ಅನ್ನ ಆಗಿದೆಯೋ ನೋಡುವುದಕ್ಕೆ ಒಂದು ಅಕ್ಕಿಕಾಳು ಹಿಸುಕಿದರೆ ಸಾಕು

ಅನ್ನ ಆಗಿದೆಯೋ ನೋಡುವುದಕ್ಕೆ ಒಂದು ಅಕ್ಕಿಕಾಳು ಹಿಸುಕಿದರೆ ಸಾಕು

ನನ್ನ ಬರಹಗಳನ್ನು ನೀವು ಇಷ್ಟಪಡುವಿರಾದರೆ ನಿಮ್ಮಲ್ಲಿರುವ ಹೇಳಿಕೊಳ್ಳಲಾಗದ ಭಾವನೆಗಳಿಗೆ ನಾನು ದನಿಯಾಗಿದ್ದೇನೆ ಎಂದರ್ಥ. ಹಾಗಾದಾಗ ಮಾತ್ರ ಬರಹಗಳನ್ನು ನೀವು ಇಷ್ಟಪಡುತ್ತೀರಿ, ಮತ್ತು ನಾನು, “ಬರೆಯುವುದಕ್ಕೆ ಪರವಾ ಇಲ್ಲ” ಎಂದುಕೊಳ್ಳಬಹುದು. ಅರ್ಥವೇ ಆಗದ ರೀತಿಯಲ್ಲಿ ಪದಗಳನ್ನು ಜೋಡಿಸಿದರೆ ಯಾರಿಗೂ ಅದು ಹಿಡಿಸದಾದೀತು. ನಾನು ಬರೆಯುತ್ತೇನೆಂತ ನನ್ನ ಮುಂದಿನ ಪೀಳಿಗೆ ಹೀಗೇ ಬರೆಯುತ್ತದೆ ಎನ್ನಲು ಸಾಧ್ಯಾವಾಗುವುದಿಲ್ಲ. ಬರೆಯುವುದಿಲ್ಲ ಎಂದೂ ಹೇಳಿಲಿಕ್ಕೆ ಬರುವುದಿಲ್ಲ. ಬರೆದರೂ ಬರೆಯಬಹುದು, ಬರೆಯದೆಯೂ ಇರಬಹುದು. ಬರೆದ ಬರೆಹಗಳು ಅನ್ಯರಿಗೆ ಹಿಡಿಸಬಹುದು ಅಥವಾ ಹಿಡಿಸದಷ್ಟು ಗೋಜಲಿನ ಗೊಂದಲವಾಗಿರಬಹುದು. ಬರಹಗಳಲ್ಲಿ ಸ್ಪಷ್ಟತೆ ಇರಬೇಕು. ದ್ವಂದ್ವ ನಮ್ಮಲ್ಲಿದ್ದರೆ ಬರೆಹದಲ್ಲೂ ಅದು ಪ್ರತಿಬಿಂಬಿಸುತ್ತದೆ.

ಇದನ್ನೇಕೆ ಹೇಳಿದೆ ಎಂದರೆ, ಬ್ರಾಹ್ಮಣನ ಮಗ ಬ್ರಾಹ್ಮಣನೇ ಎಂದು ನಾವು ಬಡಾಯಿ ಕೊಚ್ಚುವ ಮೊದಲು ಬ್ರಾಹ್ಮಣ್ಯ ಅವನಲ್ಲಿದೆಯೇ ಎಂದು ಪರೀಕ್ಷಿಸಬೇಕು. ಬ್ರಾಹ್ಮಣ್ಯ ಅವನಲ್ಲಿರುವಂತೆ ನೋಡಿಕೊಳ್ಳಬೇಕಾದ್ದು ನಮ್ಮ ಕರ್ತವ್ಯ. ಡಾಕ್ಟರ್‌ರ ಮಗನಾದ ಮಾತ್ರಕ್ಕೆ ಡಾಕ್ಟರ್ ಆಗಿಬಿಡೋದು ಹೇಗೆ ಸಾಧ್ಯವಿಲ್ಲವೋ ಬ್ರಾಹ್ಮಣ ಜನಾಂಗದಲ್ಲಿ ಜನಿಸಿದ ಮಾತ್ರಕ್ಕೆ ವ್ಯಕ್ತಿ ಬ್ರಾಹ್ಮಣನಾಗುವುದಿಲ್ಲ. ‘You cannot demand or command that respect when you are not fit for that job.‘

