ಸೌಂದರ್ಯ ಲಹರಿಯ ಹತ್ತೊಂಬತ್ತನೇ ಮತ್ತು ಎಂಟನೇ ಶ್ಲೋಕಗಳು

ಸೌಂದರ್ಯ ಲಹರಿಯ ಹತ್ತೊಂಬತ್ತನೇ ಮತ್ತು ಎಂಟನೇ ಶ್ಲೋಕಗಳು

“ಆದಿ ಶಂಕರಾಚಾರ್ಯರು ರಚಿಸಿದ ಸೌಂದರ್ಯ ಲಹರಿ ತ್ರಿಪುರಸುಂದರಿ ದೇವಿಯ ಆರಾಧನಾ ಕಾವ್ಯ. ಅದರಲ್ಲಿ ಶಕ್ತಿಯ ಆರಾಧನೆ ಅಮ್ಮನ ರೂಪದಲ್ಲಿ ನಡೆಯುತ್ತದೆ. ದೇವಿಯ ರೂಪದಲ್ಲಿ ನಡೆಯುತ್ತದೆ.

ಜಾಗೃತ್ ಸುಷುಪ್ತಿ ಮತ್ತು ಸ್ವಪ್ನಗಳೆ ಮೂರು ಸ್ಥಿತಿಗಳು. ಅವುಗಳನ್ನೇ ಮೂರು ಪುರಗಳೆಂದೂ ಕರೆಯಬಹುದು. ದೇವಿ ನಮ್ಮನ್ನು ಮೂರು ಸ್ಥಿತಿಗಳಲ್ಲೂ ನೋಡುತ್ತಾಳೆ ಎಂಬುದು ಅದರಲ್ಲಿದೆ. ಶಕ್ತಿಯ ಆರಾಧನೆಯಲ್ಲೂ ಮೂರು ಹಂತಗಳಿವೆ

’ಕೌಲ’ ’ಮಿಶ್ರ’ ಮತ್ತು ’ಸಮಯ’ ಎಂಬ ಮೂರು ಹಂತಗಳಲ್ಲಿ ಶ್ರೀವಿದ್ಯಾ ಕುಂಡಲಿನಿ ಶಕ್ತಿಯ ವರ್ಣನೆ ಬರುತ್ತದೆ. ’ಕೌಲ’ ಎಂಬುದು ಪ್ರಥಮ ಹಂತದ ಆರಾಧನೆ. ’ಮಿಶ್ರ’ ಎಂಬುದು ಮಧ್ಯಮ ಹಂತ ಮತ್ತು ’ಸಮಯ’ ಎಂಬುದು ತುರ್ಯಾವಸ್ಥೆ.

ತಂತ್ರಪೂಜೆಗಳನ್ನು ಮಾಡಿ ಕ್ಷುದ್ರ ಶಕ್ತಿಗಳನ್ನು ಒಲಿಸಿಕೊಳ್ಳುವವರು ’ಕೌಲ’ ಹಂತದಲ್ಲಿರುತ್ತಾರೆ ಅದರಿಂದಾಚೆಗೆ ಮೇಲಕ್ಕೆ ಅವರು ಹೋಗುವುದಿಲ್ಲ. ’ಮಿಶ್ರ’ಹಂತದಲ್ಲಿ ಶಕ್ತಿಯ ಸನಿಹಕ್ಕೆ ತೆರಳುವ ಆರಾಧನೆ ಇರುತ್ತದೆ. ಸಾತ್ವಿಕ ಸಿದ್ಧಿಗಳನ್ನು ಪಡೆದವರು ಇಲ್ಲಿದ್ದಾರೆ ಎಂದರ್ಥ.

