ದೀಪದ ಬುಡದಲ್ಲಿ ಕತ್ತಲೆ

ದೀಪದ ಬುಡದಲ್ಲಿ ಕತ್ತಲೆ

ದಕ್ಷಿಣ ಕನ್ನಡದಲ್ಲಿ ದೈವದ ಪಾತ್ರಿಗಳು ಎನ್ನುವ ಜನ ಇರುತ್ತಾರೆ. ಭೂತದ ಕೋಲಗಳು ನಡೆಯುವಾಗ ಭೂತದ ವೇಷ ಹಾಕಿ ನುಡಿಗಟ್ಟುಗಳ ಮೂಲಕ ಒಕ್ಕಣೆ ಅಥವಾ ಆದೇಶ ಕೊಡುವುದು ಅವರ ಜಾಯಮಾನ.

ದಶಕದ ಹಿಂದೆ ’ಬಣ್ಣದ ವೇಷ’ ಎಂಬ ಶಾರ್ಟ್ ಫಿಲ್ಮ್ ಒಂದನ್ನು ನೋಡಿದ್ದೆ. ಅದರಲ್ಲಿನ ಭೂತದಕೋಲದ ಸನ್ನಿವೇಶದ ಪಾತ್ರಧಾರಿ ಚಿತ್ರದೊಳಗಿನ ತನ್ನ ನಿಜ ಜೀವನದಲ್ಲಿ ಉಳಿದವರು ತನ್ನನ್ನು ಹೇಗೆ ಭಯಭಕ್ತಿಯಿಂದ ನೋಡುತ್ತಾರೆ ಎಂಬುದನ್ನು ತಿಳಿದುಕೊಂಡು ಅದನ್ನೆ ಅಸ್ತ್ರವಾಗಿ ಬಳಸುವುದನ್ನು ತೋರಿಸಿದ್ದಾರೆ.

ಯಾರೋ ಉಪಾಧ್ಯರೊಬ್ಬರು ಬರೆದ ಕತೆಯೊಂದರಲ್ಲಿ ಭೂತದ ಪಾತ್ರಧಾರಿಯ ನಿಜ ಜೀವನದ ಕಚ್ಚೆಹರುಕುತನವನ್ನು ಬಹಳ ಚೆನ್ನಾಗಿ ನಿರೂಪಿಸಿದ್ದು ನೆನಪಿದೆ. ಭೂತದ ಪಾತ್ರಧಾರಿಗಳಲ್ಲಿ ಕೆಲವರು ನಿಜವಾಗಿಯೂ ಕಚ್ಚೆಹರುಕರೇ. ಹಾಗಿದ್ದೂ ಅವರು ಹೇಳುವ ನುಡಿಗಟ್ಟನ್ನು ಎಷ್ಟರಮಟ್ಟಿಗೆ ನಂಬಬೇಕು ಎಂಬುದು ಒಂದು ವರ್ಗದ ಪ್ರಶ್ನೆ.

ಕೆಲವು ಧರ್ಮ ಸಂಸ್ಥೆಗಳಿಗೆ ಭೂತದ ಒಕ್ಕಣೆಗಳೇ ಪ್ರಮುಖವಾಗಿವೆ. ಸಾರ್ವಜನಿಕರ ದೇಣಿಗೆ ಮತ್ತು ಕಾಣಿಕೆಗಳಿಂದಲೇ ಅಂತಹ ಸಂಸ್ಥೆಗಳು ಬೆಳೆದಿವೆ ಮತ್ತು ಬೆಳೆಯುತ್ತಲೇ ಇವೆ. ಇಂತಹ ಧರ್ಮ ಸಂಸ್ಥೆಗಳಲ್ಲೂ ಸೇರಿಕೊಂಡ ಕೆಲವು ಕಚ್ಚೆಹರುಕರು ಯಾವುದೋ ಹಂತದಲ್ಲಿ ಧರ್ಮದ ಹೆಸರಿನಲ್ಲಿ ಮಾಡಬಾರದ್ದನ್ನು ಮಾಡುತ್ತಾರೆ.

ಕಳೆದವರ್ಷ ಹುಡುಗಿಯೊಬ್ಬಳ ಕೊಲೆಗೆ ಸಂಬಂಧಿಸಿದಂತೆ ಧರ್ಮಸಂಸ್ಥೆಯೊಂದನ್ನು ಜನ ಬೊಟ್ಟುಮಾಡಿ ತೋರಿಸುತ್ತಿದ್ದರು. ಆ ಸಂಸ್ಥೆಯ ಮುಖ್ಯಸ್ಥರಿಗೆ ಅದರ ಅರಿವಿದ್ದರೂ ಆಪಾದಿತರು ತಮ್ಮವರೇ ಆಗಿರುವುದರಿಂದ ರಕ್ಷಿಸಿಕೊಳ್ಳುವ ಆಕಾಂಕ್ಷೆಯೇ ಹೆಚ್ಚಿತ್ತು.

