ಯೋಗದ ಸಾಧ್ಯತೆಗಳ ಬಗ್ಗೆ ನಾವು ಅನ್ಯರಿಗೆ ಮಾತ್ರ ಉಪದೇಶ ಕೊಡುತ್ತೇವೆ.

ಯೋಗದ ಸಾಧ್ಯತೆಗಳ ಬಗ್ಗೆ ನಾವು ಅನ್ಯರಿಗೆ ಮಾತ್ರ ಉಪದೇಶ ಕೊಡುತ್ತೇವೆ.

“ಯೋಗದ ಬಗೆಗೆ ತಿಳಿಯದಿರುವವರು ಬಹಳ ಕಡಿಮೆ ಎಂದುಕೊಡಿದ್ದೇವೆ. ಹೀಗಾಗಿ ಅದರ ಬಗ್ಗೆ ಜಾಸ್ತಿ ಕೊರೆಯದೆ ನೇರವಾಗಿ ಷಡ್ದರ್ಶನಗಳನ್ನು ಎತ್ತಿಕೊಂಡು, ಅಲ್ಲಿಂದ ಯೋಗಸಿದ್ಧಿಯ ಕಡೆಗೆ ಹೋಗುತ್ತೇವೆ.

ಭಾರತೀಯ ತತ್ವಶಾಸ್ತ್ರ ಪದ್ಧತಿ ಬಹಳ ಪುರಾತನವಾದದ್ದು; ಕನಿಷ್ಠ ಐದುಸಾವಿರ ವರ್ಷಗಳ ಇತಿಹಾಸವುಳ್ಳದ್ದು ಎನ್ನಬಹುದು. ಇಲ್ಲಿನ ತತ್ವಶಾಸ್ತ್ರಗಳನ್ನು ದರ್ಶನಗಳೆಂದು ಕರೆದಿದ್ದಾರೆ. ಪಾಶ್ಚಿಮಾತ್ಯರಲ್ಲಿ ತತ್ವ ಸಿದ್ಧಾಂತಗಳೆಂದರೆ ಸಂಪೂರ್ಣವಾಗಿ ತರ್ಕ ಮತ್ತು ಕಾರಣಗಳ ಮೇಲೆ ಅವಲಂಬಿಸಿರುವ ವಿಷಯವಾಗಿರುತ್ತದೆ.

ಭಾರತೀಯ ತತ್ವಶಾಸ್ತ್ರವು ಅಥವಾ ಸಿದ್ಧಾಂತವು ಸತ್ಯದ ’ದರ್ಶನ’ ಅಥವಾ ’ನೋಟ’ ಅಥವಾ ’ಅನುಭವ’ವನ್ನು ಅತೀಂದ್ರಿಯ ಸ್ಥಿತಿಯಲ್ಲಿ ಕಂಡುಕೊಳ್ಳುವುದರ ಮೇಲೆ ನಿಂತಿದೆ. ಆದ್ದರಿಂದಲೇ ಇಲ್ಲಿನ ಪ್ರಾಚೀನ ತತ್ವಶಾಸ್ತ್ರಗಳಿಗೆ ’ದರ್ಶನ’ ಎಂಬ ಪದವು ಹೆಚ್ಚು ಸೂಕ್ತವೆನಿಸುತ್ತದೆ.

ನಮ್ಮಲ್ಲಿನ ದರ್ಶನಗಳನ್ನು ಆಸ್ತಿಕ ಮತ್ತು ನಾಸ್ತಿಕ ಎಂದು ಎರಡು ಗುಂಪುಗಳಾಗಿ ವಿಂಗಡಿಸುತ್ತಾರೆ. ವೇದಗಳ ಪ್ರಮಾಣಗಳ ಮೇಲೆ ಆಧಾರಿತವಾಗಿರುವ ದರ್ಶನಗಳೆಲ್ಲ ಆಸ್ತಿಕ ದರ್ಶನಗಳು ಇದಕ್ಕೆ ಹೊರತಾದವುಗಳು ನಾಸ್ತಿಕ ದರ್ಶನಗಳು. ಚಾರ್ವಾಕ (ಪ್ರಾಪಂಚಿಕ ಭೋಗವನ್ನು ಪ್ರತಿಪಾದಿಸುವ ದರ್ಶನ), ಜೈನ ಮತ್ತು ಬೌದ್ಧ ಸಿದ್ಧಾಂತಗಳು ನಾಸ್ತಿಕ ದರ್ಶನಗಳ ವರ್ಗಕ್ಕೆ ಸೇರಿದರೆ; ಷಡ್ದರ್ಶನಗಳು ಅಥವಾ ಆರು ಹಿಂದೂ ಸಾಂಪ್ರದಾಯಿಕ ಸಿದ್ಧಾಂತಗಳು ಆಸ್ತಿಕ ದರ್ಶನಗಳ ವರ್ಗಕ್ಕೆ ಸೇರುತ್ತವೆ.

ಈಗ ಯಾವ ಯಾವ ದರ್ಶನ ಏನೇನು ವಿಷಯಗಳನ್ನು ಒಳಗೊಂಡಿದೆ ಎಂಬುದನ್ನು ಸ್ಥೂಲವಾಗಿ ನೋಡೋಣ.

