ಪ್ರತಿಭಾ ಸಂಪನ್ನ ಸಮಾಜದಲ್ಲಿ ಸಂಕಲ್ಪ ಶಕ್ತಿಯ ಕೊರತೆ ಕಾಣುತ್ತದೆ

ಪ್ರತಿಭಾ ಸಂಪನ್ನ ಸಮಾಜದಲ್ಲಿ ಸಂಕಲ್ಪ ಶಕ್ತಿಯ ಕೊರತೆ ಕಾಣುತ್ತದೆ

ಕಾಲ ಸರಿದಂತೆ ಮನುಷ್ಯನ ಅನುಭವಗಳ ಮೂಟೆಯ ಗಾತ್ರ ಹೆಚ್ಚುತ್ತದೆ. ಹಲವು ಅನುಭವಿಗಳ ಅನುಭವಗಳ ಮೂಟೆಗಳ ರಾಶಿ ಒಂದು ಸಮಾಜಕ್ಕೆ ಸಾಕಷ್ಟು ಮಾಹಿತಿಯನ್ನು ಒದಗಿಸುತ್ತದೆ. ಏನು ಮಾಡಬೇಕು? ಏನು ಮಾಡಬಾರದು?ಯಾವುದನ್ನು ಮಾಡುವುದು ಶ್ರೇಯಸ್ಕರ?ಯಾವುದು ಸಮಾಜದ ಅವನತಿಗೆ ಯಾ ಅಧೋಗತಿಗೆ ಕಾರಣವಾಗುತ್ತದೆ ಎಂಬುದನ್ನೆಲ್ಲ ಪೂರ್ವಜರ ಅನುಭವಗಳ ಆಧಾರದ ಮೇಲೆ ತಿಳಿದುಕೊಳ್ಳಬಹುದು.

ತಣ್ಣೀರು ತಂಪು, ಅತಿಯಾದ ಬಿಸಿನೀರು ಮತ್ತು ಬೆಂಕಿ ಅಥವಾ ಬಿಸಿಯುಳ್ಳ ಯಾವುದೇ ಪದಾರ್ಥ ನಮ್ಮ ಚರ್ಮವನ್ನು ಸುಡುತ್ತದೆ, ಶುದ್ಧ ಹವೆ ಆರೋಗ್ಯಕ್ಕೆ ಒಳ್ಳೇದು; ಸಭೆ ಸಮಾರಂಭ ಪೂಜಾದಿ ಸಮಯಗಳಲ್ಲಿ ಅಪಾನವಾಯು ಪ್ರಯೋಗ ನಡೆಸಿ ಹವಾಮಾನ ದೂಷಣೆ ಮಾಡಿದರೆ ಇತರರಿಗೆ ಅಸಹ್ಯವಾಗುತ್ತದೆ, ಪಕ್ಕದ ಮನೆಯ ಶ್ರೀಮಂತೆ ಖರೀದಿಸಿದ ರೇಷ್ಮೆ ಸೀರೆಯಂತದ್ದೇ ತನಗೂ ಬೇಕೆಂದು ಬಡ ಗಂಡನಲ್ಲಿ ಹಠಮಾಡಕೂಡದು, ಗೋಪಾಲ ರಾಯರಿಗಿಂತ ತಾನೇನು ಕಮ್ಮಿ ಎಂದು ತೋರಿಸಲು ಸಾಲದಲ್ಲಿ ಬಿಎಂಡ್ಬ್ಲೂ ಕಾರು ಖರೀದಿಸಬಾರದು ಎಂಬಿತ್ಯಾದಿ ಹೋಲಿಕೆಯ ಅನುಭವಗಳು ಅಲ್ಲಿ ದೊರಕುತ್ತವೆ. ಸಮಾಜಕ್ಕೆ ಪೂರ್ವಜರ ಮಾಹಿತಿ ಕಣಜವೇ ನಿಜವಾದ ವಿಶ್ವಕೋಶ.

