ಮೋದಿಯಲ್ಲೊಬ್ಬ ಸಂತನಿದ್ದಾನೆ; ಆ ಸಂತ ಜಗತ್ತಿನ ಜನತೆಗೆ ಸಂಸ್ಕಾರ ನೀಡುತ್ತಿದ್ದಾನೆ.

ಮೋದಿಯಲ್ಲೊಬ್ಬ ಸಂತನಿದ್ದಾನೆ; ಆ ಸಂತ ಜಗತ್ತಿನ ಜನತೆಗೆ ಸಂಸ್ಕಾರ ನೀಡುತ್ತಿದ್ದಾನೆ.

ಹೈದರಾಬಾದ್ ನಿಂದ ಏಳರ ಹಸುಳೆಯೊಬ್ಬ ಪತ್ರಬರೆದಂತೆ ಲೇಖಕನೊಬ್ಬ ಆತನ ಅಂತರಂಗವನ್ನು ಮೋದಿಯವರಿಗೆ ಬಹಿರಂಗಗೊಳಿಸಿದ್ದಾನೆ. ಐದು ವರ್ಷದವನಿದ್ದಾಗಲೇ ಬಡ ತಂದೆತಾಯಿಯರಿಂದ ಕೇವಲ ಸಾವಿರ ರೂಪಾಯಿಗೆ ಮಾರಲ್ಪಟ್ಟು ಹೈದರಾಬಾದ್‍ನ ಚಾರ್ಮಿನಾರ್ ಪ್ರದೇಶದ ಹಳೆಯ ಚಿಕ್ಕ ಗೂಡೊಂದರಲ್ಲಿ ಬಳೆತಯಾರಕನಾಗಿ ಕೆಲಸ ಮಾಡುತ್ತಾನೆ. ಬೆಳಿಗ್ಗೆ ಆರಕ್ಕೆ ಆರಂಭಗೊಳ್ಳುವ ಕೆಲಸ ರಾತ್ರಿ ಒಂದಾದರೂ ಮುಗಿಯೋದಿಲ್ಲ. ಯಜಮಾನ ಏನಾದರೂ ಕೊಟ್ಟರೆ ತಿನ್ನುತ್ತಾನೆ, ಇಲ್ಲದಿದ್ದರೆ ಸುಮ್ಮನೆ ಕೆಲಸ ಮುಂದುವರಿಸುತ್ತಾನೆ. ನಿದ್ದೆ ಕಾಣದ ಕಣ್ಣುಗಳು ತೂಕಡಿಸುವಂತೆ ಮಾಡಿದರೂ ಯಜಮಾನ ಸಿಸಿಟಿವಿಯಲ್ಲಿ ಎಲ್ಲವನ್ನೂ ನೋಡುತ್ತಿದ್ದು, ತೂಕಡಿಸಿದರೆ ವಿಪರೀತ ಹೊಡೆಯುತ್ತಾನೆ.

ತಮ್ಮ-ತಂಗಿ ಇದ್ದಿದ್ದು ಗೊತ್ತು, ಅವರೀಗ ಅಪ್ಪ-ಅಮ್ಮಂದಿರೊಡನೆ ದೂರದ ಬಿಹಾರದಲ್ಲೇ ಇರುವರೋ ಅಥವಾ ತನ್ನಂತೆಯೇ ಯಾರಿಗೋ ಮಾರಲ್ಪಟ್ಟರೋ ಗೊತ್ತಿಲ್ಲ. ತಾಯಿಯ ಸೀರೆಯ ಸೆರಗಿನಲ್ಲಿ ಮುಖಮರೆಸಿಕೊಂಡು ಪಾಲಕರ ಮುದ್ದಿನ ದಿನಗಳನ್ನು ಅನುಭವಿಸಬೇಕಾದ ತಾನು ಶಾಲೆಯ ಓದಿಲ್ಲದೆ, ಸರಿಯಾದ ನಿದ್ದೆ-ಆಹಾರವಿಲ್ಲದೆ ಬಳಲುತ್ತಿರುವುದನ್ನು ಹೇಳಿಕೊಳ್ಳುತ್ತಾನೆ. ಇದೀಗ ಪೋಲೀಸರು ತನ್ನನ್ನು ಯಾವುದೋ ಆನಾಥಾಶ್ರಮದಲ್ಲಿ ಇಟ್ಟಿದ್ದು ಯಾರೋ ಬಂದು ತಮ್ಮ ಮಗ ಎಂದು ತನ್ನ ಪಕ್ಕದಲ್ಲಿದ್ದ ಹುಡುಗನನ್ನು ಕರೆದಾಗ ಆತ “ಒಲ್ಲೆ” ಅಂದ, ತನ್ನನ್ನೂ ತನ್ನಮ್ಮ ಬಂದು ಗುರುತಿಸಬಹುದೇ ಎಂಬ ಹಂಬಲದಲ್ಲಿದ್ದಾನೆ.

