“ಇಂತಹ ದಶರಥನಿಗೂ ಮಗನಾಗಲು ನಾವು ನಾಲಾಯ್ಕು”

“ಇಂತಹ ದಶರಥನಿಗೂ ಮಗನಾಗಲು ನಾವು ನಾಲಾಯ್ಕು”

“ಗೆಹಲೋರ್ ಘಾಟ್ ಎಂಬ ಪ್ರದೇಶದಲ್ಲಿ ದಶರಥ ಮಾಂಜಿ ಎಂಬ ವ್ಯಕ್ತಿ ಬೆಟ್ಟವನ್ನೇ ಕಡಿದು ಎರಡು ಊರುಗಳ ಮಧ್ಯೆ ದಾರಿ ಮಾಡಿದ್ದಾನೆಂಬ ಸುದ್ದಿ ನಿಮಗೆ ಹೊಸದೇನಲ್ಲ. ಅಕ್ಷರ ಅರಿಯದ ವ್ಯಕ್ತಿ ಉಳಿ ಸುತ್ತಿಗೆಯಿಂದ ಬರೆದ ಅದ್ಭುತ ಪ್ರೇಮ ಕಾವ್ಯವದು; ಪ್ರೇಮಕ್ಕೆ ಇಂಥಾದ್ದೊಂದು ಶಕ್ತಿ ಇದೆಯೆಂದು ಈ ಕಾಲದಲ್ಲೂ ಸಾಕ್ಷಿಯಾಗಿ ದೊರೆತ ಬಾಳುಭಾಷಿಗನ ಬದುಕಿನ ಕಾವ್ಯ ಅದು.

ಬೃಹತ್ ಬೆಟ್ಟದ ತಪ್ಪಲಲ್ಲಿರುವ ಗೆಹಲೋರ್ ಘಾಟ್ ಸುಮಾರು 350 ಕುಟುಂಬಗಳ ಒಂದು ಪುಟ್ಟ ಹಳ್ಳಿ. ಇಲ್ಲಿನ ಪ್ರಮುಖ ಬೆಳೆ ಗೋಧಿ. ಇಲ್ಲಿರುವ ಎಲ್ಲಾ ಮನೆಗಳವರೂ ಮುಷರ್ ಜನಾಂಗಕ್ಕೆ ಸೇರಿದವರು; ಇಲಿಗಳನ್ನು ಹಿಡಿದು ತಿನ್ನುವ ಕಸುಬಿನವರಾದ್ದರಿಂದ ಅವರಿಗೆ ಮುಷರ್ ಎಂಬ ಹೆಸರು. ಸ್ವಾತಂತ್ರ್ಯ ಬಂದು ಮುಕ್ಕಾಲು ಶತಕ ಬಾರಿಸಿದರೂ ಈ ಹಳ್ಳಿಗೆ ವಿದ್ಯುತ್ ಹಾಗೂ ನೀರಿನ ಸೌಕರ್ಯವನ್ನು ಸರ್ಕಾರ ಕಲ್ಪಿಸಿಲ್ಲ. ಇಂತಹ ಜಾಗಗಳನ್ನು ನಕ್ಸಲ್‍ರು ಕಂಡರೆ ಬಿಡುತ್ತಾರೆಯೇ? ಹೀಗಾಗಿ ಅವರ ಚಟುವಟಿಕೆಗೂ ಇದು ಆಶ್ರಯತಾಣವಾಗಿದೆ.

