ಬೆಳಕಿದ್ದರೆ ಅದಕ್ಕೆ ಕತ್ತಲೆ ಕೋಣೆ ಎನ್ನುವುದಿಲ್ಲ………..!

ಬೆಳಕಿದ್ದರೆ ಅದಕ್ಕೆ ಕತ್ತಲೆ ಕೋಣೆ ಎನ್ನುವುದಿಲ್ಲ………..!

ಮಾಧ್ಯಮಗಳಲ್ಲಿ ಎಥಿಕ್ಸ್ ಎಂಬುದು ಹಿಂದೆಂದೋ ಇತ್ತು. ಅಪರಾಧಗಳ ಸುದ್ದಿಯನ್ನು ಹೆಚ್ಚಿಗೆ ಹಾಕಬಾರದು, ಪತ್ರಿಕೆಗಳಲ್ಲಿ ಮುಖಪುಟದಲ್ಲಿ ಹಾಕಬಾರದು, ಜಾಹೀರಾತುಗಳು ಮುಖಪುಟದಲ್ಲಿ ಕಾಣಿಸಿಕೊಳ್ಳಬಾರದು ಎಂಬಂತಹ ಹಲವು ಅಘೋಷಿತ ನಿಯಮಗಳಿದ್ದವು. ಈಗ ಅದೆಲ್ಲ ಮಾಯವಾಗಿ ದಶಕವೇ ಕಳೆಯಿತು. ಇನ್ನಿನ್ನು ಜಾಹೀರಾತುಗಳನ್ನು ನೋಡುವ ಸಲುವಾಗಿಯೇ ಪತ್ರಿಕೆಗಳನ್ನು ಕೊಳ್ಳಬೇಕಾಗಬಹುದು. ಯಾಕೆಂದರೆ ಇಂದು ಪತ್ರಿಕೆಗಳಲ್ಲಿ ಎಲ್ಲೆಲ್ಲಿ ನೋಡಿದರೂ ಜಾಹೀರಾತುಗಳೇ.

ಹಿಂದೊಂದು ಕಾಲದಲ್ಲಿ ಪತ್ರಕರ್ತರೆಲ್ಲ ಬಡತನದಲ್ಲೇ ಬದುಕಿದವರು. ಶಿಕ್ಷಕರು ಮಕ್ಕಳಿಗೆ ಕಲಿಸಿದರೆ ಪತ್ರಕರ್ತರು ಶಿಕ್ಷಕರಿಗೆ ಕಲಿಸುತ್ತಿದ್ದರು ಎಂದರೆ ತಪ್ಪಾಗಲಾರದು. ಡಿವಿಜಿಯವರೂ ಪತ್ರಕರ್ತರಾಗಿ ಬದುಕಿನ ಬಂಡಿಗೆ ಬಣ್ಣ ಬಳಿದಿದ್ದಿದೆ.

ಏನಾನುಮಂ ಮಾಡು ಕೈಗೆ ದೊರೆತುಜ್ಜುಗವ|
ನಾನೇನು ಹುಲುಕಡ್ಡಿಯೆಂಬ ನುಡಿ ಬೇಡ ||
ಹೀನಮಾವುದುಮಿಲ್ಲ ಜಗದ ಗುಡಿಯೂಳಿಗದಿ|
ತಾಣ ನಿನಗಿಹುದಿಲ್ಲಿ-ಮಂಕುತಿಮ್ಮ ||

