ರಾವಣನ್ನು ಆರಾಧಿಸುವವರಿರುವ ಇಂಡಿಯಾದಲ್ಲಿ ಕಚ್ಚೆಹರುಕನನ್ನು ಆರಾಧಿಸುವವರಿಗೆ ಕೊರತೆಯೇ?

ರಾವಣನ್ನು ಆರಾಧಿಸುವವರಿರುವ ಇಂಡಿಯಾದಲ್ಲಿ ಕಚ್ಚೆಹರುಕನನ್ನು ಆರಾಧಿಸುವವರಿಗೆ ಕೊರತೆಯೇ?

ಬೆಳಗಿನ ಸಂಧ್ಯೆಯಲ್ಲಿ ಪೂರ್ವ ಕರಾವಳಿಯಲ್ಲಿ ಸ್ನಾನಾನುಷ್ಠಾನ ನಡೆಸುತ್ತಿದ್ದ ಮಹಾಬ್ರಾಹ್ಮಣ ರಾವಣ ಸಾಯಂಕಾಲದ ಸಂಧ್ಯೆಯ ಹೊತ್ತಿಗೆ ಪಶ್ಚಿಮ ಕರಾವಳಿಯಲ್ಲಿ ಅದನ್ನು ನಡೆಸುತಿದ್ದನಂತೆ. ಆ ವಿಷಯದಲ್ಲಿ ಆತ ಅಪ್ಪನಿಗೆ ಹುಟ್ಟಿದ ಮಗ ಹೌದೆನ್ನಬಹುದು. ಆದ್ರೇನು ಮಾಡ್ತೀರಿ? ಅವ ಅಮ್ಮನಿಗೆ ಹುಟ್ಟಿದ ಮಗನೂ ಹೌದಷ್ಟೇ? ಹೀಗಾಗಿ ರಾಕ್ಷಸಿಯಾಗಿದ್ದ ಅಮ್ಮನ ಸ್ವಭಾವವೂ ಅವನಲ್ಲಿ ಮೈಗೂಡಿತ್ತು; ಅದು ೫೦:೫೦ ಎನ್ನಬಹುದು.

ತನ್ನನ್ನು ಮೀರಿಸುವವರೇ ಇಲ್ಲ ಎಂದುಕೊಂಡಿದ್ದ ಲಂಕಾಧೀಶ ವಾಲಿಯನ್ನೂ ಒಮ್ಮೆ ಕೆಣಕಿಬಿಟ್ಟಿದ್ದ. ವಾಲಿಯ ಪರ್ನನಾಲಿಟಿಯನ್ನು ವಿವರಿಸುವಾಗ ಆತ ರಾವಣನನ್ನು ಹೇಗೆ ಮುಷ್ಠಿಯಲ್ಲಿ ಸೆರೆಹಿಡಿದು ಆಟವಾಡಿದ ಎಂಬುದನ್ನು ರಾಮಾಯಣ ಬರೆದವರು ವರ್ಣಿಸುತ್ತಾರೆ. ಕೊನೆಗೆ ಹೇಗೂ ವಾಲಿ ತನ್ನಿಂದ ಸೋಲುವುದಿಲ್ಲ ಎಂದು ತಿಳಿದಾಗ ಹೆಂಡತಿಯರನ್ನೇ ಎಕ್ಚ್ ಚೇಂಜ್ ಮಾಡಿಕೊಳ್ಳುವ ಒಪ್ಪಂದಕ್ಕೆ ಬಂದು ಮಿತ್ರರಾಗುತ್ತಾರೆ -ಇಬ್ಬರೂ. ಇವತ್ತಿನ ಜಗತ್ತಿನಲ್ಲೂ ಇಂತಹ ಕಚಡಾ ಸಂಸ್ಕಾರಗಳನ್ನು ಹೊಂದಿದವರಿದ್ದಾರೆ. ಅದನ್ನು ವೈಫ್ ಸ್ವ್ಯಾಪಿಂಗ್ ಎಂದು ಅವರೇ ಹೇಳುತ್ತಾರೆ.

ವಾಲಿ ಕೆಟ್ಟಿದ್ದೇ ಹೆಂಗಸರ ಮಳ್ಳನಾಗಿ ಅಂದರೆ ವೂಮನೈಸರ್ ಆಗಿ;ಅದೊಂದು ಸ್ವಭಾವವಿಲ್ಲದಿದ್ದರೆ ಆತನನ್ನು ಮೀರಿಸುವವರೇ ಇರದ ಅಸಾಮಾನ್ಯನವನು. ಶ್ರೀರಾಮ ಮಹಾವಿಷ್ಣುವಿನ ಪೂರ್ಣಾವತಾರ ಎನಿಸಿದವ. ಅಂತಹ ಶ್ರೀರಾಮನ ಶಕ್ತಿ-ಸಾಮರ್ಥ್ಯಗಳೇ ಎದುರುನಿಂತಾಗ ವಾಲಿಗೆ ವರ್ಗಾವಣೆಗೊಂಡುಬಿಡುತ್ತಿದ್ದವಂತೆ; ಅಂದರೆ ಅಂತಹ ವರಗಳನ್ನು ಪಡೆದುಕೊಂಡವ ವಾಲಿ. ವಾಲಿಯ ವಧೆಯನ್ನು ಮರೆಯಲ್ಲಿ ನಿಂತು ಶ್ರೀರಾಮ ನಡೆಸಿದ.