ಒಂದೊಮ್ಮೆ ಹಾಗೆ ರಕ್ಷಿಸದಿದ್ದರೆ ಆಪಾದಿತರು ಮುಖ್ಯಸ್ಥರ ವಿರುದ್ಧವೇ ತಿರುಗಿಬೀಳುವ ಸಂಭವವಿತ್ತು. ದುಷ್ಟರಿಗೆ ಮೊದಲೇ ನಮಸ್ಕಾರ ಸಲ್ಲಿಸಬೇಕು ಎನ್ನುತ್ತದೆ ಸುಭಾಷಿತ. ತಮ್ಮವರೇ ಆದರೂ ದುಷ್ಟರೆಂಬುದು ಗೊತ್ತಾಗಿ ಅವರನ್ನು ಆಪಾದನೆಯಿಂದ ಮುಕ್ತಗೊಳಿಸಲು ಯತ್ನಿಸಿ ಕೊನೆಗೆ ಸಾಧ್ಯವಾಗದೆ ಹೇಳಿಕೆ ಕೊಟ್ಟರು.

ಸದರೀ ಮುಖ್ಯಸ್ಥರು ತಮ್ಮವರನ್ನು ರಕ್ಷಿಸಿಕೊಳ್ಳುವ ಸಲುವಾಗಿ ಸತ್ಯವನ್ನು ಮರೆಮಾಚಿದ್ದರಿಂದ ಸಾರ್ವಜನಿಕರ ಉಪೇಕ್ಷೆಗೆ ಒಳಗಾಗಿದ್ದರು. ಅವರ ವಿರುದ್ಧ ತಿರುಗಿ ಬಿದ್ದವ ಸಂಘದ ಒಬ್ಬ ಕಾರ್ಯಕರ್ತ.

ಮನಸ್ಸಿಲ್ಲದ ಮನಸ್ಸಿನಿಂದ ತಮ್ಮವರನ್ನು ಅಪರಾಧ ಮುಕ್ತಗೊಳಿಸಿಕೊಳ್ಳ ಹೊರಟ ಮುಖ್ಯಸ್ಥರು ’ಕಳ್ಳಸನ್ಯಾಸಿಯ ಹಗರಣ’ದಲ್ಲಿ ಕಳ್ಳಸನ್ಯಾಸಿಯ ವಿರುದ್ಧ ನಿಂತುಬಿಟ್ಟರು. “ಶ್ರೀಪಾದ….ಪುಣ್ಯಪಾದ” ಎಂದು ಕಾಲಿಗೆರಗುತ್ತಿದ್ದುದು ಇದೇ ಪಾದಕ್ಕಲ್ಲವೇ ಎಂದುಕೊಳ್ಳುತ್ತ ತಮ್ಮ ಕೆನ್ನೆಗೆ ತಾವೇ ಹೊಡೆದುಕೊಂಡರು.

ತಮ್ಮವರು ತಪ್ಪಿತಸ್ಥರಾದರೂ ತನಿಖೆ ಮುಚ್ಚಿಹಾಕಿ ತಮ್ಮವರನ್ನು ರಕ್ಷಿಸಿಕೊಳ್ಳಲು ಯತ್ನಿಸಿದ ಮುಖ್ಯಸ್ಥರಿಗೆ ಈ ಪ್ರಕರಣದಲ್ಲಿ ಹಾಗೆ ವಿರೋಧಿಸುವ ಹಕ್ಕಿಲ್ಲ ಎಂಬುದು ಸಂಘದ ಕಾರ್ಯಕರ್ತನ ಹೇಳಿಕೆ. ಇದೊಂದೇ ಕಾರಣಕ್ಕಾಗಿ ಕಣ್ಣಿದ್ದೂ ಕುರುಡುನಂತೆ ವರ್ತಿಸಿದ ಆ ಕಾರ್ಯಕರ್ತ ಕಳ್ಳ ಸನ್ಯಾಸಿಯ ಪರವಾಗಿ ನಿಂತುಬಿಟ್ಟ!