ಹುಟ್ಟು ಆಯ್ಕೆಯಲ್ಲದ ಮನುಷ್ಯ ಜೀವನದಲ್ಲಿ ನತದೃಷ್ಟ ಮಕ್ಕಳ ದಯನೀಯ ಪರಿಸ್ಥಿತಿಯನ್ನು ಕಂಡಾಗ ಯಾವ ಜನ್ಮದ ಪಾಪವೋ ಅನಿಸುತ್ತದೆ. ಇಂತಹ ಸಾವಿರ ಸಾವಿರ ಪತ್ರಗಳು, ವರದಿಗಳು ಪ್ರಧಾನಿ ಕಚೇರಿಗೆ ತಲುಪುತ್ತಿವೆ ಯಾಕೆಂದರೆ ಮೋದಿ ಎಲ್ಲ ಪ್ರಧಾನಿಗಳಂತಲ್ಲ! ಮೋದಿಗಿರುವುದು ಕಿವಿಯ ಆಕಾರವಷ್ಟೇ ಅಲ್ಲ ಕಿವಿ ಕೇಳಿಸುತ್ತದೆ ಎಂಬುದು ಸಾರ್ವಜನಿಕರಿಗೆ ಖಾತ್ರಿಯಾಗಿದೆ!

ನರೇಂದ್ರ ಮೋದಿಯವರ ಬಗೆಗೆ ವಿವರಿಸುವ ಅಗತ್ಯವೇನಿಲ್ಲ. ಅವರ ಬದುಕು ಎಲ್ಲರಿಗೂ ತೆರೆದಿಟ್ಟ ಪುಸ್ತಕ. ಖಾಸಗೀ ಜೀವನದಲ್ಲಿ ವೈಭವ ನಡೆಸಬಹುದಾದ ಎಲ್ಲ ಅವಕಾಶ ಮತ್ತು ಅನುಕೂಲತೆಗಳೊ ಇವೆ; ಆದರೆ ಖಾಸಗೀ ಜೀವನವನ್ನು ಸ್ವಾರ್ಥಪರವಾಗಿ ಕಳೆಯಲು ಅರೆನಿಮಿಷವೂ ಸಮಯ ಮಾತ್ರ ಇಲ್ಲ! ಬಾಲ್ಯದಿಂದ ಅಮ್ಮನ ಕಷ್ಟಗಳನ್ನು ನೋಡುತ್ತಲೇ ಬೆಳೆದ ಮೋದಿಗೆ ಅಮ್ಮನೆಂದರೆ ದೇವರು, ಮಡದಿ ದೂರದಲ್ಲೆಲ್ಲೋ ಇದ್ದಾಳೆಂಬುದು ನಾಮಕೇವಾಸ್ಥೆಗೆ ಮಾತ್ರ. ಮದುವೆ ಎಂಬುದೇ ಅವರಿಗೆ ಅನೈಚ್ಛಿಕ. ಬಹುಜನ ಹಿತಾಯ ಮತ್ತು ಬಹುಜನ ಸುಖಾಯ ಮಂತ್ರ ಪಠಿಸುವ ಅವರಿಗೆ ಸಂಸಾರದಲ್ಲಿ ಆಸಕ್ತಿಯಿಲ್ಲ.

ಸಾಮಾನ್ಯವಾಗಿ ಸಂತರೆಲ್ಲರ ಜೀವನ ಹಾಗೇ. ಮಾಧ್ವಮತಾವಲಂಬಿಗಳಿಗೆ ಮತ್ತು ಇತರ ಹಿಂದೂಗಳಿಗೂ ಸಹ ಪ್ರಿಯರಾದ ರಾಘವೇಂದ್ರ ಸ್ವಾಮಿಗಳನ್ನು ನೋಡಿ, ಅವರು ಹೆಂಡತಿಯನ್ನು ಬಿಟ್ಟು ಸನ್ಯಾಸಿಯಾದರು. ಹೆಂಡತಿ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಳು; ಯಾಕೆಂದರೆ ಹೆಂಗಸರದ್ದು ಸಾಮಾನ್ಯವಾಗಿ ಸೀಮಿತ ಚೌಕಟ್ಟಿನ ಆಲೋಚನೆ, ಅದು ಅವಳನ್ನೂ ಬಿಟ್ಟಿರಲಿಲ್ಲ, ಗಂಡ ಸಂಸಾರವನ್ನು ತೊರೆದುಹೋದ ಎಂಬುದಷ್ಟೆ ಅವಳಿಗೆ ಕಂಡಿದ್ದು. ಗಂಡ ಎಂತಹ ದಿವ್ಯ ಶಕ್ತಿಯನ್ನು ಪಡೆದ ಎಂಬುದನ್ನು ನೋಡಲು ಮನುಷ್ಯ ರೂಪದಲ್ಲಿ ಅವಳಿರಲಿಲ್ಲ. ಬಾವಿಯ ಜಲದಲ್ಲಿದ್ದ ಪಿಶಾಚ ರೂಪಕ್ಕೆ ರಾಘವೇಂದ್ರರು ಮುಕ್ತಿಕೊಟ್ಟರು ಎಂದು ಕೇಳಿದ್ದೇವಷ್ಟೆ?

