಂದು ಹೇಳಿದ. ಮಾರನೆಯ ಮಧ್ಯಾಹ್ನದ ವರೆಗೆ ಮಾತುಕತೆ ನಡೆಯಿತು. ಹೊರಟುನಿಂತ ಸ್ವಾಮಿರಾಮರಿಗೆ ಮತ್ತೆ ಬರುವಂತೆ ಕೇಳಿಕೊಂಡ. ಹಾಗೇ ಹೋಗಬಾರದೆಂದು ಇನ್ನಷ್ಟು ರಸಗುಲ್ಲಾಗಳನ್ನು ತಿನ್ನಲು ಕೊಟ್ಟ. ಮತ್ತೆ ಬರುವುದಾಗಿ ಹೇಳಿದರೂ ಮತ್ತೆಂದೂ ಅಘೋರಿಯೆಡೆಗೆ ಹೆಜ್ಜೆ ಹಾಕಲಿಲ್ಲ.

ತೊನೆಯಪ್ಪ ಸ್ವಾಮಿಗಳಿಗೀಗ ಅಘೋರಿಗಳು ನಾಗಾ ಸಾಧುಗಳು ಬೇಕಾಗಿದ್ದಾರೆ. ತಮ್ಮಲ್ಲಿರುವ ಅಥರ್ವವೇದದ ತಂತ್ರಭಾಗದಿಂದ ಚಮತ್ಕಾರ ನಡೆಸಿ ಕಚ್ಚೆಕೇಸುಗಳನ್ನು ಮುಚ್ಚಿಸಿಕೊಡುವ ತಂತ್ರಗಾರರು ಬೇಕಾಗಿದ್ದಾರೆ. ಶಂಕರಾದಿಯಾಗಿ ಶುದ್ಧ ಸನ್ಯಾಸಿಗಳು ತಂತ್ರವಿದ್ಯೆಯಲ್ಲಿ ಉಚ್ಚಿಷ್ಟ ದೇವತೆಗಳ ಉಪಾಸನೆಯನ್ನು ನಡೆಸುವ ಸಾಧುಗಳನ್ನು ಕೀಳುಸಾಧುಗಳೆಂದು ಹೇಳಿದ್ದಾರೆ. ತೊನೆಯಪ್ಪ ಶೋಭರಾಜಾಚಾರ್ಯರು ತಂತ್ರ, ಕುತಂತ್ರ, ಪ್ರತಿತಂತ್ರ, ಮಾಟ, ಮೋಡಿ, ದೃಷ್ಟಿ ಎಲ್ಲಾ ವಿದ್ಯೆಗಳನ್ನೂ ಬಳಸಿಕೊಂಡಿದ್ದನ್ನು ಗಮನಿಸಬೇಕು. ಈಗಲೂ ಅವನ ಅಪ್ಪ ಮಾಟಗಾರರ ಜೊತೆಯೇ ನಿತ್ಯ ಏನನ್ನೋ ನಡೆಸುತ್ತಿದ್ದಾನೆ; ಕಚ್ಚೆ ಕೇಸುಗಳಲ್ಲಿ ಮಗ ಬಚಾವಾಗಬೇಕಲ್ಲ? ಅದಕ್ಕೆ.

4. ಇಂದಿನ ಕಥಾಭಾಗದ ಕೊನೆಯ ಪ್ರಸಂಗವಾಗಿ ಮಡಿವಾಳನ ಕತೆಯನ್ನು ಹೇಳಬೇಕು. ಹಿಮಾಲಯದ ಒಂದೆಡೆಯಲ್ಲಿ ಸ್ವಾಮಿರಾಮ ಕೆಲವು ಕಾಲ ಇದ್ದಾಗ ಅವರ ಕೌದಿಗಳನ್ನು ಅಲ್ಲಿಯೇ ಹತ್ತಿರವಿದ್ದ ಮಡಿವಾಳನೊಬ್ಬ ಒಗೆದುಕೊಡುತ್ತಿದ್ದ. ಅವನಿಗೆ ಹೆಂಡತಿ-ಮಕ್ಕಳು ಯಾರೂ ಇರಲಿಲ್ಲ. ಇದ್ದದ್ದೊಂದು ಕತ್ತೆ. ಇದ್ದಕ್ಕಿದ್ದ ಹಾಗೆ ಒಂದು ದಿನ ಕತ್ತೆ ನಾಪತ್ತೆಯಾಯಿತು. ಮಡಿವಾಳ ಪ್ರೀತಿಯ ಕತ್ತೆಗಾಗಿ ಬಹಳ ಹುಡುಕಿದ, ಸಿಕ್ಕ ಸಿಕ್ಕಲ್ಲಿ ಅಲೆದ, ಕಂಡಕಂಡವರಲ್ಲಿ ಸೀತೆಯನ್ನು ಕಳೆದುಕೊಂಡ ರಾಮ ಕೇಳಿದಂತೆ ಕೇಳಿದ. ಕತ್ತೆ ಸಿಗಲೇ ಇಲ್ಲ.

