ನೋಡ್ತಾ ಇರಿ, ತಕ್ಕ ಶಾಸ್ತಿ ಮಾಡ್ತೀವಿ

ನೋಡ್ತಾ ಇರಿ, ತಕ್ಕ ಶಾಸ್ತಿ ಮಾಡ್ತೀವಿ

“ಚೊಂಬು ಹಿಡಿದು ನಿಲ್ಲುವವರ ಮುಂದೆ ತೊನೆಯುತ್ತ ನಗುತ್ತ ನಡೆದು ಬರುವ ನಮಗೆ ಚೊಂಬನ್ನು ಮುಟ್ಟುವ ಬದಲಿಗೆ ಇನ್ನಾವುದೋ ಆಸೆ. ಹಾಗಂತ ಹಾಗೆ ಮಾಡಲಾಗುವುದೇ? ಮುಂದೊಂದು ದಿನ ಹಾಗೆ ಮಾಡುವುದೇ ಧರ್ಮವೆಂದು ಹೇಳುವ ಭರದ ಸಿದ್ಧತೆಯಲ್ಲಿ ನಾವಿದ್ದೆವು.

ಯಾವನೋ ಪುಣ್ಯಾತ್ಮ ನಮ್ಮಂತೋರು ಬರುವ ದಾರಿಯಲ್ಲಿ ಸುಮಂಗಲಿಯರು ಚೊಂಬು ಹಿಡಿದು ನಿಲ್ಲಬೇಕು ಎಂದು ಹೇಳಿಹೋಗಿದ್ದಾನೆ. ಅದಿಲ್ಲದಿದ್ದರೆ ನಮಗೆ ಚೊಂಬು ಹಿಡಿಯುವವರು ಸಿಗುತ್ತಿದ್ದರೇ? ಶಾರೀರಿಕ ಸಮಸ್ಯೆಗಳಿರುವ ಐವತ್ತರ ಮೇಲಿನ ಮಹಿಳೆಯರು ಚೊಂಬು ಹಿಡಿಯುವುದನ್ನು ಅವರ ಸೊಂಟ ಬೆಂಬಲಿಸುವುದಿಲ್ಲ, ತೀರಾ ಎಳೆಯ ಕುವರಿಯರಿಗೆ ಚೊಂಬು ಹಿಡಿಯಲು ಆಸಕ್ತಿಯಿರುವುದಿಲ್ಲ. ಹೀಗಾಗಿ ಚೊಂಬು ಹಿಡಿಯುವುದೇ ನಮಗೆ ಬೇಕಾದವರು.

ಆದರೆ ಈಗೀಗ ನಾವು ಹೋದಲ್ಲೆಲ್ಲ ಐವತ್ತರ ಮೇಲಿನವರೇ ಚೊಂಬು ಹಿಡಿದು, ಉಳಿದಿರುವ ಕೆಲವು ಹಲ್ಲುಗಳಲ್ಲಿ ವೈರಾಗ್ಯದ ನಗೆ ಬೀರಿ ಸ್ವಾಗತಿಸುವಾಗ ನಮ್ಮೆದೆಗೆ ಚೂರಿ ಹಾಕಿದ ಅನುಭವವಾಗುತ್ತದೆ. ಯಾಕೆ? ನಮಗೆ ಬೇಕಾದ ವೈಯ್ಯಾರದ ನಗೆ ಬೀರುವ ಸುಮಂಗಲಿಯರು ಚೊಂಬು ಹಿಡಿಯುತ್ತಿಲ್ಲ? ಅವರೆಲ್ಲ ಎಲ್ಲಿ ಹೋದರು? ಸ್ತ್ರೀರಾಮಚಂದಿರನೆ ಸ್ತ್ರೀಲೋಲ ಸುಂದರನೆ ಹಾಡು ಮರೆತುಬಿಟ್ಟರೇ?