ಸರ್. ಎಂ ವಿಶ್ವೇಶ್ವರಯ್ಯನವರನ್ನು ನೋಡಿ. [ಇಮ್ಮಡಿಯನ್ನಲ್ಲ; ಇಮ್ಮಡಿಗೆ ಎರಡು ಮದುವೆ] ಅವರು ಸಂಸಾರಕ್ಕಾಗಿ ಸಮಯ ವ್ಯಯಿಸಲೇ ಇಲ್ಲ. ಹೆಂಡತಿ ಯಾವಾಗಲೋ ಬಿಟ್ಟು ಹೋದಳಂತೆ. ಆದರೆ ಅದು ಸಮಾಜಕ್ಕೆ ಮುಖ್ಯವಾಗಲಿಲ್ಲ. ಅವಳು ಮನೆಯಲ್ಲಿ ಹಾಯಾಗಿದ್ದರೆ ಅವರು ಬೇಡವೆನ್ನುತ್ತಿರಲಿಲ್ಲ. ಖಾಸಗೀ ಜೀವನಕ್ಕೆ ಮಾತ್ರ ಅವರಲ್ಲಿ ಸಮಯವಿರಲಿಲ್ಲ ಅಷ್ಟೆ. ದಿವಾನರಾಗುವ ಮುಂಚಿನ ದಿನ ತನ್ನ ನೆಂಟರಿಷ್ಟರ ಬಳಗವನ್ನೆಲ್ಲ ಒತಣಕ್ಕೆ ಕರೆದು ಹೀಗೆ ಹೇಳಿದರು- “ನೋಡ್ರಯ್ಯಾ, ನಾಳೆಯಿಂದ ನಾನು ದಿವಾನ ಆಗ್ತಿದೀನಿ, ನನ್ನ ಹೆಸರನ್ನು ಹೇಳಿಕೊಂಡು ಯಾವುದೋ ವಶೀಲಿ ಹಚ್ಚಬೇಡಿ ಮತ್ತು ಯಾವುದೋ ಕೆಲಸ ಆಗಬೇಕೆಂದು ನನ್ನಲ್ಲಿಗೆ ಬಂದು ಕೇಳಬೇಡಿ. ನಾನು ನಿಮ್ಮೆಲ್ಲರ ನೆಂಟನೇನೋ ಹೌದು, ಆದರೆ ರಾಜಕಾರ್ಯದ ನೀತಿ ನಿಯಮಗಳನ್ನು ಉಲ್ಲಂಘಿಸಿ ನಿಮಗಾರಿಗೂ ಸಹಾಯ ಮಾಡಲಾರೆ. ನನ್ನ ಸೇವೆಯೆಲ್ಲ ಸಮಷ್ಟಿ ಸಮಾಜದ ಸರ್ವತೋಮುಖ ಏಳಿಗೆಗಾಗಿ ಮಾತ್ರ.”

ಜೀವನದಲ್ಲಿ ಸಾಧಿಸಿದ ಅಮೋಘ ಸಾಧನೆಗಳಿಗೆ ಮತ್ತು ಸಲ್ಲಿಸಿದ ಸೇವೆಗಳಿಗೆ ಮೈಸೂರು ಮಹರಾಜರು ಅವರನ್ನು ಗೌರವಿಸಿ, ಬಹುಮಾನವಿತ್ತರೆ, ಬಹುಮಾನದ ಹಣದಲ್ಲಿ ಎಸ್.ಜೆ. ಪಾಲಿಟೆಕ್ನಿಕ್ ಕಟ್ಟಿದರು. ಅದಕ್ಕೂ ಸಹ ತನ್ನ ಹೆಸರನ್ನು ಇಡಲು ಬಿಡಲಿಲ್ಲ!

ಇಂತಹ ಸಂತರ ಉದಾಹರಣೆಗಳು ಹೇಳುತ್ತ ಹೋದರೆ ಹಲವಿವೆ. ನೋಡುವ ಕಣ್ಣುಗಳು ಬೇಕಷ್ಟೆ. ಸಂತನೆಂದರೆ ಕೇವಲ ಕಾವಿವೇಷಧಾರಿಯಲ್ಲ. ಸಂತ ಯಾವ ವೇಷದಲ್ಲಿದ್ದರೂ ಅವನ ಸಂಸ್ಕಾರವೇ ಆತ ಸಂತನೆಂದು ಹೇಳುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲೂ ನಮ್ಮಲ್ಲಿ ಹಲವು ಸಂತರಿದ್ದರು, ಸ್ವಾತಂತ್ರ್ಯದ ಹೋರಾಟದಲ್ಲೂ ಭಾಗವಹಿಸಿದ ಸಂತರಿದ್ದರು. ಅವರೆಲ್ಲರಿಗೂ ಬ್ರಿಟಿಷರನ್ನು ಕೊಲ್ಲುವುದು ಬೇಕಾಗಿರಲಿಲ್ಲ; ನಮ್ಮ ದೇಶದ ಜನರ ಜಾಗದ ಆಳ್ವಿಕೆಯನ್ನು ನಮ್ಮಲ್ಲಿನವರ ಕೈಗೆ ಕೊಟ್ಟು ಬ್ರಿಟಿಷರು ಸ್ವಸ್ಥಾನಕ್ಕೆ ಮರಳುವುದು ಬೇಕಾಗಿತ್ತಷ್ಟೆ. ಅರವಿಂದ ಘೋಷ್ ಹೆಸರನ್ನು ನೀವೆಲ್ಲ ಬಲ್ಲಿರಿ. ಅದರಂತೆಯೇ ಸರಸಂಘ ಸ್ಥಾಪಿಸಿದ ಡಾ ಹೆಡ್ಗೇವಾರರು, ಗುರೂಜಿ, ದೀನ ದಯಾಳ್ ಉಪಾಧ್ಯಾಯ ಇವರೆಲ್ಲರ ಜೀವನದ ದಿನಚರಿಗಳನ್ನು ನೀವೊಮ್ಮೆ ಕಣ್ತೆರೆದು ಓದಬೇಕು. ಹಾಗಂತ ತುಮರಿ ಆರ್.ಎಸ್.ಎಸ್. ಬಳಗದವನಲ್ಲ; ಆದರೆ ತುಮರಿಗೆ ಆರ್.ಎಸ್.ಎಸ್. ಎಂದರೆ ಅಪಾರ ಪ್ರೀತಿಯಿದೆ, ಗೌರವವಿದೆ.

