ಅಂಬಾ ಕತೆಯಲ್ಲಿ ದೇವರ ಅಪ್ಪ

ಅಂಬಾ ಕತೆಯಲ್ಲಿ ದೇವರ ಅಪ್ಪ

“ಸೇವಾ ವಿಶಾರದರು ಜಯ ಜಯ ಜಯ ಶ್ರೀಗೋವಿಂದ ನಾಮಸ್ಮರಣೆಯೊಂದಿಗೆ ನಮ್ಮ ಸೇವೆ ಮಾಡಿದ್ದನ್ನು ಕೇಳಿ ಪುನೀತರಾಗಿದ್ದೀರಿ. ಇಂದು ಅಂಬಾ ಕತೆ.

ಎಲ್ಲಾ ಕತೆಗೂ ಆದಿ ಮಂಗಲ ಮಧ್ಯ ಮಂಗಲ ಮತ್ತು ಅಂತ್ಯ ಮಂಗಲ ಎಂಬುದಿರುತ್ತದೆ. ಎಲ್ಲಿ ನೋಡಿದರೂ ಮಂಗಲದ ಮೂರು ನಾಮಗಳೇ ಬೀಳಲಿ ಎಂಬುದು ನಮ್ಮ ಹೃದಯದ ಭಾವನೆ. ಈಗ ನೀವೆಲ್ಲ ಒಮ್ಮೆ “ಶ್ರೀದೇವೀ ಭೂದೇವೀ ಸಹಿತ ತಿರುಪತಿ ಶ್ರೀನಿವಾಸ ಬರೆದ ಮೂರುನಾಮವ ಗೋವಿಂದಾ ……ಗೋವಿಂದ” ಎನ್ನಬೇಕು. ನಂತರ ಕತೆ ಆರಂಭಗೊಳ್ಳುತ್ತದೆ.

“ಅಂಬಾ” ಎನ್ನುವುದು ಮೂಕ ಪ್ರಾಣಿ ಗೋವು. ಸಕಲ ಜನೋಪಕಾರಿಯಾದ ಪ್ರಾಣಿ ಅದು…….ಸಕಲ ಜನೋಪಕಾರಿ. “ಅಮ್ಮಾ” ಎನ್ನಲು ಬಾರದ ಅದು ಬದಲಾಗಿ “ಅಂಬಾ” ಎನ್ನುತ್ತದೆ. ಅಮ್ಮ ಶಬ್ದ ಹುಟ್ಟಿದ್ದೆ ಅಂಬಾದಿಂದ ಎಂಬುದನ್ನು ಸಂಶೋಧಕರು ತಿಳಿಸಿದ್ದಾರೆ.

ಹಾಲು….ಮೊಸರು…..ಬೆಣ್ಣೆ…… ತುಪ್ಪ ಯಾರಿಗೆ ಬೇಡ?
..

ಎಲ್ಲರಿಗೂ ಬೇಕು.

ಇತ್ತ ಪಂಚಾಮೃತ…
.
.
.
.
ಅತ್ತ ಪಂಚಗವ್ಯ
.
.
.
.
ಎಲ್ಲದಕ್ಕೂ ಗೋವೇ ಆಧಾರ. ಅಂಬಾ ಬೇಕೇ ಬೇಕು.

ಗೋವು ಇಲ್ಲದಿದ್ದರೆ ಮನುಷ್ಯ ಜೀವನ ಸಾಗಲು ಸಾಧ್ಯವೇ ಇಲ್ಲ. ವಿದೇಶಗಳಲ್ಲೂ ಸಹ ಹಸುಗಳಿವೆ.

ನಮ್ಮ “ಆಂಬಾ ಕತೆ”ಯ ಕವಿಗಳು [ಇವರು ರಾಮಾಯಣದ ‘ವಾಲ್ಮೀಕಿಯ ಅಪರಾವತಾರ’ ಎಂದು ಹೆಸರು ಪಡೆದಿದ್ದಾರೆ] ಸುಂದರವಾದ ಹಾಡನ್ನು ಬರೆದಿದ್ದಾರೆ. ಈಗ ಆ ಹಾಡು ಕೇಳೋಣ……ಅಂಬಾ ನಿನ್ನ….

