ಆತ್ಮ ಸಾಕ್ಷಾತ್ಕಾರದೊಂದಿಗೆ ತುಮರಿಯ ಪುರಪ್ರವೇಶ

ಆತ್ಮ ಸಾಕ್ಷಾತ್ಕಾರದೊಂದಿಗೆ ತುಮರಿಯ ಪುರಪ್ರವೇಶ

ತುಮರಿ ಹಾಸ್ಯಗಾರನೇ? ತುಮರಿ ಟೀಕಾಕಾರನೇ? ತುಮರಿ ಭಾಷ್ಯಬರಹಗಾರನೇ? ತುಮರಿ ರಾಜಕಾರಣಿಯೇ?ತುಮರಿ ವೈದ್ಯನೇ ಅಥವಾ ತುಮರಿಯೇ ಮಠಾಧಿಪತಿಯೇ ಎಂದು ಲೆಕ್ಕಹಾಕುವ ಜನರ ಮಧ್ಯದಲ್ಲಿ ವಿಭಿನ್ನ ಆಯಾಮಗಳನ್ನು ಅವಲೋಕಿಸುವ ತುಮರಿಯ ಪುರಪ್ರವೇಶ ಜನರಿಲ್ಲದ ಜ್ಯೋತಿ ಯಾತ್ರೆಯಂತೆ ಸೈಲೆಂಟಾಗಿ ಆಗಿಹೋಗಿದೆ!

ಶನಿವಾರ-ಭಾನುವಾರಗಳಂದು ಮಾತ್ರ ಯಾವ್ಯಾವುದೋ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜೈಕಾರ ಹಾಕಿಸಿಕೊಳ್ಳುತ್ತ ಉಳಿದ ದಿನಗಳಲ್ಲಿ ಹೆಚ್ಚಿಗೆ ಪ್ರಚಾರ ನೀಡದೇ, ಆದಷ್ಟೂ ಸೇಫ್ ಆಗಿರುವ ಜಾಗ ಸೇರಿಕೊಳ್ಳಲಿಕ್ಕೆ ತುಮರಿಯೇನು ನಿರೀಕ್ಷಣಾ ಜಾಮೀನಿನಮೇಲೆ ಓಡಾಡುತ್ತಿರುವ ಕಳ್ಳಸನ್ಯಾಸಿಯೇ? ಅಲ್ಲ.

ವಾರದ ಕೆಳಗೆ ಕೆಲಸವೆನ್ನುತ್ತ ಓಡಿದ್ದ ತುಮರಿಗೆ ಮರಳಿ ಬರುವುದರೊಳಗೆ ಆತ್ಮಸಾಕ್ಷಾತ್ಕಾರವಾಯಿತೇ? ಖಂಡಿತಕ್ಕೂ ಇಲ್ಲ. ಹಾಗಾದರೆ ಆ ಶೀರ್ಷಿಕೆಯನ್ನೇಕೆ ನೀಡಿದ್ದು?ಅದು ಟಿವಿ ಚಾನೆಲ್‍ಗಳು ನೀಡುವ ಶೀರ್ಷಿಕೆಗಳ ಅನುಕರಣೆಯಷ್ಟೆ! ಯತಿಗಳಿಗೆ ದೊರಕುವ ಆತ್ಮಸಾಕ್ಷಾತ್ಕಾರದ ರಹದಾರಿಯ ಪರಿವೀಕ್ಷಣೆಯಲ್ಲಿ ತೊಡಗಿದ್ದ ತುಮರಿಗೆ ಆ ಮಾರ್ಗದ ಮೈಲಿಗಲ್ಲುಗಳ ಮೇಲೆ ಬರೆದ ಬಾಕಿ ಉಳಿದ ದೂರದ ಲೆಕ್ಕಾಚಾರಗಳು ಕಂಡವು;ಅದನ್ನೇ ನಿಮ್ಮ ಮುಂದೆ ಸುರುಹುವ ಪ್ರಯತ್ನ ಇಂದು ನಡೆಯಲಿದೆ.