“ಸಮಾನ ಶೀಲೇಷು ವ್ಯಸನೇಷು ಸಖ್ಯಂ” ಎಂಬ ಮಾತು ಹುಟ್ಟಿದ್ದೇ ವಾಲಿ-ರಾವಣರ ಮೈತ್ರಿಯಿಂದ ಎನ್ನಬಹುದು. ರಾವಣನೂ ವೂಮನೈಸರ್. ಇಂದಿಗೂ ರಾಜಕಾರಣಿಗಳಲ್ಲಿ, ಸಿನಿಮಾ ತಾರೆಯರಲ್ಲಿ, ಸಾಮಾಜಿಕ ಮುಖಂಡರಲ್ಲಿ ಹಲವರು ವಾಲಿ-ರಾವಣರ ಈ ಸ್ವಭಾವವನ್ನು ಚಾಚೂ ತಪ್ಪದೆ ಪಾಲಿಸುವವರಿದ್ದಾರೆ. ಸುಂದರ ಮಹಿಳೆಯರನ್ನು ಕಂಡರೆ ಅವರ ಬಾಯಲ್ಲಿ ತಕ್ಷಣದಲ್ಲೇ ಜೊಲ್ಲು ಒಸರುತ್ತದೆ. ಮಹಿಳೆಯರ ಬೆನ್ನುಹತ್ತುವ ಅವರು ಹೇಗಾದರೂ ಮಾಡಿ ತಮ್ಮ ಖೆಡ್ಡಾಕ್ಕೆ ಕೆಡವಿಕೊಂಡು ’ಗೋವಿಂದ ಕಲೆ’ಯನ್ನು ಪ್ರಯೋಗಿಸುತ್ತಾರೆ.

ಪ್ರಾಣಿಗಳಿಗೂ ಮನುಷ್ಯನಿಗೂ ವ್ಯತ್ಯಾಸ ಇರುವುದೇ ಪ್ರಮುಖವಾಗಿ ಈ ವಿಷಯದಲ್ಲಿ. ಪ್ರಾಣಿಗಳನ್ನು ನೋಡಿ, ಅಪ್ಪಯಾರೋ, ಅಮ್ಮ ಯಾರೋ, ಹಾರುವ ಹರೆಯಕ್ಕೆ ಬಂದಮೇಲೆ ಸೇರುವುದೊಂದೇ ಅವುಗಳ ಗುರಿ. ಅಕ್ಕ-ತಂಗಿ,ಅಣ್ಣ-ತಮ್ಮ ಈ ರೀತಿಯ ಯಾವ ಪರಿಭೇದವನ್ನೂ ಅವು ಅರಿಯಲಾರವು. ಸೃಷ್ಟಿವೈಚಿತ್ರ್ಯವೆಂಬಂತೆ ಇಷ್ಟಿದ್ದೂ ಅವುಗಳಲ್ಲಿ ಅಂಗವೈಕಲ್ಯ ಕಾಣುವುದು ಕಡಿಮೆ. ಮನುಷ್ಯನೇನಾದರೂ ಹಾಗಿದ್ದರೆ ಇಷ್ಟು ಹೊತ್ತಿಗೆ ಒಂಟಿಗಣ್ಣಿನವರೋ ಒಂಟಿಗಾಲಿನವರೋ ಅಥವಾ ಇನ್ನಾವುದೋ ಹೊಸ ತಳಿಗಳು ಹುಟ್ಟಿಕೊಂಡು ನಾನಾಚಾರಗಳು ನಡೆದುಬಿಡುತ್ತಿದ್ದವು.

ವೈಜ್ಞಾನಿಕವಾಗಿ ಪ್ರಾಣಿವರ್ಗಕ್ಕೇ ಸೇರಿದ ಮನುಷ್ಯನಲ್ಲೂ ಸಂತಾನಾಭಿವೃದ್ಧಿಯ ಸಹಜ ಗುಣಗಳು ಇದ್ದೇ ಇರುತ್ತವೆ. ಆದರೆ, ಅವಘಡಗಳು ಸಂಭವಿಸಬಾರದೆಂದು ಅರಿತ ಸಂಸ್ಕಾರವಂತ ಅನುಭಾವಿ ಮುನಿಜನ, ಅದಕ್ಕೊಂದು ನೀತಿ ನಿಯಮಗಳ ಸಂವಿಧಾನವನ್ನು ರೂಪಿಸಿದರು. ಆ ಪ್ರಕಾರವಾಗಿ ಯಾರ್ಯಾರು ಹೇಗೆಲ್ಲ ನಡೆದುಕೊಳ್ಳಬಹುದು ಮತ್ತು ಹೇಗೆಲ್ಲ ನಡೆದುಕೊಳ್ಳಬಾರದು ಎಂಬುದನ್ನು ತಿಳಿಸಿದ್ದಾರೆ. ಹೀಗಿದ್ದೂ ಅಂತಹ ಸಂವಿಧಾನವನ್ನು ಮುರಿದು, ’ಕದ್ದುಮೇಯುವ’ ಕೆಲವರು ಹಿಂದಿನಿಂದಲೂ ಇದ್ದರು, ಈಗಲೂ ಇದ್ದಾರೆ.

ಜನ್ಮಜಾತವಾದ ಇಂತಹ ಸ್ವಭಾವಗಳನ್ನು ಯೋಗ-ಧ್ಯಾನಾದಿಗಳಿಂದ ಕಳೆದುಕೊಂಡು ಅಲೌಕಿಕವಾದ ವಿಶೇಷ ಸ್ವಭಾವಗಳನ್ನು ರೂಢಿಸಿಕೊಳ್ಳುವವರು ಮನುಷ್ಯರಲ್ಲೇ ಶ್ರೇಷ್ಠರೆನಿಸಿಕೊಳ್ಳುತ್ತಾರೆ. ಭಗವಂತನೆಂಬ ಶಕ್ತಿಯ ಸನಿಹಕ್ಕೆ ಹೆಜ್ಜೆ ಮುಂದಿಡುವ ಅವರನ್ನು ಸಮಾಜ ಗುರುವೆಂದು ಗೌರವಿಸುತ್ತದೆ ಮತ್ತು ಅಂತಹ ಗುರುವನ್ನು ಅನುಸರಿಸುತ್ತದೆ. ಹೀಗಿರುವ ಈ ಗುರುಪಥವನ್ನು ತುಳಿಯುವ ಜನರಿಗೆ ಕೆಲವು ವೈದಿಕ ವಿಧಿವಿಧಾನಗಳು ಅನ್ವಯಿಸುತ್ತವೆ.

