ನಾನಾರೊ ನಾನರಿಯೆನು…..ನಿಮಗಿನ್ನೇನು ಪ್ರವಚನ ಹೇಳಿಯೇನು?

ನಾನಾರೊ ನಾನರಿಯೆನು…..ನಿಮಗಿನ್ನೇನು ಪ್ರವಚನ ಹೇಳಿಯೇನು?

ವೈದ್ಯಕೀಯ ವಿಜ್ಞಾನವು ಅಂಗಾಂಗಗಳನ್ನು ಬದಲಿಸುವಷ್ಟು ಮುಂದುವರೆದು, ಮನುಷ್ಯ ಚಂದ್ರ ಮತ್ತು ಮಂಗಳಲೋಕಕ್ಕೆ ತಿರುಗಾಡುವಷ್ಟು ಬೆಳೆದಿದ್ದರೂ ಸತ್ತ ಇರುವೆಯನ್ನು ಬದುಕಿಸಿದ ಪ್ರಸಂಗ ನಮ್ಮೆದುರು ಇದುವರೆಗೂ ನಡೆದಿಲ್ಲ. ಹೃದಯವನ್ನೋ ಕಿಡ್ನಿಯನ್ನೋ ತೆಗೆದು ಹೊಸದನ್ನು ಹಾಕಬಹುದು,ಆದರೆ ಹೋದ ಪ್ರಾಣವನ್ನು ತರಲು ಸಾಧ್ಯವಿಲ್ಲ. ಪ್ರಾಣವೆಂದರೇನು? ಅದು ಎಲ್ಲಿರುತ್ತದೆ? ಕೊಲೆ ಮಾಡಿದರೆ, ಅತ್ಯಾಚಾರ ಮಾಡಿದರೆ ತಾನು ಜೈಲಿಗೆ ಹೋಗುತ್ತಾನೆ, ಶಿಕ್ಷೆ ಅನುಭವಿಸುತ್ತಾನೆ, ಮಾನ ಮರ್ಯಾದೆ ಹೋಗುತ್ತದೆ ಎಂದು ಗೊತ್ತಿದ್ದರೂ ಮನುಷ್ಯ ಮತ್ತೆ ಅಂತಹ ಕೆಲಸಗಳಲ್ಲೇ ತೊಡಗಿಕೊಳ್ಳುವುದೇಕೆ?

ಮನುಷ್ಯ ದೇಹದ ರಚನೆಯನ್ನು ಗಮನಿಸಿದರೆ, ಅದರ ಕಾರ್ಯ ವಿಧಾನವನ್ನು ಅವಲೋಕಿಸಿದರೆ ಆಶ್ಚರ್ಯವಾಗುತ್ತದೆ,ಇಂಥ ಅದ್ಭುತ ದೇಹ ತನ್ನಿಂದ ತಾನೇ ಉಂಟಾಯಿತೇ? ಇದಕ್ಕೆ ಯಾರು ಕತೃ? ಇಷ್ಟೊಂದು ಸಂಕೀರ್ಣವಾಗಿರುವ ದೇಹದ ಉಗಮ ಕೇವಲ ಕಾಮದಿಂದ ಅಥವಾ ಹೆಣ್ಣು-ಗಂಡಿನ ಸಂಯೋಜನೆಯಿಂದ ಮಾತ್ರ ಆಗುತ್ತದೆಯೇ? ಅಥವಾ ಇದಕ್ಕೆಲ್ಲ ಬೇರಾವುದೋ ಪ್ರಚೋದನಾ ಶಕ್ತಿ ಇದೆಯೇ? ಅಷ್ಟಕ್ಕೂ ಜೀವನವನ್ನು ಬಾಲ್ಯಾವಸ್ಥೆ, ಯೌವನಾವಸ್ಥೆ, ವೃದ್ಧಾವಸ್ಥೆ ಎಂದು ವಿಂಗಡಿಸಿದವರಾರು? 18 ನೇ ವಯಸ್ಸಿಗೆ ಬೇಡವೆಂದರೂ ವಯಸ್ಕರಾಗುತ್ತೇವೆ, 50ನೇ ವಯಸ್ಸಿಗೆ ಬೇಡವೆಂದರೂ ಮುದುಕರಾಗುತ್ತೇವೆ, ಹೇಗೆ? ನಾವು ಕಾಣುತ್ತಿರುವ ಬ್ರಹ್ಮಾಂಡದ ತಳವೆಲ್ಲಿ? ಉಗಮವಾಗಿದ್ದು ಯಾವಾಗ? ಮತ್ತು ಇದರ ಗಮ್ಯವೆಲ್ಲಿ? ಇದರ ನಿಗಮಾಗಮದ ಉದ್ದಿಶ್ಯವೇನು? ನೀಲಾಕಾಶದ ಆಚೆ ಏನಿದೆ?

