ಯುವಕರಿಗೆ ಬ್ರಾಹ್ಮಣ್ಯದ ರೂಟ್ ಹೇಗಿತ್ತೆಂಬ ಮಾಹಿತಿ ಕೊಟ್ಟಿದ್ದರೆ ಚೆನಾಗಿತ್ತು

ಯುವಕರಿಗೆ ಬ್ರಾಹ್ಮಣ್ಯದ ರೂಟ್ ಹೇಗಿತ್ತೆಂಬ ಮಾಹಿತಿ ಕೊಟ್ಟಿದ್ದರೆ ಚೆನಾಗಿತ್ತು

ಬ್ರಹ್ಮಾಂಡದ ಬಗೆಗೆ ಸ್ಥೂಲವಾಗಿ ತಿಳಿದಿದ್ದೀರಿ. ಶಂಕರರು ಮೂರ್ತಿ ಪೂಜೆಯನ್ನು ಯಾಕೆ ಹೇಳಿದರು ಎಂದು ಕೇಳಿದ್ದೀರಿ. ಎಲ್ಲರಿಗೂ ಜೀವನದಲ್ಲಿ ಒಂದೇ ರೀತಿಯ ಅರ್ಹತೆ ಇರುವುದಿಲ್ಲ; ಅದು ಅವರವರ ವಿಧಿಯಿಚ್ಛೆ. ಶಂಕರರು ಅತ್ಯಂತ ಬಾಲ್ಯದಲ್ಲಿಯೇ ವಯಸ್ಸಿಗೆ ಮೀರಿದ ಪ್ರಾಬುದ್ಧ್ಯವನ್ನು ಹೊಂದಿದ್ದರು. ಎಲ್ಲರೂ ಅವರಂತೆಯೇ ಆಗುವುದು ಸಾಧ್ಯವೇ? ಇಲ್ಲ.

ಜನಸಾಮಾನ್ಯರಿಗೆ ಧ್ಯಾನಕ್ಕೆ ಏಕಾಗ್ರತೆ ಎಂಬುದು ಬೇಕು. ಏಕಾಗ್ರತೆಗಾಗಿ ಯಾವುದಾದರೂ ಒಂದು ವಸ್ತು ಬೇಕು. ಅದು ಬಾಳೆಕಾಯಾದರೂ ಆದೀತು, ಅಂಗಿ ಗುಂಡಿಯಾದರೂ ಆದೀತು. ಆದರೆ ಅಂತಹ ವಸ್ತುಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸಿದರೆ ದೇವರೆಂಬ ಭಾವನೆ ಬರುವುದು ಸುಳ್ಳು.

ಜೊತೆಗೆ ವೇದಕಾಲದ ನಂತರದ ಋಷಿಗಳು ಸಮಾಧಿಯಲ್ಲಿ ದಿವ್ಯ ಶಕ್ತಿಯ ಹಲವು ರೂಪಗಳನ್ನು ಕಂಡುಕೊಂಡರು. ಅದು ನಿರಾಕಾರವೂ ಹೌದು ಮತ್ತು ಸದಾಕಾರವೂ ಹೌದು ಎಂಬುದನ್ನು ಮನಗಂಡರು. ಶಕ್ತಿ ತಮಗೆ ತೋರಿಸಿದ ಆಕಾರಗಳನ್ನು ಚಿತ್ರ ಬರೆದಿಟ್ಟರು. ಶಕ್ತಿಯನ್ನು ಅಂತಹ ಆಕಾರಗಳಲ್ಲಿ ಮತ್ತೆ ಮತ್ತೆ ಕಾಣುವುದು ಹೇಗೆ ಎಂಬ ಪ್ರಶ್ನೆ ಹುಟ್ಟಿಕೊಂಡಿತು. ಯೋಚನೆಯಲ್ಲಿ ವಿಗ್ರಹಗಳನ್ನು ತಯಾರಿಸಬಹುದು ಎಂಬುದು ಗೊತ್ತಾಯಿತು.