ಅಥ ಆತ್ಮನಿರ್ಣಯಮ್ ವ್ಯಾಖ್ಯಾಸ್ಯೇ | ಹೃದಿಸ್ಥಾನೇ ಅಷ್ಟದಲಪದ್ಮಮ್ ವರ್ತತೇ ತತ್ ಮಧ್ಯೇ ರೇಖಾವಲಯಮ್ ಕೃತ್ವಾ ಜೀವಾತ್ಮರೂಪಮ್ ಜ್ಯೋತಿರೂಪಮ್ ಅಣುಮಾತ್ರಮ್ ವರ್ತತೇ ತಸ್ಮಿನ್ ಸರ್ವಮ್ ಪ್ರತಿಷ್ಠಿತಮ್ ಭವತಿ

ಸರ್ವಮ್ ಜಾನಾತಿ ಸರ್ವಮ್ ಕರೋತಿ ಸರ್ವಮ್ ಏತತ್ ಚರಿತಮ್
ಅಹಮ್ ಕರ್ತಾ ಅಹಮ್ ಭೋಕ್ತಾ ಸುಖೀ ದುಃಖೀ ಕಾಣಃ ಖಂಜಃ ಬದಿರಃ ಮೂಕಃ ಕೃಶಃ ಸ್ಥೂಲಃ ಅನೇನ ಪ್ರಕಾರೇಣ ಸ್ವತಂತ್ರವಾದೇನ ವರ್ತತೇ |

ಪೂರ್ವದಲೇ ವಿಶ್ರಮತೇ ಪೂರ್ವಮ್ ದಲಮ್ ಶ್ವೇತವರ್ಣಮ್ ತದಾ ಭಕ್ತಿಪುರಃಸರಮ್ ಧರ್ಮೇ ಮತಿಃ ಭವತಿ|
ಯದಾ ಆಗ್ನೇಯ ದಲೇ ವಿಶ್ರಮತೇ ತತ್ ಆಗ್ನೇಯದಲಮ್ ರಕ್ತವರ್ಣಮ್ ತದಾ ನಿದ್ರಾಲಸ್ಯೇ ಮತಿರ್ಭವತಿ |
ಯದಾ ದಕ್ಷಿಣ ದಲೇ ವಿಶ್ರಮತೇ ತತ್ ತತ್ ದಕ್ಷಿಣಯದಲಮ್ ಕೃಷ್ಣವರ್ಣಮ್ ತದಾ ದ್ವೇಷಕೋಪಮತಿಃ ಭವತಿ |
ಯದಾ ನೈ‌ಋತದಲೇ ವಿಶ್ರಮತೇ ತತ್ ನೈ‌ಋತದಲಮ್ ನೀಲವರ್ಣಮ್ ತದಾ ಪಾಪಕರ್ಮಾಹಿಂಸಾಮತಿಃ ಭವತಿ |
ಯದಾ ಪಶ್ಚಿಮದಲೇ ವಿಶ್ರಮತೇ ತತ್ ಪಶ್ಚಿಮದಲಮ್ ಸ್ಫಟಿಕವರ್ಣಮ್ ತದಾ ಕ್ರೀಡಾವಿನೋದೇ ಮತಿಃ ಭವತಿ |
ಯದಾ ವಾಯವ್ಯದಲೇ ವಿಶ್ರಮತೇ ತತ್ ವಾಯವ್ಯದಲಮ್ ಮಾಣಿಕ್ಯವರ್ಣಮ್ ತದಾ ಗಮನಚಲನವೈರಾಗ್ಯಮತಿಃ ಭವತಿ |
ಯದಾ ಉತ್ತರದಲೇ ವಿಶ್ರಮತೇ ತತ್ ಉತ್ತರದಲಮ್ ಪೀತವರ್ಣಮ್ ಸುಖಶೃಂಗಾರಮತಿಃ ಭವತಿ |
ಯದಾ ಈಶಾನದಲೇ ವಿಶ್ರಮತೇ ತತ್ ಈಶಾನದಲಮ್ ವೈಡೂರ್ಯವರ್ಣಮ್ ತದಾ ದಾನಾದಿಕೃಪಾಮತಿಃ ಭವತಿ |
ಯದಾ ಯದಾ ಸಂಧಿಸಂಧಿಷು ಮತಿಃ ಭವತಿ ತದಾ ವಾತಪಿತ್ತಶ್ಲೇಷ್ಮಮಹಾವ್ಯಾಧಿಪ್ರಕೋಪಃ ಭವತಿ |
ಯದಾ ಮಧ್ಯೇ ತಿಷ್ಠತಿ ತದಾ ಸರ್ವಮ್ ಜಾನಾತಿ ಗಾಯತಿ ನೃತ್ಯತಿ ಪಠತಿ ಆನಂದಮ್ ಕರೋತಿ |
ಯದಾ ನೇತ್ರಶ್ರಮಃ ಭವತಿ ಶ್ರಮನಿರ್ಭರಣಾರ್ಥಮ್ ಪ್ರಥಮರೇಖಾವಲಯಮ್ ಕೃತ್ವಾ ಮಧ್ಯೇ ನಿಮಜ್ಜನಮ್ ಕುರುತೇ |