ಇಂತಹ ಅನುಭವಗಳ ಪಕ್ವತೆಯನ್ನು ಮೈಗೂಡಿಸಿಕೊಂಡು ಕಾಲಕಾಲಕ್ಕೆ ಸಮಾಜ ಮುನ್ನಡೆಯಬೇಕು ಎಂಬುದು ಎಲ್ಲ ಸಮಾಜಗಳ ಅತಿ ಸಹಜ ಅಪೇಕ್ಷೆ. ಅದರಂತೆಯೇ ನಮ್ಮ ಸಮಾಜ ಕೂಡ ಇದಕ್ಕೆ ಹೊರತಲ್ಲ. ಸಮಾಜದಲ್ಲಿ ಬಹುಮುಖ ಮತ್ತು ಬಹುವಿಧ ಪ್ರತಿಭೆಗಳಿಗೆ ಕೊರತೆಯೇನಿಲ್ಲ. ಅತ್ಯಂತ ಹೀನ ಆರ್ಥಿಕತೆಯಲ್ಲೂ ಮೇಲೆದ್ದು, ಮುನ್ನಡೆದು ಆಪಾರ ಜನಮನ್ನಣೆಗಳಿಸಿದ ಜನ ಹಲವರಿದ್ದಾರೆ. ಕೆಲವರಂತೂ ಉಟ್ಟ ಪಂಚೆಯಲ್ಲೇ ಊರುಬಿಟ್ಟು ದೂರದ ದೇಶಗಳನ್ನು, ನಗರಗಳನ್ನು ಸೇರಿಕೊಂಡು, ಅಲ್ಲಿ ದುಡಿಮೆಗೆ ಹೊಸ ಮಾರ್ಗವನ್ನು ರೂಪಿಸಿಕೊಂಡು ನ್ಯಾಯಯುತ ಜೀವನ ಸಾಗಿಸುತ್ತಿದ್ದಾರೆ.

ಇಷ್ಟೆಲ್ಲ ಇದ್ದೂ ಸಹ ಸಮಾಜದ ಪ್ರಮುಖನೆನಿಸಿದ ಒಬ್ಬನಿಂದ ನಡೆದ ಆಘಾತಕಾರಿ ಕೆಟ್ಟ ಕೆಲಸವನ್ನು ಮಟ್ಟಹಾಕಲಿಕ್ಕೆ ಸಮಾಜದಲ್ಲಿ ಯಾರಿಗೂ ದಮ್ಮಿಲ್ಲವೇ? ಇದೆ; ಆದರಿಲ್ಲಿ ಇಚ್ಛಾಶಕ್ತಿ ಮತ್ತು ಸಂಕಲ್ಪ ಶಕ್ತಿಗಳ ಕೊರತೆ ಕಾಣುತ್ತದೆ.

ಮುಂದಿನ ನಮ್ಮ ಪೀಳಿಗೆ ಹೇಗಿರಬೇಕು ಎಂಬುದನ್ನು ಇಂದಿನ ಸಮಾಜ ನಿರ್ಧರಿಸಬೇಕಾಗುತ್ತದೆ. ಕಟುಕನ ಮನೆಯಲ್ಲಿ ಬೆಳೆದ ಗಿಳಿ “ಹಿಡಿ,ಬಡಿ, ಕೊಚ್ಚು,ಕೊಲ್ಲು” ಎಂದು ಹೇಳುವ ಹಾಗೆ, ಕಚ್ಚೆಹರುಕರ ಗರಡಿಯಲ್ಲಿ ಬೆಳೆದ ಇಡೀ ಪೀಳಿಗೆ ಅದನ್ನೇ ಆದರ್ಶ ಸಂಸ್ಕಾರವೆಂದು ಫಾಲೋ ಮಾಡುವುದು ನಡೆಯುತ್ತದೆ. ಇದರ ನಿವಾರಣೆಗಾಗಿ ಸಮಾಜ ಈಗಲಾದರೂ ಎಚ್ಚೆತ್ತುಕೊಳ್ಳಬೇಕು.

ಶಿರಸಿ ಕಡೆಯ ಅನಾಮಧೇಯ ಕಲಾವಿದ ಮೇಳ ಸಮಾಜದ ಹಲವು ನ್ಯೂನತೆಗಳಿಗೆ ಅಣಕು,ವಿಡಂಬನೆಗಳ ಮೂಲಕ ಎಚ್ಚರಿಕೆಯನ್ನೂ ನೀಡಿದೆ. ನಿಮ್ಮಲ್ಲಿ ಅನೇಕರು ಅಂತರ್ಜಾಲದ ಮೂಲಕ ’ಗೋಕರ್ಣ ಪುರಾಣ’ ಎಂಬ ಹಾಸ್ಯದ ಆಡಿಯೋ ತುಣುಕನ್ನು ಕೇಳಿದ್ದೀರಿ. ಅದರಂತೆಯೇ ಯಕ್ಷಗಾನ ರೂಪದಲ್ಲಿ ಎರಡು ಆಡಿಯೋ ಕಂತುಗಳಲ್ಲಿ ವಿಡಂಬನೆಯನ್ನು ನೀಡಿದ್ದಾರೆ-ಪ್ರಾಯಶಃ ಅದೇ ಕಲವಿದರು ಎಂದುಕೊಳ್ಳುತ್ತೇನೆ.