ಅದೇ ವಿಧವಾಗಿ ಸನ್ಯಾಸಿ ಎಂಬುದು ಒಂದು ಅರ್ಹತೆ. ವ್ಯಕ್ತಿ ಅಂತಹ ಅರ್ಹತೆಯನ್ನು ಹೊಂದಿರುವನೋ ಇಲ್ಲವೋ ಎಂದು ನೋಡಲಿಕ್ಕೆ ಅವನ ಹಲವು ಮಗ್ಗುಲುಗಳ ವರ್ತನೆಯನ್ನು ಪರಿಶೀಲಿಸಬೇಕಾದ ಅಗತ್ಯವಿಲ್ಲ. ಒಂದೇ ಒಂದು ಸ್ಪಾಂಪಲ್ ತೆಗೆದುಕೊಂಡು ನೋಡಿದರೂ ಸಾಕು. ಅನ್ನ ಅಗಿದೆಯೇ ನೋಡುವುದಕ್ಕೆ ಇಡೀ ಪಾತೆಯಲ್ಲಿರುವ ಎಲ್ಲಾ ಅಕ್ಕಿಯನ್ನು ಹಿಸುಕಿ ನೋಡುತ್ತೇವೆಯೇ? ಇಲ್ಲವಲ್ಲ. ಇಲ್ಲೂ ಸಹ ಹಾಗೆ.

ಸನ್ಯಾಸಿಗೆ ಹೇಳಿದ ಅರ್ಹತೆಗಳನ್ನು ಹೊಂದಿರದ ವ್ಯಕ್ತಿಯನ್ನು ಸನ್ಯಾಸಿಯೆಂದು ಆರಾಧಿಸುವುದು ಕಡುಮೂರ್ಖತನ. ಸನ್ಯಾಸಿಯ ವೇಷ ಧರಿಸಿ ಕುಣಿದ ಮಾತ್ರಕ್ಕೆ ವ್ಯಕ್ತಿ ಸನ್ಯಾಸಿಯಾಗಲಾರ; ಅವನ ಮೇಲಾಟಗಳಿಗೆ ಮೋಸಹೋದವರು ’ಒತ್ತಾಯಕ್ಕೆ ಬಸುರಾದರೆ ಹಡೆಯೋದು ದಾರೀಲಿ’ ಅಂದಹಾಗೆ ಎಂದಾದರೊಂದು ದಿನ ಜನತೆಯಲ್ಲಿ ಮಾನ್ಯತೆಯನ್ನು ಕಳೆದುಕೊಳ್ಳುತ್ತಾರೆ.

ಜನತೆಯಲ್ಲಿ ಆಯಾಯ ಹುದ್ದೆಗೆ ಒಂದಷ್ಟು ಹಕ್ಕು-ಬಾಧ್ಯತೆಗಳಿರುತ್ತವೆ. ಭ್ರಷ್ಟಾಚಾರವನ್ನು ಸಂಶೋಧಿಸುವ ಬಳಗವೇ ಭ್ರಷ್ಟವಾಗಿಬಿಟ್ಟರೆ ಜನತೆ ವ್ಯವಸ್ಥೆಯನ್ನೇ ಅನುಮಾನದಿಂದ ನೋಡುವಂತಾಗುತ್ತದೆ. ಈಗ ಆಗುತ್ತಿರುವುದೆಲ್ಲವೊ ಹಾಗೇ.

ಕೇಂದ್ರ ಸರಕಾರ ಮತ್ತು ರಾಜ್ಯ ಸರ್ಕಾರಗಳು ಬೇರೇ ಬೇರೆ ಪಕ್ಷಗಳಿಗೆ ಸೇರಿದ್ದಾದರೆ ಅವುಗಳ ವ್ಯವಹಾರಗಳಲ್ಲಿ ಸಹಮತ ಇರುವುದಿಲ್ಲ. ರಾಜ್ಯಕ್ಕೆ ಕೇಂದ್ರದ ಸವಲತ್ತುಗಳು ಸರಿಯಾಗಿ ಸಿಗುವುದಿಲ್ಲ; ಕುರುಡು ಕಾಯ್ದೆಗಳ ಕಣ್ಣಿಗೆ ಇಂತವು ಕಾಣುವುದಿಲ್ಲ. ಆದರೆ ಸದ್ಯ ಮೋದಿಯವರ ಸರ್ಕಾರ ಯಾವ ರಾಜ್ಯಕ್ಕೂ ಅನ್ಯಾಯ ಮಾಡುತ್ತಿಲ್ಲ ಎಂಬುದು ಬಹಳ ಗಮನಾರ್ಹ ಸಂಗತಿ. ಕಲಾಂ ಒಂದೆಡೆ ಹೇಗಿದ್ದರೋ ಹಾಗೆಯೇ ಮೋದಿಯವರೂ ಕೂಡ; ಅವರದ್ದೂ ಸಹ ಒಂದರ್ಥದಲ್ಲಿ ಸಂತ ಜೀವನ. ತನ್ನ ವೈಯಕ್ತಿಕ ಖಾತೆಯಲ್ಲಿರುವುದನ್ನೂ ಕೊನೆಗೆ ದಾನ ಮಾಡುವ ಗುಣ.