ಪ್ರಥಮರೇಖಾಬಂಧಕಪುಷ್ಪವರ್ಣಮ್ ತದಾ ನಿದ್ರಾವಸ್ಥಾ ಭವತಿ | ನಿದ್ರಾವಸ್ಥಾ ಮಧ್ಯೇ ಸ್ವಪ್ನಾವಸ್ಥಾ ಭವತಿ| ಸ್ವಪ್ನಾವಸ್ಥಾ ಮಧ್ಯೇ ದೃಷ್ಟಮ್ ಶೃತಮ್ ಅನುಮಾನಸಂಭವವಾರ್ತಾ ಇತಿ ಆದಿ ಕಲ್ಪನಾಮ್ ಕರೋತಿ ತದಾದಿಶ್ರಮಃ ಭವತಿ| ಶ್ರಮನುರ್ಹರಣಾರ್ಥಮ್ ದ್ವಿತೀಯರೇಖಾವಲಯಮ್ ಕೃತ್ವಾ ಮಧ್ಯೇ ನಿಮಜ್ಜನಮ್ ಕುರುತೇ |

ದ್ವಿತೀಯರೇಖಾ ಇಂದ್ರಕೋಪವರ್ಣಮ್ ತದಾ ಸುಷುಪ್ತ್ಯವಸ್ಥಾ ಭವತಿ ಸುಷುಪ್ತೌ ಕೇವಲ ಪರಮೇಶ್ವರಸಂಬಂಧಿನೀ ಬುದ್ಧಿಃ ಭವತಿ | ನಿತ್ಯಬೋಧಸ್ವರೂಪಾ ಭವತಿ ಪಶ್ಚಾತ್ ಪರಮೇಶ್ವರರೂಪೇಣ ಪ್ರಾಪ್ತಿಃ ಭವತಿ|