ನ್ಯಾಯದರ್ಶನ: ವಿಷಯವು ಎದುರು ಬಂದಾಗ, ಹಲವು ವಿಧದ ಪ್ರಮಾಣಗಳಿಂದ ವಸ್ತುವನ್ನು ಪರೀಕ್ಷಿಸಿ, ಬುದ್ಧಿಪೂರ್ವಕವಾಗಿ, ವಿವೇಕಯುತವಾಗಿ, ಕಾರಣ ಸಹಿತವಾಗಿ, ವ್ಯವಸ್ಥಿತವಾಗಿ ಅದನ್ನು ಮಂಡಿಸುವ ವಿಧಾನವೇ ನ್ಯಾಯ ಮತ್ತು ಇದನ್ನು ತರ್ಕ ಎಂದೂ ಕರೆದಿದ್ದಾರೆ. ಸತ್ಯವನ್ನು ಕಂಡುಕೊಳ್ಳುವುದು ಈ ದರ್ಶನದ ಪ್ರಧಾನ ನಿಲುವು. ಗೌತಮಮುನಿ ಈ ದರ್ಶನದ ಮೂಲಪುರುಷ ಎಂದು ತಿಳಿಯಲಾಗಿದೆ.

ವೈಶೇಷಿಕದರ್ಶನ: ಎಷ್ಟೋ ಸಲ ನ್ಯಾಯದರ್ಶನ ಮತ್ತು ವೈಶೇಷಿಕದರ್ಶನಗಳನ್ನು ಒಟ್ಟಾಗಿಯೇ ಪರಿಗಣಿಸುವ ವಿಧಾನವೂ ಉಂಟು; ಆದರೆ ಅಸ್ಥಿತ್ವದಲ್ಲಿ ಅವೆರಡೂ ಬೇರೆ ಬೇರೆ. ಋಷಿ ಕಣಾದ ಈ ದರ್ಶನದ ಪ್ರವರ್ತಕ. ನ್ಯಾಯದರ್ಶನವು ಪ್ರಧಾನವಾಗಿ ಪ್ರಮಾಣಗಳನ್ನು ಕುರಿತು ವಿಶ್ಲೇಷಿಸಿದರೆ, ವೈಶೇಷಿಕದರ್ಶನವು ಪ್ರಮೇಯಗಳನ್ನು ಕುರಿತು ಮೀಮಾಂಸೆ ನಡೆಸುತ್ತದೆ. ಉದಾಹರಣೆಗೆ-ಜಗತ್ತಿನ ವಸ್ತುಗಳಿಗೆ ಕಾರಣವಾದುದು ಪರಮಾಣುಗಳು, ಅವುಗಳ ವೈಶಿಷ್ಟ್ಯ. ವಿಶೇಷತೆಗಳನ್ನು ವಿವರಿಸುವುದೇ ಈ ದರ್ಶನದ ಗುರಿ.

ಸಾಂಖ್ಯದರ್ಶನ: ಭಾರತೀಯ ದರ್ಶನಗಳಲ್ಲಿ ಸಾಂಖ್ಯದರ್ಶನವೇ ಅತ್ಯಂತ ಪ್ರಾಚೀನವಾದುದು ಎಂಬ ಎಣಿಕೆಯಿದೆ. ಕಪಿಲಮುನಿ ಈ ದರ್ಶನದ ಪ್ರವರ್ತಕ. ‘ಸಾಂಖ್ಯ’ ಎಂದರೆ ಜ್ಞಾನ ಮತ್ತು ಪರಿಗಣನೆ ಎಂಬ ಎರಡು ಪ್ರಧಾನ ಅರ್ಥಗಳನ್ನು ವಿದ್ವಾಂಸರು ಮಾಡಿದ್ದಾರೆ. ಸೃಷ್ಟಿಗೆ ಮೂಲವಾಗಿರುವ ವಿವರಗಳನ್ನು ಎಣಿಸುವುದು ಮತ್ತು ಅರಿವನ್ನು ಕುರಿತ ಮೀಮಾಂಸೆ ಈ ದರ್ಶನದ ಮೂಲ ನೆಲೆ. ಸಾಂಖ್ಯ ದರ್ಶನ ಬಹಳ ಜನಪ್ರಿಯತೆಯನ್ನು ಪಡೆದಿದೆಯಾದರೂ ಮೂಲದಲ್ಲಿ ಇದರಲ್ಲಿ ಒಂದು ಲೋಪವಿದೆ; ಈಶ್ವರನನ್ನು[ಹರಿ ಅಥವಾ ಹರ-ಪರಮಾತ್ಮ ಎಂದರ್ಥ] ಕುರಿತು ಸಾಂಖ್ಯ ಏನನ್ನೂ ಹೇಳದ್ದರಿಂದ ಇದನ್ನು ನಿರೀಶ್ವರ ಸಾಂಖ್ಯ ಎನ್ನಲಾಯ್ತು. ನೋಡಿ ಹೀಗಿದೆ-