ನಿರಾಕಾರ ಶಕ್ತಿಯನ್ನು ಮೊದಲು ಮಂಡಲ ಮತ್ತು ಪ್ರತಿಮೆಗಳು [ಕಲ್ಲು, ಸಾಲಿಗ್ರಾಮ ಇತ್ಯಾದಿ] ಮತ್ತು ಕಲಶಗಳಲ್ಲಿ ಮಾತ್ರ ಅವಾಹಿಸಲಾಗುತ್ತಿತ್ತು. ಸದಾಕಾರದಲ್ಲಿ ಪೂಜಿಸುವ ಸಲುವಾಗಿ ವಿಗ್ರಹಗಳು, ಚಿತ್ರಪಟಗಳು ತಯಾರಾದವು. ಆಗಮ ಶಾಸ್ತ್ರ[ವೈಷ್ಣವಾಗಮ, ಶೈವಾಗಮ]ಗಳು ಹುಟ್ಟಿಕೊಂಡವು. ಶೈವಾಗಮದಲ್ಲಿ ಶೈವ ಸಿದ್ಧಾಂತ ಮತ್ತು ಕಾಶ್ಮೀರಿ ಶೈವ ಪದ್ಧತಿ ಎಂಬ ಎರಡು ವಿಭಾಗಗಳಿವೆ. ಅದರಂತೆ ವೈಷ್ಣವಾಗಮದಲ್ಲಿ ವೈಖಾನಸ ಮತ್ತು ಪಾಂಚರಾತ್ರ ಎಂಬೆರಡು ವಿಭಾಗಗಳಿವೆ.

ಅಲ್ಲದೇ ಶಾಕ್ತಾಗಮ, ಸೌರಾಗಮ ಮತ್ತು ಗಾಣಪತ್ಯಾಗಮ ಎಂಬ ಆಗಮ ಶಾಸ್ತ್ರಗಳು ರೂಪುಗೊಂಡವು. ಅವುಗಳಿಗೆಲ್ಲ ಒಂದೊಂದು ವಿಶಿಷ್ಟ ಕ್ರಮವಿದೆ. ದೇವಸ್ಥಾನ ಎಂಬ ಜಾಗದಲ್ಲಿ ಶಕ್ತಿಯ ಆವಾಹನೆಗೆ ಹೇಗೆ ನಡೆದುಕೊಳ್ಳಬೇಕೆಂಬುದನ್ನು ಆಯಾಯ ಆಗಮ ದೃಷ್ಟಾರರು ನಿರ್ದೇಶಿಸಿದ್ದಾರೆ, ನಿಯಮಗಳನ್ನು ಹಾಕಿಟ್ಟಿದ್ದಾರೆ. ಅವುಗಳನ್ನು ಉಲ್ಲಂಘಿಸಿದರೆ ಶಕ್ತಿಯ ಆಗಮನ ಆಗುವುದಿಲ್ಲ ಎಂಬುದು ಸ್ಪಷ್ಟ.

ಶಂಕರರ ಕಾಲಕ್ಕೆ ಶೈವ, ವೈಷ್ಣವ, ಶಾಕ್ತ, ಗಾಣಪತ್ಯ, ಸೌರ ಮೊದಲಾದ ಹಲವು ಪಂಥಗಳು ರೂಡಿಯಲ್ಲಿದ್ದವು. ಆಯಾಯ ಪಂಥಗಳ ಅನುಯಾಯಿಗಳ ಧರ್ಮ ಧೋರಣೆಗೆ ವಿರೋಧ ಎಸಗಲಿಲ್ಲ ಶಂಕರರು. ಯಾಕೆಂದರೆ ಶಂಕರರ ಅರ್ಹತೆ ಅವರಿಗೆಲ್ಲಿಂದ ಬರಬೇಕು? ಹೀಗಾಗಿ ಎಲ್ಲ ಪಂಥಗಳ ಪ್ರಧಾನ ದೇವರುಗಳನ್ನು ಸ್ವೀಕರಿಸಿ, ಸಂಸಾರಿಗಳು ಮನೆಗಳಲ್ಲಿ ’ಪಂಚಾಯತನ ಪೂಜೆ’ ಎಂಬುದನ್ನು ರೂಢಿಸಿಕೊಳ್ಳುವಂತೆ ತಿಳಿಸಿದರು. ಸೂರ್ಯಗಣಪತ್ಯಂಬಿಕಾಶಿವವಿಷ್ಣು ಎಂಬ ಐದು ದೇವರುಗಳನ್ನು ನಾವು ಇವತ್ತಿಗೂ ಪಂಚಾಯತನದಲ್ಲಿ ಕಾಣಬಹುದು.

ನಂತರ ಅವರ ಅಭಿರುಚಿಗೆ ತಕ್ಕಂತೆ ಶಿವ ಪಂಚಾಯತನ, ಗಣಪತಿ ಪಂಚಾಯತನ, ದೇವಿ ಪಂಚಾಯತನ ಹೀಗೆ ಆಯಾಯ ದೇವರನ್ನು ಪ್ರಧಾನವಾಗಿಟ್ಟುಕೊಂಡು, ಉಳಿದ ನಾಲ್ಕು ದೇವರನ್ನು ನಿಗದಿತ ಸ್ಥಾನಗಳಲ್ಲಿ ಇಟ್ಟುಕೊಂಡು ಪೂಜಿಸುವ ಪದ್ಧತಿ ಸಂಸಾರಿಗಳಲ್ಲಿ ಬೆಳೆಯಿತು.