ಇನ್ನು ಕೆಲವರದ್ದು ಸಂತ ವೇಷ. ಬೇರೆಯವರ ಖಾತೆ ಅಥವಾ ಸಾರ್ವಜನಿಕರು ತಮಗಾಗಿ ರೂಪಿಸಿಕೊಂಡ ಮಠಮಾನ್ಯಗಳ ಖಾತೆಗಳಿಂದ ತಮ್ಮ ಖಾಸಗೀ ಖಾತೆಗೆ ಇದ್ದುದೆಲ್ಲವನ್ನೂ ವರ್ಗಾಯಿಸಿಕೊಳ್ಳುವ ಗುಣ. ಈಗ ನೀವೇ ನಿರ್ಧರಿಸಿ ಸಾದಾ ಸೀದಾ ಉಡುಪಿನಲ್ಲಿರುವ ಸಂತ ಸ್ವಭಾವದ ವ್ಯಕ್ತಿ ಮೇಲೋ ಅಥವಾ ಸಂತವೇಷದಲ್ಲಿರುವ ಖದೀಮ ಮೇಲೋ ಎಂಬುದನ್ನು.

ಸಂತ ಯಾವಾಗ ಆರ್ಥಿಕ ವ್ಯವಹಾರಗಳಿಗೆ ನೇರವಾಗಿ ಇಳಿಯುತ್ತಾನೋ ಅವನು ಸಂತನಲ್ಲ ಎನ್ನಬಹುದು. ಇದರ ಜೊತೆಗೆ, ಬಿಸ್ಕೀಟು ಹಾಕಿದವರ ಮುಂದೆ ಬಾಲ ಅಲ್ಲಾಡಿಸುವ ನಾಯಿಯಂತೆ ಕಂಡಕಂಡ ಸುಂದರಿಯರ ಮುಂದೆ ಹಲ್ಲುಕಿಸಿಯುವ ವ್ಯಕ್ತಿ ಅವನಾದರೆ ಅವನಲ್ಲಿ ಸಂತನಿಲ್ಲ ಎಂದರ್ಥ. “ನಿನ್ನ ಸೀಟು, ಪೀತಾಂಬರ, ಕೊಡೆ, ರತ್ನಗಂಬಳಿ, ಹಾರ, ತುರಾಯಿ , ಮಕರ ತೋರಣ, ದೊಂದಿ, ಜಾಗಟೆ, ಪಲ್ಲಕ್ಕಿ ಎಲ್ಲವೂ ಹಾಗಿರಲಿ ನಿನ್ನೊಳಗಿರುವ ಅವ ಯಾರು?” ಎಂದು ನಾವು ಸಂತನ ವೇಷದವನಲ್ಲಿ ಕೇಳುವಂತಾಗಬಾರದು. ಯಾರೋ ಒತ್ತಾಯಕ್ಕೆ ಸಭೆಗೆ ಬರಬಹುದು, ತತ್ಕಾಲದಲ್ಲಿ ಎರಡು ಮಾತಿನಲ್ಲಿ ಹೊಗಳಿ ಹೋಗಬಹುದು, ಅದು ಅವರಿಗೆ ಬಿಸಿ ತುಪ್ಪದ ಹಾಗಿರುತ್ತದೆ; ಹಾಗಾಗಿ ಹಾಗೆ ನಡೆದುಕೊಳ್ತಾರೆ; ಮನಸ್ಸಿನಲ್ಲಿ ಅವರಿಗೆ ’ಈ ಕಳ್ಳ ನನ್ನನ್ನೂ ಹಳ್ಳಕ್ಕೆ ಬೀಳಿಸ್ತಾನೆ’ ಎಂಬ ಭಾವನೆಯೇ ಇರುತ್ತದೆ.