“ದೇವರೇ ನಿಮ್ಮ ಜೊತೆಗಿದ್ದಾನೆ. ದೇವರ ಸಹವಾಸದಲ್ಲಿ ನೀವೆಲ್ಲ ಸ್ವರ್ಗವನ್ನೇ ಕಾಣುತ್ತೀರಿ” ಎಂದು ಭೋಂಗು ಬಿಟ್ಟು ಎಲ್ಲರನ್ನೂ ನಮಗೆ ಬೇಕಾದಂತೆ ಕುಣಿಸುತ್ತಿದ್ದೆವು. ಜೈಕಾರಗಳ ಅಬ್ಬರಗಳ ನಡುವೆ ಸಾಂಸಾರಿಕ ತಾಪತ್ರಯಗಳ ನೆನಪಾಗಿ ಕಣ್ಣಲ್ಲಿ ಹನಿಗಳುದುರುವ ಭಕ್ತ ಭಾವುಕರೆಲ್ಲ ನಮ್ಮನ್ನೇ ದೇವರ ಅವತಾರವೆಂದು ಭಾವಿಸಿ ಹೇಳಿಕೊಳ್ಳಬಾರದ ಗುಟ್ಟನ್ನೆಲ್ಲ ಹೇಳಿಕೊಳ್ಳುತ್ತಿದ್ದರು. ಗುಟ್ಟುಗಳನ್ನು ಅರಿತಮೇಲೆ ನಮ್ಮ ಸ್ವೇಚ್ಛಾಚಾರಕ್ಕೆ ತಕ್ಕ ಪ್ಲಾನು ರೆಡಿಮಾಡಿಕೊಳ್ಳುತ್ತಿದ್ದೆವು. ಯಾರ ಸಂಸಾರ ಹಾಳಾದ್ರೆ ನಮಗೇನ್ರಿ? ನಮಗೆ ನಾವು ಬಯಸುವುದೆಲ್ಲ ಬೇಕಷ್ಟೆ.

ಅಂತರ್ಜಾಲದಲ್ಲಿ ಇಲಿಹಿಡ್ಕ ಮೊದಲಾದ ಜನರನ್ನು ನಾವು ಸತತವಾಗಿ ಜೈಕಾರ ಹಾಕಲು ನೇಮಿಸಿದ್ದೆವು. ಹಳದೀ ತಾಲಿಬಾನಿನ ಅಂತರ್ಜಾಲದ ಗುಂಪಿಗೆ ಹಲವರನ್ನು ಸೇರಿಸುವುದು ಮತ್ತು ನಮ್ಮ ಸ್ರ್ರೀರಾಮ ಬಳಗದ ಎಲ್ಲಾ ಪೋಸ್ಟುಗಳನ್ನು ಅತ್ಯಧಿಕ ಸಂಖ್ಯೆಯಲ್ಲಿ ಹಂಚಿಕೆ ಮಾಡುವುದು ಮತ್ತು ಒತ್ತಾಯ ಪೂರ್ವಕವಾಗಿ ಮರುಹಂಚಿಕೆ ಮಾಡಿಸುವುದು ಅವರೆಲ್ಲರ ಕೆಲಸವಾಗಿತ್ತು. ಈಗೀಗ ಇಲಿಗಳೆಲ್ಲ ಹುಲಿಗಳಾಗಿವೆ; ಕೆಲಸ ಸಲೀಸಾಗಿ ಸಾಗುತ್ತಿಲ್ಲ. ಹೂತು ಹೋಗುವ ಹಳ್ಳಿಯ ರಸ್ತೆಯಲ್ಲಿ ಇನ್ನೇನು ಮಟ್ಕಾ ಸೇರುವ ರೊಟರೊಟರ್ ಹೊಗೆ ಆಟೋ ಓಡಿಸಿದ ಅನುಭವ ನಮ್ಮದಾಗುತ್ತಿದೆ.

