ಶಾಲೆಗೆ ಚಕ್ಕರ್, ಊಟಕೆ ಹಾಜರ್, ಲೆಕ್ಕಕೆ ಬರಿಸೊನ್ನೆ…

ಶಾಲೆಗೆ ಚಕ್ಕರ್, ಊಟಕೆ ಹಾಜರ್, ಲೆಕ್ಕಕೆ ಬರಿಸೊನ್ನೆ…
[ಇಂದು ನಿರ್ವಾಣ ಷಟ್ಕದ ಗಹನ ಆಧ್ಯಾತ್ಮ ವಿಚಾರ]

“ಸನ್ಯಾಸಿಯಾಗುವವನ ಮೊಟ್ಟ ಮೊದಲಿನ ಪ್ರಶ್ನೆ ನಾನು ಯಾರು? ನಾನು ಯಾರು ಎಂಬ ಸಂದೇಹಕ್ಕೆ ಉತ್ತರ ಹುಡುಕತೊಡಗುವವರು ಆಧ್ಯಾತ್ಮದ ಆಳಕ್ಕೆ ಹೋಗಬೇಕಾದ ಅನಿವಾರ್ಯತೆ ಬರುತ್ತದೆ. ಉತ್ತರದಾಯಿತ್ವ ಇರುವುದು ಸಾಧಕರಲ್ಲಿ ಮಾತ್ರ. ಸಾಮಾನ್ಯ ಸಾಧಕರೂ ತಾವು ಯಾರೆಂದು ಹೇಳಬಲ್ಲರಷ್ಟೇ ವಿನಃ ಇನ್ನೊಬ್ಬ ಯಾರು ಎಂದು ಹೇಳುವುದು ಕಷ್ಟ.

ನಾನು ಯಾರು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಹೊರಟ ಕೆಲವರು ಆಧ್ಯಾತ್ಮ ಪಥಿಕರಾಗುತ್ತಾರೆ. ನಾನು ಯಾರು ಎಂಬ ಸಮಸ್ಯೆಗೆ ಪರಿಹಾರ ಹುಡುಕ ಹೊರಡುವವರಿಗೆ ಜಾತಿ ಮತ ಭೇದಗಳಿಲ್ಲ. ಬೆಳಗೆರೆ ಕೃಷ್ಣಶಾಸ್ತ್ರಿಗಳು ’ಯೇಗ್ದಾಗೆಲ್ಲಾ ಐತೆ’ ಮೂಲಕ ಮುಕುಂದೂರು ಸ್ವಾಮಿಗಳನ್ನು ಪರಿಚಯಿಸಿದ್ದರು. ’ಯೇಗ್ದಾಗೆಲ್ಲಾ ಐತೆ’ ಎಂಬುದು ಮುಕುಂದೂರರ ಮಾತು; ಯೋಗದಲ್ಲೆ ಎಲ್ಲವೂ ಇದೆ ಎಂದರ್ಥ. ಮುಕುಂದೂರರ ತನ್ನೊಳಗಿನ ತನ್ನ ಬಗೆಗೆ ಹೇಳುವ ಸ್ವಾರಸ್ಯವನ್ನು ನೀವೆಲ್ಲ ಅರಿಯಬೇಕು.

ಇನ್ನೊಬ್ಬರು ಮಹಾನ್ ಸಾಧಕರು ಹೀಗೆ ಹೇಳಿದ್ದಾರೆ-“ಮೃಷ್ಟಾನ್ನ ಭೋಜನವೇ ಬೇಕು ಅಂತ ಹಠ ಹಿಡಿದಿದ್ದ, ಮೂರು ದಿನಗಳಿಂದ ಇಲ್ಲೇ ಕಟ್ಟಿಹಾಕಿದ್ದೇನೆ. ನದಿಯಲ್ಲಿ ಸ್ನಾನ ಮಾಡಿಸಿದೆ. ಈಗ ಹದಕ್ಕೆ ಬಂದಿದ್ದಾನೆ.” ಅವರ ಮಾತುಗಳನ್ನು ಕೇಳುತ್ತಿದ್ದವರು ಹಾಗೆ ಹಠ ಹಿಡಿದವ ಯಾರಿರಬಹುದು ಎಂದು ಸುತ್ತಮುತ್ತ ಹುಡುಕುತ್ತಿದ್ದರಂತೆ. ಆಗ ಅದೇ ಸಾಧಕರು ಅವರ ಕುತೂಹಲವನ್ನು ತಣಿಸಿದರು, “ಏ ಅಲ್ಯಾಕೆ ಹುಡುಕ್ತೀರಿ? ಇಲ್ಲೇ ಇದ್ದಾನವ, ನನ್ನೊಳಗೇ ಇದ್ದಾನೆ. ಈಗ ಮೃಷ್ಟಾನ ಕೊಡೆಂದು ಹೇಳುವುದನ್ನು ನಿಲ್ಲಿಸಿದ್ದಾನೆ.”