ಎನ್ನುತ್ತ ಡಿವಿಜಿ ಹಲವು ಪಾತ್ರಗಳನ್ನು ನಿರ್ವಹಿಸಿದವರು. ಸರಕಾರವೆಂಬ ಗಾಡಿ ಯಾವ ದಿಕ್ಕಿನಲ್ಲಿ ಸರಿಯಾಗಿ ಓಡುತ್ತಿಲ್ಲ ಎಂದು ನೋಡುತ್ತ ಅದನ್ನು ’ಹಿಂದೂ’ ಮತ್ತು ’ಮೈಸೂರು ಟೈಮ್ಸ್’ ಪತ್ರಿಕೆಗಳಲ್ಲಿ ಪ್ರಕಟಿಸುತ್ತಿದ್ದರು. ಖಡ್ಗಕ್ಕಿಂತ ಮೊನಚಾದ ಅವರ ಬರಹಗಳ ಹರಿತ ಆಳರಸರ ನಡೆಗಳನ್ನು ಸೀಳಿಬಿಡುವಂತಿರುತ್ತಿತ್ತು. ತಪರಾಕಿ ತಿಂದ ಆಳರಸರು ಇಂಗುತಿಂದ ಮಂಗನಂತಾಗಿ ತಪ್ಪನ್ನು ತಿದ್ದಿಕೊಳ್ಳುತ್ತಿದ್ದವು. ಇದಕ್ಕೆ ಮೈಸೂರು ಮಹಾರಾಜರ ಸರಕಾರ ಕೂಡ ಹೊರತಾಗಿರಲಿಲ್ಲ.

ಪತ್ರಿಕೆಗಳಲ್ಲಿ ವರದಿಗಳನ್ನು ಬರೆದು ಸಮಾಜವನ್ನೂ ಸರಕಾರವನ್ನೂ ತಿದ್ದಿದ್ದಕ್ಕೆ ರಾಜರು ಅಂದಿನ ದಿವಾನರಾದ ಸರ್ ಎಂ.ವಿಶ್ವೇಶ್ವರಯ್ಯನವರ ಮೂಲಕ ಏನಾದರೂ ಗೌರವಧನ ಕಳುಹಿಸಿದರೆ ಅದನ್ನೂ ಸಹ ತೆಗೆದುಕೊಂಡವರಲ್ಲ.೧೯೭೫ರಲ್ಲಿ ಅಭಿಮಾನಿ ಬಳಗ ಸನ್ಮಾನಿಸಿ ಕೊಟ್ಟ ಹಮ್ಮಿಣಿಯಲ್ಲಿ ಪೈಸೆಯನ್ನೂ ಉಳಿಸಿಕೊಳ್ಳದೆ ಗೋಖಲೆ ಸಾರ್ವಜನಿಕ ಸಂಸ್ಥೆ ಕಟ್ಟಿಸಿದ ಡಿವಿಜಿ ಸನ್ಮಾನದ ಮರುದಿನ ಅಭಿನಂದಿಸಲು ಮನೆಗೆ ಬಂದ ಅತಿಥಿಗಳಿಗೆ ಕಾಫಿ ಕೊಡುವ ಸಲುವಾಗಿ “ಸ್ವಲ್ಪ ಕಾಫಿ ಪುಡಿ ಮತ್ತು ಸಕ್ಕರೆ ಕೊಟ್ಟರೆ ನಾಳೆ ಅದರ ಹಣವನ್ನು ತಲ್ಪಿಸುತ್ತೇನೆ” ಎಂದು ಶೆಟ್ಟರ ಅಂಗಡಿಗೆ ಮನೆಯವರ ಕೈಲಿ ಚೀಟಿ ಕಳಿಸಿ, ತರಿಸಿ ಸತ್ಕರಿಸಿದ್ದರಂತೆ. ಅಂದಹಾಗೆ ಆ ಕಾಲಕ್ಕೆ ಕರ್ನಾಟಕದಲ್ಲಿ ಇಬ್ಬರು ಪ್ರಮುಖ ಸಂತರು ಸಮಕಾಲೀನರಾಗಿದ್ದರು-ಒಬ್ಬರು ಡಿವಿಜಿ ಮತ್ತು ಇನ್ನೊಬ್ಬರು ಸರ್ ಎಂ.ವಿ.

