ಯೋಗ ಡೀಕೋಡೆಡ್-ಕಾಮಿ ಈಸ್ ಅನ್ ಫಿಟ್ ಫಾರ್ ಯೋಗ ಆಲ್ ದಿ ವೇ

ಯೋಗ ಡೀಕೋಡೆಡ್-ಕಾಮಿ ಈಸ್ ಅನ್ ಫಿಟ್ ಫಾರ್ ಯೋಗ ಆಲ್ ದಿ ವೇ

ಇವತ್ತಿನ ಚಿತ್ರಕ್ಕೂ ಕತೆಗೂ ಯಾವ ಸಂಬಂಧವೂ ಇಲ್ಲ. ಯಾರೋ ಪುಣ್ಯಾತ್ಮನಿಗೆ ತುಮರಿಯ ಕಾದಂಬರಿ ಓದುವ ಬಯಕೆ. ಕತೆ, ಕವನ, ಕಾದಂಬರಿಗಳನ್ನು ಯಾರಾದರೂ ಬರೆಯಬಹುದು. ಶಾಸ್ತ್ರಗಳನ್ನು ಅವುಗಳ ಮೂಲ ಭಾಷೆಯಿಂದ ಹೀರಿಕೊಂಡು, ಋಷಿವಾಕ್ಯ-ಭಾವನೆಗಳಿಗೆ ಪ್ರಮಾದವೆಸಗದಂತೆ ಬರೆಯುವುದು ಹಿಮಾಲಯದ ತುದಿಗೆ ಹೋಗಿಬರುವಷ್ಟೇ ಕಷ್ಟ. ಕಾದಂಬರಿ ಬಯಸಿದವರು ಚಿತ್ರ ನೋಡಿಕೊಂಡು ತೃಪ್ತರಾಗಿ, ಉಳಿದವರು ಇಂದಿನ ಕತೆಯನ್ನು ಓದಿಕೊಂಡು ಹಸನ್ಮುಖಿಗಳಾಗಿ.

ಕುಡಿದು ವಾಹನ ಓಡಿಸಬೇಡಿ ಎಂದು ಹೇಳುತ್ತಾರಲ್ಲವೇ? ಒಂದೊಮ್ಮೆ ಪೈಲಟ್ ಎಣ್ಣೆ ಹೊಡೆದುಬಿಟ್ಟರೆ ಹೇಗಿರಬಹುದು? ಕೆಲವು ವರ್ಷಗಳ ಹಿಂದೆ ಕಟೌಟ್ ಒಂದರಲ್ಲಿ ಹೀಗೆ ಓದಿದ ನೆನಪು- ಮೇಲೆ ’ಕರ್ನಾಟಕ ಸರ್ಕಾರ’ ಎಂಬ ಬರಹ ಮತ್ತು ಲೋಗೊ. ಒಂದು ಚಿತ್ರ, ಅದರ ಕೆಳಗೆ ದೊಡ್ಡದಾಗಿ ’ಕುಡಿತದಿಂದ ಸರ್ವನಾಶ.’ ಪ್ರಾಯಶಃ ಹಾಗೆ ಬರೆದವ ಎಣ್ಣೆಹಾಕಿದ್ದನೇ? ಸರ್ಕರದ ಪರವಾಗಿ ಬರೆಸಿದವ ಹಾಕಿದ್ದನೇ? ಗೊತ್ತಿಲ್ಲ. ಅದನ್ನು ಓದಿದ ಇಂದಿನ ಸಾರ್ವಜನಿಕರಿಗೂ ಕನ್ನಡ ವ್ಯಾಕರಣ ಗೊತ್ತಿರಲಿಲ್ಲ ಎನ್ನಬಹುದೇ? ಅಥವಾ ಹಾಗೆ ಬರೆದಿದ್ದೇ ಸರಿಯೇ?

