ಕಚೆಹರುಕನ ಚಾತುರ್ಮಾಸ್ಯ

ಕಚೆಹರುಕನ ಚಾತುರ್ಮಾಸ್ಯ
__________________

“ಹ ಕಾರೋ ಹಳ್ಳಿ ವಾಸಂ ಚ
ವಿ ಕಾರೋ ವೀಳ್ಯ ಭಕ್ಷಣಂ
ಕ ಕಾರೋ ಕತ್ತಿ-ಕಂಬ್ಳಿಶ್ಚ
ಇತ್ಯೇತಿ ………..ಲಕ್ಷಣಂ

ಮಂತ್ರಮೂಲೇ ಮಾವಿನಕಾಯಿ
ತಂತ್ರಮೂಲೇ ಅಥರ್ವಣಃ|
ಧ್ಯಾನಮೂಲೇ ಪಾನಮೂಲಂ
ಸರ್ವಮೂಲೇ ಮಣ್ಣಂಗಟ್ಟಿಃ||
.
.
ಬರೇ ಕಾಮ
.
.
ನಮ್ಮ ಕಥೆಯನ್ನು ನಾವೇ ಹೇಳಿಕೊಳ್ಳುವಷ್ಟು ಪುಣ್ಯದ ಕೆಲಸ ಇನ್ನೊಂದಿಲ್ಲ. ಯಾಕೆಂದ್ರೆ…..ಯಾಕೆಂದ್ರೆ…..ಯಾಕೆಂದ್ರೆ ನಮ್ಮ ’ಸನ್ಯಾಸ’ ಜೀವನದ ನಿಜವಾದ ಹಕೀಕತ್ತು ನಮಗೆ ಬಿಟ್ಟರೆ ನಮ್ಮ ಬಾವಯ್ಯನಿಗೆ ಮಾತ್ರ ಗೊತ್ತು. ಬಾವಯ್ಯ ಹೇಳುವುದಿಲ್ಲ ಹೀಗಾಗಿ ನಾವಾದರೂ ಅಲ್ಪ ಸ್ವಲ್ಪವನ್ನು ಹೇಳಬೇಕಲ್ಲ?

ಮೇಲಿನ ಮೊದಲ ’ಶ್ಲೋಕ’ವನ್ನು ಕೆಲವರು ಹೇಳಿಕೊಳ್ಳುವಾಗ ಯಾಕೆ ಹಾಗೆ ಹೇಳುತ್ತಿದ್ದರು ಎಂದು ಯೋಚಿಸುತ್ತಿದ್ದೆವು ನಾವು….ಹೌದು ಯೋಚಿಸುತ್ತಿದ್ದೆವು ನಾವು. ನಮ್ಮ ಸಮಾಜಕ್ಕೆ ಯಾಕೆ ಅವರೆಲ್ಲ ಹೀಗೆ ಹೇಳಬೇಕು ಎಂದು ನಮಗೆ ಪ್ರಶ್ನೆ ಉದ್ಭವವಾಗಿತ್ತು. ಆಗಲೇ ನಾವು ನಿರ್ಧರಿಸಿದ್ದು-ಶ್ರಾದ್ಧದ ಭಟ್ಟನಾಗಿ ಊರೂರು ಅಲೆದರೆ ಎಲ್ಲೋ ಅಪರೂಪಕ್ಕೆ ನಮ್ಮ ಚಿಕ್ಕಪ್ಪ ಉರುಳು ಭಟ್ಟ ಬಾಚಿದಂತೆ ಯಾರಾದರೂ ಎಡ ಮುದುಕೀರು ಸಿಕ್ಕಾರು, ಮೇಲಾಗಿ ದುಡ್ಡು-ಕಾಸು ಅಷ್ಟಕ್ಕಷ್ಟೆ. ಹೀಗಾಗಿ ಅಂದು ನಾವು ಮೇಲಿನ ’ಶ್ಲೋಕದಲ್ಲೇ ಅದಕ್ಕೆ ಪರಿಹಾರ ಕಂಡುಕೊಂಡೆವು.

ದಶಕಗಳ ಹಿಂದೆ ಸಮಾಜ ದೀನಾವಸ್ಥೆಯಲ್ಲಿತ್ತು. ಕುಗ್ರಾಮಗಳಲ್ಲಿ ವಾಸಿಸುತ್ತಿದ್ದ ನಮ್ಮ ಜನ ಜೀವನದಲ್ಲಿ ಬಹಳ ಕಷ್ಟನಷ್ಟಗಳನ್ನು ಎದುರಿಸುತ್ತಿದ್ದರು. ಸ್ವಾತಂತ್ರ್ಯ ಬಂದ ಮರುದಿನದಿಂದಲೇ ರಾಜಾಶ್ರಯ ಎಂಬುದೂ ತಪ್ಪಿಹೋಗಿತ್ತು. [ಅದು ಕೆಲವರಿಗೇ ಇತ್ತು ಅನ್ನಿ] ಸಂಸ್ಕೃತ ಪಾಠಶಾಲೆ ಓದಿಕೊಂಡರೆ ಇಡೀ ಕುಟುಂಬದ ನಿರ್ವಹಣೆ ಕಷ್ಟವೆಂದರಿತ ನಮ್ಮ ಜನ ಕೃಷಿಗೂ ಇಳಿದರು.