ಕತ್ತೆಯ ಚಿಂತೆಯಲ್ಲಿ ಕುಳಿತಲ್ಲೆ ಅರೆಪ್ರಜ್ಞಾವಸ್ಥೆಗೆ ಜಾರಿದ. ಯಾರು ಮಾತನಾಡಿಸಿದರೂ ಉತ್ತರ ಬರಲಿಲ್ಲ. ಜನ ಮಡಿವಾಳನನ್ನು ನೋಡಲು ಬಂದರು. ಬಂದವರೆಲ್ಲ ಅವ ಸಮಾಧಿ ಸ್ಥಿತಿಯಲ್ಲಿರುವ ಜೀವಂತ ದೇವರೆಂಬಂತೆ ಮಾತನಾಡಿಕೊಂಡರು. ಹಣ್ಣುಗಳನ್ನು ತಂದು ಪಕ್ಕಕ್ಕಿಟ್ಟರು, ಕಾಣಿಕೆ ಹಾಕಿ ನಮಸ್ಕರಿಸಿದರು. ಒಂದಿಬ್ಬರಂತೂ ಅವನು ತಮ್ಮ ಗುರುವೆಂದು ಸ್ವೀಕರಿಸಿ ತಾವು ಅವನ ಶಿಷ್ಯರೆನ್ನುತ್ತ ಹಣಕಾಸು-ಹಣ್ಣುಹಂಪಲು ಸಾಮಗ್ರಿಗಳ ದೇಖರೇಖೆ ನೋಡಿಕೊಳ್ಳಲು ನಿಂತುಬಿಟ್ಟರು!!

ಜನಮಾನಸದಲ್ಲಿ ಅಬ್ಬರದ ಪ್ರಚಾರ ಗಿಟ್ಟಿಸಿದ, ರಾತ್ರಿ-ಬೆಳಗಾಗೋದರೊಳಗೆ ಸಮಾಧಿ ಸ್ಥಿತಿಗೆ ತಲುಪಿದ್ದ ಸಾಧಕ ಯಾರೆಂದು ನೋಡಲು ಸ್ವಾಮಿರಾಮರೂ ತೆರಳಿದರು. [ಹೋಗಿ ನೋಡುವ ವರೆಗೆ ಸಮಾಧಿ ಸ್ಥಿತಿಯಲ್ಲಿರುವ ಮಹಾಸ್ವಾಮಿಗಳು ಯಾರೆಂಬುದು ಅವರಿಗೆ ಗೊತ್ತಿರಲಿಲ್ಲ]. ಸನಿಹಕ್ಕೆ ಹೋಗಿ ನೋಡಿದಾಗ ಅವ ಯಾರೆಂಬುದು ಗೊತ್ತಾಯಿತು. ಎರಡು ದಿನಗಳ ಕೆಳಗೆ ಕತ್ತೆಯನ್ನು ಹುಡುಕುತ್ತ ತಮ್ಮಲ್ಲೂ ವಿಚಾರಿಸಿಕೊಂಡು ಹೋಗಿದ್ದ ಮಡಿವಾಳ, ಕತ್ತೆ ಕಳೆದುಹೋದ ನೋವಿನಲ್ಲಿ ಅನ್ನಾಹಾರಗಳನ್ನು ತ್ಯಜಿಸಿ ಅರೆಪ್ರಜ್ಞಾವಸ್ಥೆಗೆ ತಲುಪಿಬಿಟ್ಟಿದ್ದ. ನಿಧಾನವಾಗಿ ಅವನನ್ನು ಸ್ಪರ್ಶಿಸಿದರು, ಎಚ್ಚೆತ್ತ ಅವ “ನನ್ನ ಕತ್ತೆ ಎಲ್ಲಿಹೋಯಿತು”ಎಂದು ಗೋಳಿಟ್ಟ.