ಯಾವುದೇ ಎಣ್ಣೆಯೂ ತಯಾರಾದ ಮೊದಲ ಹಂತದಲ್ಲಿ ಬೇಡದ ಅಂಶಗಳನ್ನು ಅಡಕಮಾಡಿಕೊಂಡಿರುತ್ತದೆ. ಹಲವು ಬಾರಿ ಫಿಲ್ಟರ್ ಮಾಡಿದಾಗ ಪ್ಯೂರಿಫೈಡ್ ತೈಲವಾಗಿ ಬಳಕೆಗೆ ಯೋಗ್ಯವಾಗುತ್ತದೆ. ಹಸುವಿನಿಂದ ಪಡೆದ ಹಾಲು ಹಲವು ಹಂತದ ಸಂಸ್ಕಾರಗಳನ್ನು ಪಡೆದ ನಂತರ ತುಪ್ಪ ಲಭ್ಯವಾಗುತ್ತದೆ. ಎಷ್ಟೋ ವೈದಿಕ ಕರ್ಮಾಂಗಗಳಲ್ಲಿ ತುಪ್ಪದಿಂದ ಸ್ಪರ್ಶಿಸಿದರೆ ಅದು ಶುದ್ಧವಾಗುತ್ತದೆ ಎಂಬ ಪರಿಕಲ್ಪನೆ ಬಂದಿದ್ದು ಅದಕ್ಕೆ.

ಮಹಾತ್ಮರೊಬ್ಬರಲ್ಲಿ ಮಾತನಾಡಿದಾಗ ಅನುಭವದಿಂದ ಹೇಳಿದ್ದಾರೆ-ಶೇಂಗಾ ಹಸಿಯಿದ್ದರೆ ಬೂಸಲುಬಂದು ಹಾಳಾಗುತ್ತದೆ, ಸರಿಯಾಗಿ ಬೆಳೆದು ಒಣಗಿದ್ದರೆ ಬೀಜಕ್ಕೆ ಬಳಸಬಹುದು, ಅಡುಗೆಗೆ ಬಳಸಬಹುದು, ಅಡುಗೆಯಲ್ಲಿ ಶೇಂಗಾವನ್ನು ಸಿಪ್ಪೆತೆಗೆದು ನೇರವಾಗಿ ಬಳಸುತ್ತಾರೆ, ಹುರಿಯುತ್ತಾರೆ, ಕರಿಯುತ್ತಾರೆ, ಇಂದಂತೂ ಶೇಂಗಾ ರೂಪಾಂತರಗೊಂಡ ಹಲವು ಮಾದರಿಗಳಲ್ಲಿ ಲಭ್ಯವಾಗುತ್ತದೆ. ಆತ್ಮವೆಂಬುದೇ ಶರೀರದಲ್ಲಿ ಚೈತನ್ಯ, ಶಕ್ತಿ. ಆತ್ಮಕ್ಕೆ ತನ್ನ ಮೂಲಸ್ವಭಾವಗಳು ಮರವೆಯಾಗಿ ಅದು ಲೌಕಿಕದ ಬದುಕಿಗೆ ಅಂಟಿಕೊಂಡಿರುತ್ತದೆ. ಜನ್ಮಾಂತರಗಳ ಸಂಚಿತ ಕರ್ಮಫಲಗಳನ್ನು ಮೆತ್ತಿಕೊಂಡು ಜೀವಾತ್ಮವೆನಿಸಿಕೊಳ್ಳುತ್ತದೆ.

ಶರೀರದಲ್ಲಿ ಮೂರು ರೀತಿ-ಭೌತಿಕ ಶರೀರ, ಸೂಕ್ಷ್ಮ ಶರೀರ ಮತ್ತು ಲಿಂಗ ಶರೀರ. ಹೊರನೋಟಕ್ಕೆ ನಮಗೆ ಭೌತಿಕ ಶರೀರ ಮಾತ್ರ ಕಾಣುತ್ತದೆ. ಮಿಕ್ಕೆರಡು ಶರೀರಗಳು ಭೌತಿಕ ಶರೀರದೊಳಗೆ ಆಶ್ರಯ ಪಡೆಯುತ್ತವೆ. ಇಂತಹ ಶರೀರಗಳನ್ನು ವಿರ್ಸರ್ಜಿಸಿ ಶರೀರ ರಹಿತವಾಗುವುದು ನಿಜವಾದ ಮುಕ್ತಿ. ಹಾಗಾಗಬೇಕೆಂದರೆ ಹುರಿದ ಅಥವಾ ಕರಿದ ಶೇಂಗಾದಂತೆ ಜೀವಾತ್ಮಕ್ಕೆ ಸಂಸ್ಕಾರವಾಗಬೇಕು. ಜೀವಾತ್ಮಕ್ಕೆ ಉಚ್ಚಮಟ್ಟದ ಸಂಸ್ಕಾರಗಳು ಸಿಗುವವರೆಗೆ ಲೌಕಿಕ ಮತ್ತು ಅಲೌಕಿಕ ಭೇದಗಳನ್ನು ಅರಿಯುವುದೇ ಸಾಧ್ಯವಾಗದು.