ಮನುಷ್ಯನಿಗೆ ಭವಿಷ್ಯವನ್ನು ಗ್ರಹಿಸುವ ಶಕ್ತಿ ನಿಜಕ್ಕೂ ಇದೆಯೇ? ದೂರದಲ್ಲೆಲ್ಲೊ ಇರುವ ಗ್ರಹಗಳು ಮನುಷ್ಯನ ಭವಿಷ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ? ಅವು ಕೇವಲ ಭೂಮಿಯಂಥದೇ ಆಕಾಶಕಾಯಗಳೆಂದು ಮತ್ತು ಪರಿಭ್ರಮಿಸುವಂಥವುಗಳೆಂದು ವಿಜ್ಞಾನವು ಹೇಳಿದ್ದರೂ ಅವು ನಮ್ಮ ಜೀವನದ ಮೇಲೆ ಪರಿಣಾಮ ಬೀರುವವೆಂದು ನಿತ್ಯವೂ ಜ್ಯೋತಿಷಿಗಳು ಹೇಳುವುದೇಕೆ? ಜ್ಯೋತಿಷ್ಯಕ್ಕೆ ಅರ್ಥವಿಲ್ಲವೇ? ಸುಳ್ಳಾದರೆ ಅವರೇಕೆ ಸುಳ್ಳನ್ನು ಹೇಳುತ್ತಾರೆ? ಸತ್ಯವಾದರೆ ಅವರೇಕೆ ಸತ್ಯವನ್ನು ನೂರಕ್ಕೆ ನೂರು ನಿಖರವಾಗಿ ನಿರೂಪಿಸಿ ತೋರಿಸುವುದಿಲ್ಲ?

ಹೋಗಲಿ ವಿಜ್ಞಾನವೇ ಸರಿಯೆನ್ನೋಣವೇ? ಆಕಾಶದ ಬುಡ ತುದಿಗಳನ್ನೋ ಆಳ ಅಗಲಗಳ ಅಳತೆಯನ್ನೋ ಹೇಳುವುದು ವಿಜ್ಞಾನಕ್ಕೆ ಇಲ್ಲಿಯವರೆಗೂ ಸಾಧ್ಯವಾಗಿಲ್ಲ. ಗುರುತ್ವ ಪೊಳ್ಳುಗಳ ಅಚೆ ಏನಿದೆಯೆಂದು ವಿಜ್ಞಾನಕ್ಕೆ ತಿಳಿದಿಲ್ಲ. ಅಲ್ಲಿಂದಾಚೆಗೆ ಹೋದ ವಸ್ತು ಅಥವಾ ವ್ಯಕ್ತಿಗಳು ಎಲ್ಲಿಗೆ ಹೋಗುತ್ತಾರೆ? ಯಾವುದರಲ್ಲಿ ಸಿಲುಕಿಕೊಳ್ಳುತ್ತಾರೆ? ಎಂಬುದನ್ನು ವಿಜ್ಞಾನ ಹೇಳೋದಿಲ್ಲ. ಬ್ರಹ್ಮಾಂಡಕ್ಕೆ ನಿಜಾರ್ಥದಲ್ಲಿ ಜೀವನಾಧಾರವಾದ ಸೂರ್ಯನನ್ನು ನಕ್ಷತ್ರವೆಂದ ವಿಜ್ಞನಾಕ್ಕೆ ಸೂರ್ಯನೊಳಗೆ ಏನಿದೆಯೆಂಬ ಪರಿಪೂರ್ಣ ಮಾಹಿತಿ ಸಿಕ್ಕಿಲ್ಲ. ಅವನ ಸುತ್ತ ತಮ್ಮ ತಮ್ಮ ಕಕ್ಷೆಗಳಲ್ಲಿ ನಿಯಮಬದ್ಧವಾಗಿ ಕೆಲಸ ನಿರ್ವಹಿಸುವ ಆಕಾಶ ಕಾಯಗಳ ನಿಯಂತ್ರಣ ಎಲ್ಲಿದೆ ಎಂಬುದು ವಿಜ್ಞಾನದ ಹಲ್ಲಲ್ಲಿ ಹಿಟ್ಟಾಗುವ ಕಡಲೆಯಲ್ಲ. ಹಾಗಾದರೆ ವಿಜ್ಞಾನವನ್ನು ನಂಬಬಾರದೆ? ಈಗ ಬಳಸುತ್ತಿರುವ ಎಲ್ಲಾ ಆವಿಷ್ಕಾರಗಳು ವಿಜ್ಞಾನದ ಕೊಡುಗೆಗಳೇ ಎಂದಮೇಲೆ ವಿಜ್ಞಾನವನ್ನು ನಂಬಬೇಕೋ? ಬಿಡಬೇಕೋ? ನಂಬಬೇಕೆಂದರೆ ಕಾರಣವೇನು? ನಂಬಬಾರದು ಎಂಬುದಕ್ಕೆ ಸಮಜಾಯಿಷಿಯೇನು?

