ಕಿವಿ ಸೋರುವವನ ಹತ್ತಿರ ಗಬ್ಬು ನಾತ ಬರದಿದ್ದೀತೇ?

ಕಿವಿ ಸೋರುವವನ ಹತ್ತಿರ ಗಬ್ಬು ನಾತ ಬರದಿದ್ದೀತೇ?

ಪ್ರಪಂಚದ ರಹಸ್ಯಗಳನ್ನೆಲ್ಲ ತಿಳಿದುಕೊಳ್ಳಬೇಕೆಂಬ ವಿಜ್ಞಾನಿಗಳ ಪ್ರಯತ್ನ ಪರಿಪೂರ್ಣವಾಗುವುದಿಲ್ಲ. ಯಾಕೆಂದರೆ ಆಕಾಶದ ಬುಡತಳಗಳು ಗೊತ್ತಿಲ್ಲ. ಆಕಾಶ ಆಯತಾಕೃತಿಯೇ? ವಜ್ರಾಕೃತಿಯೇ? ವರ್ತುಲಾಕೃತಿಯೇ? ತಿಳಿದಿಲ್ಲ. ಆಕಾಶದ ಆಯಳತೆ ಸಿಗಲಿಲ್ಲವೆಂದಮೇಲೆ ಅದರಾಚೆಗಿನ ವಿಷಯ ಬಹುದೂರದ ಮಾತು. ಹಲವು ಪ್ರಯಾಸಕರ ಪ್ರಯತ್ನಗಳ ನಂತರ ಚಂದ್ರನೆಡೆಗೂ ಮತ್ತು ಮಂಗಳನೆಡೆಗೂ ಹೋಗಿ ಬಂದಿದ್ದೇನೋ ಆಗಿದೆ. ಆದರೆ ಅವುಗಳ ಮೇಲೆ ಅಸ್ಥಿತ್ವ ಸ್ಥಾಪಿಸುವುದು ತಿಳಕೊಂಡಷ್ಟು ಸುಲಭವಲ್ಲ.

ಮನುಷ್ಯರ ಅಹಂಕಾರಕ್ಕೆ ಕೊನೆಯೆಲ್ಲಿದೆ? ಹಳ್ಳಿಗಳಲ್ಲಿರುವವರಿಗೆ ಮಹಾನಗರಗಳಿಗೆ ಭೇಟಿ ಕೊಡುವುದು ಖುಷಿಕೊಡುತ್ತದೆ. ಮಹಾನಗರವಾಸಿ ಯಜಮಾನರಿಗೆ ವಿದೇಶವಾಸಿ ಅಳಿಯ ಸಿಕ್ಕರೆ ಬಹಳ ಖುಷಿಯೆನಿಸುತ್ತದೆ; ಅಂತಸ್ತಿನ ವಿಷಯ ನೋಡಿ, ಅದಕ್ಕೆ! ಈಗ ಅದೆಲ್ಲ ಹಳೆಯ ಕತೆ, ಯಾಕೆಂದರೆ ಮನೆಗೊಬ್ಬರಂತೆ ವಿದೇಶಗಳಲ್ಲೂ ಭಾರತೀಯರು ನೆಲೆಸಿದ್ದಾರೆ ಈಗ. ರಸ್ತೆಯಲ್ಲಿ ಓಡಾಡುವ ಎಲ್ಲಾ ಬಸ್ಸುಗಳನ್ನು ಸಾರಿಗೆ ಸಂಸ್ಥೆ ಡಿಪೋದೊಳಗೆ ತುಂಬಿಸಲು ಸಾಧ್ಯವೇ? ಜಾಗ ಸಾಲೋದಿಲ್ಲ, ಅದರಂತೆ ಅನಿವಾಸಿ ಭಾರತೀಯರೆಲ್ಲರೂ ಭಾರತಕ್ಕೆ ಏಕಕಾಲಕ್ಕೆ ಮರಳಿದರೆ ಜಾಗದ ಅಭಾವ ಇನ್ನೂ ಹೆಚ್ಚೀತು.