ನಂತರದ ದಶಕಗಳಲ್ಲಿ ಕನ್ನಡ ಪತ್ರಕರ್ತರಲ್ಲಿ ಟಿ.ಎಸ್.ರಾಮಚಂದ್ರ ರಾಯರು ಬಹಳ ಹೆಸರುಮಾಡಿದ್ದರು. ಇಂದಿನ ಅನೇಕರಿಗೆ ಅವರ ಪರಿಚಯವೇ ಇಲ್ಲ. ಟಿ.ಎಸ್.ರಾಮಚಂದ್ರರಾಯರು ೧೯೨೨ರಲ್ಲಿ, ತೀರ್ಥಹಳ್ಳಿ ಸೂರ್ಯನಾರಾಯಣ ರಾಮಚಂದ್ರರಾವ್ ಮತ್ತು ಬನಶಂಕರಮ್ಮ ದಂಪತಿಯ ಮಗನಾಗಿ ಜನಿಸಿದರು. ಪತ್ನಿ ಲಲಿತಾ ಸಂಸ್ಕೃತ ಪ್ರಾಧ್ಯಾಪಕಿಯಾಗಿದ್ದರು. ಜನಪ್ರಿಯ ಲೇಖಕಿ ಎಂ.ಕೆ.ಇಂದಿರಾ ಇವರ ಸೋದರಿಯಾಗಿದ್ದರು.

ಟಿಎಸ್ಸಾರ್ ಮೊದಲು ’ಕೊರವಂಜಿ’ ಮಾಸಪತ್ರಿಕೆಗೆ ಲೇಖನ ಬರೆಯುತ್ತಿದ್ದರು. ಜೊತೆಗೆ ‘ಮಧುವನ’ ಹಾಗೂ ‘ಮೂನ್‍ಲೈಟ್’ ಎನ್ನುವ ಪತ್ರಿಕೆಗಳನ್ನೂ ನಡೆಸುತ್ತಿದ್ದರು. ೧೯೪೮ರಲ್ಲಿ ’ಪ್ರಜಾವಾಣಿ’ ಪತ್ರಿಕೆಯ ಸಂಪಾದಕರಾಗಿ ಅದನ್ನು ಕನ್ನಡದ ಒಂದು ಅತ್ಯುತ್ತಮ ಹಾಗು ಜನಪ್ರಿಯ ಪತ್ರಿಕೆಯನ್ನಾಗಿ ಬೆಳೆಸಿದರು. ಪ್ರಜಾವಾಣಿಯಲ್ಲಿ ದಿನನಿತ್ಯ ಅವರು ವಿಡಂಬನಾತ್ಮಕವಾಗಿ ಬರೆಯುತ್ತಿದ್ದ ‘ಛೂಬಾಣ’ವನ್ನು ಎದುರಿಸಲಾಗದೆ ಅನೇಕ ರಾಜಕಾರಣಿಗಳು ತಪ್ಪುಮಾಡಲು ಹೆದರುತ್ತಿದ್ದರು. ಮತ್ತು ’ಛೂಬಾಣ’ವನ್ನು ಓದಲೆಂದೇ ಬಿಸಿದೋಸೆಗಾಗಿ ಕಾದು ಕುಳಿತವರಂತೆ ಜನ ’ಪ್ರಜಾವಾಣಿ’ಯ ಬರುವಿಕೆಗಾಗಿ ಕಾಯುತ್ತಿದ್ದರು.

