ಶಂಕರರ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.

ಶಂಕರರ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.
Yogic Effects-An Analysis

ಶಂಕರರು ಕೇವಲ ಮೂವತ್ತೊಂದು ವಯಸ್ಸಿನೊಳಗೆ ಎಷ್ಟೆಲ್ಲವನ್ನೂ ಸಾಧಿಸಿದರು. ಅಖಂಡ ಭಾರತವನ್ನು ಮೂರು ಬಾರಿ ಪ್ರವಾಸ ಮಾಡಿದರು. ಹಾಗಾದರೆ ಎಲ್ಲ ಸಲವೂ ಅವರು ಭಾರತವನ್ನು ನಡೆದೇ ಪ್ರವಾಸ ಮಾಡಿದರೇ? ಎಂಬುದು ನನ್ನನ್ನು ಚಿಂತನೆಗೆ ಹಚ್ಚಿತ್ತು. ಹಲವು ವಿದ್ವಾಂಸರಲ್ಲಿ ಚರ್ಚಿಸಿದರೂ ಈ ವಿಷಯ ಇತ್ಯರ್ಥವಾಗಿರಲಿಲ್ಲ.

ಶಂಕರರು ಕಾಲ್ನಡಿಗೆಯಲ್ಲೇ ಎಲ್ಲಾ ದೂರವನ್ನೂ ಕ್ರಮಿಸಲಿಲ್ಲ ಎಂದರೆ ನಿಮಗೀಗ ಆಶ್ಚರ್ಯವಾಗಬಹುದು. ಸಾವಿರದಿನ್ನೂರು ವರ್ಷಗಳ ಹಿಂದೆ ಇಷ್ಟೊಂದು ಜನಸಂಖ್ಯೆಯಿರಲಿಲ್ಲ. ಸ್ವಾತಂತ್ರ್ಯ ಬಂದ ಸಮಯದಲ್ಲೇ ಭಾರತದ ಜನಸಂಖ್ಯೆ ಮೂವತ್ತು ಕೋಟಿ. ಅಂದರೆ ಆಗ ಎಷ್ಟಿರಬಹುದು. ನೀರಿನ ಪುಷ್ಕರಗಳು, ಕೊಳ, ಸರೋವರಗಳು ಬೇಕಷ್ಟಿದ್ದವು. ಭೂಮಿಯ ಮೇಲ್ಮೈಯಲ್ಲೇ ಹರಿಯುವ ನೀರಿತ್ತು. ನಾಡು ಕಾಡಿನಿಂದಾವೃತವಾಗಿ ಸಮೃದ್ಧವಾಗಿತ್ತು.

ಸಾಗಾಟಕ್ಕೆ ರಾಜಕೀಯದವರು ಸಾರೋಟುಗಳನ್ನು ಬಳಸುತ್ತಿದ್ದರೆ ಜನಸಾಮಾನ್ಯರಿಗೆ ಎತ್ತಿನಗಾಡಿಗಳು ಅಥವಾ ಕಾಲ್ನಡಿಗೆಯೇ. ಇಂದು ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದರೂ ದಕ್ಷಿಣದ ತುದಿಯಿಂದ ಉತ್ತರದ ತುದಿಗೆ ಹೋಗಲು ಕನಿಷ್ಠ ಮೂರುದಿನಗಳು ಬೇಕು. ಹೀಗಿರುವಾಗ ಕಾಲ್ನಡಿಗೆಯಲ್ಲಿ ಮೂರು ಸಲ ದೇಶ ಸುತ್ತಲಿಕ್ಕೆ ತಗಲಬಹುದಾದ ವರ್ಷಗಳೆಷ್ಟು? ಅಷ್ಟರಲ್ಲೇ ಶಂಕರರು ೧೫೩ ಕೃತಿಗಳನ್ನು ಬೇರೆ ರಚಿಸಿದ್ದರು; ಅವುಗಳಲ್ಲಿ ಕೆಲವು ಬಹಳ ವಿಸ್ತಾರವಾದ ಭಾಷ್ಯಗಳಂತಹ ಕೃತಿಗಳು. ಹಾಗಾದರೆ ಆ ಶರೀರದಲ್ಲಿದ್ದ ಮೂವತ್ತುವರ್ಷಗಳಲ್ಲಿ ಶಂಕರರು ಎಷ್ಟೆಷ್ಟು ವರ್ಷಗಳನ್ನು ಹೇಗೆ ಹೇಗೆ ಬಳಸಿಕೊಂಡರು? ವಿವರಣೆ ಅಲಭ್ಯ.

ಒಂದಂತೂ ಸತ್ಯ-ಶಂಕರರು ಪರಮ ಯೋಗನಿಷ್ಠರಾಗಿ ಅಷ್ಟಸಿದ್ಧಿಗಳನ್ನು ಪಡೆದು ಸನ್ಯಾಸಿ ಏರಬಹುದಾದ ಅತ್ಯುಚ್ಚಮಟ್ಟಕ್ಕೆ ಏರಿದವರು. (ಅವತಾರಿ ಎಂದು ಅವರು ಹೇಳಿಕೊಳ್ಳಲಿಲ್ಲ, ನಾವೂ ಹೇಳೋದು ಬೇಡ ಬಿಡಿ)

ಅಪರೋಕ್ಷಾನುಭೂತಿ [೧೧೮-೧೨೦]ರಲ್ಲಿ ಆದಿಶಂಕರರು ಪ್ರಾಣಾಯಾಮದ ಕುರಿತು ಹೀಗೆ ಹೇಳಿದ್ದಾರೆ:

“ಮನಸ್ಸೇ ಬ್ರಹ್ಮನೆಂದು ಅರಿಯುವ ಮೂಲಕ ಜೀವ ಬಲವನ್ನು ನಿಯಂತ್ರಿಸುವುದೇ ಪ್ರಾಣಾಯಾಮ.”