’ಸಮಯ’ ಹಂತದಲ್ಲಿ ಶಕ್ತಿಯೊಡನೆ ನಮ್ಮ ಸಂವಹನ ನಡೆಯುತ್ತದೆ. ಅಂದರೆ ಶಕ್ತಿಯ ಆವಾಸ ನಮ್ಮ ಸಾಕ್ಷಾತ್ ಅನುಭವಕ್ಕೆ ಬರುತ್ತದೆ. ಇದನ್ನು ತುರ್ಯಾವಸ್ಥೆ ಎನ್ನುತ್ತಾರೆ. ಇಲ್ಲಿಂದಾಚೆಗೆ ಹೋದವರು ಶಕ್ತಿಯಲ್ಲಿ ವಿಲೀನವಾಗುತ್ತಾರೆ. ಅದೇ ಜನನ ಮರಣ ಚಕ್ರದಿಂದ ಸಿಗುವ ಬಿಡುಗಡೆ. ಅದೇ ಮೋಕ್ಷ.

ನಮಗೆ ಶಾಸ್ತ್ರಾರ್ಥವಾಗಲೀ ವೇದಗಳಾಗಲೀ ಸರಿಯಾಗಿ ಗೊತ್ತಿಲ್ಲ. ತಪಸ್ಸಂತೂ ಶೂನ್ಯ. ವೇದ ಶಾಸ್ತ್ರಗಳನ್ನೋದಿದ ಪಂಡಿತರು ನಮಗಿಂತ ಬಹುಪಾಲು ಎತ್ತರದಲ್ಲಿದ್ದಾರೆ. ಆದರೆ ಇದನ್ನೆಲ್ಲ ನಾವು ಒಪ್ಪುವುದಿಲ್ಲ. ಅದೆಲ್ಲ ಬದನೆಕಾಯಿಯಂತೆ ಕಾಣುತ್ತದೆ ನಮಗೆ.

ಕುರಿಗಳಿಗೆ ತೋರಿಸಲು ನಾವು ಡಾಂಭಿಕತೆಯನ್ನು ಮೈಗೂಡಿಸಿಕೊಂಡಿದ್ದೇವೆ. ಕ್ಯಾಮರಾಗಳಿಗೆ ಪೋಸು ಕೊಡುವಾಗಲಂತೂ ಭಕ್ತಕುಂಭಾರನ ರೀತಿ ನಾಟಕವಾಡುತ್ತೇವೆ. ಕೈಮುಗಿಯುವುದು ಹೂ ಹಾಕುವುದು ಎಲ್ಲವೂ ಇತರರು ನೋಡಲಿ ಎಂದಷ್ಟೆ. ಅದರಿಂದ ’ವಾಸು’ವಿಗೆ ಬೇರೆ ಲಾಭವಿದೆ.

ಆದರೂ ಕೆಲವು ತಾಂತ್ರಿಕರು ಸೌಂದರ್ಯ ಲಹರಿಯ ಬಗ್ಗೆ ಹೇಳಿದಾಗ ಕನ್ನಡ ಭಾಷೆಯಲ್ಲಿ ಅರ್ಥಸಹಿತ ಇರುವ ಕೆಲವು ಪ್ರತಿಗಳನ್ನು ತರಿಸಿ ಓದಿದ್ದೇವೆ ನಾವು. ಯಾಕೆಂದರೆ ಅಂತ ಶ್ಲೋಕಗಳು ನಮಗರ್ಥವಾಗಬೇಕಲ್ಲ?

ಹಲವು ಶ್ಲೋಕಗಳಲ್ಲಿ ನಾವು ಸತತವಾಗಿ ಬಳಸಿದ್ದು ಒಂದೇ ಶ್ಲೋಕ. ಅದು ೧೯ನೇ ಶ್ಲೋಕ.