ಧರ್ಮವೆಂಬ ಮಡಿಯಿಂದ ಮುಚ್ಚಿದ ಕ್ಷೇತ್ರಗಳ ಒಳಗೆ ನಡೆಯುವ ಮೈಲಿಗೆಯ ಕತೆಗಳನ್ನು ಎಲ್ಲರೂ ಅರಿತರೆ ಇಂದು ಅದೆಷ್ಟೋ ಕ್ಷೇತ್ರಗಳ ಮೈಲಿಗೆ ತೊಲಗುತ್ತದೆ. ಸಾರ್ವಜನಿಕರ ಹಣದಲ್ಲಿ ಕೊಬ್ಬುವ ಕೆಲವರು ಅಂತಹ ಕ್ಷೇತ್ರಗಳಲ್ಲಿ ನಡೆಸುವ ಖಾಸಗೀ ವ್ಯವಹಾರ ಬಹುತೇಕರಿಗೆ ಗೊತ್ತಿರೋದೇ ಇಲ್ಲ.

ದೂರದ ಊರುಗಳಿಂದ ಪೂಜೆ,ಹೋಮ,ಹವನ ಮಾಡಿಸಲು ಬರುವ ಭಕ್ತರೇ ಅವರ ಗಿರಾಕಿಗಳು. ಮತ್ತು ಧರ್ಮವೇ ಅಲ್ಲಿ ಬ್ಯುಸಿನೆಸ್ಸು. ಅಂತಹ ಧರ್ಮಾದರ್ಶಿಯೊಬ್ಬನ ಖಾಸಗೀ ಜೀವನವನ್ನು ನೀವು ನೋಡಬೇಕು. ಕಳ್ಳ ಸನ್ಯಾಸಿಗೂ ಆ ಸೋ ಕಾಲ್ಡ್ ಧರ್ಮಾದರ್ಶಿಗೂ ನಡುವೆ ಯಾವಾಗಲೂ ರಾಜಿ;ಜಗಳವೇ ಇಲ್ಲ. ಕಪಟಿಯ ಇನ್ಶೂರೆನ್ಸ್‍ನಿಂದ ಹಿಡಿದು ಹಲವು ವ್ಯವಹಾರಗಳಲ್ಲಿ ರಾಜಿಗೇ ಬಹಳ ಮಹತ್ವ.

ಕೆಲವರು ಅಶ್ಲೀಲ ಬೇಡವೆಂದು ನನಗೆ ಸಲಹೆ,ಸಂದೇಶ ಕೊಟ್ಟಿದ್ದಾರೆ. ತೀರಾ ಅಶ್ಲೀಲವಾದ ಘಟನೆಗಳನ್ನು ಅಶ್ಲೀಲ ಪದಗಳನ್ನು ಬಳಸದೇ ಹೇಳುವುದು ಭಯಾನಕ ಕೆಲಸ. ಅದು ಸಮಯ ಮತ್ತು ತಾಳ್ಮೆ ಎರಡನ್ನೂ ಹಾಳುಮಾಡುತ್ತದೆ. ಹೀಗಾಗಿ ಕೆಲವು ಘಟನೆಗಳನ್ನು ಹೇಳದಿರಲು ನಿರ್ಧರಿಸಿದ್ದೇನೆ. ದಯಮಾಡಿ ಯಾರೂ ಏನು? ಎತ್ತ? ಅಂತ ಇನ್ ಬಾಕ್ಸ್ ಮೂಲಕ ಕೇಳಬೇಡಿ.

ಪಾರ್ಕರ್ ಪೆನ್ನಿನ ಬಯಕೆ ಇರುವವನಿಗೆ ಅದರ ಒಡೆತನ ಬಂದಾಗ ಖುಷಿಯಾಗುತ್ತದೆ. ಬಿಎಂಡಬ್ಲ್ಯೂ ಕಾರಿನ ಮಾಲೀಕನಾಗ ಬಯಸುವವನಿಗೆ ಆ ಕಾರು ಕೈಗೆ ಬಂದಾಗ ಜಗತ್ತನ್ನೇ ಗೆದ್ದಷ್ಟು ಸಂತಸವಾಗುತ್ತದೆ. ಅದೇ ರೀತಿಯಲ್ಲಿ ಸುಂದರಿಯರನ್ನು ಬಯಸುವವನಿಗೆ ಒಂದಾದಮೇಲೊಂದು ಸುಂದರಿ ಸಿಗುತ್ತಲೇ ಇದ್ದರೆ “ಮೊಗೆಂಬೋ ಖುಷ್ ಹುವಾ”ಎನ್ನುತ್ತಿರುತ್ತಾನೆ.