ಭಗವಾನ್ ಶ್ರೀಧರರ ಚರಿತ್ರೆಯನ್ನು ನೀವೆಲ್ಲರೂ ಓದಬೇಕು. ಅದರಲ್ಲಿರುವ ಹಲವು ಘಟನೆಗಳು ಸಂತ ಜೀವನದ ಮಜಲುಗಳನ್ನು ತೋರಿಸುತ್ತವೆ. ಒಮ್ಮೆ ಶಿವಮೊಗ್ಗೆಯಲ್ಲಿ ಶ್ರೀಧರ ಸ್ವಾಮಿಗಳು ನಡೆದು ಹೋಗುತ್ತಿದ್ದಾಗ ಒಂದೆಡೆ ವಿಪರೀತ ಜನಜಂಗುಳಿ ಸೇರಿತ್ತು. ಆಜೂಬಾಜಿಗೆ ಹಾದು ಹೋಗುವವರೆಲ್ಲ “ಶ್ರೀಧರ ವಾಮಿಗಳು ಮೈಮೇಲೆ ಬಂದಿದ್ದಾರೆ” ಎಂದು ಹೇಳಿಕೊಳ್ಳುತ್ತಿದ್ದರು. ಸ್ವತಃ ಶ್ರೀಧರರಿಗೆ ಆ ವ್ಯಕ್ತಿಯನ್ನು ನೋಡುವ ಮನಸ್ಸಾಯ್ತು. ಜನರಾಶಿಯನ್ನು ಬದಿಗೆ ಸರಿಸಿ ದಾರಿಮಾಡಿಕೊಂಡು ಹೋಗಿ ಅವರು ಆ ವ್ಯಕ್ತಿಯನ್ನು ನೋಡಿದರು. ಹಣಮಾಡುವ ಉದ್ದೇಶದಿಂದ ಆತ ಶ್ರೀಧರ ಸ್ವಾಮಿಗಳ ಹೆಸರನ್ನು ಬಳಸುತ್ತಿದ್ದ. ಸಾಕ್ಷಾತ್ ಶ್ರೀಧರ ಸ್ವಾಮಿಗಳೇ ಅಲ್ಲಿದ್ದರೂ ಎಷ್ಟೋ ಜನರಿಗೆ ಅವರ ಪರಿಚಯವಿರಲಿಲ್ಲ; ಆದರೆ ಅವರ ಹೆಸರಿನ ಖ್ಯಾತಿ ಮಾತ್ರ ಅಲ್ಲಿದ್ದವರಿಗೆಲ್ಲ ಗೊತ್ತಿತ್ತು. ಶ್ರೀಧರ ಸ್ವಾಮಿಗಳು ಏನನ್ನೂ ಹೇಳಲಿಲ್ಲ, ಹೀಗೂ ಇರುತ್ತದಲ್ಲ ಎಂದು ನಕ್ಕು ಹೊರಟು ಹೋದರು.

ಇಂದು ಪೀಠ ಮತ್ತು ಸೀಟುಗಳ ಖ್ಯಾತಿಯನ್ನು ಬಳಸಿಕೊಂಡು ದುಡ್ಡುಮಾಡುವವರನ್ನು ನೋಡುತ್ತೇವೆ. ಲೌಕಿಕ ಕಾಯ್ದೆಗಳ ಕಣ್ಣಿಗೆ ಮಣ್ಣೆರಚುವ ಸಕಲ ಕಸರತ್ತುಗಳಲ್ಲೂ ಅಂತವರು ಅತಿಯಾಗಿ ಪಳಗಿರುತ್ತಾರೆ. ತಾವು ಮಾಡಿದ್ದನ್ನೆಲ್ಲ ಮುಚ್ಚಿಹಾಕುತ್ತ ನುಣುಚಿಕೊಳ್ಳುವುದರಲ್ಲಿ ನಿಸ್ಸೀಮರಾಗಿರುತ್ತಾರೆ. ಜಗದ ಜನರನ್ನೋ ಭಕ್ತ ಕುರಿಗಳನ್ನೋ ನಂಬಿಸಿ ಮೋಸಮಾಡಬಹುದು; ಆದರೆ ಬಹಳಕಾಲ ಅದು ನಡೆಯೋದಿಲ್ಲ. ಲೆಕ್ಕ ಇಡುವವನೊಬ್ಬನಿದ್ದಾನೆ. ಯಾವ ಏಕಾಂತದಲ್ಲೂ ಅವನ ಕಣ್ತಪ್ಪಿಸಲಿಕ್ಕೆ ಸಾಧ್ಯವಿಲ್ಲ.