“ಬ್ರಹ್ಮಾಂಡವನ್ನು ಅಲ್ಲಗಳೆಯುವುದು ನಿಶ್ವಾಸ, ನಾನೇ ಬ್ರಹ್ಮ ಎಂಬ ಆಲೋಚನೆ ಉಛ್ವಾಸ.”

“ಮೂಗನ್ನು ಮುಚ್ಚಿಕೊಳ್ಳುವುದು ಅರಿವಿಲ್ಲದವರ ಕೆಲಸವಾದರೆ, ಉಸಿರನ್ನು ದೀರ್ಘಕಾಲ ಶರೀರದಲ್ಲಿ ತಡೆಹಿಡಿಯುವ ಕೆಲಸವೇ ಪ್ರಾಣಾಯಾಮ.”

ಅಂದರೆ ಶಂಕರರಿಗೆ ಯೋಗ ಸಂಪೂರ್ಣವಾಗಿ ಗೊತ್ತಿತ್ತು;ಪ್ರಾಯಶಃ ಮಹರ್ಷಿ ಪತಂಜಲಿಗಿಂತಲೂ ಹೆಜ್ಜೆ ಮುಂದಿಟ್ಟವರು ಎನ್ನಬಹುದೇನೋ. ಅದಿರಲಿ, ನಾವೀಗ ಯೋಗದ ಬಗೆಗೆ ಇನ್ನೊಮ್ಮೆ ಕಣ್ಣು ಹಾಯಿಸೋಣ-

ಯೋಗಸೂತ್ರಗಳು ಹಂತ ಹಂತವಾಗಿ ಎಂಟು ಹೆಜ್ಜೆಗಳುಳ್ಳ ಶಿಕ್ಷಣ ಕ್ರಮವನ್ನು ಸೂಚಿಸುತ್ತವೆ. ಅವುಗಳೆಂದರೆ: ಯಮ [ನಿಗ್ರಹ], ನಿಯಮ [ಕಟ್ಟಳೆ], ಆಸನ [ಭಂಗಿ], ಪ್ರಾಣಾಯಾಮ [ಪ್ರಾಣಶಕ್ತಿಗಳ ನಿಯಂತ್ರಣ], ಪ್ರತ್ಯಾಹಾರ[ಹಿಂತೆಗೆದುಕೊಳ್ಳುವ ಪ್ರಕ್ರಿಯೆ], ಧಾರಣ[ಒಟ್ಟುಗೂಡಿಸುವಿಕೆ ಅಥವಾ ಕೇಂದ್ರೀಕರಿಸುವಿಕೆ], ಧ್ಯಾನ [ಏಕಾಗ್ರಗೊಳಿಸುವಿಕೆ ಅಥವಾ ಲಕ್ಷದ ಮೇಲೆ ಗಮನಕೊಡುವಿಕೆ], ಮತ್ತು ಸಮಾಧಿ [ಸಂಪೂರ್ಣ ತಲ್ಲೀನತೆ/ತನ್ಮಯವಾಗುವಿಕೆ]. ಯೋಗ ಸ್ಥಿತಿಯ ಪ್ರಾಪ್ತಿಯಲ್ಲಿ ಇವುಗಳಲ್ಲಿ ಮೊದಲ ಐದು ನಿಯಮಗಳನ್ನು ‘ಬಹಿರಂಗ’ [ಬಾಹ್ಯ] ಮತ್ತು ಕಡೆಯ ಮೂರನ್ನು ‘ಅಂತರಂಗ’ [ಒಳಗಿನ] ಸಾಧನೆಗಳೆನ್ನುತ್ತಾರೆ.

ಅಹಿಂಸಾ [ನೋವುಂಟು ಮಾಡದೇ ಇರುವುದು], ಸತ್ಯ [ನಿಜವನ್ನು ನುಡಿಯುವುದು], ಅಸ್ತೇಯ [ಕಳ್ಳತನ ಮಾಡದೇ ಇರುವುದು], ಬ್ರಹ್ಮಚರ್ಯ[ಇಂದ್ರಿಯ ನಿಗ್ರಹ] ಮತ್ತು ಅಪರಿಗ್ರಹ [ದಾನವನ್ನು ಸ್ವೀಕರಿಸದೇ ಇರುವುದು] ಇವುಗಳು ಮೊದಲನೆಯ ಹಂತವಾದ ಯಮದ ನಿಯಮಾವಳಿಗಳು.