ತೃತೀಯರೇಖಾವಲಯಮ್ ಕೃತ್ವಾ ಮಧ್ಯೇ ನಿಮಜ್ಜನಮ್ ಕುರುತೇ ತೃತೀಯರೇಖಾ ಪದ್ಮರಾಗವರ್ಣಮ್ ತದಾ ತುರೀಯಾವಸ್ಥಾ ಭವತಿ ತುರೀಯೇ ಕೇವಲ ಪರಮಾತ್ಮಸಂಬಂಧಿನೀ ಭವತಿ | ನಿತ್ಯಬೋಧಸ್ವರೂಪಾ ಭವತಿ ತದಾ ಶನೈಃ ಶನೈಃ ಉಪರಮೇತ್ ಬುಧ್ಯಾಧೃತಿಗೃಹೀತಯಾ ಆತ್ಮ ಸಂಸ್ಥಮ್ ಮನಃ ಕೃತ್ವಾ ನ ಕಿಂಚಿತ್ ಅಪಿ ಚಿಂತಯೇತ್ತದಾ ಪ್ರಾಣಾಪಾನಯೋಃ ಐಕ್ಯಮ್ ಕೃತ್ವಾ ಸರ್ವಮ್ ವಿಶ್ವಮ್ ಆತ್ಮಸ್ವರೂಪೇಣ ಲಕ್ಷ್ಯಮ್ ಧಾರಯತಿ | ಯದಾ ತುರೀತೀತಾವಸ್ಥಾ ತದಾ ಸರ್ವೇಷಾಮ್ ಆನಂದಸ್ವರೂಪಃ ಭವತಿ | ದ್ವಂದ್ವಾತೀತಃ ಭವತಿ ಯಾವತ್ ದೇಹಧಾರಣಾ ವರ್ತತೇ ತಾವತ್ ತಿಷ್ಠತಿ ಪಶ್ಚಾತ್ ಪರಮಾತ್ಮಸ್ವರೂಪೇಣ ಪ್ರಾಪ್ತಿಃ ಭವತಿ ಇತಿ ಅನೇನ ಪ್ರಕಾರೇಣ ಮೋಕ್ಷಃ ಭವತಿ ಇದಮ್ ಏವ ಆತ್ಮದರ್ಶನೋಪಾಯಾ ಭವಂತಿ ಚತುಷ್ಪಥಸಮಾಯುಕ್ತಮಹಾದ್ವರಗವಾಯುನಾ| ಸಹಸ್ಥಿತತ್ರಿಕೋಣಾರ್ಧಗಮನೇ ದೃಶ್ಯತೇ ಅಚ್ಯುತಃ

ಈ ಶ್ಲೋಕಗಳನ್ನು ಬಹಳ ವಿಸ್ತಾರವಾಗಿ ವ್ಯಾಖ್ಯಾನಿಸಬಹುದು. ಸಮಯ ಮತ್ತು ಸನ್ನಿವೇಶ ನಿಮಿತ್ತ ಸರಳ ಅರ್ಥವನ್ನು ಮಾತ್ರ ತಿಳಿದುಕೊಳ್ಳೋಣ.

ಹೃದಯ ಪ್ರದೇಶದ ದಹ್ರ ಎಂಬಲ್ಲಿ ಎಂಟು ದಳದ ಕಮಲವು ಇರುತ್ತದೆ. ಅದರ ಮಧ್ಯದಲ್ಲಿ ಪ್ರಕಾಶರೂಪನಾದ ಜೀವನು ಸೂಕ್ಷ್ಮರೂಪದಲ್ಲಿ ನೆಲೆಸಿರುತ್ತಾನೆ. ಈ ಚೈತನ್ಯದಲ್ಲಿ ಎಲ್ಲವೂ ಅಡಕವಾಗಿದೆ. ಅವನು ಎಕ್ಲಕಾರ್ಯಗಳನ್ನು ಮಾಡುತ್ತಾನೆ. ಎಲ್ಲವನ್ನೂ ತಿಳಿದಿರುತ್ತಾನೆ. ನಾನು ಕರ್ತೃ, ಭೋಕ್ತೃ, ಸುಖೀ, ದುಃಖೀ, ಕುರುಡ, ಕುಂಟ, ಕಿವುಡ, ಮೂಕ , ಕೃಶ , ಸ್ಥೂಲ, ಹೀಗೆ ಅನೇಕ ರೀತಿಯಲ್ಲಿ ಸ್ವತೆಂತ್ರವಾಗಿ ವ್ಯವಹರಿಸುತ್ತಾನೆ.