ದಿನನಿತ್ಯದ ಜೀವನದಲ್ಲಿ ಇಂದು ಅಲ್ಲಲ್ಲಿ ನಾವು ಕಾಣಬಹುದಾದ ವಾಸ್ತವಿಕ ಸಂಗತಿಗಳನ್ನೇ ಆಧರಿಸಿ, ಕಾಲ್ಪನಿಕವಾಗಿ ಗಪ್ಪಜ್ಜ ಮತ್ತು ಅವನ ಸಂಸಾರವನ್ನು ಸೃಜಿಸಿ, ಪಾತ್ರಗಳ ಮೂಲಕ ಉತ್ತಮ ಸಂದೇಶಗಳನ್ನೂ ಮತ್ತು ರಂಜನೆಯನ್ನೂ ನೀಡುವ ಈ ಕಲಾವಿದರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.

ಇಲ್ಲಿ ಬರುವ ಪ್ರತಿಯೊಂದೂ ಪಾತ್ರಗಳು ಮಾತುಗಳ ಮೂಲಕ ಭಾವಾಭಿವ್ಯಕ್ತಿ ನಡೆಸಿದ ರೀತಿ ಅನೂಹ್ಯ ಮತ್ತು ಅನನ್ಯ. ಹಿತಮಿತವಾದ ಭಾಗವತಿಕೆ ಮತ್ತು ಪೂರಕ ಮದ್ದಳೆ, ಹೊಂದುವ ಅತಿಸಹಜ ಸಾಹಿತ್ಯ[ಕೆಲವೆಡೆ ಮಾತ್ರೆ-ಗಣ ತಪ್ಪಿರಬಹುದಾದರೂ ಇದು ಹಾಸ್ಯವಾದ್ದರಿಂದ ಅದೆಲ್ಲ ಮುಖ್ಯವಲ್ಲ]ಇವುಗಳನ್ನೆಲ್ಲ ನೋಡಿದಾಗ, ಸಮಯಮಾಡಿಕೊಂಡು ಆಲಿಸಿದಾಗ ಸಿಗುವ ಆನಂದ ಅವ್ಯಕ್ತವಾದುದು.

ಸಮಾಜದಲ್ಲಿ ಯಾವುದೇ ಸಮಾಜಘಾತುಕ ದುಷ್ಕೃತ್ಯ ನಡೆದರೆ ಇಡೀ ಸಮಾಜವೇ ಒಂದಾಗಿ ಅಂತಹ ಅಪರಾಧಿಗಳನ್ನು ಮಟ್ಟಹಾಕಬೇಕು. ಸಮಾಜದ ಜನ ತೆತ್ತ ದುಡ್ಡಿನಲ್ಲಿ ಸಮಾಜಕ್ಕಾಗಿ ನಿರ್ಮಾಣಗೊಂಡ ಎಲ್ಲ ಸಂಸ್ಥೆಗಳೂ ಸಮಾಜದ ಸ್ವತ್ತುಗಳೇ ಹೊರತು ಖಾಸಗೀ ಸ್ವತ್ತಲ್ಲ ಮತ್ತು ಅದು ಆ ಸಂಸ್ಥೆಗಳ ಸಂಪೂರ್ಣ ಮಾಲೀಕತ್ವಕ್ಕೂ ಒಳಪಡುವುದಿಲ್ಲ ಎಂಬುದನ್ನು ನಮ್ಮ ಜನ ತಿಳಿದುಕೊಳ್ಳಬೇಕು.

ಸರ್ಕಾರದ ಸ್ವತ್ತು ಯಾವುದೇ ರಾಜಕಾರಣಿಯ ಅಥವಾ ಮಂತ್ರಿಯ ಖಾಸಗಿ ಸೊತ್ತು ಹೇಗಲ್ಲವೋ ಹಾಗೆಯೇ ಸಮಾಜದ ಸಂಘ, ಸಂಸ್ಥೆ, ಸಂಸ್ಥಾನ, ದೇವಸ್ಥಾನಗಳ ಸ್ವತ್ತು ಇಡೀ ಸಮಾಜದ್ದು. ಇದರ ನಿಜವಾದ ನಿರ್ಮಾತೃಗಳು ಸಮಾಜ ಬಾಂಧವರೇ ಆಗಿದ್ದಾರೆ. ಸರ್ಕಾರದ ಸೊತ್ತಿನ ದೇಖರೇಕಿಯ ಜವಾಬ್ದಾರಿ ಚಾಲ್ತಿಯಲ್ಲಿರುವ ಮಂತ್ರಿಮಂಡಲದ ಕೆಲಸವಾದರೆ ಸಮಾಜದ ಸೊತ್ತುಗಳ ಜವಾಬ್ದಾರಿ ಸ್ಥಳೀಯ ಆಡಳಿತ ಮಂಡಳಿಗೆ ಸಂಬಂಧಿಸಿರುತ್ತದೆ.