ಈ ಬ್ರಹ್ಮಾಂಡದಲ್ಲಿ ಇದ್ದಾವೆಂದು ಹೇಳಲಾದ 80 ಕೋಟಿ ಜೀವ ಪ್ರಭೇದಗಳಲ್ಲಿ ಗಂಡು, ಮತ್ತು ಹೆಣ್ಣನ್ನು ವಿಭಾಗಿಸಿದವರಾರು? ಗಂಡು ಮತ್ತು ಹೆಣ್ಣುಗಳಲ್ಲಿ ದೇಹರಚನೆಗಳಲ್ಲಿ ವ್ಯತ್ಯಾಸ ಇರುವುದೇಕೆ? ಹೆಣ್ಣು-ಗಂಡುಗಳ ಸಮ್ಮಿಲನದಿಂದ ಮಾತ್ರ ಸಂತಾನೋತ್ಪತ್ತಿ ನಡೆಯಬೇಕೆಂದು ನಿರ್ಣಯಿಸಿದ ಮಹನೀಯ ರಸಾಯನ ಶಾಸ್ತ್ರಜ್ಞನಾರು? ಹೆಣ್ಣು-ಗಂಡುಗಳ ಮಧ್ಯೆ ಆಕರ್ಷಣೆಯನ್ನು ಇಟ್ಟು ಅಟ್ಟದಮೇಲೆಲ್ಲೋ ಅವಿತು ಕುಳಿತು ನೋಡುತ್ತ ಮಜಾ ತೆಗೆದುಕೊಳ್ಳುವವನಾರು?