ಹಾಗಾದರೆ ಸಾಧಕರು ಹೇಳಿದ ವ್ಯಕ್ತಿ ಯಾರು? ಬೇರೆ ಯಾರಲ್ಲ. ಅದು ಅವರದ್ದೇ ಅಂತರಂಗ, ಅವರ ಜೀವಾತ್ಮ. ಜೀವಾತ್ಮನನ್ನು ಪರಮಾತ್ಮನನ್ನಾಗಿ ಪರಿವರ್ತಿಸುವುದು ಬಹಳ ಸುಲಭದ ಕೆಲಸವಲ್ಲ. ಸುಲಭವಾಗಿದ್ದರೆ ಜನ ಅಲ್ಲಿಯೂ ಮೀಸಲಾತಿ ಕೇಳುತ್ತಿದ್ದರು! ಆ ಪ್ರಯತ್ನದಲ್ಲಿ ತೇರ್ಗಡೆ ಹೊಂದುವವರೇ ವಿರಳ. ದೀಕ್ಷೆಯನ್ನೇನು ಯಾರು ಬೇಕಾದರೂ ಪಡೆಯಬಹುದು. ಔಪಚಾರಿಕವಾಗಿ ದೀಕ್ಷೆ ಪಡೆದ ಮಾತ್ರಕ್ಕೆ ಆತ ಸಾಧಕನಾಗುವುದಿಲ್ಲ, ಗುರುತ್ವವನ್ನು ಪಡೆದುಕೊಳ್ಳುವುದಿಲ್ಲ; ದೀಕ್ಷೆ ಪಡೆದಾತನನ್ನು ಜನ ಗುರು ಎಂದು ಗೌರವಿಸುವುದು ಜನರ ದೊಡ್ಡತನ.

ಭಗವಾನ್ ಶ್ರೀಧರ ಸ್ವಾಮಿಗಳಿಗೆ ಧಾರವಾಡ ಪೇಡೆಯೆಂದರೆ ಅತ್ಯಂತ ಪ್ರೀತಿಯಾಗಿತ್ತು. ಸನ್ಯಾಸ ಸ್ವೀಕಾರಕ್ಕೂ ಮುನ್ನ ಸಾಧು ಜೀವನದಲ್ಲಿದ್ದಾಗಲೇ ಅವರೊಮ್ಮೆ ಸ್ವಲ್ಪ ಪೇಡೆ ಖರೀದಿಸಿ ತಂದರು. ಅದಕ್ಕೊಂದಷ್ಟು ದನದ ಸಗಣಿಯನ್ನು ಮಿಶ್ರಣಮಾಡಿ ಸೇವಿಸಿದರು. ಕೆಲವು ನಿಮಿಷಗಳಲ್ಲೆ ತಿಂದದ್ದೆಲ್ಲ ವಾಂತಿಯಾಯಿತು. ಪೇಡೆಯನ್ನು ಕಂಡರೆ ಅವರ ಮನಸ್ಸು ಹೇಸುವಂತಾಯಿತು.

ಸಂಗ ಪರಿತ್ಯಾಗ ಎಂದರೆ ಹೀಗೆಯೇ ಇರುತ್ತದೆ. ಯಾವುದು ಬೇಕು? ಯಾವುದು ಬೇಡ? ಯಾವುದನ್ನು ಆತುಕೊಳ್ಳಬೇಕು? ಯಾವುದನ್ನು ತ್ಯಾಗಮಾಡಬೇಕು? ಇದೆಲ್ಲವನ್ನೂ ವಿರಾಗಿಯಾದವನು ಸಹಜವಾಗಿ ಬಲ್ಲ.

ನಾನು ಯಾರೆಂಬುದನ್ನು ಕೌತುಕಮಯವಾಗಿ ವಿವರಿಸುವ ಆದಿಶಂಕರರು ನಿರ್ವಾಣ ಷಟ್ಕದ ಮೂಲಕ ಅದನ್ನು ಪದಗಳಲ್ಲಿ ಬಂಧಿಸಿದ್ದಾರೆ.

ಮನೋ ಬುಧ್ಯಹಂಕಾರ ಚಿತ್ತಾನಿ ನಾಹಂ
ನ ಚ ಶ್ರೋತ್ರ ಜಿಹ್ವಾ ನ ಚ ಘ್ರಾಣನೇತ್ರಮ್ |
ನ ಚ ವ್ಯೋಮ ಭೂಮಿರ್-ನ ತೇಜೋ ನ ವಾಯುಃ
ಚಿದಾನಂದ ರೂಪಃ ಶಿವೋಹಂ ಶಿವೋಹಮ್ ||

ನಾನು ಮನಸ್ಸಲ್ಲ, ಬುದ್ಧಿಯಲ್ಲ, ಅಹಂಕಾರವಲ್ಲ, ಚಿತ್ತವೂ ಅಲ್ಲ
ಕಿವಿಯಲ್ಲ, ನಾಲಿಗೆಯಲ್ಲ, ಮೂಗಲ್ಲ, ನೇತ್ರದ್ವಯವಲ್ಲ,
ಆಕಾಶವಲ್ಲ, ಭೂಮಿಯಲ್ಲ, ಅಗ್ನಿಯಲ್ಲ, ವಾಯುವೂ ಅಲ್ಲ
ಯಾರು ನಾನು ಹಾಗಾದರೆ? ಚಿದಾನಂದ ರೂಪ ಶಿವನೇ ನಾನು

ಅಹಂ ಪ್ರಾಣ ಸಂಙ್ಞೋ ನ ವೈಪಂಚ ವಾಯುಃ
ನ ವಾ ಸಪ್ತಧಾತುರ್-ನ ವಾ ಪಂಚ ಕೋಶಾಃ |
ನವಾಕ್ಪಾಣಿ ಪಾದೌ ನ ಚೋಪಸ್ಥ ಪಾಯೂ
ಚಿದಾನಂದ ರೂಪಃ ಶಿವೋಹಂ ಶಿವೋಹಮ್ ||