ಇದೀಗ ಮಂಗಳಗ್ರಹದ ಭೇಟಿಯೂ ಆಗಿದೆ. ಮಂಗಳನಲ್ಲಿ ನೀರೂ ಇದೆಯಂತೆ. ಯುವಕನೊಬ್ಬ ಅಲ್ಲೆಲ್ಲೋ ಒಂದಷ್ಟು ಅಡಕೆ ತೋಟ ಮಾಡಿದರೆ, ಮಹಾನಗರದ ಯಜಮಾನರು ತಮ್ಮ ಮಗಳನ್ನು ಕೊಟ್ಟು ಬೀಗತನ ಬೆಳೆಸಿಯಾರು. ಅಳಿಯನ ಮನೆಗೆ ರಾಕೆಟ್ ಮೂಲಕ ಹೋಗಿಬಂದರಾಯ್ತು. ಶತಮಾನದಲ್ಲಿ ವಿಮಾನಯಾನ ಅಭಿವೃದ್ಧಿಗೊಂಡು ತರಾವರಿ ವಿಮಾನಗಳು ಹಾರಾಟ ನಡೆಸಿದಂತೆ, ಇನ್ನುಮುಂದೆ ಭೂಮಿ ಮತ್ತು ಮಂಗಳ ಗ್ರಹಗಳ ನಡುವೆ ರಾಕೆಟ್ ಯಾನ ಆರಂಭಗೊಳ್ಳಬಹುದು.

ಇಷ್ಟೆಲ್ಲ ವಿಷಯ ಕೊರೆಯುವುದಕ್ಕೆ ಕಾರಣ ವಿಜ್ಞಾನ ಕಂಡಷ್ಟೂ ಇನ್ನೂ ಇನ್ನೂ ನಿಗೂಢವಾಗುವ ಬ್ರಹ್ಮಾಂಡ ರಹಸ್ಯ. ಪುರಾಣಗಳಿಗೆ ನಮ್ಮ ಶಂಕರರು ಅಷ್ಟೊಂದು ಮಹತ್ವವನ್ನು ಕೊಡಲಿಲ್ಲವಾದರೂ, ಅಲ್ಲಗಳೆಯಲಿಲ್ಲ. ಶಂಕರರು ಕೇವಲ ಸನ್ಯಾಸಿ ಎಂಬುದಕ್ಕಿಂತ ಅವರು ದಾರ್ಶನಿಕರಾಗಿದ್ದರು. ಪ್ರಾಯಶಃ ಪುರಾಣಗಳಲ್ಲಿ ಹೇಳಿದ್ದಕ್ಕಿಂತ ಉನ್ನತವಾದ ವಿಷಯಗಳನ್ನು ಅವರು ದರ್ಶಿಸಿರಬಹುದು. ಇನ್ನೊಂದು ಕಾರಣವೆಂದರೆ ಒಂದೊಂದು ಪುರಾಣದಲ್ಲಿ ಒಂದೊಂದು ದೇವ ಅಥವಾ ದೇವಿಯನ್ನು ಪ್ರಧಾನವಾಗಿ ವರ್ಣಿಸಿ ಎಲ್ಲದಕ್ಕಿಂತ ದೊಡ್ಡ ಶಕ್ತಿ ಎಂದರೆ ಅದೇ ಎನ್ನಲಾಗಿದೆ. ಇಲ್ಲಿ ಜನಸಾಮಾನ್ಯರಿಗೆ ಯಾರು ಹೆಚ್ಚು ಮತ್ತು ಯಾರು ಕಡಿಮೆ ಎಂಬ ಗೊಂದಲಗಳೂ ಹುಟ್ಟಿಕೊಳ್ಳುತ್ತವೆ. ಶ್ರುತಿ ಮತ್ತು ಸ್ಮೃತಿಗಳಲ್ಲಿ ಶ್ರುತಿವಾಕ್ಯವೇ ಪ್ರಮಾಣ ಎಂದು ಮೀಮಾಂಸೆಯಲ್ಲಿ, ಶಾಸ್ತ್ರಗಳಲ್ಲಿ ಹೇಳಿದ್ದಾರೆ.

