ರಾಂಗ್-ವೇಷ್‍ವರ ಕೀಚಕ ವಧೆ

ರಾಂಗ್-ವೇಷ್‍ವರ ಕೀಚಕ ವಧೆ

ಕೀಚಕನನ್ನು ಹೊಸದಾಗಿ ನಿಮಗೆ ತುಮರಿ ಪರಿಚಯಿಸಬೇಕಾದ ಅದತ್ಯವೇನಿಲ್ಲವಲ್ಲ? ಯಾಕೆಂದರೆ ಕಳೆದೊಂದು ವರ್ಷದಿಂದ ಠಳಾಯಿಸುತ್ತಿರುವ ಕೀಚಕ ನಿತ್ಯವೂ ಸುದ್ದಿಯಲ್ಲೇ ಇದ್ದಾನೆ. ಆದರೂ ತುಮರಿ ಒತ್ತಾಯಕ್ಕೆ ಒಮ್ಮೆ ಕತೆಯನ್ನು ಕೇಳಿ. ಸಪ್ಪೆ ಊಟಕ್ಕೆ ಉಪ್ಪಿನಕಾಯಿ ಸಿಕ್ಕರೆ ನಿಮ್ಮ ಪುಣ್ಯ!

ಧರ್ಮವೇ ಮೈವೆತ್ತ ಧರ್ಮರಾಯನಿಗೊಂದು ಚಟವಿತ್ತು-ಜೂಜಾಡುವುದು. ಭಗವಂತನೇ ಜೊತೆಗಿದ್ದರೂ ಅದನ್ನು ಮಾತ್ರ ನಿಲ್ಲಿಸಲಾಗದ ಮಾನವಪ್ರಾಣಿಯದು. ಕೆಲವರಿಗೆ ಹಾಗೆ, ಬೆಳಗಾದರೆ, ಸಾಯಂಕಾಲವಾದರೆ ಬಾಟಲಿ ಬೇಕು. ಇನ್ನೂ ಕೆಲವರಿಗೆ ಹೆಣ್ಣುಮಕ್ಕಳು ಬೇಕು; ಚಂದ ಇದ್ದರೆ ಹೆಂಗಸರಾದರೂ ಸಾಕು. ಇಂತವರ ನೆಂಟರಿಷ್ಟರು ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಚಟದ ನೆಂಟನ ಬಗ್ಗೆ ಹೇಳುವಾಗ “ಜೂಸು” “ಜೊಲ್ಲು” ಇತ್ಯಾದಿ ’ಪಾರಿಭಾಷಿಕ’ಪದಗಳನ್ನು ಬಳಸುವುದುಂಟು.

ನಮ್ಮ ಸ್ನೇಹಿತರೊಬ್ಬರು ಹೇಳಿದ ಕತೆಯಲ್ಲಿ ರಾತ್ರಿ ಮನೆಗೆ ಬಂದ ಅತಿಥಿಗೆ ಮೂತ್ರಶಂಕೆಯಾದರೆ ಜೊತೆಗಿರಲಿ ಎಂದು ಕೊಟ್ಟ ಟಾರ್ಚನ್ನೇ ಬ್ಯಾಗಿಗೆ ಹಾಕಿಕೊಂಡು ಹೋಗಿ, ಅಡವಿಟ್ಟು ರಮ್ಮಿ ಆಡಿದ ಮಹಾನುಭಾವನನ್ನೂ ದರ್ಶಿಸಿದ್ದೇನೆ. ಜೂಜುಕೋರರು ಆಟಕ್ಕೆ ಕುಳಿತರೆ ಮನೆಹೋಯ್ತೋ, ಮಠಹೋಯ್ತೋ ಯಾವುದರ ಬಗ್ಗೆಯೂ ಚಿಂತೆಯಿಲ್ಲ. ಇನ್ನೇನು ಮುಂದಿನ ಆಟದಲ್ಲಿ ಎಲ್ಲವನ್ನೂ ಮರಳಿ ಪಡೀತೇನೆ ಎಂಬ ಮಹತ್ವಾಕಾಂಕ್ಷಿಗಳು. ನಮ್ಮ ಧರ್ಮಣ್ಣನೂ ಇದಕ್ಕೆ ಹೊರತಾಗಿರಲಿಲ್ಲ. ಧರ್ಮಣ್ಣನ ಈ ವೀಕ್ನೆಸ್ಸು ಕೌರವನಿಗೆ ಗೊತ್ತಿತ್ತು, ಶಕುನಿ ಮಾಮನಿಗೆ ಜಾದೂ ಗೊತ್ತಿತ್ತು. ಅವರಿಬ್ಬರೂ ಸೇರಿ ಧರ್ಮಣ್ಣನನ್ನು ಸೋಲಿಸಿದರು.

