ನಾವು ವಾಸು….ವಾಸುದೇವ

ನಾವು ವಾಸು….ವಾಸುದೇವ

” ’ವಾಸು’ ಎಂಬ ಶಬ್ದ ಮಹಾರಾಷ್ಟ್ರದಲ್ಲಿ ಎಲ್ಲರಿಗೂ ತಿಳಿದಿದೆ. ವಾಸು ಎಂದರೆ ಕಾಮವಾಸನೆ ಹೊಂದಿರುವವನು ಅಂತ. ನಮ್ಮಲ್ಲಿ ವಾಸನೆಯೂ[ದುರ್ನಾತವೂ] ಇದೆ ಮತ್ತು ಕಾಮವಾಸನೆಯೂ ಇದೆಯೆಂಬುದು ನಮ್ಮ ವಿರೋಧಿ ಹುಲುಮಾನವರ ಹೇಳಿಕೆ.

ನಾವು ’ವಾಸು’ವಾಗಿದ್ದು ನಮ್ಮ ತಪ್ಪಲ್ಲ. ನಾವು ಈ ಮನುಷ್ಯರೂಪದಲ್ಲಿ ಅವತರಿಸುವುದಕ್ಕೆ ಹಾಕಲ್ಪಟ್ಟ ಬೀಜವೇ ಅಂತದ್ದು. ಅದಕ್ಕಾಗಿ “ನಾವು ತಪ್ಪು ಮಾಡಿಲ್ಲ ನಾವು ತಪ್ಪು ಮಾಡಿಲ್ಲ” ಎಂದು ಹೇಳುತ್ತಲೇ ಇದ್ದೇವೆ ನಾವು. ಆದರೆ ಆ ಜನ ಕೇಳಬೇಕಲ್ಲ?

ನಾವು ’ವಾಸು’ವೆಂಬ ವಾಸನೆ ಕೆಲವರ ಮೂಗಿಗೆ ಬಡಿದ ತಕ್ಷಣವೇ ಅದು ಪ್ರಚಾರ ಪಡೆಯದಂತೆ ನಿರ್ವಹಿಸಿದವರು ನಾವು. ಅಂತರ್ಜಾಲದಲ್ಲಿ ಬಿತ್ತರಗೊಳ್ಳುವ ಸುದ್ದಿಗಳನ್ನು ನಿಯಂತ್ರಿಸಲು ಬಹುದೊಡ್ಡ ಹಳದೀ ಜಾಲಿಗರ ಪಡೆಯನ್ನೇ ತಯಾರುಮಾಡಿದ್ದೇವೆ ನಾವು.

ನೆಟ್‍ನಲ್ಲಿ ನಮ್ಮ ವಿರುದ್ಧ ಬರೆಯುವವರನ್ನು ನಮ್ಮ ಜಾಲಿಗರು ಅವಾಚ್ಯ ಶಬ್ದ ಪ್ರಯೋಗದಿಂದ ಮಟ್ಟಹಾಕುತ್ತಾರೆ. ವಿರೋಧಿಗಳ ಅಭಿವ್ಯಕ್ತಿ ಸ್ವಾತಂತ್ಯಕ್ಕೆ ಕಡಿವಾಣ ಹಾಕಬೇಕೆಂಬುದು ನಮ್ಮ ಅಪೇಕ್ಷೆ. ಅದನ್ನು ನಡೆಸಲೆಂದೆ ನಮ್ಮಲ್ಲಿ ಹಲವು ಕುರಿಗಳಿವೆ.