ನಿಷ್ಠಾವಂತರ ಜೀವನಕ್ಕೆ, ಅವರ ಪರಿಶ್ರಮದ ದುಡಿಮೆಗೆ, ತ್ಯಾಗಕ್ಕೆ, ಸೇವೆಗೆ ಅಪಾರವಾದ ಮಾನ್ಯತೆಯಿದೆ. ಅಂತವರು ಭೌತಿಕವಾಗಿ ಅಳಿದರೂ ಅವರ ಚೇತನದ ಶಕ್ತಿ ಈ ಭೂಮಿಯಲ್ಲಿ ಹಬ್ಬಿಯೇ ಇರುತ್ತದೆ. ಆ ಸಾತ್ವಿಕ ಶಕ್ತಿಯನ್ನು ನಾವು ನೇರವಾಗಿ ಕಾಣಲಾರೆವಾದರೂ ಶಕ್ತಿಯ ಅನುಭವ ನಮಗೆ ಆಗಾಗ ಆಗುತ್ತದೆ. ರಾಜರ ಕಾಲಕ್ಕೆ ವೀರಯೋಧರು ಸತ್ತಲ್ಲಿ ವೀರಗಲ್ಲು ಅಥವಾ ಜಟ್ಟುಗನನ್ನು ಸ್ಥಾಪಿಸುತ್ತಿದ್ದರಂತೆ. ಗಂಡನಮೇಲಿನ ಪ್ರೀತಿಯಿಂದ ತನ್ನನ್ನು ದಹಿಸಿಕೊಂಡ ಸತಿಯ ನೆನಪಿಗೆ ಮಹಾಸತಿ ಕಲ್ಲುಗಳನ್ನು ನೆಟ್ಟು ಪೂಜಿಸಿ ಗೌರವಿಸುತ್ತಿದ್ದ್ರರಂತೆ. ಅಂತಹ ಸ್ಥಾನಗಳಲ್ಲೆಲ್ಲ ಒಂದು ವಿಧವಾದ ಪಾಸಿಟಿವ್ ಎನರ್ಜಿ ಇರುತ್ತದೆ.

ಸಂತರು ಎಲ್ಲೇ ಹೋದರೂ ಅವರ ನಡೆನುಡಿಗೆ ಜನ ತಲೆಬಾಗಿ ವಂದಿಸುತ್ತಾರೆ. ಸಂತರ ದಾರಿಗೆ ಅಡ್ಡಬರಲು ಅವರಿಗೆ ಮನಸ್ಸೇ ಬಾರದು. ಮೋದಿಯವರ ವಿಷಯಕ್ಕೆ ಮರಳೋಣ. ಮೋದಿಯನರನ್ನು ಜನ ಯಾಕೆ ಇಷ್ಟೊಂದು ಕೊಂಡಾಡುತ್ತಾರೆ? ಜನರಿಗೆ ತಲೆಯಿಲ್ಲವೇ? ಮಠದವ ಮಾಡಿದಂತೆ ಅವರು ವಶೀಕರಣ ವಿದ್ಯೆ ಪ್ರಯೋಗಿಸಿದರೇ? ಖಂಡಿತವಾಗಿಯೂ ಇಲ್ಲ.