ದಶರಥ್ ಮಾಂಜಿ ಮುಷರ್ ಮತ್ತು ಫಲ್ಗುಣಿದೇವಿ ದಂಪತಿ ಇದೇ ಊರಿನಲ್ಲಿದ್ದ ಒಂದು ಕುಟುಂಬ. ಅದು 1959ನೇ ಇಸವಿ. ‘ನಾನು ಬಡವಿ ಆತ ಬಡವ ಒಲವೇ ನಮ್ಮ ಬದುಕು’ ಎಂಬ ದಾಂಪತ್ಯಗೀತೆ ಹಾಡುವ ಇಲ್ಲಿನ ಹಲವು ದಂಪತಿಗಳು ನಿತ್ಯವೂ ಅನ್ನ ಬೇಕೆಂದರೆ ಕೂಲಿಗಾಗಿ ಊರ ಪಕ್ಕದ ಬೆಟ್ಟದಾಚೆಯ ಇನ್ನೊಂದು ಗ್ರಾಮಕ್ಕೆ ಹೋಗಬೇಕು. ಕಡಿದಾದ ಬೆಟ್ಟವನ್ನು ಹತ್ತಿಳಿದು ವಾಸಿರ್‌ಗಂಜ್ ತಲುಪಿ, ಅಲ್ಲಿನ ಜಮೀನ್ದಾರರ ಹೊಲಗಳಲ್ಲಿ ದುಡಿಯಬೇಕು. ಕೂಲಿ ಕೆಲಸಕ್ಕಿಂತಲೂ ಬೆಟ್ಟ ಹತ್ತಿಳಿಯುವುದೇ ಅವರಿಗಿದ್ದ ದೊಡ್ಡ ತೊಡಕು. ಏನು ಮಾಡೋಣ? ಬೆಟ್ಟ ಹತ್ತಿಳಿಯದೆ ಕೂಲಿಯಿಲ್ಲ; ಕೂಲಿಯಿಲ್ಲದೇ ಹೊಟ್ಟೆಗೆ ಹಿಟ್ಟಿಲ್ಲ.

ಬೆಟ್ಟಹತ್ತಿಳಿವ ಹರಸಾಹಸದ ನಿತ್ಯ ಕೈಂಕರ್ಯದಲ್ಲಿ ಒಂದುದಿನ, ಗಂಡನ ಬಾಯಾರಿಕೆ ತಣಿಸಲು ನೀರು ತರುತ್ತಿದ್ದ ಫಲ್ಗುಣಿದೇವಿ ಬೆಟ್ಟದಿಂದ ಜಾರಿಬಿದ್ದು ಸತ್ತೇ ಹೋದಳು. ನೋಡನೋಡುತ್ತಲೇ ಬಾಳಸಂಗಾತಿಯನ್ನು ಕಳೆದುಕೊಂಡ ದಶರಥಮಾಂಜಿ ಬದುಕಿನಲ್ಲಿ ಆಸಕ್ತಿಯನ್ನೇ ಕಳಕೊಂಡ. ಇದ್ದ ಒಬ್ಬನೇ ಮಗನನ್ನು ಅಣ್ಣ ಬಲರಾಮ್ ದಾ ಗೆ ವಹಿಸಿಕೊಟ್ಟು ಆವೇಶ ಭರಿತನಾಗಿ ಎಲ್ಲರಿಗೂ ತೊಂದರೆಕೊಡುತ್ತ ಹೆಂಡತಿಯ ಜೀವವನ್ನೇ ಅಪಹರಿಸಿದ ಬೆಟ್ಟಕ್ಕೇ ಪಾಠಕಲಿಸುವ ಸಂಕಲ್ಪಮಾಡಿದ. ನಾವೆಲ್ಲ ಏನಾದರೂ ಸಂಕಲ್ಪ ಮಾಡಿದರೆ ಕೋಟಿಗಟ್ಟಲೆ ಹಣ, ಲಕ್ಷಗಟ್ಟಲೆ ಜನ ಎಲ್ಲವನ್ನೂ ವ್ಯವಸ್ಥೆ ಮಾಡಿಕೊಂಡು ಆಮೇಲೆ ಕೆಲಸಮಾತ್ರ ವೇದಿಕೆಗಳಲ್ಲಿ ಭಾಷಣ ಬಿಗಿಯುವುದರಲ್ಲಿ ಪರ್ಯವಸಾನವಾಗುತ್ತದೆ ಎಂಬುದನ್ನು ಗಮನಿಸಬೇಕು.