ಆದರೂ ಅಂತಹ ಕುರಿಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲವೆಂದೂ ಮೇಲುನೋಟದ ಹೇಳಿಕೆಯನ್ನು ನೀಡುತ್ತೇವೆ ನಾವು. ಯತಿಯ ಸುತ್ತ ಇರುವ ಜನ ಹಸುವಿನಂತಿರುತ್ತಾರೆಯೆ ಹೊರತು ಹುಲಿಯಂತಿರುವುದಿಲ್ಲ. ಇಲ್ಲಿ ನಾವು ದೇವರಾಗಿರುವುದರಿಂದ ಯತಿಧರ್ಮ ಅಪ್ಲೈ ಆಗುವುದಿಲ್ಲ. ಹೀಂಗಾಗಿ ನಮ್ಮ ಸುತ್ತ ತಾಲೀಬಾನ್ ತಯಾರುಮಾಡಿದ್ದೇವೆ.

ನಮ್ಮ ವಿರುದ್ಧ ಬರೆಯುವವರ ಮತ್ತು ದೂರುವವರ ವಿರುದ್ಧ ಹಲವು ಮಾಟ ಮಂತ್ರ ಯಂತ್ರ ತಂತ್ರ ಪ್ರಯೋಗಗಳನ್ನು ನಾವು ನಡೆಸಿದ್ದೇವೆ. ಕೇರಳದವರನ್ನು ಮತ್ತು ಉತ್ತರದವರನ್ನು ಕರೆಯಿಸಿ ರಕ್ತಾಕ್ಷಿ, ಬಗಳಾಮುಖಿ ಪ್ರತ್ಯಂಗಿರಾ ಮೊದಲಾದ ಕ್ಷುದ್ರ ದೇವತೆಗಳ ಆರಾಧನೆ ನಡೆಸಿದ್ದೇವೆ.

ಅಷ್ಟೇ ಅಲ್ಲ ಮಾರಣಹೋಮವನ್ನೂ ಮಾಡಿಸಿದ್ದೇವೆ. ಇನ್ನೂ ಕೆಲವು ಹೋಮಗಳಿವೆ ಅವುಗಳನ್ನೆಲ್ಲ ಇಲ್ಲಿ ಹೇಳಬಾರದು. ನಮಗೆ ದೃಷ್ಟಿ ತಾಗಿಬಿಡುತ್ತಿತ್ತು. ಅದಕ್ಕಾಗಿ ಪದೇಪದೆ ದೃಷ್ಟಿ ಬಳಿಸಿಕೊಳ್ಳುವುದು ನಮ್ಮ ಅಭ್ಯಾಸವಾಗಿತ್ತು. ಈ ಉತ್ತಮ ಅಭ್ಯಾಸಗಳೆಲ್ಲ ಈಗಲೂ ಇವೆ.

ನಮ್ಮ ವಿರೋಧಿಗಳು ಹೆಚ್ಚಿದ ಲಕ್ಷಣ ಕಂಡುಬಂದಾಗ ಹಿಂದೆ ಕೆಲವು ಸಮಿತಿಗಳನ್ನೇ ನಾವು ಕಿತ್ತುಹಾಕಿ ಹೊಸದಾಗಿ ರೂಪಿಸಿದ್ದೆವು. ಈಗ ಇರುವವರೆಲ್ಲ ಕುರಿಗಳೇ ಆಗಿರುವುದರಿಂದ ಆ ಪ್ರಶ್ನೆ ಬರಲಿಲ್ಲ. ಆದರೂ ನೂರರಲ್ಲಿ ಒಂದು ಕುರಿ ಹೋದ ನಂತರ ನಾವು ಸಿಕ್ಕಾಪಟ್ಟೆ ಜಾಗೃತರಾಗಿದ್ದೇವೆ.