ಶತಮಾನದಲ್ಲಿ ಸಾಧ್ಯವಾಗದ ಕೆಲಸ ಕ್ಷಣಮಾತ್ರದಲ್ಲಿ ನಡೆಯುವುದನ್ನು ಕಂಡಾಗ ನಿಮಗೇನನ್ನಿಸುತ್ತದೆ? ನಮ್ಮ ನೆಲವಲ್ಲದ ಅಬು ಧಾಬಿಯಲ್ಲಿ ಹಿಂದೂ ದೇವಸ್ಥಾನಕ್ಕೆ ಜಾಗವನ್ನು ಗಿಟ್ಟಿಸಿಕೊಂಡ ಮೋದಿಯ ಸಾಮರ್ಥ್ಯಕ್ಕೆ ಏನೆನ್ನುತ್ತೀರಿ? ಜಗತ್ತಿಗೆ ಅದರಲ್ಲೂ ಭಾರತಕ್ಕೆ ಮಾರಕನಾದ ದಾವೂದ್ ಇಬ್ರಾಹಿಂ ವಿಷಯವನ್ನು ಅದೇ ಜನಾಂಗದ ನಾಡಿನ ಆಳರಸರ ಎದುರು ಪ್ರಸ್ತಾಪಿಸಲು ಎದೆಗುಂಡಿಗೆ ಎಷ್ಟು ಗಟ್ಟಿ ಇರಬೇಡ! ರಾಜಕೀಯ ನಾಯಕರಲ್ಲಿ ಮೋದಿಯಲ್ಲಿ ಮಾತ್ರ ಅಂತದ್ದೊಂದು ವಿಶಿಷ್ಟ ಶಕ್ತಿಯಿದೆ, ತಾಕತ್ತಿದೆ. ಅದನ್ನೇ ನಾವು ಸಾತ್ವಿಕ ಶಕ್ತಿ ಎನ್ನುತ್ತೇವೆ.

ಜೋಳಿಗೆ ಹಿಡಿದ ಸನ್ಯಾಸಿ ಊರೊಳಗೆ ಹೋದಾಗ ಅವನ ಜೋಳಿಗೆ ತುಂಬುವುದು ಕಷ್ಟವಾಗುವುದಿಲ್ಲ. ತುಂಬಿದ ಜೋಳಿಗೆಯ ವಸ್ತುವಿಶೇಷಗಳು ಸ್ವಾರ್ಥರಹಿತವಾಗಿ ಸದುಪಯೋಗಗೊಂಡರೆ ಸನ್ಯಾಸಿ ಜೀವಂತ ದೇವರಾಗುತ್ತಾನೆ. ಎಲ್ಲರಲ್ಲೂ ಭಗವಂತನ ಸ್ವರೂಪವನ್ನೇ ಆತ ಚಿತ್ರಿಸುತ್ತ ಹೋಗುವುದರಿಂದ ಭಗವಂತನೇ ಅವನನ್ನು ಆದರಿಸುತ್ತಾನೆ; ಕೊನೆಗೆ ಭಗವಂತನೇ ಅಂತಹ ಭಕ್ತನನ್ನು ಆರಾಧಿಸುತ್ತಾನೆ. ಇದಕ್ಕೆ ಬಲಿಚಕ್ರವರ್ತಿಯ ಉದಾಹರಣೆಯೇ ಸಾಕ್ಷಿ. ಕೊಟ್ಟ ಮಾತಿಗೆ ತಪ್ಪದಂತೆ ನಡೆದ ಬಲಿಯನ್ನು ಪಾತಾಳಕ್ಕೆ ತುಳಿದರೂ ಬಾಗಿಲ ಭಟನಾಗಿ ತಾನೇ ನಿಂತು ಕಾಯುವ ವರನೀಡಿದನಲ್ಲವೇ? ಇದಕ್ಕೇನೆನ್ನುತ್ತೀರಿ?

ಮಾತೆತ್ತಿದರೆ ಮೋದಿ ಮೇನಿಯಾ ಎನ್ನುವವರಿದ್ದಾರೆ. ಆದರೆ ಇದುವರೆಗಿನ ಮೋದಿಯ ಸಾಧನೆಯನ್ನು ಮೊನ್ನೆಯ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ನೀವೆಲ್ಲ ಕೇಳಿದ್ದೀರಿ ಎಂದುಕೊಳ್ಳುತ್ತೇನೆ. ಅದು ತನ್ನ ಸರಕಾರದ ಸಾಧನೆಯನ್ನು ಹೊಗಳಿಕೊಳ್ಳಲು ಮಾಡಿದ ಭಾಷಣವಲ್ಲ. ಏನು ಮಾಡಲು ಸಾಧ್ಯವಾಯ್ತು ಎಂಬ ’ವರದಿವಾಚನ’ ಎಂದು ಹೇಳಬಹುದು. ಭವ್ಯ ಭಾರತದ ಪ್ರತಿಯೊಬ್ಬ ಪ್ರಜೆಯಮೇಲೂ ಮೋದಿಗೆ ಅಪಾರ ಕಾಳಜಿಯಿದೆ, ಅದರಂತೆ ಈ ಜಗತ್ತಿನ ಜನರೆಲ್ಲರ ಬಗೆಗೂ ಸಹ ಅವರ ಅಂತಃಕರಣ ಮಿಡಿಯುತ್ತದೆ. ಹೀಗಾಗಿ ಮೋದಿ ಹಾದುಹೋದರೆ ಸಾಕು ಜನ ಎದ್ದುನಿಂತು ನಮಸ್ಕರಿಸುತ್ತಾರೆ, ಕೈಕುಲುಕುತ್ತಾರೆ, ತಲೆಬಾಗುತ್ತಾರೆ, ಆಲಿಂಗಿಸಿಕೊಳ್ಳಲು ಬಯಸುತ್ತಾರೆ. ಮಕ್ಕಳಿಂದ ಮುದುಕರವರೆಗೆ, ಬಡವರಿಂದ ಬಲ್ಲಿದರವರೆಗೆ ಮೋದಿಯನ್ನು ವಿರೋಧಿಸುವ ಮನೋಭಾವ ಇರುವವರು ಕಡಿಮೆ. ಹಾಗೊಮ್ಮೆ ಇದ್ದರೂ, ಮೋದಿ ಎದುರಾದಾಗ ಅವರಲ್ಲಿ ಪ್ರಸನ್ನತೆ ತಂತಾನೇ ಹುಟ್ಟಿಕೊಳ್ಳುತ್ತದೆ.