ಟೀಕೆಗಿಂತ ಹೆಚ್ಚಾಗಿ, ಕಾಮಿಯ ಆಯ್ಕೆಯಲ್ಲಿ ನಾವೆಲ್ಲಿ ಎಡವಿದ್ದೇವೆ ಎಂಬುದು ಇವುಗಳನ್ನೆಲ್ಲ ನೋಡಿದರೆ ನಮಗೆ ತಿಳಿಯುತ್ತದೆ. ಇಂದಿನ ದಿನಮಾನಗಳಲ್ಲಿ ಬೂದುಗುಂಬಳ ಬುದ್ಧಿಗೆ ಉಪಯುಕ್ತವೆಂದೂ, ಈರುಳ್ಳಿ-ಬೆಳ್ಳುಳ್ಳಿಗಳಲ್ಲಿ ಔಷಧೀಯ ಗುಣವಿದೆಯೆಂದೂ ಆಹಾರವಿಜ್ಞಾನಿಗಳು ಹೇಳುತ್ತಿದ್ದಾರೆ. ಹಾಗಾದರೆ ಅಂತವುಗಳನ್ನೇ ಯೋಗಿ ತಿನ್ನಬಾರದೆನ್ನಲಿಕ್ಕೂ ಕಾರಣಗಳಿರಬೇಕಲ್ಲ? ಅವುಗಳಿಂದ ಶಾರೀರಿಕ ಸೈಡ್ ಇಫೆಕ್ಟ್ ಇಲ್ಲದಿರಬಹುದು, ಮನಸ್ಸಿನಮೇಲೆ ಅವುಗಳ ಪರಿಣಾಮ?

ಮಹಾನ್ ಯೋಗಿಯೊಬ್ಬರ ಸ್ವಾನುಭವದ ಪ್ರಕಾರ ಈರುಳ್ಳಿ ಮತ್ತು ಬೆಳ್ಳುಳ್ಳಿಗಳು ಮಾಂಸಕ್ಕಿಂತಲೂ ಕಡೆಯಂತೆ. ಚಿತ್ತವೃತ್ತಿಯನ್ನು ನಿಯಂತ್ರಿಸುವಲ್ಲಿ ಅವುಗಳು ಉಂಟುಮಾಡುವ ಅಡೆತಡೆಗಳು ಬಹಳವಂತೆ. ತಿಳಿದವರು ಅವುಗಳನ್ನು ಕಾಮೋತ್ತೇಜಕಗಳೆಂದೂ ಕರೆದಿದ್ದಾರೆ. ತಾಲೂಕು ಪ್ರದೇಶಗಳ ಹೋಟೆಲ್ ಗಳಲ್ಲಿ ಮುಂಗಾರು ಮಾರುತ ಬೀಸುವಾಗ, ಈರುಳ್ಳಿ ಬಜೆ ಮತ್ತು ಬೆಳ್ಳುಳ್ಳಿ ಚಟ್ನಿ ಹಚ್ಚಿದ ಮಸಾಲೆ ದೋಸೆಯ ಪರಿಮಳ ಅರ್ಧ ಕಿ.ಮೀ ದೂರದಿಂದಲೇ ದಾರಿಹೋಕರನ್ನು ಕರೆಯುತ್ತದೆ. ಎಂದಾಗ ಬಾಗಿಲಲ್ಲಿ ನಿಂತು ಕರೆಯುವ ಸ್ವಭಾವಕ್ಕೆ ಅವು ಪುಷ್ಟಿ ನೀಡುತ್ತವೆ ಎನ್ನುವುದಕ್ಕೆ ಇದೊಂದೇ ಸಂಗತಿ ಪುಷ್ಟಿಕರವಾಗುತ್ತದೆ.