ಧರ್ಮಿಷ್ಠನಾದ ಧರ್ಮಜ ಸಹಧರ್ಮಿಣಿ ದ್ರೌಪದಿಯನ್ನೇ ಅಡವಿಟ್ಟುಬಿಟ್ಟಿದ್ದ. ದ್ಯೂತದಲ್ಲಿ ಸೋತ, ದ್ರೌಪದಿಯನ್ನು ಹಸ್ತಾಂತರಿಸಬೇಕಾಗಿ ಬಂತು. ಆಗ ದ್ರೌಪದಿಯ ಸೀರೆಯನ್ನು ಸೆಳೆದು ಅವಮಾನಿಸಿದ ಸನ್ನಿವೇಶಕ್ಕೆ ಮೂರುಲೋಕದ ಗಂಡು ಗಾಂಡೀವಿ ಅರ್ಜುನ ಸೇರಿದಂತೆ ದನಗಾಹಿಗಳಂತಿರುವ ನಕುಲ ಸಹದೇವರೂ ಸಹ ಮೂಕ ಸಾಕ್ಷಿಗಳಾದರು. ನೂರಾನೆಯ ಬಲದ ಭೀಮ ಮಹಾಮೇರುವಿನಂತೆ ಅಲ್ಲಾಡದೆ ನಿಂತುಬಿಟ್ಟಿದ್ದ. ಇಷ್ಟಕ್ಕೆಲ್ಲ ಕಾರಣವಾಗಿದ್ದು ಧರ್ಮಣ್ಣನ ಜೂಜಾಟ.

ಪಾಂಡವರು ರಾಜ್ಯಭ್ರಷ್ಟರಾದರು, ದೇಶಾಂತರ ಎಲ್ಲೋ ಸಾಗಿಹೋದರು. ಕೆಲಸಮಯ ಕೌರವರ ಕಣ್ಣಿಂದ ತಪ್ಪಿಸಿಕೊಳ್ಳುವ ಸಲುವಾಗಿ ಅಜ್ಞಾತವಾಸವನ್ನೂ ನಡೆಸಿದರು. ಆಗ ಒಬ್ಬೊಬ್ಬರ ವೇಷವನ್ನು ನೋಡಬೇಕಾಗಿತ್ತು ಛೆ. ಧರ್ಮಣ್ಣ ಪೂಜೆ ಭಟ್ಟ, ಭೀಮಣ್ಣ ಅಡುಗೆ ಭಟ್ಟ, ಅರ್ಜುನಪ್ಪ ಬೃಹನ್ನಳೆ, ದ್ರೌಪದಿ ಸೈರಂಧ್ರಿ……ಹೀಗೆ ಎಲ್ಲರೂ ವೇಷಧಾರಿಗಳಾಗಿ ಆಯಾಯ ಕಾಯಕಮಾಡುತ್ತ ದಿನದೂಡುತ್ತಿದ್ದರು. ಎಲ್ಲಿ? ವಿರಾಟರಾಜನ ಆಸ್ಥಾನದಲ್ಲಿ. ಪಾಂಡವರು ಹೋದಾಗ ಅಲ್ಲಿ ಅಷ್ಟೆಲ್ಲ ಹುದ್ದೆಗಳಿಗೆ ವೇಕೆನ್ಸಿ ಇತ್ತೋ? ಇತ್ತು ಅಂತಾಯ್ತಲ್ಲ. ಇಂದು ದೊಡ್ಡದೊಡ್ಡ ತಿಮಿಂಗಿಲಗಳಂತಹ ಕಂಪನಿಗಳನ್ನು ಬಿಟ್ಟು ಓಡಿಹೋಗುವ ಟೆಕ್ಕಿಗಳ ಹಾಗೆ ಅಲ್ಲಿನ ಆಯಾಯ ಹುದ್ದೆಗಳವರೂ ಬಿಟ್ಟು ಹೋಗಿದ್ದರೋ ಏನೋ.

