ಚಿಪ್ಪೊಳಗೆ ಮುತ್ತಿಲ್ಲ ಕೃತ್ರಿಮದ ಗುಂಡು

ಚಿಪ್ಪೊಳಗೆ ಮುತ್ತಿಲ್ಲ ಕೃತ್ರಿಮದ ಗುಂಡು

’ಕಾಲಾಯ ತಸ್ಮೈ ನಮಃ’ ಎಂದು ಯಾವಾಗ ಯಾರು ಮಾಡಿದರೋ ಭಗವಂತ ಬಲ್ಲ; ಆದರೆ ಪ್ರಾಪಂಚಿಕರಿಗೆ ಅದರ ಅನುಭವ ಆಗುತ್ತಲೇ ಇರುತ್ತದೆ. ಕಾಲಕ್ಕೆ ತಕ್ಕಂತೆ ಒರಿಜಿನಲ್ ಜಾಗಕ್ಕೆ ಡೂಪ್ಲಿಕೇಟ್‍ಗಳು ಬಂದು ಕುಳಿತಿವೆ. ಹೊಟ್ಟೆಗೆ ತಿನ್ನುವ ಅನ್ನಕ್ಕೆ ಬೇಕಾದ ಅಕ್ಕಿಯೂ ಡೂಪ್ಲಿಕೇಟ್ ಆಗುತ್ತಿರುವ ಕಾಲ! ಹೀಗಾಗಿ ಸನ್ಯಾಸಿಯಾದವ ಡೂಪ್ಲಿಕೇಟ್ ಅಲ್ಲ ಎಂದು ಜೈಕಾರ ಹಾಕುವ ಹಾಗಿಲ್ಲ.

ಮೊನ್ನೆ ಪ್ರಸ್ತಾಪಿಸಿದ ವಿಷಯದಲ್ಲಿ ಶಂಕರರ ಒಂದು ವಿಷಯವನ್ನು ಹೇಳಲು ಮರೆತಿದ್ದೆ. ಭಿಕ್ಷೆಗೆ ತೆರಳಿದ ಶಂಕರರಿಗೆ ಒಂದು ಮನೆಯಲ್ಲಿ ಆ ಬಡವಿ ಏನನ್ನೂ ಕೊಡಲಾರದಂತಹ ಸ್ಥಿತಿ. ಕೊಡುವ ಮನಸ್ಸಿದೆ ಕೊಡಲು ಏನೂ ಇಲ್ಲ. ಸಮರ್ಥರಂತೆ ಶಂಕರರು ಆ ಮನೆಯಲ್ಲೇಕೋ ಭಿಕ್ಷೆಯ ಹಠ ಹಿಡಿದರು, ಏನನ್ನಾದರೂ ನೀಡೆಂದರು. ಅಡುಗೆ ಮನೆಯಲ್ಲೆಲ್ಲ ಇದ್ದಿದ್ದೆಂದರೆ ಒಂದಷ್ಟು ಉಪ್ಪು ಮತ್ತು ಅದರಲ್ಲಿ ಹಾಕಿಟ್ಟ ನೆಲ್ಲಿಕಾಯಿಗಳು.

“ಭವತಿ ಭಿಕ್ಷಾಂ ದೇಹಿ” ಶಂಕರರು ಅದನ್ನೇ ಹಾಕೆಂದರು, ಆ ತಾಯಿ ಕಣ್ಣೀರು ಸುರಿಸುತ್ತ ಅದನ್ನೇ ಶಂಕರ ಹಿಡಿದ ಜೋಳಿಗೆಗೆ ಹಾಕಿದಳು. ಕ್ಷಣದಲ್ಲಿ ಶಂಕರರ ಬಾಯಿಂದ ಉದ್ಗಾರ ರೂಪದಲ್ಲಿ ಕನಕಧಾರಾ ಸ್ತೋತ್ರ ಹರಿಯಿತು. ಜನ್ಮಾಂತರಗಳ ಸಂಚಿತ ಕರ್ಮಫಲಗಳಿಂದ ಆರ್ಥಿಕ ಬಡತನವನ್ನು ಅನುಭವಿಸುತ್ತಿರುವ ಆ ಕುಟುಂಬಕ್ಕೆ ತನ್ನ ತಪಸ್ಸಿನ ಫಲವನ್ನು ಧಾರೆಯೆರೆದರು. ಮನೆಯಲ್ಲಿ ಬಂಗಾರದ ನಾಣ್ಯಗಳ ಮಳೆ ಸುರಿಯಿತು. ಆ ಮನೆಯಿದ್ದ ಜಾಗವನ್ನು ಕೇರಳಿಗರು ಹನ್ನೆರಡು ಶತಮಾನಗಳಿಂದ ಹಾಗೇ ಕಾಪಾಡಿಕೊಂಡು ಬಂದಿದ್ದಾರೆ.