ಖುದ್ದಾಗಿ ಕೃಷಿಗಿಳಿದ ಬ್ರಾಹ್ಮಣ ಪಂಗಡಗಳು ದೇಶದಲ್ಲೇ ಎರಡು ಮಾತ್ರ! ಅವುಗಳಲ್ಲಿ ನಮ್ಮದೂ ಒಂದು. ಇದಕ್ಕೆ ಕಾರಣವೂ ಇತ್ತು. ಕೃಷಿ ಕೆಲಸಗಳಿಗೆ ಆಳು-ಕಾಳುಗಳನ್ನು ಕರೆಸಿದರೆ ಕೂಲಿ ಕೊಡುವ ತಾಕತ್ತೂ ಸಹ ಇರಲಿಲ್ಲ. ಬೆರ್ಳೆಣಿಕೆಯ ಜನರಿಗಿದ್ದ ಉಂಬಳಿಯ ಜಮೀನುಗಳು ಎಲ್ಲರಿಗೂ ಸಾಲುತ್ತಿರಲಿಲ್ಲ, ಹೊಸದಾಗಿ ಜಮೀನು ಮಾಡಬೇಕಿತ್ತು. ಜನ ದೇವರ ಪೂಜೆ ಮತ್ತು ನಿತ್ಯಾನುಷ್ಠಾನಗಳ ಜೊತೆಗೆ ಜಮೀನು ಮಾಡುವುದಕ್ಕೂ ಮುಂದಾದರು.

ಕಾಡುಗಳಂಚಿಗೆ ಹೋದರು, ಗುಡ್ಡಗಳನ್ನು ಕಡಿದರು, ನೆಲ ಸಮತಟ್ಟು ಮಾಡಿ ಉತ್ತು ಬಿತ್ತು ಕಷ್ಟದಲ್ಲೇ ಬೆಳೆತೆಗೆದರು. ನಂತರ ತೋಟ ಬೆಳೆಸಿದರು. ಜೀವನಾರಂಭ ಪುರಗಳಲ್ಲಿ ವಸತಿಗೆ ಆಶ್ರಮಗಳಂತಹ ಗುಡಿಸಲುಗಳು ಅಥವಾ ಸೋಗೆಯ ಮನೆಗಳನ್ನು ನಿರ್ಮಿಸಿಕೊಂಡರು. ಮಣ್ಣಿನ ನೆಲ ಮತ್ತು ಮಣ್ಣಿನದೇ ಗೋಡೆ, ಅದಕ್ಕೆ ಸಗಣಿ ಸಾರಿಸಿ ಒಪ್ಪ ಮಾಡುತ್ತಿದ್ದರು.

ಕೃಷಿ ಕೆಲಸದಲ್ಲಿ ಬೇಸತ್ತ ದಿನಗಳಲ್ಲಿ ದೇವರಿಗೆ ನೈವೇದ್ಯ ಅರ್ಪಿಸಿದ ತಾಂಬೂಲವನ್ನು ಮೆಲ್ಲುವ ಅಭ್ಯಾಸವಾಯ್ತು; ಈ ಆಭ್ಯಾಸದ ವಿಷಯ ತಲೆಯಿಂದ ತಲೆಗೆ, ಕಿವಿಯಿಂದ ಕಿವಿಗೆ ಹೊಸತನವೆಂಬಂತೆ ಪ್ರಸಾರಗೊಂಡು, ಅಭ್ಯಾಸವಿದ್ದಿದ್ದು ಚಟವಾಯಿತು. ಕಾನನದ ಕತ್ತಲ ವಾತಾವರಣದಲ್ಲಿ ರಾತ್ರಿ ಹೊತ್ತಿನಲ್ಲಿ ಜೀರುಂಡೆಗಳ ಜೀಗುಟ್ಟುವಿಕೆ, ಕಾಡುಮೃಗಗಳ ಕೂಗು, ಮಳೆಗಾಲದಲ್ಲಿ ಆರು ತಿಂಗಳು ಬಿಟ್ಟೂ ಬಿಡದೆ ಸುರಿವ ಮಳೆ, ಮನೆಯೊಳಗೂ ಹೊರಗೂ ಹಾವು,ಹರಣೆ, ಹಲ್ಲಿಗಳು ಇವೆಲ್ಲದರ ನಡುವೆಯೇ ಜೀವನ ಸಾಗುತ್ತಿತ್ತು.