ಋಷಿ ಮೂಲವನ್ನು ನೋಡಬಾರದು. [ಈಗೀಗ ಋಷಿ ವೇಷದವರೂ ಇರೋದರಿಂದ ಸ್ವಲ್ಪ ನೋಡಬೇಕಾದ ಅನಿವಾರ್ಯತೆ ಬಂದಿದೆ. ಆದರೆ ಸ್ವಾಮಿ ಶಿವಾನಂದರಿಗೆ ಇದು ಅಪ್ಲೈ ಆಗುವುದಿಲ್ಲ ಎಂಬುದು ನಿಮಗೆ ತಿಳಿದಿರಲಿ.] ಆದರೂ ತಿಳುವಳಿಕೆಗಾಗಿ ಹೇಳೋದಾದರೆ, ಕಲಾಂ ಅವರಿಗೆ ಹೃಷಿಕೇಶದಲ್ಲಿ ಸಿಕ್ಕು ಸಾಂತ್ವನ ಹೇಳಿದ ಸ್ವಾಮಿ ಶಿವಾನಂದರು ಮೂಲದಲ್ಲಿ ವೈದ್ಯರಾಗಿದ್ದವರು. ವೃತ್ತಿಯಲ್ಲೂ ಜೀವನದಲ್ಲೂ ಅಸ್ತೇಯ, ಅಪರಿಗ್ರಹ ಮೊದಲಾದ ಯೋಗಾಚರಣೆಗಳನ್ನೇ ಪಾಲಿಸುತ್ತಿದ್ದ ಅವರಿಗೆ ಲೌಕಿಕಕ್ಕಿಂತ ಪಾರಮಾರ್ಥಿಕ ದಾರಿ ಬಹಳ ಹಿಡಿಸಿತು. ಹಿಮಾಲಯ ಕೈ ಬೀಸಿ ಕರೆಯಿತು. ಅವರು ಸಂತರಾದರು. ಕಲಾಂ ಅಲ್ಲಿಗೆ ಹೋದಾಗ ಮುಖ ನೋಡುತ್ತಿದ್ದಂತೆ “ಯಾಕೆ ಬಹಳ ಬೇಸರದಲ್ಲಿದ್ದೀಯ?” ಎಂದು ಕೇಳಿದ್ದಾರೆ. ಅಷ್ಟೇ ಆಗಿದ್ದರೆ ಪರವಾಗಿರಲಿಲ್ಲ, “ನಿನಗಾಗಿಯೇ ಹುದ್ದೆಯೊಂದು ಕಾದಿದೆ, ಅದು ನಿನ್ನನ್ನು ಕರೆಯುತ್ತಿದೆ. ಹೊರಡು, ಧೈರ್ಯಗೆಡಬೇಡ” ಎಂದರು. ಗೀತೆಯೆ ಹನ್ನೊಂದನೇ ಅಧ್ಯಾಯದ ಅರ್ಥವನ್ನು ವಿವರಿಸಿ ಸಾಂತ್ವನ ಹೇಳಿದರು.

ಅಂತಹ ಮುನಿಜನರನ್ನು ಕಂಡಾಗ ತಂತಾನೇ ಮನಸ್ಸು ಮುದಗೊಳ್ಳುತ್ತದೆ. ಅವರ ಸಖ್ಯ ಮತ್ತು ಸಂದರ್ಶನ ಬಯಸುತ್ತದೆ. ಅಂತವರ ಮುಖದಲ್ಲಿ ಸಾತ್ವಿಕ ತಪಸ್ಸಿನ ತೇಜಸ್ಸು, ಯೋಗದಿಂದ ಲಭಿಸಿದ ಓಜಸ್ಸು ಕಾಣಿಸುತ್ತವೆ. ಮನಸ್ಸು ಮಾಡಿದ್ದರೆ ಸ್ವಾಮಿ ಶಿವಾನಂದರು ಜಾಗತಿಕ ಮಟ್ಟದಲ್ಲಿ ಎಲ್ಲೆಲ್ಲೂ ಶಾಖೆಗಳನ್ನು ತೆರೆದು ಹಣ ಎಣಿಸಿಕೊಳ್ಳಬಹುದಿತ್ತು. ಅವರ ಉದ್ದೇಶ ಹಣ ಮಾಡುವುದಾಗಿರಲಿಲ್ಲ, ಐಶಾರಾಮೀ ವಸ್ತುಗಳ ಬಯಕೆ ಅವರಿಗಿರಲಿಲ್ಲ, ಮಹಿಳೆಯರಿಂದಲಂತೂ ಬಹುದೂರ ಇದ್ದರವರು. ಶಾಂಕರ ತತ್ವಗಳನ್ನು ಪಾಲಿಸಿದರು. ಯಾವ ಪೀಠದ ಅಧಿಕಾರವನ್ನೂ ಬಯಸಲಿಲ್ಲ. ಯಾವ ಜನಾಂಗದ ಧಾರ್ಮಿಕ ಪ್ರತಿನಿಧಿ ಕೂಡ ಅವರಾಗಲಿಲ್ಲ. ಅವರೊಬ್ಬ ಯೋಗ ಸನ್ಯಾಸಿ.