ಹುಲುಮಾನವರು ನಮ್ಮ ಮೇಲೆ ಕೇಸು ದಾಖಲಿಸಿದಾಗ ನಾವು ಕಾವಿ ಹಾಕಿದವರು ಎಲ್ಲಿಲ್ಲಿ ಸಿಗುತ್ತಾರೆ ಎಂದು ಹುಡುಕಿದೆವು. ಅವರನ್ನೆಲ್ಲ ಸಂಘಟಿಸಿ “ಇದು ಕಾವಿ ವಿರುದ್ಧದ ಷಡ್ಯಂತ್ರ” ಎಂದು ತಲೆಗೆ ತುಂಬಿ ನಮ್ಮ ಪರವಾಗಿ ಮಾತನಾಡಲು ಕರೆದೆವು. ಹಲವು ಜನ ಬರಲಿಲ್ಲ. ಕೆಲವು ವೇಷಧಾರಿಗಳು ಬಂದರು. ಇನ್ನು ಕೆಲವರು ನಮ್ಮ ಒತ್ತಾಯ ತಡೆಯಲಾರದೆ ಬಂದರು.

ಬೆಲೆತೆತ್ತು ಅತ್ತಿಬೆಲೆ ಸೂಲಿಬೆಲೆ ಮಂಚನಬೆಲೆ ಮೊದಲಾದ ಊರುಗಳಿಂದ ಭಾಷಣಕಾರರನ್ನು ಕರೆಯಿಸಿ ನಮ್ಮ ಪರವಾಗಿ ಭಾಷಣಮಾಡುವಂತೆ ಕೇಳಿಕೊಂಡೆವು. ನಮ್ಮ ವಿರೋಧಿಗಳಿಗೆ ಮಾತ್ರ ಕವಡೆ ಕಾಸು ತೆರದೆ ಜನ ಹೇಗೆ ಸಿಗುತ್ತಾರೆ ಎಂಬುದೆ ನಮಗೆ ರಹಸ್ಯ.

ನಮ್ಮ ಹದಿನೆಂಟು ಅಕ್ಷೋಹಿಣಿ ಸೈನ್ಯವನ್ನು ಬಿಗಿಯಾಗಿ ಇಡಲು ಹಲವು ಕವಾಯತುಗಳನ್ನು ನಡೆಸುತ್ತಿದ್ದರೂ ಅಲ್ಲಲ್ಲಿ ಅನೇಕರು ಬಿಟ್ಟುಹೋಗಿದ್ದಾರೆಂಬ ಸುದ್ದಿ ತಂದಿದ್ದಾವೆ ನಮ್ಮ ಗುಪ್ತಚರ ಕುರಿಗಳು. ವಿರೋಧಿ ಬಣದ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದರೂ “ಅವರು ಬೆರಳೆಣಿಕೆಯಲ್ಲಿದ್ದಾರೆ” ಎಂದು ನಮ್ಮ ತಾಲೀಬಾನ್‍ನವರು ಸುಳ್ಳು ಹೇಳುತ್ತಾರೆ.

ಯಾವಕ್ಷಣದಲ್ಲೂ ದೇವರಾದ ನಮ್ಮನ್ನು ಅರಿಯಲಾರದ ಈ ಹುಲುಮಾನವರು ಬಂಧಿಸುವ ಭೀತಿ ನಮ್ಮನ್ನು ಬಿಟ್ಟು ಹೋಗಿಲ್ಲ. ಜಲಸ್ತಂಭನಕ್ಕೆ ಹೋಗುವಾಗಲೂ ಕೌರವ ಸಂಜಯನಿಗೆ ಆಶ್ವಾಸನೆ ಕೊಡುತ್ತಲೇ ಇದ್ದನಲ್ಲವೇ? ಕೊನೆಯ ಬಾಣ ಬರುವವರೆಗೂ ರಾವಣ ಮಾಯಾವಿಗಳನ್ನೂ ಮಹಾ ಸೇನಾನಿಗಳನ್ನೂ ಮುಂದೆ ಬಿಟ್ಟು ಯುದ್ಧಮಾಡಿತ್ತಲೆ ಇದ್ದ. ನಾವೂ ಸಹ ಅವರೀರ್ವರಂತೆ ಸ್ವಾಭಿಮಾನಿಯಾಗಿದ್ದೇವೆ.