ಅಂಬಾ ನಿನ್ನ ಕಣ್ಣುಗಳಲ್ಲಿ ಭಾವ ನೂರು ಕೋಟಿ
ಅಂಬಾ ನಿನ್ನ ಅಂಗಗಳಲ್ಲಿ ದೇವ ಮೂರು ಕೋಟಿ

ಅಂಬಾ ನಿನ್ನ ಹಾಲನು ಕುಡಿದು ಬೆಳೆದಿಹ ಜನರೆಲ್ಲ
ತುಂಬಾ ಕಷ್ಟವು ಸಾಕುವುದೆಂದು ಬರಿದೆ ದೂರುವರಲ್ಲ
.
.
.
ಅಂಬಾ ನಮ್ಮ ಬಾವನ ಜೇಬಲಿ ಸಾವಿರಾರು ಕೋಟಿ
ತುಂಬಾ ನಮಿಪೆವು ಹೀಗೇ ನಡೆಯಲಿ ಗಡಿಗಳಾಚೆ ದಾಟಿ
ಬರಗಲು ಗಡಿಗಳಾಚೆ ದಾಟಿ
ಬರಗಲು ಗಡಿಗಳಾಚೆ ದಾಟಿ
ಬರಗಲು ಗಡಿಗಳಾಚೆ ದಾಟಿ

ಆಹಾ….ಒಂದೇ ಒಂದು ಇಂಪಾದ ಹಾಡು ಮನಸ್ಸಿಗೆ ಅದೆಷ್ಟು ಮುದನೀಡುವುದು. ನಮ್ಮ ಅಂಬಾ ಕತೆಯ ಕಲಾವಿದರು ಸಂಗೀತಗಾರರು ಬಹಳ ಚೆನ್ನಾಗಿ ಹಾಡನ್ನು ರೂಪಿಸಿಕೊಟ್ಟರು. [ಕತೆಯನ್ನು ನಿಜವಾಗಿ ಸುಂದರಗೊಳಿಸುವ] ಅವರ ಈ ಪ್ರಯತ್ನ ಶ್ಲಾಘನೀಯ.

ಇಂತಹ ಗೋವಿನ ಮಹತ್ವವನ್ನು ಪುನರುಜ್ಜೀವನಗೊಳಿಸುವ ಸಲುವಾಗಿ ತಮ್ಮ ಆಶ್ರಮದಲ್ಲಿ ಗೋಶಾಲೆಯನ್ನು ಆರಂಭಿಸಿದವರು ವರದಹಳ್ಳಿ ಶ್ರೀಧರ ಸ್ವಾಮಿಗಳು. ಅವರ ಯೋಜನೆ ಬಹಳ ಸದುದ್ದೇಶದಿಂದ ಕೂಡಿತ್ತು. ಆ ಕಾಲ ಬೇರೆ ಇತ್ತು ಬಿಡಿ.

ವರದ ಹಳ್ಳಿಯಲ್ಲಿ ಗೋಶಾಲೆ ಇತ್ತು ಮತ್ತು ಈಗಲೂ ಇದೆಯೆಂಬುದು ನಾವು ಸೀಟಿಗೆ ಬಂದ ಎರಡೇ ವರ್ಷಗಳಲ್ಲಿ ನಮ್ಮ ಬಾವಯ್ಯನಿಗೆ ನೆನಪಿಗೆ ಬಂತು. ಯಾವಾಗ ಗೋವಿನ ಮಹತ್ವ ಮಹಾ[ಕು]ಮಂತ್ರಿಯಾದ ನಮ್ಮ ಕುಲಪತಿ ಬಾವಯ್ಯನ ಕಣ್ಣಿಗೆ ಬಿತ್ತೋ ಆ ಕ್ಷಣವೇ ಆ ಕಾನ್ಸೆಪ್ಟನ್ನು ಬಾವಯ್ಯ [ದುರ್]ಉಪಯೋಗ ಮಾಡಿಕೊಳ್ಳುವ ಯೋಜನೆಗಳನ್ನು ರೂಪಿಸಿದ. ಅಂಬಾ ಹೆಸರಿನಲ್ಲಿ ಒಂದೆರಡಲ್ಲ ಹಲವು ಎತ್ತುವಳಿ ಯೋಜನೆಗಳು ಹುಟ್ಟಿಕೊಂಡವು.