ಹಲವು ಸದ್ಗುಣಿಗಳಿಗೆ ನಮ್ಮ ಲೌಕಿಕ ಅದಾಲತ್ ಐದಾರು ವರ್ಷಗಳಿಂದ ಗೊತ್ತೇ ಇತ್ತು. ನಾವು ದೂರದ ದೀವಿಗೆ ಬೆಳಗುವಲ್ಲಿ ಇದ್ದಾಗ ಬೆಂಗಳೂರಿನ ಸದ್ಗುಣಿಗಳಿಗೆ ಬುಲಾವ್ ಮಾಡಿ, ಬೆಳಗಿನ ಜಾವದಲ್ಲೇ ಅಶ್ವಿನಿ ನಕ್ಷತ್ರದ ಪ್ರಕಾಶ ಕಾಣಿಸುವಂತೆ ವ್ಯವಸ್ಥೆ ಮಾಡಿಕೊಂಡಿರಲಿಲ್ಲವೇ? ನಮ್ಮ ಚಿತ್ರವಿಚಿತ್ರ ಅವತಾರಗಳಿಗೆ ಸದ್ಗುಣಿಗಳು ಮರುಗಿದ್ದರಂತೆ.

ಈಗೀಗ ಸದ್ಗುಣಿಗಳಂತ ಹಲವರು ನಮ್ಮಲ್ಲಿಗೆ ಬರುವುದನ್ನೇ ಕಡಿಮೆ ಮಾಡಿದ್ದಾರೆ. ತನ್ಮಧ್ಯೆ ಕೆಲವರಿಗೆ ನಾವು ಬೆದರಿಕೆ ಹಾಕಿಸಿದ್ದುಂಟು ಮಾರಾಯ್ರೆ. ಹಳದೀ ತಾಲಿಬಾನಿನಲ್ಲಿ ಯಾರು ನಮ್ಮನ್ನು ಬೆಂಬಲಿಸದೆ ಸೈಲೆಂಟಾಗಿರ್ತಾರೋ ಅವರನ್ನೆಲ್ಲ ಮುಂದೊಂದು ದಿನ ನಾವು ಒಂದು ಕೈ ನೋಡಿಕೊಳ್ತೀವಿ ಎಂದಿದ್ದೆವು. ನಮ್ಮ ವಿರುದ್ಧ ತಿರುಗಿ ಬೀಳುವವರಿಗೆಲ್ಲ ತಕ್ಕ ಶಾಸ್ತಿ ಮಾಡುವವರಿದ್ದೇವೆ ನಾವು. ಜಯಲಲಿತಾಳ ರೀತಿಯಲ್ಲಿ ಕೇಸು ಗೆಲ್ಲುವ ನಿರೀಕ್ಷಣೆಯಲ್ಲಿ ನಾವು ಬೀದಿ ನಾಯಿಗಿಂತ ಜೋರಾಗಿ ಅಲೆಯುತ್ತಿದ್ದೇವೆ.

ಇಷ್ಟುದಿನ ನಾವು ಸೀಟಿನ ಪ್ರಭಾವ, ಸನ್ಯಾಸಿ ಕೋಪ,ಶಾಪ,ತಾಪ, ವಂಶ ನಿರ್ವಂಶವಾಗಿ ಹೋಗುತ್ತದೆಂದು ಭಯ ಹುಟ್ಟಿಸುವಿಕೆ ಮೊದಲಾದ ಹಲವು ಅಸ್ತ್ರಗಳನ್ನು ಪ್ರಯೋಗಿಸಿ ಕುರಿಗಳನ್ನು ಕೊಟ್ಟಿಗೆಯಲ್ಲಿ ಒತ್ತಟ್ಟಿಗೆ ಕೂಡಿಟ್ಟುಕೊಳ್ಳುವಲ್ಲಿ ಗೆದ್ದೆವು; ಆದರೆ ಈಗ ಅಂತಹ ಅಸ್ತ್ರಗಳಾವುವೂ ನಾಟುತ್ತಿಲ್ಲ. ಕುಲಪತಿ ಬಾವಯ್ಯನೊಡನೆ ದೀರ್ಘಕಾಲದ ಗುಪ್ತ ಸಮಾಲೋಚನೆ ಬಳಿಕ ಯಾತ್ರೆ ಹಮ್ಮಿ ಕೊಂಡೆವು; ಬಾವಯ್ಯನ ಯೋಜನೆ ಬೀದೀಲಿ ಬಿದ್ದು ಹೋಯಿತು, ಜನ ಬರಲೇ ಇಲ್ಲ; ಜ್ಯೋತಿ ಆರದೆ ಮುಂದೆ ಸಾಗುವುದೇ ಕಷ್ಟವಾಗಿದೆ.