ಜಡ ಮತ್ತು ಚೇತನದ ವಿಶ್ಲೇಷಣೆ

ಸಾಂಖ್ಯ ಎಂದರೆ ಚೈತನ್ಯ ಮತ್ತು ಜಡವನ್ನು ಅರ್ಥಮಾಡಿಕೊಳ್ಳುವುದು. ಈ ಲೌಕಿಕ ಪ್ರಪಂಚವು ಇಪ್ಪತ್ತನಾಲ್ಕು ಅಂಶಗಳಿಂದ ಆದದ್ದೆಂದು ಸಾಂಖ್ಯ ತತ್ತ್ವಶಾಸ್ತ್ರಜ್ಞನು ವಿಶ್ಲೇಷಣೆ ಮಾಡುತ್ತಾನೆ : ಪಂಚಭೂತಗಳು, ಮೂರು ಸೂಕ್ಷ್ಮ ಧಾತುಗಳು, ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು, ಐದು ಪ್ರಜ್ಞಾ ವಸ್ತುಗಳು ಮತ್ತು ಪ್ರಧಾನ -ಅಪ್ರಕಟಿತ ಪ್ರಕೃತಿ ಗುಣಗಳು ಎಂಬುದು ಸಾಂಖ್ಯಯೋಗದ ಹೇಳಿಕೆ.
· ಭೂಮಿ, ಆಕಾಶ, ವಾಯು, ಬೆಂಕಿ ಮತ್ತು ನೀರು ಇವೇ ಪಂಚಭೂತಗಳು.
· ಮೂರು ಸೂಕ್ಷ್ಮಧಾತುಗಳು: ಆಕಾಶಕ್ಕಿಂತ ಸೂಕ್ಷ್ಮವಾದದ್ದು ಮನಸ್ಸು, ಮನಸ್ಸಿಗಿಂತಲೂ ಸೂಕ್ಷ್ಮವಾದದ್ದು ಬುದ್ಧಿ, ಬುದ್ಧಿಗಿಂತಲೂ ಸೂಕ್ಷ್ಮವಾದದ್ದು ಮಿಥ್ಯಾ ಅಹಂಕಾರ. [ನಾನೇ ಜಡವಸ್ತುವೆಂಬ ಮಿಥ್ಯಾಗ್ರಹಿಕೆ]
· ಐದು ಜ್ಞಾನೇಂದ್ರಿಯಗಳೆಂದರೆ-ಕಣ್ಣು, ಮೂಗು, ಕಿವಿ, ನಾಲಗೆ ಮತ್ತು ಚರ್ಮ.
· ಐದು ಕರ್ಮೇಂದ್ರಿಯಗಳೆಂದರೆ ಧ್ವನಿ, ಕಾಲುಗಳು, ಕೈಗಳು, ಗುದ ಮತ್ತು ಜನನೇಂದ್ರಿಯ. ಇವುಗಳ ಮೂಲಕ ನಾವು ಸುಖ ದುಃಖಗಳನ್ನು ಪರಿಭಾವಿಸುತ್ತೇವೆ.
· ಐದು ಪ್ರಜ್ಞಾವಸ್ತುಗಳೆಂದರೆ-ವಾಸನೆ, ರುಚಿ, ಆಕಾರ, ಸ್ಪರ್ಶ ಮತ್ತು ಶಬ್ದ. [ಶಬ್ಧ-ರೂಪ-ರಸ-ಗಂಧ-ಸ್ಪರ್ಶ]

ಇಪ್ಪತ್ತನಾಲ್ಕು ಅಂಶಗಳಲ್ಲಿ ಲೌಕಿಕ ಪ್ರಪಂಚವನ್ನು ವಿಶ್ಲೇಷಿಸುವುದಕ್ಕೆ ಸಾಂಖ್ಯ ಎನ್ನುತ್ತಾರೆ. ಇದು ನಮ್ಮ ಅನುಭವದ ಅಳವಿಗೆ ಬರುವ ಪ್ರತಿಯೊಂದರ ಸಂಪೂರ್ಣ ವಿಶ್ಲೇಷಣೆ. ಈ ಇಪ್ಪತ್ತನಾಲ್ಕು ಅಂಶಗಳ ಮೇಲೆ ಚೇತನಾತ್ಮನು ಇದ್ದಾನೆ. ಈ ಚೇತನಾತ್ಮಕ್ಕೆ ಮೇಲಿರುವವನೇ ದೇವರು.

ಸಾಂಖ್ಯರು ಆತ್ಮವನ್ನು ಅವಲೋಕಿಸುವುದಿಲ್ಲ. ಈ ಭೂಭೌತಶಾಸ್ತ್ರದ ಜಡವಸ್ತುಗಳ ವಿಜ್ಞಾನಿಗಳ ಹಾಗಿದ್ದರು ಅವರು. ಜಡವಸ್ತುಗಳನ್ನು ಕುರಿತು ಕೇವಲ ಅಧ್ಯಯನ ಮಾಡುತ್ತಾರಷ್ಟೆ. ಅದಕ್ಕೆ ಮೇಲ್ಪಟ್ಟ ಮಾಹಿತಿ ಅವರ ಬಳಿ ಇಲ್ಲ. ವ್ಯಕ್ತಿ-ವ್ಯಕ್ತಿಗಳ ನಡುವೆ ನಡೆಯುವ ಸಂಭಾಷಣೆಗೆ ಯಾವುದು ಕಾರಣ ಎಂಬುದಕ್ಕೆ ಸಾಂಖ್ಯ ತತ್ತ್ವಶಾಸ್ತ್ರಜ್ಞ ಉತ್ತರಿಸಲಾರ.