ಹೋಗಲಿ, ಶರೀರ ಮತ್ತು ಮನಸ್ಸುಗಳ ಬಗೆಗೆ ವಿಜ್ಞಾನಿಗಳು ಏನಾದರೂ ಹೇಳಬಹುದು, ನಾಡಿಗಳ ಬಗ್ಗೆ ಅವರಲ್ಲಿ ಯಾವ ವಿವರಣೆಯೂ ಸಿಗುವುದಿಲ್ಲ. ರಕ್ತನಾಳಗಳಲ್ಲಿ ಹರಿಯುವ ರಕ್ತವೇ ಕೆಲವೊಮ್ಮೆ ಹೆಪ್ಪುಗಟ್ಟುವುದಂತೆ, ಮೂತ್ರನಾಳದಲ್ಲಿ ಹರಿಯುವ ಮೂತ್ರವೇ ಹರಳುಗಟ್ಟುವುದಂತೆ, ನಾಡಿಗಳಲ್ಲಿ ಹರಿದಾಡುವ ವಾಯು ವಿದ್ಯುತ್ತಿನ ಕತೆ ಏನು? ಅದಕ್ಕೆ ಅವರಲ್ಲಿ ಉತ್ತರವಿಲ್ಲ.

ಯೋಗಿಗಳು ಪ್ರಾಣಾಯಾಮದಲ್ಲಿ ನಾಲ್ಕು ಹಂತಗಳನ್ನು ಹೇಳಿದ್ದಾರೆ-

ಮೊದಲನೆಯ ಹಂತ-ಆರಂಭ ಅವಸ್ಥೆ

ಆರಂಭಿಕ ಹಂತದಲ್ಲಿ ಮೂರು ಮಾತ್ರೆಗಳ ಕಾಲ ಓಂಕಾರವನ್ನು ಪಠಿಸಬೇಕು. ಹಿಂದೆ ನಡೆದ ಪಾಪಗಳಿಂದ ಮುಕ್ತಿಪಡೆಯುವ ಸಲುವಾಗಿ ಹೀಗೆ ಮಾಡಲಾಗುತ್ತದೆ. ಪ್ರಣವ ಮಂತ್ರವೆನಿಸಿದ ಓಂ, ಹಿಂದಿನ ಪಾಪಗಳನ್ನು ಪರಿಹರಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಯೋಗಿಯು ಈ ಸಮಯದಲ್ಲಿ ಬೆವರುತ್ತಾನೆ. ಬೆವರನ್ನು ಕೈಗಳಿಂದ ಒರೆಸಿ ಸ್ವಚ್ಛಗೊಳಿಸಿಕೊಳ್ಳಬೇಕು. ಶರೀರವು ಅದುರಲು ಅರಂಭಗೊಳ್ಳುತ್ತದೆ. ಕೆಲವೊಮ್ಮೆ ಯೋಗಿ ಕಪ್ಪೆಯಂತೆ ಜಿಗಿಯುವ ಸಾಧ್ಯತೆಯೂ ಇದೆ.

ಎರಡನೆಯ ಹಂತ-ಘಟ ಅವಸ್ಥೆ

ಇದು ಯೋಗಿಯ ಪ್ರಾಣಾಯಾಮದ ಎರಡನೇ ಹಂತ. ಸತತವಾದ ಅಭ್ಯಾಸದಿಂದ ಶ್ವಾಸದ ನಿಯಂತ್ರಣವನ್ನು ಕಲಿತುಕೊಂಡ ನಂತರ ಈ ಹಂತವನ್ನು ತಲುಪಬಹುದು. ಈ ಹಂತಕ್ಕೆ ಬರುವಾಗ ಪ್ರಾಣ ಮತ್ತು ಅಪಾನಗಳ ನಡುವೆ, ಮನಸ್ಸು ಮತ್ತು ಬುದ್ಧಿಗಳ ನಡುವೆ, ಜೀವಾತ್ಮ ಮತ್ತು ಪರಮಾತ್ಮರ ನಡುವೆ ಒಮ್ಮತವು ಒಡಮೂಡಿ ವೈರುಧ್ಯವು ಅಳಿಯುತ್ತದೆ. ಇದೇ “ಘಟ ಅವಸ್ಥೆ.” ಇದನ್ನು ಯೋಗಿಯು ಬೆಳಿಗ್ಗೆ ಮತ್ತು ಸಾಯಂಕಾಲ ದಿನದಲ್ಲಿ ಒಂದು ಯಾಮದವರೆಗೆ ಅಂದರೆ ಮೊರು ಗಂಟೆಗಳ ಕಾಲ ನಡೆಸಬಹುದು. ಒಮ್ಮೆ ಮಾತ್ರ ಕೇವಲ ಕುಂಭಕವನ್ನು ಆಚರಿಸಬೇಕು.