ಎರಡನೇ ಹಂತವಾದ ನಿಯಮದಲ್ಲಿ ಶೌಚ [ಪರಿಶುದ್ಧತೆ], ಸಂತೋಷ[ತೃಪ್ತಿ], ತಪಸ್ಸು[ತ್ರಿಕರಣ ಶುದ್ಧತೆ ಅಂದರೆ ಕಾಯ, ವಾಚ, ಮನಸಾ ನಿಗ್ರಹವನ್ನು ಹೊಂದಿರುವುದು], ಸ್ವಾಧ್ಯಾಯ [ವೇದ ಶಾಸ್ತ್ರಗಳ ಪಾರಾಯಣ ಮತ್ತು ಓಂ ಮುಂತಾದ ಮಂತ್ರಗಳ ಪುನರುಚ್ಛಾರಣೆ ಮಾಡುವುದು], ಮತ್ತು ಈಶ್ವರ ಪ್ರಣಿಧಾನ [ದೇವರ ಮೇಲೆ ಭಕ್ತಿಯನ್ನಿರಿಸುವುದು] ಇವುಗಳನ್ನು ಒಳಗೊಂಡಿದೆ.

ಶೌಚವು ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಿದರೆ ಎರಡನೆಯದಾದ ಸಂತೋಷವು ವೈಯ್ಯಕ್ತಿಕ ಸ್ವಾಸ್ಥ್ಯಕ್ಕೆ ಕಾರಣವಾಗುತ್ತದೆ. ಇತರ ಮೂರು ನಿಯಮಗಳಾದ ತಪಸ್ಸು, ಸ್ವಾಧ್ಯಾಯ ಮತ್ತು ಈಶ್ವರ ಪ್ರಣಿಧಾನಗಳನ್ನು ಒಟ್ಟುಗೂಡಿಸಿ ಅವುಗಳನ್ನು ಪತಂಜಲಿಯು ‘ಕ್ರಿಯಾಯೋಗ’ವೆಂದು ಕರೆದಿದ್ದಾನೆ. ಇದು ಯೋಗಕ್ಕೆ ಕೊಂಡೊಯ್ಯುವ ಪರಿಣಾಮಕಾರಿ ಮತ್ತು ಹತ್ತಿರದ ಮಾರ್ಗವಾಗಿದೆ.

ಆಸನವೆಂದರೆ ಯೋಗಾಭ್ಯಾಸವನ್ನು ಕೈಗೊಳ್ಳುವ ವ್ಯಕ್ತಿಯು ಅನುಕೂಲಕರವಾಗಿ ಮತ್ತು ಸ್ಥಿರವಾಗಿ ಕುಳಿತುಕೊಳ್ಳಲು ಅನುವಾಗಿರುವ ಭಂಗಿ. ಪ್ರಾಣಾಯಾಮವೆಂದರೆ ಕ್ರಮಬದ್ಧ ಉಸಿರಾಟದ ಮೂಲಕ ಜೀವನಾಧಾರವಾದ ಪ್ರಾಣವಾಯುಗಳನ್ನು ನಿಯಂತ್ರಿಸುವುದು. ಗ್ರಹಣೇಂದ್ರಿಯಗಳನ್ನು ಅಥವಾ ಪಂಚೇಂದ್ರಿಯಗಳನ್ನು ವಿಷಯವಸ್ತುಗಳಿಂದ ಒಳಸೆಳೆದುಕೊಂಡಾಗ ಅವು ಯಾವುದೇ ಪ್ರತಿಕ್ರಿಯೆಯಿಲ್ಲದೆ ಮನಸ್ಸಿನೊಂದಿಗೆ ಏಕೀಕರಣಗೊಳ್ಳುತ್ತವೆ; ಇದನ್ನೇ ಪ್ರತ್ಯಾಹಾರವೆಂದು ಕರೆಯುತ್ತಾರೆ.

ಮುಂದಿನ ಮೂರು ಹಂತಗಳಾದ ಧಾರಣ, ಧ್ಯಾನ ಮತ್ತು ಸಮಾಧಿಗಳು ಒಂದೇ ಕ್ರಿಯೆಯ ಮುಂದುವರೆದ ಹೆಜ್ಜೆಗಳು. ಧಾರಣದಲ್ಲಿ ಮನಸ್ಸು ಲಕ್ಷ್ಯವಿಡಬೇಕಾದ ವಸ್ತುವಿನ ಮೇಲೆ ಕೇಂದ್ರಿತವಾಗಿರುತ್ತದೆ. ಈ ಏಕಾಗ್ರತೆಯು ಒಂದು ಪಾತ್ರೆಯಿಂದ ಇನ್ನೊಂದು ಪಾತ್ರೆಗೆ ಸುರಿಯಲ್ಪಡುವ ಎಣ್ಣೆಯಂತೆ ನಿರಾತಂಕವಾಗಿ ಹರಿಯುವಂತಹ ಸ್ಥಿತಿಯಲ್ಲಿದ್ದಾಗ ಅದು ಧ್ಯಾನವೆನಿಸುಕೊಳ್ಳುತ್ತದೆ. ಯಾವಾಗ ಧ್ಯಾನವು ಪಕ್ವಗೊಂಡು ವ್ಯಕ್ತಿಯು ತನ್ನ ಇರಿವನ್ನು ಸಹ ಮರೆತು ಲಕ್ಷ್ಯದೊಂದಿಗೆ ತನ್ಮಯತೆಯನ್ನು ಹೊಂದುತ್ತಾನೋ ಆ ಸ್ಥಿತಿಯನ್ನು ಸಮಾಧಿಯೆನ್ನುತ್ತಾರೆ. ಸಮಾಧಿ ಸ್ಥಿತಿಯು ಈಶ್ವರಪ್ರಣಿಧಾನ ಅಥವಾ ಭಗವದ್ಭಕ್ತಿಯಿಂದಲೂ ಲಭ್ಯವಾಗುತ್ತದೆ.