ಅದೇ ರೀತಿಯಲ್ಲಿ, ಆಧುನಿಕ ವೈದ್ಯರು ದೇಹವನ್ನು ವಿಚ್ಛೇದಿಸಿದ ಮೇಲೆ ಅಲ್ಲಿ ಕೆಲಸ ಮಾಡುತ್ತಿರುವ ಆಧ್ಯಾತ್ಮಿಕ ಶಕ್ತಿ ಯಾವುದು ಎಂದು ಕಂಡುಹಿಡಿಯಲಾರರು; ಅವರಿಗೂ ಆತ್ಮವೆಂಬ ಚೇತನದ ಕಲ್ಪನೆ ಮೂಡಲಾರದು. “ಇಷ್ಟು ಹೊತ್ತು ಜೀವ ಇತ್ತು, ಈಗ ಹೋಯ್ತು” ಎಂದಷ್ಟೇ ಹೇಳುತ್ತಾರೆಯೇ ವಿನಃ ಜೀವ ಎಂದರೇನು ಎಂಬುದಕ್ಕೆ ಅರ್ಥವನ್ನು ಅವರು ನೀಡಲಾರರು. ಹೀಗೆ ಲೌಕಿಕವಾದಿಗಳು, ಭಗವಂತನ ಕಣರೂಪದ ಜೀವಿಗಳಾದ ನಮ್ಮನ್ನು ಕೂಡ ಕಂಡುಹಿಡಿಯಲು ಸಾಧ್ಯವಿಲ್ಲ ಎಂದ ಮೇಲೆ, ಕೇವಲ ಯೋಗಿಗಳಾಗಲಿ, ಸಾಂಖ್ಯರಾಗಲಿ ದೇವರನ್ನು ನೇರವಾಗಿ ಕಂಡು ಹಿಡಿಯಲಾರರು. ಹಾಗಾದರೆ ಯೋಗದಿಂದ ಎಲ್ಲವೂ ಸಾಧ್ಯವೆಂದು ಹೇಳಿದಿರಲ್ಲ ಎಂದು ನೀವು ಪ್ರಶ್ನಿಸಿದರೆ, ಯೋಗವೆಂಬುದು ಭಗವಂತನ ಅರಮನೆಗೆ ಇರುವ ಒಂದು ಸೋಪಾನವಷ್ಟೆ; ಅದನ್ನೇರಿ ಮುಂದಕ್ಕೆ ಸಾಗುತ್ತ ಅವರು ಅರಮನೆಯನ್ನು ಪ್ರವೇಶಿಸಬೇಕಾಗುತ್ತದೆ.

ಮುಂದೆ ಇಂದಿನ ರಾಜಯೋಗದಲ್ಲಿ ಈಶ್ವರ ಸಹಿತ ಸಾಂಖ್ಯವನ್ನು ಬಳಸಿದ್ದರಿಂದ ಅದು ಪರ್ಫೆಕ್ಟ್ ಆಯ್ತು; ಅದನ್ನೇ ಸೇಶ್ವರ [ಸ+ಈಶ್ವರ] ಸಾಂಖ್ಯ ಎನ್ನಲಾಗಿದೆ.

ಯೋಗದರ್ಶನ: ಯೋಗದರ್ಶನ ಪ್ರಾಚೀನ ಸಾಧನಪದ್ಧತಿ. ಪತಂಜಲಿ ಮಹರ್ಷಿ ಇದರ ಮೂಲಪುರುಷ. ‘ಯೋಗ’ ಎಂಬ ಪದವು ‘ಯುಜ್’ ಧಾತುವಿನಿಂದ ನಿಷ್ಪನ್ನವಾಗಿದ್ದು, ‘ಸೇರಿಸು’, ‘ಹೊಂದಿಸು’ ಎಂಬ ಅರ್ಥಗಳಿವೆ. ಇದಕ್ಕೆ ಹಲವು ಸ್ತರದ ಅರ್ಥಗಳನ್ನು ಮಾಡಿದ್ದಾರೆ. ಶರೀರ ಮತ್ತು ಮನಸ್ಸುಗಳನ್ನು ಸೇರಿಸುವುದು, ಕರ್ಮ-ಜ್ಞಾನಗಳನ್ನು ಒಂದಾಗಿಸಿ ಬದುಕನ್ನು ರೂಪಿಸಿಕೊಳ್ಳುವುದು, ಅಂತರಂಗ-ಬಹಿರಂಗಗಳ ಸಾಮರಸ್ಯವನ್ನು ಸಾಧಿಸುವುದು – ಹೀಗೆಲ್ಲ ತಾತ್ಪರ್ಯವನ್ನು ಕಲ್ಪಿಸಲು ಸಾಧ್ಯ.