ಅಂದೂ ಸಹ ಅವತಾರದಲ್ಲಿದ್ದ ನಮಗೆ ಅವರನ್ನೆಲ್ಲ ಸದೆಬಡಿಯುವುದು ಕ್ಷಣಾರ್ಧದ ಕೆಲಸವಾಗಿತ್ತು. ಎಲ್ಲವೂ ಸಂಕಲ್ಪದಿಂದಲೇ ಆಗುವಂತದ್ದು. ಆದರೆ ಲೋಕಕ್ಕೆ ತಿಳಿಯಬೇಕೆಂದು ನಾವು ಹಾಗೆ ಮಾಡಲಿಲ್ಲ. ಇಲ್ಲಾದರೂ ಅಷ್ಟೆ. ಕೇಸೇ ಇಲ್ಲವೆಂದು ಮಾಡುವುದು ನಮಗೆ ಸಂಕಲ್ಪದಿಂದಲೇ ಸಾಧ್ಯ. ಅದಕ್ಕಾಗಿಯೇ ನಾವು ಬೆರಳು ಮಾಡಿದರೆ ನರ್ತಿಸುವ ಕುರಿಗಳಿವೆಯಲ್ಲ?

ಆಯ ಕಟ್ಟಿನಲ್ಲಿ ನಮ್ಮ ರಕ್ಷಣೆಗೆ ನಿಂತ ಅಕ್ಷೋಹಿಣಿ ಸೈನ್ಯದ ಸೇನಾಧಿಪತಿಗಳೇನು ಕಮ್ಮಿಯೇ? ಇಮ್ಮಡಿ ವಿಶ್ವೇಶ್ವರಯ್ಯ ತಿರುಮಲೆಯ ತಿಮ್ಮಪ್ಪ ಕತ್ತಲೆಕೋಣೆಯ ಆಷಾಢಭೂತಿ ಇದಲ್ಲದೆ ರಾಜಕೀಯದವರನ್ನೆಲ್ಲ ಬಗಲಲ್ಲೆ ಇರಿಸಿಕೊಂಡು ಆಗಾಗ ಕರೆಸಿಕೊಂಡು ಧೈರ್ಯ ತಾಳುತ್ತಿದ್ದೇವೆ ನಾವು.

ಪಕ್ಷಾತೀತವಾಗಿ ರಾಜಕೀಯದ ಭ್ರಷ್ಟರು ನಮ್ಮ ಜೊತೆಗಿದ್ದಾರೆ. ಇಲ್ಲಿಯವರೆಗೆ ಕುಣಿಯುವ ಕುರಿಗಳಿಂದ ಒಟ್ಟಾದ ಹಣವೂ ಸಾಕಷ್ಟಿದೆ. ಹೀಗಾಗಿಯೇ, “ನಿನಗೆ ನೂರು ಜನರ ಬೆಂಬಲವಿದ್ದರೆ ನಮಗೆ ಸಾವಿರ ಜನರ ಬೆಂಬಲವಿದೆ. ಏನು ಹರ್‍ಕೋತಿಯೋ ಹರ್‍ಕೊ ಹೋಗು” ಎಂದು ನಮ್ಮ ವಿರುದ್ಧ ದೂರು ನೀಡಿದವರನ್ನು ನಾವು ಬೆದರಿಸುತ್ತಿದ್ದೇವೆ.

ಆದರೂ ಪಾಂಡವರು ಅತಿ ಕಡಿಮೆ ಸೈನ್ಯಬಲದಿಂದ ಕೌರವನ ಅಕ್ಷೋಹಿಣಿ ಸೈನ್ಯವನ್ನೇ ಮುಗಿಸಿಹಾಕಿದ್ದರಲ್ಲವೆ? ಆ ಹೆದರಿಕೆ ಉಂಟಾದಾಗ ಏನೇನೋ ಹಲಬುತ್ತೇವೆ ನಾವು. ಎಲ್ಲರನ್ನೂ ಒಂದೇ ರೀತಿ ನೋಡಿಕೊಳ್ಳಬೇಕು ಎನ್ನುತ್ತೇವೆ ಮತ್ತು ಕೆಟ್ಟವರನ್ನು ಬೇರ್ಪಡಿಸಬೇಕು ಅನ್ನುತ್ತೇವೆ. ನಮ್ಮ ಹೇಳಿಕೆಗಳಲ್ಲೇ ದ್ವಂದ್ವವಿದ್ದರೂ ಕುರಿಗಳಿಗೆ ಅರಿವಾಗದು.