ಆಯುರ್ವೇದೀಯ ಔಷಧಗಳ ಮಾಹಿತಿ ಪಾರಂಪರಿಕವಾಗಿ ಕೆಲವು ಕುಟುಂಬಗಳ ಸ್ವತ್ತಿನಂತಾಗಿ ಔಷಧದ ಮಾಹಿತಿ ಇಲ್ಲದೆಯೇ ಅದೆಷ್ಟೋ ರೋಗಿಗಳು ಅಸುನೀಗಿದರು. ನೈಸರ್ಗಿಕ ವಿಕೋಪ, ಅಪಘಾತ, ಹಾವು ಕಡಿತ, ಮೈಲಿ, ಗಾಂಡಗುದಗೆ ಜ್ವರ[ಟೈಫಾಯ್ಡ್]ಮೊದಲಾದ ತೊಂದರೆಗಳಿಂದ ಮನೆಗಳ ಜನಸಂಖ್ಯೆ ಕೆಲವೊಮ್ಮೆ ಎಷ್ಟಿದ್ದರೂ ಕ್ಷೀಣಿಸಿಬಿಡುತ್ತಿತ್ತು. ಹಾಗಾಗಿಯೇ ಯಾರೋ ಎಂದೋ ಸುಮಂಗಲಿಯರಿಗೆ ಆಶೀರ್ವದಿಸುವಾಗ “ಅಷ್ಟಪುತ್ರವತೀ ಭವ, ಐಶ್ವರ್ಯವತೀ ಭವ” ಎಂದು ಹರಸುತ್ತಿದ್ದರು; ಅದರರ್ಥ ಎಂಟು ಗಂಡುಮಕ್ಕಳೇ ಇರಬೇಕೆಂಬ ಉದ್ದೇಶವಲ್ಲ, ಗಂಡುಮಕ್ಕಳು ತಮ್ಮ ಸಹಜ ದೇಹದಾರ್ಢ್ಯತೆಯಿಂದ ಸಮಸ್ಯೆಗಳನ್ನು ಎದುರಿಸಿ ಗೆಲ್ಲಬಲ್ಲರು ಎಂಬರ್ಥದಲ್ಲಿ ಮತ್ತು ಎಂಟುಜನರಲ್ಲಿ ಕೆಲವರಾದರೂ ಬದುಕಿ, ಸಂಸಾರದ ನೊಗವನ್ನು ಎಳೆಯಲು ಸಿದ್ಧವಾಗಬಹುದು ಎಂಬ ನಿರೀಕ್ಷೆಯಿರುತ್ತಿತ್ತು.

ಅಂತಹ ಕಾಲದಲ್ಲೇ ನಮ್ಮಂತಹ ಕಚ್ಚೆಹರುಕರು ಅಲ್ಲಲ್ಲಿ ತಯಾರಾಗುತ್ತಿದ್ದರಾದರೂ ಹೆಂಗಸರು ತೀರಾ ಹೊರಬರದ ಕಾರಣ ಏಕಾಂತಕ್ಕೆಲ್ಲ ಆಸ್ಪದ ದೊರೆಯುತ್ತಿರಲಿಲ್ಲ. ಮಹಿಳೆಯರನ್ನು ಮನೆಗಳಲ್ಲಿ ಒಂಟಿಯಾಗಿ ಬಿಟ್ಟುಹೋಗುವ ಪರಿಪಾಟ ಇದ್ದಿರಲಿಲ್ಲವಾದ್ದರಿಂದ ನಮ್ಮಂತವರು ಮನೆಗಳಿಗೆ ನುಗ್ಗುವುದೂ ಸಹ ಕಷ್ಟವಾಗುತ್ತಿತ್ತು. ಹೀಗಾಗಿ ಜೊಲ್ಲು ಸುರಿಸಿಕೊಂಡೇ ಬದುಕು ಕಳೆದ ಕಚ್ಚೆಹರುಕರು ಕೆಲವರಿದ್ದರು. ಸಮಾಜದಲ್ಲಿ ಅಪವಾದವೋ ಎಂಬಂತೆ ಅಪರೂಪಕ್ಕೆ ಅಲ್ಲಲ್ಲಿ ಗಂಡನಿಂದ ಸಿಗದ ಏನನ್ನೋ ಹುಡುಕಲು ಜಾರುವ ಹೆಂಗಸರೂ ಇದ್ದರು. ನಮ್ಮ ಪೊರ್ವಜರಿಗೆ ಅಂತವರೆಲ್ಲ ಪ್ರಿಯವಾಗಿದ್ದರು.

ಬೆಳಗಾದರೆ ತಿಂಡಿ ತಿಂದು [ಕುಟ್ಟಿ ತಯಾರಿಸಿದ ಅವಲಕ್ಕಿ, ಬಾಳೆಕಾಯಿ ಪಲ್ಯ ಇಂಥದ್ದು ತಿಂಡಿ. ದೋಸೆ ಎಂಬುದು ಹಬ್ಬದ ವಿಶೇಷ ತಿನಿಸು!]ಕೃಷಿ ಕೆಲಸಕ್ಕೆ ಹೋದರೆ, ಸೂರ್ಯ ಪಶ್ಚಿಮಕ್ಕೆ ವಾಲಿದ ನಂತರ ಅಪರಾಹ್ನವಾಯ್ತೆಂದು ಮನೆ ಸೇರಿ ಆಹಾರ ಸ್ವೀಕರಿಸಿ, ಸ್ವಲ್ಪ ಹೊತ್ತಿದ್ದು ಮತ್ತೆ ಕೆಲಸಕ್ಕೆ ತೊಡಗುತ್ತಿದ್ದರು. ಮಳೆಯಿಂದ ರಕ್ಷಣೆಗೆ ಕಂಬಳಿ ಕೊಪ್ಪೆ, ಕೃಷಿ ಕೆಲಸಕ್ಕೆ ಕೈಯಲ್ಲಿ ಕತ್ತಿ, ಗೆಲುವಿಗಾಗಿ ಬಾಯ್ತುಂಬ ತಾಂಬೂಲ, ಉದ್ದನೆಯ ಲಂಗೋಟಿ ಇವಿಷ್ಟೇ ಸರ್ವಾಭರಣಗಳು.