ಪೂಜೆಗಾಗಿ ಒಂದು ನಿರ್ದಿಷ್ಟ ರೂಪ ಬೇಕೆಂಬ ಕಾರಣಕ್ಕೆ ಶಂಕರರು ವಿಗ್ರಹಾರಾಧನೆಯನ್ನು ಆರಂಭಿಕರಿಗೆ ಅಥವಾ ಸಂಸಾರಿಗಳಿಗೆ ನಿಷಿದ್ಧವೆಂದು ಹೇಳಲಿಲ್ಲ. ಬದಲಾಗಿ ತಾವೇ ಕಾಶ್ಮೀರದಿಂದ ಶಕ್ತಿಯನ್ನು ಶಾರದಾಂಬೆಯ ರೂಪದಲ್ಲಿ ಕರೆತಂದು ಶೃಂಗೇರಿಯಲ್ಲಿ ಪ್ರತಿಷ್ಠಾಪಿಸಿದರು. ಸಾಧಕರು ಮೇಲಿನ ಹಂತಗಳಿಗೆ ಏರಿದಾಗ [ನಾನು ಎಂಬುದು ಅನಂತದ ಭಾಗವಾದಾಗ] ಮೂರ್ತಿಪೂಜೆ ಬೇಕಾಗುವುದಿಲ್ಲ ಎಂದು ಹೇಳಿದರು. ಆಗಲೇ “ಅಹಂ ಬ್ರಹ್ಮಾಸ್ಮಿ” ಎನ್ನಬಹುದು.

ಅದಿರಲಿ, ಪೂಜೆಗೋ ಧ್ಯಾನಕ್ಕೋ ಶ್ರದ್ಧೆ ಹುಟ್ಟಲು ಅಂತದ್ದೊಂದು ವಿಗ್ರಹ ವ್ಯವಸ್ಥೆ ಅಗತ್ಯವಿತ್ತು. ಮತ್ತು ಅದು ಸಾಧ್ಯವಾಯ್ತು. ಈಗ ನಾವು ಯಂತ್ರ ತಂತ್ರಗಳ ಬಗ್ಗೆ ಸ್ಥೂಲವಾಗಿ ತಿಳಿಯೋಣ. ನಮ್ಮ ಬಾಯಿಂದ ಶಬ್ದಗಳು ಹೊರಡುತ್ತವೆ ನಿಜವಷ್ಟೆ? ಶಬ್ದ ಮಾಲಿನ್ಯ ಎಂದು ಹೇಳುತ್ತೇವೆ, ಆದರೆ ಅದರ ನಿಜಾರ್ಥ ನಮಗೆ ಗೊತ್ತಿಲ್ಲ ಅಲ್ಲವೇ? ಕೇವಲ ಜೋರಾಗಿ ಕಿರುಚುವುದು ಅಥವಾ ಸದ್ದುಮಾಡುವುದಷ್ಟೇ ಶಬ್ದ ಮಾಲಿನ್ಯವಲ್ಲ. ಸಲ್ಲದ ಜಾಗದಲ್ಲಿ ಹೇಳಬಾರದ್ದನ್ನು ಹೇಳಿದರೆ ಅದೂ ಶಬ್ದಮಾಲಿನ್ಯವೇ. ಮಠದೊಳಗೆ ಏಕಾಂತ ನಡೆಸುತ್ತ ರಾಮನಿಚ್ಛೆ ಎಂದರೆ ಅದು ಶಬ್ದ ಮಾಲಿನ್ಯವಾಗುತ್ತದೆ!