ಇಂತಹ ಟಿಎಸ್ಸಾರ್ ಅವರಿಗೆ ಆರ್ಥಿಕ ಮುಗ್ಗಟ್ಟೆಂಬುದು ಜೀವನದುದ್ದಕ್ಕೂ ಬೆಂಬಿಡದ ಭೂತವಾಗಿತ್ತು; ಮೆಟ್ಟಿಕೊಂಡಿದ್ದ ಆ ಭೂತಕ್ಕೇ ’ಛೂಬಾಣ’ ಬಿಟ್ಟು ಹೆದರಿಸುವ ಛಾತಿಯುಳ್ಳವರು ಟಿಎಸ್ಸಾರ್. ಮನೆಯಲ್ಲಿ ಎಲ್ಲಿ ನೋಡಿದರೂ ಪುಸ್ತಕ ಮತ್ತು ಪತ್ರಿಕೆಗಳೇ ತುಂಬಿರುತ್ತಿದ್ದವು. ನಾಲ್ಕನೇ ಕಾಲು ಪುಟ್ಟ ಮಕ್ಕಳ ಹಾಲುಹಲ್ಲುದುರಿದಂತೆ ಉದುರಿದ್ದರಿಂದ ಮಂಚವೊಂದಕ್ಕೆ ಮೂರೇ ಕಾಲಾಗಿ, ನಾಲ್ಕನೇ ಕಾಲಿನ ಜಾಗಕ್ಕೆ ರದ್ದಿಪತ್ರಿಕೆಗಳ ಕಡತವನ್ನು ಇರಿಸಿ ಮಂಚವನ್ನು ಸಬಲಗೊಳಿಸಿದ್ದರು. ಅನಿವಾರ್ಯತೆಯಲ್ಲಿ ಆ ರದ್ಧಿಕಡತವನ್ನೂ ಮಾರಬೇಕಾದ ಪರಿಸ್ಥಿತಿ ಬಂದಾಗ ಅದಕ್ಕೂ ಸಹ ಬೇಸರಪಟ್ಟುಕೊಂಡವರಲ್ಲ.

ಸಮಕಾಲೀನರಾಗಿ ’ಸಂಯುಕ್ತ ಕರ್ನಾಟಕ’ದಲ್ಲಿ ಮೊಹರೆ ಹಣಮಂತರಾಯರು ಕೆಲಸ ನಿರ್ವಹಿಸಿದ ರೀತಿ ಗಣನೀಯವಾದದ್ದು. ಉತ್ತರ ಕರ್ನಾಟಕದ ಜನ, ಸಂಯುಕ್ತ ಕರ್ನಾಟಕ ಎನ್ನುತ್ತಿರಲಿಲ್ಲವಂತೆ, “ಹಣಮಂತಣ್ಣ ಬಂದಾನೋ ನೋಡಪಾ” ಎನ್ನುತ್ತ ಸಂಯುಕ್ತ ಕರ್ನಾಟಕಕ್ಕಾಗಿ ಕಾಯುತ್ತಿದ್ದರಂತೆ. ಇದರಂತೆ ಕೆ. ಶ್ಯಾಮರಾವ್, ಪಾಟೀಲ್ ಪುಟ್ಟಪ್ಪ ಮೊದಲಾದವರು ಪತ್ರಿಕೋದ್ಯಮಕ್ಕೊಂದು ಕಳೆ ತಂದುಕೊಟ್ಟವರು.

ಟಿಎಸ್ಸಾರ್ ಬರೆದ ’ಲೇಡಿ ಡಾಕ್ಟರ್’ (ಪ್ರಹಸನ) ಎಂಬ ಕೃತಿ ಜನಪ್ರಿಯವಾಗಿತ್ತು. ೧೯೭೭ರಲ್ಲಿ ಟಿಎಸ್ಸಾರ್ ನಿಧನರಾದರು. ಪ್ರಾಯಶಃ ಅಲ್ಲಿಂದೀಚೆಗೆ ಪತ್ರಿಕೋದ್ಮಯ ಬಹಳ ಬದಲಾಗಿಬಿಟ್ಟಿತು. ಅನೇಕ ಪತ್ರಿಕೆಗಳು ಬಾಗಿಲು ತೆರೆದರೆ ಕೆಲವು ಬಾಗಿಲನ್ನು ಹಾಕಿದವು. ಪೈಪೋಟಿ ಒಂದೆಡೆ ಮತ್ತು ಬಹುಮಾಧ್ಯಮ ಇನ್ನೊಂದೆಡೆ ಇವೆರಡು ಕಾರಣಗಳಿಂದಲೂ, ಬದಲಾದ ಜನತೆಯಲ್ಲಿ ಕನ್ನಡದ ಓದುಗರ ಸಂಖ್ಯೆ ಮತ್ತು ಅಭಿರುಚಿಗಳಲ್ಲಿ ವ್ಯತ್ಯಾಸವಾಗಿದ್ದರಿಂದಲೂ ಪತ್ರಿಕೋದ್ಯಮವೆಂಬುದು ವಾಣಿಜ್ಯೋದ್ಯಮದಂತೆ ಮಾರ್ಪಾಡಿಗೊಳಪಟ್ಟಿತು.

