ಜನಮರುಳೋ ಜಾತ್ರೆ ಮರುಳೋ ಕಾಮಿಯ ಮೋಹನಾಂಗಿಯರು ಮರುಳೋ

ಜನಮರುಳೋ ಜಾತ್ರೆ ಮರುಳೋ ಕಾಮಿಯ ಮೋಹನಾಂಗಿಯರು ಮರುಳೋ

ಉತ್ತರ ಭಾರತದ ಗಂಗಾನದಿಯ ಸಮೀಪದ ಒಂದೂರಿನಲ್ಲಿ ಒಬ್ಬ ಸನ್ಯಾಸಿಯಿದ್ದನಂತೆ. ಅವನು ಬಹಳ ದೈವಭಕ್ತನೆಂದು ನೋಡಿದವರೆಲ್ಲ ನಂಬಿದ್ದರು.

ಒಂದಾನೊಂದು ದಿನ ಸದ್ಗೃಹಸ್ಥನೊಬ್ಬ ಸನ್ಯಾಸಿಯ ಬಳಿಗೆ ಬಂದು “ಸ್ವಾಮಿ, ನಾನು ಬಹಳ ಬಡವ. ಹೆಣ್ಣುಮಕ್ಕಳಿಗೆ ಮದುವೆ ಮಾಡಬೇಕೆಂದರೆ ಕೈಯಲ್ಲಿ ಕಾಸಿಲ್ಲ. ಏನು ಮಾಡಲಿ?” ಎಂದು ಕೇಳಿದ. ಸನ್ಯಾಸಿ ಸ್ವಲ್ಪ ಹೊತ್ತು ಯೋಚಿಸಿ “ನಾಳೆ ನಿಮ್ಮಲ್ಲಿಗೆ ಬಂದು ನೋಡಿ ಹೇಳುತ್ತೇನೆ” ಎಂದ.

ಮರುದಿನ ಆ ಬಡಮನುಷ್ಯನ ಮನೆಗೆ ಸನ್ಯಾಸಿಯ ಆಗಮನ ಆಗೇಬಿಟ್ಟಿತು. ಗೃಹಸ್ಥನ ಮನೆಯವರೆಲ್ಲ ಸೇರಿ ಬಂದ ಸನ್ಯಾಸಿಯ ಪಾದಪೂಜೆ ಮಾಡಿ ಹಣ್ಣುಹಂಪಲು ಸಿಹಿತಿಂಡಿಗಳನ್ನಿತ್ತು ಆದರಿಸಿದರು. ಬಡಮನುಷ್ಯನ ಇಬ್ಬರು ಹೆಣ್ಣುಮಕ್ಕಳು ಬಂದು ಸನ್ಯಾಸಿಯ ಕಾಲಿಗೆ ನಮಸ್ಕಾರ ಮಾಡಿದರು. ಪ್ರಾಯ ತುಂಬಿದ ಮೈಕಟ್ಟಿನ ಅಂದದ ಹೆಣ್ಣುಮಕ್ಕಳನ್ನು ನೋಡಿ ಸನ್ಯಾಸಿ ಮರುಳಾಗಿಬಿಟ್ಟ. ಹೇಗಾದರೂ ಅವರನ್ನು ವಶಪಡಿಸಿಕೊಳ್ಳಬೇಕೆಂಬ ಆಸೆಯಾಗಿ ಒಂದು ತಂತ್ರವನ್ನು ಯೋಚಿಸಿದ. ಗೃಹಸ್ಥನನ್ನು ಪಕ್ಕಕ್ಕೆ ಕರೆದು ಹೇಳಿದ,

“ಭಕ್ತನೇ ನಿನ್ನ ಮನೆಯಲ್ಲಿ ಪಿತೃದೋಷ ಬಹಳವಿದೆ. ನಾಳೆ ಬೆಳಗಿನ ಜಾವ ನಿನ್ನ ಎರಡೂ ಹೆಣ್ಣುಮಕ್ಕಳನ್ನು ಮರದ ಪೆಟ್ಟಿಗೆಯೊಂದರಲ್ಲಿ ಕೂರಿಸಿ ಗಂಗಾನದಿಯಲ್ಲಿ ತೇಲಿಬಿಡು. ಅವರಿಗೆ ಯೋಗ್ಯ ಗಂಡನೇ ಸಿಗ್ತಾನೆ. ನಿಮಗೆಲ್ಲ ಒಳ್ಳೆಯದೇ ಆಗ್ತದೆ. ಆ ಬಗ್ಗೆ ನೀನು ಯಾವ ಸಂಶಯವನ್ನೂ ಇಟ್ಟುಕೋಬೇಡ.”