ಹೃದಯದಲ್ಲಿರುವ ಅಷ್ಟದಳ ಕಮಲದಲ್ಲಿ , ಪೂರ್ವದಿಕ್ಕಿನ ಶ್ವೇತವರ್ಣದ ದಳದಲ್ಲಿ ಜೀವನು ಇರುವಾಗ ಭಕ್ತಿಪೂರ್ವಕವಾಗಿ, ಧಾರ್ಮಿಕ ವಿಷಯಗಳಲ್ಲಿ ಮನಸ್ಸು ಉಂಟಾಗುತ್ತದೆ. ಕೆಂಪುವರ್ಣದಿಂದ ಕೂಡಿದ ಆಗ್ನೇಯ ದಿಕ್ಕಿನ ದಳದಲ್ಲಿ ಜೀವನು ಇರುವಾಗ ನಿದ್ರೆ, ಆಲಸ್ಯ ಇವುಗಳಲ್ಲಿ ಮನಸ್ಸು ಉಂಟಾಗುತ್ತದೆ. ಕಪ್ಪುವರ್ಣದಿಂದ ಕೂಡಿದ ದಕ್ಷಿಣ ದಿಕ್ಕಿನ ದಳದಲ್ಲಿ ಜೀವನು ಇರುವಾಗ ದ್ವೇಷ, ಕೋಪ ಇವುಗಳಲ್ಲಿ ಮನಸ್ಸು ಉಂಟಾಗುತ್ತದೆ. ನೀಲವರ್ಣದಿಂದ ಕೂಡಿದ ನೈ‌ಋತ್ಯ ದಿಕ್ಕಿನ ದಳದಲ್ಲಿ ಜೀವನು ಇರುವಾಗ ಪಾಪಕರ್ಮ, ಹಿಂಸೆ ಇವುಗಳಲ್ಲಿ ಮನಸ್ಸು ಉಂಟಾಗುತ್ತದೆ. ಸ್ಫಟಿಕವರ್ಣದಿಂದ ಕೂಡಿದ ಪಶ್ಚಿಮ ದಿಕ್ಕಿನ ದಳದಲ್ಲಿ ಜೀವನು ಇರುವಾಗ ಕ್ರೀಡಾ-ವಿನೋದಗಳಲ್ಲಿ ಮನಸ್ಸು ಆಸಕ್ತವಾಗುತ್ತದೆ. ಮಾಣಿಕ್ಯವರ್ಣದಿಂದ ಕೂಡಿದ ವಾಯವ್ಯ ದಿಕ್ಕಿನ ದಳದಲ್ಲಿ ಜೀವನು ಇರುವಾಗ ಗಮನ, ಚಲನ, ವೈರಾಗ್ಯ, ಇವುಗಳಲ್ಲಿ ಮನಸ್ಸು ಉಂಟಾಗುತ್ತದೆ. ಹಳದಿವರ್ಣದಿಂದ ಕೂಡಿದ ಉತ್ತರ ದಿಕ್ಕಿನ ದಳದಲ್ಲಿ ಜೀವನು ಇರುವಾಗ ಸುಖ, ಶೃಂಗಾರ ಇವುಗಳಲ್ಲಿ ಮನಸ್ಸು ಆಸ್ಕತಿ ತಳೆಯುತ್ತದೆ. ವೈಡೂರ್ಯವರ್ಣದಿಂದ ಕೂಡಿದ ಈಶಾನ್ಯ ದಿಕ್ಕಿನ ದಳದಲ್ಲಿ ಜೀವನು ಇರುವಾಗ ದಾನ, ಕೃಪೆ ಇವುಗಳಲ್ಲಿ ಮನಸ್ಸು ಉಂಟಾಗುತ್ತದೆ.

ಶರೀರದ ಸಂದುಗಳಲ್ಲಿ ಮತಿಯು ಉಂಟಾದಾಗ ವಾತ, ಪಿತ್ಥ, ಕಫ ಜನ್ಯವಾದ ಮಹಾರೋಗಗಳು ಉಂಟಾಗುತ್ತವೆ. ಜೀವನು ಕಮಲದ ಮಧ್ಯದಲ್ಲಿ ಇರುವಾಗ ಎಲ್ಲವನ್ನೂ ತಿಳಿಯುತ್ತಾನೆ. ಹಾಡುವುದು, ನರ್ತಿಸುವುದು, ಓದುವುದು ಎಲ್ಲವನ್ನೂ ಮಾಡುತ್ತಾನೆ. ಆನಂದವನ್ನು ಅನುಭವಿಸುತ್ತಾನೆ.