ಕೆಲವರಿರುತ್ತಾರೆ. ವರ್ಷಗಳ ಹಿಂದೆ ಶ್ರೀರಾಮ ಸೇನೆಯಲ್ಲಿದ್ದುದಾಗಿ ಹೇಳಿಕೊಳ್ಳುತ್ತಾರೆ. ಅವರು ಎಲ್ಲಿದ್ದರೋ ಶ್ರೀರಾಮನೇ ಬಲ್ಲ. ಆದರೆ ಶ್ರೀರಾಮನ ಒಂದೊಳ್ಳೆ ಸ್ವಭಾವವೂ ಅವರಲ್ಲಿರುವುದಿಲ್ಲ. ಕಾಮಿಯ ಚೇಲಾಗಳಂತೆ ಕೆಲಸ ಮಾಡುವ ಅಂತವರಿಗೆ ಪ್ರಮುಖ ಸುದ್ದಿಗಳೂ ಸಹ ಸುದ್ದಿಗಳಾಗುವುದಿಲ್ಲ! ಕಾಮಿಗೆ ಬೇಕಾದ ಅತಿ ಚಿಕ್ಕ ವಿಷಯಗಳನ್ನೂ ಅತ್ಯಂತ ಪ್ರಮುಖ ವರದಿಯಂತೆ ಪ್ರಕಟಿಸುವುದು ಇಂತವರ ರಿವಾಜು.

ಅಪರಾಧವೇ ಅಲ್ಲದ ಚಿಕ್ಕ ಘಟನೆಯೊಂದನ್ನು ಮಹಾಪರಾಧವೆಂಬಂತೆ ಬಿಂಬಿಸುವುದು ಕತ್ತಲೆ ಕೋಣೆಯಲ್ಲಿರುವವರ ಕೆಲಸ. ವರ್ಷದ ಹಿಂದೆ, ಅತ್ಯಾಚಾರಿಗಳ ಸಾಲಿನಲ್ಲಿ ಸೇರಿಸಲಾಗದ ಕ್ಷುಲ್ಲಕ ಘಟನೆಯೊಂದನ್ನು ಮುಖಪುಟದಲ್ಲಿ ಪ್ರಕಟಿಸಿ ಮೀಸೆ ತೀಡಿಕೊಂಡ ಕತ್ತಲೆಕೋಣೆಯ ಮಹಾನುಭಾವನ ಕೃತ್ಯಗಳ ಹಿಂದೆ ಕಾಮಿಯ ಕೈವಾಡವೂ ಆಡಗಿದೆಯಂತೆ. ಯಾಕೆಂದರೆ ಕಾಮಿಯ ಮುಖವಾಡವನ್ನು ಬಯಲುಮಾಡಿದವನನ್ನು ಹಣಿಯಬೇಕೆಂಬ ಹುನ್ನಾರ ಹಾವಾಡಿಗ ಸಂಸ್ಥಾನದವನದ್ದು. ಕಾಮಿ ಹಾಕುವ ರೊಟ್ಟಿಯನ್ನು ಮುಕ್ಕುವ ಶ್ವಾನಗಳಲ್ಲಿ ಅದೂ ಸಹ ಒಂದು ಎಂದು ಕೆಲವರು ಸಂದೇಶ ಕಳಿಸಿದ್ದಾರೆ. ಇದೇ ಶ್ವಾನ ತನ್ನ ವೃತ್ತಿಯ ಗುರುವಿಗೇ ತಿರುಮಂತ್ರ ಹಾಕಿ ಅವರ ಸ್ಥಾನಪಲ್ಲಟಗೊಳಿಸಿತು ಎಂದೂ ಹೇಳಿದ್ದಾರೆ. ಅದೇ ಶ್ವಾನ ಒಡೆಯ ಅತ್ಯಾಚಾರವನ್ನೇ ಎಸಗಿಲ್ಲ ಎಂದು ಸಮರ್ಥಿಸುತ್ತದೆ; ಎಷ್ಟೆಂದರೂ ನಾಯಿನಿಷ್ಠೆಯಲ್ಲವೇ?