ನಮ್ಮ ಜನ ಹೇಗೆಂದರೆ ಮನೆಯಲ್ಲಿ ಸಾಕಿದ ಗೋವುಗಳಿಗೆ ಹೊಟ್ಟೆಗೆ ಕಡಿಮೆ ನೀಡಿದರೂ ಹಾದಿಬೀದಿಯಲ್ಲಿ ಆಡಿಸಲು ತಂದ ಬಸವಣ್ಣನಿಗೆ ಅಕ್ಕಿ ತೊಳೆದು ಕೊಡುತ್ತಾರೆ. ಹಣ್ಣುಹಂಪಲು ಇದ್ದಿದ್ದನ್ನು ಕೊಟ್ಟು ಅರಿಶಿನ ಕುಂಕುಮ ಹಚ್ಚಿ ಕೈಮುಗಿಯುತ್ತಾರೆ. ಈ ಕಾನ್ಸೆಪ್ಟು ಜೊತೆಗೆ ಸೇರಿಕೊಂಡಿತು.

ಮಹಾ ಆಂದೋಲನವನ್ನು ಹಮ್ಮಿಕೊಂಡ ಮಹಾ[ಕು]ಮಂತ್ರಿ ಬಾವಯ್ಯನನ್ನು ನಮ್ಮ ವಿರುದ್ಧ ಮಾತನಾಡುವ ಹುಲುಮಾನವರು, “ರೌಡಿ ಮುಖದವನು ದಗಾಖೋರ ಮಹಾಲಂಪಟ ಶಕುನಿಮಾಮ” ಎಂದೆಲ್ಲ ಕರೆಯುತ್ತಾರಂತೆ. ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದೇ? ಉತ್ತರದಲ್ಲಿ ಬಾವಯ್ಯ ವ್ಯಾಸಪೀಠದಲ್ಲಿ ಪುಸ್ತಕವನ್ನಿಟ್ಟು ಪವಡಿಸಿದಾಗ ಮೂರು ನಾಮ ಹಾಕಿಸಿಕೊಂಡ ಅದೆಷ್ಟು ಜನ ಅವನಿಗೆ ಸನ್ಮಾನ ಮಾಡಿಲ್ಲ?

ಇಲ್ಲಿನ ಜನರಿಗೆ ಪರಿಚಯವಿರದ ಉತ್ತರದ ಗೋವುಗಳಲ್ಲಿ ಕೆಲವು ಶಾಂಪಲ್ಲುಗಳನ್ನು ಇಲ್ಲಿಗೆ ತರಿಸಿಕೊಂಡೆವು. ಗೋವುಗಳಿಗೆ ಖರ್ಚುಮಾಡುವುದರ ನಾಲ್ಕು ಪಟ್ಟು ಸಭೆ ಸಮಾರಂಭಗಳಿಗೆ ಪ್ಲೆಕ್ಸು ಬ್ಯಾನರು ಪಾಂಪ್ಲೆಟ್ಟುಗಳಿಗೆ ಖರ್ಚುಮಾಡಿದೆವು. ಗೋ ಸೇವೆಗೆ ಹರಿದುಬಂದ ಹಣವನ್ನು ನಮ್ಮ ಬಾವಯ್ಯ ನೋಡಿಕೊಳ್ಳತೊಡಗಿದ.

ಈಗ ನೀವೆಲ್ಲ ಇನ್ನೊಮ್ಮೆ “ಶ್ರೀದೇವೀ ಭೂದೇವೀ ಸಹಿತ ತಿರುಪತಿ ಶ್ರೀನಿವಾಸ ಬರೆದ ಮೂರುನಾಮವ ಗೋವಿಂದಾ ……ಗೋವಿಂದ” ಎನ್ನಬೇಕು. ಆಮೇಲೆ ಕತೆ ಮುಂದುವರಿಯುತ್ತದೆ.