ಭೂಮಿಯ ಗುರುತ್ವಾಕರ್ಷಣೆಯಿಂದ ತಪ್ಪಿಸಿಕೊಳ್ಳಬೇಕೆಂದರೆ ಸೆಕೆಂಡಿಗೆ ಏಳು ಮೈಲುಗಳ ವೇಗ ಇರಬೇಕಾಗುತ್ತದೆ; ಹಾಗಿದ್ದರೆ ಮಾತ್ರ ಉಪಗ್ರಹ ಕಕ್ಷೆಗೆ ಹೋಗಲು ಸಾಧ್ಯ; ಇನ್ನೇನು ಕಕ್ಷೆ ಸೇರುವ ಹಂತದಲ್ಲೂ ಅದರ ಕಂಟ್ರೋಲ್ ತಪ್ಪಬಹುದು. ಅದರಂತೆ ಪರಮಾತ್ಮನನ್ನು ಸೇರುವ ಹಂತದ ವರೆಗೆ ಜೀವಾತ್ಮ ಸಾಗಬೇಕಾದ ವೇಗದ ಹಾದಿಯೇ ಪರಮ ಆಧ್ಯಾತ್ಮ ಅಥವಾ ಮುಕ್ತಿಪಥ. ಅಂತಹ ಪಥದ ಪಥಿಕರಾಗಲು ಅರ್ಹತೆಗಳ ಮಾನದಂಡವಿದೆ. ಪಾತಂಜಲ ಯೋಗ ಸೂತ್ರ ಅದನ್ನು ವಿವರಿಸುತ್ತದೆ. ಇನ್ನು ಇದಕ್ಕೆ ಅಪವಾದವೋ ಎಂಬಂತೆ ಪೂರ್ವಜನ್ಮದ ಪುಣ್ಯವಿಶೇಷದಿಂದ ಜನ್ಮಜಾತ ವೈರಾಗ್ಯವನ್ನು ಪಡೆದು ತಮ್ಮನ್ನೇ ತಾವು ಅರಿಯುವವರಿರುತ್ತಾರೆ; ಅದು ಅಪರೂಪ.

ಸನ್ಯಾಸದಲ್ಲಿ ಹಲವು ಹದಿನೆಂಟು ವಿಧಾನಗಳಿವೆ. ಆದರೆ ಎಲ್ಲಾ ಸನ್ಯಾಸಿಗಳಿಗೂ ಕಾಮನ್ [ಸಾಮಾನ್ಯ] ನಿಯಮಗಳು ಒಂದೇ. ಮೂಲತಃ ಸನ್ಯಾಸಿ ವಿರಾಗಿಯಾಗಿರಬೇಕು, ಲೌಕಿಕ ಸುಖೋಪಭೋಗಗಳ ಆಸೆ ತಟ್ಟಗೂ ಇರಕೂಡದು. ಅವನ ಆಚರಣೆ, ಅನುಸಂಧಾನ ಇವುಗಳಲ್ಲೆಲ್ಲ ಆಡಂಬರ ಇರಲೇಬಾರದು.

ಚತ್ವಾರೋ ವೇದಾಃ ಶಿಕ್ಷಾ ಕಲ್ಪೋ ವ್ಯಾಕರಣಂ ಛಂದೋವಿಚಿತಿರ್ಜೋತಿಷಂ ನಿರುಕ್ತ ಮಿತಿ ಷಡಂಗಾನೀತಿಹಾಸಪುರಾಣೆ ಮೀಮಾಂಸಾನ್ಯಾಯಶಾಸ್ತ್ರಂ ಚೇತಿ ಚತುರ್ದಶವಿದ್ಯಾಸ್ಥಾನಾನಿ ತ್ರಯೀ || ೨೦೨ ||

ಅರ್ಥ : ಚತ್ವಾರ = ನಾಲ್ಕು, ವೇದಾಃ = ವೇದಾಂಗಳು, ಶಿಕ್ಷಾ = ಸ್ವರವರ್ಣಸಂಸ್ಕಾರಶಿಕ್ಷೆ, ಕಲ್ಪಃ = ಪ್ರಾಯಶ್ಚಿತ್ತಗ್ರಂಥ, ವ್ಯಾಕರಣಂ = ಶಬ್ದಸಿದ್ದಿಯನ್ನು ಮಾಡುವ ವ್ಯಾಕರಣ, ಛಂದೋಃವಿಚಿತಿಃ = ಛಂದಃಶಾಸ್ತ್ರ, ಜ್ಯೋತಿಷಂ = ಜೋತಿಷಶಾಸ್ತ್ರ, ನಿರುಕ್ತ, ಉಪನಿಷದ್ವಾಕ್ಯ ಇತ್ಯಾದಿಗಳು ಸೇರಿ-ಷಡಂಗಾನಿ = ಆರು ಅಂಗಗಳು, ಇತಿಹಾಸಪುರಾಣೇ = ಇತಿಹಾಸ, ಪುರಾಣ, ಮೀಮಾಂಸಾ = ಪೂರ್ವಜ ಮುನಿಜನರ ವಿಮರ್ಶೆ, ನ್ಯಾಯಶಾಸ್ತ್ರಂ ಚೇತಿ = ನ್ಯಾಯಶಾಸ್ತ್ರ, ಚತುರ್ದಶ = ಹದಿನಾಲ್ಕು, ವಿದ್ಯಾಸ್ಥಾನಾನಿ = ವಿದ್ಯಾಸ್ಥಾನಂಗಳು. ರಾಜಸನ್ಯಾಸ ದೀಕ್ಷೆ ಪಡೆಯುವವನು ಈ ಎಲ್ಲ ವಿದ್ಯಾಸ್ಥಾನಗಳಲ್ಲಿ ಪಾರಂಗತನಾಗಿರಬೇಕು.