ಯಾವಾಗ ಇಂದ್ರಿಯಗಳು ಆಯಾಸವನ್ನು ಹೊಂದುತ್ತವೋ, ಆಗ ಆಯಾಸದ ಪರಿಹಾರಕ್ಕಾಗಿ ಮೊದಲನೇ ರೇಖಾವಲಯವನ್ನು ಮಾಡಿಕೊಂಡು, ಅದರ ಮಧ್ಯದಲ್ಲಿ ಇರುತ್ತಾನೆ. ಈ ಪ್ರಥಮ ರೇಖಾವಲಯವು ಛತ್ರಿಯಕಾರದ [ದಾಸವಾಳ?] ಹೂವನ್ನು ಹೋಲುತ್ತದೆ. ಆಗ ನಿದ್ರಾವಸ್ಥೆಯು ಉಂಟಾಗುತ್ತದೆ. ನಿದ್ರಾವಸ್ಥೆಯ ಮಧ್ಯೆ ಸ್ವಪ್ನಾವಸ್ಥೆಯು ಘಟಿಸುತ್ತದೆ. ಸ್ವಪ್ನಾವಸ್ಥೆಯಲ್ಲಿ ನೋಡಿದ್ದನ್ನು, ಕೇಳಿದ್ದನ್ನು ಅನುಮಾನಗಳಿಂದ ಉಂಟಾಗುವ ಎಲ್ಲ ವಿಷಯಗಳನ್ನೂ ಕಲ್ಪಿಸಿಕೊಳ್ಳುತ್ತಾನೆ. ಇದರಿಂದ ಶ್ರಮವನ್ನು ಹೊಂದುತ್ತಾನೆ.

ಈ ಆಯಾಸದ ಪರಿಹಾರಕ್ಕಾಗಿ, ಮಿಂಚಿನ ಬಣ್ಣವನ್ನು ಹೊಂದಿದ ಎರಡನೇ ರೇಖಾವಲಯವನ್ನು ಮಾಡಿಕೊಂಡು, ಅದರ ಮಧ್ಯದಲ್ಲಿ ಮುಳುಗಿರುತ್ತ, ಸುಷುಪ್ತಾವಸ್ಥೆಯನ್ನು ಅನುಭವಿಸುತ್ತಾನೆ. ಈ ಅವಸ್ಥೆಯಲ್ಲಿ ಕೇವಲ ಪರಮೇಶ್ವರನಿಗೆ ಸಂಬಂಧಿಸಿದ ಜ್ಞಾನವು ಉಂಟಾಗುತ್ತದೆ. ಇದು ನಾಶವಾಗದ ಜ್ಞಾನಸ್ವರೂಪವಾಗಿದೆ. ಆಮೇಲೆ ಪರಮೇಶ್ವರಸ್ವರೂಪವು ಪ್ರಾಪ್ತವಾಗುತ್ತದೆ.

ನಂತರ ಜೀವನು ಮಾಣಿಕ್ಯದ ಬಣ್ಣವನ್ನು ಹೊಂದಿದ ಮೂರನೇ ರೇಖಾವಲಯವನ್ನು ನಿರ್ಮಿಸಿ ಅದರಲ್ಲಿ ಲೀನನಾಗುತ್ತಾನೆ. ಆಗ ತುರೀಯಾವಸ್ಥೆಗೆ ತಲುಪುತ್ತಾನೆ. ಈ ಅವಸ್ಥೆಯಲ್ಲಿ ಕೇವಲ ಪರಮಾತ್ಮನ ಜ್ಞಾನವು ಉಂಟಾಗುತ್ತದೆ. ಇದು ನಿತ್ಯಜ್ಞಾನವಾಗಿದೆ. ಆಗ ಬುದ್ಧಿಯ ಆಧಾರದಿಂದ, ಮನಸ್ಸನ್ನು ಕೇವಲ ಚೈತನ್ಯದಲ್ಲಿ ನಿಲ್ಲಿಸಬೇಕು. ಆ ಸಮಯದಲ್ಲಿ ಚಿಂತನೆಗೆ ಕಡಿವಾಣ ಹಾಕಬೇಕು. ಆತ್ಮನನ್ನುಳಿದು ಬೇರೆ ಏನನ್ನೂ ಚಿಂತಿಸಬಾರದು. ಪ್ರಾಣ ಮತ್ತು ಅಪಾನಗಳನ್ನು ಐಕ್ಯಗೊಳಿಸಿ, ಎಲ್ಲ ಪ್ರಾಪಂಚಿಕ ವ್ಯವಹಾರವೂ ಆತ್ಮಸ್ವರೂಪವೆಂದು ತಿಳಿದು, ಆತ್ಮಸ್ವರೂಪದಲ್ಲಿ ಮನಸ್ಸನ್ನು ನಿಲ್ಲಿಸಬೇಕು. ಹೀಗೆ ತುರೀಯಾವಸ್ಥೆಯು ಪ್ರಾಪ್ತವಾದಾಗ ಆತ್ಮನು ಎಲ್ಲ ಆನಂದಗಳ ಸ್ವರೂಪವೂ, ಎಲ್ಲ ದ್ವಂದ್ವಗಳಿಂದ ರಹಿತವೂ ಆಗುವ ಅನುಭೂತಿ ಪ್ರಾಪ್ತವಾಗುತ್ತದೆ.