[ಪೂರ್ವ]ಮೀಮಾಂಸಾ ದರ್ಶನ: ‘ಮೀಮಾಂಸಾ’ ಎಂದರೆ ಆಳವಾದ ವಿಶ್ಲೇಷಣೆ, ವಿಮರ್ಶೆ. ಮೀಮಾಂಸಾದರ್ಶನದಲ್ಲಿ ಎರಡು ಕವಲುಗಳು. ವೇದಗಳ ಸಂಹಿತಾ-ಬ್ರಾಹ್ಮಣಭಾಗವನ್ನು ಆಧರಿಸಿ ಯಜ್ಞಯಾಗಾದಿಗಳ ವ್ಯಾಖ್ಯಾನಕ್ಕೆ ನಿಷ್ಠವಾದುದು ‘ಪೂರ್ವಮೀಮಾಂಸಾ’; ಉಪನಿಷತ್ತುಗಳ ಸಂದೇಶವನ್ನು ಸ್ವೀಕರಿಸಿ ಸತ್ಯಸಾಕ್ಷಾತ್ಕಾರವನ್ನು ಕಂಡುಕೊಳ್ಳುವುದು ‘ಉತ್ತರಮೀಮಾಂಸಾ’.ಜೈಮಿನಿಮಹರ್ಷಿಯನ್ನು ಪೂರ್ವ ಮೀಮಾಂಸಾದರ್ಶನದ ಮೂಲ ಪ್ರವರ್ತಕನನ್ನಾಗಿ ಗುರುತಿಸುವುದುಂಟು.

ನಮ್ಮ ಪ್ರಾಚೀನರು ತರ್ಕಿಸದೆ, ವಿಶ್ಲೇಷಿಸದೆ ಯಾವುದನ್ನೂ ಕುರುಡು ನಂಬಿಕೆಯಿಂದ ಒಪ್ಪುತ್ತಿರಲಿಲ್ಲ. ತರ್ಕ-ವಿತರ್ಕಗಳು ಸದಾ ಇರುತ್ತಿದ್ದವು; ಕುತರ್ಕ ಅಥವಾ ದುಸ್ತರ್ಕಗಳು ಇರಲಿಲ್ಲ. ಜಿಜ್ಞಾಸೆಗೊಳಗಾದ ಪೂರ್ವ ಮೀಮಾಂಸಾ ದರ್ಶನವು ಮುಂದೆ ಭಾಟ್ಟಮತ, ಪ್ರಾಭಾಕರಮತ ಮತ್ತು ಮುರಾರಿಮತ ಎಂದು ಮೂರು ಕವಲಾಗಿ ಬೆಳೆಯಿತು. ವೇದವಾಕ್ಯಗಳಿಗೆ ಅರ್ಥವನ್ನು ಕಂಡುಕೊಂಡು ಅವು ಪ್ರತಿಪಾದಿಸುವ ಕರ್ಮಗಳನ್ನು ಶ್ರದ್ಧೆಯಿಂದ ಆಚರಿಸುವಂತೆ ಪ್ರತಿಪಾದಿಸುವುದೇ ಈ ದರ್ಶನದ ನಿಲುವು.

[ಉತ್ತರ]ಮೀಮಾಂಸಾ ಅಥವಾ ವೇದಾಂತ ದರ್ಶನ: ದರ್ಶನ ಎಂದರೆ ವೇದಾಂತದರ್ಶನವೇ ಹೌದು ಎನ್ನುವಷ್ಟರ ಮಟ್ಟಿಗೆ ಈ ದರ್ಶನದ ಹಿರಿಮೆಯಿದೆ. ಉಪನಿಷತ್ತುಗಳು ಪ್ರತಿಪಾದಿಸುವ ಜೀವನರಹಸ್ಯವನ್ನು ವಿಶ್ಲೇಷಿಸಿ, ಅದನ್ನು ಪುನಃ ಅನುಭವದಲ್ಲಿ ಕಂಡುಕೊಳ್ಳುವಂಥ ಅರಿವನ್ನೂ, ಸಾಧನವನ್ನೂ ಒದಗಿಸುವುದು ಈ ದರ್ಶನದ ಪ್ರಧಾನ ನೆಲೆ. ಬಾದರಾಯಣರ‘ಬ್ರಹ್ಮಸೂತ್ರ’ವೇ ಇದಕ್ಕೆ ಆಕರ ಎಂದು ತಿಳಿಯಲ್ಪಟ್ಟಿದೆ. ಮಹಾಭಾರತವನ್ನು ಬರೆದ ವೇದವ್ಯಾಸರೇ ಈ ಬಾದರಾಯಣರು ಎಂಬ ಭಾವನೆಯೂ ಉಂಟು. ಉಪನಿಷತ್ತುಗಳು, ಬ್ರಹ್ಮಸೂತ್ರ ಮತ್ತು ಭಗವದ್ಗೀತೆ – ಈ ದರ್ಶನದ ಪ್ರಮಾಣಗ್ರಂಥಗಳು.