ವಿಷಯವಸ್ತುಗಳ ಮೇಲೆ ಕೇಂದ್ರಿತವಾದ ಇಂದ್ರಿಯಗಳನ್ನು ಪ್ರಾಣಾಯಾಮದ ಸಮಯದಲ್ಲಿ ವಿಷಯವಸ್ತುಗಳಿಂದ ಅಥವಾ ವಿಷಯವಾಸನೆಯಿಂದ ವಿಮುಕ್ತಗೊಳಿಸುವುದೇ ಪ್ರತ್ಯಾಹಾರವಾಗಿದೆ. ಕಣ್ಣಿಂದ ನೋದುವುದೆಲ್ಲವೂ ಅತ್ಮವನ್ನೇ ಎಂದು ತಿಳಿಯಬೇಕು. ಅದೇರೀತಿ, ಕಿವಿಯಿಂದ ಕೇಳುವುದೆಲ್ಲವನ್ನೂ, ಮೂಗಿನಿಂದ ಆಘ್ರಾಣಿಸುವುದೆಲ್ಲವನ್ನೂ, ನಾಲಿಗೆಯಿಂದ ಸ್ವಾದಗ್ರಹಿಸುವುದೆಲ್ಲವನ್ನೂ ಮತ್ತು ಚರ್ಮದಿಂದ ಸ್ಪರ್ಶಿಸುವುದೆಲ್ಲವನ್ನೂ ಆತ್ಮವೆಂಬ ಭಾವನೆ ಅವನಲ್ಲಿರಬೇಕು. ಈ ಸಮಯದಲ್ಲಿ ಅವನು ಅಪರೋಕ್ಷ ಜ್ಞಾನವನ್ನು ಪಡೆದುಕೊಳ್ಳುತ್ತಾನೆ. ಇರುವಲ್ಲಿಂದ ಇಚ್ಛಿಸಿದ ಬಹುದೂರದೆಡೆಗೆ ಅರೆನಿಮಿಷದಲ್ಲಿ ಸಾಗಿಹೋಗುವ ಶಕ್ತಿ, ಅಜ್ಞಾಪನೆಯಂತೆ ನಿಖರವಾಗಿ ಅದ್ಭುತವಾಗಿ ಮಾತನಾಡು ಶಕ್ತಿ, ಇಚ್ಛಿಸಿದ ಯಾವುದೇ ರೂಪವನ್ನೊ ಧಾರಣೆಮಾಡಿಕೊಳ್ಳುವ ಶಕ್ತಿ, ಇರುವಲ್ಲೇ ಮಾಯವಾಗುವ ಶಕ್ತಿ ಮತ್ತು ಕಬ್ಬಿಣವನ್ನು ಬಂಗಾರವನ್ನಾಗಿ ಪರಿವರ್ತಿಸುವಂತಹ ಹಲವು ಶಕ್ತಿ-ಸಿದ್ಧಿಗಳನ್ನು ಆತ ಪಡೆದುಕೊಳ್ಳುತ್ತಾನೆ.