ವಾಸ್ತವವಾಗಿ ವೇದಗಳು ವಿಗ್ರಹಾರಾಧನೆಯನ್ನು ಎತ್ತಿ ಹಿಡಿಯಲಿಲ್ಲ; ವೇದಗಳಲ್ಲಿ ಯಜ್ಞಗಳೇ ಪ್ರಮುಖ ಆರಾಧನಾ ಪದ್ಧತಿಗಳಾಗಿವೆ. ಮನೀಷಿಗಳು ಹಲವು ರೂಪಗಳಲ್ಲಿ ಕಂಡ ಶಕ್ತಿಯ ಮೂಲ ನಿರಾಕಾರ ಎಂಬುದೇ ಸತ್ಯ; ಅಲ್ಲಿ ಏಕ ಅನೇಕವಾಗುತ್ತದೆ ಮತ್ತು ಅನೇಕ ಏಕವಾಗುತ್ತದೆ! ಹಲವು ಕತೆಗಳಲ್ಲಿ ದೇವರ ಮಕ್ಕಳ ಸಂಗತಿಗಳು ಬರುತ್ತವೆ. ಆದರೆ ದೇವಿಯರು ಗರ್ಭಧರಿಸಿದ್ದ ಬಗ್ಗೆ ಎಲ್ಲೂ ಪ್ರಸ್ತಾಪ ಬರುವುದಿಲ್ಲ ನೋಡಿ. ಮಹಾಲಕ್ಷ್ಮಿ ಗರ್ಭಧರಿಸಿದ್ದಳೆಂದಾಗಲೀ, ಪಾರ್ವತಿ ಅಥವಾ ಸರಸ್ವತಿ ಬಸುರಿಯಾಗಿದ್ದಳೆಂದಾಗಲೀ ಕೇಳಿದ್ದೀರೇ?

ಅಲ್ಲಿನ ಮಕ್ಕಳೆಲ್ಲ ಅಯೋನಿಜರು ಅಥವಾ ಮಾನಸ ಪುತ್ರರು. ಯಾಕೆಂದರೆ ಒಂದೇ ಶಕ್ತಿಯ ಹಲವು ರೂಪಗಳವು. ಹೀಗಾಗಿ ದೇವರಲ್ಲಿ ತಾರತಮ್ಯವಿಲ್ಲ, ದರ್ಜೆಗಳಿಲ್ಲ. ಅದೆಲ್ಲ ಮಾನವ ಕಲ್ಪನೆ ಅಷ್ಟೆ. ಹರಿ ಎಂದಾದರೂ ಕರೆಯಿರಿ, ಹರ ಎಂದಾದರೂ ಹೇಳಿರಿ ಎಲ್ಲವೂ ಒಂದೇ ಶಕ್ತಿಯ ಹೆಸರುಗಳೇ. ಹಾಗಾಗಿಯೇ ಸಹಸ್ರನಾಮಗಳಲ್ಲಿ ಬಹುತೇಕ ಹೆಸರುಗಳು ಅದದೇ ಆಗಿರುವುದನ್ನು ಕಾಣಬಹುದು.

ಮೊನ್ನೆ ನವರಾತ್ರಿಯಲ್ಲಿ ಕೆಲವೆಡೆ ದೇವಿಮಹಾತ್ಮೆ ಅಥವಾ ಸಪ್ತಶತಿ ಪಾರಾಯಣ ನಡೆಸಿದ ಬಗ್ಗೆ ಕೇಳಿರಬಹುದಲ್ಲ? ಅದರಲ್ಲಿ ದೇವಿಯನ್ನು ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕಿ ಎಂದು ಹೇಳುತ್ತಾರೆ. ಬ್ರಹ್ಮಾಂಡವೆಂದರೆ ನಮ್ಮ ಬ್ರಹ್ಮಾಂಡವಷ್ಟೆ ಅಲ್ಲ ಎಂಬುದು ಸ್ಪಷ್ಟ. ಮಹರ್ಷಿ ವೇದವ್ಯಾಸ ಕೃತ ಅಷ್ಟಾದಶ ಪುರಾಣಗಳಲ್ಲಿ ಅತ್ಯಂತ ಮಹತ್ವದ ಪುರಾಣವೆನಿಸಿದ ಬ್ರಹ್ಮಾಂಡ ಪುರಾಣದಲ್ಲಿ ಬ್ರಹ್ಮಾಂಡ ನಿರ್ಮಾಣದ ರಹಸ್ಯವನ್ನು ವಿವರಿಸಲಾಗಿದೆ. ಬ್ರಹ್ಮನಿಂದ ನಿರ್ಮಾಣಗೊಂಡು ಬೃಹತ್ ಸ್ವರ್ಣಯುಕ್ತ ಅಂಡದಿಂದ ರಚಿತವಾದದ್ದು.