ನಾನು ಪ್ರಾಣವಲ್ಲ, ಪಂಚ ವಾಯುವೂ ಅಲ್ಲ
ದೇಹದ ಸಪ್ತ ಧಾತುವಲ್ಲ, ಪಂಚಕೋಶವಲ್ಲ
ಮಾತಿನ ಸಾಧನವಲ್ಲ, ಪಾದವಲ್ಲ, ಹಸ್ತವಲ್ಲ, ನಿಲುವೂ ಅಲ್ಲ
ಚಿದಾನಂದ ರೂಪವಾದ ಶಿವನೇ ನಾನು ಶಿವನೇ ನಾನು

ನ ಮೇ ದ್ವೇಷರಾಗೌ ನ ಮೇ ಲೋಭಮೋಹೋ
ಮದೋ ನೈವ ಮೇ ನೈವ ಮಾತ್ಸರ್ಯಭಾವಃ |
ನ ಧರ್ಮೋ ನ ಚಾರ್ಧೋ ನ ಕಾಮೋ ನ ಮೋಕ್ಷಃ
ಚಿದಾನಂದ ರೂಪಃ ಶಿವೋಹಂ ಶಿವೋಹಮ್ ||

ನನಗೆ ರಾಗದ್ವೇಷವಿಲ್ಲ, ಲೋಭವೂ ಮೋಹವೂ ಇಲ್ಲ
ಸೊಕ್ಕೂ ಇಲ್ಲ ಮತ್ಸರವೂ ಇಲ್ಲ
ಧರ್ಮವಲ್ಲ, ಅರ್ಥವಲ್ಲ, ಕಾಮವಲ್ಲ, ಮೋಕ್ಷವಲ್ಲ
ಚಿದಾನಂದ ರೂಪವಾದ ಶಿವನೇ ನಾನು ಶಿವನೇ ನಾನು

ನ ಪುಣ್ಯಂ ನ ಪಾಪಂ ನ ಸೌಖ್ಯಂ ನ ದುಃಖಂ
ನ ಮಂತ್ರೋ ನ ತೀರ್ಧಂ ನ ವೇದಾ ನ ಯಙ್ಞಃ |
ಅಹಂ ಭೋಜನಂ ನೈವ ಭೋಜ್ಯಂ ನ ಭೋಕ್ತಾ
ಚಿದಾನಂದ ರೂಪಃ ಶಿವೋಹಂ ಶಿವೋಹಮ್ ||

ನನಗೆ ಪುಣ್ಯವಿಲ್ಲ, ಪಾಪವಲ್ಲ, ಸುಖವಲ್ಲ, ದುಃಖವಲ್ಲ,
ಮಂತ್ರವಲ್ಲ, ತೀರ್ಥವಲ್ಲ, ವೇದವಲ್ಲ, ಯಜ್ಞವಲ್ಲ
ಭೋಗವಲ್ಲ, ಭೋಗದ ವಸ್ತುವಲ್ಲ, ಭೋಗಿಸುವವನೂ ಅಲ್ಲ
ಚಿದಾನಂದ ರೂಪವಾದ ಶಿವನೇ ನಾನು ಶಿವನೇ ನಾನು

ನ ಮೃತ್ಯುರ್-ನ ಶಂಕಾ ನ ಮೇ ಜಾತಿ ಭೇದಃ
ಪಿತಾ ನೈವ ಮೇ ನೈವ ಮಾತಾ ನ ಜನ್ಮ |
ನ ಬಂಧುರ್-ನ ಮಿತ್ರಂ ಗುರುರ್ನೈವ ಶಿಷ್ಯಃ
ಚಿದಾನಂದ ರೂಪಃ ಶಿವೋಹಂ ಶಿವೋಹಮ್ ||

ನನಗೆ ಮೃತ್ಯುವಿಲ್ಲ, ಶಂಕೆಯಲ್ಲ, ಜಾತಿ ಭೇದವಿಲ್ಲ
ಹುಟ್ಟಿಸಿದ ತಂದೆ-ತಾಯಿಗಳೆಂಬವರಿಲ್ಲ
ಬಂಧುಗಳಿಲ್ಲ, ಮಿತ್ರರಿಲ್ಲ, ಗುರುವಿಲ್ಲ, ಶಿಷ್ಯನೂ ಇಲ್ಲ,
ಚಿದಾನಂದ ರೂಪವಾದ ಶಿವನೇ ನಾನು ಶಿವನೇ ನಾನು

ಅಹಂ ನಿರ್ವಿಕಲ್ಪೋ ನಿರಾಕಾರ ರೂಪೋ
ವಿಭೂತ್ವಾಚ್ಚ ಸರ್ವತ್ರ ಸರ್ವೇಂದ್ರಿಯಾಣಾಮ್ |
ನ ವಾ ಬಂಧನಂ ನೈವ ಮುಕ್ತಿ ನ ಬಂಧಃ |
ಚಿದಾನಂದ ರೂಪಃ ಶಿವೋಹಂ ಶಿವೋಹಮ್ ||

ನಾನು ನಿರ್ವಿಕಲ್ಪ ನಿರಾಕಾರ,
ಎಲ್ಲದರೊಳಗೂ ಇದ್ದೇಬೆ ನಾನು.
ನಾನು ಯಾವುದರಿಂದಲೂ ಬಂಧಿಯಲ್ಲ, ಯಾವುದನ್ನೂ ಬಿಟ್ಟಿರುವುದೂ ಇಲ್ಲ,
ಚಿದಾನಂದ ರೂಪವಾದ ಶಿವನೇ ನಾನು ಶಿವನೇ ನಾನು

ನಾನು ಯಾರು? ಎಂಬ ಪ್ರಶ್ನೆಗೆ ಶಂಕರರು ಉತ್ತರಿಸಿದ ಬಗೆ ತಿಳಿದಿದ್ದೀರಿ..