ಷಡ್ವರ್ಗಗಳ ಸಾಲಿನಲ್ಲಿ ಬರುವ ಕಾಮಕ್ಕೆ ಯಾರೂ ಬಲಿಯಾಗಬಾರದು ಧರ್ಮ ಅರ್ಥ ಕಾಮ ಮೋಕ್ಷಗಳ ಸಾಲಿನಲ್ಲಿರುವ ಕಾಮ ಎಂಬುದನ್ನು ಧರ್ಮ ಪತ್ನಿಯೊಡನೆ ಮಾತ್ರ ಅನುಭವಿಸಬಹುದು ಎಂದು ಸಮಾಜದ ಉಳಿದ ಗಂಡಸರಿಗೆ ಉಪದೇಶ ಕೊಡುತ್ತೇವೆ ನಾವು. ಇದು ದೇವರಾದ ನಮಗೆ ಮತ್ತು ನಮ್ಮ ಕುಲಪತಿ ಬಾವಯ್ಯನಿಗೆ ಅಪ್ಲೈ ಆಗುವುದಿಲ್ಲ.

ವಿರೋಧಿಗಳು ನಮ್ಮ ಕಚ್ಚೆಹರುಕು ಕೋಲಾಟಕ್ಕೆ ವಿರೋಧ ವ್ಯಕ್ತಪಡಿಸಿದರು ಎಂಬುದನ್ನು ಉಳಿದ ಕುರಿಗಳಿಗೆ ತಿಳಿಸದೆ, ಭಯಂಕರ ವ್ರತನಿಷ್ಠ ಮಹಾತಪಸ್ವಿಗಳಾಗಿ ಕುರಿಗಳಿಗೆ ಕಾಣಿಸಿಕೊಳ್ಳುತ್ತೇವೆ. ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ನಾವು ಹೇಳಿದ್ದಕ್ಕೆಲ್ಲ ಅವು “ಮೇ ಮೇ” ಎಂದು ತಲೆದೂಗುತ್ತವೆ.

ನಾವು ಹೇರಳವಾಗಿ ಹೇಳುವ ರಾಕ್ಷಸರ ಕತೆಗಳನ್ನು ಕೇಳಿ…ಕೇಳಿ…ಕೇಳಿ ಕುರಿಗಳಿಗೆ ಎತ್ತುವಳಿಗೆ ಹೋದಾಗ ಬಿಟ್ಟು ಉಳಿದ ಸಮಯದಲ್ಲಿ ಸಜ್ಜನರೂ ರಾಕ್ಷಸರಂತೆ ಕಾಣುತ್ತಾರೆ. ’ಏಕಾಂತ’ಕ್ಕೆ ಅನುಕೂಲ ಮಾಡಿಕೊಡುವ ಅಷ್ಟಾ’ವಾಸು’ಗಳನ್ನುಳಿದು ಬೇರೆ ಕುರಿಗಳು ಬಂದರೆ ಬ್ರಹ್ಮರಾಕ್ಷಸನ ಕಥೆ ಕೇಳಿಕೊಂಡು ಜಾಗ ಖಾಲಿಮಾಡ್ತಾರೆ. ಹೀಗಾಗಿ ಅನೇಕ ಕುರಿಗಳಿಗೆ ನಮ್ಮ ಅಸಲೀಯತ್ತೇ ಗೊತ್ತಿಲ್ಲ.