ತುಮರಿಯನ್ನು ನೀವೆಲ್ಲ ಮೆಚ್ಚಿದ್ದೀರಿ, ಅವನ ಲೇಖನಗಳನ್ನು ಇಷ್ಟಪಟ್ಟು ಓದುತ್ತೀರಿ ಮತ್ತು ಸಂದೇಶ ಕೊಡುತ್ತೀರಿ ಯಾಕೆಂದರೆ ತುಮರಿ ಯಾರದೋ ಒತ್ತಡ ಮತ್ತು ಒತ್ತಾಯಕ್ಕಾಗಿ ಏನನ್ನೂ ಬರೆಯೋದಿಲ್ಲ ಮತ್ತು ಹೇಳಬೇಕೆಂದು ಕಂಡ ಸತ್ಯವನ್ನು ಹೇಳದೇ ಇರಲಾರ ಎಂಬ ಅನಿಸಿಕೆಯಿಂದೆ. ಅನಿಸಿಕೆ ನಂಬಿಕೆಯಾಗಿ ಬೆಳೆದಿದೆ. ಅದನ್ನು ಕಿಂಚಿತ್ತೂ ದುರುಪಯೋಗಪಡಿಸಿಕೊಳ್ಳದಂತೆ ಸಮಾಜದ ಒಳಿತಿಗಾಗಿ ತುಮರಿ ಸಾಧ್ಯವಾದ ರೀತಿಯಲ್ಲಿ ಈ ಸೇವೆ ನಡೆಸುತ್ತಿದ್ದಾನೆಯೇ ಹೊರತು ಇನ್ನಾವ ಪ್ರತಿಫಲವನ್ನಾಗಲೀ, ಹಣದ ಕವರನ್ನಾಗಲೀ ಕನಸಿನಲೂ ಸ್ವೀಕರಿಸುವುದಿಲ್ಲ.

ತುಮರಿ ಹೇಳುವುದರಲ್ಲಿ ಸತ್ಯವಿದೆ ಎಂದು ಅನುಭವಪಟ್ಟುಕೊಂಡ ಹಲವರು ಇಂದು ಸಹಸ್ರಾರು ಸಂಖ್ಯೆಯಲ್ಲಿ ಅವಿತು ಓದುತ್ತಾರೆ. ಅವರಲ್ಲಿ ಕೆಲವರಾದರೂ ಸಾಮಾಜಿಕ ಕಳಕಳಿಯಿಂದ ಧಾರ್ಮಿಕ ಸೀಟನ್ನು ಶುದ್ಧಗೊಳಿಸಿದರೆ ತುಮರಿಗೆ ಅವರೊಂದು ಬಹುಮಾನ ಕೊಟ್ಟಂತಾಗುತ್ತದೆ. ಅದೊಂದೇ ನಿರೀಕ್ಷೆಯಿಂದ ತುಮರಿ ಬರೆಯುತ್ತಿದ್ದಾನೆ ಮತ್ತು ಅನೇಕರಿಗೆ ಸತ್ಯವಿಷಯಗಳನ್ನು ತಲ್ಪಿಸಿದ್ದಾನೆ.

ತನ್ನ ಭಾಷಣಕ್ಕೆ ಹಳ್ಳಿಗಳಿಂದ ಲಾರಿಗಳಲ್ಲಿ ಜನರನ್ನು ಹಣಕೊಟ್ಟು ಕರೆತರುವಂತ ಪ್ರಧಾನಿಗಳನ್ನೂ ಈ ದೇಶ ಕಂಡಿದೆ, ತನ್ನ ಭಾಷಣವನ್ನು ದೂರದಿಂದಲೇ ನೋಡಿ ಸಾಕು, ಎಲ್ಲರೂ ಇಲ್ಲಿಗೆ ಬಂದರೆ ಮೂಕುನುಗ್ಗಲಿನಲ್ಲಿ ನಿಮಗೇ ತೊಂದರೆಯಾಗುವುದು ಎಂದು ಹೇಳಬೇಕಾದ ಪರಿಸ್ಥಿತಿ ಎದುರಿಸಿತ್ತಿರುವ ಪ್ರಧಾನಿಗಳೂ ಇದ್ದಾರೆ. ಈ ಎರಡೂ ಕೆಟೆಗರಿಗೆ ಉದಾರಹಣೆಗಳನ್ನು ನಾನು ಬಿಡಿಸಿ ಹೇಳಬೇಕಿಲ್ಲ.