[ಅದಿಲ್ಲದಿದ್ದರೆ ಏನಾಗುತ್ತದೆ? ಒಂದು ಉದಾಹರಣೆ: ಕೃಷ್ಣಮೂರ್ತಿ ಭಟ್ಟರು ಕೃಷಿಯಲ್ಲಿ ಪಾರಂಗತರಾಗಿದ್ದರು. ಕೂಲಿ ಆಳುಗಳು ಅವರನ್ನು ಕಂಡರೆ ಹೆದರುತ್ತಲೇ ಕೆಲಸ ಮಾಡುತ್ತಿದ್ದರು. ಒಮ್ಮೆ ಅವರ ಮಗನನ್ನು ತೋಟಕ್ಕೆ ಕಳಿಸಿದರು. ನಗರವಾಸಿ ಮಗನಿಗೆ ಕೃಷಿಕೆಲಸ ಗೊತ್ತಿಲ್ಲ. ಕೂಲಿ ಆಳುಗಳು ಮಗನೊಟ್ಟಿಗೆ ಪಟ್ಟಂಗ ಹೊಡೆಯುತ್ತ ಕಾಲ ಕಳೆದರು. ತೋಟಕ್ಕೆ ಹೋದ ಮಗನನ್ನು ಮರೆಯಲ್ಲಿ ನಿರೀಕ್ಷಿಸಲು ಬಂದ ತಂದೆಗೆ ಗಾಬರಿಯಾಯಿತು. ಕಂಡರೂ ಕಾಣದಂತೆ ಅವರಾರಿಗೂ ಕಾಣಿಸಿಕೊಳ್ಳದೆ ಮನಗೆ ಮರಳಿದರು. ಮನೆಗೆ ಬಂದ ಮಗ ಊಟಕ್ಕೆ ಕುಳಿತಾಗ ಕೂಲಿಗಳು ಹೇಳಿದ ಅನುಭವಗಳನ್ನು ತಂದೆಗೆ ಹೇಳಿದ. ಮೂರು ಗಂಟೆಯಲ್ಲಿ ಮಾಡಿ ಮುಗಿಸುವ ಕೆಲಸಕ್ಕೆ ಮೂರು ವಾರಗಳ ಸಮಯ ಬೇಕಾಗುತ್ತದೆ ಎಂದು ಅವರು ಹೇಳಿದ್ದರು! ಮಗನಿಗೆ ತನ್ನ ಅನುಭವ ಹೇಳಿದ ಭಟ್ಟರು ಮಾರನೇ ದಿನ ಆ ಕೆಲಸಗಳನ್ನು ಮೂರು ಗಂಟೆಗಳಲ್ಲಿ ಮಾಡಿಮುಗಿಸುವಂತೆ ನೋಡಿಕೊಂಡರು. ಶಾಸ್ತ್ರಾರ್ಥಗ್ರಂಥಗಳಲ್ಲಿ ಪಾಂಡಿತ್ಯ ಇಲ್ಲದ ವ್ಯಕ್ತಿಗೆ ಯಾರೋ ಹೇಳಿದ್ದೇ ಸತ್ಯವೆನಿಸಬಹುದು. ಹೀಗಾಗಿ ಅಂತಹ ವ್ಯಕ್ತಿ ರಾಜಸನ್ಯಾಸದ ಹುದ್ದೆಗೆ ಯೋಗ್ಯನಲ್ಲ.]

ಶ್ರೀಧರಾಶ್ರಮದಲ್ಲಿ ತುಮರಿ ಹಿಂದೊಮ್ಮೆ ಸನ್ಯಾಸಿಯೊಬ್ಬರನ್ನು ಕಂಡಿದ್ದ. ಜೊತೆಗೆ ಯಾರೆಂದರೆ ಯಾರೂ ಇರಲಿಲ್ಲ. ಉಟ್ಟ ಕಾವಿ ಬಟ್ಟೆ ಹಳೆಯದಾಗಿ ಅಲ್ಲಲ್ಲಿ ಚಿಂದಿಯಾಗಿತ್ತು. ಮೆಟ್ಟಿದ ಮರದ ಪಾದುಕೆಯಲ್ಲಿ ಒಂದರ ತುದಿಯ ಭಾಗ ತುಂಡಾಗಿಹೋಗಿತ್ತು. ಯೋಗದಂಡ, ಕಮಂಡಲ, ಒಂದೆರಡು ಕಾವಿ ಬಟ್ಟೆಗಳಷ್ಟೇ ಅವರ ಸ್ವತ್ತು. ಆಶ್ರಮದಲ್ಲಿ ಅವರು ಪುಟ್ಟ ಲೋಟವೊಂದರಲ್ಲಿದ್ದ ನೆನೆದು ಮುಷ್ಠಿಯಷ್ಟಾಗಿದ್ದ ಹೆಸರುಕಾಳನ್ನು ತಿಂದರು, ಅಲ್ಲಿಗೆ ಅವರ ಆಹಾರ ಸಮಾಪ್ತಿ, ತಿರುಗಿ ನಾಳೆಯೇ! ಅವರ ಮುಖಮಂಡಲದಲ್ಲಿ ಶ್ರೀಧರರ ಅಪ್ಪಟ ಶಿಷ್ಯನ ದರ್ಶನ ತುಮರಿಗೆ ಲಭಿಸಿತು, ಅರಿವಿಲ್ಲದೇ ಕಣ್ಣಿಂದ ಹನಿಗಳೆರಡು ಜಾರಿದವು. ಅಂತಹ ಮಹಾತ್ಮರು ತಮ್ಮ ನಾಳೆಗಳ ಬಗೆಗೆ ಚಿಂತಿಸುವುದಿಲ್ಲ, ಎಲ್ಲಿದ್ದರೆ ಏರ್ ಕೂಲರ್, ಏರ್ ಕಂಡೀಶನ್ಡ್ ವ್ಯವಸ್ಥೆ, ವಿಮಾನದಲ್ಲಿ ಹಾರಾಟ, ವಿದೇಶ ಯಾತ್ರೆ, ಮಹಾನಗರಗಳಲ್ಲಿನ ವಾಸ ಇವುಗಳೆಲ್ಲ ಸಿಗಬಹುದೆಂದು ಲೆಕ್ಕಹಾಕುವುದಿಲ್ಲ, ಬಯಸುವುದಿಲ್ಲ ಮಾತ್ರವಲ್ಲ ಬಹಳ ದೂರ ಇರುತ್ತಾರೆ.