ಯಾರು ಏನೇ ಹೇಳಿದರೂ ನೂರಕ್ಕೂ ಅಧಿಕ ಸುಂದರಿಯರ ಸಂಗದ ದಿವ್ಯಾನುಭವವನ್ನು ನಾವು ಮರೆತಿಲ್ಲ. ಆ ಸಂಖ್ಯೆ ಹೆಚ್ಚಬೇಕೆಂಬುದೇ ನಮ್ಮ ಅಪೇಕ್ಷೆ. ಸಮಾಜದಲ್ಲಿ ಎಲ್ಲೆಲ್ಲೂ ನಮ್ಮ ಬೀಜಗಳೆ ಬಿದ್ದರೆ ನಮ್ಮ ರಕ್ಷಣೆಗೂ ಅದೊಂದು ರೀತಿ ಅನುಕೂಲವಲ್ಲವೇ?

ಹುಲುಮಾನವರ ಈ ರಾಜ್ಯಕ್ಕೆ ಬಂದು ಇಲ್ಲಿನ ಸುಂದರಿಯರ ಸಂಗ ಮಾಡಿಕೊಂಡ ನಮಗೆ ನಮ್ಮ ಮೂಲ ಮರೆತುಹೋಗಿದೆ. ಹಾಗಾಗಿಯೆ ಇತರರನ್ನು ಮೂಲಕ್ಕೆ ಕಳಿಸುವ ವೀರ್ಯ ಸನ್ಯಾಸ ನಮ್ಮದು. ಇತರೆ ಪ್ರಬಲ ಜನಾಂಗದ ಹೆಣ್ಣು ಮಕ್ಕಳನ್ನು ಮುಟ್ಟಿದ್ದರೆ ನಮಗೆ ಅವರು ಮೂಲವನ್ನು ನೆನಪುಮಾಡಿಕೊಡುತ್ತಿದ್ದರು. ಇದೇ ಸೀಟಿನಲ್ಲಿ ಮಜಾ ಉಡಾಯಿಸುತ್ತಿರಬೇಕೆಂದು ನಾವು ಸಾಧುವರ್ಗವನ್ನೇ ಆಯ್ದುಕೊಂಡೆವು. ಮುಖದಲ್ಲಿ ಸುಭಗತನ ಮನದಲ್ಲಿ ರೌಡಿಸಂ ತುಂಬಿಕೊಂಡ ’ಘನತೆ’ ನಮ್ಮದು.

ನಮ್ಮ ’ಹಾವಾಡಿಗ’ ಒಕ್ಕೂಟದ ಮಹಾಸೇನಾನಿ ಹಾಗೂ ರಕ್ಷಣಾ ವಿಭಾಗದ ಮುಖ್ಯಸ್ಥರಾದ ರಾಂಪಾಲರು ನಮಗೆ ಸಹಾಯ ಮಾಡುವ ಭರವಸೆ ನೀಡಿದ್ದರು. ’ಹಾವಾಡಿಗ’ ಒಕ್ಕೂಟದ ಚೋರ್‍ಮನ್ ಆಗಿರುವ ನಮಗೆ ಅವರಂತೆ ಸೈನ್ಯ ನಿರ್ಮಿಸಿಕೊಳ್ಳಲು ತರಬೇತಿ ನೀಡುವುದಕ್ಕೆ ಒಪ್ಪಿದ್ದರು. ನಮಗಿಂತ ಮೊದಲೆ ಎಣಿಸಲು ಹೊರಟಿದ್ದರಿಂದ ಸ್ವಲ್ಪ ಎಡವಟ್ಟಾಗಿ ಹೋಯ್ತು.