ನಮ್ಮಲ್ಲಿ ವಾಗ್ದಾನ ಎಂಬ ಪದವನ್ನು ನೀವು ಕೇಳಿರುತ್ತೀರಿ. ಏನದು ’ವಾಗ್ದಾನ’? ವಾಕ್ ಅಂದರೆ ಮಾತನ್ನು ದಾನ ಕೊಡುವುದು! ಮಾತನ್ನು ಕೊಟ್ಟ ಮೇಲೆ ಮುಗಿಯಿತು, ಅದರಂತೆ ನಡೆದುಕೊಳ್ಳಬೇಕು, ಅಂತದ್ದು ಮಾತ್ರ ವಾಗ್ದಾನವಾಗುತ್ತದೆ. ಸಾಮಾನ್ಯವಾಗಿ ಕನ್ಯಾದಾನ ಮೊದಲಾದ ಸಂದರ್ಭಗಳಲ್ಲಿ ಮೊದಲು ವಾಗ್ದಾನ ನಡೆಯುತ್ತದೆ. “ನಾವು ನಮ್ಮ ಮಗಳನ್ನು ನಿಮ್ಮ ಮಗನಿಗೆ ಕೊಡುತ್ತೇವೆ” ಎಂದು ವಧುವಿನ ಪಾಲಕರು ವರನ ಪಾಲಕರಿಗೆ ವಚನ ಕೊಡುತ್ತಾರೆ. “ನಾವು ನಿಮ್ಮ ಮಗಳನ್ನು ಸ್ವೀಕರಿಸುತ್ತೇವೆ” ಎಂದು ವರನ ಪಾಲಕರು ವಧುವಿನ ಪಾಲಕರಿಗೆ ವಚನ ಕೊಡುತ್ತಾರೆ. ಆಗ ವಧುವಿಗೆ ಗೋತ್ರಗಳ ವಿನಿಮಯವಾಗುತ್ತದೆ.

ಹೀಗೆ ವಚನ ಕೊಡುವುದಕ್ಕೆ ಅಷ್ಟೊಂದು ಮಹತ್ವವಿದೆ. ಅದು ರಾಜಕಾರಣಿಗಳು ನೀಡುವ ಭರವಸೆಯಲ್ಲ. ಇರಲಿ, ಯಾವುದೇ ಪದವೂ ನಮ್ಮ ಬಾಯಿಂದ ಹೊರಟಾಗ ವಾಯುಮಂಡಲದಲ್ಲಿ ನಕ್ಷೆಯೊಂದು ಮೂಡುತ್ತದೆ. ಒಂದಕ್ಷರ ಉಚ್ಚರಿಸಿದರೂ ಅದಕ್ಕೊಂದು ನಕ್ಷೆ ಇದೆಯೆಂದೇ ಅರ್ಥ. ಆ ನಕ್ಷೆಯನ್ನು ನಾವು ಕಾಣಲು ಸಾಧ್ಯವಾದರೆ ಅದನ್ನು ಲೋಹದ ಹಾಳೆಯ ಮೇಲೆ ಅಥವಾ ನೆಲದಲ್ಲಿ ಬರೆದಿಟ್ಟುಕೊಳ್ಳಬಹುದು. ಸಾಮಾನ್ಯರು ಅಂತಹ ನಕ್ಷೆಯನ್ನು ಹಾಗೆ ನೋಡುವುದು ಸಾಧ್ಯವಾಗುವುದಿಲ್ಲ ಬಿಡಿ.

ಓಂಕಾರ ಇದೆಯಲ್ಲ? ಅದರ ನಕ್ಷೆ ಹೇಗಿರುತ್ತದೆ ಗೊತ್ತೇ? ನವಾವರಣವುಳ್ಳ ಶ್ರೀಚಕ್ರದಂತಿರುತ್ತದಂತೆ. ಅಷ್ಟೇ ಅಲ್ಲ. ಈ ಬ್ರಹ್ಮಾಂಡದಲ್ಲಿ ಆರಂಭದಿಂದ ಅಂತ್ಯದವರೆಗೆ ಸತತವಾಗಿ ಪ್ರಕೃತಿಯಲ್ಲಿ ಮೊಳಗುವ ದನಿ ಓಂಕಾರ. ನಮ್ಮ ಗಲಾಟೆಯೊಳಗೆ ನಾವದನ್ನು ಹೇಗೆ ಕೇಳಬೇಕು? ಯಾಕೆ ಓಂಕಾರವೇ ಆಗಬೇಕು?

ನಮಗೆ ಗೊತ್ತಿಲ್ಲದ ಸೃಷ್ಟಿ ರಹಸ್ಯಗಳು ಅದೆಷ್ಟಿಲ್ಲ ಈ ಬ್ರಹ್ಮಾಂಡದಲ್ಲಿ? ಇಡೀ ಈ ಪ್ರಪಂಚ ನವಾವರಣದ ಬೃಹತ್ ಶ್ರೀಯಂತ್ರ ಅಥವಾ ಶ್ರೀಚಕ್ರ! ಶ್ರೀಚಕ್ರದ ಸ್ವರೂಪದಲ್ಲಿ ಶಕ್ತಿ ಬ್ರಹ್ಮಾಂಡವನ್ನು ಆವರಿಸಿದೆ! ಅದರ ಬೀಜರೂಪವೇ ಓಂಕಾರ! ಹೀಗಾಗಿ ವಿರಕ್ತರಿಗೆ, ಸನ್ಯಾಸಿಗಳಿಗೆ ಅದೇ ಪರಮ ಮಂತ್ರ. “ಓಂ ಇತ್ಯೇಕಾಕ್ಷರಂ ಬ್ರಹ್ಮ” ಎಂಬುದನ್ನು ಕೇಳಿದ್ದೀರಷ್ಟೇ? ಅದೇ ಪರಬ್ರಹ್ಮ ಶಕ್ತಿಯ ಒಂದು ಸ್ವರೂಪ.