ನಾನೇ ಶಿವನಾದಮೇಲೆ ನಾನೇ ದೇವರೆಂದಾಯ್ತಲ್ಲ, ಅಂದರೆ ನಾವೇ ಸೀತೆಯಗಂಡ ಎಂದು ಹೇಳಿದರೆ ತಪ್ಪೇನೆಂದು ನೀವು ಕೇಳಬಹುದು. ಇಲ್ಲಿ ಪ್ರತಿಯೊಂದು ಪದದ ಧ್ವನ್ಯರ್ಥ ಬೇರೆ ಇದೆ ಎಂಬುದನ್ನು ಗಮನಿಸಿ ತಿಳಿದುಕೊಳ್ಳಬೇಕು.

ವ್ಯವಹಾರ ಜ್ಞಾನದ ಸರಿಯಾದ ಸಂಪಾದನೆಗೆಂದು ನಮ್ಮ ಬಾಲ್ಯದ ಪೂರ್ಣಭಾಗವನ್ನೂ, ಪ್ರೌಢಾವಸ್ಥೆಯ ಬಹುಭಾಗವನ್ನೂ ಮೀಸಲಿಡುತ್ತೇವೆ. ಹೀಗೆ ಮಾಡಿದರೂ, ಜೀವನದಲ್ಲಿ ಚಿಂತೆ ಎಂಬುದು ಬಿಡದೇ ಬೆನ್ನಟ್ಟಿರುತ್ತದೆ, ನಾಳೆಗಳ ಚಿಂತೆಯಲ್ಲಿ ಮನಸ್ಸು ಅಯೋಮಯವಾಗಿರುತ್ತದೆ.

ನಾವೊಮ್ಮೆ ಹಿಂತಿರುಗಿ ನೋಡಿದರೆ, ನಮ್ಮ ಜೀವನವನ್ನು ಸುಂದರವಾಗಿಸುವ, ಹಸನಾಗಿಸುವ, ಸೌಖ್ಯವಾಗಿಸುವ, ಶಾಂತಿ,ನೆಮ್ಮದಿಯನ್ನು ನೀಡುವ ಪರಿಪೂರ್ಣವಿದ್ಯೆ ಇದಲ್ಲ ಎಂಬ ಅರಿವು ಕೆಲವರಿಗಾದರೂ ಆಗುವುದುಂಟು. ಪ್ರತಿಯೊಬ್ಬರ ಆಶಯವೂ ಜೀವನದಲ್ಲಿ ಶಾಂತಿ,ನೆಮ್ಮದಿಗಳನ್ನು ಹೊಂದುವುದೇ ಆಗಿದ್ದು, ಅದಕ್ಕಾಗಿ ಹಲವುವಿಧದಲ್ಲಿ ಪ್ರಯತ್ನಗಳನ್ನು ಮಾಡುತ್ತಾ, ಅಂತರಂಗದಲ್ಲಿಯೇ ಅವಿತಿರುವ ಶಾಂತಿಯನ್ನು ಹೊರಗಿನ ವಿಷಯಗಳಲ್ಲಿ ಹುಡುಕುತ್ತಾ, ಅದು ದೊರಕಲಿಲ್ಲವಲ್ಲ ಎಂದುಕೊಳ್ಳುತ್ತಿರುತ್ತೇವೆ.

ಓಡಾಟಕ್ಕೆ ಹೊಸದಾದ ಕಾರು ಇರಲಿಲ್ಲವೆಂದುಕೊಂಡವರು ಸ್ಕೋಡಾ ಕಾರು ಖರೀದಿಸಿದ ನಾಲ್ಕೇ ತಿಂಗಳಲ್ಲಿ, ಪಕ್ಕದ ಮನೆಯಾತ ಖರೀದಿಸಿದ ಹೊಸಾ ಮಾಡೆಲ್ ಬಿಎಂಡಬ್ಲ್ಯೂ ಕಾರನ್ನು ನೋಡಿ ಅದು ನಮ್ಮಲ್ಲಿಲ್ಲ ಎಂದುಕೊಳ್ಳುತ್ತೇವೆ. ೪೩ ಇಂಚುಗಳ ಟಿವಿ ಕೊಂಡ ಆರು ತಿಂಗಳಲ್ಲೇ ಮಾರುಕಟ್ಟೆಗೆ ತ್ರೀಡಿ ಟೆಕ್ನಾಲಜಿಯ ಟಿವಿ ಲಗ್ಗೆ ಇಟ್ಟಾಗ, ಆರು ತಿಂಗಳು ತಡೆದಿದ್ದರೆ ಅದೇ ಬೆಲೆಗೆ ತ್ರೀಡಿ ಟೆಕ್ನಾಲಜಿಯ ಟಿವಿ ಖರೀದಿಸಬಹುದಿತ್ತಲ್ಲ ಎಂದು ಮರುಗುತ್ತೇವೆ.

ಇಂತಹ ಹಲವು ಸುಖೋಪಭೋಗ ವಿಷಯಗಳಲ್ಲಿ ಒಟ್ಟಾರೆಯಾಗಿ ನಾವು ಅರಸುವುದು ಶಾಂತಿ ಮತು ನೆಮ್ಮದಿಯನ್ನೇ ವಿನಃ ನಿಜವಾದ ಅರ್ಥದಲ್ಲಿ ಅವುಗಳನ್ನಲ್ಲ. ಉರಿವ ಎಣ್ಣೆಯ ದೀಪ ಸುಂದರವೆಂದು ಬಗೆದ ಪತಂಗ ಅದಕ್ಕೆ ಮುತ್ತಿಕ್ಕಹೋಗಿ ಸುಟ್ಟು ಸತ್ತುಹೋಗುವಂತೆ, ವಿಷಯಸುಖದಲ್ಲಿ ನಿಜವಾದ ನೆಮ್ಮದಿಗಿಂತ ಶಾಂತಿಭಂಗವೇ ಅಡಗಿದೆ ಎಂಬುದನ್ನು ನಾವು ಅರಿತುಕೊಳ್ಳುವುದಿಲ್ಲ.