ಜೊತೆಗೆ ಗಾಳಿಯಲ್ಲಿ ತೇಲಾಡುವ ಶಕ್ತಿಯನ್ನೂ ಸಹ ಯೋಗಿ ಪಡೆದುಕೊಳ್ಳುತ್ತಾನೆ. ಹೀಗಿದ್ದರೂ ದೊರೆತ ಈ ಸಿದ್ಧಿಗಳೆಲ್ಲ ಮುಕ್ತಿಯೋಗದ ಹಾದಿಯಲ್ಲಿ ಇರುವ ಅಡೆತಡೆಗಳೆಂದು ಯೋಗಿಯು ಭಾವಿಸುತ್ತಾನೆ. [ಭಾವಿಸಿದರೆ ಮುಂದಕ್ಕೆ ತೆರಳಲು ಸಾಧ್ಯ, ಸಿದ್ಧಿಯ ದುರುಪಯೋಗಮಾಡಿಕೊಂಡರೆ ಮತ್ತೆ ಮೂಲಸ್ಥಾನಕ್ಕೆ ಬಿದ್ದುಬಿಡುತ್ತಾನೆ.] ಯೋಗಿಯ ಸುತ್ತ ಇರುವ ಶಿಷ್ಯರು ಯೋಗಿಯಲ್ಲಿ ಸಿದ್ಧಿಯಿಂದ ಉಂಟಾಗುವ ಪವಾಡಗಳನ್ನು ತೋರಿಸಲು ವಿನಂತಿಸುತ್ತಾರೆ. ಹಾಗೊಮ್ಮೆ ಪವಾಡಗಳಲ್ಲಿ ನಿರತನಾದರೆ ಯೋಗಿಯ ಯೋಗದ ಬದುಕು ಅಲ್ಲಿಗೆ ಮೊಟಕುಗೊಳ್ಳುತ್ತದೆ. ಸಿಷ್ಯರಿಗೆ ತಿಳುವಳಿಕೆ ನೀಡಿ, ಗುರುವಿನ ಹೇಳಿಕೆಗಳತ್ತ ಗಮನವಿಟ್ಟು ಯೋಗದಲ್ಲಿ ಮುನ್ನಡೆದರೆ ಪ್ರಾಪಂಚಿಕ ವಿಷಯಗಳಿಂದ ಮುಕ್ತನಾಗಿ, ಮೋಕ್ಷವು ದೊರೆಯುತ್ತದೆ.

ಮೂರನೆಯ ಹಂತ-ಪರಿಚಯ ಅವಸ್ಥೆ

ಯೋಗಿಯ ನಿರಂತರ ಯೋಗೋಪಾಸನೆಯು ಅವನನ್ನು “ಪರಿಚಯ ಅವಸ್ಥೆ” ಎಂಬ ಮೂರನೇ ಹಂತಕ್ಕೆ ಕೊಂಡೋಯ್ಯುತ್ತದೆ. ವಾಯುವು ಅಗ್ನಿಯ ಜೊತೆಗೂಡಿ ಕುಂಡಲಿನಿಯನ್ನು ಜಾಗೃತಗೊಳಿಸುವುದರಿಂದ ಕುಂಡಲಿನೀ ಶಕ್ತಿಯು ಮೂಲಾಧಾರದಿಂದ ಸಹಸ್ರಾರದೆಡೆಗೆ ನಿರಂತರವಾಗಿ ಪ್ರವಹಿಸತೊಡಗುತ್ತದೆ. ಚಿತ್ತದ ಜೊತೆಗೆ ಪ್ರಾಣವೂ ಸೇರಿಕೊಂಡು ಸುಷುಮ್ನಾ ನಾಡಿಯ ಮುಖಾಂತರ ಸಹಸ್ರಾರ ಉನ್ನತ ಕೇಂದ್ರದೆಡೆಗೆ ಕರೆದೊಯ್ಯುತ್ತದೆ. ಯಾವಾಗ ಯೋಗಿಯು ಕ್ರಿಯಾಶಕ್ತಿಯನ್ನು ಪಡೆದುಕೊಳ್ಳುತ್ತಾನೋ, ಆರು ಚಕ್ರಗಳನ್ನು ದಾಟಿದ ಯೋಗಿಗೆ ಆಗ ಏಳನೇ ಚಕ್ರದ ಪರಿಚಯ ನಿಚ್ಚಳವಾಗುತ್ತದೆ. ಆಗ ಯೋಗಿಯು ಮೂರು ಮಜಲುಗಳ ಕರ್ಮವನ್ನು ಅರಿಯಲು ಸಾಧ್ಯವಾಗುತ್ತದೆ. ಮೂರು ಮಜಲುಗಳ ಕರ್ಮಗಳನ್ನು ಯೋಗಿಯು ಪ್ರಣವದಿಂದ ನಾಶಪಡಿಸುತ್ತಾನೆ.