ಇನ್ನು ನಮ್ಮ ಹಿಂದೂಗಳಿಗೆ ಮೂವತ್ಮೂರು ಕೋಟಿ ದೇವತೆಗಳಂತೆ, ದೋಣಿ ಮುಳುಗುವಾಗ ಯಾರನ್ನು ಕರೆಯಬೇಕೆಂದು ದೋಣಿಯಲ್ಲಿದ್ದ ಭಕ್ತನಿಗೆ ತಿಳಿಯಲಿಲ್ಲವಂತೆ. ದೇವತೆಗಳಲ್ಲಿ ತಾವು ಯಾರು ಸಹಾಯಕ್ಕೆ ಹೋಗಬೇಕೆಂದು ತಿಳಿಯಲಿಲ್ಲವಂತೆ, ಹೀಗಾಗಿ ಯಾವ ದೇವರೂ ಸಹಾಯಕ್ಕೆ ಬರದೆ ಮುಳುಗಿಹೋದನಂತೆ ಎಂದು ಅನ್ಯಮತಗಳ ಅಪ್ರಬುದ್ಧ ಜನ ಟೀಕಿಸಬಹುದು. ನಮ್ಮಲ್ಲಿರುವಷ್ಟು ಧಾರ್ಮಿಕ ಸ್ವತಂತ್ರ್ಯ ಬೇರೆ ಮತಗಳಲ್ಲಿ ಇಲ್ಲ. ಕೋಟಿ ಕೋಟಿ ದೇವತೆಗಳಲ್ಲಿ ನಿಮಗಿಷ್ಟವಾದ ಯಾವ ರೂಪದಲ್ಲಾದರೂ ಪೂಜಿಸಿ ಅದು ತಲ್ಪುವುದು ಒಂದೇ ಮೂಲಕ್ಕೆ.

ಆಕಾಶಾತ್ಪತಿತಂ ತೋಯಂ ಯಥಾ ಗಚ್ಛತಿ ಸಾಗರಂ

ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ

ಅಥವಾ

ಏಕೋ ದೇವಃ ಕೇಶವೋವಾಂ ಶಿವೋವಾಂ

ಎಂಬುದನ್ನು ತಿಳಿದುಕೊಂಡರೆ ಸಾಕು. ಹಾಗೆ ತಿಳಿದುಕೊಂಡರೆ ಕಾಣುವ ಕಲ್ಲಿನಲ್ಲೂ ದೇವರಿದ್ದಾನೆ, ಹಾರುವ ಹಕ್ಕಿಯಲ್ಲೂ ದೇವರಿದ್ದಾನೆ. ಅದೆಲ್ಲ ಹಾಗಿರಲಿ, ಈ ಪ್ರಪಂಚವನ್ನು ನಿಯಂತ್ರಣಕ್ಕಾಗಿ ಆ ಮಹಾಶಕ್ತಿ ಮೂರು ತ್ರಿಕೋಣಗಳನ್ನು ಪ್ರಧಾನವಾಗಿ ರೂಪಿಸಿಕೊಂಡಿದೆ. ಒಂದು ನಿಮಗೆ ಗೊತ್ತು-ಅದೇ ಬರ್ಮುಡಾ ಟ್ರಯಾಂಗಲ್. ಇನ್ನೆರಡು ಎಲ್ಲೆಲ್ಲಿವೆ ಗೊತ್ತೇ? ಒಂದು ಆಫ್ರಿಕಾದಲ್ಲಿದೆ. ಪ್ರಧಾನ ತ್ರಿಕೋನ ಭಾರತದ ಶಿರೋಭಾಗವಾದ ಹಿಮಾಲಯದಲ್ಲಿದೆ. ಹಾಗಾಗಿಯೇ ಅಲ್ಲಿ ಹುಟ್ಟಿ ಹರಿಯುವ ಗಂಗೆಗೂ ದಿವ್ಯ ಶಕ್ತಿ! ಅಲ್ಲಿ ತಪಸ್ಸು ಮಾಡುವ ನಿಜವಾದ ಸಾಧಕರಿಗೂ ದಿವ್ಯ ಶಕ್ತಿ!