ಸ್ವಾಮಿರಾಮ ಹೇಳುತ್ತಾರೆ-ಯಾರು ಯಾವ ಉದ್ದೇಶದಲ್ಲಿ ಮನಸ್ಸನ್ನು ನಿಲ್ಲಿಸಿ ಧ್ಯಾನಾಸಕ್ತರಾಗುತ್ತಾರೋ ಅವರು ಅದನ್ನೇ ಹಂಬಲಿಸುತ್ತಿರುತ್ತಾರೆ. ಕೈವಲ್ಯವನ್ನುಳಿದು ಲೌಕಿಕ ವಿಷಯಾಸಕ್ತಿಯಿಂದ ಧ್ಯಾನಸ್ಥರಾದವರು ಸನ್ಯಾಸಿಗಳಾಗೋದಿಲ್ಲ. ಮತ್ತು ಅವರ ಸಮಾಧಿ ಸ್ಥಿತಿ ಕೂಡ ಬೂಟಾಟಿಕೆಯಾಗಿರುತ್ತದೆ. ಕೇವಲ ಕೈವಲ್ಯವನ್ನು, ನೈಜ ಜ್ಞಾನವನ್ನು ಹೊಂದಬೇಕೆಂಬ ಒಂದೇ ಉದ್ದೇಶದಿಂದ ಸಮಾಧಿಯನ್ನು ಹೊಂದುವವರು ಸನ್ಯಾಸಿಗಳೇ ಆಗಿರುತ್ತಾರೆ.

ಕೆಲವು ಕಡೆ ಆಗುವುದೇ ಹಾಗೆ-’ಕತ್ತೆ’ಯನ್ನು ಪೀಠವೇರಿಸಿ, ಗುರುವೆನ್ನುತ್ತ ಪಕ್ಕಕ್ಕೆ ವಾರಸುದಾರರಾಗಿ ಒಂದಷ್ಟು ಜನ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಳ್ಳುತ್ತಾರೆ. ಅಲ್ಲೆಲ್ಲ ಅವರಿಗೆ ಭಕ್ತರಿಂದ ಬಂದ ’ಮೇವು’ ಸಿಗುತ್ತದೆ. ಪೀಠಸ್ಥ ಗಂಡು ಕತ್ತೆಗೆ ’ಏಕಾಂತ’ಕ್ಕೆ ಹೇರಳವಾಗಿ ’ಹೆಣ್ಣುಕತ್ತೆಗಳು’ ದೊರೆಯುತ್ತವೆ. ಪರಂಪರಾಗತ ಪೀಠವೆನ್ನುತ್ತ ಬಕರಾ ಭಕ್ತರು ಅಂಧಾನುಕರಣೆಯಲ್ಲಿ ಧನಕನಕಗಳನ್ನು ತಂದೊಪ್ಪಿಸುತ್ತಾರೆ. ಬೇಕಾದ್ದನ್ನೆಲ್ಲ ಭೋಗಿಸುತ್ತ ಗಂಡು ಕತ್ತೆ, ಸದಾ ಸುಂದರ ಹೆಂಗತ್ತೆಗಳೊಡನೆ ಸಂಭೋಗನಡೆಸುವುದನ್ನೇ ಸಂಕಲ್ಪಿಸುತ್ತದೆ, ಧ್ಯಾನಿಸುತ್ತದೆ ಮತ್ತು ನಡೆಸುತ್ತದೆ. ಹೊರಗೆ ಬೆಳ್ಗೊಡೆಯ ಕೆಳಗೆ ಬಿಳಿನಗೆ ಚೆಲ್ಲುತ್ತ ಸಾಗಿ, ಬಣ್ಣದ ಅಕ್ಕಿ ವಿತರಿಸುತ್ತ ಅಂಧಭಕ್ತರಿಗೆ ಬೋಳೆಣ್ಣೆ ಸವರುತ್ತದೆ.