ಬೆಳಕಿರುವ ಕೋಣೆಗೆ ಕತ್ತಲೆ ಕೋಣೆ ಎಂದು ಯಾರಾದರೂ ಹೇಳುವುದುಂಟೆ? ಇಲ್ಲ. ಕೆಲವು ಕೋಣೆಗಳಿಗೆ ಆ ಕಟ್ಟಡಗಳಿರುವವರೆಗೂ ಕಾರಣಾಂತರಗಳಿಂದ ಸೂರ್ಯನ ಬೆಳಕೇ ಬರುವುದಿಲ್ಲ. ವಿದ್ಯುದ್ದೀಪ ಹಾಕಿಕೊಳ್ಳುವುದೇ ಅನಿವಾರ್ಯ. ವಿದ್ಯುದ್ದೀಪದಲ್ಲಿ ಕಂಡಿದ್ದೆಲ್ಲವೂ ಹಗಲಿನಲ್ಲಿ ಕಂಡಂತೆ ಪಕ್ಕಾ ಆಗುವುದಿಲ್ಲ. ಹೆಂಗಸರು ಬಣ್ಣಬಣ್ಣದ ರೇಷ್ಮೆ ಸೀರೆಗಳು ಮಿರಿಮಿರಿ ಮಿಂಚುವುದನ್ನು ಕಂಡು ಖರೀದಿಸಿ ಮನೆಗೆ ಹೋದರೆ ಹಗಲಿನಲ್ಲಿ ಅವುಗಳ ಬಣ್ಣವೇ ಬೇರೆ ಇರುತ್ತದೆ ಎಂಬುದು ನಿಮ್ಮಲ್ಲಿ ಕೆಲವರಿಗಾದರೂ ಅನುಭವಕ್ಕಿರಬಹುದು. ಕತ್ತಲೆಕೋಣೆಯವರ ವರದಿಗಳೂ ಅಂತವೇ; ಇಂತವರನ್ನು ಪೂರ್ವಾಗ್ರಹ ಪೀಡಿತರು ಅಥವಾ ಆಷಾಢಭೂತಿಗಳು ಎನ್ನುತ್ತಾರೆ ಪ್ರಾಜ್ಞರು. ತಾವು ಮಾಡುವ ಹುಳುಕು ಉಪದ್ರವ ಸಂಬಂಧಪಟ್ಟವಿಗೆ ಗೊತ್ತಾಗುವುದಿಲ್ಲ ಎಂದುಕೊಳ್ಳುವ ಆಷಾಢಭೂತಿತನ ಅವರಲ್ಲಿರುತ್ತದೆ.

ಸಮಾಜ ಬದಲಾಗಿದೆ. ಹಿಂದೆ ಹಳ್ಳಿಹಳಲ್ಲಿ ಅಂಡು ಚೂಟುತ್ತ, ಪಕ್ಕದ ಮನೆಯ ಹುಡುಗಿಗೆ ಕೂಡಿಬರುವ ಸಂಬಂಧಗಳನ್ನು ತಪ್ಪಿಸುತ್ತ ಮಜಾ ತೆಗೆದುಕೊಳ್ಳುತಿದ್ದವರು ಇಂದು ಪತ್ರಿಕೋದ್ಯಮಗಳಲ್ಲಿ ಅಲ್ಲಲ್ಲಿ ಕಂಡುಬರುತ್ತಾರೆ. ಸಮಾಜ ಒತ್ತಟ್ಟಿಗೆ ಹಳ್ಳಿಗಳನ್ನೇ ಆಶ್ರಯಿಸಿದ್ದಾಗ ಬಡತನವಿದ್ದರೂ ಕುಲಗೆಟ್ಟಿರಲಿಲ್ಲ; ಕೆಲವರಿಗಾದರೂ ಸಂಸ್ಕಾರವಂತ ಜೀವನದ ಬಗ್ಗೆ ಕಾಳಜಿಯಿತ್ತು.