ದ್ರೌಪದಿಯು ಸೈರಂಧ್ರಿ ಎಂಬ ಹೆಸರಲ್ಲಿ ರಾಣಿ ಸುದೇಷ್ಣೆಯ ಪರಿಚಾರಿಕೆಯಾದಳು. ಒಂದು ದಿನ ಸುದೇಷ್ಣೆಯ ಅಂತಃಪುರಕ್ಕೆ ಅವಳ ತಮ್ಮ ಕೀಚಕ ಬಂದು ದ್ರೌಪದಿಯ ಸೌಂದರ್ಯವನ್ನು ನೋಡಿ ಮೋಹಗೊಂಡ. “ಅಕ್ಕಾ, ಆ ಚೆಲುವೆ ಯಾರು? ಅವಳನ್ನು ನನ್ನ ಪ್ರಿಯೆಯನ್ನಾಗಿ ಮಾಡಿಕೋಬೇಕೂಂತ ಆಸೆಯಾಗಿದೆ” ಎಂದ. ನಮ್ಮ ರಾಂಗ್ ವೇಷ್ ವರರು “ವಿಶಾರದಕ್ಕಾ, ಹಾಸ್ಟೆಲಿನ ಆ ಸುಂದರ ಹುಡಿಗಿಯರು ಯಾರು? ನಮ್ಮ ಸಖಿಯರನ್ನಾಗಿ ಮಾಡಿಕೊಳ್ಳಬೇಕೆಂದು ನಮಗೆ ಬಹಳ ಆಸೆ” ಎಂದು ಹೇಳಿ ಕರೆಸಿಕೊಳ್ಳಲಿಲ್ಲವೇ ಹಾಗೇ ಇದೂ ಸಹ.

ಸುದೇಷ್ಣೆ ಉಪಾಯದಿಂದ ದ್ರೌಪದಿಯನ್ನು ಕರೆದು, “ಸೈರಂಧ್ರಿ, ನನ್ನ ತಮ್ಮನ ಮನೆಗೆ ಹೋಗಿ ಈ ಹಾಲು ಹಣ್ಣುಗಳನ್ನು ಕೊಟ್ಟು ಬಾ” ಎಂದು ಆಜ್ಞಾಪಿಸಿದಳು. ಒಡತಿಯ ಆದೇಶದಂತೆ ಬಂಗಾರದ ಹರಿವಾಣದಲ್ಲಿ ಬಂಗಾರದ ಚೊಂಬಿನಲ್ಲಿ ಹಾಲನ್ನೂ ಮತ್ತು ಹಣ್ಣುಗಳನ್ನೂ ಹಿಡಿದುಕೊಂಡು ಬಂದ ಸೈರಂಧ್ರಿಯನ್ನು ಕಂಡ ಕೀಚಕ ಬಟ್ಟೆ ಬಿಚ್ಹುವ ತರಾತುರಿಯಲ್ಲಿ, “ಶೋಭನಾಂಗೀ, ನೀನು ನನ್ನನ್ನು ಮದುವೆಯಾಗು” ಎಂದು ಬಲಾತ್ಕರಿಸಿದ. ದ್ರೌಪದಿ ಅವನನ್ನು ನೂಕಿ ಓಡಿಬಂದಳು. ವಿರಾಟರಾಜನಿಗೆ ಈ ವಿಷಯ ಮೊರೆಯಿಟ್ಟಾಗ ಆತ ಅದನ್ನು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ; ಮಠದಲ್ಲಿ ಕೆಲವು ನಿರುಪಯೋಗಿ ಮುಖಂಡರಿರುವುದಿಲ್ಲವೇ ಹಾಗಿದ್ದ.

ಅವಮಾನದಿಂದ ಕುದಿಯುತ್ತಿದ್ದ ದ್ರೌಪದಿ ರಾತ್ರಿಯ ವೇಳೆ ಅಡುಗೆ ಮೆನೆಯಲ್ಲಿದ್ದ ವಲಲ[ಭೀಮ]ನಲ್ಲಿ ತನ್ನ ಸಂಕಟವನ್ನು ತೋಡಿಕೊಂಡಳು. “ಭೀಮ, ನೀನು ಕೀಚಕನನ್ನು ಕೊಲ್ಲದಿದ್ದರೆ. ನಾನು ಪ್ರಾಣಬಿಡ್ತೇನೆ. ನನಗೆ ಐವರು ಗಂಡಂದಿರಿದ್ದು ಏನು ಪ್ರಯೋಜನ? ಅದರಲ್ಲೂ ನೂರಾನೆಯ ಬಲದ ನನ್ನಿಷ್ಟದ ನೀನಾದರೂ ಇದ್ದೇನು ಪ್ರಯೋಜನ?” ಎಂದು ರೋಧಿಸಿದಳು.