ಮುಖಂ ಬಿಂದುಂ ಕೃತ್ವಾ ಕುಚಯುಗಮಧ-ಸ್ತಸ್ಯ ತದಧೋ
ಹರಾರ್ಧಂ ಧ್ಯಾಯೇದ್ಯೋ ಹರಮಹಿಷಿ ತೇ ಮನ್ಮಥಕಲಾಮ್ |
ಸ ಸದ್ಯಃ ಸಂಕ್ಷೋಭಂ ನಯತಿ ವನಿತಾ ಇತ್ಯತಿಲಘು
ತ್ರಿಲೋಕೀಮಪ್ಯಾಶು ಭ್ರಮಯತಿ ರವೀಂದು-ಸ್ತನಯುಗಾಮ್ || ೧೯ ||

ಹೇ ಪಾರ್ವತಿ, ಯಾವ ಸಾಧಕನು ತನಗೆ ವಶಳಾಗಬೇಕಾದ ಸ್ತ್ರೀಯ ಅವಯವಗಳನ್ನು ಧ್ಯಾನಿಸಿ ನಿನ್ನ ಕಾಮ ಬೀಜಾಕ್ಷರವನ್ನು ಜಪಿಸಿದರೆ ಆಕೆಯು ಆತನಿಗೆ ವಶಳಾಗುವಳು. ಆದರೆ ಇದು ತುಂಬಾ ಕ್ಷುಲ್ಲಕವಾದುದು. ಸೂರ್ಯಚಂದ್ರರೇ ಸ್ತನಗಳಾಗಿ ಉಳ್ಳ ನಿನ್ನ ರೂಪವು ಮೂರು ಲೋಕವನ್ನು ಮೋಹಿಸುತ್ತದೆ.

ವರ್ತುಲದೊಳಗೆ ಪೂರ್ವ ಪಶ್ಚಿಮ ಉತ್ತರ ದಕ್ಷಿಣ ದಿಕ್ಕುಗಳಲ್ಲಿ ’ಹ್ರೀಂ’ ಎಂದು ಬರೆದ ಯಂತ್ರವನ್ನಿಟ್ಟುಕೊಂಡು ಮೇಲಿನ ಶ್ಲೋಕವನ್ನು ಪಠಿಸಬೇಕಂತೆ.

ಪುಸ್ತಕದಲ್ಲಿ ಹೀಗೆ ಬರೆದಿದ್ದನ್ನು ಕಂಡು ನಮಗೆ ಬಹಳ ಸಂತೋಷವಾಯಿತು. ನಾವು ಸತತವಾಗಿ ಹತ್ತೊಂಬತ್ತನೇ ಶ್ಲೋಕವನ್ನು ಪಠಿಸುತ್ತಲೇ ಇದ್ದೆವು.

ದೇವಿಯನ್ನು ಕಟ್ಟಿಕೊಂಡು ನಾವೇನು ಮಾಡ್ಬೇಕು? ನಮಗೆ ಇಲ್ಲಿ ಸಿಗುವ ದೇವಿಯರೇ ಸಾಕು. ಹೀಗಾಗಿ ನಾವು ಅದನ್ನಷ್ಟೇ ಜಪಿಸಿದೆವು. ಅದರಿಂದ ನಮಗೆ ಸ್ತ್ರೀ ವಶೀಕರಣವೂ ಸಾಧ್ಯವಾಯಿತು. ಆದರೆ ಅದನ್ನಷ್ಟೆ ಮಾಡಿದರೆ ಪಾತಾಳಕ್ಕೆ ಬೀಸಿ ಎಸೆಯುತ್ತದೆ ಎಂಬುದು ನಮಗೆ ತಿಳಿದಿರಲಿಲ್ಲ.

ಸುಲಭವಾಗಿ ನಮ್ಮ ಬುಟ್ಟಿಗೆ ಬೀಳುವ ಸುಂದರ ಮಹಿಳಾ ಕುರಿಗಳಿಗೆ ’ವಿಶ್ವರೂಪ ದರ್ಶನ’ ನೀಡುವುದಕ್ಕೆ ಆರಂಭಿದೆವು ನೋಡಿ. ಆಹಾ ಅದೆಂತಹ ಸೂರ್ಯ ಅದೆಂತಹ ಚಂದ್ರ ಒಬ್ಬೊಬ್ಬರಲ್ಲೂ ಇರುವ ಸೂರ್ಯಚಂದ್ರರನ್ನು ಕಂಡು ನಾವು ಬಹಳ ಸಂತೋಷಪಡುತ್ತಿದ್ದೆವು.