ರಥಯಾತ್ರೆ ನಡೆಯುವಾಗ ರಥದ ಪಥವನ್ನು ನಿರ್ದೇಶಿಸಲಿಕ್ಕೆ ಮರದ ತುಂಡುಗಳನ್ನು ಬಳಸಲಾಗುತ್ತದೆ. ದೊಡ್ಡಗಾಲಿಗಳು ಆಡ್ಡಡ್ಡ ತಿರುಗದಂತೆ ಅವು ಮುನ್ನಡೆಸುತ್ತವೆ. ರಥಬೀದಿಯಲ್ಲಿ ಕೆಸರಿನಲ್ಲಿ ಚಕ್ರಗಳು ಹೂತಾಗ ಮೇಲೆತ್ತುವ ಕೆಲಸ ನಡೆಯುತ್ತದೆ. ಹಿಂದಕ್ಕೆ ಇದಕ್ಕೆಲ್ಲ ಬೇರೆ ರೀತಿಯ ಟ್ರಿಕ್ಸ್ ಇದ್ದವು;ಇಂದು ಕ್ರೇನ್ ಮೂಲಕ ಎತ್ತಲಾಗುತ್ತದೆ.

ಅದೇ ರೀತಿಯಲ್ಲಿ, ದೇಖರೇಕಿ ನೋಡಿಕೊಳ್ಳುವವರು ದಾರಿತಪ್ಪಿದಾಗ ಸ್ವಸ್ಥ ಸಮಾಜದ ಮುಖಂಡರು ಸಮಾಜದ ಜನರನ್ನು ಸೇರಿಸಿ, ನಿರ್ದಾಕ್ಷಿಣ್ಯವಾಗಿ, ಹಿರಿಯರ ಅನುಭವಗಳ ಆಧಾರದ ಮೇಲೆ, ಧರ್ಮಯಾವುದು ಮತ್ತು ಅಧರ್ಮ ಯಾವುದು ಎಂಬುದನ್ನು ತೀರ್ಮಾನಿಸಿ, ಧರ್ಮಮಾರ್ಗದಲ್ಲಿ ನಡೆಯಬೇಕಾದ್ದು ಸರ್ವತೋಮುಖ ಸಮಾಜದ ಕರ್ತವ್ಯ. ಈ ವಿಷಯದಲ್ಲಿ ಕೆಲವೊಮ್ಮೆ ಅತಿ ನಿಷ್ಠುರವಾಗಿ ನಡೆದುಕೊಳ್ಳಬೇಕಾದ ಪ್ರಸಂಗ ಎದುರಾದರೂ ನಡೆಸಬೇಕಾದ ನೈತಿಕ ವಿಧಿವಿಧಾನಗಳನ್ನು ಬಿಡಬಾರದು.

ಸಾಕಷ್ಟು ತಿಂಗಳುಗಳಿಂದ ನಮ್ಮ ಸಮಾಜವನ್ನು ನೋಡಿದಾಗ ಇಂದಿನ ನಮ್ಮ ಸಮಾಜದಲ್ಲಿ ಸಂಸ್ಥಾನವೊಂದರಲ್ಲಿ ನಡೆದ ಅವ್ಯವಹಾರ ಮತ್ತು ಅನೈತಿಕ ವ್ಯವಹಾರಗಳಿಗೆ ಪರಿಹಾರ ಇನ್ನೂ ದೊರೆತಿಲ್ಲ. ಕೆಲಸಕ್ಕೆ ಬಾರದ ಮಂಡಲಗಳು ತಾವೇ ಕುಲಗೆಟ್ಟ ಜನರ ಮುಖಂಡತ್ವವನ್ನು ಹೊಂದಿದ್ದರ ಪರಿಣಾಮ ಇದೆನ್ನಬಹುದೇ?

ಮುಂದಿನ ನಮ್ಮ ಪೀಳಿಗೆಗೆ ಇಂದಿನ ಇಲ್ಲಿನ ಅನೈತಿಕ ವ್ಯವಹಾರಗಳನ್ನೇ ಆದರ್ಶಗಳೆಂದು ಬೋಧಿಸುವುದೇ? ಅಧರ್ಮಿಗಳನ್ನೇ ಧರ್ಮವನ್ನು ಆಚರಿಸುವವರೆಂದು ಪೂಜಿಸಲು, ಆರಾಧಿಸಲು ಹೇಳುವುದು ತರವೇ?