ಬೆಳಗಿನಜಾವ ಒಟ್ಟಿದ್ದ ಒಲೆ ಇನ್ನೊವರೆಗೆ ಉರಿಯುತ್ತಲೇ ಇದೆ; ಅರೆನಿಮಿಷ ಅಂಡೂರಲೂ ಪುರ್ಸೊತ್ತು ಇರದ ವಲಲ[ಭೀಮ]ನಿಗೆ ಮೊದಲೇ ವಿಶ್ರಾಂತಿಯಿಲ್ಲದೇ ಕೋಪ ಬಂದಿತ್ತು. ಅಷ್ಟರಲ್ಲಿ ದ್ರೌಪದಿಯ ಈ ಮಾತನ್ನು ಕೇಳಿದಮೇಲೆ ಉರಿವ ಬೆಂಕಿಗೆ ತುಪ್ಪ ಸುರಿದಂತೆ ಅವನಲ್ಲಿ ಕ್ರೋಧ ಬುಸುಗುಟ್ಟಿತು. ಪ್ರೀತಿಯ ಹೆಂಡತಿ ತನ್ನ ಸಂಕಟವನ್ನು ಹೇಳಿದಾಗ ಅವಳಲ್ಲಿ ಕೋಪ ತೋರದೇ ಅವಳಿಗೊಂದು ಉಪಾಯವನ್ನು ಹೇಳಿದ. ಅದರಂತೆ ಅವಳು ಮರುದಿನ ಕೀಚಕ ಸಿಕ್ಕಾಗ, “ಕೀಚಕ, ಇವತ್ತು ರಾತ್ರಿ ನಾಟ್ಯಶಾಲೆಗೆ ಬಾ. ಅಲ್ಲಿ ಯಾರೂ ಇರೋದಿಲ್ಲ. ಗಂಧರ್ವರಾದ ನನ್ನ ಐವರು ಪತಿಯರಿಗೂ ಆ ಸ್ಥಳ ಗೊತ್ತಿಲ್ಲ” ಎಂದು ಪಿಸುಗುಟ್ಟಿದಳು. ನಮ್ಮ ಹಾವಾಡಿಗ ಸಂಸ್ಥಾನದ ಕೀಚಕನಲ್ಲಿ ಯಾರ್‍ಯಾರು ಎಲ್ಲೆಲ್ಲಿಗೆ ಬಾ ಅಂತ ಹೇಳಿರ್ತಾರೋ ಯಾರಿಗ್ಗೊತ್ತು; ಬೀರೂರಿನ ಇಬ್ಬರು ಹೆಂಗಸರಿಗೆ ಆ ಊರಲ್ಲೇ ಏಕಾಂತವಾಗಿದ್ದು ಮಾತ್ರ ಕೆಲವರಿಗಷ್ಟೇ ಗೊತ್ತು!

ಹೋಗಲಿಬಿಡಿ, ಕೀಚಕ ಆನಂದಪರವಶನಾದ. ಶ್ರೀನಗರ ಕಿಟ್ಟಿ-ರಮ್ಯಾ ನಟಿಸಿದ

“ಗಗನವೇ ಬಾಗಿ …..”