ಧಾರಣ, ಧ್ಯಾನ ಮತ್ತು ಸಮಾಧಿ ಈ ಮೂರನ್ನೂ ಒಟ್ಟಾಗಿಸಿ ಪತಂಜಲಿಯು ಅದನ್ನು ‘ಸಂಯಮ’ವೆಂಬ ಶಬ್ದದಿಂದ ಕರೆದಿದ್ದಾನೆ. ಮತ್ತು ಈ ಸಂಯಮವು ಯಾವಗಲೂ ಒಂದೇ ಒಂದು ವಸ್ತುವಿನ ಮೇಲಿರಬೇಕು.
ಯೋಗಸಿದ್ಧಿಗಳು

ತಪಸ್ಸು ಅಥವಾ ಭಗವದನುಗ್ರಹದಿಂದ ಅತೀಂದ್ರಿಯ ಶಕ್ತಿಗಳನ್ನು ಪಡೆಯಬಹುದೆನ್ನುವ ನಂಬಿಕೆಯು ಬಹು ಪುರಾತನವಾದದ್ದು. ಪತಂಜಲಿಯು ಸತ್ಯಾನ್ವೇಷಕರ ಮನದಲ್ಲಿ ನಂಬಿಕೆಯನ್ನುಂಟು ಮಾಡಲು ತನ್ನ ಎರಡನೆಯ ಮತ್ತು ಮೂರನೆಯ ಅಧ್ಯಾಯದಲ್ಲಿ ಇಂತಹ ಹಲವಾರು ವಿಶೇಷ ಶಕ್ತಿಗಳ ಬಗ್ಗೆ ಉಲ್ಲೇಖಿಸಿದ್ದಾನೆ. ಉದಾಹರಣೆಗೆ ಯಾವ ಮನುಷ್ಯನು ಸಂಪೂರ್ಣವಾಗಿ ಅಹಿಂಸಾ ಗುಣಗಳನ್ನು ಒಂದಾಗಿಸಿಕೊಂಡಿರುತ್ತಾನೋ ಅವನ ಬಳಿಯಲ್ಲಿ ಪರಸ್ಪರ ವೈರತ್ವವಿರುವ [ಹುಲಿ ಮತ್ತು ಹಸು] ಪ್ರಾಣಿಗಳೂ ಕೂಡ ಶಾಂತಿ ಮತ್ತು ಸೌಹಾರ್ದತೆಗಳಿಂದ ಜೀವಿಸುತ್ತವೆ. ಯಾವ ವ್ಯಕ್ತಿಯಲ್ಲಿ ಸತ್ಯವು ಬೇರೂರಿರುತ್ತದೆಯೋ ಆ ವ್ಯಕಿಯ ಮಾತು ಸುಳ್ಳಾಗುವುದಿಲ್ಲ. ಯಾವ ವ್ಯಕ್ತಿಯು ಕಠಿಣವಾಗಿ ಅಪರಿಗ್ರಹವನ್ನು[ದಾನವನ್ನು ಸ್ವೀಕರಿಸುವುದಿಲ್ಲವೋ] ಪರಿಪಾಲಿಸುತ್ತಾನೆಯೋ ಅವನಿಗೆ ತನ್ನ ಪೂರ್ವ ಜನ್ಮದ ಜ್ಞಾನವುಂಟಾಗುತ್ತದೆ ಮತ್ತು ಅವನು ತನ್ನ ಮುಂದಿನ ಜನ್ಮಗಳ ಬಗ್ಗೆಯೂ ತಿಳಿದುಕೊಳ್ಳಬಲ್ಲ [ನೋಡಿ ಯೋಗಸೂತ್ರ ೨.೩೫,೩೬ ಮತ್ತು ೩೯].

’ಸಂಯಮ’ದಿಂದ ಯೋಗಿಗೆ ಹಲವಾರು ಅತೀಂದ್ರಿಯ ಶಕ್ತಿಗಳು ಪ್ರಾಪ್ತವಾಗುತ್ತವೆ. ಉದಾಹರಣೆಗೆ, ಪಂಚಭೂತಗಳಾದ ಪೃಥ್ವಿ(ಭೂಮಿ) ಮತ್ತು ಅಪ(ನೀರು) ಇವುಗಳ ಮೇಲಿನ ’ಸಂಯಮ’ದಿಂದ ಯೋಗಿಯು ಅಣಿಮಾ-ಗರಿಮಾದಿ ಅಷ್ಟಸಿದ್ಧಿ ಅಥವಾ ಎಂಟು ವಿಧದ ಶಕ್ತಿಯನ್ನು ಪಡೆಯುತ್ತಾನೆ.