ಆಗ ಅವನು “ಕಾಯವ್ಯೂಹ”ವನ್ನು ರಚಿಸುತ್ತಾನೆ. ಕಾಯವ್ಯೂಹ ಎಂಬುದು, ಹಲವು ವಿಧ ಸ್ಕಂದಗಳನ್ನು ದೇಹದಲ್ಲೆಲ್ಲ ವ್ಯವಸ್ಥಾಪನೆಗೊಳಿಸಿ, ಜನ್ಮಾಂತರ ಪಾಪಗಳಿಂದ ಮುಕ್ತಿಯನ್ನು ಪಡೆದುಕೊಂಡು, ಮತ್ತೆ ಮರುಹುಟ್ಟು ಪಡೆಯದಂತೆ ಜೀವನ್ಮುಕ್ತನಾಗುವ ಒಂದು ರಹಸ್ಯ ವಿದ್ಯೆ. ಈ ಮಹಾನ್ ಯೋಗಿಯು ಮುಂದೆ ಪಂಚಧರ್ಮ ಅಂದರೆ ಪಂಚಭೂತಗಳ ಮೇಲೆ ನಿಗಾ ಇರಿಸಿ ಅವುಗಳನ್ನು ನಿಯಂತ್ರಿಸಬಲ್ಲ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತಾನೆ. ಪಂಚಭೂತಗಳಿಂದ[ಪೃಥ್ವಿ, ಆಕಾಶ, ವಾಯು, ಜಲ ಮತ್ತು ಅಗ್ನಿ]ಅವನಿಗೆ ಯಾವ ಹಾನಿಯೂ ತಟ್ಟದು.

ನಾಲ್ಕನೇ ಹಂತ-ನಿಷ್ಪತ್ತಿ ಅವಸ್ಥೆ

ಪ್ರಾಣಾಯಾಮದ ನಾಲ್ಕನೇ ಅವಸ್ಥೆ ಇದಾಗಿದೆ. ಹಂತಹಂತವಾಗಿ ಯೋಗಿಯು ಮೂರು ಹಂತಗಳನ್ನು ಮುಗಿಸಿ “ನಿಷ್ಪತ್ತಿ ಅವಸ್ಥೆ”ಗೆ ಏರುತ್ತಾನೆ. ಎಲ್ಲಾ ಕರ್ಮಬೀಜಗಳನ್ನು ನಾಶಪಡಿಸಿದ ಯೋಗಿಯು ಈ ಹಂತದಲ್ಲಿ ಅಮೃತಪಾನಮಾಡಿ ಅಮರತ್ವವನ್ನು ಪಡೆದುಕೊಳ್ಳುತ್ತಾನೆ. ಅಲ್ಲಿಂದಾಚೆಗೆ ಅವನಿಗೆ ಹಸಿವಿಲ್ಲ, ನೀರಡಿಕೆಯಿಲ್ಲ, ನಿದ್ದೆ-ಉದ್ವೇಗಗಳು ಇರುವುದಿಲ್ಲ. ಅವನು ಅವುಗಳೆಲ್ಲದರಿಂದ ಸ್ವತಂತ್ರನಾಗಿರುತ್ತಾನೆ.