ಪ್ರತಿ ಹೆಣ್ಣಿಗೂ ಇರುವ ಅದೇ ಅಂಗಗಳನ್ನು ಪುರುಷನು ಎಷ್ಟು ಬಾರಿ ನೋಡಿದರೂ ಮತ್ತೆ ಪದೇ ಪದೇ ಅದನ್ನೇ ನೋಡುವದೇಕೆ? ಅದನ್ನೇ ಅಥವಾ ಅಂಥದನೇ ನೋಡಲು ಬಯಸುವುದೇಕೆ? ಅಯಸ್ಕಾಂತೀಯ ಆಕರ್ಷಣ ಶಕ್ತಿ ಆ ಅಂಗಗಳಿಗೆ ಎಲ್ಲಿಂದ ಬಂತು? ಇದರಿಂದ ಬಿಡುಗಡೆ ಹೊಂದುವದು ಸಾಧ್ಯವಿಲ್ಲವೇ? ಇದು ಪ್ರಕೃತಿಯ ಧರ್ಮವೇ? ಅಥವಾ ನಮ್ಮ ನ್ಯೂನತೆಯೇ? ಹೀಗೇ ಆಗಬೇಕೆಂದು ನಿರ್ಣಯಿಸಿದವರಾರು? ಮನೆಯಲ್ಲಿ ತಮಗಿಂತ ಕೇವಲ ಎರಡು ವರ್ಷ ಸಣ್ಣ ವಯಸ್ಸಿನ ತಂಗಿಯಿದ್ದರೂ ಸಹ ಅವಳನ್ನು ತಂಗಿಯನ್ನಾಗಿಯೇ ನೋಡುವ ಹುಡುಗರು ಕಾಲೇಜಿನಲ್ಲಿ ಅಷ್ಟೇ ವಯಸ್ಸಿನ, ಅಷ್ಟೆ ಎತ್ತರದ, ಅಷ್ಟೇ ದಪ್ಪದ ಹುಡುಗಿಯನ್ನು ನೋಡಿದಾಗ ಜೂನಿಯರ್ ಎನ್ನುವುದೇಕೆ? ಆಕೆಯಲ್ಲೇಕೆ ತಂಗಿಯ ಭಾವನೆ ಸಹಜವಾಗಿ ಬರುವುದಿಲ್ಲ?

ಈ ಬ್ರಹ್ಮಾಂಡದ ಉಗಮವಾಗಿ 460 ಕೋಟಿ ವರ್ಷಗಳು ಕಳೆದುಹೋದವೆಂದು ಹೇಳುತ್ತಾರೆ, 400 ಕೋಟಿ ಹಾಗಿರಲಿ, ಕಳೆದ 400 ವರ್ಷಗಳಲ್ಲಿ ಎಷ್ಟೊಂದು ಬದಲಾವಣೆಯನ್ನು ಸಾಧಿಸಿತಲ್ಲ ಇದು ಯಾವುದರ ಸೂಚನೆ? ಕಳೆದರ್ಧ ಶತಕದಲ್ಲಿ ಜಗತ್ತು ಬಹಳಷ್ಟು ವೇಗವಾಗಿ ದಾಪುಗಾಲು ಹಾಕುತ್ತಿರುವುದು ಯಾವ ಗುರಿಯತ್ತ? ಇವೆಲ್ಲವುಗಳ ಕುರಿತು ಧರ್ಮಗಳು ಹೇಳುವುದು ಒಂದು ರೀತಿ, ವಿಜ್ಞಾನ ಹೇಳುವುದು ಇನ್ನೊಂದು ರೀತಿ, ಯಾವುದು ಪರಮೋಚ್ಚ ಸತ್ಯ? ಯಾವುದನ್ನು ನಂಬಬೇಕು ಮತ್ತು ಯಾವುದನ್ನು ಬಿಡಬೇಕು? ನಂಬ ಬೇಕಾದುದಕ್ಕೆ ಕಾರಣವೇನು? ಬಿಡಬೇಕೆಂಬುದಾದರೆ ಅದಕ್ಕೆ ಕಾರಣವೇನು?

ಅಸಾಧ್ಯ ಪರಿಶ್ರಮಕ್ಕೆ ಪ್ರತಿಫಲವನ್ನು ನೋಡಲಸಧ್ಯವಾದರೆ ಅದಕ್ಕೇನೆನ್ನಬೇಕು? ಐಸಾಕ್ ನ್ಯೂಟನ್,ಐನ್ ಸ್ಟೈನ್ ಮುಂತಾದ ಮಹಾನ್ ವ್ಯಕ್ತಿಗಳು ಶ್ರಮಪಟ್ಟು ಹೊಸ ಹೊಸ ಸಂಗತಿಗಳನ್ನು ಬಯಲುಪಡಿಸಿzರಂತೆ. [ಅದಕ್ಕೂ ಮೊದಲು ಭಾರತೀಯ ಋಷಿಗಳು, ತತ್ವಜ್ಞಾನಿಗಳು ಅವರು ಹೇಳಿದ್ದನ್ನೇ ಇನ್ನೂ ಚೆನ್ನಾಗಿ ಹೇಳಿದ್ದರು-ನಮಗೆ ಅರ್ಥವಾಗಿಲ್ಲ ಎಂಬುದು ಬೇರೆ ಪ್ರಶ್ನೆ. ಅಂತಹ ಸಾಧಕರನ್ನು ನಾವಿಂದು ಹೊಗಳುವುದನ್ನು ಕೇಳಲಾಗಲೀ ಅವರಿಗಾಗುತ್ತಿರುವ ಸನ್ಮಾನವನ್ನು ನೋಡಲಾಗಲೀ ಅವರೇ ಇಲ್ಲವೆಂಬುದು ವಿಚಿತ್ರವಲ್ಲವೇ?