ಶಾಂತಿ,ನೆಮ್ಮದಿಗಾಗಿ ಹವಣಿಸುವ ನಮ್ಮ ಸಾಹಸಯಾನದಲ್ಲಿ, ನಡುವಯಸ್ಸಿನಲ್ಲಿ ಒಂದಾನೊಂದು ದಿನ ಯೋಚಿಸುತ್ತಿದ್ದಾಗ, ಇಲ್ಲಿಯವರೆಗೆ ಮಾಡಿದ ಎಲ್ಲ ಪ್ರಯತ್ನಗಳೂ ವ್ಯರ್ಥವಾದವೆಂದೂ, ಇನ್ನು ಹೊಸದಾಗಿ ಪ್ರಯತ್ನಿಸಲು ಸಾಧ್ಯವಾಗದಂತೆ ಮುಪ್ಪು ಮತ್ತು ಮೃತ್ಯು ನಮ್ಮನ್ನು ಸಮೀಪಿಸಿಬಿಡುತ್ತದೆಂದೂ ಭಯವಿಹ್ವಲರಾಗಿ ಚಿಂತಾಕ್ರಾಂತರಾಗಿರುತ್ತೇವೆ.

ಹೀಗೆ ದಾರಿಕಾಣದೆ ಕಂಗೆಟ್ಟಿರುವ ಜೀವರುಗಳಿಗೆ [ಜೀವಾತ್ಮಗಳಿಗೆ]ಈ ಪ್ರಪಂಚದ ಬಗೆಗಿನ ತಪ್ಪುತಿಳಿವಳಿಕೆಯೇ ಇದಕ್ಕೆ ಕಾರಣ ವೆಂದೂ, ಅದನ್ನು ಹೋಗಲಾಡಿಸಲು ವೇದಾಂತವಿದ್ಯೆ ಅಥವಾ ಆತ್ಮವಿದ್ಯೆಯೆಂಬ ಪರಮಾರ್ಥವಿಚಾರವನ್ನು ತಿಳಿದುಕೊಳ್ಳಬೇಕೆಂದೂ, ಅದರಿಂದಲೇ ಶಾಂತಿ,ನೆಮ್ಮದಿ,ಸೌಖ್ಯ ಎಲ್ಲವೂ ನೆಲೆಗೊಳ್ಳುವವೆಂದೂ ಉಪನಿಷತ್ತುಗಳಲ್ಲಿ ಹೇಳಿದೆ.

ಪರಮಾರ್ಥವಿಚಾರವನ್ನು ಅರಿಯುವುದರಿಂದ ನಮ್ಮ ನಿಜವಾದ ಸ್ವರೂಪವೂ, ಜೊತೆಗೆ, ಬ್ರಹ್ಮಾಂಡದ ಸ್ವರೂಪವೂ ಅರಿವಿಗೆ ನಿಲುಕಿ, ಇಹಲೋಕದ ಶೋಕಮೋಹಗಳು ಅಳಿಸಿಹೋಗಿ, ನಿತ್ಯಶಾಂತಿಯು ನಮ್ಮಲ್ಲಿ ನೆಲಸುವುದೆಂದು ಶ್ರುತಿಗಳು ಅಭಯವನ್ನು ನೀಡಿವೆ. ಹೀಗಾಗಿಯೇ “ಏತಜ್ಜ್ಞೇಯಂ ನಿತ್ಯಮೇವಾತ್ಮಸಂಸ್ಥಂ ನಾತಃಪರಂ ವೇದಿತವ್ಯಂ ಹಿ ಕಿಂಚಿತ್’-ಅಂದರೆ, ನಿತ್ಯವೂ ನಮ್ಮ ಹೃದಯದಲ್ಲಿಯೇ ಇರುವ ಆತ್ಮನನ್ನೇ ತಿಳಿದುಕೊಳ್ಳಬೇಕು. ಇದನ್ನು ತಿಳಿದನಂತರ ಮತ್ತೇನನ್ನೂ ತಿಳಿಯಬೇಕಾದದ್ದು ಉಳಿದಿರುವುದಿಲ್ಲ” ಎಂದು ಉಪನಿಷತ್ತು ಸಾರುತ್ತದೆ.

ನಮ್ಮ ಹೃದಯದಲ್ಲಿರುವ ಆತ್ಮನನ್ನು ತಿಳಿದುಕೊಂಡರೆ ಮತ್ತೇನನ್ನೂ ತಿಳಿಯಬೇಕಾದದ್ದು ಇಲ್ಲವೆಂಬುದಕ್ಕೆ ಸಾಕ್ಷಿಯುಂಟೇ? ಎಂಬ ಪ್ರಶ್ನೆಗೆ ಛಾಂದೋಗ್ಯ ಉಪನಿಷತ್ತು ಉತ್ತರವನ್ನು ನೀಡುತ್ತದೆ-