ನಮ್ಮ ಸೇವೆಗೆ ಇರುವವರೆಲ್ಲ ಏನು ಮಾಡ್ತಿದ್ದಾರೆ? ಕತ್ತೆ ಕಾಯುತ್ತಿದ್ದಾರೆಯೇ? ಇಲ್ಲ ಪಾಪ, ನಮ್ಮ ಸೇವೆಗೆ ಇರುವ ಗಿಂಡಿಗಳು ಇಷ್ಟುದಿನ ತೇರಿನ ಮಿಣಿಯಂತಹ ಬಂಗಾರದ ಹಗ್ಗ ಹಾಕಿಕೊಳ್ಳುತ್ತ, ಒಡೆ ಚಕ್ಕುಲಿ ಸಿಕ್ಕಿದ್ದು ತಿನ್ನುತ್ತ ಒತ್ತರಿಸಿ ಗಾಳಿ ತುಂಬಿದ ಲಾರಿ ಟೈರಿನಂತಾಗಿದ್ದವರು ಈಗೀಗ ಪಂಕ್ಚರ್ ಆಗಿ ಗಾಳಿಹೋದ ಟೈರಿನಂತೆ ಕಾಣುತ್ತಿರುವಾಗ, ದೂರದಲ್ಲಿ ಕರ್ಣನಂತ ಕೆಲವರು ಹೂತುಹೋದ ಗಾಲಿ ಎತ್ತುವ ಹರಸಾಹಸ ಮಾಡುವುದು ಕಾಣಿಸುತ್ತಿದೆ.

ಜಗತ್ತು ದುಡ್ಡಿನಮೇಲೆಯೇ ನಿಂತಿದೆ ಎಂಬ ಲೌಕಿಕ ಗುಟ್ಟನ್ನು ಅರಿತಿದ್ದ ನಾವು ಇದುವರೆಗೆ ’ದುಡಿದ’ ಮತ್ತು ಬಿಸಾಡಿದ ಹಣವೆಷ್ಟೋ; ಆದರೆ ಈಗೀಗ ಹಣದ ಕೊರತೆ ಗಾಢವಾಗಿ ಬರಗಾಲದಲ್ಲಿ ಗೆಡ್ಡೆ ಬೇಯಿಸಿಕೊಂಡು ತಿಂದು ಬದುಕುವವರಂತೆ ’ಸಿಕ್ಕಿದ್ದೇ ಮಕ್ಕಳ ಪುಣ್ಯ’ ಎಂದು ಪಡೆದುಕೊಳ್ಳುತ್ತಿದ್ದೇವೆ; ನಮಗೂ ಸಾಕಷ್ಟು ಮಕ್ಕಳಿರುವುದರಿಂದ ಈ ಗಾದೆಯನ್ನು ನಾವು ಉಪಯೋಗಿಸಬಹುದಾಗಿದೆ.