ಈ ಜಗದಲ್ಲಿ ಇಚ್ಛಿಸದಲ್ಲಿಗೆ ಅವನು ಹೋಗಬಹುದು. ಅವನಿಗೆ ಯಾವುದೇ ಕಾಯಿಲೆಗಳು, ಶಾರೀರಿಕ ನ್ಯೂನತೆಗಳು [ಕಣ್ಣು ಕಾಣಿಸದಿರುವುದು, ಕಿವಿ ಕೇಳಿಸದಂತಾಗುವುದು ಇತ್ಯಾದಿ ವಯಸ್ಸಿಗನುಗುಣವಾಗಿ ಕಾಣಿಸಿಕೊಳ್ಳುವ ತೊಂದರೆಗಳು]ಮತ್ತು ಮುಪ್ಪು ಬಾಧಿಸುವುದಿಲ್ಲ. ಸಮಾಧಿ ಸ್ಥಿತಿಯ ಪರಮಾನಂದವನ್ನು ಹೊಂದುತ್ತಾನೆ. ಆಗ ಅವನಿಗೆ ಮತ್ತೆ ಯೋಗದ ಆಚರಣೆಗಳು ಬೇಕಾಗಿಲ್ಲ. ಗಂಟಲು ಮೂಲದಲ್ಲಿ ನಾಲಿಗೆಯಿಟ್ಟು ಪ್ರಾಣವಾಯುವನ್ನು ಕುಡಿಯುವ ಕುಶಲ ತಂತ್ರವನ್ನು ಪಡೆದುಕೊಂಡ ಈ ಯೋಗಿಗೆ ಪ್ರಾಣ ಮತ್ತು ಅಪಾನಗಳ ನಿಯಮಗಳು ಅರ್ಥವಾಗಿ ಮೋಕ್ಷವನ್ನು ಪಡೆದುಕೊಳ್ಳಲು ಅರ್ಹನಾಗುತ್ತಾನೆ.

ಯೋಗವನ್ನು ನಿರಂತರವಾಗಿ, ಸಾಂಪ್ರದಾಯಿಕ ಶೈಲಿಯಲ್ಲಿ, ಶ್ರದ್ಧಾ-ಭಕ್ತಿ ಪುರಸ್ಸರವಾಗಿ, ಆಚರಿಸುವ ಯೋಗವಿದ್ಯಾರ್ಥಿಯು ಈ ಎಲ್ಲ ಹಂತಗಳನ್ನು ಕ್ರಮಬದ್ಧವಾಗಿ ಏರುತ್ತ ಹೋಗುತ್ತಾನೆ. ಯಾವಗಲೋ ಒಮ್ಮೆ ಕೇವಲ ಕ್ಷಣಿಕ ತೃಪ್ತಿಗಾಗಿ ಯೋಗದ ಮೊರೆಹೋಗುವ ಯಾವ ವ್ಯಕ್ತಿಗೂ ಸಹ ಈ ಅವಸ್ಥೆಗಳಾಗಲೀ ಯೋಗದ ನಿಜವಾದ ಪ್ರಯೋಜನಗಳಾಗಲೀ ಪ್ರಾಪ್ತವಾಗುವುದಿಲ್ಲ. ಇದೆಲ್ಲದಕ್ಕೂ ಪ್ರಮುಖ ಅಧಾರಗಳೆಂದರೆ ಮಿತಾಹಾರ ಮತ್ತು ಬ್ರಹ್ಮಚರ್ಯ.

ದೀಕ್ಷೆಯಾದ ಒಂದೇ ತಿಂಗಳಿನಲ್ಲಿ ಈರುಳ್ಳಿ ಹಾಕಿದ ಉಫ್ಫಿಟ್ಟು ತಿಂದವರಿದ್ದಾರೆ. ಕದ್ದುಮುಚ್ಚಿ ಮಸಾಲೆ ಪದಾರ್ಥಗಳನ್ನೂ ಯೋಗಿಗೆ ನಿಷಿದ್ಧವಾದ ತಿಂಡಿ-ತಿನಿಸುಗಳನ್ನೂ ತಿಂದವರಿದ್ದಾರೆ. ಅಂತವರಲ್ಲಿ ಯೋಗ ಸಕ್ರಿಯವಾಗಿದೆ ಎಂಬುದನ್ನು ಒಪ್ಪುವುದೇ ಯೋಗಿ ಪತಂಜಲಿಗೆ ಅಪಚಾರ ಎಸಗುವುದಾಗುತ್ತದೆ. ಯೋಗವನ್ನೇ ಅರಿಯದ ಕೆಲವರು ಯೋಗ ದಿನಾಚರಣೆಯ ಬಗ್ಗೆ ಪತ್ರಿಕೆಗಳಲ್ಲಿ ಹೇಳಿಕೆ ಕೊಡುತ್ತಾರೆ.