ಗುರುಕುಲ ಪದ್ಧತಿಯ ವಿಶ್ವವಿದ್ಯಾನಿಲಯವೊಂದರಲ್ಲಿ ಒಂದು ಹಂತದ ಅಧ್ಯಯನವನ್ನು ಪೂರೈಸಿಕೊಂಡು ತಂದೆಯ ಬಳಿಗೆ ಹೆಮ್ಮೆಯಿಂದ ಮರಳಿದ ಶ್ವೇತಕೇತುವಿನಲ್ಲಿ ಅಪ್ಪ ಪ್ರಶ್ನಿಸಿದ- “ನೋಡಪ್ಪಾ ಮಗೂ, ಯಾವುದನ್ನು ತಿಳಿದುಕೊಂಡರೆ ಎಲ್ಲವನ್ನೂ ತಿಳಿದುಕೊಂಡಂತೆ ಆಗುವುದೋ ಅದನ್ನು ನೀನು ಅರಿತಿರುವೆಯೇನು?” ಅನಿರೀಕ್ಷಿತವಾಗಿ ಬಂದ ಅಪ್ಪನ ಪ್ರಶ್ನೆಯಿಂದ ಆಶ್ಚರ್ಯಚಕಿತನಾದ ಶ್ವೇತಕೇತುವು ತನೆಗೆಲ್ಲವೂ ತಿಳಿದಿದೆ ಎಂಬ ಅಹಂಕಾರವನ್ನು ಬಿಟ್ಟು, ಅಂತಹ ಯಾವ ವಿದ್ಯೆಯೂ ತನಗೆ ತಿಳಿಯದೆಂದೂ, ಕೃಪೆಯಿಟ್ಟು ತನಗೆ ತಿಳಿಸಬೇಕೆಂದೂ ಕೇಳಿಕೊಳ್ಳುತ್ತಾನೆ.

ಆ ಸನ್ನಿವೇಶದಲ್ಲಿ ಅವನ ತಂದೆ ಹೀಗೆ ಉತ್ತರಿಸುತ್ತಾರೆ-“ಯಥಾ ಸೋಮ್ಯ ಏಕೇನ ಮೃತ್ಪಿಂಡೇನ ಸರ್ವಂ ಮೃನ್ಮಯಂ ವಿಜ್ಞಾತಂ ಸ್ಯಾತ್ ವಾಚಾರಂಭಣಂ ವಿಕಾರೋ ನಾಮಧೇಯಂ ಮೃತ್ತಿಕೇತ್ಯೇವ ಸತ್ಯಮ್.” ಇದರರ್ಥವಿಷ್ಟೇ: ಮಣ್ಣಿನಿಂದ ಮಾಡಿದ ಮಡಕೆ, ಕುಡಿಕೆಗಳೆಲ್ಲವೂ ಹೆಸರು, ಆಕಾರಗಳಿಂದ ಭಿನ್ನಭಿನ್ನವಾಗಿವೆಯೇ ಹೊರತು ಅವುಗಳ ಮೂಲದಲ್ಲಿರುವುದು ಮಣ್ಣೇ ಎಂದು ಹೇಗೆ ನಮಗೆ ಗೊತ್ತಿದೆಯೋ ಹಾಗೆಯೇ, ಆತ್ಮನಿಂದ ಉಂಟಾಗಿರುವ ಈ ಪ್ರಪಂಚವು ಹೆಸರು, ರೂಪಗಳೆಂಬ ಉಪಾಧಿಯಿಂದ [ಅಡ್ಡಿಯಿಂದ] ವಿಧವಿಧವಾಗಿ ಕಾಣುತ್ತಿದ್ದರೂ ಇದರ ನಿಜವಾದ ಸ್ವರೂಪವು ಆತ್ಮವೇ ಆಗಿದೆ. ಆದ್ದರಿಂದ ಆತ್ಮನನ್ನು ತಿಳಿದುಕೊಂಡರೆ ಅದರಿಂದ ಉಂಟಾದ ಪ್ರಪಂಚದ ತಿರುಳಿನ ಅರಿವೂ ಆಗುವುದು.”

ಇದಕ್ಕೊಂದು ಉದಾಹರಣೆಯನ್ನು ನೀಡುವುದಾದರೆ ಪಂಚಭೂತಾತ್ಮಕವಾದ ಮರದ ಉಪಕರಣವೊಂದನ್ನು ತೆಗೆದುಕೊಳ್ಳಿ, ಅಥವಾ ಮರದಿಂದ ತಯಾರಿಸಿದ ಕುರ್ಚಿ ಎಂದುಕೊಳ್ಳಿ. ಪೃಥ್ವಿ ತತ್ವದಿಂದ ಅದು ಘನರೂಪದಲ್ಲಿ ನಮಗೆ ಕಾಣಿಸುತ್ತದೆ, ಗಟ್ಟಿಯಾಗಿರುತ್ತದೆ. ಅದರ ಅಂಗಾಂಗಗಳ ಜೋಡಣೆ ಗಮನಿಸಿ, ಅದರಲ್ಲಿ ನೀರಿನ ತತ್ವ ಇರುವುದರಿಂದಲೇ ಅವೆಲ್ಲ ಹಾಗೆ ಹೊಂದಿಕೊಂಡಿವೆ. ಮೊಳೆಯೊಂದನ್ನು ಹೊಡೆದರೆ ಒಳಗೆ ಸೇರುತ್ತದೆ ಎಂಬುದರಿಂದ ಅವಕಾಶ ಅಂದರೆ ಆಕಾಶ ತತ್ವವಿದೆ,