ಅಪರೂಪಕ್ಕೊಮ್ಮೆ ತಮ್ಮಲ್ಲಿ ಬೆಳೆಯದ, ಜೀವನಾವಶ್ಯಕಗಳನ್ನು ತರಲು ಕಸೆ ಅಂಗಿ, ಪಾಣಿ ಪಂಚೆ ತೊಟ್ಟು ಪಟ್ಟಣಗಳಿಗೆ ಹೋಗುತ್ತಿದ್ದರು. ಚಟವಾದ ತಾಂಬೂಲಕ್ಕೆ ವಿರಾಮವಿರಲಿಲ್ಲ; ಹಲ್ಲುನೋವನ್ನೂ ಹಿಡಿತದಲ್ಲಿಡುತ್ತದೆ ಎಂದು ನಂಬಿದ್ದರು. ಪಟ್ಟಣಗಳಲ್ಲಿ ಯಾವ್ಯಾವುದೋ ಜನಾಂಗಗಳವರು ತಮ್ಮ ವಸಾಹತುಗಳನ್ನು ಹೂಡಿಕೊಂಡು ವ್ಯಾಪಾರ-ಸಾಪಾರ ನಡೆಸುತ್ತಿದ್ದರು. ಬ್ರಾಹ್ಮಣರು ವ್ಯಾಪಾರಿಗಳಾಗುವಂತಿರಲಿಲ್ಲ ಮತ್ತು ಯಾರ ಬಗೆಗೂ ಯಾವ ವಿಧದಲ್ಲೂ ಕೆಟ್ಟದ್ದನ್ನು ಯೋಚಿಸುವಂತಿರಲಿಲ್ಲ; ವಂಚನೆ,ಮೋಸ,ಧೂರ್ತತನ, ಲೋಭ ಇವೆಲ್ಲ ನಮ್ಮವರಲ್ಲಿ ಇರಲಿಲ್ಲ.

ತಿನ್ನೋದು ಅಪ್ಪಟ ಸಾತ್ವಿಕ ಆಹಾರ; ನಮ್ಮ ಹಾಗೆ ಈರುಳ್ಳಿ ಉಪ್ಪಿಟ್ಟನ್ನು ತಿನ್ನೋದಿರಲಿ, ಈರುಳ್ಳಿ ಹೇಗಿರುತ್ತದೆಂದು ನೋಡಿದವರೂ ಅಲ್ಲ! ವ್ಯಾಪಾರಿಗಳು ಹೇಳಿದ್ದನ್ನು ಇವರು ಏಕಾಏಕಿ ನಂಬುತ್ತಿದ್ದರು; ಇಂದು ನಮ್ಮನ್ನು ನಮ್ಮ ಭಕ್ತಕುರಿಗಳು ನಂಬಿಕೊಂಡಂತೆ. ವ್ಯಾಪಾರಿಗಳಿಗೆ ನಮ್ಮವರು ಬಂದರೆಂದರೆ ಸುಗ್ಗಿ. ಬಡ ಭಟ್ಟ, ಹೆಗಡೆ ಎಷ್ಟನ್ನು ದುಡಿದಾರು? ಎಷ್ಟನ್ನು ವ್ಯಯಿಸಿಯಾರು?

ಸಾಮಾಜಿಕ ನಡವಳಿಕೆಗಳು ಅಭಿವೃದ್ಧಿಪಥದಲ್ಲಿ ನಡೆಯಲಾರಂಭಿಸಿದಾಗ ಮದುವೆ, ಮುಂಜಿ ಕಾರ್ಯಗಳ ಸಂದರ್ಭದಲ್ಲಿ ಜವುಳಿ ತೆಗೆಯುವುದು, ಕಂಚು-ತಾಮ್ರ ಖರೀದಿ ಇತ್ಯಾದಿಗಳು ನಡೆಯುತ್ತಿದ್ದವು. ಅವುಗಳಿಗೆ ವ್ಯಾಪಾರಿಗಳು ಹಾಕಿದ್ದೇ ದರ, ಬರೆದದ್ದೇ ಪಟ್ಟಿ. ಉದ್ರಿ ಪಟ್ಟಿ ಬರೆಯುತ್ತಿದ್ದರು-ಯಾಕೆಂದರೆ ಭಟ್ಟ, ಹೆಗಡೇರ ಹತ್ತಿರ ಒಂದೇ ಸಲ ಕೊಡಲಿಕ್ಕೆ ಸಾಲುತ್ತಿರಲಿಲ್ಲ. ಉದ್ರಿ ಪಟ್ಟಿಯಲ್ಲಿ ಎರಡಿದ್ದಿದ್ದು ಮೂರಾದರೂ ನಾಲ್ಕಾದರೂ ಮರುಮಾತನಾಡದೇ ಪಾವತಿಸುವ ಮುಗ್ಧರು. ಹೀಗಾಗಿಯೇ ವ್ಯಾಪಾರಿಗಳು ಬೆಳೆದರು, ನಮ್ಮವರು ಉದ್ರಿ ಪಟ್ಟಿಯಲ್ಲಿ ಬೆಳೆದರು!