ಇನ್ನೊಮ್ಮೆ , “ನಡೆದು ಬಾ ನೀರಿನ ಮೇಲೆ” ಎಂದು ಶಿಷ್ಯನಿಗೆ ಹೇಳಿದರು. ಆ ಶಿಷ್ಯನಲ್ಲಿ ಎಳ್ಳಷ್ಟೂ ಅಧೈರ್ಯವಿರಲಿಲ್ಲ. ಮರುಮಾತಿಲ್ಲದೇ ಆತ ನಡೆದೇ ಬಂದ. ಆತ ಹೆಜ್ಜೆಯಿಟ್ಟ ಜಾಗದಲ್ಲೆಲ್ಲ ಆ ನೀರಿನಾಳದಿಂದ ಕಮಲದ ಎಲೆಗಳು ಮೇಲೆದ್ದು ಗಟ್ಟಿಯಾಗಿ ಭಾರವನ್ನು ಹೊತ್ತವು! ಆತ ಪದ್ಮಪಾದಾನಂದ. ಗೋಕರ್ಣ ಮೂಲದ ಮೋಕ್ಷಾಪೇಕ್ಷಿ ಹುಡುಗ ಸಕಲ ವೇದ, ಶಾಸ್ತ್ರ ವಿದ್ವತ್ತನ್ನು ಗಳಿಸಿ, ಹಸ್ತದಲ್ಲಿನ ನೆಲ್ಲಿಕಾಯಿಯಂತೆ ಸಲೀಸಾಗಿ ಅವುಗಳನ್ನು ಬಳಸುತ್ತಿದ್ದನಂತೆ. ಸನ್ಯಾಸಿಯ ಸಕಲ ಅರ್ಹತೆಯನ್ನೂ ದೀಕ್ಷೆಯನ್ನೂ ಪಡೆದ ನಂತರ ಅವ ಹಸ್ತಾಮಲಕನಾದ.

ನಾಲ್ಕು ದಿಕ್ಕುಗಳಲ್ಲಿ ಆಮ್ನಾಯ ಮಠಗಳನ್ನು ಸ್ಥಾಪಿಸಿದ ಶಂಕರರು ಕೇದಾರದ ಶಿಖರವೇರಿ ಮರೆಯಾದ ನಂತರ ಹಲವು ಮಠಮಾನ್ಯಗಳು ಹುಟ್ಟಿಕೊಂಡವು. ಪಂಥ ಭೇದಗಳು, ಒಳಜಗಳಗಳು ಮತ್ತೆ ಆರಂಭವಾದವು. ಸೃಷ್ಟಿಕರ್ತನ ಜಗತ್ತಿನ ನಿಯಮವನ್ನು ತಪ್ಪಿಸುವುದು ಶಂಕರರ ಇಚ್ಛೆಯಲ್ಲ. ಹಾಗಾಗಿ ಅವರು “ನೋಡಿ, ವೈದಿಕ ಧರ್ಮ ಎಂದರೆ ಇದು” ಎಂದು ತೋರಿಸಿಕೊಟ್ಟರು. ಅವರ ನಂತರ ನಡೆದ ಬೆಳವಣಿಗೆಗಳನ್ನು ತಾವೆಲ್ಲ ಕೇಳಿದ್ದೀರಿ, ಓದಿದ್ದೀರಿ. ಶಂಕರರ ಜಾಗವನ್ನು ತುಂಬಲು ಯಾರಿಂದಲೂ ಸಾಧ್ಯವಾಗಲಿಲ್ಲ; ಪ್ರಾಯಶಃ ಸಾಧ್ಯವಾಗುವುದೂ ಇಲ್ಲ.