ಮಾನವ ರೂಪದಲ್ಲಿ ಜನಿಸಿದ ನಮಗೆ ಅಪ್ಪ ಇರಲೇಬೇಕಾಯ್ತಲ್ಲ? ಇಲ್ಲವೆಂದರೆ ಈ ಹುಲುಮಾನವರು “ಅಪ್ಪಂಗೆ ಹುಟ್ಟಿದ ಮಗನಾದರೆ…” ಎಂದು ಸವಾಲು ಹಾಕಿಯಾರು. ಅಪ್ಪ ಎಲ್ಲರಿಗೂ ಇದ್ದೇ ಇರುತ್ತಾನೆ. ಅಪ್ಪನ ಸ್ಥಾನದಲ್ಲಿರುವವನೇ ಬಯಾಲಜಿಕಲ್ ಅಪ್ಪ ಹೌದೋ ಅಲ್ಲವೋ ಎಂಬುದು ಮುಖ್ಯ.

ನಮ್ಮ ಅಪ್ಪ ಬೇರೆಡೆಗೂ ಬಯಾಲಜಿಕಲಿ ಬಹಳ ಸ್ಟ್ರಾಂಗ್ ಇರುವುದನ್ನು ತೋರಿಸಿದ್ದಿದೆ. ನಮ್ಮ ಚಿಕ್ಕಪ್ಪನ ಕತೆಯನ್ನು ನೀವು ನಮ್ಮ ಬಾಯಿಂದಲೇ ಕೇಳಿದ್ದೀರಿ. ಹೀಂಗಾಗಿ ನಮ್ಮ ಅಪ್ಪ ನಮ್ಮ ನಿಜವಾದ ಅಂದರೆ ಬಯಾಲಾಜಿಕಲ್ ಅಪ್ಪನೇ ಹೌದು. ಅವತಾರದ ವಿಷಯದಲ್ಲಿ ಹೇಳುವುದಾದರೆ ನಮ್ಮ ಅಪ್ಪನಿಗೂ ನಾವು ಅಪ್ಪ ಮತ್ತು ನಿಮಗೆಲ್ಲರಿಗೂ ನಾವು ಅಪ್ಪ..ದೇವರೆಂದರೆ ಹಾಗೇ ಅಲ್ಲವೇ?

“ಅಂಬಾ ಕತೆ”ಯಲ್ಲಿ ತಾನೂ ಪಾಲ್ಗೊಂಡು ಉಂಬ [ಉಣ್ಣುವ] ಹಂಬಲದಲ್ಲಿದ್ದ ನಮ್ಮ ಅಪ್ಪಯ್ಯ ಅಂದರೆ ದೇವರ ಅಪ್ಪ ಸಹಕಾರಿ ಬ್ಯಾಂಕಿನಲ್ಲಿ ತನ್ನದೇ “ಆಂಬಾ ಕತೆ” ಮತ್ತು “ಅಂಬಾ ಖಾತೆ” ಎರಡನ್ನೂ ಆರಂಭಿಸಿದ.

25-30 ವರ್ಷಗಳ ಹಿಂದೆ ಊರಕಡೆಗೆ ಭೂ ಅಭಿವೃದ್ಧಿ ಬ್ಯಾಂಕು ಮತ್ತು ಇತರ ಕೆಲವು ಸಂಸ್ಥೆಗಳು ಎಮ್ಮ ಸಾಲ ಕುರಿಸಾಲ ಹೀಗೆ ಜಾನುವಾರು ಸಾಲವನ್ನು ಕೊಡುತ್ತಿದ್ದವು. ಯಜಮಾನ ಅವುಗಳ ಹೆಸರಲ್ಲಿ ಸಾಲ ಪಡೆದ ತಪ್ಪಿಗೆ ಪಾಪದ ಜಾನುವಾರುಗಳು ಕಿವಿಗೆ ಲೋಹದ ನಂಬರ್ ಪ್ಲೇಟ್ ಹಚ್ಚಿಸಿಕೊಳ್ಳುತ್ತಿದ್ದವು.