ವಿಷಯಸುಖವೆಂಬುದು ಅತ್ಯಂತ ಬಿಗಿಯಾದ ಆಕರ್ಷಣೆ. ವಿದ್ಯುತ್ ಶಾಕ್ ತಗುಲಿದಾಗ ಮನುಷ್ಯನಿಗೆ ಹೇಗೆನಿಸುತ್ತದೆ ಎಂಬುದು ನಿಮಗೆ ಗೊತ್ತಿರಬಹುದಷ್ಟೆ? ಜೀವಾತ್ಮನಿಗೆ ವಿಷಯಸುಖದ ಅನುಭವ ಬಂದಾಗ ಅದರಿಂದ ಮುಕ್ತನಾಗುವುದು ಹಾಗೆ ಕಷ್ಟ. ವಿಜ್ಞಾನದಲ್ಲಿ ಕ್ಯಾಪಿಲರಿ ಫೋರ್ಸ್ ಬಗ್ಗೆ ನೀವು ಕೇಳಿರುತ್ತೀರಿ. ಅದೇ ತತ್ವದಿಂದ ಹಲವು ಯಂತ್ರಗಳೂ ಸಹ ಕೆಲಸಮಾಡುತ್ತವೆ. ನಿರ್ವಾತದ ಜಾಗಕ್ಕೆ ಆ ಬಲದಿಂದ ನೀರು/ದ್ರವ ಮತ್ತು ಗಾಳಿ ಒಟ್ಟೊಟ್ಟಿಗೆ ನುಗ್ಗುತ್ತವೆ. ಯಾವುದೇ ಪಂಪ್ ಇರದಿದ್ದರೂ ಇರುವ ಮಟ್ಟಕ್ಕಿಂತ ದ್ರವವು ಎತ್ತರಕ್ಕೆ ಹತ್ತಬಹುದು. ಮನುಷ್ಯನ ಮನಸ್ಸಿನಲ್ಲಿ ನಿರ್ವಾತದಂತಹ ಸ್ಥಿತಿ ಆಗಾಗ ನಿರ್ಮಾಣವಾದಾಗ ಆ ಜಾಗವನ್ನು ವಿಷಯಸುಖ ಆಕ್ರಮಿಸಿಕೊಳ್ಳುತ್ತದೆ. ವಿಷಯಸುಖಕ್ಕೆ ಪ್ರಮುಖ ಕಾರಣ ಮಹಿಳೆ.

ಹರನ ಶಿರವನು ಮೆಟ್ಟಿ ಹರಿಯ ಉರವನು ತುಳಿದು
ಸರಸಿಜೋದ್ಭವನ ಮೊಗಗೆಡಿಸಿ ಮೀರಿದಳು
ಹಿರಿಯರಿನ್ನಾರು | ಸರ್ವಜ್ಞ

ಅಲೌಕಿಕ ಮಾರ್ಗ ಪಥಿಕರು ಮಹಿಳೆಯರನ್ನು ಆದಷ್ಟೂ ದೂರವೇ ಇರಿಸುತ್ತಾರೆ. ಅದರರ್ಥ ಮಹಿಳೆಯರಿಗೆ ಮೋಕ್ಷವಿಲ್ಲವೆಂದಲ್ಲ. ಅವರು ಅಭಿವೃದ್ಧಿ ಸಾಧಿಸಬಾರದೆಂದೂ ಅಲ್ಲ. ಅವರಿಗೆ ಅದನ್ನು ಪರೋಕ್ಷವಾಗಿ, ಪುರುಷ ಶಿಷ್ಯರ ಮೂಲಕವಾಗಿ ಬೋಧಿಸುತ್ತಾರೆ. ಆಧ್ಯಾತ್ಮ ಪಥದಲ್ಲಿ ತೀರಾ ಮೇಲ್ದರ್ಜೆಗೆ ಹೋದವರಿಗೆ ಲಿಂಗಭೇದ ಅಳಿದ ಅರ್ಥವಾಗುತ್ತದೆ. ಆಗ ನಾರೀ-ನರ ಭೇದಗಳಿರುವುದಿಲ್ಲ. ಹಾಗಿದ್ದೂ ಲೋಕದ ಕಣ್ಣಿಗೆ ಅಪಸವ್ಯ ಆಗದಿರಲೆಂಬ ಕಾರಣದಿಂದಾಗಿ ಮಹಿಳೆಯರಿಗೆ ಏಕಾಂತ ಮಂದಿರದಲ್ಲಿ ದರ್ಶನ ಇರುವುದಿಲ್ಲ. ಕೆನ್ನೆ ಸವರುವುದಿಲ್ಲ, ತೋಳು ಚಿವುಟುವುದಿಲ್ಲ.