ಸಂಸಾರಿಗಿರುವ ಈ ವಿಷಯಾಸಕ್ತಿ ಸನ್ಯಾಸಿಗೆ ಇರಬಾರದು ಎನ್ನುತ್ತಾರೆ. ಮನುಷ್ಯ ಶರೀರವನ್ನು ಸೇರಿಕೊಂಡ ಆತ್ಮ ಪರಮಾತ್ಮನನ್ನು ಹುಡುಕುವುದಂತೆ. ಪರಮಾತ್ಮ ಸಲೀಸಾಗಿ ಸಿಗದಾಗ ಲೌಕಿಕ ವಿಷಯಗಳಲ್ಲಿ ಆಸಕ್ತವಾಗಿ ಎಲ್ಲಿ ಸುಖ ಸಿಗುವುದು ಎಂದು ಹುಡುಕುತ್ತದಂತೆ.

ಸುಖವೆಲ್ಲಿದೆ? ಪಾರ್ಕರ್ ಪೆನ್ನಿನಲ್ಲೋ? ಬಿಎಂಡಬ್ಲ್ಯೂ ಕಾರಿನಲ್ಲೋ? ಅಥವಾ ವೈಭವೋಪೇತ ಬಂಗಲೆಯಲ್ಲೋ? ಎಂದು ಕೇಳಿದರೆ, ಅದಾವುದೂ ಶಾಶ್ವತ ಸುಖದ ಮಜಲಲ್ಲ; ಅದೆಲ್ಲವೂ ನಶ್ವರ. ನಾರದನಿಗೆ ಭಗವಂತ ಸಂಸಾರದ ಭಾರ ಹಚ್ಚಿ ಟೆಸ್ಟ್ ಮಾಡಿದ ಕತೆ ನಿಮಗೆ ಗೊತ್ತಿರಬಹುದು. ತಲೆಯಮೇಲೆ ಜವಾಬ್ದಾರಿ ಇರದಾಗ ಸಸಾರವಾಗಿ ನಡೆಯುವ ನಾರದ ತಲೆಯ ಮೇಲೆ ಎಣ್ಣೆಯಪಾತ್ರೆ ಇಟ್ಟು ನಡೆಯಲು ಹೇಳಿದಾಗ ಪ್ರಯಾಸಪಡುವ ಇನ್ನೊಂದು ಕತೆಯೂ ಇದೆ.

ರಾಜ ಸನ್ಯಾಸವೋ ಯೋಗ ಸನ್ಯಾಸವೋ ಇನ್ನಾವುದೋ ಪದ್ಧತಿಯ ಸನ್ಯಾಸವೋ, ಸನ್ಯಾಸದ ಮೂಲ ಉದ್ದೇಸ್ಗ ಒಂದೇ. ಲೌಕಿಕ ವ್ಯವಹಾರಗಳಿಂದ ಆಚೆ ನಿಂತು ಆತ್ಮಸಾಕ್ಷಾತ್ಕಾರ ಪಡೆಯುವುದು. ಪ್ರಾಪಂಚಿಕರಿಗೆ ತನ್ನ ಜೀವನಾದರ್ಶಗಳ ಮೂಲಕ ಸನ್ಮಾರ್ಗವನ್ನು ಬೋಧಿಸುವುದು. ಸನ್ಯಾಸಿ ಕಣ್ಮುಚ್ಚಿ ಧ್ಯಾನಕ್ಕೆ ಕುಳಿತಾಗ ಆತ ಯಾವ ವಿಷಯದಲ್ಲಿ ತಲ್ಲೀನನಾಗಿದ್ದಾನೆ ಎಂದು ಯೋಚಿಸುವ ಪಾಪ ಯಾರೂ ಮಾಡುವುದಿಲ್ಲ;ಭಕ್ತರಿಗೆ ಅವನಲ್ಲಿ ನಂಬಿಕೆಯಷ್ಟೆ.