ತಪಸ್ಸು ಅಥವಾ ಭಗವದನುಗ್ರಹದಿಂದ ಅತೀಂದ್ರಿಯ ಶಕ್ತಿಗಳನ್ನು ಪಡೆಯಬಹುದೆನ್ನುವ ನಂಬಿಕೆಯು ಬಹು ಪುರಾತನವಾದದ್ದು. ಪತಂಜಲಿಯು ಸತ್ಯಾನ್ವೇಷಣ ಪಥಿಕರ ಮನದಲ್ಲಿ ಸ್ಥಿರ ನಂಬಿಕೆಯನ್ನುಂಟು ಮಾಡಲು ತನ್ನ ಎರಡನೆಯ ಮತ್ತು ಮೂರನೆಯ ಅಧ್ಯಾಯದಲ್ಲಿ ಇಂತಹ ಹಲವಾರು ವಿಶೇಷ ಶಕ್ತಿಗಳ ಬಗ್ಗೆ ಉಲ್ಲೇಖಿಸಿದ್ದಾನೆ.

ಉದಾಹರಣೆಗೆ-ಯೋಗಸಿದ್ಧಿಯನ್ನು ಪಡೆದು ಸಂಪೂರ್ಣವಾಗಿ ಅಹಿಂಸಾ ಗುಣಗಳನ್ನು ಒಂದಾ ಮಹಾಪುರುಷನ ಸನ್ನಿಧಿಯಲ್ಲಿ ಪರಸ್ಪರ ವೈರತ್ವವಿರುವ (ಹುಲಿ ಮತ್ತು ಹಸು) ಪ್ರಾಣಿಗಳೂ ಕೂಡ ಶಾಂತಿ ಮತ್ತು ಸೌಹಾರ್ದತೆಗಳಿಂದ ಜೀವಿಸುತ್ತವೆ. ಸತ್ಯವನ್ನೇ ಆಚರಿಸುವ ವ್ಯಕ್ತಿಯ ಮಾತು ಸುಳ್ಳಾಗುವುದಿಲ್ಲ. ಯಾವ ವ್ಯಕ್ತಿಯು ಕಠಿಣವಾಗಿ ಅಪರಿಗ್ರಹವನ್ನು(ದಾನವನ್ನು ಸ್ವೀಕರಿಸುವುದಿಲ್ಲವೋ) ಪರಿಪಾಲಿಸುತ್ತಾನೆಯೋ ಅವನಿಗೆ ತನ್ನ ಪೂರ್ವ ಜನ್ಮದ ಜ್ಞಾನವುಂಟಾಗುತ್ತದೆ ಮತ್ತು ಅವನು ತನ್ನ ಮುಂದಿನ ಜನ್ಮಗಳ ಬಗ್ಗೆಯೂ ತಿಳಿದುಕೊಳ್ಳಬಲ್ಲ (ನೋಡಿ ಯೋಗಸೂತ್ರ ೨.೩೫,೩೬ ಮತ್ತು ೩೯).

’ಸಂಯಮ’ದಿಂದ ಯೋಗಿಗೆ ಹಲವಾರು ಅತೀಂದ್ರಿಯ ಶಕ್ತಿಗಳು ಪ್ರಾಪ್ತವಾಗುತ್ತವೆ. ಉದಾಹರಣೆಗೆ, ಪಂಚಭೂತಗಳಾದ ಪೃಥ್ವಿ(ಭೂಮಿ) ಮತ್ತು ಅಪ(ನೀರು) ಇವುಗಳ ಮೇಲಿನ ’ಸಂಯಮ’ದಿಂದ ಯೋಗಿಯು ಅಣಿಮಾ-ಗರಿಮಾದಿ ಅಷ್ಟಸಿದ್ಧಿ ಅಥವಾ ಎಂಟು ವಿಧದ ಶಕ್ತಿಯನ್ನು ಪಡೆಯುತ್ತಾನೆ.

ಸಿದ್ಧಿಯೆಂದರೆ ಕೆಲಸ ಕೈಗೂಡುವುದು (ಕ್ರಿಯಾಸಿದ್ಧಿ). ಸಾಮಾನ್ಯವಾಗಿ ಈ ಮಾತನ್ನು ಅಲೌಕಿಕವಾಗಿರುವ ಕೌಶಲಗಳನ್ನು ಪಡೆಯುವುದಕ್ಕೆ ಬಳಸುತ್ತಾರೆ. ಸಿದ್ಧಿಯೆಂದರೆ ತುಂಬ ಚಮತ್ಕಾರದ ಅದ್ಭುತಶಕ್ತಿ. ತಪಶ್ಚರ್ಯೆಯಿಂದಲೋ ಮಂತ್ರತಂತ್ರಗಳ ಅನುಸಂಧಾನದಿಂದಲೋ ದೈವಿಕ ಅನುಗ್ರಹದಿಂದಲೋ ಮನುಷ್ಯರು ಪಡೆಯುವ ವಿಶೇಷಸಾಮರ್ಥ್ಯ.