ಸದ್ಯ ಹಾವಾಡಿಗ ಮಠದಲ್ಲಿ ಏನಾಗಿದೆ ಎಂದರೆ ವ್ಯಕ್ತಿ ಪೂಜೆ ಆರಂಭವಾಗಿ ಬಹಳ ಕಾಲ ಕಳೆದಿದೆ. ನಾವು ಶಾಂಕರ ಪಥಿಕರು; ಅವರು ಹೇಳಿದ್ದು ಜ್ಞಾನವೇ ಪರಮ ಸತ್ಯ. ವೇದಗಳೆಂದರೆ ಜ್ಞಾನಭಂಡಾರ. ಮಿಥ್ಯಾಜ್ಞಾನವನ್ನು ತೊರೆದು ಕೈವಲ್ಯದ ನಿಜಜ್ಞಾನವನ್ನು ಪಡೆದು, ವಿರಾಗಿಯಾಗಿ ಯತಿಧರ್ಮವನ್ನು ಪಾಲನೆಮಾಡುತ್ತಿರುವವರನ್ನು ಮಾತ್ರ ಸನ್ಯಾಸಿಯೆಂದೂ ಗುರುವೆಂದೂ ತಿಳಿಯಿರಿ ಎಂದು. ಹಲ್ಲುಕಿಸಿಯುತ್ತ, ಸುಂದರವಾಗಿ ಬರೆದುಕೊಟ್ಟ ಭಾಷಣಗಳನ್ನು ಬಿಗಿಯುವ ವ್ಯಕ್ತಿಗೆ ನಿಜವಾದ ಪಾಂಡಿತ್ಯ ಇದೆಯೆಂದು ಒಪ್ಪಲಾಗದು. ಮತ್ತು ಕಾವಿ ತೊಟ್ಟ ಮಾತ್ರಕ್ಕೆ ಅವನು ವಿರಾಗಿಯೆಂದೂ ಹೇಳಲಾಗದು.

ಶ್ರೀಧರ ಸ್ವಾಮಿಗಳ ಪ್ರವಚನಗಳು ಸಾಮಾನ್ಯರಿಗೆ ಕಬ್ಬಿಣದ ಕಡಲೆಯಂತಿರುತ್ತವೆ. ಮುಗುಳು ನಗುವೆಂದರೆ ಹೇಗೆಂಬುದನ್ನು ಅವರಿಂದ ಅರಿಯಬೇಕು. ಜನರು ಅವರನ್ನು ಗುರುವೆಂದು ಒಪ್ಪಿದ್ದು ಅವರ ಭಾಷಣಗಳನ್ನು ಕೇಳಿ ಅಲ್ಲ. ಆ ಕಾಲದಲ್ಲಿ ಕಂಡಲ್ಲೆಲ್ಲ ಅಲೆಯುತ್ತ ಇಡೀ ದೇಶವನ್ನು ಶಂಕರರು ಸುತ್ತಿದಂತೆ ಸುತ್ತಿದ ಅವರ ಮೇಲೆ ಯಾರೂ ದೂರು ಸಲ್ಲಿಸಲಿಲ್ಲ. ಯಾಕೆಂದರೆ ಅವರು ಇಹದ ಯಾವ ಬಂಧನಕ್ಕೂ ಸಿಲುಕಿದವರಲ್ಲ; ಮೋಕ್ಷದ ಹೊರತು ಯಾವುದನ್ನೂ ಬೇಕೆಂದು ಅಪೇಕ್ಷಿಸಿದವರಲ್ಲ. ಅವರಿಗೆ ಯಾವುದೇ ಪೀಠದ ಹಿನ್ನೆಲೆಯೂ ಇರಲಿಲ್ಲ. ಆದರೂ ಅವರು ಭಗವಾನ್ ಎಂದು ಆರಾಧಿಸಲ್ಪಟ್ಟಿದ್ದು ಅವರ ಸಾಧನೆಗಳಿಂದ ಮಾತ್ರ.

ಅಪರಾಧ ಮಾಡಿದವರು ಅಪರಾಧ ಮಾಡಿದ್ದೇವೆಂದು ಒಪ್ಪುವುದು ಎಲ್ಲಾದರೂ ಉಂಟೇ? ಹಿಂದೆಂದೋ ಯಾವುದೋ ಮಹಾತ್ಮರ ಕಾಲದಲ್ಲಿ ಅರಿಯದೇ ನಡೆದ ಕ್ಷುಲ್ಲಕ ತಪ್ಪಿಗಾಗಿ ತಾವು ಅಪರಾಧಿಗಳೆಂದು ಅವರೇ ಹೇಳಿಕೊಂಡಿರಬಹುದಷ್ಟೆ. ಅದನ್ನು ಬಿಟ್ಟು ಇಂದಿನಕಾಲದಲ್ಲಿ ರಾಜಸನ್ಯಾಸಿಗಳಲ್ಲಿ ಎಷ್ಟೋ ಜನ ಕಳ್ಳ-ಖದೀಮರಿದ್ದಾರೆ. ಆದರೆ ಅವರೆಲ್ಲ ತಾವು ಅಪರಾಧಿಗಳೆಂದು ಎಂದಿಗೂ ಒಪ್ಪುವುದಿಲ್ಲ. ಹೀಗಾಗಿ ನಾವು ಅಪರಾಧ ಮಾಡಿಲ್ಲ ಎಂದು ಬೊಗಳೆ ಬಿಡುತ್ತಿದ್ದರೆ ಅದನ್ನೇ ನಂಬಿಕೊಳ್ಳಬೇಕಾದ ಅಗತ್ಯತೆ ಇಲ್ಲವೇ ಇಲ್ಲ.