ಮನುಷ್ಯಮಾತ್ರರೆಲ್ಲರ ಅಂತ್ಯವೂ ಸಾವೇ. ಅವರವರ ವೇಷ ಮತ್ತು ಹುದ್ದೆಗಳಿಗೆ ತಕ್ಕಂತೆ ಅದನ್ನು ಬೇರೆ ಬೇರೆ ಪದಗಳಲ್ಲಿ ಹೇಳಬಹುದಷ್ಟೆ. ಸಾಮಾನ್ಯವಾಗಿ ಸನ್ಯಾಸಿ ಸತ್ತಾಗ ಅದನ್ನು ಸಾವು ಎನ್ನುವ ಬದಲು ಬ್ರಹ್ಮೈಕ್ಯವಾಗುವುದು,ದೇಹ ಬಿಡುವುದು,ಮುಕ್ತರಾಗುವುದು ಎಂದೆಲ್ಲ ಹೇಳುತ್ತೇವೆ. ಸಾಯುವ ಎಲ್ಲಾ ಸನ್ಯಾಸಿಗೂ ಮುಕ್ತಿ ಸಿಗುತ್ತದೆ ಎಂಬುದು ಅಪ್ಪಟ ಸುಳ್ಳು.

ಈ ಯುಗದಲ್ಲಿ ಸನ್ಯಾಸಿ ಯಾರು ಎಂಬುದನ್ನು ಅವರ ನಡೆನುಡಿಗಳಿಂದ ಕಂಡುಕೊಳ್ಳಬೇಕು. ಕಂಚಿಯ ಪರಮಾಚಾರ್ಯರನ್ನು ನೀವೆಲ್ಲ ಬಲ್ಲಿರಿ ಎಂದುಕೊಳುತ್ತೇನೆ. ಅವರ ನಡೆನುಡಿಗಳಲ್ಲಿ ಅದೆಂತಹ ವೈರಾಗ್ಯವಿತ್ತು. ರಮಣ ಮಹರ್ಷಿಗಳನ್ನು ಬಲ್ಲವರಿಗೆ ಸನ್ಯಾಸದ ಸರಳ ವಿಧಾನದ ಪರಿಚಯ ಇದ್ದೇ ಇರುತ್ತದೆ. ಭಗವಾನ್ ಶ್ರೀಧರ ಸ್ವಾಮಿಗಳೂ ಸಹ ಪರಮ ವೈರಾಗ್ಯವನ್ನು ಹೊಂದಿದ್ದರು.

ಈ ಮೂವರಲ್ಲಿ ಒಬ್ಬರು ರಾಜಸನ್ಯಾಸಿ,ಇನ್ನೊಬ್ಬರು ಸನ್ಯಾಸ ದೀಕ್ಷೆಯೇ ಇಲ್ಲದ ಮಹಾನ್ ಯೋಗಿ,ಕೊನೆಯವರು ಯೋಗಸನ್ಯಾಸಿ. ಇವರಲ್ಲೆಲ್ಲ ಇದ್ದಿದ್ದ ಭಾವ ಒಂದೇ. ಬಹಿರಂಗದಲ್ಲಿ ಮೂರು ಮಾನವ ರೂಪಗಳಲ್ಲಿ ಕಾಣಿಸಿದ ಈ ಶಕ್ತಿಯ ಮೂಲರೂಪ ಒಂದೇ.

ಅದಕ್ಕೆಂತಲೇ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳನ್ನು ನೆನೆಯುತ್ತಿದ್ದ ಮಾಧ್ವ ಭಕ್ತನೊಬ್ಬನಿಗೆ “ನಾನು ಇಲ್ಲೇ ಸಾಗರಕ್ಕೆ ಬಂದಿದ್ದೇನಪ್ಪಾ, ಶ್ರೀಧರ ಸ್ವಾಮಿಯ ರೂಪದಲ್ಲಿದ್ದೇನೆ” ಎಂದು ಕನಸು ಬಿದ್ದಿದ್ದು. ಕನಸು ಕರಗಿದ ನಂತರ ದಿಗ್ಗನೆದ್ದು ಬೆಳಗಿನ ಜಾವವೇ ಆ ಭಕ್ತ ಶ್ರೀಧರರು ಕನಸಿನಲ್ಲಿ ಕಾಣಿಸಿದ ಜಾಗಕ್ಕೆ ತೆರಳಿ ಅಲ್ಲಿ ಅವರನ್ನು ಸಾಕ್ಷಾತ್ ಕಂಡಿದ್ದು; ಬಹುದೂರದಿಂದ ಕಾಲ್ನಡಿಗೆಯಲ್ಲಿ ಬಂದು ಜ್ವರದಿಂದ ಬಳಲುತ್ತಿದ್ದ ಶ್ರೀಧರರನ್ನು ಸೇವೆ ಮಾಡಿದ್ದು. ಇದನ್ನೇ ನಾವು ಅದ್ವೈತವೆನ್ನುತ್ತೇವೆ ಅವರು ದ್ವೈತವೆನ್ನುತ್ತಾರೆ.