ಕಳ್ಳರಿಗೆ ಅಳ್ಳೆದೆ ಎಂಬಂತೆ ತಾವು ಮಾಡಿದ ಅಪರಾಧಕ್ಕೆ ಈಗೀಗ ಒಳಗೊಳಗೇ ಅಳುತ್ತಿರುವ, ನಡುಗುತ್ತಿರುವ ಕುಟಿಲ ಕಾರಸ್ಥಾನಿ ಅರ್ಜುನ ಸನ್ಯಾಸಿಗಳೂ ನಮ್ಮಲ್ಲಿದ್ದಾರೆ. ’ಸ್ವಜನ ಹಿತಾಯ ಮತ್ತು ಸ್ವಹಿತಾಯ’ ಎಂಬುದು ಅವರು ಪಠಿಸುವ ಮಂತ್ರ. ಈಗ ಅದರ ಬದಲಿಗೆ ’ನಾವಿದ್ದೇವೆ’ಎಂಬುದನ್ನು ಮಂತ್ರವಾಗಿ ಬೈ ಹಾರ್ಟ್ ಮಾಡಿಕೊಂಡಿದ್ದಾರಂತೆ. ಕೆಲವಷ್ಟು ದಿನ ವೇದಿಕೆಯಲ್ಲಿ ಕುರಿಭಕ್ತರ ಜೈಕಾರದ ಬಳಗದ ಎದುರು ಅಟಾಟೋಪದಿಂದ ಮೆರೆಯುವ ಅಂತಹ ’ಸನ್ಯಾಸಿ’ಗಳು ಹಾದುಹೋದರೆ ನಮಸ್ಕರಿಸಬೇಕೆಂಬ ಭಾವನೆ ಅಂಧಭಕ್ತರನ್ನುಳಿದು ಇನ್ಯಾರಲ್ಲೂ ಒಡಮೂಡಲಿಲ್ಲ. ಯಾಕೆಂದರೆ ಆ ವ್ಯಕ್ತಿಯಲ್ಲಿ ಅಂತಃಸತ್ವ ಎಂಬುದಕ್ಕೆ ಅವಕಾಶವೇ ಇಲ್ಲ. ’ಸನ್ಯಾಸಿ’ಯೊಬ್ಬ ಆತ್ಮವಂಚನೆ ಮಾಡಿಕೊಳ್ಳುತ್ತಿರುವುದಕ್ಕೆ ಪ್ರತ್ಯಕ್ಷ ಉದಾಹರಣೆ ಇದಾಗಿದೆ.

ಕೇವಲ ಡಂಬಾಚಾರಕ್ಕಾಗಿ ಭಾಷಣ ಕೊರೆಯುವರರ ಮಾತುಗಳು ಕ್ರಮೇಣ ನಿಸ್ಸಾರವಾಗುತ್ತವೆ. ಅವರ ಮುಖ ಬರುಬರುತ್ತ ನಿಸ್ತೇಜವಾಗುತ್ತದೆ. ಯೋಗವೇ ಹೇಳುತ್ತದೆ-ಯಾರು ಯೋಗವನ್ನು ಆಚರಿಸಿ ಸದಾಚಾರಿಯಾಗಿರುತ್ತಾನೋ ಅವನ ಮುಖದಲ್ಲೊಂದು ಅವ್ಯಕ್ತ ಆಕರ್ಷಣೆ ಇರುತ್ತದೆ ಅಂತ. ಕೆಲವರು ಕೆಲವು ಕಾಲ ಬಣ್ಣ ಬೆಡಗುಗಳಿಂದ ಮತ್ತು ಕೃತ್ರಿಮ ಮಂದಹಾಸದಿಂದ, ವಶೀಕರಣ ವಿದ್ಯೆಯನ್ನುಪಯೋಗಿಸಿ ಜನರನ್ನು ತಮ್ಮ ಕಾಲಿಗೆ ಬೀಳಿಸಿಕೊಳ್ಳುತ್ತಾರೆ; ಅಂತಹ ಜಾದು ಬಹಳಕಾಲ ನಡೆಯೋದಿಲ್ಲ.

ವ್ಯಕ್ತಿ ಪ್ರಾಮಾಣಿಕನಾಗಿದ್ದರೆ, ಅವನ ನಡೆನುಡಿಗಳಲ್ಲಿ ಸಮಾಜಹಿತವಿದ್ದರೆ ಅದನ್ನವನು ಹೊಸದಾಗಿ ಹೇಳಬೇಕಾಗುವುದಿಲ್ಲ. ಜನತೆಗೆ ಅಂತ ನಿಷ್ಕಳಂಕ ವ್ಯಕ್ತಿತ್ವದ ಹೃದಯದಿಂದ ಪುಟಿಯುವ ಪ್ರೀತಿ-ಸೌಹಾರ್ದದ ಭಾವನೆಗಳೇ ಎಲ್ಲವನ್ನೂ ಹೇಳಿಬಿಡುತ್ತವೆ. ಹೀಗಾಗಿಯೇ, ಮೋದಿ ಹಾದುಹೋದರೆ ಜನ ಎದ್ದುನಿಂತು ಗೌರವಿಸುತ್ತಾರೆ.