ಅಂದಹಾಗೆ ನಮ್ಮ ಮಕ್ಕಳಲ್ಲಿ ಹಲವರ ಅಮ್ಮಂದಿರ ಸಂಸಾರವನ್ನು ತೂಗುವ ಭರವಸೆಯನ್ನು ನಾವು ಏಕಾಂತದಲ್ಲಿ ನೀಡುತ್ತಿದ್ದೆವು; ಈಗ ಅವರೆಲ್ಲರಿಗೆ ಕೈ ತಿರುವ ಬೇಕಾದ ದಿನ ಹತ್ತಿರಬಂದಿದೆ; ಇದು ಡಾರ್ವಿನ್ ವಿಕಾಸ ವಾದ. ಅವರಿಗೆಲ್ಲ ಏನು ಉತ್ತರ ಹೇಳುವುದು? ಒಂದೊಮ್ಮೆ ಅವರಿಗೆ ಕೈ ತಿರುವಿದರೆ ಅವರೆಲ್ಲ ನಮ್ಮ ವಿರುದ್ಧ ವಿಚಾರಣೆಯಲ್ಲಿ ಲಿಖಿತ ಹೇಳಿಕೆ ಕೊಟ್ಟರೆ ನಮ್ಮ ಗತಿಯೇನು, ನಮ್ಮ ಕತೆಯೇನು?

ನಮ್ಮ ಕತೆ ಬಿಡಿ, ಅದಾಗಲೇ ಅದು ಹಳ್ಳಹಿಡಿದಿದೆ; ನಾವೇನೂ ಸೋತಿಲ್ಲ ಎಂದು ತೋರಿಸಲು ಶಾಸ್ತ್ರಕ್ಕೆ ಮಂಡಕ್ಕಿ ಮೇಳದೊಂದಿಗೆ ನಾವು ಹರುಕಲು ಪುರುಕಲು ರೀತಿಯಲ್ಲಿ ಎರಡೆರಡು ದಿನ ಕಷ್ಟಪಟ್ಟು ನಿಭಾಯಿಸಿದ್ದೇವೆ. ದೊಡ್ಡ ಗೌಡರ ಸಭೆಗೆ ಜನರನ್ನು ದುಡ್ಡು-ಎಣ್ಣೆ ಕೊಟ್ಟು ಕರೆತಂದಂತೆ. ಕತೆ ಕೇಳಲೂ ’ಬಾಡಿಗೆ ಜನರ’ನ್ನು ಕರೆತರಬೇಕಾದ ಪರಿಸ್ಥಿತಿ ಇದೆ. ಕಲಾವಿದರು ಎನಿಸಿಕೊಂಡವರು ಕೆಲವರು ತಮ್ಮ ಸಾಮಾನು ಸರಂಜಾಮು ಕಟ್ಟಿಕೊಂಡು ನಮ್ಮಿಂದ ಬಹುದೂರ ಹೋಗಿ ಕುಳಿತುಬಿಟ್ಟಿದ್ದಾರೆ; ಕೆಲವು ಮರುಳು ಕಲಾವಿದರು ಮಾತ್ರ ನಮ್ಮ ಜೊತೆಗಿದ್ದಾರಷ್ಟೆ. ಹಾಡುಗಾರಿಕೆಯಲ್ಲಿ ಮಾಳಬೆಕ್ಕಿನ ಅಪಸ್ವರ ಕೇಳಿದಂತೆನಿಸುತ್ತದೆ; ಕಾಗೆ ಕಾಗೆಯೇ ಮತ್ತು ಕೋಗಿಲೆ ಕೋಗಿಲೆಯೇ ಎಂಬ ಪಕ್ಕಾ ಅನುಭವವನ್ನು ಪಡೆದುಕೊಂಡ ನಮಗೆ ದೂರ ಸಾಗಿದ ಕೋಗಿಲೆಯ ದನಿಯ ನೆನಪಾದಾಗ ಕರೆಂಟ್ ಹೊಡೆದ ಕಾಗೆಯಂತಾಗುತ್ತೇವೆ.