ರಾಜಪ್ರಭುತ್ವದಲ್ಲಿ ಈ ಸಮಾಜ ಪ್ರತ್ಯೇಕವಾಗಿ ಒಂದೆಡೆ ವಾಸವಾಗುತ್ತಿದ್ದುದಕ್ಕೆ ಅವರು ವ್ಯವಸ್ಥೆ ಕಲ್ಪಿಸುತ್ತಿದ್ದರು ಏಕೆಂದರೆ ಭಾಷೆ ಮತ್ತು ಆಹಾರಗಳಿಂದ ಬೆಳೆಯುವ ಸಲುಗೆಯಿಂದ, ಮಿತ್ರತ್ವದಿಂದ ಸೇವಿಸಬಾರದ ಆಹಾರಗಳೆಡೆಗೆ ಇವರು ಆಕರ್ಷಿತರಾಗಬಹುದು; ರುಚಿನೋಡಬಹುದು . ತಮ್ಮತನವನ್ನು ಕಳೆದುಕೊಳ್ಳಬಹುದು. ಮೂಲ ಸಂಸ್ಕೃತಿಯ ಸೊಬಗು ಮತ್ತು ಸೊಗಡು ಕಳೆದುಹೋಗಬಹುದು ಎಂಬ ಕಾರಣಕ್ಕೆ. ಹಾಗಾಗೋದು ಬೇಡ, ಈ ಗುಂಪು ಎಲ್ಲರೊಡನೆ ಬೆರೆಯದಿರಲಿ, ಇವರಲ್ಲಿರುವ ವಿಶಿಷ್ಟ ಗ್ರಾಹ್ಯ, ಧಾರಣ, ಅನುಕರಣ, ಅನುಸರಣ, ಚಿಂತನ, ಬೋಧನ ಮೊದಲಾದ ಶಕ್ತಿ ಹಾಗೇ ಇರಲಿ, ಉಳಿದ ಸಮಾಜಗಳಿಗೆ ಇವರು ಮಾರ್ಗದರ್ಶಕರಾಗಲಿ ಎಂದು ಅವರೆಲ್ಲ ಬಯಸುತ್ತಿದ್ದರು. ಲೋಕದ ಸಮಸ್ತರಿಗೆ ಒಳಿತನ್ನು ಬಯಸುವ ಉದಾತ್ತ ಚಿಂತನೆಯುಳ್ಳ ಸಮಾಜದ ಧಾರ್ಮಿಕ-ಆಧ್ಯಾತ್ಮಿಕ ಮುಖಂಡನನ್ನು ಹಾಗಾಗಿಯೇ ರಾಜಗುರುವೆಂದು ಸ್ವೀಕರಿಸಿ, ಕಾಲಕಲಕ್ಕೆ ಅವರಿಂದ ಮಾರ್ಗದರ್ಶನ ಪಡೆದುಕೊಂಡು ರಾಜ್ಯಭಾರ ನಡೆಸುತ್ತಿದ್ದರು.

ರಾಜಪ್ರಭುತ್ವದ ಕಾಲದಲ್ಲಿ ಬಹಳಜನ ಅವಧಾನಿಗಳಿರುತ್ತದ್ದರಂತೆ. ಹಾಗಂತ ಶತಾವಧಾನಿ ಎಂದು ಖ್ಯಾತರಾದ ಡಾ. ರಾ. ಗಣೇಶರು ಹೇಳಿದ್ದಾರಂತೆ. ಅವರನ್ನು ಕಂಡಿಲ್ಲ; ಅವರ ವೀಡಿಯೋ ಉಪನ್ಯಾಸಗಳನ್ನು ಕಂಡಿದ್ದೇನೆ. ಅಧ್ಯಯನ, ವಿಮರ್ಶೆ ಮತ್ತು ಧಾರಣಶಕ್ತಿಗೆ ಅವರೊಂದು ಉತ್ತಮ ಉದಾಹರಣೆ ಎಂದು ಅರ್ಥವಾಯ್ತು. ಇಂದು ಅಂತಹ ಮೇಧಾವಿಗಳು ಸರಕಾರಕ್ಕೆ, ಪ್ರಶಸ್ತಿಗಳ ಸಮಿತಿಗಳಿಗೆ ಕಾಣಿಸೋದಿಲ್ಲ. ಅಂತಹ ಮೇಧಾವಿಗಳ ಸಂಖ್ಯೆ ತೀರಾ ಇಲ್ಲವೇ ಇಲ್ಲ ಎನ್ನಬಹುದು.