ಶರೀರವನ್ನೇ ಬಿಟ್ಟು ಹೊರಗೆ ಹೋಗಿ ಮಡಿದಿದ್ದ ರಾಜನ ಶರೀರವನ್ನು ಸೇರಿಕೊಂಡು ರಾಣಿಯರಲ್ಲಿ ಗುಟ್ಟಾಗಿ ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಪಡೆದು ಬಂದರು; ಅದೇ ಪರಕಾಯ ಪ್ರವೇಶ. ಆದರೆ ಆ ಕ್ಷಣದಲ್ಲೂ ಸಹ ರಾಣಿಯರ ಜೊತೆ ಕಾಮಕೇಳಿಯಲ್ಲಿ ತೊಡಗಲಿಲ್ಲ. ಕಳ್ಳ ಸನ್ಯಾಸಿಗಳು “ಶಂಕರರೂ ನಮ್ಮ ಹಾಗೆ” ಎನ್ನುತ್ತಾರೆ. ಮಂಡನ ಮಿಶ್ರರಲ್ಲಿ ಕಟ್ಟಿದ ಪಂಥದಲ್ಲಿ ಉಭಯಭಾರತಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ಸಲುವಾಗಿ ಮಾತ್ರ ಹಾಗೆ ಸ್ವಲ್ಪ ಕಾಲದ ಪರಕಾಯ ಪ್ರವೇಶ ಅಗತ್ಯವಾಯ್ತು. ಇದೂ ಕೂಡ ಅವರು ಅಷ್ಟಸಿದ್ಧಿಗಳನ್ನು ಪಡೆದುಕೊಂಡಿದ್ದರೆಂಬುದಕ್ಕೆ ಮತ್ತೊಂದು ಪುರಾವೆಯಾಗಿದೆ.

ಅತ್ಯದ್ಭುತ ಕೌತುಕಮಯ ಘಟನೆಗಳನ್ನು ನಡೆಸಿದ ಶಂಕರರು ಎಲ್ಲಿಯೂ ತನ್ನ ಪವಾಡ ಎಂದು ಹೇಳಲಿಲ್ಲ, ಅನುಗ್ರಹವೆನ್ನಲಿಲ್ಲ. ಪುಸ್ತಕ ಬರೆಸಲಿಲ್ಲ. ಬಡಾಯಿ ಕೊಚ್ಚಲಿಲ್ಲ. ಹಾಗೆ ಬಂದರು ಹೀಗೆ ಹೋದರು, ಅವರ ಕೃತಿಗಳು ಮತ್ತು ಸಾಧನೆಗಳ ಪರಿಣಾಮಗಳಿಂದ ಜನಮಾನಸದಲ್ಲಿ ಶಾಶ್ವತವಾಗಿ ಉಳಿದರು. ಮನಸ್ಸು ಮಾಡಿದ್ದರೆ ಜಗತ್ತನ್ನು ಸುತ್ತುವುದಕ್ಕೆ ಅವರಿಗೆ ಹೆಚ್ಚಿನ ಸಮಯ ಬೇಕಿರಲಿಲ್ಲ. ಆದರೆ ಅಂತದ್ದನ್ನೆಲ್ಲ ಅವರು ಬಯಸಲೇ ಇಲ್ಲ. ಪ್ರಚಾರಪ್ರಿಯರಾಗಲಿಲ್ಲ. ಅಂದಿನ ರಾಜರುಗಳಿಗೆ ಅವರ ತತ್ವಜ್ಞಾನದ ಸುದ್ದಿ ಕಿವಿಗೆ ಬಿದ್ದಿತ್ತು. ದೇದೀಪ್ಯಮಾನವಾದ ಅವರ ವ್ಯಕ್ತಿತ್ವವನ್ನು ಕಂಡು ಬೆರಗು ಮೂಡಿತ್ತು. ಅನೇಕ ರಾಜರುಗಳು ಆವರಿಂದ ದಿಗ್ದರ್ಶನ ಪಡೆದರು.