ಈಗ ಮತ್ತೆ ಇಲ್ಲಿಗೆ ರಾವಣನನ್ನು ಕರೆಯುತ್ತೇನೆ. ಹಾಗೆ ನೋಡಿದರೆ ರಾವಣ ಶ್ರೀರಾಮನಿಗೆ ಸರಿಗಟ್ಟುವ ಸುಂದರಾಂಗನೇ. ಒಂಬತ್ತು ತಲೆಗಳು ಹೆಚ್ಚಿಗೆ ಇದ್ದರೂ ರಾಮನ ಒಂದು ತಲೆಯಲ್ಲಿರುವ ಸಾತ್ವಿಕ ಸಾಮರ್ಥ್ಯ ಅವನ ಹತ್ತುತಲೆಗಳಲ್ಲಿ ಇರಲಿಲ್ಲ. ರಾವಣನ ಹುಟ್ಟು, ಹಿನ್ನೆಲೆ, ಅವ ಎಸಗಿದ ಘೋರ, ಅಕ್ಷಮ್ಯ ಅಪರಾಧಗಳು ಇವುಗಳನ್ನೆಲ್ಲ ಅರಿಯದ ವರ್ಗಗಳ ಜನ ರಾವಣನನ್ನು ಆರಾಧಿಸುತ್ತಾರೆ. ಆತನ ಬೇರೆ ಬೇರೆ ಹೆಸರುಗಳನ್ನೂ ಇರಿಸಿಕೊಳ್ಳುತ್ತಾರೆ. ಅದೇ ವಿಧದದಲ್ಲಿ ಮಾಡಿದ ತಪ್ಪುಗಳನ್ನು ಅರಿಯದ ಎಷ್ಟೋಜನ ಕಳ್ಳಯ್ಯನನ್ನೂ ಆರಾಧಿಸುತ್ತಾರೆ. ಮಹಾಮಂತ್ರಿ ಕುಳ್ಳ ಬಾವಯ್ಯನವರು ಕಳ್ಳಯನವರ ’ಗಹನ’ವಾದ ’ಸಾಮರ್ಥ್ಯ’ದ ಬಗ್ಗೆ ಪುಂಖಾನುಪುಂಖವಾಗಿ ಕೊರೆದೂ ಕೊರೆದೂ ಅವರೆಲ್ಲರ ತಲೆಯಲ್ಲಿ ಅದೇ ಕುಳಿತುಬಿಟ್ಟಿದೆ.

ಪೀಠ, ಪರಂಪರೆ, ವ್ಯಕ್ತಿ ಇವುಗಳಲ್ಲಿ ವ್ಯತ್ಯಾಸವಿದೆ. ಮಾನಸಿಕವಾಗಿ ಯಾವಾಗಲೇ ವಿಚ್ಛಿನ್ನವಾದ ಪರಂಪರೆಯನ್ನು ಭೌತಿಕವಾಗಿ ವಿಚ್ಛಿನ್ನವಾಗಬಾರದು ಅಂತ ಕಾಯುವುದು ಮೂರ್ಖತನದ ಪರಮಾವಧಿ. ಆದಿಗುರುವಿನ ಯಾವ ಯತಿನಿಯಮಗಳಿಗೂ ಬದ್ಧನಾಗದ, ವಿರಾಗಿಯ ಯಾವ ಲಕ್ಷಣಗಳಾಗಲೀ ಜಪ,ತಪ, ನಿಯಮಗಳಾಗಲೀ ಇಲ್ಲದ ಢಾಂಬಿಕ ವ್ಯಕ್ತಿಯನ್ನು ಇನ್ನೂ ಪೀಠದಲ್ಲಿ ಕೂರಿಸಿ, ಪಾದಪೂಜೆ ಮಾಡುತ್ತ, ಮೆರವಣಿಗೆ ನಡೆಸುವುದು ಧರ್ಮಕ್ಕೆ ಬಾಹಿರವಾದ ಕೆಲಸವಾಗಿದೆ. ಇದನ್ನೆಲ್ಲ ಅರಿತೂ ವ್ಯಕ್ತಿ ಪೂಜೆಯನ್ನು ಮುಂದುವರಿಸಿದರೆ ಹಿಂಡಿ ಭೂಸ ತಿನ್ನುತ್ತ ಪ್ರಾಣಿಗಳಂತೆ ಹುಟ್ಟು-ಸಾವುಗಳ ಚಕ್ರದಲ್ಲಿ ಸುತ್ತುತ್ತಲೇ ಇರಬೇಕಾಗುತ್ತದೆಯೇ ವಿನಹ ಆಧ್ಯಾತ್ಮ ಮಾರ್ಗದತ್ತ ಹೊರಳಲು ಅವಕಾಶವೇ ಆಗದು.

ನಾವು ಎರಡೇ ಸವಾಲುಗಳನ್ನು ಮುಂದಿಡುತ್ತೇವೆ.
೧. ತಾಕತ್ತಿದ್ದರೆ ನಾರ್ಕೋ ಅನಲಿಸಿಸ್ ಗೆ ಮುಂದಾಗಬೇಕು.
೨. ಸಾಮರ್ಥ್ಯವಿದ್ದರೆ ನಾವು ಹೇಳುವ ಪಂಡಿತರ ಪ್ರಶ್ನೆಗಳಿಗೆ ಆ ಕ್ಷಣದಲ್ಲೇ ಉತ್ತರಿಸಬೇಕು.

-Thumari Ramachandra

source: https://www.facebook.com/groups/1499395003680065/permalink/1669169136702650/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s