ರಾಜಾಶ್ರಯ ತಪ್ಪಿದಾಗಿನಿಂದ ಸಮಾಜ ತನ್ನತನವನ್ನು ಕಳೆದುಕೊಳ್ಳಲು ಆರಂಭಿಸಿತು. ಉಡುಗೆ-ತೊಡುಗೆ, ಆಚಾರ-ವಿಚಾರ, ಆಹಾರ-ವ್ಯವಹಾರಗಳಲ್ಲಿ ಗಣನೀಯ ಬದಲಾವಣೆಗಳಾದವು. ಬದುಕಿಗಾಗಿ ಕೃಷಿಯನ್ನವಲಂಬಿಸಿತು. ಅಡಕೆ ಧಾರಣೆಯ ಬಗ್ಗೆ ಸದಾ ಕುತೂಹಲಿಗಳಾಗಿರುತ್ತ ಮೂಲದಲ್ಲಿದ್ದ ಧಾರಣಶಕ್ತಿಯ ಬದಲಿಗೆ ಧಾರಣೆ ಶಕ್ತಿಯನ್ನೆ ಹೆಚ್ಚು ಅವಲಂಬಿಸಿತು. ಇಂದು ಅಂತಹ ಸ್ಮರಣ ಶಕ್ತಿಯುಳ್ಳ ಜನ ಬೆರಳೆಣಿಕೆಯಲ್ಲಿ ಮಾತ್ರ ಇದ್ದರೆ ಆಶ್ಚರ್ಯವಲ್ಲ.

ಸ್ವಾಮಿರಾಮರ ಕೃತಿಗಳಲ್ಲಿ ನಮಗೆ ವಿಶ್ವದ ಎಲ್ಲ ವಿಧದ, ಎಲ್ಲ ಮತಗಳ ಸನ್ಯಾಸಿಗಳ ಮಾಹಿತಿ ದೊರೆಯುತ್ತದೆ; ಮೇಲಾಗಿ ಅವರೆಲ್ಲರ ಬದುಕಿಗೆ ಅತ್ಯಂತ ಹತ್ತಿರದಿಂದ ಕನ್ನಡಿ ಹಿಡಿದವರು ಅವರು. ಅವರ ಕೃತಿಯನ್ನೋದುತ್ತ ಡಿವಿಜಿಯವರ ಕಗ್ಗದ ನೆನಪುಬಂತು-

ಒಮ್ಮೆ ಹೂದೋಟದಲಿ; ಒಮ್ಮೆ ಕೆಳೆಕೂಟದಲಿ |
ಒಮ್ಮೆ ಸಂಗೀತದಲಿ; ಒಮ್ಮೆ ಶಾಸ್ತ್ರದಲಿ |
ಒಮ್ಮೆ ಸಂಸಾರದಲಿ; ಮತ್ತೊಮ್ಮೆ ಮೌನದಲಿ |
ಬ್ರಹ್ಮಾನುಭವಿಯಾಗೊ – ಮಂಕುತಿಮ್ಮ ||

ಹೂದೋಟವೂ ಬೇಕು, ಗೆಳೆಯರ ಕೂಟವೂ ಬೇಕು, ಸಂಗೀತವೂ ಬೇಕು, ಶಾಸ್ತ್ರವೂ ಬೇಕು, ಸಂಸಾರವೂ ಬೇಕು, ಮೌನ-ಧ್ಯಾನವೂ ಬೇಕು, ಆದರೆ ಎಲ್ಲವೂ ಅಷ್ಟಷ್ಟು ಮಟ್ಟಿಗೆ ಮಾತ್ರ ಇರಬೇಕು; ಅವೇ ನಮ್ಮನ್ನು ಆಳಬಾರದು. ವೇದ-ಶಾಸ್ತ್ರಗಳನ್ನು ಸರಿಯಾಗಿ ಅಧ್ಯಯನ ಮಾಡದೆ, ಅರ್ಥಗ್ರಹಣ ಮಾಡದೆ, ಏನೂ ಅರಿಯದ ಕೂಪಮಂಡೂಕನ ಬಣ್ಣದ ವೇಷಕ್ಕೆ ಮರುಳಾಗಿ ಅವನಿಗೆ ಜೈಕಾರ ಹಾಕುವ ಸಮಾಜದ ಅಂಧಾನುಕರಣೆಗೆ ಮೊದಲು ಛೀ ಥೂ ಎನ್ನಬೇಕು.

Thumari Ramachandra

source: https://www.facebook.com/groups/1499395003680065/permalink/1829186874034208/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s