ಈ ಲೋಕದಲ್ಲಿ ಕೆಟ್ಟ ಕೆಲಸ ಮಾಡಿದವನು ಸ್ವಲ್ಪ ದಿನಗಳ ನಂತರ ಮರೆತು ಹೋಗುತ್ತಾನೆ, ಅವನ ಕೆಟ್ಟತನಕ್ಕೆ ನಾವೆಲ್ಲು ಅವನನ್ನು ಬೈದರೂ ಅವನಲ್ಲಿ ಬದಲಾವಣೆಗಳಿಲ್ಲ್ಲ, ಉಗುಳಿದರೂ ಅವನಿಗೆ ತಾಗುವುದಿಲ್ಲ. ಒಳ್ಳೆಯ ಕೆಲಸ ಮಾಡಿದ ಸಜ್ಜನನೂ ಕಾಲಾನಂತರದಲ್ಲಿ ಮರೆತುಹೋಗುತ್ತಾನೆ. ಸಜ್ಜನನೂ ಸಾಯುತ್ತಾನೆ, ದುರ್ಜನನೂ ಸಾಯುತ್ತಾನೆ, ಹಾಗಾದರೆ ಹುಟ್ಟಿದವರೆಲ್ಲ ಯಾತಕ್ಕಿಷ್ಟು ಪ್ರಯಾಸಪಡಬೇಕು?

ಆತ್ಮ ವೆಂದರೇನು? ಅದೆಲ್ಲಿರುತ್ತದೆ? ಅದಕ್ಕಿರುವ ಬಣ್ಣ, ರೂಪ, ಆಕಾರಗಳೇನು? ಅದರ ಕಾರ್ಯವಿಧಾನವೇನು? ಅದು ಒಳಗಿನಿಂದಲೇ ಬರುತ್ತದೆಯೇ? ಅಥವಾ ಹೊರಗಿನಿಂದ ಮತ್ತೊಬ್ಬರು ಅದನ್ನು ಶರೀರದೊಳಕ್ಕೆ ಕಳುಹಿಸುವರೋ? ಅವರವರ ಕೃತ್ಯಗಳ ಫಲವನ್ನು ಅವರವರು ಅನುಭವಿಸುತ್ತಾರೆ ಎಂಬುದು ಅನೇಕ ಬಾರಿ ಹಲವರಿಗೆ [ಅವರು ಹೇಳಿಕೊಳ್ಳದಿದ್ದರೂ]ಹಾಗೂ ನನಗೂ ಅನುಭವವಾಗಿದೆ; ಆದರೆ ಕೃತ್ಯಕ್ಕೆ ತಕ್ಕ ಫಲವನ್ನು ಅನುಭವಿಸುವಂತೆ ಮಾಡುವ ಚಿತ್ರಗುಪ್ತನಾರು? ಪ್ರತಿಯೊಂದು ಜೀವಿಯ ಸಕಲ ಕೃತ್ಯಗಳನ್ನೂ ನಮೂದಿಸಿಕೊಳ್ಳುವ ಅವನ ಗಣಕಯಂತ್ರ ಯಾವುದು? ಎಲ್ಲಕ್ಕೂ ಉತ್ತರ ದೇವರು ಎಂದಾದರೆ, ದೇವನಾರು?