ದಶರಥ ಮಾಂಜಿ ತನ್ನಲ್ಲಿದ್ದ ಕುರಿಯೊಂದನ್ನು ಮಾರಿ, ಉಳಿ ಸುತ್ತಿಗೆ ಖರೀದಿಸಿ ಬೆಟ್ಟದ ಕಲ್ಲುಬಂಡೆಗಳನ್ನು ಒಡೆಯಲು ಆರಂಭಿಸಿದ. ಏಕಾಂಗಿಯಾಗಿ ಅಷ್ಟೆತ್ತರದ ಬೆಟ್ಟವನ್ನು ಒಡೆಯುತ್ತಾನಂತೆ ಅಂತ ಅವನ ಹಳ್ಳಿಯ ಜನ ತಮ್ಮೊಳಗೇ ಹೇಳಿಕೊಂಡು ನಕ್ಕರು; ಯಾರಿಗೂ ಮುಂದೊಂದು ದಿನ ಈ ಸಂಕಲ್ಪ ಕಾರ್ಯಗತಗೊಳ್ಳುತ್ತದೆ ಎಂಬ ವಿಶ್ವಾಸವಿರಲಿಲ್ಲ. ಆದರೆ ಈ ದಶರಥನ ಮನಸ್ಸಿನಲ್ಲಿ ಮಾತ್ರ ಬೆಟ್ಟ ಕಡಿದ ದಾರಿಯಲ್ಲಿ ಜನರೆಲ್ಲ ಓಡಾಡುತ್ತಿರುವ ಚಿತ್ರಣವಿತ್ತು ಮತ್ತು ಅದಕ್ಕಾಗಿ ಶ್ರಮಿಸಲು ತೋಳ್ಬಲಕ್ಕೆ ಬುದ್ಧಿಬಲ ಜೊತೆಯಾಗಿತ್ತು.

ಸತತ ಇಪ್ಪತ್ತೆರಡು ವರ್ಷಗಳ ಕಾಲ (1966-1982) ಹಗಲಿರುಳು ಏಕಾಂಗಿಯಾಗಿ ಬೆಟ್ಟವನ್ನು ಕಡಿದ. ಕೊನೆಗೆ ದಶರಥ ಮಾಂಜಿಯ ಪರಿಶ್ರಮದ ಈ ತಪಸ್ಸಿಗೆ ಬೆಟ್ಟವೇ ಕಣ್ಣೀರು ಹರಿಸಿತೋ ಎಂಬಂತೆ ವಾಸಿರ್ ಗಂಜ್ ಮತ್ತು ಗೆಹಲೋರ್ ಘಾಟ್ ನಡುವೆ ದಾರಿ ನಿರ್ಮಾಣಗೊಂಡಿತು. ಆರಂಭದಲ್ಲಿ ಮಾಂಜಿಗೆ ಹುಚ್ಚು ಎಂದವರು ಕನಿಕರದಿಂದ ಹೊಸ ಉಳಿ-ಸುತ್ತಿಗೆ ತಂದುಕೊಡುವುದರ ಮೂಲಕ ಅವನ ಕಾರ್ಯಕ್ಕೆ ನೆರವಾಗಿದ್ದರು. ಉಳಿ ಸುತ್ತಿಗೆ ಕೊಟ್ಟಿದ್ದಷ್ಟೇ ನೆರವು, ಇನ್ಯಾರೂ ಅಲ್ಲಿಗೆ ಅಗೆಯಲಿಕ್ಕೆ ಬರಲಿಲ್ಲ.

ಮಡದಿಯ ಮೇಲಿನ ಪ್ರೇಮ ಮಾಂಜಿಯ ತೋಳುಗಳಲ್ಲಿ ಶಕ್ತಿಯಾಗಿ ನಿತ್ಯವೂ ಕೆಲಸಮಾಡುತ್ತಿತ್ತು. ಇಪ್ಪತ್ತೆರಡು ವರ್ಷ ಬೆಟ್ಟ ಕಡಿಯುವ ಕೆಲಸವನ್ನು ಸಂಬಳ ಕೊಟ್ಟರೂ ಮಾಡುವ ಜನರಿಲ್ಲದ ಈ ಕಾಲದಲ್ಲಿ ಮಾಂಜಿ ತನ್ನ ಸಂಕಲ್ಪಬದ್ಧತೆಗಾಗಿ ವಿಶ್ವವೇ ತಿರುಗಿ ನೋಡುವಂಥ ಕೆಲಸ ಮಾಡಿಬಿಟ್ಟಿದ್ದ; ಹಾಗಂತ ಅವನಿಗೆ, “ನೀವೆ ನಮಗೆ ಗುರುಗಳು, ನಿಮಗಾಗಿಯೇ ಈ ಸೀಟು, ನಾವಿದ್ದೇವೆ ನಿಮ್ಮ ಜೊತೆಗೆ ನಾವಿದ್ದೇವೆ” ಎನ್ನುತ್ತ ಯಾರೋ ಬರುತ್ತಾರೆಂಬ ನಿರೀಕ್ಷೆಯಿರಲಿಲ್ಲ. ಹೋದವಳಂತೂ ಹೋದಳು ಉಳಿದವರಿಗಾದರೂ ಬೆಟ್ಟವೇರಿಳಿವ ತೊಂದರೆ ತಪ್ಪಲಿ ಎಂಬುದೇ ಅವನ ಇಚ್ಛೆಯಾಗಿತ್ತು.