ಸೂರ್ಯ ಚಂದ್ರರ ಪ್ರಭೆ ಪ್ರಖರವಾಗುಳ್ಳ ಒಬ್ಬಿಬ್ಬರನ್ನು ಹೊರದೇಶದಲ್ಲಿದ್ದರೂ ತುರ್ತಾಗಿ ಕರೆಸಿಕೊಂಡು ದರ್ಶನಕ್ಕಾಗಿ ಪರಿಶ್ರಮಿಸಿದೆವು. ಕರೆಸಿಕೊಂಡಿದ್ದಕ್ಕೆ ಬೇರೆ ಸಬೂಬು ಕೊಟ್ಟೆವು. ಆದರೆ ಕೆಲಸ ಯಾಕೋ ಕೈಗೂಡಲಿಲ್ಲ. ಕೈಗೂಡುವದರಲ್ಲಿತ್ತು ಅಷ್ಟರಲ್ಲಿ ಎಡವಟ್ಟಾಗಿ ಹೋಯ್ತು.

ನಮಗೆ ಬಂಧನದ ಭೀತಿ ಕಾಡಿದಾಗ ಮತ್ತೆ ಆ ಪುಸ್ತಕವನ್ನು ತೆರೆದು ಅರ್ಥ ಹುಡುಕಿದೆವು. ಎಂಟನೇ ಶ್ಲೋಕ ಈ ರೀತಿ ಕಾಣಿಸಿತು

ಸುಧಾಸಿಂಧೋರ್ಮಧ್ಯೇ ಸುರವಿಟ-ಪಿವಾಟೀ-ಪರಿವೃತೇ
ಮಣಿದ್ವೀಪೇ ನೀಪೋ-ಪವನವತಿ ಚಿಂತಾಮಣಿ ಗೃಹೇ |
ಶಿವಕಾರೇ ಮಂಚೇ ಪರಮಶಿವ-ಪರ್ಯಂಕ ನಿಲಯಾಮ್
ಭಜಂತಿ ತ್ವಾಂ ಧನ್ಯಾಃ ಕತಿಚನ ಚಿದಾನಂದ-ಲಹರೀಮ್ || ೮ ||

ಈ ಶ್ಲೋಕದಲ್ಲಿ ಶಂಕರ ಭಗವತ್ಪಾದರು ’ಸಮಯಾ’ಚಾರ ಮತಕ್ಕೆ ಅನುಸಾರವಾಗಿ ಮಾನಸಿಕ ಪೂಜಾವಿಧಾನವನ್ನು ತಿಳಿಸಿದ್ದಾರೆ. ಸಮುದ್ರ ಮಥನದಲ್ಲಿ ಕಲ್ಪವೃಕ್ಷಗಳಿಂದ ಕೂಡಿದ ಮಹಾದ್ವೀಪದಲ್ಲಿ ನೀಪವೃಕ್ಷಗಳ ಉಪವನವುಳ್ಳ ಚಿಂತಾಮಣಿಗಳಿಂದ ನಿರ್ಮಿತವಾದ ಭವನದಲ್ಲಿ ಮಂಗಳಕರವಾದ ಮಂಚದಮೇಲೆ ಆಸೀನಳಾಗಿ ಜ್ಞಾನಾನಂದ ಸ್ವರೂಪಳಾದ ಹೇ ಭಗವತಿ, ನಿನ್ನನ್ನು ನಿನ್ನ ದಯೆಯಿಂದ ಧನ್ಯರಾದ ಕೆಲವರು ಮಾತ್ರ ಪೂಜಿಸುತ್ತಾರೆ.