ಒಂದು ಜೀವಿಯ ಪುನರುತ್ಪತ್ತಿಗೆ ಅಥವಾ ಒಬ್ಬ ಮನುಷ್ಯ ಹುಟ್ಟಬೇಕಾದರೆ ಕೇವಲ ಒಬ್ಬ ತಂದೆಯ ಶಕ್ತಿ ಸಾಕು, ಇಬ್ಬರು ತಂದೆಗಳ ಅಗತ್ಯ ಬೀಳುವುದಿಲ್ಲ್ಲ ಸರಿಯಷ್ಟೇ? ಹಾಗಾದರೆ ಈ ಬ್ರಹ್ಮಾಂಡದ ಉಗಮಕ್ಕೂ ಒಬ್ಬನಿರಲೇಬೇಕಲ್ಲವೇ? ಇದ್ದರೆ ಅವನಾರು? ಇಲ್ಲದಿದ್ದರೆ ಇದಕ್ಕೆ ಕಾರಣೀಭೂತವಾದ ಶಕ್ತಿ ಯಾವುದು? ಪ್ರಪಂಚದ ವಿವಿಧ ಮತಧರ್ಮಗಳು ನಾನಾ ರೀತಿಯಲ್ಲಿ ಹೇಳುವ ಪರಮಾತ್ಮನಾದರೂ ಯಾರು? ಆದಿ-ಅಂತ್ಯಗಳ ಕುರಿತಾದ ಪ್ರಶ್ನೆಗಳಿಗೆ ಇದಮಿತ್ಥಂ ಎಂಬ ಕರಾರುವಾಕ್ಕಾದ ಉತ್ತರ ನೀಡುವರಾರು?

ಹೆಚ್ಚುಕಡಿಮೆ 36,500 ದಿನಗಳು ಅಥವಾ 8,76,000 ಗಂಟೆಗಳು ತುಂಬಾ ಚಲನಶೀಲವಾಗಿರುವ ದೇಹ, ಅದರ ಅಂಗಗಳು ಸತ್ತಮೇಲೆ ಒಮ್ಮೆಲೇ ಸುಮ್ಮನಾಗಿ ಬಿಡುವುದರ ರಹಸ್ಯವೇನು? ನಮ್ಮ ಕಣ್ಣಿಗೆ ಕಾಣುವದು ಮಾತ್ರ ಪ್ರಪಂಚವೇ? ಕಣ್ಣಿಗೂ ಕಾಣದ ನಿಗೂಢ ಶಕ್ತಿಗಳು ಇವೆಯೇ? ಮನುಷ್ಯನಿಗೆ ಶಿಶುವಾಗಿರುವಾಗ ಮೊದಲು ಕೇಳುವ ಗುಡುಗಿನ ಸದ್ದಿನಿಂದ ಭಯ ಎಂಬ ಅನುಭೂತಿ ಆಗುತ್ತದೆ ಎಂದಾಯ್ತು. ಹಾಗಾದರೆ, ದೆವ್ವ-ಭೂತಗಳ ಪರಿಕಲ್ಪನೆಗಳು ಬಂದಿದ್ದಾದರೂ ಎಲ್ಲಿಂದ? ಅದೇ ಭಯದಿಂದಲೇ? ಅಥವಾ ಅವುಗಳ ಇರುವಿಕೆ ನಿಜವೇ?