ಸಿದ್ಧಿಯೆಂದರೆ ಕೆಲಸ ಕೈಗೂಡುವುದು (ಕ್ರಿಯಾಸಿದ್ಧಿ). ಸಾಮಾನ್ಯವಾಗಿ ಈ ಮಾತನ್ನು ಅಲೌಕಿಕವಾಗಿರುವ ಕೌಶಲಗಳನ್ನು ಪಡೆಯುವುದಕ್ಕೆ ಬಳಸುತ್ತಾರೆ. ಸಿದ್ಧಿಯೆಂದರೆ ತುಂಬ ಚಮತ್ಕಾರದ ಅದ್ಭುತಶಕ್ತಿ. ತಪಶ್ಚರ್ಯೆಯಿಂದಲೋ ಮಂತ್ರತಂತ್ರಗಳ ಅನುಸಂಧಾನದಿಂದಲೋ ದೈವಿಕ ಅನುಗ್ರಹದಿಂದಲೋ ಮನುಷ್ಯರು ಪಡೆಯುವ ವಿಶೇಷಸಾಮರ್ಥ್ಯ.

ಅಣಿಮಾ – ದೇಹವನ್ನು ಅತಿ ಚಿಕ್ಕ (ಪರಮಾಣುವಿನ) ಗಾತ್ರಕ್ಕೆ ಇಳಿಸುವದು
ಲಘಿಮಾ – ಅತಿ ಕಡಿಮೆ (ಭಾರರಹಿತ) ಹಗುರಾಗುವದು
ಮಹಿಮಾ – ದೇಹವನ್ನು ಅತಿ ದೊಡ್ಡ (ಅನಂತವಾದ) ಗಾತ್ರಕ್ಕೆ ಹೆಚ್ಚಿಸುವದು
ಗರಿಮಾ – ಅತಿ (ಅನಂತದಷ್ಟು) ಭಾರವಾಗಿರುವದು
ಪ್ರಾಪ್ತಿ – ಎಲ್ಲ ಸ್ಥಳಗಳಿಗೂ ಅನಿರ್ಬಂಧಿತವಾದ ಪ್ರವೇಶ ದೊರಕಿಸಿಕೊಳ್ಳುವದು
ಪ್ರಾಕಾಮ್ಯ – ಇಷ್ಟಪಟ್ಟಿದ್ದನ್ನು ದೊರಕಿಸಿಕೊಳ್ಳುವದು
ಈಶಿತ್ವ – ಎಲ್ಲದರ ಮೇಲೆ ಸಂಪೂರ್ಣವಾದ ಒಡೆತನ ಹೊಂದುವದು
ವಶಿತ್ವ – ಎಲ್ಲವನ್ನು ಜಯಿಸುವ ಶಕ್ತಿ ಹೊಂದುವದು

ಯೋಗಮಾರ್ಗದಲ್ಲಿ ಹಠಯೋಗವನ್ನು ಹಿಡಿದವರು ಈ ಸಿದ್ಧಿಗಳನ್ನು ಪಡೆಯುತ್ತಾರೆಂದು ನಂಬಿಕೆ. [ಹನುಮಾನ್ ಚಾಲೀಸ ಪಠಿಸುವವರು ಈ ಅಷ್ಟಸಿದ್ಧಿಗಳನ್ನು ಹನುಮಂತ ನೀಡುವನೆಂದು ನಂಬುತ್ತಾರೆ.]

’ಅಣಿಮಾ’, ’ಮಹಿಮಾ’ ಮೊದಲಾದವು(ಯೋಗಸೂತ್ರ ೩.೪೪,೪೫)ಗಳ ಜೊತೆಗೆ. ಆ ಕೃತಿಯಲ್ಲಿ ಹೆಸರಿಸಿರುವ ಇನ್ನೂ ಕೆಲವು ಸಿದ್ಧಿಗಳೆಂದರೆ: ಆಲೋಚನೆಯನ್ನು ಗ್ರಹಿಸುವುದು, ನೋಟದಿಂದ ಕಣ್ಮರೆಯಾಗುವುದು, ಅಸದಳ ಶಕ್ತಿಯನ್ನು ಹೊಂದುವುದು, ಪಶು-ಪಕ್ಷಾದಿಗಳ ಭಾಷೆಯನ್ನು ಅರಿತುಕೊಳ್ಳುವುದು, ಮೊದಲಾದವು.

ಪ್ರಕಾಂಡ ಮನೋವಿಜ್ಞಾನಿಯಾಗಿದ್ದ ಪತಂಜಲಿಯು ಇವುಗಳನ್ನೆಲ್ಲ ವಿವರಿಸಿದರೂ ಅವುಗಳನ್ನು ಹೊಂದುವುದರಲ್ಲಿ ಆಸಕ್ತಿಯನ್ನು ತಳೆಯಬಾರದೆಂದು ಯೋಗಾಸಕ್ತರಿಗೆ ಎಚ್ಚರಿಸುತ್ತಾನೆ. ಯಾಕೆಂದರೆ ಅವುಗಳ ಪ್ರಲೋಭನೆ ಅಥವಾ ಸೆಳೆತಕ್ಕೆ ಸಿಕ್ಕ ಯೋಗಾಭ್ಯಾಸಿಯು ಅವನ ಗುರಿಯಾದ ’ಕೈವಲ್ಯ’ ಅಥವಾ ’ಮುಕ್ತಿ’ಯನ್ನು ಪಡೆಯುವ ಮಾರ್ಗದಿಂದ ವಿಮುಖನಾಗಿಬಿಡುತ್ತಾನೆ. ಆದರೆ ಒಮ್ಮೆ ’ಕೈವಲ್ಯ’ ಸ್ಥಿತಿಯನ್ನು ಪಡೆದ ವ್ಯಕ್ತಿಯು ತನ್ನ ’ಪ್ರಾರಬ್ಧ ಕರ್ಮ’(ಈ ಜನ್ಮಕ್ಕೆ ಕಾರಣವಾದ ಕರ್ಮ)ಕ್ಕೆ ಅನುಸಾರವಾಗಿ ಇನ್ನೂ ಸ್ವಲ್ಪ ಕಾಲ ಜೀವಿಸಬಹುದು. ಈ ಸ್ಥಿತಿಯಲ್ಲಿ ಅವನು ಯಾವುದೇ ಪ್ರಮಾದವಿಲ್ಲದೆ ಈ ಶಕ್ತಿಗಳನ್ನು ಮಾನವಸಂತತಿಯ ಒಳಿತಿಗಾಗಿ ಬಳಸಬಹುದು.