ಇದರ ಫಲ- ಬಂಧನದಿಂದ ಬಿಡುಗಡೆ, ಸಕಲಕಾರ್ಯ ಜಯ.

ಪುಸ್ತಕದಲ್ಲಿ ಹೀಗೆ ಕಾಣಿಸಿದ್ದೇ ತಡ, ನಮ್ಮ ಎಲ್ಲಾ ಪ್ರಾಂತಗಳಲ್ಲಿರುವ ಪ್ರತಿಯೊಂದು ಕುರಿಗೂ “ನೀವು ನಮ್ಮ ಸಲುವಾಗಿ ಈ ಶ್ಲೋಕವನ್ನು ವಾರಗಳವರೆಗೆ ಬೆಳಗಿನಿಂದ ಸಂಜೆಯವರೆಗೂ ಪಠನಮಾಡಿ ಪೂಜೆಮಾಡಿ” ಎಂಬ ಸಂದೇಶ ಕಳಿಸಿದೆವು.

ಅವರೆಲ್ಲ ಸುಮಾರು ಒಂದು ತಿಂಗಳವರೆಗೆ ಈ ಶ್ಲೋಕವನ್ನು ಪಠಿಸುತ್ತ ಪೂಜೆ ನಡೆಸಿದರಂತೆ. ಜೊತೆಗೆ ಅಥರ್ವಣ ತಂತ್ರಗಳನ್ನು ಬಳಸಿ ಬಂಧನವಾಗದಂತೆ ಪರಿಶ್ರಮಿಸಿದೆವು.

ಆ ಗಳಿಗೆಯಲ್ಲಿ ಮಾತ್ರ ನಮಗೆ ಸುಂದರಿಯರ ಮೇಲೆ ಅನುಮಾನ ಕಾಡುತ್ತಿತ್ತು. ಫಿಲ್ಟರ್ ಕಾಫಿಯಂತೆ ನಾವು ಫಿಲ್ಟರ್ ಮಾಡಿಕೊಂಡು ನಂತರ ಸೂರ್ಯಚಂದ್ರರ ದರ್ಶನವನ್ನು ತೆಗೆದುಕೊಳ್ಳತೊಡಗಿದೆವು.

ನಮ್ಮ ಸಲುವಾಗಿ ನಮಗೆ ಒಳಿತಾಗಲೆಂದು ಕುರಿಗಳೆಲ್ಲ ಜಪ ತಪ ಉಪವಾಸ ನಡೆಸಿದವು. ನಮ್ಮ ನಿಜರೂಪದ ಅರಿವು ಅವುಗಳಿಗಿರಲಿಲ್ಲ. “ಅಯ್ಯೋ ನಮ್ಮ …..ಅಯ್ಯೋ ನಮ್ಮ…..” ಎಂದು ಅವೆಲ್ಲ ಅಳುವುದಕ್ಕೆ ಸಹ ಮುಂದಾಗಿದ್ದವು.

ಸಂಸ್ಥೆಯ ವತಿಯಿಂದ ನಡೆಸಿದ ಧಾರ್ಮಿಕ ಹೋಮ ಹವನ ಪೂಜೆಗಳೇನು ಕಮ್ಮಿಯೆಂದುಕೊಳ್ಳಬೇಡಿ. ಕೇರಳದ ಮಾಂತ್ರಿಕರು ಉತ್ತರದ ಕಡೆಯವರು ಎಲ್ಲರೂ ನಮ್ಮ ಜೊತೆಗೇ ಇದ್ದರು. ಎದುರಾಳಿ ಪಂಗಡಕ್ಕೆ ಸುದ್ದಿ ಹೋಗದಂತೆ ಗೋಪ್ಯವಾಗಿ ಎಲ್ಲವನ್ನೂ ನಡೆಸುತ್ತಿದ್ದರು.