ವಿಪರ್ಯಾಸವೋ, ವಿಧಿಯಿಚ್ಛೆಯೋ, ಪುರಾಣಗಳಲ್ಲಿ ಹೇಳಿದಂತೆ ಕಲಿಯುಗದ ಮಹಿಮೆಯೋ, ಕಳ್ಳ ಸನ್ಯಾಸಿಗಳು ಅಲ್ಲಲ್ಲಿ ಕಾಣುತ್ತಲೇ ಇರುತ್ತಾರೆ. ಇದನ್ನೆಲ್ಲ ಅರಿತೇ ಸಾವಿರದಿನ್ನೂರು ವರ್ಷಗಳ ಹಿಂದೆಯೇ ಶಂಕರರು ಸನಾತನ ಸನ್ಯಾಸಿಗಳಿಗೆ ಮಹಾನುಶಾಸನವೊಂದನ್ನು ಮಾಡಿಟ್ಟುಹೋದರು. ಅವರ ಅನುಯಾಯಿಗಳಿಗಂತೂ ಆ ನಿಯಮಗಳು ಅತ್ಯಂತ ಕಡ್ಡಾಯ. ಅಂತಹ ನಿಯಮಗಳನ್ನೆಲ್ಲ ಗಾಳಿಗೆ ತೂರಿದವನನ್ನು ಸಂತನೆನ್ನುವವರಿಗೆ ಏನೆನ್ನಬೇಕು?

ಇಷ್ಟನ್ನು ನಾವು ತಿಳಿದುಕೊಳ್ಳಬೇಕು: ಜಗತ್ತನ್ನು ನಿಯಂತ್ರಿಸುವ ವಿರಾಟ್ ಶಕ್ತಿಯೊಂದಿದೆ. ಅದಕ್ಕೆ ನಿರ್ದಿಷ್ಟ ಬಣ್ಣ, ಆಕಾರ, ರೂಪ, ಗುಣಧರ್ಮಗಳಿವೆಯೋ ಇಲ್ಲವೋ ಎಂಬುದು ಯಾರಿಗೂ ಗೊತ್ತಿಲ್ಲ. ಶಂಕರರಂತಹ ದಾರ್ಶನಿಕ ತತ್ವಜ್ಞಾನಿಗಳು ಋಷಿ-ಮುನಿಗಳು ಸಮಾಧಿಸ್ಥರಾದಾಗ ಆ ಶಕ್ತಿ ನಿರಾಕಾರ, ನಿರ್ಗುಣ ಎಂಬುದನ್ನು ಕಂಡುಕೊಂಡರೂ, ಹಲವು ಆಕಾರಗಳಲ್ಲಿ ಶಕ್ತಿಯನ್ನು ಆರಾಧಿಸಿದ್ದಾರೆ; ಅದು ಮನಸ್ಸಿನ ನಿಗ್ರಹಕ್ಕಾಗಿ ಮಾತ್ರ. ಅಂತಹ ಮಹನೀಯರು ಹೇಳಿದ್ದರಿಂದ ಆ ವಿರಾಟ್ ಶಕ್ತಿ ನಿರಾಕಾರ ಪರಮಾತ್ಮ ಎಂದು ತಿಳಿದುಕೊಳ್ಳಬಹುದು.

ಪ್ರಸ್ಥಾನ ತ್ರಯಗಳ (ವೇದಾಂತವೆನಿಸಿದ ಉಪನಿಷತ್ತುಗಳು, ಬ್ರಹ್ಮಸೂತ್ರ ಮತ್ತು ಭಗವದ್ಗೀತೆ) ಭಾಷ್ಯಗಳಲ್ಲಿ ಹೇಳಿರುವ ಸಕಲವಿಷಯದ ಘನೀಭೂತ ಸ್ವರೂಪವೆಂದರೆ, ದೇವರು ನಿರಾಕಾರನಾದರೂ ಸಾಕಾರ ರೂಪ ಧಾರಣೆ ಮಾಡುವುದು ಅವನಿಗೆ ಸಾಧ್ಯವಿದೆ. ಹೀಗಾಗಿ ಜಗತ್ತು ಶಿವ(ನಾರಾಯಣ, ಹರಿ, ಹರ, ಬ್ರಹ್ಮ, ಪರಬ್ರಹ್ಮ ಯಾವ ಹೆಸರಲ್ಲಾದರೂ ಕರೆಯಿರಿ)ಎಂಬುದು ಇಚ್ಛಾ+ಸಂಕಲ್ಪ ಶಕ್ತಿ, ಮತ್ತು , ಶಕ್ತಿ(ಮಾಯೆ, ಆದಿಮಾಯೆ, ಅಮ್ಮ, ದೇವಿ, ಪಾರ್ವತಿ, ಲಕ್ಷ್ಮೀ, ಸರಸ್ವತಿ ಇತ್ಯಾದಿ)ಎಂಬುದು ಕ್ರಿಯಾಶಕ್ತಿ= ಶಿವ+ಶಕ್ತಿಯ ಸಂಗಮವೇ ಈ ಜಗತ್ತಿನ ನಿರ್ಮಾಣಕ್ಕೆ ಕಾರಣ ಮತ್ತು ಅದೇ ನಿಯಂತ್ರಣ.