ಹಾಡನ್ನು ಕಲ್ಪಿಸಿಕೊಳ್ಳುತ್ತಿದ್ದನೋ ಏನೋ; ಆದರೆ ಅಂದು ಅದು ತಯಾರಾಗಿರಲಿಲ್ಲ. ಬೆಲೆಬಾಳುವ ಉಡುಪು ತೊಟ್ಟು, ಕಿಲೋಮೀಟರು ದೂರದಿಂದಲೇ ಮೂಗಿಗೆ ಬಡಿಯುವ ಸುಂಗಂಧ-ಅತ್ತರನ್ನು ಮೈಗೆಲ್ಲ ಪೂಸಿಕೊಂಡು, ರಾಂಗ್ ವೇಷ್ ವರ ಧರಿಸುವಂತೆ ಸ್ಪೆಶಲ್ ಮಾಲೆ ಧರಿಸಿಕೊಂಡು ಅಲಂಕೃತನಾಗಿ ಮಧ್ಯರಾತ್ರಿಯ ವೇಳೆಗೆ ನಾಟ್ಯಶಾಲೆಗೆ ಬಂದ. ಅಲ್ಲಿ ಮಂಚದ ಮೇಲೆ ಯಾರೋ ಮಲಗಿದ್ದರು. ಬಹುಶಃ ಸೈರಂಧ್ರಿ ಮೊದಲೇ ಬಂದು ಮಲಗಿಬಿಟ್ಟಿದ್ದಾಳೆ ಎಂದುಕೊಂಡು ’ಪ್ರಸಾದ’ ನೀಡುವ ಅಗತ್ಯವೇ ಇಲ್ಲವೆಂದುಕೊಳ್ಳುತ್ತ, “ಪ್ರೀಯೇ, ನನ್ನಷ್ಟು ರೂಪವಂತನಿಲ್ಲ ಎಂದು ಎಲ್ಲರೂ ಹೊಗಳುತ್ತಾರೆ. ನೀನು ನನ್ನನ್ನು ಒಲಿದು ಬಂದೆಯಲ್ಲಾ, ಸದ್ಯ!” ಎನ್ನುತ್ತ ಸೀರೆಯುಟ್ಟು ಮಲಗಿದ್ದ ವ್ಯಕ್ತಿಯನ್ನು ಅಪ್ಪಿಕೊಳ್ಳಲು ಪ್ರಯತ್ನಿಸಿದ. ಬೆಳಗಿನಿಂದ ನೂರಾನೆಯ ಕೆಲಸಮಾಡಿ ಬಳಲಿದ್ದ ಭೀಮನಿಗೆ ರಾತ್ರಿ ನಿದ್ದೆಯನ್ನು ತಪ್ಪಿಸಿದ್ದು ಇನ್ನಷ್ಟು ಕೋಪ ತರಿಸಿತ್ತು. ತಕ್ಷಣವೇ ತಿರುಗೆದ್ದು ಮೇಲೆ ಹಾರಿ ಕೀಚಕನನ್ನು ಗುದ್ದಿದ. ಅವರಿಬ್ಬ ನಡುವೆ ಭಯಂಕರ ಮಾರಾಮಾರಿಯಾಗಿ ಕೀಚಕ ಸತ್ತು ಬಿದ್ದ. ಭೀಮ ಸೈಲೆಂಟಾಗಿ ಅಡುಗೆ ಮನೆ ಸೇರಿಬಿಟ್ಟ!

ಆಗ ಸೈರಂಧ್ರಿ,”ಅಯ್ಯೋ, ಕೀಚಕ ನನ್ನ ಗಂಡಂದಿರಾದ ಗಂಧರ್ವರಿಂದ ಹತನಾಗಿ ಬಿದ್ದಿದ್ದಾನೆ. ಬನ್ನಿ, ಬನ್ನಿ” ಎಂದು ಕಿರುಚಿಕೊಂಡಳು. ಕೀಚಕನ ತಮ್ಮಂದಿರು ಓಡಿಬಂದರು. ಸತ್ತ ಸೋದರನನ್ನು ನೋಡಿ ಅತ್ತು ಕರೆದು ಸಂಸ್ಕಾರ ಮಾಡುವುದಕ್ಕೋಸ್ಕರ ಶವವನ್ನೆತ್ತಿಕೊಂಡು ಹೊರಟರು. ನಾಟ್ಯಶಾಲೆಯ ಹೊರಗೆ ನಿಂತಿದ್ದ ದ್ರೌಪದಿಯನ್ನು ನೋಡಿ, “ಇವಳಿಂದಲೇ ನಮ್ಮಣ್ಣ ಸತ್ತ. ಈ ಕೆಟ್ಟ ಹೆಂಗಸನ್ನೂ ಸ್ಮಶಾನಕ್ಕೊಯ್ದು ಸುಟ್ಟುಬಿಡೋಣ” ಎಂದು ಅವಳನ್ನೂ ಎತ್ತಿಕೊಂಡು ಹೊರಟರು.