ಪಟ್ಟಣದ ಸಾಹುಕಾರನಲ್ಲಿ ಸಾಲ ಮಾಡಿದ್ದರೂ ಊರಲ್ಲಿ ಎಲ್ಲರೆದುದು ಹಾಗೆ ತೋರಿಸಿಕೊಳ್ಳದ ನಡಾವಳಿಗೆ ಕೆಲವರು ಮೊದಲಿಟ್ಟರು. ಹೀಗಾಗಿ ತಲೆಗಿಂತ ಮುಂಡಾಸು ದೊಡ್ಡದಾಗತೊಡಗಿತು. ಮುಂಡಾಸು ದೊಡ್ಡ ಇದ್ದಷ್ಟೂ ಅವರು ದೊಡ್ಡವರೆನಿಸಿದರು, ’ಶೆಟ್ಟಿ ಸಾಲ ಸತ್ತಮೇಲಷ್ಟೆ ಗೊತ್ತು’ ಅನ್ನೋ ಹಾಗೆ ಅವರ ಮುಂಡಾಸಿನ ಒಳಗಿನ ತಲೆನೋವನ್ನು ಯಾರೂ ಅರಿಯಲಿಲ್ಲ.

ಕಾಲ ಬದಲಾಯಿತು. ಕುಗ್ರಾಮಗಳು ಅಭಿವೃದ್ಧಿಗೆ ಬಂದವು. ಆಧುನೀಕರಣ ಕಾಲಿಟ್ಟಿತು. ನಮ್ಮವರಲ್ಲೂ ಬಹುತೇಕರು ಸಾಲ-ಸೋಲವನ್ನು ಕಡಿಮೆ ಮಾಡಿಕೊಂಡರು, ಕೆಲವರು ಹೆಚ್ಚಿನ ಮಟ್ಟದಲ್ಲಿ ಜಮೀನನ್ನು ಮಾಡಿ ಶ್ರೀಮಂತರೆನಿಸಿದರು. ಮಠಗಳಲ್ಲಿ ಅಂದು ಈಗ ನಾವು ನಡೆಸುತ್ತಿರುವ ರೀತಿಯ ಯಾವುದೇ ವ್ಯವಹಾರಗಳೂ ಇರಲಿಲ್ಲ. ಮಠ ಮತ್ತು ಭಕ್ತರಲ್ಲಿ ಅಂತರವಿರುತ್ತಿತ್ತು. ಸಮಾಜದಲ್ಲಿ ಶ್ರೀಮಂತಿಕೆಯಿಂದ ಮುಖ್ಯಸ್ಥರು ಎನಿಸಿದವರು ಉಪಾಧಿವಂತರಾಗಿ, ಮಠದ ನಿರ್ಧಾರಗಳು ತಮಗೆ ಬೇಕಾದಂತೆ ಇರುವಂತೆ ನೋಡಿಕೊಳ್ಳುತ್ತಿದ್ದರು.

ನಾಯಕತ್ವದ ಗುಣ ನಮ್ಮವರಲ್ಲಿ ಅನಿವಾರ್ಯವಾಗಿ ಇದ್ದಂತೆ ತೋರಿಸಿಕೊಳ್ಳುವ ಗುಣವೂ ಬೆಳೆಯುತ್ತಲೇ ಬಂದಿತು; ತಮ್ಮ ಮಾತೇ ನಡೆಯಿತು, ತಮಗೆ ಮಾತ್ರ ಅಂಥಾದ್ದೊಂದು ಅರ್ಹತೆಯಿದೆ ಎಂಬಂತಹ ವಾತಾವರಣವೂ ಇತ್ತು. ಅಂತಹ ಕಾಲದಲ್ಲೇ ನಮ್ಮ ಹಾವಾಡಿಗ ಸಂಸ್ಥಾನಕ್ಕೆ ಉತ್ತರಾಧಿಕಾರಿಯ ಆಯ್ಕೆ ನಡೆದಿತ್ತು.ನೀವೇ ಇಂದ್ರ ನೀವೇ ಚಂದ್ರ ನಿಮ್ಮಿಂದ ಇದೊಂದು ಕೆಲಸ ಆಗಬೇಕೆಂದು ನಾವು ಕೆಲವರ ಕೈಕಾಲು ಹಿಡಿದೆವು. ನಮ್ಮ ಜನ್ಮಜಾತ ಸ್ವಭಾವ, ಜಾತಕ ತಿದ್ದಿದ್ದು, ಹುಡುಗೀರ ಹಿಂದೆ ಬೀಳುತ್ತಿದ್ದದ್ದು ಯಾವುದೂ ಸಹ ಅವರಿಗೆ ಗೊತ್ತಿರಲಿಲ್ಲ. ನಮ್ಮಜನ ಎಷ್ಟು ಬುದ್ಧಿವಂತರೋ ಅಷ್ಟೇ ಬೋಳೆ ಸ್ವಭಾವದವರು ಅನ್ನೋದೇ ಇದಕ್ಕೆ. “ನೀವೊಂದಿದ್ರೆ ಎನ್ ಕೆಲಸ ಆದಂಗೇಯ ನೋಡಿ” ಎಂಬ ವರ್ಡ್ ಆಫ್ ಮೌತ್ ಸರ್ಟಿಫಿಕೇಟ್ ಗಾಗಿ ತಾವು ಹಿಡಿದ ಕೆಲಸವನ್ನು ಸಾಧಿಸಲು ಪ್ರಯತ್ನಿಸುತ್ತಿದ್ದರು.