ಪ್ರಪಂಚಕ್ಕೆ ಶ್ರೀಚಕ್ರವನ್ನು ತೋರಿಸಿಕೊಟ್ಟು, ನೆನಪಿಡಿ ಶ್ರೀಚಕ್ರ ಎಂಬುದು ಶಂಕರರ ರಚನೆಯಲ್ಲ, ಅದರ ಆವಿರ್ಭಾವವನ್ನು ತೋರಿಸಿ, ಜಾಗೃತಗೊಳಿಸಿ, ಕೆಲವು ಸ್ಥಳಗಳಲ್ಲಿ ಶ್ರೀಚಕ್ರ ಅಥವಾ ಶ್ರೀಯಂತ್ರವನ್ನು ಸ್ಥಾಪಿಸಿದವರು ಶಂಕರರು.

ಸಂಜೆಯಾದರೆ ಭಕ್ತರು ಪ್ರವೇಶಿಸಲು ಹೆದರುತ್ತಿದ್ದ ತಮಿಳುನಾಡಿನ ಮಧುರೈ ಮೀನಾಕ್ಷಿ ದೇವಸ್ಥಾನದಲ್ಲಿ ಆ ಶಕ್ತಿ ಭದ್ರಕಾಳಿಯಾಗಿ ರಾತ್ರಿಯಲ್ಲಿ ಕಂಡವರನ್ನೆಲ್ಲ ನುಂಗಿಹಾಕುತ್ತಿದ್ದಳಂತೆ! ಹೀಗಾಗಿ ಅಲ್ಲಿಗೆ ಯಾರೂ ಹೋಗುತ್ತಿರಲಿಲ್ಲ. ಬೆಳಗಿನಿಂದ ಮಧ್ಯಾಹ್ನದೊಳಗೆ ಪೂಜೆಯನ್ನು ಮುಗಿಸಿ ಹೊರಟು ಬಿಡುತ್ತಿದ್ದರಂತೆ. ಬಾಲಸನ್ಯಾಸಿ ಶಂಕರರು ಅಲ್ಲಿಗೆ ಬಂದಾಗ ಆ ವಾರ್ತೆ ಕೇಳಿದರು. ಗ್ರಾಮಸ್ಥರ ಸೂಚನೆಗಳಗೆ ಹೆದರದೆ ರಾತ್ರಿ ದೇವಸ್ಥಾನವನ್ನು ಪ್ರವೇಶಿದರು.

ಒಂದು ಮೂಲೆಯಲ್ಲಿ ಧ್ಯಾನಕ್ಕೆ ಕುಳಿತರು. ಭದ್ರಕಾಳಿಯ ರೂಪ ಅವರತ್ತ ಏರುದನಿ ಮಾಡುತ್ತ ಬಂತು. ಶಂಕರರು “ಅಮ್ಮಾ” ಎಂದು ಕರೆದಾಗಲೇ ಮಗುವಿನ ಅಮ್ಮನಂತಾಗಿಬಿಟ್ಟಳು. ಆದರೂ ಪರಸ್ಪರ ಪಂಥಾಹ್ವಾನದ ಮಾತುಕತೆಗಳು ನಡೆದು ಶಂಕರರು ಉಚ್ಚರಿಸಿದ ಪದಗಳಿಗೆ ಮಾತೆ ನರ್ತಿಸಿದಳು. ಬೆಳಗಿನ ಜಾವದ ಹೊತ್ತಿಗೆ ಮಾತೆ ಶಂಕರರಿಗೆ ಅಭಯ ನೀಡಿ ವಿಗ್ರಹದಲ್ಲಿ ಲೀನವಾದಳು. ಬೆಳಕು ಹರಿದಾಗ ಜನರೆಲ್ಲ ಓಡೋಡಿ ಬಂದು ನೋಡುತ್ತಾರೆ, ಶಂಕರರು ಇನ್ನೂ ಕುಳಿತೇ ಇದ್ದರು, ಅವರೆದುರಿನ ಆ ಚಂದ್ರಶಾಲೆಯ ನೆಲದಲ್ಲಿ ಬೃಹದ್ಗಾತ್ರದ ನಕ್ಷೆಯೊಂದು ಮೂಡಿತ್ತು. ಶಂಕರರು ಚೆಲ್ಲಿದ್ದ ಅರಿಷಿನದಲ್ಲಿ ಚಂಡಿಯ ನರ್ತನದಿಂದ ಉಂಟಾದ ನಕ್ಷೆಯದು. ಅದೇ ಶ್ರೀಯಂತ್ರ, ಅದೇ ಶ್ರೀಚಕ್ರ.