“ದ್ವಿಜನಾಚಾರತೆಯುಳ್ಳವಂ” ಎಂಬ ಸಾಲಿಗೆ ಒಂದು ಪುಸ್ತಕದಷ್ಟು ವಿವರಣೆ ಕೊಡಬಹುದು. ಆಚಾರವೆಂದರೇನು? ದ್ವಿಜ ಎಂದರೇನು? ದ್ವಿಜನಿಗೆ ಹೇಳಲ್ಪಟ್ಟ ಆಚಾರವೆಂದರೇನು? ದ್ವಿಜ ಯಾಕೆ ಆ ಆಚಾರವನ್ನೇ ಪಾಲಿಸಬೇಕು? ಜಾತಿಯಿಂದ ದ್ವಿಜರಲ್ಲಿ ಜನಿಸಿದ ಮಾತ್ರಕ್ಕೆ ಎಲ್ಲರೂ ದ್ವಿಜರಾಗುವರೇ? ಆಚಾರವೆಂಬುದೆಲ್ಲ ಮನುಷ್ಯ ರೂಢಿಸಿಕೊಂಡಿದ್ದಲ್ಲವೇ? ಎಂಬಿತ್ಯಾದಿ ಹಲವು ಪ್ರಕರಣಗಳಿಗೆ ವ್ಯಾಖ್ಯಾನ ಮಾಡಬೇಕಾಗುತ್ತದೆ. ಹಾಗಾಗಿ ಅದನ್ನು ಕೈಗೆತ್ತಿಕೊಳ್ಳಲಿಲ್ಲ.

ಇದನ್ನೆಲ್ಲ ಸನ್ಯಾಸಿಯಾಗುವವ ತಿಳಿದಿರಬೇಕು. ಸನ್ಯಾಸಿಯ ಆಚಾರ ದ್ವಿಜನ ಆಚಾರಕ್ಕಿಂತ ಮೇಲ್ಮಟ್ಟದ್ದು. ಯಾವಾರ ಸನ್ಯಾಸಿ ತನ್ನ ಆಶ್ರಮ ಧರ್ಮಕ್ಕೆ ಹೇಳಿದ ಆಚಾರದಿಂದ ಬಹಿರ್ಮುಖನಾದನೋ ಅಲ್ಲಿಗೆ ಅವನ ಸನ್ಯಾಸ ಕೊನೆಗೊಂಡಿತು ಎಂದರ್ಥ; ನಂತರ ಕಾವಿ ವೇಷವನ್ನು ಬೇಕಾದರೆ ಸಾಯುವವರೆಗೂ ಹಾಗೇ ಇಟ್ಟುಕೊಳ್ಳಬಹುದು. ಆಚಾರ ಸರಿಯಿದ್ದರೆ ಕಾವಿಯನ್ನೇ ತೊಡದೆ ರಮಣರಂತೆ ಇದ್ದುಬಿಡಬಹುದು. ಶ್ರೀಧರರಂತೆ,ಪರಮಾಚಾರ್ಯರಂತೆ ಕಾವಿ ತೊಟ್ಟರೂ ತಪ್ಪಿಲ್ಲ.

ಶಾಶ್ವತ ಸುಖವನ್ನು ಹುಡುಕುವ ಸನ್ಯಾಸಿ ಸಖಿಯರಲ್ಲಿ ಸುಖವಿದೆಯೆಂದು ಭಾವಿಸಿದ ಕ್ಷಣದಲ್ಲೇ ಅವನಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ!! ಯಾವುದರಿಂದ? ಸನ್ಯಾಸತ್ವದಿಂದ; ಅಂದರೆ ಅವನು ಸಂಸಾರಿಯೆನಿಸುತ್ತಾನೆ. ಒಂದೇ ಸಖಿಯ ಸಂಗ ಬಯಸಿದರೆ ಸಂಸಾರಿಯಾಗುತ್ತಾನೆ. ಒಂದಕ್ಕಿಂತ ಹೆಚ್ಚಿನ ಸಖಿಯರ ಸಂಗ ಬಯಸಿದರೆ ಲಂಪಟನಾಗುತ್ತಾನೆ; ಸಂಸಾರಿಗಿಂತ ಕೆಳಗಿನ ಹಂತಕ್ಕೆ ಬೀಳುತ್ತಾನೆ.