ಪಂಚಭೂತಾತ್ಮಕವಾದ ಈ ಪ್ರಪಂಚವನ್ನು ಖಗೋಳಶಾಸ್ತ್ರದಲ್ಲಿ ನಾವು ಕ್ಷೀರಪಥವೆಂತಲೂ, ಪಾಶ್ಚಿಮಾತ್ಯರು ಗೆಲಾಕ್ಸಿ ಅಂತಲೂ ಕರೆಯುವುದು ವಾಡಿಕೆ. ಬ್ರಹ್ಮಾಂಡ ಪುರಾಣದಲ್ಲಿ ಅಂಡದಿಂದ ಪಿಂಡ, ಪಿಂಡದಿಂದ ಬ್ರಹ್ಮಾಂಡ ಹೇಗೆ ನಿರ್ಮಾಣವಾಯಿತು ಎಂಬ ಸಂಪೂರ್ಣ ವಿವರಣೆ ಇದೆ. ಸೃಷ್ಟಿಕರ್ತ ಬ್ರಹ್ಮನು ಈ ವಿಶ್ವವು ಒಂದು ಸುವ್ಯವಸ್ಥೆಗೆ ಒಳಪಟ್ಟು ಹೇಗೆ ಕೋಟಿ ಕೋಟಿ ಯುಗಗಳಿಂದ ನಡೆಯುತ್ತಿದೆ ಎಂಬುದನ್ನೂ, ವಿಶ್ವ ಮೂಲತತ್ವದ ದಿವ್ಯ ದರ್ಶನವನ್ನೂ ಪ್ರಕಾಶಪಡಿಸುತ್ತಾನೆ.

ವಿಶ್ವದ ಸಕಲ ವ್ಯವಹಾರಗಳು ಬ್ರಹ್ಮ ನಿರ್ಮಿತ ಬೃಹತ್ ಬಂಗಾರದ ಅಂಡದಿಂದ ಪ್ರಾರಂಭಗೊಂಡು ಯಾವಾಗ ಹೇಗೆ ಅಂತ್ಯವಾಗುತ್ತದೆ ಎಂಬುದರ ಉಲ್ಲೇಖವಿದೆ. ಗ್ರಹ, ತಾರೆ, ಧೂಮಕೇತುಗಳ ಧಾತು, ಪರಿಭ್ರಮಣಗಳಂಥ ಸಕಲ ವಿಷಯಗಳೂ ವಿಸ್ತಾರವಾಗಿ ಹೇಳಲ್ಪಟ್ಟಿವೆ. ಇದು ಶ್ರುತಿಸಿದ್ಧವೂ ಆದ ವಿಚಾರವೂ ಆಗಿದೆ ಎಂಬುದು ನಮ್ಮ ಪೂರ್ವಿಕರ ನಿಲುವು. ವ್ಯೂಮಕ್ಕೆ ಸಂಬಂಧಿಸಿದ ಸಕಲ ವಿಚಾರಗಳು, ಅನಂತಕಾಲದ ವಿವರಣೆ, ಯುಗಗಳು, ಕಲ್ವ, ಮನ್ವಂತರ, ಪರ ಇವುಗಳ ವರ್ಣನೆ ಇದೆ.

ವಿಶ್ವದ ಶಾಶ್ವತ ಸತ್ಯ ಮತ್ತು ತತ್ವ ಯಾವುದು ಎಂಬುದರ ವಿವರಣೆಯೂ ಅದರಲ್ಲಿದೆ. ಭರತ ಖಂಡ, ಭರತ ವರ್ಷ, ಜಂಬೂದ್ವೀಪವೆಂದು ಸಂಕಲ್ಪಶ್ಲೋಕಗಳಲ್ಲಿ ಭೌಗೋಳಿಕವಾಗಿ ನಾವು ಗುರುತಿಸಿರುವ ಜಂಬೂದ್ವೀಪದ ಸಂಪೂರ್ಣ ವರ್ಣನೆ, ಸಪ್ತದ್ವೀಪಗಳ ವರ್ಣನೆ, ಸಪ್ತ ಸಮುದ್ರಗಳ ವರ್ಣನೆ ಅದರಲ್ಲಿದೆ.