ತಂತ್ರ ವಿದ್ಯೆ ಕೇವಲ ತಾತ್ಕಾಲಿಕ ಎಂಬುದು ನಮಗೆ ಗೊತ್ತಿದ್ದರೂ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯುಷ್ಯ ಅಂತಾರಲ್ಲ ಅದಕ್ಕೆ ಮುಂದಾಗಿದ್ದೆವು.

ಇದೆಲ್ಲದರ ಜೊತೆಗೆ ಹೊರಲೋಕಕ್ಕೆ ಕಾಣಿಸುವಂತೆ ಸಭೆ ಸಮಾರಂಭಗಳಲ್ಲಿ ಭಾಷಣ ಕೊರೆದು ಛೂಬಾಣಗಳನ್ನು ಬಿಟ್ಟೆವು. ನಮ್ಮ ಸೇನಾಧಿಪತಿಗಳೆಲ್ಲರೂ ಎಲ್ಲಾ ಕಡೆಗೂ ಅವುಗಳ ಸುದ್ದಿಗಳನ್ನು ತಮ್ಮ ಶಕ್ತಿಯುಕ್ತಿ ಮೀರಿ ಪ್ರಕಟಿಸಿ ತಪ್ಪನ್ನೇ ಸರಿಯೆಂದು ಸಮಾಜಕ್ಕೆ ಬೋಧಿಸಿದರು.

ಆದರೂ ಕೆಲವು ಕುರಿಗಳು ಮಾತ್ರ ನಮ್ಮೊಳಗಿನ ಈ ’ಮಹತ್ವ’ವನ್ನು ತಿಳಿದುಕೊಂಡು ಜಾಗ ಖಾಲಿಮಾಡಿಬಿಟ್ಟಿದ್ದವು. ಅವರೆಂದೂ ಮರಳಿ ಬರಲಿಲ್ಲ. ಬರುವಂತೆ ಆಗ್ರಹಮಾಡಿದರೂ ಬರಲಿಲ್ಲ ಆಜ್ಞೆಮಾಡಿದರೂ ತಲೆಹಾಕಲಿಲ್ಲ. “ನಾವು ನ್ಯೂಟ್ರಲ್” ಎಂದುಬಿಟ್ಟವು. ಅಂತವರ ಮೇಲೂ ಒಮ್ಮೆ ನಾವು ಹಲ್ಲುಮಸೆದಿದ್ದೆವು.

ಏನಿದ್ದರೂ ಇನ್ನೊಂದು ಹತ್ತಿಪ್ಪತ್ತು ವರ್ಷ ನಾವು ’ಹಾವಾಡಿಸ’ಬಹುದು. ಅಷ್ಟರೊಳಗೆ ನಾವು ಹೊಡೆದ ಸ್ಕೋರು ಸಾವಿರವನ್ನಾದರೂ ದಾಟದಿದ್ದರೆ ಈ ರೂಪದಲ್ಲಿ ಜನಿಸಿದ್ದರ ಪ್ರಯೋಜನವಾದರೂ ಏನು?

ನಮ್ಮ ಅನುಕೂಲಕ್ಕಾಗಿಯೇ ಇರುವವರಲ್ಲಿ ಹೇಳಿಬಿಟ್ಟಿದ್ದೇವೆ “ನಿಮಗೆ ಬೇಕಾದುದಕ್ಕೆ ವ್ಯವಸ್ಥೆ ಮಾಡೋಣ ನಮಗೆ ಮೊದಲು ವ್ಯವಸ್ಥೆ ಮಾಡಿಕೊಡಿ” ಅಂತ. ಅದಕ್ಕೆ ಅವರೆಲ್ಲ ಹಾಗೇ ನಡೆದುಕೊಳ್ಳುತ್ತಿದ್ದಾರೆ. ಕುರಿಗಳೆದುರು ಭಯ ಭಕ್ತಿ ಪ್ರದರ್ಶಿಸುತ್ತ ಅವುಗಳನ್ನು ಆಕರ್ಷಿಸಿ ವಿರೋಧಿಗಳಾಗದಂತೆ ಇಟ್ಟುಕೊಳ್ಳಲು ಶತಾಯಗತಾಯ ಯತ್ನಿಸುತ್ತಿದ್ದಾರೆ.