ಹುಟ್ಟುವಾಗ ಆಗುವ ಅನುಭವವನ್ನು ತಿಳಿದುಕೊಳ್ಳಲು ನನಗಾಗಲೀ ನಿಮಗಾಗಲೀ ಆ ಪರಿಜ್ಞಾನ ಇರಲಿಲ್ಲ. ಸಾಯುವಾಗ ಏನಾಗುವದೆಂದು ತಿಳಿದುಕೊಳ್ಳುವಷ್ಟರಲ್ಲಿ ಪ್ರಾಯಶಃ ಈ ದೇಹ ಒಗೆದು ಹೋಗಿರುತ್ತೇವೆ. ಹಾಗಾದರೆ ನಾವೇನಾಗುತ್ತೇವೆ? ಪಂZಭೂತಗಳಲ್ಲಿ ವಿಲೀನವೇ? ಪರಕಾಯ ಪ್ರವೇಶವೇ? ಸ್ವರ್ಗವಾಸವೇ? ನರಕಯಾತನೆಯೇ? ಅಥವಾ ದೇವ್ವವೇ? ಭೂತವೇ? ಗಾಳಿಯಲ್ಲಿ ಸಂಚರಿಸುವ ಇನ್ನವುದೋ ಪಾರದರ್ಶಕ ರೂಪವೇ? ಅಥವಾ ಬ್ರಹ್ಮರಾಕ್ಷಸವೇ? ಈ ಪ್ರಶ್ನೆಗಳಿಂದ ಮನಸ್ಸು ದಣಿದಿದೆ,ತಲೆ ಗುಂಯ್ ಎನ್ನುತ್ತಿದೆ.ನಿಮ್ಮಲ್ಲಿ ಉತ್ತರವಿದ್ದರೆ ನನಗೆ ತಿಳಿಸಿ.

ಇಂತಹ ಅಸಂಖ್ಯ ಮೂಲಭೂತ ಪ್ರಶ್ನೆಗಳಿಗೆ ಸಮರ್ಪಕ ಮತ್ತು ನಿರ್ಣಾಯಕ ಉತ್ತರಗಳನ್ನು ಕಂಡುಕೊಳ್ಳಬಲ್ಲ ಚೇತನವೇ ಸನ್ಯಾಸಿಯೆನಿಸುತ್ತಾನೆ. ಇದನ್ನೆಲ್ಲ ಒಟ್ಟಾರೆ ಗಂಟು ಹಾಕಿ ’ಬ್ರಹ್ಮರಹಸ್ಯ’ ಎನ್ನಬಹುದು. ಬ್ರಹ್ಮರಸ್ಯವನ್ನು ಅರಿತಿದ್ದೇನೆಂದು ಭೋಂಗು ಬಿಡುವ ಸನ್ಯಾಸಿಗಳು ಇಂದು ಎಲ್ಲೆಲ್ಲೂ ಸಿಗುತ್ತಾರೆ.

ಇಂದಿನ ಹಲವು ಕಾವಿ ವೇಷಗಳಿಗೆ ಇಂತಹ ಪ್ರಶ್ನೆಗಳಿರಲಿ, ಆಧ್ಯಾತ್ಮದ ಗಂಧಗಾಳಿಯೇ ಇಲ್ಲ. ಹಿಂದೆ ಯಾರೋ ಹೇಳಿದ್ದನ್ನು ಇವರೂ ಬಡಬಡಿಸುತ್ತಿರುತ್ತಾರೆ; ಆಳವಾಗಿ ಪ್ರಶ್ನಿಸಲು ತೊಡಗಿದರೆ ಇಪ್ಪತ್ನಾಲ್ಕು ಗಂಟೆಯೊಳಗೆ ಉತ್ತರಿಸುತ್ತೇವೆ ಎನ್ನುತ್ತಾರೆ. ಇಪ್ಪತ್ನಾಲ್ಕು ಗಂಟೆಗಳಲ್ಲಿ ಸಖಿಯರೊಟ್ಟಿಗೆ ಇರಲು ಹದಿನೆಂಟು ಗಂಟೆಗಳಾದರೂ ಬೇಡವೇ? ಹಾಗಾದರೆ ಇಪ್ಪತ್ನಾಲ್ಕು ಗಂಟೆಗಳಲ್ಲಿ ಹೇಳುತ್ತೇವೆ ಎನ್ನುವುದು ’ಬೀಸುವ ದೊಣ್ಣೆಯನ್ನು ತಪ್ಪಿಸಿಕೊಂಡರೆ ನೂರು ವರ್ಷ ಆಯುಷ್ಯ’ ಅಂತಾರಲ್ಲ? ಹಾಗೆಯೇ.

Thumari Ramachandra

source: https://www.facebook.com/groups/1499395003680065/permalink/1630528680566696/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s