ಇದಕ್ಕೆ ಕೆಲವು ಉದಾಹರಣೆಗಳನ್ನು ತೆಗೆದುಕೊಳ್ಳೋಣ:

೧. ಇತ್ತೀಚೆಗಿನ ಸಾಧು-ಸಂತರಲ್ಲಿ ಭಗವಾನ್ ಶ್ರೀಧರ ಸ್ವಾಮಿಗಳು ಯೋಗ ಸಾಧನೆಯಿಂದ ಮೇಲೆ ಹೇಳಿದ ಅಷ್ಟಸಿದ್ಧಿಗಳನ್ನು ಪಡೆದುಕೊಂಡಿದ್ದರು ಎಂಬುದು ಹಲವರ ಅನುಭವಕ್ಕೆ ನಿಲುಕಿದ ವಿಷಯ. ಮಕ್ಕಳ ಸಮುದಾಯ ಅವರನ್ನು ಮುತ್ತಿಕೊಂಡು ಬಹಳ ಹೊತ್ತಾದರೆ ಮಕ್ಕಳ ಕುತೂಹಲವನ್ನು ನಿವಾರಿಸಿ ಮೈದಡವಿ, ಅವರೆಲ್ಲ ಅರೆಕ್ಷಣ ಆಚೀಚೆ ನೋಡುವುದರಲ್ಲಿದ್ದಾಗ ಶ್ರೀಧರರು ಅಲ್ಲಿಂದ ಬಹುದೂರ ಸಾಗುತ್ತಿದ್ದರಂತೆ.

ಜನಸಾಮನ್ಯರಿಗೆ ಅಸಾಧ್ಯವಾಗಿದ್ದ ಹೊನ್ನಾವರ ತಾಲೂಕಿನ ಕರಿಕಾನ್ ಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರದ ನಂತರ, ಶಿಥಿಲಗೊಂಡ ಮುರುಡೇಶ್ವರ ದೇವಸ್ಥಾನವನ್ನೂ ಜೀರ್ಣೋದ್ಧಾರ ಮಾಡಿಸಿಕೊಡಬೇಕೆಂದು ಅಂದಿನ ಭಕ್ತರು ಭಿನ್ನವಿಸಿದಾಗ, “ಮೂವತ್ತು ವರ್ಷಗಳ ತರುವಾಯ ಮುರುಡೇಶ್ವರ ಅತ್ಯಂತ ವೈಭಯುತ ಕಟ್ಟಡವನ್ನು ಪಡೆಯುತ್ತದೆ” ಎಂದು ಅಂದೇ ಅವರು ಹೇಳಿದ್ದರಂತೆ. ಅವರ ಚರಿತ್ರೆಯಲ್ಲಿ ಹೇಳಿರುವ ಸಾವಿರಾರು ಘಟನೆಗಳು ಅವರೊಬ್ಬ ಸಿದ್ಧ ಪುರುಷರು ಎಂಬುದನ್ನು ಸಾಬೀತುಪಡಿಸುತ್ತವೆ.

ಶಿವಮೊಗ್ಗ ಜಿಲ್ಲೆಯೆಡೆಗೆ ಭಕ್ತರೊಬ್ಬರ ಮನೆಯಲ್ಲಿ ಭಿಕ್ಷೆ ಸ್ವೀಕರಿಸಿ ತೀರ್ಥ ನೀಡುವಾಗ, ದೂರದ ವಾರಣಾಸಿಯಲ್ಲಿರುವ ಮಗನಿಗೆ ತೀರ್ಥ-ಮಂತ್ರಾಕ್ಷತೆಗಳು ತಪ್ಪಿದ ಬಗ್ಗೆ ಆತನ ತಾಯಿಯ(ಅಂದರೆ ಭಿಕ್ಷೆ ನಡೆಸಿದ ಮನೆಯ ಯಜಮಾನನ ಹೆಂಡತಿಯ)ಕಣ್ಣಲ್ಲಿ ನೀರ ಹನಿಗಳು ಬಂದವಂತೆ. ಅದನ್ನು ಕಂಡ ಶ್ರೀಧರ ಸ್ವಾಮಿಗಳು, “ಅಮ್ಮಾ, ನಿನ್ನ ಮಗನಿಗೆ ತೀರ್ಥವನ್ನು ಕೊಟ್ಟಾಯ್ತು” ಎಂದರಂತೆ. ದೂರದ ವಾರಣಾಸಿಯಲ್ಲಿ ಅದೇ ಸಮಯದಲ್ಲಿ ತೀರ್ಥಕ್ಕೆ ಸರದಿಯಲ್ಲಿ ನಿಂತಿದ್ದ ಅವನ ಕೈಗೆ, ಎಲ್ಲರ ಕೈಗೆ ಬಿದ್ದಂತೆ ಸಾದಾ ತೀರ್ಥ ಬೀಳದೇ ಪಂಚಾಮೃತ ಬಿದ್ದಿದ್ದನ್ನು ನೋಡಿ, ವಿಚಿತ್ರ ಘಟಿಸಿದ್ದನ್ನು ಮಗ ಪತ್ರದ ಮೂಲಕ ಅಮ್ಮನಿಗೆ ತಿಳಿಸಿದ್ದಾನೆ!