ಭರತ, ಪೃಥು ಮತ್ತು ಅಗ್ನಿ ಮೊದಲಾದ ಚಕ್ರವರ್ತಿಗಳ ವಂಶಾವಳಿಗಳ ವರ್ಣನೆಯೂ ಇದೆ. ವಿಶೇಷವೆಂದರೆ ರಾಮಾಯಣವನ್ನು ಅಲ್ಲಿ ’ಅಧ್ಯಾತ್ಮ ರಾಮಾಯಣ’ಎಂದು ಏಳು ಕಾಂಡಗಳಲ್ಲಿ ವಿಭಾಗಿಸಿ ಶ್ರೀರಾಮಾವತಾರದ ಉದ್ದೇಶ, ಲೋಕೋದ್ಧಾರಕ್ಕಾಗಿ ಮಾನವನಾಗಿ ಅವತರಿಸಿದ ಮಹಾವಿಷ್ಣು, ದೈವತ್ವ ಮರೆತು ಸಾಧಾರಣ ಮಾನವನಂತೆ ಬದುಕಿ ಉನ್ನತ ಆದರ್ಶಗಳನ್ನು ಪರಿಪಾಲಿಸಿ, ಮರ್ಯಾದ ಪುರುಷೋತ್ತಮನೆನಿಸಿಕೊಂಡವರ ವರ್ಣನೆ ಇದೆ.

ಜೊತೆಗೆ ಕೃಷ್ಣಾವತಾರದ ದಿವ್ಯ ಸಂದೇಶ, ಮಹಾತ್ಕಾರ್ಯಗಳ ಜಾಜ್ವಲ್ಯ ವರ್ಣನೆ, ರಾಧಾಕೃಷ್ಣರ ಪ್ರೇಮಕತೆ-ಭಕ್ತಿ- ರಮ್ಯತೆಗಳ ಗೂಢಾರ್ಥ, ತನ್ಮೂಲಕ ದೈವತ್ವ ಪಡೆಯುವ ಸೋಪಾನ ಯಾವುದು ಎಂಬುದರ ವಿವರಣೆ ಹುದುಗಿದೆ. ಒಟ್ಟಿನಲ್ಲಿ ನಾವು ಕಂಡ ಬ್ರಹ್ಮಾಂಡವಷ್ಟೇ ಅಲ್ಲ ಇನ್ನೂ ಕೋಟ್ಯಧಿಕ ಸಂಖ್ಯೆಯ ಬ್ರಹ್ಮಾಂಡಗಳಿವೆ ಎಂಬುದಂತೂ ನಿಸ್ಸಂದೇಹ.

ವರ್ಷದ ಹಿಂದೆ ವಿಜ್ಞಾನಿಗಳು ನಮ್ಮ ಕ್ಷೀರಪಥದಾಚೆಗೆ ಇನ್ನೊಂದು ಕ್ಷೀರಪಥ ಗೋಚರವಾಗಿದೆ ಎಂದು ಖಚಿತಪಡಿಸಿದ್ದಾರೆ. ಅಷ್ಟೇ ಆಲ್ಲ, ನಾಸಾದ ವಿಜ್ಞಾನಿಗಳು ಭೂಮಿಯನ್ನೇ ಹೋಲುವ ಕೆಪ್ಲರ್-62ಇ ಮತ್ತು ಕೆಪ್ಲರ್-62ಎಫ್ ಎಂಬ ಗ್ರಹಗಳನ್ನು ಕಂಡುಹಿಡಿದಿದ್ದಾರೆ! ಆ ಸರಣಿಯಲ್ಲಿ ಇನ್ನೂ ಕೆಲವಿದ್ದು ಗಾತ್ರದಲ್ಲಿ ಅವು ಚಿಕ್ಕದಾಗಿವೆ ಮತ್ತು ಸ್ಥಾನ ಸ್ಥಿರತೆಯಿಲ್ಲ ಎಂದು ಹೇಳಿದ್ದಾರೆ.