ಇಂದಿನ ಕಾಲಮಾನವೇ ಕೆಟ್ಟಿದೆ. ಜನರಲ್ಲಿ ಮತ್ತೆ ಯಾವುದು ಧರ್ಮ ಮತ್ತು ಯಾವುದು ಅಧರ್ಮ ಎಂಬ ತಿಳುವಳಿಕೆ ಹೋಗುತ್ತ ಬಂದಿದೆ. ಧರ್ಮದ ಸೋಗಿನಲ್ಲಿ ನಡೆಯುವ ಹಣಗಳಿಕೆಯ ವ್ಯವಹಾರಗಳನ್ನೆಲ್ಲ ಧರ್ಮವೆಂದೇ ತಿಳಿದು ಅನುಮೋದಿಸುವ ಜನ ಇದ್ದಾರೆ. ರಾಜಕಾರಣವಂತೂ ಸಂಪೂರ್ಣ ಹಡಾಲೆದ್ದು ಹೋಗಿದೆ. ಭಾರತದ ಯಾವ ನಗರ, ಮಹಾನಗರ, ಪಟ್ಟಣ ಎಲ್ಲೆಲ್ಲಿ ನೋಡಿದರೂ ದುರಸ್ತಿ ಕೆಲಸವೇ ನಡೆಯುತ್ತಿದೆ. ಯಾವಾಗ ಮುಗಿಯಿತು ಎಂದಾಗುತ್ತದೆ? ಇಲ್ಲ ಮುಗಿಯುವಂತದ್ದಲ್ಲ.

ದಿನದಿನವು ಕುಸಿದು ಕಟ್ಟಿಸಿಕೊಳುವ ಗುಡಿ ವಿಶ್ವ |
ಜನರೆಲ್ಲರಾಗುಡಿಯ ಕೆಲಸದಾಳುಗಳು ||
ಮನೆಯೇನು? ನಾಡೇನು? ಕುಲವೇನು? ಮಠವೇನು? |
ಎಣಿಸೆಲ್ಲವದೆಯೆಂದು – ಮಂಕುತಿಮ್ಮ ||

ಇಲ್ಲಿ ಡಿ.ವಿ.ಜಿಯವರು ಹೇಳಿರುವುದು ಸದುದ್ದೇಶದಿಂದ. ವಿಶ್ವವೇ ದೇವಸ್ಥಾನವೆಂದು ಭಾವಿಸಿದರೆ ಅದನ್ನು ನಿತ್ಯವೂ ಕಟ್ಟುವ ಕೆಲಸ ನಡೆಯುತ್ತಿರುತ್ತದೆ ಎಂದು. ಹಳತಾದಾಗ ಕುಸಿಯುತ್ತದೆ, ಹೊಸದಾಗಿ ಮತ್ತೆ ನಿರ್ಮಾಣಗೊಳ್ಳುತ್ತದೆ, ಇದು ಪ್ರಪಂಚದ ಸಹಜ ಧರ್ಮ.

ಆದರೆ, ನಮ್ಮಲ್ಲಿನ ರಾಜಕಾರಣಿಗಳ ಕೃಪೆಯಿಂದ ಬದುಕುವ ಕಂತ್ರಾಟುದಾರರು, ಬೇನಾಮಿ ಕಂತ್ರಾಟುದಾದರು ಕಟ್ಟುವ ಯಾವುದೇ ಕಟ್ಟಡಗಳಿಗೆ, ನಿರ್ಮಾಣ ಮಾಡುವ ರಸ್ತೆಗಳಿಗೆ ಡಿ.ವಿ.ಜಿ ಹೇಳಿದ್ದು ವಿಭಿನ್ನವಾಗಿ ಅಪ್ಲೈ ಆಗುತ್ತದೆ. ನಮ್ಮ ರಾಂಗ್ ವೇಷ್ ವರರು ಹೆಣ್ಣೊಂದಕ್ಕೆ ಗರ್ಭಾದಾನಮಾಡಿದ ಸಮಯದಲ್ಲೇ ನಿರ್ಮಿತವಾದ ರಸ್ತೆಗಳು ಆಕೆ ಮಗುವಿಗೆ ಜನ್ಮ ನೀಡುವ ಮೊದಲೇ ಹಲವು ನಕ್ಷೆಗಳನ್ನೊಳಗೊಳ್ಳುತ್ತವೆ. ಎಲ್ಲೇ ನೋಡಿ ಒಂದೊಂದು ಕಾಮಗಾರಿ. ವರ್ಷದ ಹಿಂದೆ ನಾನು ಶಿವಮೊಗ್ಗದಲ್ಲಿ ಕಂಡ ಅದೇ ರಸ್ತೆ ಆಗಲೂ ರಿಪೇರಿಯಲ್ಲಿತ್ತು ಮತ್ತು ಮೊನ್ನೆ ಮೊನ್ನೆ ನಾನು ಬಂದಾಗಲೂ ಮತ್ತೆ ರಿಪೇರಿಯಲ್ಲಿತ್ತು.