ಸೈರಂಧ್ರಿ[ದ್ರೌಪದಿ]ಯು ಆರ್ತಳಾಗಿ, “ಅಯ್ಯಾ ಗಂಧರ್ವರೇ, ನನ್ನನ್ನು ರಕ್ಷಿಸಿರಿ” ಎಂದು ಬೊಬ್ಬೆ ಹಾಕಿದಳು. ಅದನ್ನು ಕೇಳಿದ ವಲಲ [ಭೀಮ] ವೇಷ ಬದಲಾಯಿಸಿಕೊಂಡು “ನಿನ್ನ ಮಾತು ಕೇಳಿಸಿತು, ಬಂದೆ” ಎನ್ನುತ್ತಾ ಸ್ಮಶಾನದ ಕಡೆಗೆ ಓಡಿದ. ದಾರಿಯಲ್ಲಿದ್ದ ಒಂದು ಮರವನ್ನು ಕಿತ್ತುಕೊಂಡು ಭೀಮ ಓಡಿ ಬರುತ್ತಿರಲು, ಗಂಧರ್ವ ಬಂದನೆಂದು ಹೆದರಿ ಕೀಚಕನ ಸೋದರರು ದ್ರೌಪದಿಯನ್ನು ಬಿಟ್ಟು ಪಲಾಯನ ಮಾಡಿದರು. ಆದರೆ ಭೀಮ ಅವರ ಬೆನ್ನಟ್ಟಿ ಎಲ್ಲರನ್ನೂ ಯಮಲೋಕಕ್ಕೆ ಕಳುಹಿಸಿಬಿಟ್ಟ, ಎಂಬಲ್ಲಿಗೆ ಕೀಚಕ ವಧೆ ಎಂಬ ಕತೆ ಪರ್ಯವಸಾನವಾಯಿತು.

ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ|
ಚಿನ್ನದಾತುರಕಿಂತ ಹೆಣ್ಣುಗಂಡೊಲವು |
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ |
ತಿನ್ನುವುದದಾತ್ಮವನೆ ಮಂಕುತಿಮ್ಮ ||

ಮಠದಲ್ಲಿ ಕೆಲವರಿಗೆ ಮನ್ನಣೆಯ ದಾಹ ಮೊದಲಿನಿಂದಲೂ ಅಧಿಕವಾಗಿಯೇ ಇದೆ. ಇನ್ನೂ ಕೆಲವರಿಗೆ ಮುಖಭಿಡೆಯ ಅನ್ನೋದು ಅತೀ ಹೆಚ್ಚಾಗಿಬಿಟ್ಟಿದೆ. ಮನ್ನಣೆಯ ಮಣೆಯನ್ನು ಹಾಕಿಸಿಕೊಂಡವರು ರಾಂಗ್ ವೇಷದ ವಿರುದ್ಧ ಬೀಳೋದುಂಟೇ? ಹಾಗಾಗಿಯೇ ಆಗಾಗ ಹಲವಾರು ಪ್ರಶಸ್ತಿಗಳನ್ನು ವಿತರಿಸುವ ಕಾರ್ಯಕ್ರಮ ನಡೆಯುತ್ತಿರುತ್ತದೆ. ಸನ್ಮಾನಕ್ಕೊಳಗಾದವರಲ್ಲಿ ಕೆಲವರು ವಾಪಸ್ಸು ಬಿಸಾಕುವ ಆಲೋಚನೆಯಲ್ಲೂ ಇದ್ದಾರಂತೆ.

ಧರ್ಮಣ್ಣನಂತಹ ಸದ್ಗುಣಿಗಳು ಯಾವ ಚಟವೂ ಇಲ್ಲದವರು. ಆದರೂ ರಾಂಗ್ ವೇಷದ ಹಗಲುವೇಷಗಳನ್ನು ಬಯಲುಮಾಡುವುದಕ್ಕೆ ಅವರೇಕೆ ಮುಂದಾಗಲಿಲ್ಲ ಎಂಬುದು ಸಮಾಜದ ಬಹುತೇಕ ಜನರನ್ನು ಕಾಡುತ್ತಿರುವ ಪ್ರಶ್ನೆ. ಮನ್ನಣೆಯ ಮುಜುಗರಕ್ಕೊಳಗಾಗಿ ಧರ್ಮವನ್ನು ಬಲಿಗೊಟ್ಟರೇ? ಸೀಟಿನ ಪ್ರತಿಷ್ಠೆಗಾಗಿ ಕಚ್ಚೆಹರುಕನನ್ನೇ ಮುಂದುವರಿಸುವ ಪಣ ತೊಟ್ಟರೇ? ಗೊತ್ತಿಲ್ಲ.