ಕೋಗಿಲೆಯ ಇತ್ತೀಚೆಗಿನ ಗಾನ ಸುಧೆಯನ್ನು ಕದ್ದು ಕೇಳಿದ ನಮಗೆ ನಮ್ಮ ಅಸಹಾಯಕತೆಯಲ್ಲಿ ಕೋಗಿಲೆಯ ಮೇಲೆ ಭಯಂಕರ ರೋಷಾವೇಷ ದ್ವೇಷ ಎಲ್ಲವೂ ಒಟ್ಟೊಟ್ಟಿಗೆ ಒಡಮೂಡುತ್ತವೆ. ನಮ್ಮ ತಾಲೀಬಾನಿಗರು ಕೋಗಿಲೆ ಕೈಗೆ ಸಿಕ್ಕರೆ ಮತ್ತೆಂದೂ ಹಾಡದಂತೆ ಮಾಡುವ ಭರದಲ್ಲಿದ್ದರು, ಆದರೆ ವಿಧಿಯಿಚ್ಛೆ ನಮ್ಮ ’ಪವಾಡ’ವನ್ನೆಲ್ಲ ಮೀರಿ ಕೋಗಿಲೆಯನ್ನು ಕಾಪಾಡಿಬಿಟ್ಟಿತು.

ಸೋತ ಸುಯೋಧನನಿಗೂ ಸ್ವಾಭಿಮಾನವಿತ್ತಷ್ಟೇ? ನ್ಯಾಯಕಾರಣದಲ್ಲಿ ನಾವು ಮಸಲತ್ತಿನಿಂದ ಗೆದ್ದರೂ ಸಮಾಜದಲ್ಲಿ ಬಿಡಿಗಾಸಿನ ಮರ್ಯಾದೆಯೂ ನಮಗೆ ಉಳಿದಿಲ್ಲ ಎಂಬುದು ನಮ್ಮರಿವಿಗೆ ಬಂದಿದೆ. ಬಿಳಿ ತೊನ್ನನ್ನು ಬಹಳ ದಿನ ಮುಚ್ಚಿಡಲು ಸಾಧ್ಯವೇ? ಅದು ಮೈಪೂರ್ತಿ ಪಸರಿಸುವಾಗ ಕಂಡೇ ಕಾಣುತ್ತದೆ. ಅದರಂತೆ ವಾಸನಾಮಯ ಚಾರಿತ್ರ್ಯ ಸಮಾಜದ ಹಲವರಿಗೆ ಈಗ ತಿಳಿದುಹೋಗಿದೆ.

ನಮ್ಮ ವಿರುದ್ಧ ಏನಾದರೂ ಹೇಳಿಕೆ ಕೊಡುವ ಅಂತರ್ಜಾಲ ವಿಹಾರಿಗಳಿಗೂ ಈಗಾಗಲೇ ನಮ್ಮ ಪಟಾಲಮ್ಮು ತಕ್ಕ ಶಾಸ್ತಿ ಮಾಡಿದೆ. ನಮ್ಮನ್ನವರು ಏನಂದುಕೊಂಡಿದ್ದಾರೆ? ಹಾವಾಡಿಗ ಮಹಾಸಂಸ್ಥಾನದವರೆಂದರೇನು……ಅವರ ಸಾಮರ್ಥ್ಯವೇನು?….ಅವರ ’ಘನತೆ’, ’ಗೌರವ’ವೇನು?…..ಅವರು ನಿರ್ಮಿಸಿಕೊಂಡ ವೀರ್ಯ ಸನ್ಯಾಸದ ಮಹತ್ವವೇನು? ಇದನ್ನೆಲ್ಲ ಅವರು ತಿಳಿದುಕೊಂಡಿದ್ದಾರ್ಯೇ? ಸಾವಿರಾರು ವರ್ಷಗಳ ಇತಿಹಾಸವಿದೆ ಎಂದು ಕತೆಕೊಚ್ಚುವ ನಾವು ಇತಿಹಾಸಕ್ಕೆ ಮಸಿಬಳಿದು ಸಮಾಜವನ್ನು ಮಂಗಮಾಡಿ ನಾವು ಮರದ ಕೆಳಗೆ ಬಿದ್ದ ಮಂಗದಂತಾಗಿದ್ದೇವೆಂದು ಅವರು ಅರಿಯರೇ?