ಬಿಹಾರ್‌ನ ಜನತೆ ಎಂದಿಗೂ ಮರೆಯಲಾಗದ ಪ್ರೇಮದ ಚಿಹ್ನೆಯನ್ನು ಮಾಂಜಿ ಉಳಿಸಿಹೋಗಿದ್ದಾನೆ. ಬೆಟ್ಟವನ್ನು ಸೀಳಿ ರೂಪಿಸಿರುವ ದಾರಿಯಲ್ಲಿ ನಿತ್ಯ ಓಡಾಡುವ ಆ ಹಳ್ಳಿಯ ಜನ ಮಾಂಜಿ ಮತ್ತು ಫಲ್ಗುಣಿ ದೇವಿ ದಂಪತಿಯನ್ನು ದೇವರಂತೆ ಕಾಣುತ್ತಾರೆ. ಇತಿಹಾಸದಲ್ಲಿ ತಾಜಮಹಲ್ ನಿರ್ಮಾಣಕ್ಕೆ ಮುಂದಾದ ಷಹಜಹಾನ್‌ಗೆ ಇಪ್ಪತ್ತೆರಡು ಸಾವಿರ ಕೆಲಸದಾಳುಗಳು ಇಪ್ಪತ್ತೆರಡು ವರ್ಷಗಳಲ್ಲಿ ಆ ಕೆಲಸ ಮಾಡಿಕೊಟ್ಟಿದ್ದರಂತೆ. ಹಣದಥೈಲಿಯೂ ಜೋರಾಗೇ ಇದ್ದಿದ್ದರಿಂದ ಷಹಜಹಾನ್ ತಾಜಮಹಲನ್ನು ಕಟ್ಟಲು ಸಾಧ್ಯವಾಯ್ತು. [ಅದು ಅವನು ಕಟ್ಟಿದ್ದೇ ಅಲ್ಲ ತೇಜೋಮಹಾಲಯ ಅದು ಎಂಬ ಇನ್ನೊಂದು ವಾದವೂ ಇದೆ. ಅದೇನೆ ಇರಲಿ ಸದ್ಯಕ್ಕೆ ಅದು ನಮಗೆ ವಿಷಯವಲ್ಲ]

ನಾವೂ ’ಸನ್ಯಾಸಿ’ಯಾಗಿ ಈಗ ಇಪ್ಪತ್ತೆರಡು ವರ್ಷಗಳಾದವು; ಈ ಇಪ್ಪತ್ತೆರಡು ವರ್ಷಗಳಲ್ಲಿ ನಾವೂ ಸಹ ಇನ್ನೆಂದಿಗೂ ಯಾರೂ ಅಳಿಸಲಾರದ ಶಾಶ್ವತ ಚಿಹ್ನೆಯೊಂದನ್ನು ಈ ಸೀಟಿಗೆ ನೀಡಿಬಿಟ್ಟಿದ್ದೇವೆ. ಬರಿಗೈ ದಾಸನಂತಿದ್ದ ದಶರಥ ಮಾಂಜಿಯ ಸಾಧನೆಯ ಎದುರಿಗೆ ಸಾವಿರಕೋಟಿ ಸರದಾರರಾಗಿರುವ ನಮ್ಮ ಈ ಸಾಧನೆ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಬೇಕೆಂಬುದೇ ನಮ್ಮ ಸಂಕಲ್ಪ. ಸೋಣೆ ತಿಂಗಳಲ್ಲೇ ಚಾತುರ್ಮಾಸವೂ ಬರುವುದರಿಂದ ಸಾಧ್ಯವಾದಷ್ಟೂ ಹೆಚ್ಚಿಗೆ ಏಕಾಂತ ನಡೆಸುವುದೇ ನಮ್ಮ ಪರಮಗುರಿ.”

Thumari Ramachandra

source: https://www.facebook.com/groups/1499395003680065/permalink/1642392982713599/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s