ಮನಸ್ಸೆಂಬುದು (ಚಿತ್ತ) ಕಳ್ಳು(ನೀರಾ) ಕುಡಿದ ಕೋತಿ. ಅದು ಹೇಗೇಗೋ ವರ್ತಿಸುತ್ತದೆ. ಅದನ್ನು ನಿರ್ಬಂಧಿಸದಿದ್ದರೆ ಪರಾಶಕ್ತಿಯ ಅನುಭೂತಿ ಪಡೆಯುವುದು ಸಾಧ್ಯವಿಲ್ಲ. ಮಾಡುವುದನ್ನೆಲ್ಲ ಮಾಡಿಕೊಂಡು ಯಾರೋ ಅಷ್ಟಮಂಗಲದವರು ಹೇಳಿದ ಹೋಮಗಳು, ಮಾಂತ್ರಿಕರು ಹೇಳಿದ ಪ್ರತ್ಯಂಗಿರಾ, ರಕ್ತಾಕ್ಷಿ, ಭಗಳಾಮುಖಿ, ಮಾರಣಹೋಮಗಳನ್ನು ನಡೆಸಿದರೆ, ಸಾಧಕರ ಪಾದಪೂಜೆ, ಲಲಿತಾ ಸಹಸ್ರನಾಮ, ಸೌಂದರ್ಯಲಹರಿಯ ೮ನೇ ಶ್ಲೋಕ, ಆದಿತ್ಯ ಹೃದಯ, ಹನುಮಾನ್ ಚಾಲೀಸಾ ಇವುಗಳನ್ನೆಲ್ಲ ಕೋಟ್ಯಾಧಿಕ ಪಠಿಸಿದರೆ ಮಾಡಿದ ಘನಂದಾರಿ ’ಪುಣ್ಯಕಾರ್ಯ’ಗಳ ಘಮಲು ಹಾರಿಹೋಗುವುದಿಲ್ಲ. ಅದು ಸನ್ಯಾಸಿಗಾದರೂ ಸರಿ, ಸಂಸಾರಿಗಾದರೂ ಸರಿ. ಆಶ್ರಮಧರ್ಮ ಏನಿದೆಯೋ ಅದರಂತೆ ನಡೆದುಕೊಳ್ಳುವುದು ವಿಹಿತವಾದದ್ದು

ಬಾಹ್ಯ ಪೂಜೆಯನ್ನು ಯಾರು ಎಷ್ಟು ವಿಧವಾಗಿ ಬೇಕಾದರೂ ಮಾಡಬಹುದು. ಮಾಡದಿದ್ದರೆ “ಯಾಕೆ ಮಾಡಲಿಲ್ಲಪ್ಪಾ?” ಎಂದು ವಿರಾಟ್ ಶಕ್ತಿ ಕೇಳುವುದಿಲ್ಲ. ಮಾಡಿದರೆ “ಹಾಂ..ಪೂಜೆ ಮಾಡಿದ್ದೀಯ,ಏಕಾಂತ ಸೇವೆಯನ್ನೂ ನಡೆಸಿದ್ದೀಯ, ನಮಗೆ ಸಂತೋಷವಾಗಿದೆ….ವರ್ಷದೊಳಗೆ..ನಾವು ಸಂತಾನಾನುಗ್ರಹ ನೀಡುತ್ತೇವೆ….ಹಿಡಿ ಸುವರ್ಣ ಮಂತ್ರಾಕ್ಷತೆ…ನಿನ್ನ ಗಂಡನ ಸಮಸ್ಯೆ ಪರಿಹಾರವಾಯ್ತು ಅಂತ ತಿಳಿ”ಎನ್ನುವುದಿಲ್ಲ. ಮೊಬೈಲು-ಐಪ್ಯಾಡುಗಳ ಮೂಲಕ ಮೆಸ್ಸೇಜು ಕಳಿಸುವುದಿಲ್ಲ, ದೂರವಾಣಿಯಲ್ಲಿ ಗಂಟೆಗಟ್ಟಲೆ ಹರಟುತ್ತ ಗರತಿಯರಲ್ಲಿ/ಹುಡುಗಿಯರಲ್ಲಿ ಕಾಮಕೆರಳಿಸಿ ಸಂಬಂಧ ಕುದುರಿಸೋದಿಲ್ಲ.