ಅಣಿಮಾ – ದೇಹವನ್ನು ಅತಿ ಚಿಕ್ಕ (ಪರಮಾಣುವಿನ) ಗಾತ್ರಕ್ಕೆ ಇಳಿಸುವದು
ಲಘಿಮಾ – ಅತಿ ಕಡಿಮೆ (ಭಾರರಹಿತ) ಹಗುರಾಗುವದು
ಮಹಿಮಾ – ದೇಹವನ್ನು ಅತಿ ದೊಡ್ಡ (ಅನಂತವಾದ) ಗಾತ್ರಕ್ಕೆ ಹೆಚ್ಚಿಸುವದು
ಗರಿಮಾ – ಅತಿ (ಅನಂತದಷ್ಟು) ಭಾರವಾಗಿರುವದು
ಪ್ರಾಪ್ತಿ – ಎಲ್ಲ ಸ್ಥಳಗಳಿಗೂ ಅನಿರ್ಬಂಧಿತವಾದ ಪ್ರವೇಶ ದೊರಕಿಸಿಕೊಳ್ಳುವದು
ಪ್ರಾಕಾಮ್ಯ – ಇಷ್ಟಪಟ್ಟಿದ್ದನ್ನು ದೊರಕಿಸಿಕೊಳ್ಳುವದು
ಈಶಿತ್ವ – ಎಲ್ಲದರ ಮೇಲೆ ಸಂಪೂರ್ಣವಾದ ಒಡೆತನ ಹೊಂದುವದು
ವಶಿತ್ವ – ಎಲ್ಲವನ್ನು ಜಯಿಸುವ ಶಕ್ತಿ ಹೊಂದುವದು

ಯೋಗಮಾರ್ಗದಲ್ಲಿ ಹಠಯೋಗವನ್ನು ಹಿಡಿದವರು ಈ ಸಿದ್ಧಿಗಳನ್ನು ಪಡೆಯುತ್ತಾರೆಂದು ನಂಬಿಕೆ. [ಹನುಮಾನ್ ಚಾಲೀಸ ಪಠಿಸುವವರು ಈ ಅಷ್ಟಸಿದ್ಧಿಗಳನ್ನು ಹನುಮಂತ ನೀಡುವನೆಂದು ನಂಬುತ್ತಾರೆ. ಹಾಗಾಗಿಯೇ ನಾವು ಹನುಮಾನ್ ಚಾಲೀಸ್ ಪಠಿಸುವುದಕ್ಕೆ ಹೇಳಿದ್ದೇವೆ.]

’ಅಣಿಮಾ’, ’ಮಹಿಮಾ’ ಮೊದಲಾದವು(ಯೋಗಸೂತ್ರ 3.44,45)ಗಳ ಜೊತೆಗೆ. ಆ ಕೃತಿಯಲ್ಲಿ ಹೆಸರಿಸಿರುವ ಇನ್ನೂ ಕೆಲವು ಸಿದ್ಧಿಗಳೆಂದರೆ: ಆಲೋಚನೆಯನ್ನು ಗ್ರಹಿಸುವುದು, ನೋಟದಿಂದ ಕಣ್ಮರೆಯಾಗುವುದು, ಅಸದಳ ಶಕ್ತಿಯನ್ನು ಹೊಂದುವುದು, ಪಶು-ಪಕ್ಷಾದಿಗಳ ಭಾಷೆಯನ್ನು ಅರಿತುಕೊಳ್ಳುವುದು, ಮೊದಲಾದವು.

ಪ್ರಕಾಂಡ ಮನೋವಿಜ್ಞಾನಿಯಾಗಿದ್ದ ಪತಂಜಲಿಯು ಇವುಗಳನ್ನೆಲ್ಲ ವಿವರಿಸಿದರೂ ಅವುಗಳನ್ನು ಹೊಂದುವುದರಲ್ಲಿ ಆಸಕ್ತಿಯನ್ನು ತಳೆಯಬಾರದೆಂದು ಯೋಗಾಸಕ್ತರಿಗೆ ಎಚ್ಚರಿಸುತ್ತಾನೆ. ಯಾಕೆಂದರೆ ಅವುಗಳ ಪ್ರಲೋಭನೆ ಅಥವಾ ಸೆಳೆತಕ್ಕೆ ಸಿಕ್ಕ ಯೋಗಾಭ್ಯಾಸಿಯು ಅವನ ಗುರಿಯಾದ ’ಕೈವಲ್ಯ’ ಅಥವಾ ’ಮುಕ್ತಿ’ಯನ್ನು ಪಡೆಯುವ ಮಾರ್ಗದಿಂದ ವಿಮುಖನಾಗಿಬಿಡುತ್ತಾನೆ. ಆದರೆ ಒಮ್ಮೆ ’ಕೈವಲ್ಯ’ ಸ್ಥಿತಿಯನ್ನು ಪಡೆದ ವ್ಯಕ್ತಿಯು ತನ್ನ ’ಪ್ರಾರಬ್ಧ ಕರ್ಮ’(ಈ ಜನ್ಮಕ್ಕೆ ಕಾರಣವಾದ ಕರ್ಮ)ಕ್ಕೆ ಅನುಸಾರವಾಗಿ ಇನ್ನೂ ಸ್ವಲ್ಪ ಕಾಲ ಜೀವಿಸಬಹುದು. ಈ ಸ್ಥಿತಿಯಲ್ಲಿ ಅವನು ಯಾವುದೇ ಪ್ರಮಾದವಿಲ್ಲದೆ ಈ ಶಕ್ತಿಗಳನ್ನು ಮಾನವಸಂತತಿಯ ಒಳಿತಿಗಾಗಿ ಬಳಸಬಹುದು.