೨. ನಾಲ್ಕೈದು ವರ್ಷಗಳ ಹಿಂದೆ ಬ್ರಹ್ಮೈಕ್ಯರಾದ ಸಖರಾಯಪಟ್ಟಣದ ಅವಧೂತರು ವ್ಯಕ್ತಿಯನ್ನು ನೋಡಿದಾಗ ಪೂರ್ವಾಪರಗಳನ್ನು ಹೇಳುತ್ತಿದ್ದರಂತೆ. ಹೀಗೆಯೇ, ಸಿದ್ಧ ಪುರುಷರ ಉದಾಹರಣೆಗಳು ಅನೇಕ. ಆದರೆ ಶಕ್ತಿಯನ್ನು ಸ್ವಾರ್ಥಕ್ಕಾಗಿ ಅವರು ಬಳಸಿಕೊಳ್ಳಲಿಲ್ಲ.

೩. “ಸಂತರೆಲ್ಲರನ್ನೂ ನೋಡಿಬಂದೆ” ಎಂದ ವ್ಯಕ್ತಿಯನ್ನು, “ಒಬ್ಬರನ್ನು ನೋಡಿ ಬಾ, ಬಾಕಿ ಇದೆ” ಎಂದು ಶಿರಡಿ ಸಾಯಿಬಾಬಾ ಅವರು ರಮಣ ಮಹರ್ಷಿಗಳಲ್ಲಿಗೆ ಕಳಿಸಿದ್ದರಂತೆ. ಯಾರೂ ಎಣ್ಣೆಯನ್ನು ಕೊಡದಾದಾಗ ಸಿಕ್ಕ ನೀರನ್ನೇ ಹಣತೆಗಳಿಗೆ ಸುರಿದು ದೀಪಾವಳಿ ಆಚರಿಸಿದವರು ಶಿರಡಿ ಸಾಯಿಬಾಬಾ.

೪. ಶತಮಾನದ ಹಿಂದೆ ನೆಲೆಮಾವಿನ ಮಠದದಲ್ಲಿದ್ದ ಯತಿಯೋರ್ವರು ಸಾಧಕರಾಗಿದ್ದು ಪದ್ಮಾಸನದಲ್ಲಿ ತೇಲುತ್ತಿದ್ದ ಚಿತ್ರಗಳಿದ್ದ ಬಗ್ಗೆ ಕೆಲವರು ನನಗೆ ತಿಳಿಸಿದ್ದಾರೆ.

೫. ಶೀಗೇಹಳ್ಳಿ ಶಿವಾನಂದರು ಅಂತಹ ಒಬ್ಬ ಯೋಗಿಗಳಾಗಿ ಅಪರೋಕ್ಷ ಜ್ಞಾನವನ್ನು ಪಡೆದುಕೊಂಡಿದ್ದರು.

೬. “ಯೇಗ್ದಾಗೆಲ್ಲಾ ಐತೆ” ಪುಸ್ತಕದಲ್ಲಿ ಹೇಳಲ್ಪಟ್ಟ ಮುಕುಂದೂರು ಸ್ವಾಮಿಗಳ ಚರಿತ್ರೆಯಲ್ಲಿ ಬೀಗ ಹಾಕಿದ ಕೋಣೆಯೊಳಗಿನಿಂದ ವ್ಯಕ್ತಿ ಮಾಯವಾಗಿರೋದು ಕಾಣಿಸುತ್ತದೆ.

೬. ಏಕ ಕಾಲಕ್ಕೆ ಅನೇಕ ಕಡೆಗಳಲ್ಲಿ ಕಾಣಿಸಿಕೊಂಡ ಸಂತರ ಬಗೆಗೆ ಹಲವು ದಾಖಲೆಗಳು ಸಿಗುತ್ತವೆ. ಶ್ರೀಧರ ಸ್ವಾಮಿಗಳು ಮೈಸೂರಿನಲ್ಲಿ ಒಂದೇ ದಿನ, ಒಂದೇ ಸಮಯದಲ್ಲಿ, ಎರಡು ಪ್ರದೇಶಗಳ ಎರಡು ವೇದಿಕೆಗಳಲ್ಲಿ, ವಿಭಿನ್ನ ವಿಷಯಗಳ ಮೇಲೆ ಪ್ರವಚನ ನಡೆಸಿದ ದಾಖಲೆ ಇದೆ!