ನಂತರದಲ್ಲಿ ಶಂಕರರು ಸೌಂದರ್ಯ ಲಹರಿಯನ್ನು ರಚಿಸಿದರು ಎಂಬುದು ಗೊತ್ತಾಗುತ್ತದೆ.

ಮಠದಲ್ಲಿ ಪೀಠದಲ್ಲಿ ಕೂರುವ ವ್ಯಕ್ತಿಗೆ ಹಲವು ಅರ್ಹತೆಗಳಿರಬೇಕು. ಮೊದಲನೆಯದಾಗಿ ವಿರಕ್ತಿ. ಎರಡನೆಯದಾಗಿ ವಿದ್ವತ್ತು, ಮೂರನೆಯದಾಗಿ ಮನೋದೈಹಿಕ ಆರೋಗ್ಯ, ನಾಲ್ಕನೆಯದಾಗಿ ಉತ್ತಮ ಅನುವಂಶೀಯ ಗುಣಸ್ವಭಾವ, ಐದನೆಯದಾಗಿ ಲೌಕಿಕ ವೈಜ್ಞಾನಿಕ ತುಲನಾತ್ಮಕ ಅಧ್ಯಯನ ಮತ್ತು ಅಧ್ಯಾಪನ. ಇದೆಲ್ಲದರೊಟ್ಟಿಗೆ ಜಾತಕವನ್ನೂ ಪರಿಶೀಲಿಸಿ ವ್ಯಕ್ತಿ ಸನ್ಯಾಸಿಯಾಗಲು ಅದರಲ್ಲೂ ಮಠಾಧಿಪತಿಯಾಗಲು ಯೋಗ್ಯವೇ ಎಂಬುದನ್ನು ಗಮನಿಸಬೇಕು. ಯೋಗ್ಯನಲ್ಲದವನಿಗೆ, ಅರ್ಹತೆ ಇಲ್ಲದವನಿಗೆ ಆ ಹುದ್ದೆ ಕೊಟ್ಟರೆ ಏನಾಗುತ್ತದೆ ಎಂಬುದಕ್ಕೆ ಬೇರೆ ಉದಾಹರಣೆ ಬೇಕೇ?

ಕತೆಗಳನ್ನು ನಡೆಸಲು ವ್ಯಯಿಸುವ ಹಣವನ್ನು, ಯುವಜನತೆಗೆ ಈ ರೀತಿಯ ಮಾಹಿತಿ ಕಮ್ಮಟಗಳನ್ನು ನಡೆಸಲು ಬಳಸಿದ್ದರೆ ನಮ್ಮ ಜನ ಬ್ರಾಹ್ಮಣ್ಯವನ್ನು ಆಚರಿಸುವುದಕ್ಕೆ ಮುಂದಾಗುತ್ತಿದ್ದರು. ಅಂಗಡಿಯಿಂದ ತಂದ ದಾರ ಜನಿವಾರವಲ್ಲ, ಅದರಲ್ಲಿ ಬ್ರಾಹ್ಮಣ್ಯ ಸೇರಿಕೊಂಡಾಗ ಮಾತ್ರ ಅದು ಜನಿವಾರ ಎಂಬುದನ್ನು ಅರಿಯುತ್ತಿದ್ದರು. ಕಂಡಿದ್ದಕ್ಕೆಲ್ಲ ಕಣ್ಮುಚ್ಚಿ ಜೈಕಾರ ಹಾಕುತ್ತಿರಲಿಲ್ಲ. ಬ್ರಾಹ್ಮಣನೆನಿಸುವುದು ಹೇಗೆ ಎಂಬುದನ್ನು ಪಕ್ಕಾ ಮಾಡಿಕೊಳ್ಳುತ್ತಿದ್ದರು.

ಮಿತ್ರರೇ, ಒಂದು ಮಾತು ಕೇಳಿ, ಇಂದಿಗೂ ನೆಟ್ಟಗಿರುವ ಬ್ರಾಹ್ಮಣನಿಗೆ ಯಾವ ಮೀಸಲಾತಿಯೂ ಬೇಕಾಗಿಲ್ಲ. ಅವನ ಗ್ರಂಥಗಳನ್ನು ಸುಟ್ಟರೂ ಅವನ ವಿದ್ವತ್ತನ್ನು ಯಾರೂ ಕಸಿದುಕೊಳ್ಳಲಾರರು.