ಆಶ್ಚರ್ಯವಾಗುತ್ತದೆ, ಏನೂ ಇಲ್ಲದ ರಾಜಕಾರಣಿಗಳು ಒಂದೇ ಟರ್ಮಿನಲ್ಲಿ ಕೋಟ್ಯಂತರ ಆಸ್ತಿಗಳ ಒಡೆಯರಾಗುತ್ತಾರೆ. ಅವರ ರಾಜಕೀಯ ಜೀವನ ಮುಗಿಯೋದರೊಳಗೆ ಸಾವಿರಾರು ಕೋಟಿ ಗಳಿಸುತ್ತಾರೆ. ಹೇಗೆ ಗಳಿಸುತ್ತಾರೆ? ಯಾವ ಮೂಲದ ಆದಾಯವದು? ಯಾರೂ ಉತ್ತರಿಸುವವರಿಲ್ಲ. ಅದನ್ನು ಮುಟ್ಟುಗೋಲು ಹಾಕಿಕೊಳ್ಳುವ ಯಾವ ಕಾಯ್ದೆಯೂ ನಮ್ಮಲ್ಲಿಲ್ಲ. ರಾಜಕೀಯವೂ ದೇಶಸೇವೆ ಎಂಬುದು ಎಲ್ಲೋ ಮೋದಿಯಂತಹ ಬೆರಳೆಣಿಕೆಯ ಜನರಿಗೆ ಮಾತ್ರ. ಉಳಿದವರೆಲ್ಲ ಅದನ್ನು ಬಿಜನೆಸ್ಸು ಅಂತಲೇ ತಿಳಕೊಂಡಿದ್ದಾರೆ. ಹಣ ಹಾಕುತ್ತಾರೆ-ಹಣ ತೆಗೆಯುತ್ತಾರೆ.

ಅದೇ ರಾಜಕೀಯದವರು ತಮಗೆ ಬೇಕಾದ ಕೆಲವರನ್ನು ಕಾಯ್ದೆಯ ಹಲ್ಲುಗಳಿಂದ ಕಾಪಾಡುವ ವ್ಯವಸ್ಥೆಯನ್ನೂ ನಡೆಸುತ್ತಾರೆ. ಹಣ ಕೊಟ್ಟರೆ ಬೇಕಾದಂತೆ ವರ್ತಿಸುತ್ತಾರೆ. ಹೀಗಾಗಿಯೇ ಇಂದು ಕಳ್ಳ ಸನ್ಯಾಸಿಗಳೂ ಸಹ ರಾಜಾರೋಷಾಗಿ ಬರುಕುತ್ತಾರೆ; ತಮ್ಮ ತಪ್ಪೇ ಇಲ್ಲವೆಂಬಂತೆ ತೋರಿಸಿಕೊಳ್ಳುತ್ತಾರೆ.