ನಮ್ಮಲ್ಲಿ ಇತ್ತೀಚೆಗೆ ಸಿಕ್ಕಾಪಟ್ಟೆ ಹೋಮಗಳು ಹಲವು ರೀತಿಯ ಪೂಜೆಗಳು ನಾನಾ ಅವತಾರಗಳು ಭಿನ್ನ ಭಿನ್ನ ಪೋಸುಗಳು ಎಲ್ಲವೂ ನಡೆಯುತ್ತಿರುವುದು ಕೇವಲ ಕುರಿಗಳನ್ನು ನಮ್ಮಲ್ಲೆ ಹಿಡಿದಿಟ್ಟುಕೊಳ್ಳಲಿಕ್ಕಾಗಿ. “ಅಯ್ಯಯ್ಯೋ ಸಿಕ್ಕಾಪಟ್ಟೆ ಧಾರ್ಮಿಕ ನೇಮ ನಿಷ್ಠೆ” ಎಂದು ಅವೆಲ್ಲವೂ ಮಾತಾಡಿಕೊಳ್ಳಬೇಕು. ಹಾಗೆ ಮಾಡಿದ್ದೇವೆ ನಾವು.

ನಾವೇನೂ ಕಳೆಗುಂದಿಲ್ಲ ಎಂದು ತೋರಿಸಲು ಅಟ್ಟವನ್ನಾದರೂ ಏರಿ ಪೋಸುಕೊಡುತ್ತೇವೆ ಅಥವಾ ಚಟ್ಟದ ಮೇಲೆ ಕುಳಿತು ಬೇಕಾದರೂ ಪೋಸು ಕೊಡುತ್ತೇವೆ. ನಮ್ಮ ವಿರೋಧಿಗಳು “ಇದೆಲ್ಲ ಡೊಂಬರಾಟ ಬೇಕಿತ್ತೇ?” ಎಂದುಕೊಂಡರೆ ಕುರಿಗಳು ಜಯಘೋಷ ಕೂಗುತ್ತವೆ. ಇದೆಲ್ಲವೂ ಕುರಿಗಳನ್ನು ಕಾಯ್ದಿಟ್ಟುಕೊಳ್ಳುವ ತಂತ್ರವೆಂದು ನಿಮಗೆ ಬಿಡಿಸಿ ಹೇಳಲೇ?

ನಮಗೆ ಯಾವ ಸೇವೆಯೂ ಬೇಡ. ಅಂಗಾಂಗ ಸೇವೆಯನ್ನು ಬಿಟ್ಟು ಬೇರೆ ಯಾವ ಅಷ್ಟಾಂಗ ಸೇವೆಯೂ ಬೇಡ. ಸದ್ಯ, ಕೇಸಿನಿಂದ ಮುಕ್ತಿ ದೊರೆತರೆ ಸಾಕು ಎಂದುಕೊಂಡಿದ್ದೇವೆ. ನಾವೇ ಗೆಲ್ಲುತ್ತೇವೆ ಎಂದು ನಮ್ಮ ಪಟಾಲಮ್ಮಿನವರು ತಿಳಿದುಕೊಂಡಿದ್ದಾರೆ. ಆದರೆ ನಮಗೆ ಒಳಗೊಳಗೆ ಪುಕು ಪುಕು ಆಗ ಹತ್ತಿದೆ.”

Thumari Ramachandra

source: https://www.facebook.com/groups/1499395003680065/permalink/1604057473213817/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s