ಹಾಗಾದರೆ ನಮ್ಮ ಸಮಾಜದ ಪ್ರಮುಖ ನ್ಯೂನತೆ ಯಾವುದು ಎಂದರೆ ಇಚ್ಛಾಶಕ್ತಿ ಮತ್ತು ಸಂಕಲ್ಪ ಶಕ್ತಿಗಳ ಕೊರತೆ ಎಂಬುದು ಎದ್ದು ಕಾಣುತ್ತದೆ. ಕಾಲಚಕ್ರದ ಹಲ್ಲಿಗೆ ಸಿಕ್ಕು ಇಂದು ರೋಗಿಷ್ಠವಾದ ಅಜ್ಜ ನೆಟ್ಟ ಆಲದಮರದ ಹಳೆಯ ಬೀಳಲುಗಳನ್ನು ಹಿಡಿದು, ಅದನ್ನು ರೋಗಮುಕ್ತಗೊಳಿಸುವ ಬದಲು ಹಾಗೇ ಇಟ್ಟುಕೊಂಡು ನೇತಾಡುತ್ತಿದ್ದರೆ ಸಮಾಜ ಅವನತಿಯನ್ನು ಅನುಭವಿಸಬೇಕಾಗಿ ಬರುತ್ತದೆ.

ಈ ದಿಸೆಯಲ್ಲಿ ಶಿರಸಿ ಕಡೆಯ ಈ ಅನಾಮಧೇಯ ಕಲಾವಿದರು ತುಮರಿಗೆ ಅತ್ಯಾನಂದವನ್ನು ಉಂಟುಮಾಡಿದ್ದಾರೆ. ಪ್ರಸ್ತುತಪಡಿಸಿದ ಆಖ್ಯಾನಗಳಲ್ಲಿ ಯಾರಿಗೂ ಆನಾದರಣೆ ತೋರುವ ಯಾವುದೇ ಸ್ವಯಂ ಹಿತಾಸಕ್ತಿ ಇರುವುದಿಲ್ಲ. ಸಮಾಜ ಅನುಭವಿಸುತ್ತಿರುವ ಸಮಸ್ಯೆಗಳಿಗೆ ಮೂರ್ತರೂಪಕೊಡುವ ಇಂತಹ ವ್ಯಾಖ್ಯಾನಗಳನ್ನು ಸ್ವಾಗತಿಸುವುದು ಮತ್ತು ಕಲಾವಿದರನ್ನು ಪ್ರೋತ್ಸಾಹಿಸಿ ಅಭಿನಂದಿಸುವುದು ನಮ್ಮೆಲ್ಲರ ಕರ್ತವ್ಯ.

ಇದೇ ಕಲಾವಿದರಿಂದ ಶೀಘ್ರದಲ್ಲಿ ’ಕಪಟ ಸನ್ಯಾಸಿಯ ಕನ್ಯಾಸಂಸ್ಕಾರ’ದ ಆಡಿಯೋ ಅಥವಾ ವೀಡಿಯೋ ಅವತರಣಿಕೆಯೂ ಬರಲೆಂದು ಹಾರೈಸುತ್ತ ಅನಾಮಧೇಯ ಕಾವಿದರಿಗೆ ಕೃತಜ್ಞತೆ ಸಲ್ಲಿಸಿ ಅವರ ಎರಡು ಎಪಿಸೋಡುಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. [ಭಾಗ ಎರಡು ಎಂಬುದು ಮೊದಲನೆಯ ಭಾಗ ಮತ್ತು ಪಾರ್ಟ್ ಒನ್ ಎಂಬುದು ಎರಡನೆಯ ಭಾಗ. ಈ ಕ್ರಮದಲ್ಲಿ ಕೇಳಿದರೆ ಕತಾಪ್ರಸಂಗ ಸರಿಯಾಗಿ ಅರ್ಥವಾಗುತ್ತದೆ. ಯೂ ಟ್ಯೂಬಿಗೆ ಏರಿಸಿದ ಪುಣ್ಯಾತ್ಮರು ಅಪ್ ಲೋಡ್ ಮಾಡುವಾಗ ವ್ಯತ್ಯಾಸ ಮಾಡಿದ್ದಾರೆ. ತೀರಾ ಅರ್ಜೆಂಟ್ ಇರುವವರು ಇಲ್ಲಿನ ಭಾಗ ಒಂದನ್ನು ಮಾತ್ರ ಕೇಳಬಹುದು]

Thumari Ramachandra

source: https://www.facebook.com/groups/1499395003680065/permalink/1621610248125206/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s