ಸೀಟಿನಮೇಲಿರುವ ರಾಂಗ್ ವೇಷಕ್ಕಂತೂ ಈಗ ಹೆಬ್ಬುಲಿಯ ಸವಾರಿಯಂತಾಗಿದೆ ಸೀಟು. ಸತ್ಯಂ ರಾಮಲಿಂಗ ರಾಜು ಅವರು ಒಮ್ಮೆ ಹೇಳಿದ್ದರು,”ಹೇಗೋ ಏರುವಾಗ ಹುಲಿಯನ್ನು ಏರಿಬಿಟ್ಟೆ, ಸವಾರಿ ಮಾಡದೇ ಇಳಿದುಕೊಂಡರೆ ಹುಲಿ ನನ್ನನ್ನೇ ತಿಂದುಹಾಕುತ್ತಿತ್ತು. ಹೇಗೆ ತಪ್ಪಿಸಿಕೊಳ್ಳಲಿ ಎಂಬುದು ತಿಳಿಯುತ್ತಿರಲಿಲ್ಲ. ಹೀಗಾಗಿ ಸಾಧ್ಯವಾದಷ್ಟೂ ದಿನ ಸವಾರಿ ಮುಂದುವರಿಸಿದೆ. ಎಂದಾದರೊಂದು ದಿನ ಇದು ನನ್ನನ್ನು ಸಂಕಷ್ಟದಲ್ಲಿ ಹಾಕುತ್ತದೆ ಎಂದು ತಿಳಿದಿತ್ತು; ಆದರೆ, ತಪ್ಪಿಸಿಕೊಳ್ಳುವಂತಿರಲಿಲ್ಲ.” ಎಂದು.

ತಪ್ಪು ಮಾಡುವಾಗ ವಿವೇಚನೆ ಬೇಡವೇ? ಹೋಗಲಿ ತಪ್ಪು ಸಣ್ಣಮಟ್ಟದಲ್ಲಿದ್ದಾಗಲೇ ಎಚ್ಚೆತ್ತುಕೊಂಡು ಪ್ರಾಯಶ್ಚಿತ್ತ ಮಾಡಿಕೊಂಡು ತಿದ್ದಿಕೊಂಡಿದ್ದರೆ ರಾಮಲಿಂಗರು ಬಚಾವಾಗುತ್ತಿದ್ದರು. ಸೂಟು ಬೂಟಿನಲ್ಲಿ ನಿತ್ಯವೂ ವೈಭೋಗದಲ್ಲಿ ಮೆರೆಯುತ್ತಿದ್ದ ಅವರಿಗೆ ಅದಕ್ಕೆಲ್ಲ ಸಮಯವೆಲ್ಲಿತ್ತು?

ಈಗ ರಾಂಗ್ ವೇಷದ ಕತೆಯೂ ಭಿನ್ನವಾಗಿಲ್ಲ. ಇಂದಲ್ಲ ನಾಳೆ “ಆ ಒಂದು .. ಅ ಎರಡು…” ಎಣಿಸೋದು ಇದ್ದೇ ಇದೆಯೆಂಬುದು ಅದಕ್ಕೆ ಖಾತ್ರಿಯಾಗಿದೆ. ಆದರೂ ಹೋಗುವಷ್ಟು ದಿನ ಹೋಗಲಿ ಎಂದು ಮುಂದೂಡುತ್ತಿದೆ. ಯಾವಾಗ ಅದು ಬೋನನ್ನು ಸೇರುತ್ತೋ ಅಂದಿಗೆ ಗಾಂಗ್-ವೇಹ್ ವರ ಕೀಚಕ ವಧೆ ಆದಂತಾಗುತ್ತದೆ; “ಇಷ್ಟುದಿನ ಕತೆಯಲ್ಲಿ ನನ್ನನ್ನು ಕೆಟ್ಟದಾಗಿ ಚಿತ್ರಿಸುತ್ತ ಸುಭಗನಂತಿದ್ದೆಯಲ್ಲ, ಹೇಗಾಯ್ತೀಗ?” ಎಂದು ರಾವಣ ಬೃಹದಾಕಾರವಾಗಿ ಗಹಗಹಿಸಿ ಸ್ಟೆಪ್ಸ್ ನಗೆ ನಗುತ್ತಾನೆ.

Thumari Ramachandra

source: https://www.facebook.com/groups/1499395003680065/permalink/1641624816123749/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s