ಹದಿನೆಂಟು ಅಕ್ಷೋಹಿಣಿ ಸೈನ್ಯವೇ ಸತ್ತು ಮಲಗಿದ್ದರೂ ಸೋಲಲೊಪ್ಪದ ಸುಯೋಧನ ಅದೆಂತಹ ಸ್ವಾಭಿಮಾನಿ ಬಲ್ಲಿರೇ? ಅವನ ಆದರ್ಶಗಳನ್ನೇ ಮೈವೆತ್ತ ನಾವು ಅದೇ ಹಾದಿಯಲ್ಲಿ ಮುನ್ನಡೆಯುತ್ತಿದ್ದೇವೆ. “ಈಗ ನಮ್ಮ ವಿರುದ್ಧ ಯಾರ್‍ಯಾರು ಯಾವ್ಯಾವ ರೀತಿಯಲ್ಲಿ ಲೇವಡಿ ಮಾಡುತ್ತಾರೋ ಮಾಡಲಿ, ಟೀಕಿಸುತ್ತಾರೋ ಟೀಕಿಸಲಿ, ಮುಂದೊಂದು ದಿನ ನಾವು ಗೆದ್ದು ಅವರೆಲ್ಲರಿಗೂ ತಕ್ಕ ಶಾಸ್ತಿ ಮಾಡುತ್ತೇವೆ” ಎಂದು ಗುಟುರು ಹಾಕಿದ್ದೇವೆ.

ಅದಾರು ದೂರದಲ್ಲಿ …ಯಾರೋ ಬರುತ್ತಿದ್ದಾರಲ್ಲ?…..ನಮ್ಮ ಸಂಜಯ ….ನಮ್ಮ ಸಂಜಯ…..ಉರುಫ್ ನಮ್ಮ ಇಮ್ಮಡಿ ವಿಶ್ವೇಶ್ವರಯ್ಯ. “ಎಲವೋ ಸಂಜಯನಂತಹ ಇಮ್ಮಡಿ ವಿಶ್ವೇಶ್ವರಯ್ಯನೇ ಕೇಳು….. ಹೋಗಿ ನಮ್ಮವರಿಗೆಲ್ಲ ಸುಯೋಧನ ಇನ್ನೂ ಬದುಕಿದ್ದಾನೆ ಅಂತ ಏನಾದರೂ ಹೇಳಿಬಿಡು…ಮತ್ತೆ ನಾವು ಸೀಟಿನಲ್ಲೇ ಇದ್ದರೆ ಮುಂದೊಂದು ದಿನ ನಿನ್ನನ್ನು ನೋಟಿನ ಕಂತೆಯೊಡನೆ ಭೇಟಿಯಾಗುತ್ತೇವೆ. ’ಆಸನ’ವನ್ನು ಕಳೆದುಕೊಂಡ ನೀನು ನಮ್ಮ ಸಲುವಾಗಿ ವರ್ಷದ ಕಾಲ ಒದ್ದಾಡಿದ್ದು, ಇಲ್ಲದ ಕತೆ ಕಟ್ಟಿಬರೆದು ನಮ್ಮ ಬೆನ್ನು ತಟ್ಟಿದ್ದು ನೆನಪಾಗುತ್ತದೆ ಸಂಜಯ……ಓ ಸಂಜಯ ……..ತಿರುತಿರುಗಿ ನಮ್ಮನ್ನು ನೋಡುತ್ತ ಹಂಗಿಸಬೇಡ ಸಂಜಯ….ಹೋಗಿ ಬಾ…..ನಮ್ಮ ಮಂತ್ರಾಕ್ಷತೆ ಪವಾಡ ನಿನಗೆ ಪ್ರಯೋಜನವಾಗಲಿಲ್ಲವೆಂದು ಬೇಸರಿಸಬೇಡ ಸಂಜಯ… ಹೋಗಿ ಬಾ….”

Thumari Ramachandra

source: https://www.facebook.com/groups/1499395003680065/permalink/1619974478288783/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s