ಯಕ್ಷಗಾನವೊಂದೇ ದೊಡ್ಡಮಟ್ಟದ ಮನರಂಜನೆಯ ಕಾರ್ಯಕ್ರಮವಾದದ್ದಕ್ಕಿರಬಹುದು, ಅದರಲ್ಲಿನ ಕತೆಗಳಲ್ಲಿ ಬರುವ ಚಕ್ರವರ್ತಿಗಳಿಗೆ ತಮ್ಮನ್ನು ಹೋಲಿಸಿಕೊಂಡು ಸಾಮ್ರಾಜ್ಯ ವಿಸ್ತರಣೆಯಲ್ಲಿ ತೊಡಗುವಂತೆ ತಮ್ಮ ಕೀರ್ತಿ ವಿಸ್ತರಣೆಯಲ್ಲಿ ನಮ್ಮವರಲ್ಲಿನ ಶ್ರೀಮಂತರು ಬಹಳ ಆಸಕ್ತರು. “ಓ ಹೆಗಡೇರ ಮನೆ, ಅವರ ಮನೆಯಲ್ಲಿ ಕೊಪ್ಪರಿಗೆಯಲ್ಲೇ ಚಿನ್ನ ಇಟ್ಟಿದ್ದಾರಂತೆ, ಕಳ್ಳರು ಬಂದರೆ ಸಿಗಬಾರದೆಂದು ನೆಲಮಾಳಿಗೆಯಲ್ಲಿ ಹೂತಿಟ್ಟಿದ್ದಾರಂತೆ. ಓಹೋ ಇವರ ಮನೆ ಅಯ್ಯೋ ಅವರೂ ಅಷ್ಟೆ ಲಕ್ಷ್ಮಿ ಕಾಲುಮುರ್ಕಂಡು ಬಿದ್ದಿದಾಳ ಮಾರಾಯ ಅವರ ಮನೇಲಿ” ಎಂಬೆಲ್ಲ ಮಾತುಗಳು ಆಗ ಕೇಳಿಬರುತ್ತಿದ್ದವು.

ಅಂತಹ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವಂತಹ ಕಂತ್ರಿ ಬುದ್ಧಿ ನಮಗಿದ್ದುದರಿಂದ ಯಾರನ್ನೆಲ್ಲ ಹಿಡಿದರೆ ಕೆಲಸವಾಗುವುದೋ ಅವರೆಲ್ಲರ ಬೆನ್ನುಹತ್ತಿದೆವು. ಒತ್ತಾಯಕ್ಕೆ ಹಿಂದಿನವರು ಅಸ್ತು ಎಂದರು, ಮೊಹರು ಬಿದ್ದ ಮರುದಿನವೇ ನಾವು ಸೂತ್ರದಲ್ಲಿರುವ ಎಳೆಗಳನ್ನು ಲೆಕ್ಕಹಾಕಲಿಕ್ಕೆ ಸುರುಮಾಡಿದೆವು. ಯಾವುದನ್ನು ಬಿಗಿಯಬೇಕು, ಯಾವುದನ್ನು ಸಡಿಲಿಸಬೇಕು ಎಂಬುದನ್ನು ಪ್ರಯೋಗಕ್ಕೆ ಹಚ್ಚಿದೆವು. ಅಷ್ಟರಲ್ಲಿ ಸೀಟಿಗಾಗಿ ನಮ್ಮ ಜೊತೆ ಪೈಪೋಟಿ ನಡೆಸುತ್ತಿದ್ದ ಮನುಷ್ಯನನ್ನು ವಿಶ್ವಾಸಕ್ಕೆ ತೆಗೆದುಕೊಂಡೆವು, ಅವನಿಗೆ ತಂಗಿಯನ್ನು ಕೊಟ್ಟು ಬಾವಯ್ಯನನ್ನಾಗಿ ಮಾಡಿಕೊಂಡು, ವಾಮಮಾರ್ಗದಿಂದ ಅವನನ್ನು ಮಠದೊಳಕ್ಕೆ ಬಿಟ್ಟುಕೊಂಡವರು ಇಲ್ಲಿಯವರೆಗೂ ಹಾಗೆಯೇ ಇರಿಸಿಕೊಂಡಿದ್ದೇವೆ.