ಇತ್ತೀಚೆಗಿನ ಸಾಧು-ಸಂತರಲ್ಲಿ ಭಗವಾನ್ ಶ್ರೀಧರ ಸ್ವಾಮಿಗಳು ಯೋಗ ಸಾಧನೆಯಿಂದ ಮೇಲೆ ಹೇಳಿದ ಅಷ್ಟಸಿದ್ಧಿಗಳನ್ನು ಪಡೆದುಕೊಂಡಿದ್ದರು ಎಂಬುದು ಹಲವರ ಅನುಭವಕ್ಕೆ ನಿಲುಕಿದ ವಿಷಯ. ಮಕ್ಕಳ ಸಮುದಾಯ ಅವರನ್ನು ಮುತ್ತಿಕೊಂಡು ಬಹಳ ಹೊತ್ತಾದರೆ ಮಕ್ಕಳ ಕುತೂಹಲವನ್ನು ನಿವಾರಿಸಿ ಮೈದಡವಿ, ಅವರೆಲ್ಲ ಅರೆಕ್ಷಣ ಆಚೀಚೆ ನೋಡುವುದರಲ್ಲಿದ್ದಾಗ ಶ್ರೀಧರರು ಅಲ್ಲಿಂದ ಬಹುದೂರ ಸಾಗುತ್ತಿದ್ದರಂತೆ.

ಕರಿಕಾನ್ ಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರದ ನಂತರ, ಶಿಥಿಲಗೊಂಡ ಮುರುಡೇಶ್ವರ ದೇವಸ್ಥಾನವನ್ನೂ ಜೀರ್ಣೋದ್ಧಾರ ಮಾಡಬೇಕೆಂದು ಅಂದಿನ ಭಕ್ತರು ಭಿನ್ನವಿಸಿದಾಗ, “ಮೂವತ್ತು ವರ್ಷಗಳ ತರುವಾಯ ಮುರುಡೇಶ್ವರ ಅತ್ಯಂತ ವೈಭಯುತ ಕಟ್ಟಡವನ್ನು ಪಡೆಯುತ್ತದೆ” ಎಂದು ಅಂದೇ ಅವರು ಹೇಳಿದ್ದರಂತೆ. ಅವರ ಚರಿತ್ರೆಯಲ್ಲಿ ಹೇಳಿರುವ ಸಾವಿರಾರು ಘಟನೆಗಳು ಅವರೊಬ್ಬ ಸಿದ್ಧ ಪುರುಷರು ಎಂಬುದನ್ನು ಸಾಬೀತುಪಡಿಸುತ್ತವೆ.

ನಾಲ್ಕೈದು ವರ್ಷಗಳ ಹಿಂದೆ ಬ್ರಹ್ಮೈಕ್ಯರಾದ ಸಖರಾಯಪಟ್ಟಣದ ಅವಧೂತರು ವ್ಯಕ್ತಿಯನ್ನು ನೋಡಿದಾಗ ಪೂರ್ವಾಪರಗಳನ್ನು ಹೇಳುತ್ತಿದ್ದರಂತೆ. ಹೀಗೆಯೇ, ಸಿದ್ಧ ಪುರುಷರ ಉದಾಹರಣೆಗಳು ಅನೇಕ. ಆದರೆ ಶಕ್ತಿಯನ್ನು ಸ್ವಾರ್ಥಕ್ಕಾಗಿ ಅವರು ಬಳಸಿಕೊಳ್ಳಲಿಲ್ಲ.

ಯೋಗದ ನಾಲ್ಕನೇ ಹಂತದಿಂದಲೇ ಬಹಳ ಬದಲಾವಣೆಗಳು ಗೋಚರಿಸುತ್ತವೆ. ಸಿದ್ಧಿಯನ್ನು ಕೈವಲ್ಯಕ್ಕಾಗಿ ಬಳಸುವ ಜನ ಅದನ್ನು ನಷ್ಟಮಾಡಿಕೊಳ್ಳುವುದಿಲ್ಲ, ಸಿದ್ಧಿಯನ್ನು ದುರುಪಯೋಗ ಮಾಡಿದ ಜನ ಕೈವಲ್ಯವನ್ನು ಹೊಂದಲು ಸಾಧ್ಯವಿಲ್ಲ.

ಈ ವಿಷಯಗಳು ನಮಗೆ ಗೊತ್ತಿಲ್ಲ. ನಮಗೆ ಈಗ ಅರ್ಹೆಂಟಾಗಿ ಅಣಿಮಾದಿ ಶಕ್ತಿಗಳನ್ನು ಪಡೆದುಕೊಳ್ಳುವ ತಹತಹ ಹುಟ್ಟಿದೆ. ನಾಳೆ ಪರಪ್ಪ ವನಕ್ಕೆ ಹೋದರೂ ಸೂಕ್ಷ್ಮ ಶರೀರಿಯಾಗಿ ಹೊರಗಡೆಗೆ ಬಂದು ಮತ್ತೆ ಮೂಲ ಶರೀರವನ್ನು ಪಡೆದು, ಸಾವಿರಾರು ಸಖಿಯರೊಡನೆ ’ಸುಖ’ವನ್ನು ಪಡೆಯಬಹುದು ಎಂಬುದು ನಮ್ಮ ಇರಾದೆ.”

Thumari Ramachandra

source: https://www.facebook.com/groups/1499395003680065/permalink/1631641603788737/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s