ಅಷ್ಟು ಹೇಳಿದವನೇ ಗಡಬಡಿಸಿ ತನ್ನ ಆಶ್ರಮಕ್ಕೆ ಹೋಗಿ ಶಿಷ್ಯರನ್ನು ಕರೆದು, “ಶಿಷ್ಯರೇ ನಾಳೆ ಸಂಜೆಯ ಹೊತ್ತಿಗೆ ಗಂಗಾನದಿಯಲ್ಲಿ ಮರದಪೆಟ್ಟಿಗೆಯೊಂದು ತೇಲಿ ಬರ್ತದೆ. ಅದರಲ್ಲಿ ನನ್ನ ಸಿಧಿಕಾರ್ಯಕ್ಕೆ ಬೇಕಾದ ಹಲವು ಸಾಮಗ್ರಿಗಳಿವೆ. ನೀವು ಅದನ್ನು ಹಿಡಿದು ಬಾಗಿಲು ತೆರೆಯದೆ ತಂದು ನನ್ನ ಕೊಠಡಿಯಲ್ಲಿರಿಸಿ ಹೊರಗಿನಿಂದ ಬಾಗಿಲು ಅಗುಳಿ ಹಾಕಿಕೊಳ್ಳಿ. ರಾತ್ರಿಯಿಡೀ ಸಿದ್ಧಿಕಾರ್ಯ ನಡೆಸುವಾಗ ನನ್ನ ಕೊಠಡಿಯಲ್ಲಿ ಯಾರು ಎಷ್ಟೇ ಕೂಗಿದಂತೆ ಕೇಳಿದರೂ ಬಾಗಿಲು ತೆರೆಯಕೊಡದು. ಅದರಿಂದ ನಿಮ್ಮ ಜೀವಕ್ಕೆ ಅಪಾಯ ಬರಬಹುದು. ಬೆಳಿಗಾದ ನಂತರ ಬಾಗಿಲು ತೆರೆಯಿರಿ” ಎಂದ.

ಅತ್ತ ಆ ಗೃಹಸ್ಥ ಮನಸ್ಸಿನ್ನಲ್ಲದ ಮನಸ್ಸಿನಿಂದ ಹೆಣ್ಣುಮಕ್ಕಳನ್ನು ಪೆಟ್ಟಿಗೆಯಲ್ಲಿಸಿ ನದಿಯಲ್ಲಿ ತೇಲಿಬಿಟ್ಟ. ಆ ಪೆಟ್ಟಿಗೆ ತೇಲುತ್ತಾ ಹೋಯಿತು. ನದಿಯ ಪಕ್ಕದ ಕಾಡಿನಲ್ಲಿ ಬೇಟೆಯಾಡುತ್ತಿದ್ದ ರಾಜಕುಮಾರನೊಬ್ಬ ಅದನ್ನು ನೋಡಿದ. ತನ್ನ ಸೇವಕರ ಸಹಾಯದಿಂದ ಪೆಟ್ಟಿಗೆಯನ್ನು ದಡಕ್ಕೆ ತಂದ. ಬಾಗಿಲು ತೆರೆದು ನೋಡಲಾಗಿ ಅತ್ಯಂತ ರೂಪವತಿಯರಾದ ಇಬ್ಬರು ಹುಡುಗಿಯರು ಅದರೊಳಗಿದ್ದರು. ಮಂತ್ರಿಯನ್ನು ಕರೆದು ಅವರ ಬಗ್ಗೆ ಚರ್ಚಿಸಿ ಈರ್ವರನ್ನೂ ರಾಜಕುಮಾರ ಪ್ರೇಮಿಸಿ ಮದುವೆಯಾದ.

ಆ ಕನ್ನಿಕೆಯರು ನಡೆದ ಸಂಗತಿಯನ್ನು ಹೇಳಿದರು. ಇದನ್ನು ಕೇಳಿದ ರಾಜಕುಮಾರನಿಗೆ ಸನ್ಯಾಸಿಯ ಮೇಲೆ ತುಂಬಾ ಕೋಪ ಬಂತು. ಆ ಕಳ್ಳಸನ್ಯಾಸಿಗೆ ತಕ್ಕ ಬುದ್ಧಿ ಕಲಿಸಬೇಕೆಂದು ಯೋಚಿಸಿ ತನ್ನ ಎರಡು ಬೇಟೆ ನಾಯಿಗಳನ್ನು ಪೆಟ್ಟಿಗೆಯಲ್ಲಿರಿಸಿ ಮತ್ತೆ ನದಿಯಲ್ಲಿ ತೇಲಿಬಿಟ್ಟ.