ಮೊಳೆ ಒಳಗೆ ಹೋದಾಗ ಅಲ್ಲಿದ್ದ ವಾಯು ಹೊರಗೆ ಬರುತ್ತದಾದ್ದರಿಂದ ವಾಯುವೂ ಆಲ್ಲಿದೆ. ಕುರ್ಚಿಯ ಅಂಗಾಂಗಗಳನ್ನು ಕತ್ತರಿಸಿ ಉಜ್ಜಿದರೆ ಬೆಂಕಿ ಹತ್ತಿಕೊಳ್ಳುತ್ತದೆಯಾದ್ದರಿಂದ ಅಗ್ನಿಯೂ ಅಲ್ಲಿದೆ. ಆದರೆ ಹೊರನೋಟಕ್ಕೆ ಅದೊಂದು ಮರದ ಕುರ್ಚಿ. ಪಂಚ ಭೂತಗಳಲ್ಲಿ ಪರಸ್ಪರ ಒಂದರೊಳಗೊಂದು ಅಡಗಿದೆಯೆಂದಾಗ ಈ ಪ್ರಪಂಚದ ಎಲ್ಲವೂ ಒಂದೇ ಮೂಲದ್ದೇ ಎಂಬ ಅನಿಸಿಕೆ ಬರುತ್ತದೆ; ಆದರೆ ಮೇಲುನೋಟಕ್ಕೆ ಎಲ್ಲವೂ ಬೇರೆ ಬೇರೆಯಾಗಿ ತೋರುತ್ತದೆ. ಹೀಗಾಗಿ ಆತ್ಮದಿಂದಲೇ ಎಲ್ಲದರ ಉತ್ಪತ್ತಿಯಾಗುತ್ತದೆ ಎನ್ನಬಹುದು.

ಈ ಪ್ರಪಂಚವು ನಾವೀಗ ಭಾವಿಸಿರುವಂತೆ ಅಗಾಧವಾಗಿಲ್ಲ; ಬದಲಿಗೆ, ನಮ್ಮ ಇಂದ್ರಿಯಗಳಿಗೆ ವಿಷಯವಾಗಿರುವಷ್ಟು ಚಿಕ್ಕದಾಗಿದೆ. ದೇಶ-ಕಾಲಗಳೆಂಬ ಅಳತೆಗೋಲುಗಳಿಂದ ಈ ಪ್ರಪಂಚವು ನಿರ್ಮಾಣವಾಗಿರುತ್ತದೆ. ಈ ದೇಶ-ಕಾಲಗಳು ನಮಗೆ ಉಂಟಾಗುವ ಜಾಗೃತ್, ಸುಷುಪ್ತಿ, ಸ್ವಪ್ನ[ಎಚ್ಚೆತ್ತ ಸ್ಥಿತಿ, ಗಾಢ ನಿದ್ರೆ ಮತ್ತು ಕನಸು]ಗಳಿಗೆ ಕಟ್ಟುಬಿದ್ದಿರುತ್ತವೆ. ಹೀಗಾಗಿಯೇ ಕನಸಿನ ಪ್ರಪಂಚವು ಎಚ್ಚರದ ಪ್ರಪಂಚಕ್ಕಿಂತಲೂ ದೇಶ-ಕಾಲಗಳಲ್ಲಿ ಅತ್ಯಂತ ಭಿನ್ನವಾಗಿರುತ್ತದೆ” ಎಂಬುದು ಅವಸ್ಥಾತ್ರಯವೆಂಬ ಪ್ರಕ್ರಿಯೆಗೆ ಮಾಂಡೂಕ್ಯೋಪನಿಷತ್ತಿನ ಹೇಳಿಕೆ.

ಈ ಭ್ರಮೆಯಿಂದಾಗಿಯೇ, ಎಚ್ಚರ ಸ್ಥಿತಿಯಲ್ಲಿ ಸಾವಿರಾರು ಮೈಲು ದೂರವಿರುವ ಸ್ಥಳಗಳನ್ನು ಕನಸಿನಲ್ಲಿ ಕ್ಷಣಾರ್ಧದಲ್ಲಿ ತಲುಪಿಬಿಡುತ್ತೇವೆ! ಮುಪ್ಪಿನಲೂ ಬಾಲ್ಯದಲ್ಲಿದ್ದಂತೆ, ತಾರುಣ್ಯದಲ್ಲಿದ್ದಂತೆ, ವೃದ್ಧಾಪ್ಯಗಳು ಆವರಿಸಿಕೊಂಡು ಸತ್ತುಹೋದಂತೆ ಹೀಗೆಲ್ಲ ಭಾಸವಾಗುತ್ತದೆ. ಸುಷುಪ್ತಿ ಅಥವಾ ನಿದ್ರೆಯಲ್ಲಿ ಈ ಪ್ರಪಂಚದ ಅಥವಾ ಇನ್ನಾವುದೇ ಪ್ರಪಂಚದ, ವ್ಯವಹಾರದ, ಚರಾಚರವಸ್ತುಗಳ ದರ್ಶನ, ಸ್ಪರ್ಶಗಳು ನಡೆಯುವ ಅನುಭವವಿಲ್ಲದೆ ತಾನೊಬ್ಬನೇ ನಿದ್ರಿಸಿದೆ ಎಂಬಂತಹ ಅನುಭವವಾಗುತ್ತದೆ.

ಇಂತಹ ಮಾಹಿತಿಗಳನ್ನೆಲ್ಲ ಗಮನಿಸಿದಾಗ, ಸರಿಯಾದ ಅಧ್ಯಾತ್ಮಿಕ ಗುರು, ಸರಿಯಾದ ಶಾಸ್ತ್ರಗಳ ಸಹಾಯದಿಂದ ಇವುಗಳನ್ನೆಲ್ಲ ತುಲನೆಮಾಡಿ ನೋಡಿಕೊಂಡರೆ, ಅವಸ್ಥೆಗಳ ಅಡಿಯಾಳಾಗಿರುವ ಈ ಪ್ರಪಂಚದ ಸೂತ್ರ ಮತ್ತು ಇಂತಹ ಅವಸ್ಥೆಗಳೆಲ್ಲ ನಮಗೇ ಉಂಟಾದಂತೆ ಅನುಭವವನ್ನು ನೀಡುತ್ತ ಸಾಕ್ಷಿಸ್ವರೂಪಿಯಾಗಿ ನಮ್ಮೊಳಗೇ ಅವಿತಿರುವ ಆತ್ಮನ ಜ್ಞಾನವೂ ಸರಿಯಾಗಿ ಆಗುತ್ತದೆ ಎಂದು ವೇದಾಂತ ಹೇಳಿದೆ.