ಪುರಾಣಗಳೆಲ್ಲವೂ ಸುಳ್ಳು ಎಂದು ಶಂಕರರು ಹೇಳಲಿಲ್ಲ. ಆದರೆ ಅಲ್ಲಲ್ಲಿ ಕೆಲವೆಡೆ ದ್ವಂದ್ವಗಳು ಕಾಣಿಸಿಕೊಳ್ಳುವುದರಿಂದ ಜನಸಾಮಾನ್ಯರಿಗೆ ಸಂದೇಹ ಉಂಟಾಗಬಾರದು ಎಂದು ಅವುಗಳನ್ನು ಆತುಕೊಳ್ಳಲಿಲ್ಲ. ಮೇಲಾಗಿ ಎಲ್ಲಕ್ಕಿಂತ ಹೆಚ್ಚಾಗಿ ಆಧ್ಯಾತ್ಮ ಶಿಖರವನ್ನೇರುವವರಿಗೆ ಪುರಾಣಗಳ ಕತೆಗಳೇ ಬೇಕೆಂದಿಲ್ಲ. ತಪಸ್ಸಿನ ತುರ್ಯಾವಸ್ಥೆಯಲ್ಲಿ ಅವರಿಗೆ ಸೃಷ್ಟಿಯ ರಹಸ್ಯಗಳು ಗೋಚರವಾಗುತ್ತವೆ.

ಹಾಗಂತ. “ನಮಗೆ ತುರ್ಯಾವಸ್ಥೆಯಲ್ಲಿ ರಾಮನಿಚ್ಛೆ ಏನೆಂದು ಗೊತ್ತಾಗಿ ನಾವೀಗ ಅದರಂತೆ ನಡೆದುಕೊಳ್ಳುತ್ತಿದ್ದೇವೆ” ಎಂದು ಕಾವಿಧಾರಿಗಳು ಹೇಳಿದರೂ ನಂಬುವಹಾಗಿಲ್ಲ! ನಿಜವಾಗಿ ಆ ಹಂತವನ್ನು ತಲುಪಿದ ಸನ್ಯಾಸಿ ಈ ಲೋಕದಲ್ಲಿ ಬಯಕೆಗಳಿಂದ ಮುಕ್ತನಾಗಿರುತ್ತಾನೆ. ಆರಾಧ್ಯ ದೇವರ ಇಚ್ಛೆ ಎಂಬ ನೆಪದಲ್ಲಿ ಏನನ್ನೋ ಕೇಳುವುದಿಲ್ಲ. ಅಂತಹ ಮುಮುಕ್ಷುವಿಗೆ ಜನಪ್ರಿಯತೆಯ ದಾಹ ಇರುವುದಿಲ್ಲ; ಕಂಡಲ್ಲೆಲ್ಲ ಹಲ್ಲುಕಿಸಿಯುವುದಿಲ್ಲ, ತೊನೆಯುವುದಿಲ್ಲ, ಲಿಂಗಭೇದರಹಿತನಾದರೂ ಲೌಕಿಕರ ದೃಷ್ಟಿಯಲ್ಲಿ ಭೇದವನ್ನು ಆಚರಿಸುತ್ತಾನೆ, ಮಹಿಳೆಯರಿಂದ ದೂರವಿರುತ್ತಾನೆ.

ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ |
ಚಿನ್ನದಾತುರಕಿಂತ ಹೆಣ್ಣುಗಂಡೊಲವು |
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ|
ತಿನ್ನುವುದದಾತ್ಮವನೆ-ಮಂಕುತಿಮ್ಮ

ಮನ್ನಣೆಯ ದಾಹ ಎಂಬುದು ಕೆಲವೊಮ್ಮೆ ಸನ್ಯಾಸಿಗಳನ್ನೂ ಬಿಡುವುದಿಲ್ಲ; ಯಾಕೆಂದರೆ ಅವರು ಪಕ್ಕಾ ಸನ್ಯಾಸಿಗಳಾಗಿರುವುದಿಲ್ಲ. ಪಕ್ಕಾ ಸನ್ಯಾಸಿಗಳು ಯಾರ ಮನ್ನಣೆಗಾಗಿ ಕಾಯುವುದಿಲ್ಲ. ಹಾವಾಡಿಗ ಮಠದಲ್ಲೇನಾಗಿದೆ ಎಂದರೆ ಅಲ್ಲಿನ ಸನ್ಯಾಸಿಗೂ ಮನ್ನಣೆಯ ದಾಹ; ಯಾಕೆಂದರೆ ಮನ್ನಣೆ ಹೆಚ್ಚಿದರೆ ಜನ ಹೆಚ್ಚುತ್ತಾರೆ, ವಿಶೇಷವಾಗಿ ಮಹಿಳೆಯರು ಹೆಚ್ಚುತ್ತಾರೆ; ಮಹಿಳೆಯರು ಹೆಚ್ಚಿದಾಗ ಕೆಲವರಾದರೂ ಏಕಾಂತಕ್ಕೆ ಬರುತ್ತಾರೆ!