ಹೀಗೆ ಲಂಪಟನಾದ ಸನ್ಯಾಸಿ ಗಂಡು ಬೀದಿನಾಯಿಗೆ ಸಮನೆನಿಸುತ್ತಾನೆ. ನೀವು ನೋಡಿರಬಹುದು ಸೀಸನ್ ಬಂದಾಗ ಹರೆಯದ ಹೆಣ್ಣುನಾಯಿಯ ಹಿಂದೆ ಅದೆಲ್ಲೆಲ್ಲಿಂದಲೋ ಚಿತ್ರವಿಚಿತ್ರವಾದ ಗಂಡುನಾಯಿಗಳು ಬಂದು ಅಲೆಯುತ್ತವೆ. ಅವುಗಳೊಳಗೆ ಆಗ ನಿತ್ಯವೂ ಸ್ಪರ್ಧೆ,ಕಚ್ಚಾಟ. ಲಂಪಟರಲ್ಲೂ ಹಾಗೆ.

ಸುಂದರವಾದ ಹೆಣ್ಣು ಮನಸ್ಸು ಮಾಡಿ ಶೀಲವನ್ನೇ ಮಾರಿದರೆ ಅವಳಷ್ಟು ಸಬಲರು ಈ ಜಗತ್ತಿನಲ್ಲಿ ಯಾರೂ ಇರುವುದಿಲ್ಲ; ಇಂದು ಅಂತಹ ಹಲವು ಮಹಿಳೆಯರು ಸಿನಿಮಾ ರಂಗದಲ್ಲಿ ಮಿಂಚುತ್ತಿರುವುದಕ್ಕೆ ಕಾರಣ ಜನಸಾಮಾನ್ಯರ ಮನಸ್ಸು ಅವರ ಶಾರೀರಿಕ ಸೌಂದರ್ಯದಲ್ಲಿ ತಲ್ಲೀನವಾಗಿದೆ ಎಂದರ್ಥ. ಸಿನಿಮಾ ಮುಗಿಯುವವರೆಗೆ ಸುಂದರ ಹೀರೋಯಿನ್ ಜೊತೆಗೆ ಹೀರೋ ಪಾತ್ರದಲ್ಲಿ,ನೋಡುವ ಗಂಡಸರು ತಮ್ಮನ್ನು ಕಲ್ಪಿಸಿಕೊಳ್ಳುತ್ತಾರೆ;ಅವರಿಗೆ ಅದೊಂದು ವಿಧದ ಕ್ಷಣಿಕ ಸುಖ.

ಐದು ಜ್ಞಾನೇಂದ್ರಿಯಗಳು ಮತ್ತು ಐದು ಕರ್ಮೇಂದ್ರಿಯಗಳ ಹೆಡ್ ಆಫೀಸು ಮನಸ್ಸು ಎಂಬ ಹನ್ನೊಂದನೇ ಇಂದ್ರಿಯದಲ್ಲಿದೆ. ಅಂತಹ ಮನಸ್ಸನ್ನು ಹೇಗೆ ಹದಗೊಳಿಸಬೇಕೆಂದು ಯೋಗಿಗಳಾದ ಪತಂಜಲಿಗಳಂತವರು ಗ್ರಂಥಗಳಲ್ಲಿ ಅನುಭವದ ಮೂಲಕ ಹೇಳಿದ್ದಾರೆ. ಕೇಂದ್ರಾಡಳಿತವೇ ಸರಿಯಿಲ್ಲದಿದ್ದರೆ ಉಳಿದ ಸ್ಥಳೀಯ ಆಡಳಿತಗಳ ಕತೆಯೇನು?

ನಾವು ಸ್ವೀಕರಿಸುವ ಆಹಾರದ ಆರನೆಯ ಒಂದು ಭಾಗ ಮೆದುಳಾಗಿ ವರ್ತಿಸುವುದಂತೆ. ಬೆಳ್ಳುಳ್ಳಿ,ಈರುಳ್ಳಿ,ಬಸಲೆಸೊಪ್ಪು ಮುಂತಾದ ಆಹಾರ ಪದಾರ್ಥಗಳು ಕಾಮೋತ್ತೇಜಕ ಅಂಶಗಳಿಂದ ಕೂಡಿವೆಯಂತೆ. ನಿಜವಿರಬೇಕು, ಹಾಗಾಗಿಯೇ ಈರುಳ್ಳಿ ಹಾಕಿದ ಉಫ್ಫಿಟ್ಟು ಮತ್ತು ಬೆಳ್ಳುಳ್ಳಿ ಚಟ್ನಿ ಮೆತ್ತಿದ ಮಸಾಲೆ ದೋಸೆಯನ್ನು ತಿನ್ನದೇ ಇರುವುದು ರುಚಿಗೊತ್ತಿರುವವರಿಗೆ ಕಷ್ಟವಾಗುತ್ತದೆ.