ಸಾಲ ತೀರುವವರೆಗೆ ಗುರುತಿಗಾಗಿ ನಂಬರ್ ಪ್ಲೇಟ್ ಹಾಗೇ ಇರಬೇಕಾಗುತಿತ್ತು. ಕಂತ್ರಿ ಜನ ಆ ನಂಬರ್ ಪ್ಲೇಟ್ ಕಿತ್ತಿಟ್ಟುಕೊಂಡು ಜಾನುವಾರುಗಳನ್ನು ಬೇರೆಯವರಿಗೆ ಮಾರಿಕೊಂಡು ಸಾಲ ಮರುಪಾವತಿಸದೆ ತಪ್ಪಿಸಿಕೊಳ್ಳುತ್ತಿದ್ದರು. ಕೇಳಿದರೆ ಜಾನುವಾರುಗಳು ಸತ್ತುಹೋದವು ಎನ್ನುತ್ತಿದ್ದರು.

ಜಾನುವಾರು ಸಾಲ ಕೊಡಿಸುವುದನ್ನೇ ಉಪಕಸುಬನ್ನಾಗಿ ಮಾಡಿಕೊಂಡ ಕೆಲವು ಮಧ್ಯವರ್ತಿಗಳು ಸಾಲ ಸಿಗುವ ವರೆಗೆ ಪರಿಶೀಲಕರು ಪರಿಶೀಲನೆಗೆ ಬರುವಾಗ ಜಾನುವಾರುಗಳನ್ನು ತೋರಿಸುವ ವ್ಯವಸ್ಥೆ ಮಾಡುತ್ತಿದ್ದರು. ಬಂದವರು ಜಾನುವಾರುಗಳ ಕಿವಿಗಳಿಗೆ ಪ್ಲೇಟ್ ಹಚ್ಚಿಹೋದರೆ ಮತ್ತೆಂದೂ ಬರುತ್ತಲೇ ಇರಲಿಲ್ಲ.

ಹೋದನವನು ದೂರ
ಮತ್ತಿನ್ನೀಚೆಗೆಂದೂ ಬಾರ

ಬಾಧೆಗಳಿಲ್ಲವು
ಹಾದಿಯು ಸುಗಮವು
ಭೇದಿಯಾಗಿ ಸತ್ತೋದವು ದನಗಳು

ಹೋದನವನು ದೂರ
ಮತ್ತಿನ್ನೀಚೆಗೆಂದೂ ಬಾರ

ಆದಿಯಲೊಡ್ಡಿದ
’ಲದ್ದಿ’ಯ ಪಡೆಯುತ
ಬೀದಿ ಮರೆತು ನಡೆದೂರಿಂದಾಚೆಗೆ

ಹೋದನವನು ದೂರ
ಮತ್ತಿನ್ನೀಚೆಗೆಂದೂ ಬಾರ

ಪರಿಶೀಲಕರು ಹೋದ ಬಳಿಕೆ ಅದದೇ ಜಾನುವಾರುಗಳು ನೇಮ್ ಪ್ಲೇಟ್ ಕಳೆದುಕೊಂಡು ಸಾಲ ಬೇಡಿಕೆಗೆ ಅರ್ಜಿ ಸಲ್ಲಿಸುವ ಇನ್ನೊಬ್ಬನ ಕೊಟ್ಟಿಗೆಗೆ ಹಾಜರಾಗುತ್ತಿದ್ದವು. ಮೊದಲು ಸಾಲ ಪಡೆದವ ಎರಡು-ಮೂರು ತಿಂಗಳು ಸುಮ್ಮನಿದ್ದು ನಂತರ ಜಾನುವಾರುಗಳು ಸತ್ತುಹೋದವು ಎನ್ನುತ್ತಿದ್ದ. ನಂತರ ಹಾಗೆ ಹೇಳುವುದು ಎರಡನೆಯವನ ಸರದಿ. ಎಲ್ಲವೂ ಅಡ್ಜೆಸ್ಟ್ ಮೆಂಟ್ ವ್ಯವಹಾರ.