ಹಿರಿತಲೆಗಳನ್ನು ಕಳಿಸಿ ಕಿರಿತಲೆಗಳನ್ನು ಹಾಕಿಕೊಂಡಿದ್ದರ ಹಿನ್ನೆಲೆಯೂ ಅದರಲ್ಲೇ ಅಡಗಿದೆ. ಕಚ್ಚೆಹರುಕನ ವ್ಯಭಿಚಾರ ವರ್ತನೆಯನ್ನು ಹಿರಿತಲೆಗಳು ಸೂಕ್ಷ್ಮ ಸಂವೇದನೆಗಳಿಂದಲೆ ಗುರುತಿಸಬಲ್ಲವು ಮತ್ತು ಹಿರಿತಲೆಗಳು ಹೋರಿ ಹೇಳಿದ ಹಾಗೆಲ್ಲ ಕೇಳುವುದಿಲ್ಲ. ಕಿರಿತಲೆಗಳಾದರೆ ಹಾಗಲ್ಲ; ಕೆಲವಕ್ಕೆ ಅನುಭವ ಇರೋದಿಲ್ಲ, ಕೆಲವಕ್ಕೆ ಅಂತಹ ಅನುಭವಗಳೇ ತಮಗೂ ಬೇಕು. ಮೇಲಾಗಿ ಯಾರೋ ಹೇಳಿದಹಾಗೆ ಮನ್ನಣೆಯ ದಾಹ(ಐಡೆಂಟಿಟಿ ಕ್ರೈಸಿಸ್) ಅವರನ್ನೆಲ್ಲ ಕಾಡುತ್ತಿತ್ತು. ಸಮಾಜದಲ್ಲಿ ತಾನೂ ಕಡಿಮೆಯಿಲ್ಲ ಎಂದು ಗುರುತಿಸಿಕೊಳ್ಳಬೇಕಾಗಿತ್ತು. ಬಂದು ಸೇರಿದರು.

ಬಂದವರಲ್ಲಿ ಕೆಲವರಿಗೆ ಹಣದ ರುಚಿ ಹತ್ತಿತು, ಇನ್ನು ಕೆಲವರಿಗೆ ಹೆಣ್ಣು-ಹೆಂಡಗಳ ರುಚಿ ಹತ್ತಿತು. ಹೋರಿಸ್ವಾಮಿಗಳ ಕೃಪೆಯಿಂದ ಅದೆಲ್ಲವನ್ನೂ ಪಡೆದುಕೊಂಡವರು ಆ ಋಣವನ್ನಾದರೂ ತೀರಿಸಬೇಕಲ್ಲವೇ? ಹಾಗಾಗಿಯೇ ಜೈಕಾರದ ಬಳಗ ಸಿದ್ಧವಾಯಿತು. ಜೈಕಾರದ ಬಳಗ ಹೆಚ್ಚಿದಷ್ಟೂ ಅಲ್ಲಿ ಇಲ್ಲಿ ಕಾಣುತ್ತಿದ್ದ ಅಪರೂಪದ ಹಿರಿತಲೆಗಳೂ ಕಾಣುವುದು ನಿಂತು ಹೋಯಿತು. ’ಚೋರಗುರುವಿಗೆ ಚಾಂಡಾಲ ಶಿಷ್ಯ’ ಎಂಬ ಗಾದೆ ಹುಟ್ಟಿಕೊಂಡಿದ್ದಕ್ಕೂ ಇಂತದ್ದೆ ಕಾರಣವಿರಬಹುದು.