ಗಂಗಾನದಿಯ ಕೆಳಭಾಗದೆಡೆಗೆ ಪೆಟ್ಟಿಗೆ ನಿರೀಕ್ಷೆಯಲ್ಲಿ ಕಾಯುತ್ತಿದ್ದ ಸನ್ಯಾಸಿಯ ಶಿಷ್ಯ ವೃಂದ ಆ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗಿ ಸನ್ಯಾಸಿಯ ಆದೇಶದಂತೆ ಅವನ ಕೊಠಡಿಯಲ್ಲಿಟ್ಟು ಹೊರಗಿನಿಂದ ಬಾಗಿಲಿಗೆ ಬೀಗ ಜಡಿಯಿತು. ನಂತರ ಹೊರಗಡೆ “ಹರೇ ರಾಮ ಹರೇ ರಾಮ” ಪ್ರಾರ್ಥನೆಗೆ ಆರಂಭಿಸಿತು.

ಹೆಣ್ಣುಮಕ್ಕಳನ್ನು ಭೋಗಿಸುವ ಆಸೆಯಿಂದ ಸನ್ಯಾಸಿ ಪೆಟ್ಟಿಗೆಯ ಬಾಗಿಲನ್ನು ಮೆಲ್ಲನೆ ತೆರೆದ. ಒಳಗಿದ್ದ ಬಲಿಷ್ಠ ಬೇಟೆ ನಾಯಿಗಳು ಛಂಗನೆ ಅವನ ಮೇಲೆರಗಿದವು. ಒಮ್ಮೆ ಒಂದು ನಾಯಿ ಅವನ ಮುಖವನ್ನೇ ಕಚ್ಚಿತು. ಇನ್ನೊಂದು ಕಿವಿಯನ್ನು ಹರಿದೆಳೆಯಿತು. ಮತ್ತೊಮ್ಮೆ ಒಂದು ನಾಯಿ ಕಾಲಿಗೆ ಬಾಯಿ ಹಾಕಿದರೆ ಇನ್ನೊಂದು ಕೈಬೆರಳನ್ನು ಕಚ್ಚಿ ತುಂಡರಿಸಿತು.

“ಅಯ್ಯಯ್ಯೋ ಬಾಗಿಲು ತೆಗೀರಿ ಸಾಕಪ್ಪಾ ಸಾಕು ಬಾಗಿಲು ಅಯ್ಯೋ ಬಾಗಿಲು ಅಯ್ಯೋ ಬಾಗಿಲು” ಎಂದು ಸನ್ಯಾಸಿ ಬೊಬ್ಬೆ ಹಾಕುತ್ತಲೇ ಇದ್ದ.

ಹೊರಗೆ ಹಳದೀ ಶಾಲಿನ ಶಿಷ್ಯರು ತಮ್ಮ ಗುರುವಿಗೆ ಸಿದ್ಧಿಗಳು ಪ್ರಾಪ್ತವಾಗುತ್ತಿವೆ ಎಂದುಕೊಂಡು ಜೋರಾಗಿ ತಾಳ ಶಂಖ ಜಾಗಟೆಗಳನ್ನು ಬಾರಿಸುತ್ತ “ಹರೇ ರಾಮ ಹರೇರಾಮ” ಎಂದು ಕೂಗುತ್ತಲೇ ಇದ್ದರು. ಪ್ರತೀ ಸಲವೂ ಸನ್ಯಾಸಿ ಕಿರುಚಿಕೊಂಡಾಗ “ಹರೇ ರಾಮ ಹರೇರಾಮ” ಎಂದು ತಾರಕ ಸ್ವರದಲ್ಲಿ ಪ್ರಾರ್ಥನೆ ಮಾಡಿದರು.

ಅಂತೂ ಬೆಳಗಾಗಿಬಿಟ್ಟಿತು. ಪ್ರಾರ್ಥನೆಮಾಡಿ ಜಾಗರಣೆಯಿಂದ ದಣಿದ ಶಿಷ್ಯರು ಮುಖಮಾರ್ಜನೆ ಮಾಡಿಕೊಂಡು ಸನ್ಯಾಸಿಯ ಕೊಠಡಿಯ ಹೊರಗೆ ನಿಂತು “ನಾವಿದ್ದೇವೆ ನಾವಿದ್ದೇವೆ ಗುರುಗಳ ಜೊತೆಗೆ ನಾವಿದ್ದೇಬೆ” ಎನ್ನುತ್ತ ಬಾಗಿಲು ತೆರೆದರು.