ಮುಂಡಾಸು ಸುತ್ತಿಕೊಂಡು ನಮ್ಮನ್ನು ಆಯ್ಕೆಮಾಡಿದವರನ್ನೆಲ್ಲ ಮಠದ ಅಡಳಿತಾತ್ಮಕ ವ್ಯವಹಾರದಿಂದ ಹೊರಗಿಟ್ಟೆವು ಮತ್ತು ಅಂತವರೆಂದೂ ಬಾರದಂತೆ ನೋಡಿಕೊಂಡೆವು. ಯಾರಿಗೆ ಮೂರು ನಾಮ ತೀಡಿದರೆ ಅಳಿಸಿಕೊಳ್ಳುವುದಿಲ್ಲವೋ, ಯಾರು ಎರಡೂ ಕಿವಿಗಳ ಮೇಲೆ ಹೂವಿಟ್ಟುಕೊಳ್ಳಲು ಸಿದ್ಧವೋ ಅಂತವರನ್ನೇ ಮಠದ ಆಡಳಿತಾತ್ಮಕ ವ್ಯವಹಾರಕ್ಕೆ ಹಚ್ಚಿದೆವು; ಹೆಸರು ಅವರದ್ದು ಬಸಿದು ನಮ್ಮದು ಮಾಡುವ ಪರಿಪಾಟ ಆರಂಭವಾಗಿದ್ದೇ ಆಲ್ಲಿಂದ. ನಂತರ ಅಕ್ಷರಶಃ ಬಸಿರುಮಾಡುವ ವ್ಯವಹಾರವನ್ನೇ ಆರಂಭಿಸಿದೆವು; ಹೆಸರಿಗೆ ಬೇರೆಯವರು ಇರುವಂತೆ ನೋಡಿಕೊಂಡೆವು.

ನಮ್ಮ ಜನರ ಮಕ್ಕಳು ಬೆಳೆದು, ಲೌಕಿಕ ವಿದ್ಯೆಯನ್ನು ಪಡೆದು, ದೇಶವಿದೇಶಗಳ ಮಹಾನಗರಗಳನ್ನು ಸೇರಿದಮೇಲೆ ಕಾಂಚಾಣವು ಕುಣಿಯತೊಡಗಿತು. ಅನುವಂಶೀಯವಾಗಿ ಮುಂಡಾಸನ್ನು ದೊಡ್ಡಮಾಡಿಕೊಳ್ಳುವ ಸ್ವಭಾವ ನಮ್ಮವರಲ್ಲಿ ಇದ್ದುದನ್ನು ಗಮನಿಸಿದ್ದೆವಲ್ಲ? ಅದನ್ನೇ ದಾಳವಾಗಿಸಿಕೊಂಡು ಹಲವು ಯೋಜನೆಗಳನ್ನು ರೂಪಿಸಿದೆವು. ಒಬ್ಬ ಲಕ್ಷ ಕೊಟ್ಟರೆ ಇನೊಬ್ಬನಿಗೆ ಅದನ್ನು ಹೇಳಿದಾಗ ಎರಡುಲಕ್ಷ ಕೊಟ್ಟ, ಮೂರನೆಯವ ಮೂರು, ನಾಲ್ಕನೆಯ ತಾನೇನು ಕಮ್ಮಿಯೇ ಎನ್ನುತ್ತ ನಾಲ್ಕು ಲಕ್ಷ …ಹೀಗೇ ದೇಣಿಗೆಯ ವಹಿವಾಟು ಹೆಚ್ಚಿತು. ಯಾವುದಕ್ಕೂ ಲೆಕ್ಕಪತ್ರವಿಲ್ಲ.

ದೇವತೆಗಳಿಗೆ ಅರ್ಪಿಸುವ ಹವಿಸ್ಸನ್ನು ಅಗ್ನಿಗೇ ಹಾಕಬೇಕು ಎನ್ನುವಂತೆ ಕೊಡುವವರನ್ನು ಹಿಡಿದು ಕಾಡಿ,ಬೇಡಿ ಪಡೆದು ಬರಲು ಕೆಲವರನ್ನು ಬೆಳೆಸಿದೆವು. ಬರಿಗೈಲಿ ಹಾಗೆ ಬಂದು ಇಲ್ಲಿ ಬೆಳೆದವರು ಇಂದು ಬಂಗಲೆಗಳನ್ನು ಕಟ್ಟಿಕೊಂಡು, ಸೈಟುಗಳನ್ನು ಮಾಡಿಕೊಂಡು, ಕಾರಿನಲ್ಲಿ ಓಡಾಡುತ್ತ ಹಾಯಾಗಿದ್ದಾರೆ. ನಮ್ಮ ಸುತ್ತ ಕುಣಿಯುತ್ತಿರುವ ಜೈಕಾರದ ಬಳಗದಲ್ಲಿ ಇರುವವರೆಲ್ಲ ಹೀಗೇ ನಮ್ಮಿಂದ ಬೆಳೆದವರೇ ಆಗಿದ್ದಾರೆ; ಯಾರದೋ ದುಡ್ಡು ಸ್ವಾಮೀ ಜಾತ್ರೆ!