ಯೋಗದ ನಾಲ್ಕನೇ ಹಂತದಿಂದಲೇ ಬಹಳ ಬದಲಾವಣೆಗಳು ಗೋಚರಿಸುತ್ತವೆ. ಸಿದ್ಧಿಯನ್ನು ಕೈವಲ್ಯಕ್ಕಾಗಿ ಬಳಸುವ ಜನ ಅದನ್ನು ನಷ್ಟಮಾಡಿಕೊಳ್ಳುವುದಿಲ್ಲ, ಸಿದ್ಧಿಯನ್ನು ದುರುಪಯೋಗ ಮಾಡಿದ ಜನ ಕೈವಲ್ಯವನ್ನು ಹೊಂದಲು ಸಾಧ್ಯವಿಲ್ಲ.

ಏಕಮಾತ್ರ ಸಂತಾನವಾಗಿದ್ದ ಶಂಕರರು ತಾಯಿ ಮಡಿಯುತ್ತಿರುವ ಸಮಯ ಸನಿಹ ಬಂದಾಗ ಹಿಂದೆ ನೀಡಿದ ವಚನದಂತೆ ನಡೆದುಕೊಂಡು ಕಾಲಡಿಯ ಮನೆಗೆ ತೆರಳಿದರು. ಅಮ್ಮನ ಕೊನೆಯ ಕಾಲ ಸಮೀಪಿಸಿತೆಂದು ಶಂಕರರಿಗೆ ಹೇಗೆ ತಿಳಿಯಿತು? ಆಗ ಮಧ್ಯಭಾರತಕ್ಕಿಂತಲೂ ಮೇಲೆ ಉತ್ತರದೆಡೆಗೆ ತೆರಳುತ್ತಿದ್ದ ಅವರು ಅಷ್ಟು ಬೇಗ ಹೇಗೆ ಕೇರಳದ ಕಾಲಡಿ ತಲುಪಿದರು? ಉತ್ತರ ನೀವೇ ಕೊಟ್ಟುಕೊಳ್ಳಿ.

ಇಷ್ಟೊಂದು ಸಲ ನಾನು “ಯೋಗ”, “ಯೋಗ”, “ಯೋಗ” ಎನ್ನುತ್ತಿರುವುದು ಏಕೆಂದು ನಿಮಗೆಲ್ಲ ಈಗ ಅರಿವಾಗಿರಬಹುದು. ಇದು ರಾಂಗಾನುಗ್ರಹವಲ್ಲ. ಯಾವ ಪವಾಡವೂ ಅಲ್ಲ. ನಿಜವಾದ ಸಂತರು, ಯೋಗಿಗಳು ದೇಶ, ಕಾಲ ಮತ್ತು ಗಡಿಗಳನ್ನು ಮೀರಿದವರು. (ಸರ್ವತಂತ್ರ ಸ್ವತಂತ್ರವೆಂದರೆ ಇದೇ.) ಶಂಕರರ ತಪಸ್ಸಿನ ಶಕ್ತಿಸಾಮರ್ಥ್ಯಗಳಿಂದ ಲೌಕಿಕವಾಗಿ ಅವರು ತಂತಾನೇ ಗಳಿಸಿದ್ದ ಖ್ಯಾತಿಯನ್ನು ನೋಡಿ, ಇಂದಿನ ದಿನಗಳಲ್ಲಿ ಕೆಲವರು ಅವರ ಹೆಸರನ್ನು ದುರುಪಯೋಗಮಾಡಿಕೊಳ್ಳುತ್ತಿದ್ದಾರೆ. ಶಂಕರರಿಗೆ ಮತ್ತು ಶಂಕರರ ಹೆಸರಿಗೆ ಅಪಚಾರ ಮಾಡುತ್ತಿದ್ದಾರೆ.
ರಾಂಗಾನುಗ್ರಹ ನಡೆಸುವವರು ಇದನ್ನು ಚಾಲೇಂಜ್ ಆಗಿ ತೆಗೆದುಕೊಂಡು ಒಂದೇ ದಿನ, ಒಂದೇ ಸಮಯಕ್ಕೆ, ಎರಡು ಅಥವಾ ಅದಕ್ಕಿಂತ ಹೆಚ್ಚಿಗೆ ಪ್ರದೇಶಗಳಲ್ಲಿ ವೇದಿಕೆಗಳಲ್ಲಿ ಸೋ ಕಾಲ್ಡ್ ಪ್ರವಚನವನ್ನೋ ಕತೆಯನ್ನೋ ನಡೆಸಲಿ; ಆಗಮಾತ್ರ ನಾವೆಲ್ಲ ರಾಂಗಾನುಗ್ರಹ ನಿಜವೆಂದು ಒಪ್ಪಬಹುದು. ಅದಿಲ್ಲದಿದ್ದರೆ ಅದು ’ಮಿತ್ರ’ ಹೆಗಡೆಯ ಪರಮಾನುಗ್ರಹವೇ ಹೊರತು ಪವಾಡವಾಗುವುದಿಲ್ಲ. ಅಂದಹಾಗೆ, ’ಮಿತ್ರ’ಹೆಗಡೆಗೆ ಸಿಕ್ಕ ಭಕ್ಷೀಸು ಎಷ್ಟೆಂದು ತಿಳಿಯಲಿಲ್ಲ. ರಾಂಗಾನುಗ್ರಹದಿಂದ ಕುಳಿತಲ್ಲೇ ಅದೂ ತಿಳಿಯಬಹುದು ಎಂಬ ಆಸೆ.

Thumari Ramachandra

source: https://www.facebook.com/groups/1499395003680065/permalink/1646716978947866/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s