ಅಲ್ಲಿಂದಾಚೆಗೆ ಎಲ್ಲಿಯವರೆಗೆ ಭೌತಿಕ ಶರೀರವು ಇರುವುದೋ ಅಲ್ಲಿಯವರೆಗೆ ಶರೀರದಲ್ಲಿ ಬಾಡಿಗೆ ಮನೆಯಲ್ಲಿರುವಂತೆ ವಾಸಮಾಡುತ್ತಾನೆ;ಶರೀರವು ಜೀರ್ಣವಾದಾಗ ಆತ್ಮಸ್ವರೂಪವು ಪ್ರಾಪ್ತವಾಗುತ್ತದೆ. ಹೀಗೆ ಮೋಕ್ಷವು ಉಂಟಾಗುತ್ತದೆ. ಇದು ಆತ್ಮಸಾಕ್ಷಾತ್ಕರಕ್ಕೆ ಮಾರ್ಗವಾಗಿದೆ. ನಾಲ್ಕು ಮಾರ್ಗಗಳಿಂದ ಕೂಡಿದ ಮಹಾದ್ವಾರದಲ್ಲಿ ಚಲಿಸುವ ವಾಯು ಸ್ಥಿರವಾದಾಗ ತ್ರಿಕೋಣವನ್ನು ತಲುಪಿ ಚೈತನ್ಯದ ಸಾಕ್ಷಾತ್ಕಾರವನ್ನು ಹೊಂದುತ್ತಾನೆ.

ಚಂಚಲ ಚಿತ್ತವೃತ್ತಿಯನ್ನು ನಿರೋಧಿಸಲೆಂದೇ ಭಗವಾನ್ ಪತಂಜಲಿಗಳು, ಉಪನಿಷತ್ ವ್ಯಾಖ್ಯೆಗಳ ಆಧಾರದ ಮೇಲೆ ಅಷ್ಟಾಂಗ ಯೋಗದ ಸೂತ್ರಗಳನ್ನು ರಚಿಸಿ ಲೋಕಾರ್ಪಣೆ ಮಾಡಿದರು. ಇಂದು ನಾವು ಯಾರಿಗೂ ಕೆಲಸಕ್ಕೆ ಬಾರದ, ಸಂಖ್ಯೆಗಳಲ್ಲಿ ಮಾತ್ರ ಹೆಚ್ಚುವ ಪುಸ್ತಕಗಳನ್ನು ಲೋಕಾರ್ಪಣೆ ಮಾಡುತ್ತಿರುತ್ತೇವೆ;ಅವುಗಳಲ್ಲಿ ಎಷ್ಟೋ ನಮ್ಮ ವರ್ಣನೆಗೆ ಮತ್ತು ಪ್ರಚಾರಕ್ಕೆ ಸಂಬಂಧಿಸಿರುತ್ತವೆ.