ಯಾವುದು ಧರ್ಮ, ಯಾವುದು ಶಾಸ್ತ್ರ, ಯಾವುದು ನ್ಯಾಯ, ಯಾವುದು ನೀತಿ ಎಂಬುದರ ಬಗ್ಗೆ ನಿಖರ ವಿವರಗಳಿರುವ ಒಬ್ಬೇ ಒಬ್ಬನೂ ಅಲ್ಲಿಲ್ಲ. ಹೋರಿಸ್ವಾಮಿ ಹೇಳಿದ್ದೇ ಧರ್ಮ. ಬಾವಯ್ಯ ಹೇಳಿದ್ದೇ ನೀತಿ. ಅಂತೂ ಮಹಾಮಂತ್ರಿ ಬಾವಯ್ಯನವರು ಹೋರಿಸ್ವಾಮಿಗಳ ನಡೆಯನ್ನು ವಿರೋಧಿಸುವ ಎಲ್ಲದಕ್ಕೂ”ಖಂಡಿತಾ ಇಲ್ಲ” ಎನ್ನುತ್ತ ತಮಗೆ ಇನ್ನೂ ದಮ್ಮಿದೆ ಎಂದು ಮಾಧ್ಯಮದ ಮೂಲಕ ಬಿಂಬಿಸಿದರು; ಆ ಮುಖದಲ್ಲಿ ಕಳ್ಳತನ, ಢೋಂಗಿ ಭಾವ ಎದ್ದು ಹೊಳೆಯುತ್ತದೆ. ಮೊದಲಿನಷ್ಟು ದಮ್ಮಿಲ್ಲ; ವೀಕ್ ನೆಸ್ ಆಗಿದೆ.

ಹೆಂಡ ಕುಡಿದವ ಎಷ್ಟೇ ಬೀಡಾ ಹಾಕಿಕೊಂಡರೂ ಅನ್ನನಾಳದ ಮೂಲಕ ಜಠರದ ವಾಸನೆ ಹೊರಗೆ ಬಂದೇ ಬರುತ್ತದೆ. ಕಕ್ಕ ಮಾಡಿ ತೊಳೆದುಕೊಳ್ಳದವ ಎಷ್ಟೇ ಸೆಂಟು ಹಾಕಿಕೊಂಡರೂ ಪಕ್ಕಕ್ಕೆ ಹಾದುಹೋದರೆ ಸಾಕು ಗಕ್ಕನೆ ಮೂಗು ಕಟ್ಟಿಕೊಳ್ಳುತ್ತೇವೆ. ಕಿವಿ ಸೋರುವವ ಎಷ್ಟೇ ಹತ್ತಿ ಗಿಡಿದುಕೊಂಡರೂ ಅಷ್ಟು ದೂರದಿಂದಲೆ ನಾತ ಹೊಡೆಯದಿರುವುದಿಲ್ಲ. ಕಚ್ಚೆಹರುಕನಾದವ ಎಷ್ಟೇ ಬಚ್ಚಿಟ್ಟರೂ ಕೊಚ್ಚೆ ವಾಸನೆಯಂತೆ ಅದರ ’ನಾತ’ ಹೆಚ್ಚುತ್ತಲೇ ಹೋಗುತ್ತದೆ. ’ಹತ್ತುಸಲ ಕದ್ದವ ಒಂದು ಸಲವಾದರೂ ಸಿಕ್ಕಿಹಾಕಿಕೊಳ್ತಾನೆ’ ಎಂಬುದು ಗಾದೆ; ಸಾವಿರಾರು ಸಲ ಹಾರಿದವ, ಹಾರುತ್ತಿರುವವ, ಹಾರುತ್ತಲೇ ಇರಬೇಕೆಂದು ಸ್ಕೆಚ್ ಹಾಕಿಕೊಂಡವ ಸಿಕ್ಕಿಬೀಳದೇ ಹೋದಾನೇ? ಸಿಕ್ಕಿಬಿದ್ದಿದ್ದಾನೆ.

ಕೇಸುಗಳಲ್ಲಿ ತಾನೇ ವಿಜಯಿ ಎನಿಸಿಕೊಳ್ಳಬೇಕೆಂದು ಬಹಳ ಪ್ರಯತ್ನ ಮಾಡುತ್ತಿದ್ದಾನೆ. ಒಂದೊಮ್ಮೆ ಅಲ್ಲಿ ಗೆದ್ದರೂ ಅವನೊಬ್ಬ ಸನ್ಯಾಸಿಯಲ್ಲ ಎಂಬುದನ್ನು ನಾವೆಲ್ಲ ಒಪ್ಪಬೇಕು. ಸನ್ಯಾಸಿಯ ಯಾವ ಲಕ್ಷಣವನ್ನೂ ಇಟ್ಟುಕೊಳ್ಳದ ಕಾವಿಧಾರಿಯನ್ನು ಮಠದ ಸ್ವಾಮಿ ಹುದ್ದೆಯಿಂದ ಬರ್ಕಾಸ್ತುಗೊಳಿಸಬೇಕು.

Thumari Ramachandra

https://www.facebook.com/groups/1499395003680065/permalink/1680279352258295/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s