ಜಾನುವಾರುಗಳ ಸಾಲಮೇಳಗಳನ್ನು ನಡೆಸಿದ ಬ್ಯಾಂಕುಗಳು ಯಾರಿಂದಲೂ ಅಸಲನ್ನು ಮರಳಿ ಪಡೆದಿದ್ದಾರೆ ಎನ್ನಲು ಸಾಧ್ಯವಿಲ್ಲ. ಕೊಟ್ಟವ ಕೋಡಂಗಿ ಇಸಗಂಡವ ಈರಭದ್ರ. ಈ ಕಾನ್ಸೆಪ್ಟ್ ತಿಳಿದುಕೊಂಡ ನಮ್ಮ ಅಪ್ಪ ಗೋವುಗಳ ಸಾಲಮೇಳವನ್ನು ಆರಂಭಿಸಿ ಬೇನಾಮಿ ಖಾತೆಗಳಿಗೆ ಸಾಲ ಕೊಡಿಸಿಯೇ ಕೊಡಿಸಿದ. ಹಲವು ಖಾತೆಗಳು ಅಪ್ಪನವೇ. ಅಪ್ಪನದಲ್ಲದ ಖಾತೆಗಳವರಿಂದ ಒಳ್ಳೇ ಕಮಿಶನ್ ಸಿಕ್ಕಿತು.

ಹೀಂಗಾಗಿ ಅಪ್ಪ ನಡೆಸಿದ “ಅಂಬಾ ಕತೆ” ನಮ್ಮ ಬೃಹತ್ ಅಂಬಾ ಕತಾ ಸಾಗರಕ್ಕೆ ಸಲ್ಲಿಸಿದ ’ಅಳಿಲು ಸೇವೆ.’ ಅದಕ್ಕೇ ಇಂದಿಗೂ ಊರಜನ ಅಪ್ಪನನ್ನು ನೆನೆಯುತ್ತಾರೆ. ಅಷ್ಟೇ ಅಲ್ಲ ಜುಗಾರೀ ಮೇಳಗಳಲ್ಲೂ ಅಪ್ಪನದು ಎತ್ತಿದ ಕೈ. ರೆಮ್ಮಿ ಆಟಕ್ಕೆ ಸಿಕ್ಕಾಪಟ್ಟೆ ಫೇಮಸ್ಸು. ಇಂದಿಗೂ ಸಹ ಅಪ್ಪ ಕಾರ್ಡ್ ಆಡುವುದನ್ನು ಚಾಲ್ತಿಯಲ್ಲಿಟ್ಟುಕೊಂಡಿರುವ ವ್ಯಕ್ತಿ.

ದೇವರ ಅಪ್ಪನೂ ಮಹಾಸಮರ್ಥ ಎಂಬುದನ್ನು ನೀವೀಗ ತಿಳಿದುಕೊಂಡಿದ್ದೀರಿ. ಇದೆಲ್ಲ ಗೊತ್ತಿರಬೇಕು ಯಾಕೆಂದ್ರೆ…ಯಾಕೆಂದ್ರೆ…..ಯಾಕೆಂದ್ರೆ ಇಂತಹ ಮಹಿಮಾನ್ವಿತನ ಮಗನಾಗಿ ಅವತರಿಸಿದವರು ನಾವು.

ಕತೆಯ ಅಂತಿಮ ಘಟ್ಟಕ್ಕೆ ಬಂದಿದ್ದೇವೆ ನಾವು. ಈಗ ಮತ್ತೊಮ್ಮೆ ನೀವೆಲ್ಲ “ಶ್ರೀದೇವೀ ಭೂದೇವೀ ಸಹಿತ ತಿರುಪತಿ ಶ್ರೀನಿವಾಸ ಬರೆದ ಮೂರುನಾಮವ ಗೋವಿಂದಾ ……ಗೋವಿಂದ” ಎನ್ನಬೇಕು. ನಂತರ ಬಿಚ್ಚುಡುಗೆ ನರ್ತನ. ಅಲ್ಲಿಗೆ ಕತೆ ಮುಗಿಯುತ್ತದೆ.”

Thumari Ramachandra

source: https://www.facebook.com/groups/1499395003680065/permalink/1601378850148346/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s