ಅಷ್ಟೆಲ್ಲ ಎತ್ತರವನ್ನು ಏರಿದ ಮೋದಿ ಜನನ ಮೂಲದಿಂದ ನೋಡಿದರೆ ಮಾಂಸಾಹಾರ ಭಕ್ಷಿಸಬಹುದಿತ್ತು; ಆದರೆ ಮೋದಿಗದು ಬೇಕಾಗಿಲ್ಲ. ಹಾಗಾಗಿಯೇ, ಆತಿಥ್ಯ ನೀಡುತ್ತಿರುವ ಅಬುಧಾಬಿ, ಭಾರತೀಯ ತಾರಾ ಅಡುಗೆಭಟ್ಟರಾದ ಸಂಜೀವ ಕಪೂರರನ್ನು ಕರೆಸಿಕೊಂಡು ಶುದ್ಧ ಶಾಕಾಹಾರಿ ಅಡುಗೆಯನ್ನೇ ತಯಾರಿಸಿ ಬಡಿಸುತ್ತಿದೆ! ಇದಷ್ಟೇ ಅಲ್ಲ ನವರಾತ್ರಿಯ ಒಂಬತ್ತು ದಿನಗಳು ಕೇವಲ ಲಿಂಬು ಪಾನಕ ಸೇವಿಸಿ ವ್ರತನಡೆಸುತ್ತಾರೆ ಮೋದಿ ಎಂಬುದು ನಿಮಗೆಲ್ಲ ಗೊತ್ತಿದೆ. ನಾವೆಲ್ಲ ಮೋದಿಯಲ್ಲಿ ನಿಜವಾದ ಬ್ರಾಹ್ಮಣನನ್ನು ಕಂಡಿದ್ದೇವೆ, ಒಬ್ಬ ಸಂತನನ್ನು ಕಾಣುತ್ತಿದ್ದೇವೆ. ಸಾವಿರ ಪತ್ರಗಳನ್ನೋದುವ ಮೋದಿ ದಕ್ಷಿಣ ಭಾರತೀಯ ಮಹಿಳೆಯೋರ್ವಳ ಅಹವಾಲನ್ನೂ ಓದದಿರಲಾರರು ಎಂಬ ವಿಶ್ವಾಸ ನಮಗೆಲ್ಲ ಇದೆ.

ಉನ್ನತ ವರ್ಗವೆಂದು ಹೆಸರಾದ ವರ್ಗವೊಂದರ ಧಾರ್ಮಿಕ ಮುಖಂಡನಾದವನೊಬ್ಬ ತಾನು ಹೊದಲ್ಲೆಲ್ಲ ಜೈಕಾರ ಹಾಕುವವರು ಸೇರಬೇಕೆಂದೂ ಪ್ರಚಾರ ಮಾಡಬೇಕೆಂದೂ ಬಯಸುತ್ತಾನೆ. ಆಂತರ್ಯದಲ್ಲಿ ಈರುಳ್ಳಿ ಉಪ್ಪಿಟ್ಟಿನ ಬಯಕೆ, ಇನ್ಶೂರನ್ಸ್ ಪಾಲಿಸಿ ಬಯಕೆ, ಸುಂದರಿಯರ ಅಂಗಸಂಗ ಬಯಕೆ, ಖಾಸಗೀ ಅಕೌಂಟಿನಲ್ಲಿ ಕೋಟಿಕೋಟಿ ಬಚ್ಚಿಟ್ಟುಕೊಳ್ಳುವ ಬಯಕೆ ಎಲ್ಲವೂ ಇರುತ್ತದೆ. ಉಪಾಧ್ಯಾಯ, ವೈದ್ಯ ಇತ್ಯಾದಿ ಹಲವು ಪಾತ್ರಗಳಂತೆ ಸನ್ಯಾಸವೂ ಒಂದು ಪಾತ್ರ ಎಂದುಕೊಂಡುಬಿಟ್ಟಿದ್ದಾನೆ. ಪರವಾಗಿರಲಿಲ್ಲ, ಸನ್ಯಾಸದ ಪಾತ್ರಕ್ಕೆ ಹೇಳಿದ ನಿಯಮಗಳನ್ನು ಪಾಲಿಸಿದ್ದರಾದರೂ ಆಗುತ್ತಿತ್ತು; ಆದರೆ ಅದಿಲ್ಲ. ಹೀಗಾಗಿ ಜನ ಜಾಗೃತರಾಗಿದ್ದಾರೆ; ಆದಷ್ಟು ಶೀಘ್ರ ಎಲ್ಲಾ ರೀತಿಯ ಮಾಸಗಳನ್ನೂ ಮುಗಿಸಿ ಪರಪ್ಪನ ಅಗ್ರಹಾರಕ್ಕೆ ಕಳಿಸಿಕೊಡುವತ್ತ ತಯಾರಿ ನಡೆಸುತ್ತಿದ್ದಾರೆ.

Thumari Ramachandra

source: https://www.facebook.com/groups/1499395003680065/permalink/1652603438359220/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s