ಯಾವ ನೀತಿ, ನಿಯಮಗಳನ್ನೂ ಅರಿಯದೆ ಜೇಬು ಭರ್ತಿಗೆ ಜೈಕಾರ ಕೂಗುವ ಮಂದಿ ಮೂಲ ಸನಾತನ ವೈದಿಕ ಸಲ್ಲಕ್ಷಣಗಳಿಗೆ ಅಪಚಾರ ಮಾಡುತ್ತಿದ್ದಾರೆ. ಒಂದಷ್ಟು ದೀಪ ಹಚ್ಚಿ, ಹೂವು ಜೋಡಿಸಿ ಅಲಂಕಾರ ಮಾಡಿಬಿಟ್ಟ ಮಾತ್ರಕ್ಕೆ ದೈವೀ ಶಕ್ತಿಯ ಆವಾಸ ಅಲ್ಲಿದೆಯೆಂದು ನಂಬಬಾರದು. ದೈವೀ ಶಕ್ತಿಯ ಆವಾಸಕ್ಕೆ ಹಲವು ಕಟ್ಟುಪಾಡುಗಳಿವೆ. ಸೆಕ್ಯೂರಿಟಿಗಳಿಗೆ ಮುಖ ತೋರಿಸಿ ವಿಮಾನವೇರುವ ವಿಗ್ರಹಗಳಲ್ಲಿ ಸಾನ್ನಿಧ್ಯ ಇರಲು ಸಾಧ್ಯವಿಲ್ಲ, ನಮಾಮಿ ಸಾಬೂನಿನ ನೊರೆ ತಾಗಿದ ಕೈಯಿಂದ ಅಭಿಷೇಕ ಪಡೆದ ವಿಗ್ರಹಗಳಲ್ಲಿ ಭೂತಾವಾಸವಾದರೂ ತಪ್ಪಿಲ್ಲ.

ಇನ್ನು, ಇಪ್ಪತ್ತೈದು ಲಕ್ಷಕೊಟ್ಟು ಮಲ್ಲಿಕಾ ಮಾವಿನ ಹಣ್ಣನ್ನು ಮುಟ್ಟಲು ಹವಣಿಸಿ, ಕೈಗೂಡದ್ದಕ್ಕೆ ಕೋಪಾವಿಷ್ಟನಾದ ಕಾಮಿಯನ್ನು ಆರಾಧಿಸುವ ಭಕ್ತರಲ್ಲಿ ಕಾಮವಾಸನೆ ಆವಾಸವಾಗುವುದೇ ಹೊರತು ಮೋಕ್ಷಮಾರ್ಗದ ಗಾಳಿ ಎಂದೆಂದಿಗೂ ಬೀಸುವುದಿಲ್ಲ. ಕುಳಿತವ ಕಚ್ಚೆಹರುಕನಾದರೆ ಸೀಟು, ದೇವರು, ಮಂತ್ರಾಕ್ಷತೆ, ಆಶೀರ್ವಾದ ಯಾವುದರಿಂದಲೂ ಉತ್ತಮ ಪರಿಣಾಮಗಳಿಲ್ಲ;ಎಲ್ಲವೂ ಅಡ್ಡ ಪರಿಣಾಮಗಳೇ. ಇದನ್ನೆಲ್ಲ ನೋಡಿಯೇ ಹಿಂದಿನವರು ಹೇಳಿದ್ದಾರೆ-ಚೋರ ಗುರುವಿಗೆ ಚಾಂಡಾಲ ಶಿಷ್ಯರು.

Thumari Ramachandra

source: https://www.facebook.com/groups/1499395003680065/permalink/1637761423176755/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s