ಇದನ್ನೆಲ್ಲ ನಡೆಸಿದ್ದು ದಾಖಲೆಗಳ ಸಹಿತ ಸಿಕ್ಕರೂ ನಂಬದವರು ಹಳ್ಳಕ್ಕೆ ಬಿದ್ದರೆ, ಆರಾಧಿಸಿದರೆ, ಹರಮುನಿದಾಗ ಗುರುವನ್ನು ಕಾಪಾಡುವುದಕ್ಕೆ ಬುದ್ಧಿ ಸ್ಥಿಮಿತವಿರುವ ಶಿಷ್ಯರು ಗುರುವಿಗೆ ಹಿಡಿದ ಭೂತವನ್ನು ಬಿಡಿಸಬೇಕಾಗುತ್ತದೆ. ಅದಿಲ್ಲದಿದ್ದರೆ ಗುರುವೆನಿಸಿಕೊಂಡವನಲ್ಲಿ ಹೊಕ್ಕ ಭೂತವು ಸಮಾಜದ ಹಲವರನ್ನು ನಾಶಮಾಡಿ ತಾನೂ ಅಧೋಗತಿಗೆ ಹೋಗುವಂತೆ ಮಾಡುತ್ತದೆ.

ಭೂತ ಬಿಡಿಸೋ ಕಾರ್ಯ ಕೆಲವರಿಗೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವಂತದ್ದಾಗಿದೆ. ಯಾರು ಕಟ್ಟಬೇಕು? ಕಟ್ಟುವವರು ಬಲಿಯಾಗಲೇಬೇಕಾಗುತ್ತದೆ. ಆದರೂ ಧೈರ್ಯಮಾಡಿ ವರ್ಷದ ಹಿಂದೆ ಗಂಟೆ ಕಟ್ಟಲು ಒಬ್ಬರು ಮನಸ್ಸು ಮಾಡಿದರಲ್ಲ ಎಂಬುದೇ ಸಮಾಧಾನ. ಕಟ್ಟಿದ ಗಂಟೆಯ ಸದ್ದುಕೇಳುವ ಮೊದಲೇ ಗಂಟೆಯನ್ನು ಬಿಡಿಸಿಕೊಳ್ಳಲು ಕಳ್ಳ ಬೆಕ್ಕು ಹರಸಾಹಸವನ್ನು ನಡೆಸುತ್ತಿದೆ. ಕಟ್ಟಿದ ಗಂಟೆ ಭೂತೋಚ್ಛಾಟನೆಯವರೆಗೂ ಹಾಗೇ ಇರುವಂತೆ ಇನ್ನೂ ಬಂದೋಬಸ್ತಾಗಿಡಲು ಸ್ಥಿಮಿತ ಬುದ್ಧಿಯ ಸಾಕಷ್ಟು ಜನರು ಪ್ರಯತ್ನಿಸುತ್ತಿದ್ದಾರೆ.

ಸಂತಸದ ವಿಷಯವೆಂದರೆ ಸಮಾಜದ ಬಹುತೇಕರಿಗೆ ಸಮಗ್ರ ವಿಷಯ ಅರ್ಥವಾಗಿದೆ. ಹಾಗಾಗಿ ಗಾತ್ರ ಚಾತುರ್ಮಾಸಕ್ಕೆ ಬರುವವರನ್ನು ಮಾತ್ರ ಲೆಕ್ಕ ಇರಿಸಿಕೊಂಡು ಮುಂದೆ ಅವರಲ್ಲೇ ವಸೂಲಿ ಕಾರ್ಯ ನಡೆಸಿ ಸುಲಿಯುತ್ತ, ಅವರ ಹೆಣ್ಣುಗಳೊಡನೆಯೇ ಏಕಾಂತ ನಡೆಸಬಹುದಾಗಿದೆ. ಸರ್ವಜನರ ಒಳಿತನ್ನು ಬಯಸುತ್ತ ಭಿನ್ನಮತೀಯರೆನಿಸಿಕೊಂಡವರು, ಬೇರೆ ಮಠ ಕಟ್ಟುವ ಯೋಜನೆಗೆ ಮುಂದಾದರೆ ಆಶ್ಚರ್ಯವಿಲ್ಲ. ಈಗಿರುವ ಸರಿಯಾದ ಯಾವುದೋ ಮಠಕ್ಕೆ ಸೇರ್ಪಡೆಗೊಂಡರೂ ಬೇಸರ ಪಡಬೇಕಿಲ್ಲ. ಇದನ್ನು ಹಲವು ಹದಿನೆಂಟು ಸಮುದಾಯದವರೂ ಅರ್ಥಮಾಡಿಕೊಳ್ಳಬೇಕು.

Thumari Ramachandra

source: https://www.facebook.com/groups/1499395003680065/permalink/1645606565725574/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s