ಯಾವ ಅರ್ಹತೆಯೂ ಇಲ್ಲದ ನಮಗೆ ಇರುವ ಅರ್ಹತೆಯೆಂದರೆ ನಾವೊಬ್ಬ ಸಮರ್ಥ ರೌಡಿಯಾಗಲು ತಕ್ಕುದಾದ ಅರ್ಹತೆಗಳೆಲ್ಲ ಇರುವುದು ಧುತ್ತೆಂದು ಕಾಣುತ್ತಿದ್ದರೂ ಇಂದಿಗೂ ಸಹ ನಮ್ಮ ಸಮಾಜ ಏನೂ ಹೇಳುತ್ತಿಲ್ಲ ಏಕೆಂದರೆ ಮತ್ತದೇ ’ಮುಂಡಾಸಿನ ಸಮಸ್ಯೆ’, ನಾವು ಹೇಗಾದರೂ ಇರಲಿ, ಸಾರ್ವಜನಿಕವಾಗಿ ನಮ್ಮ ಸೀಟಿನ ಘನತೆಗೆ ತೊಂದರೆಯಾಗಬಾರದು ಎಂಬುದು ಅವರ ಅಪೇಕ್ಷೆ. ಮದುವೆಯಾದ ಹೊರತೂ ಹುಚ್ಚುಬಿಡೋದಿಲ್ಲ-ಹುಚ್ಚು ಬಿಟ್ಟ ಹೊರತೂ ಮದುವೆಯಾಗೋದಿಲ್ಲ ಅಂತಾರಲ್ಲ? ಹಾಗೆ, ಸೀಟಿನಿಂದ ನಮನ್ನು ಇಳಿಸಿದ ಹೊರತು ಸೀಟಿಗೆ ಪರಿಶುದ್ಧತೆ ಬರುವುದಿಲ್ಲ; ಸೀಟಿಗೆ ಪರಿಶುದ್ಧತೆ ಬೇಕೆಂದರೆ ನಮ್ಮನ್ನು ಸೀಟಿನಲ್ಲಿಡಲು ಸಾಧ್ಯವಿಲ್ಲ. ಈ ಸಮಸ್ಯೆ ಮುಂಡಾಸಿಗೆ ಅಂಟಿಕೊಂಡು ಇಲ್ಲಿಯವರೆಗೆ ಹೊರಗಿನಿಂದ ನಮಗೆ ಅನುಕೂಲವಾಗಿದೆ; ಒಳಗಿನಿಂದ ಬಹಳ ದೊಡ್ಡಮಟ್ಟದಲ್ಲಿ ಹೊಗೆಯಾಡುತ್ತಿದೆ ಎಂಬುದು ಬೇರೆ ಪ್ರಶ್ನೆ.

ಅಂದು ನಮ್ಮನ್ನು ಈ ಹುದ್ದೆಗೆ ಏರಿಸಿದವರಿಗೆ ಆಡಳಿತಾತ್ಮಕ ವ್ಯವಹಾರಗಳಲ್ಲಿ ಯಾವ ಹಕ್ಕೂ ಇಲ್ಲದ ಕಾರಣ ಅವರ ಮಾತುಗಳಿಂದ ನಮಗೇನೂ ಕಾನೂನುಬದ್ಧವಾಗಿ ತೊಂದರೆಯಾಗೋದಿಲ್ಲ. ಹಿಂದೆ ಭಕ್ತರು ಹಾಕಿದ ಭಿಕ್ಷೆಯನ್ನೆಲ್ಲ ಒಟ್ಟುಮಾಡಿ ಇಂದು ನಮ್ಮ ವಿರುದ್ಧ ಬೀಳುವ ಭಕ್ತರನ್ನು ನಿಗ್ರಹಿಸಲು ಅದನ್ನು ಬಳಸುತ್ತಿರುವುದರಿಂದ ಅನೌಪಚಾರಿಕವಾಗಿ ಅವರ ಹಂಗಿನಲ್ಲೇ ನಾವಿದ್ದರೂ ಕಾನೂನು ಹಾಗೆ ಹೇಳುವುದಿಲ್ಲ. ಈಗ ನಿಜವಾಗಿಯೂ ಹಾದಿಯಲ್ಲಿ ಬಿದ್ದವರೆಂದರೆ ಭಕ್ತಕುರಿಗಳು ಮತ್ತು ನಮ್ಮನ್ನು ಈ ಸ್ಥಾನಕ್ಕೆ ತಂದವರು.

ಈಗ ನಾವು ಆರಂಭದಲ್ಲಿ ಹೇಳಿದ ಮೊದಲ ’ಶ್ಲೋಕ’ವನ್ನು ಅರ್ಥೈಸಿ ನೋಡಿ, ಅರ್ಥವಾದರೆ ನಿಮಗೆ ಮುಂಡಾಸಿನ ಅನುವಂಶೀಯತೆಯಿಲ್ಲ; ಅರ್ಥವಾಗದಿದ್ದರೆ ಮುಂಡಾಸಿನ ಗಾಳಿ ನಿಮಗೂ ಬೀಸಿದೆ ಎಂದರ್ಥ. ಕಚ್ಚೆಹರುಕನ ತಾಉರ್ಮಾಸ್ಯವೆಂದರೆ ಇಂತಹ ದಿವ್ಯ ಚಿಂತನೆಗಳನ್ನು ನಡೆಸುವುದು ಮತ್ತು ಯಾರದರೂ ದಿವ್ಯಳು, ಭವ್ಯಳು ಎನಿಸಿಕೊಳ್ಳಲು ಸಿದ್ಧರಾಗುತ್ತರೋ ಎಂದು ಹುಡುಕುವುದು.

ಬರೇ ಕಾಮ
.
.
ಬರೇ ಕಾಮ”

Thumari Ramachandra

source: https://www.facebook.com/groups/1499395003680065/permalink/1639831192969778/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s