ವಿದ್ಯಾನಾಮ ನರಸ್ಯರೂಪಮಧಿಕಂ ಪ್ರಚ್ಛನ್ನ ಗುಪ್ತಂ ಧನಂ

ವಿದ್ಯಾ ಭೋಗ ಕರೀ ಯಶಃ ಸುಖಕರೀ ವಿದ್ಯಾ ಗುರೂಣಾಂ ಗುರುಃ

ವಿದ್ಯಾ ಬಂಧುಜನೇ ವಿದೇಶಗಮನೇ ವಿದ್ಯಾಪರಂ ದೈವತಾ

ವಿದ್ಯಾರಾಜಸುಪೂಜ್ಯತೇ ನಹಿ ಧನಂ ವಿದ್ಯಾವಿಹೀನಃ ಪಶುಃ

ಈ ಸುಭಾಷಿತದಲ್ಲಿ ಹೇಳಿದ್ದು ಯಾವ ವಿದ್ಯೆ ಎಂದುಕೊಂಡಿದ್ದೀರಿ? ಅದರಲ್ಲಿ ಲೌಕಿಕ ಮತ್ತು ಪಾರಮಾರ್ಥಿಕ ಎರಡು ಮುಖಗಳಿವೆ ಎಂಬುದನ್ನು ಗಮನಿಸಿ. ವಿದ್ಯೆ ಎಂದರೆ ಕೇವಲ ಉದರಪೋಷಣೆಯ ವಿದ್ಯೆಯಲ್ಲ; ಅದನ್ನು ಉಪಜೀವನ ಎಂದಿದ್ದಾರೆ ಪ್ರಾಜ್ಞರು. ಹಾಗಾದರೆ ಮನುಷ್ಯನ ಮುಖ್ಯ ಜೀವನ ಯಾವುದು? ಅದೇ ಸಾಧನೆ, ಅದೇ ಆತ್ಮೋನ್ನತಿಯನ್ನು ಕಂಡುಕೊಳ್ಳುವ ಬಗೆ. ಕವಿದ ವ್ಯಾಮೋಹದ ಮಂಜು ಕರಗಿ ನಿಜರೂಪ ದರ್ಶನವಾಗುವ ಬಗೆ. ಅನಂತದಲ್ಲಿ ಅನಂತವಾಗುವ ಬಗೆ. ಹುಟ್ಟು-ಸಾವುಗಳಿಂದ ಮುಕ್ತರಾಗುವ ಬಗೆ.

ಅಂತದಕ್ಕೆ ಪೂರಕವಾದ ವಿದ್ಯೆಯನ್ನು ಸಂಪಾದಿಸಿಕೊಂಡಾಗ ಯಾರೂ ನಿಮ್ಮನ್ನು ಅಲ್ಲಾಡಿಸಲಾರರು, ರೋಗಗಳು ನಿಮ್ಮನ್ನು ಬಾಧಿಸವು, ಎಲ್ಲರೂ ನಿಮ್ಮೆಡೆಗೆ ಓಡಿಬಂದಾರು! ಅಂತಹ ಅಂತಃಸತ್ವ ಬ್ರಾಹ್ಮಣರಲ್ಲಿ ಇರಬೇಕು. ಆಗ ಅವನ ಮಾತು ಫಲಿಸುತ್ತದೆ. ಹೇಳಿದ ಭವಿಷ್ಯ ನಿಜವಾಗುತ್ತದೆ. ನಡೆಸಿದ ವೈದ್ಯಚಿಕಿತ್ಸೆ ಸಂಪೂರ್ಣ ಫಲ ನೀಡುತ್ತದೆ. ಅಂತಹ ಪಾಸಿಟಿವ್ ಎನರ್ಜಿ ತರುವ ಆರ್ಷ ವಿದ್ಯೆಗಳನ್ನು ಉಪಾಸಿಸುವುದನ್ನು ಬಿಟ್ಟು ಗಾಢಾಂಧಕಾರದಲ್ಲಿ ಹೊರಳುತ್ತ ಸಂಘ ಕಟ್ಟಿಕೊಂಡು, ಸರ್ವರ ಸಂಗವನ್ನೂ ಮಾಡಿದ ಕಳ್ಳ ಸನ್ಯಾಸಿಯನ್ನು ಬೆಂಬಲಿಸಿದರೆ ಪೀಠದ ಶಾಪ ನಿಮಗೆ ತಾಗುತ್ತದೆ. ಹಾಗಾದಿರಲಿ, ಬದಲಾಗಲಿ, ಕಳ್ಳನ ಬದಲಿಗೆ ಒಳ್ಳೆಯ/ಉತ್ತಮ ಸನ್ಯಾಸಿಯ ಪ್ರತಿಷ್ಠಾಪನೆಗೆ ಎಲ್ಲರೂ ಸಹಕರಿಸುವಂತಾಗಲಿ ಎಂದು ಹಾರೈಸುತ್ತೇನೆ.

Thumari Ramachandra

https://www.facebook.com/groups/1499395003680065/permalink/1680621022224128/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s