ತುಳಸಿಯಲ್ಲಿ ಶ್ರೀತುಳಸಿ, ಕೃಷ್ಣ ತುಳಸಿ, ಕರ್ಪೂರ ತುಳಸಿ, ಕಾಮಕಸ್ತೂರಿ ಇತ್ಯಾದಿ ಸುಮಾರು ೨೪ ವಿಧಗಳಿವೆ; ಅವುಗಳ ಪೈಕಿ ಸನ್ಯಾಸಿಗಳು,ಬ್ರಾಹ್ಮಣರು ಶ್ರೀತುಳಸಿಯನ್ನು ಹೆಚ್ಚಿಗೆ ಬಳಸಲು ತಿಳಿಸಲಾಗಿದೆ; ಶ್ರೀತುಳಸಿ ಕಾಮವನ್ನು ದಹನಮಾಡಿ ಮನಸ್ಸನ್ನು ಸ್ವಚ್ಛಗೊಳಿಸುತ್ತದೆ. ಬ್ರಾಹ್ಮಣ ಭೋಜನದ ನಂತರ ತುಳಸಿ ಸ್ವೀಕರಿಸುವ ಬ್ರಾಹ್ಮಣ “ಸುಮನಸಃ ಅಸ್ತು ಸೌಮನಸ್ಯಮ್” ಎನ್ನುವುದನ್ನು ನೀವು ನೋಡಿರಬಹುದು. ಇದೆಲ್ಲ ಋಷಿಪರಂಪರೆಯ ಅನುಭವದ,ಅನುಭಾವದ ಮೂಸೆಯಿಂದ ಹರಿದು ಬಂದ ಒಂದು ಆಚಾರ ಕ್ರಮ.

ಎಲ್ಲವನ್ನೂ ಏಕಾಏಕಿ ಗಾಳಿಗೆ ತೂರಿ, ಭೋಗಾಸಕ್ತನಾದರೆ ಅವನಿಗೆ ಅದೇ ಪರಮೋಚ್ಚ ಗುರಿಯಾಗುತ್ತಾದೆ; ಅವನು ’ವಾಸು’ವಾಗುತ್ತಾನೆ. ’ವಾಸು’ದೇವ ಯಾರು ನಿಜವಾದ ವಾಸುದೇವ ಯಾರು ಎಂಬುದನ್ನು ವಿಂಗಡಿಸಲಾಗದ ಭಕ್ತ ಕುರಿಯಾಗುತ್ತಾನೆ. ತಾನು ಕಾಣುತ್ತಿರುವ ವ್ಯಕ್ತಿಯೇ ದೈವಾಂಶ ಸಂಭೂತನೆಂಬ ಭ್ರಮೆಯಲ್ಲಿ ಬದುಕುತ್ತಾನೆ. ಕುರುಡು ಅಭಿಮಾನ ಹೆಚ್ಚಿ ತನ್ನ ಸ್ವಾಮಿಯನ್ನು ಕಾಯಲು ನಿಲ್ಲುತ್ತಾನೆ.

ದೀಪ ಇರುವಲ್ಲೆಲ್ಲ ಅದರ ಬುಡದಲ್ಲಿ ಕತ್ತಲೆ ಇದ್ದೇ ಇರುತ್ತದೆ. ಬಲ್ಬ್ ಅಥ್ವಾ ಟ್ಯೂಬ್ ಯಾವುದನ್ನು ನೀವು ತೆಗೆದುಕೊಂಡರೂ ಅದರ ತಳಭಾಗದಲ್ಲಿ ಒಂದಿನಿತಾದರೂ ಕತ್ತಲೆ ತಪ್ಪಿದ್ದಲ್ಲ. ಅದರಂತೆಯೇ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಅನೇಕ ಕ್ಷೇತ್ರಗಳಲ್ಲಿ ನಮಗರಿವಿಲ್ಲದ ಭೂತಗಳು ಸೇರಿಕೊಂಡಿವೆ. ಅಂತಹ ಭೂತಗಳ ಉಚ್ಚಾಟನೆ ಆಗುವವರೆಗೆ ಧರ್ಮ ಮತ್ತು ಅಧರ್ಮಗಳನ್ನು ವಿಂಗಡಿಸಲು ನಾವೂ ಸಹ ಅನರ್ಹರಾಗಿಯೇ ಇರುತ್ತೇವೆ.

Thumari Ramachandra

source: https://www.facebook.com/groups/1499395003680065/permalink/1613601138926117/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s