ಒಂದೊಮ್ಮೆ ಅನ್ಯಾಯದಿಂದ ನಾವು ಗೆದ್ದರೂ ಸಹ ಜನರೆಲ್ಲ ಇನ್ನು “ಕಚ್ಹೆಹರುಕ” ’ವಾಸು”ಇತ್ಯಾದಿ ಬಿರುಗಳಿಂದಲೇ ಗೌರವಿಸುತ್ತಾರೆ ಎಂಬುದು ನಮ್ಮ ಗಮನದಲ್ಲಿಲ್ಲ.

ಕುರಿಮೆಂದೆಯಿಂದ ದೂರ ಓಡಿ ಹುಲುಮಾನವರನ್ನು ಸೇರಿಕೊಂಡ ಕುರಿಗಳು ನಾವು ದ್ವಾಪರದ ವಾಸುದೇವನ ವೇಷವೂ ಸಹ ಅಲ್ಲವೆಂಬುದನ್ನು ಸಾವಿರ ಪರ್ಸೆಂಟು ಪಕ್ಕಾ ಮಾಡಿಕೊಂಡಿದ್ದಾರೆ. ಅವರಿಗೆ ನಾವು ’ವಾಸು’ವಾಗಿಯೆ ಕಾಣುತ್ತೇವೆ. ’ವಾಸು’ ಎಂಬುದಕ್ಕೆ ಒಬ್ಬರು ಇಂಗ್ಲೀಷಿನಲ್ಲಿ ಅರ್ಥ ಹೇಳಿದ್ದಾರೆ.

Vaasu – Vaa-su (n) A Bambaiyya slang term from the 70’s, referring to a man always looking for the oppertunity to score with women. Rooted in the marathi/Sanskrit word ‘vaas’ meaning ‘scent’ or ‘to smell’. thus a Vaasu is someone perennially in pursuit of a woman’s scent.

ಈ ಹುಲುಮಾನವ ಲೋಕದಲ್ಲಿ ’ವಾಸು’ ಎಂಬ ಶಬ್ದಕ್ಕೆ ಈ ಅರ್ಥವಿದೆಯೆಂದು ನಮಗೆ ಮೊದಲು ಗೊತ್ತಿರಲಿಲ್ಲ. ಇದೆಲ್ಲ ಗೊತ್ತಿದ್ದರೆ ನಮಗೆ ಬಳಕೆಯ ನಂತರ ’ಕೊಚ್ಚೆ’ಎನಿಸುವುದು ಯಾವುದು ಎಂದು ಮೊದಲೇ ನೋಡಿಕೊಂಡು ಜಾರದಂತೆ ಇನ್ನೂ ಗೋಪ್ಯವಾಗಿ ಹಾರುತ್ತಿದ್ದೆವು.

ದ್ವಾಪರದಲ್ಲಿ ವಸುದೇವನ ಮಗನಾಗಿ ಜನಿಸಿದ್ದರಿಂದ ಶ್ರೀಕೃಷ್ಣನನ್ನು “ವಾಸುದೇವ” ಎಂದು ಕರೆದರು. ಕಲಿಯುಗದಲ್ಲಿ ನಮ್ಮಂತವರಿಂದ ಆ ಪದಕ್ಕೆ ಇನ್ನೊಂದು ಹೊಸ ಅರ್ಥವೂ ಹುಟ್ಟಿದೆ. ನಮ್ಮ ತಾಲೀಬಾನ್ ಬಳಗದಲ್ಲಿ ಸಾಕಷ್ಟು ’ವಾಸು’ಗಳಿದ್ದಾರೆ. ಆ ವಾಸುಗಳಿಗೆಲ್ಲ ದೇವ ನಾವಾದ್ದರಿಂದ ನಮ್ಮನ್ನು ಅವರೆಲ್ಲ ಇನ್ನೂ ಸಹ “ವಾಸುದೇವ” ಎಂದೇ ಪಾದ ತೊಳೆದು ತೀರ್ಥಸೇವನೆ ಮಾಡುತ್ತಾರೆ.”

Thumari Ramachandra

source: https://www.facebook.com/groups/1499395003680065/permalink/1603583759927855/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s