ಇಂದು ಹಾಗಿಲ್ಲ. ಸಮಾಜ ಬೆಳೆದಿದೆ, ವಿಶ್ವದ ಹಲವು ದಿಕ್ಕಿಗೆ ಅಕ್ಕಿಯನ್ನರಸಿ ಹಕ್ಕಿಗಳು ಹಾರಿಹೋಗಿ ಗೂಡುಕಟ್ಟಿಕೊಂಡಿವೆ. ಸಂಸ್ಕಾರಗಳೂ ಕ್ರಮೇಣ ಬದಲಾಗಿಬಿಟ್ಟಿವೆ. ಅಪ್ಪನಂತೆಯೇ ಮಗ ಎನ್ನಲು ಸಾಧ್ಯವಿಲ್ಲ. ಉತ್ತಮ ತಂದೆಗೆ ಕೆಟ್ಟ ಮಗನೂ ಹುಟ್ಟಬಹುದು. ಬಾಲ್ಯದ ಸಂಸ್ಕಾರ ಹೇಗಾಯಿತು ಎಂಬುದು ಮುಖ್ಯ. ಸಂಸ್ಕಾರದ ಬಗ್ಗೆ ನಿನ್ನೆಯೂ ಸೇರಿದಂತೆ ಸಾಕಷ್ಟು ಬರೆದಿದ್ದೇನೆ. ಸಂಸ್ಕಾರ ಕೆಟ್ಟದಾಗಿದ್ದರೆ ಏನಾಗುತ್ತದೆ ಎಂಬುದಕ್ಕೆ ಆಗಾಗ ಅಥವಾ ಈಗೀಗ ನಮ್ಮ ಸಮಾಜದಲ್ಲಿ ಕೊಲೆಗಡುಕರೂ ತಯಾರಾಗುತ್ತಿರುವುದು ಒಂದು ಉದಾಹರಣೆ.

ಸತ್ಯವನ್ನು ಅಡಗಿಸುವುದೂ ಸಹ ಕೊಲೆಯಂತಹ ಪಾತಕವೇ. ಕೇವಲ ಅಂಧಾನುಯಾಯಿಯಾಗಿ ಅಥವಾ ಕೊಟ್ಟ ಕವರನ್ನು ಸ್ವೀಕರಿಸಿ ಸತ್ಯವನ್ನೇ ಮರೆಮಾಚುವ ಸುಳ್ಳುಗಳನ್ನು ಪ್ರಕಟಿಸುವುದು, ಕಾಮಿಗೆ ಬೇಕಾದ ವರದಿಗಳನ್ನು ಪ್ರಕಟಿಸುವುದು ಕತ್ತಲೆಕೋಣೆಯಯಲ್ಲಿರುವವರ ಮಂದಬುದ್ಧಿಗೆ ಹಿಡಿದ ಕನ್ನಡಿ. ದಿಢೀರ್ ದುಡ್ಡು ಮಾಡಬೇಕು, ಇಮ್ಮಡಿಯಂತೆ ಹಾಯಾಗಿರಬೇಕೆಂಬುದು ಕೆಲವರ ಅಪೇಕ್ಷೆ. ಇಮ್ಮಡಿಯ ಹಾದಿಯಲ್ಲಿ ತೆರಳುತ್ತಿರುವ ಇಂತವರಿಗೆ ತನ್ನತನ ಎಂಬುದೇ ಇಲ್ಲ!

Thumari Ramachandra

source: https://www.facebook.com/groups/1499395003680065/permalink/1652995988319965/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s