ಯಾವ ಶಾಸ್ತ್ರಾರ್ಥಗಳನ್ನೂ ಅಭ್ಯಸಿಸ ಬಯಸದ ನಮ್ಮ ಮನಸ್ಸು ಮಾಣಿಕ್ಯ ವರ್ಣದ ವಾಯುವ್ಯ ದಿಕ್ಕಿನ ದಳದಲ್ಲಿ ಆತ್ಮನು ಸ್ಥಿತನಾಗುವ ಬಗೆಯೊಂದನ್ನು ಬಿಟ್ಟು, ಉಳಿದೆಲ್ಲ ದಳಗಳಲ್ಲಿ ಮತ್ತು ವಿಶೇಷವಾಗಿ ಉತ್ತರ ದಿಕ್ಕಿನ ಹಳದಿ ವರ್ಣದ ದಳದಲ್ಲೇ ವಿಹರಿಸುತ್ತದೆ. ಹೀಗಾಗಿ ನಾವು ಲೌಕಿಕ ಸುಖಲೋಲುಪರಾಗಿದ್ದೇವೆ; ಇದೇ ಸತ್ಯ-ಸಾಕ್ಷಾತ್ಕಾರವೆಂಬಂತೆ ಇದನ್ನೇ ನಮ್ಮ ಶಿಷ್ಯಕುರಿಗಳಿಗೂ ಅನುಗ್ರಹಿಸುತ್ತಿದ್ದೇವೆ. ಹಾಗಾಗಿಯೇ ನಮ್ಮ ಅನುಯಾಯಿ ಕುರಿಗಳೆಲ್ಲ ಬ್ರಾಹ್ಮಣರಿಗೆ ಹೇಳಿದ ಶ್ವೇತವರ್ಣವನ್ನು ಬಿಟ್ಟು ಹಳದೀ ಬಣ್ಣದಲ್ಲೇ ’ವಿರಾಜಿಸುತ್ತವೆ’.

ತುರ್ಯಗಿರ್ಯ ಎಲ್ಲ ನಮಗೆ ಜೀರ್ಣವಾಗುವ ಶಬ್ದವಲ್ಲ; ಕ್ಯಾರೆಟ್ಟು,ತೆಂಗಿನಕಾಯಿ,ಬಾಳೇಕಾಯಿ ಇತ್ಯಾದಿಗಳ ’ತುರಿ’ಯಾವಸ್ಥೆಯಷ್ಟೆ ನಮಗೆ ಗೊತ್ತು. ನಮ್ಮ ಹೇಳಿಕೆಗಳ ಇತಿಮಿತಿಗಳನ್ನು ಮೀರಿ ನಿಲ್ಲುವ ಪರಿಜ್ಞಾನ ಬಹುತೇಕ ಕುರಿಗಳಲ್ಲಿ ಕಂಡುಬರುವುದಿಲ್ಲ; ಎಲ್ಲೋ ಅಪರೂಪಕ್ಕೆ ಕೆಲವು ಕುರಿಗಳು ಮೇಯುವಾಗ ಮೈಮೇಲೆ ಬಿದ್ದ ಮಳೆಗನಿಗಳನ್ನು ಗಡಗಡಿಸಿ ಮೈಕೊಡವಿ ನಿವಾರಿಸಿಕೊಂಡಂತೆ ಸ್ವತಂತ್ರವಾಗಿ ಯೋಚಿಸುತ್ತವೆ;ಯಾವಾಗ ಕುರಿಗಳಿಗೆ ಅಷ್ಟರಮಟ್ಟಿಗಿನ ಸ್ವತಂತ್ರ ಯೋಚನಾ ಶಕ್ತಿ ಪ್ರಾಪ್ರವಾಗುತ್ತದೋ ಆಗಲೇ ಅವು ಕಳ್ಳ ಸನ್ಯಾಸಿಯಾದ ನಮ್ಮ ಹಳದೀ ಪರಿಧಿಯ ಬಿಗಿ ಹಿಡಿತದಿಂದ ಮುಕ್ತಗೊಳ್ಳುತ್ತವೆ.

Thumari Ramachandra

source: https://www.facebook.com/groups/1499395003680065/permalink/1619358515017046/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s