ಶೋ ರೂಮಿನಲ್ಲಿ ಅಸಲೀ ಬಂಗಾರದ ಆಭರಣಗಳ ಸಾಲಿನಲ್ಲಿ ಗ್ಯಾರಂಟಿ ಗೋಲ್ಡ್ ಆಭರಣಗಳನ್ನು ಇರಿಸಿಬಿಟ್ಟರೆ ಹುಡುಕಿ ತೆಗೆಯೋದು ಬಹಳ ಕಷ್ಟ. ಅದೇ ರೀತಿ ನಿಜವಾದ ಸನ್ಯಾಸಿಗಳ ಸಾಲಿನಲ್ಲಿ ತಮ್ಮನ್ನು ಬಿಂಬಿಸಿಕೊಳ್ಳುವ ಕಾವಿ ವೇಷಧಾರಿಗಳನ್ನು “ಇವ ಸನ್ಯಾಸಿಯಲ್ಲ” ಎಂದು ಪತ್ತೆಹಚ್ಚುವುದು ಕೆಲವರಿಗೆ ಕಷ್ಟ. ಮೇಲಾಗಿ ತಲೆತಲಾಂತರದಿಂದ ನಡೆದುಕೊಂಡು ಬಂದ ಸಂಪ್ರದಾಯಕ್ಕೆ ಸಡ್ಡುಹೊಡೆಯುವ ಧೈರ್ಯ ಮಾಡೋದು ಕಷ್ಟ.

ಇದೆಲ್ಲದರ ಹೊರತಾಗಿ ಅಲ್ಲಲ್ಲಿ ಮರಿಕೃಷ್ಣ ಪುನರ್ವಸುಗಳಂತಹ ಗೋಮುಖ ವ್ಯಾಘ್ರಗಳು ಅಬ್ಬರದಿಂದ ಘರ್ಜಿಸಿ ಹೆದರಿಸುವ ಕೆಲಸ ಬೇರೆ ನಡೆಸುತ್ತಾರೆ; ವಿರೋಧಿಗಳು ಇಂತದ್ದಕ್ಕೆಲ್ಲ ಸೊಪ್ಪು ಹಾಕುವವರಲ್ಲ ಎಂದು ಅವರಿಗೆ ಗೊತ್ತಿಲ್ಲ. ಅಂದಹಾಗೆ ಅವರಿಗೆಲ್ಲ ಸಂದಾಯವಾದ ನಿಕ್ಕಿ ಭಕ್ಷೀಸು ಎಷ್ಟೆಂಬುದು ಲೆಕ್ಕಕ್ಕೆ ಸಿಗಲಿಲ್ಲ. ಅಂತೂ ವಿರೋಧಿಗಳನ್ನು ಸದೆಬಡಿಯುವ ಸಕಲ ರಾಜಕೀಯ ತಂತ್ರಗಳೂ ನಡೆಯುತ್ತಿವೆ.

ಈಗ ಜನ ಟೆಫ್ಲಾನ್ ಕರಗಿಸಿ ಹಾಲು ತಯಾರಿಸುತ್ತಾರೆ, ಪ್ಲಾಸ್ಟಿಕ್ ನಿಂದ ಅಕ್ಕಿ ತಯಾರಿಸುತ್ತಾರೆ. ರಬ್ಬರ್ ನಿಂದ ತಂದೆ-ತಾಯಿಯನ್ನೂ ತಯಾರಿಸಿಕೊಡುವ ಕಾಲ ಬರಬಹುದು. ಕಂಡ ಹಾಲೆಲ್ಲ ಹಾಲಲ್ಲ, ಕಂಡ ಅಕ್ಕಿಯೆಲ್ಲ ಅಕ್ಕಿಯಲ್ಲ, ಕಂಡ ಮುತ್ತೆಲ್ಲ ಮುತ್ತಲ್ಲ, ಇಲಾಸ್ಟಿಕ್ ನಗೆಯೆಲ್ಲ ನಿಜವಾದ ಸನ್ಯಾಸಿಯ ನಗೆಯಲ್ಲ, ಚಾತುರ್ಮಾಸದಲ್ಲಿ ನಿಜವಾದ ಸನ್ಯಾಸಿಗಳು ಯೋಚಿಸಲೂ ಅನರ್ಹವಾದ ಪದಗಳನ್ನು ’ಪ್ರವಚಿಸುವ’ ಕಾವಿವೇಷಧಾರಿ ಸನ್ಯಾಸಿಯೇ ಅಲ್ಲ.

Thumari Ramachandra

source: https://www.facebook.com/groups/1499395003680065/permalink/1647581542194743/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s