ಆದ್ದರಿಂದಲೇ, “ಆತ್ಮಾ ವಾ ಅರೇ ದ್ರಷ್ಟವ್ಯಃ ಶ್ರೋತವ್ಯಃ ಮಂತವ್ಯಃ ನಿದಿಧ್ಯಾಸಿತವ್ಯಃ ಚ” ಎಂದಿದ್ದಾರೆ. ಅಂದರೆ, ಆತ್ಮನೊಬ್ಬನನ್ನೇ ನೋಡಬೇಕು, ಕೇಳಬೇಕು, ಚಿಂತಿಸಬೇಕು, ತಿಳಿದುಕೊಳ್ಳಬೇಕೆಂಬ ಅರ್ಥ; ಜಗತ್ತಿನ ತಿರುಳಾಗಿರುವ ಆತ್ಮನನ್ನು ತಿಳಿದುಕೊಂಡರೆ ಮತ್ತೆ ತಿಳಿಯಬೇಕಾದದ್ದು ಏನೂ ಉಳಿದಿರುವುದಿಲ್ಲ. ಈ ಕಾರಣದಿಂದಲೇ, ಎಲ್ಲರೂ “ಆತ್ಮವೊಂದನ್ನೇ ತಿಳಿಯಬೇಕು” ಎಂದು ಉಪನಿಷತ್ತುಗಳಲ್ಲಿ ಜಿಜ್ಞಾಸುಗಳಿಗೆ ಮನವರಿಕೆಯಾಗುವಂತೆ ಹೇಳಿರುವುದು ಕಾಣುತ್ತದೆ.

ಅದಿರಲಿ. ಈಗ ಈ ಸುದೀರ್ಘ ಕಥೆಯ ಮುಕ್ತಾಯಕ್ಕೆ ಬರೋಣ. ನಾವು ಪರಂಪರೆಗಳ ಹೆಸರನ್ನು ಬಳಸಿಕೊಳ್ಳುವುದರಲ್ಲಿ ಚಾಣಾಕ್ಷರು. ಇಂತಹ ಗಹನ ವಿಷಯಗಳನ್ನು ನಾವೆಂದೂ ತಿಳಿದುಕೊಳ್ಳಲು ಪ್ರಯತ್ನಿಸಲಿಲ್ಲ. ಯೋಗವೇಕೆ? ಕೆಲವು ಆಹಾರಗಳು ನಮಗೆ ನಿಷಿದ್ಧವೇಕೆ? ಗೃಹಸ್ಥ ಮತ್ತು ವಾನಪ್ರಸ್ಥಾಶ್ರಮವನ್ನು ವರ್ಜಿಸಿ ನೇರವಾಗಿ ಯಾಕೆ ಸನ್ಯಾಸಿಯಾಗಲು ಹೇಳಿದ್ದಾರೆ? ಇದೆಲ್ಲ ನಮಗೆ ಬೇಡ. ಈ ವಿದ್ಯೆಯನ್ನು ಹೇಳುವ ಶಾಲೆಗೆ ನಾವು ಚಕ್ಕರ್ ಹೊಡೆದೆವು.

ನಮಗೆ ಹಣಬೇಕು, ಹೆಣ್ಣುಬೇಕು, ಆಸ್ತಿಬೇಕು, ಐಶಾರಾಮಿ ಕಾರು ಬೇಕು, ಈರುಳ್ಳಿ ಉಪ್ಪಿಟ್ಟು ಬೇಕು, ವಡಾ ಸಾಂಬಾರ್ ನೈವೇದ್ಯವಾಗುತ್ತಿರಬೇಕು. ಹೀಗಾಗಿ ಊಟಕ್ಕೆ/ಭೋಗಕ್ಕೆ ಮಾತ್ರ ನಾವು ಹಾಜರು.

ಧಾರ್ಮಿಕ ಮುಖಂಡರೆನಿಸಿದ ನಾವೇ ತಪ್ಪುದಾರಿಯಲ್ಲಿ ನಡೆಯುತ್ತಿರುವಾಗ ಸಮಾಜದಮೇಲೆ ಯಾವ ದುಷ್ಪರಿಣಾಮವಾಗುತ್ತದೆ? ಯಾರು ಏನೇನು ಮಾಡಬೇಕು? ಏನಿ ಮಾಡಬಾರದು? ನಾವು ಈಗ ಏನಾಗಿದ್ದೇವೆ? ಸರಿಯಿದ್ದರೆ ಏನಾಗುತ್ತಿದ್ದೆವು? ಎಂಬ ಯಾವ ಲೆಕ್ಕಾಚಾರವೂ ನಮಗೆ ಊಹುಂ …..ಶೂನ್ಯ. ಇನ್ನು ಪರಾತತ್ವದ ಗಹನ ವಿಚಾರ ಬಹಳ ದೂರವೇ ಉಳಿಯಿತು ಬಿಡಿ. ”

Thumari Ramachandra

source: https://www.facebook.com/groups/1499395003680065/permalink/1626530900966474/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s