ನೋಡುತ್ತಾರೆ, ರಾತ್ರಿಯಿಡೀ ಸನ್ಯಾಸಿಯನ್ನು ಕೊಠಡಿಯೊಳಗೆ ಅಟ್ಟಾಡಿಸಿದ ನಾಯಿಗಳು ಬೆಳಗಾಗುವುದರೊಳಗೆ ಅವನನ್ನು ಸಾಯಿಸಿ ಶರೀರವನ್ನು ತುಂಡುತುಂಡು ಮಾಡಿಬಿಟ್ಟಿದ್ದವು. ಭೀಕರ ದೃಷ್ಯ ಶಿಷ್ಯರು ಕನಸಿನಲ್ಲೂ ಎಣಿಸಿರಲಿಲ್ಲ. ಯಾಕೆ ಹೀಗಾಯ್ತೆಂಬುದು ಅವರಿಗೆ ತಿಳಿಯಲಿಲ್ಲ. ಸಿದ್ಧಿಗಳನ್ನು ಪಡೆದುಕೊಳ್ಳುವ ಹೊತ್ತಿನಲ್ಲಿ ಏನೋ ಎಡವಟ್ಟಾಗಿ ಹೀಗೆ ಬಲಿಯಾಗಿರಬೇಕೆಂದು ಭಾವಿಸಿದರು.

ಇಲ್ಲಿಗೆ ಭಾರತದಾದ್ಯಂತ ಹಿಂದಿನಿಂದ ಇಂದಿನವರೆಗೆ ಪ್ರಚಲಿತದಲ್ಲಿರುವ ಈ ಕತೆ ಮುಗಿಯಿತು. ಇದನ್ನು ಯಾರಿಗೋ ಹೋಲಿಸಿಕೊಂಡರೆ ಅದಕ್ಕೆ ತುಮರಿ ರಾಮಚಂದ್ರ ಜವಾಬ್ದಾರನಲ್ಲ.

ಈಗ ಕವಳದ ಗೋಪಣ್ಣ ಹೇಳಿದ ಸಿಗಂದೂರು ಮಹಾತ್ಮೆ ಕೇಳಿ.

ಈಗಿನ ಸಿಗಂದೂರಿನಲ್ಲಿರುವ ಚೌಡಿಗೂ ಹಿಂದೆ ಗದ್ದೆ ಹಾಳಿಯ ಪಕ್ಕದಲ್ಲಿದ್ದ ಚೌಡಿ ಕಲ್ಲಿಗೂ ಯಾವುದೇ ಸಂಬಂಧವೂ ಇಲ್ಲ. ಲಿಂಗನಮಕ್ಕಿ ಜಲಾಶಯದಲ್ಲಿ ಊರು ಮುಳುಗಿದಾಗ ಜನ ಬೇರ್‍ಎ ಬೇರೆ ಕಡೆಗೆ ವಲಸೆ ಹೋದರು. ಮುಳುಗಡೆಯಿಂದೀಚೆಗೆ ಉಳಿದುಕೊಂಡ ನಡುಗಡ್ಡೆಯಲ್ಲಿ ಹಲವು ಊರುಗಳಿವೆ. ಅಲ್ಲಿ ಸಿಗಂದೂರು ಸಹ ಒಂದು.

ಗದ್ದೆಯ ಪಕ್ಕದಲ್ಲಿದ್ದ ಕಲ್ಲನ್ನು ರಾಮಪ್ಪನವರ ಹಿಂದಿನವರು ಪೂಜಿಸುತ್ತಿರಬಹುದು ಗೊತ್ತಿಲ್ಲ. ಈಗ ಸುಮಾರು ಹದಿನೈದಿಪ್ಪತ್ತು ವರ್ಷಗಳ ಹಿಂದೆ ಒಂದಿಬ್ಬರು ಸೇರಿ ಚೌಡಿಯನ್ನು ಹೊಸದಾಗಿ ನಿರ್ಮಿಸುವ ಕೆಲಸ ಮಾಡಿದರು.

ಬಡತನ ಇದ್ದಿದ್ದರಿಂದ ಹಳ್ಳಿಗಳಲ್ಲಿ ಕಳವು ಬಹಳ ಇತ್ತು. ಇದನ್ನು ಗುರುತಿಸಿದ ಅವರು ಸಿಗಂದೂರು ದೇವಿಗೆ ಹರಕೆ ಹೊತ್ತುಕೊಂಡರೆ ಕಳುವು ಆಗುವುದಿಲ್ಲ ಎಂದರು. ಅವಳು ಕಾಯುತ್ತಿರುತ್ತಾಳೆ. ಕದ್ದವರು ರಕ್ತ ಕಾರಿ ಪ್ರಾಣಬಿಡುವಂತೆ ಮಾಡುತ್ತಾಳೆ ಎಂದು ಹೇಳಿದರು. ಜನ ನಂಬಿದರು.

ಮಲೆನಾಡಿನಾದ್ಯಂತ ಈ ಸುದ್ದಿ ಹಬ್ಬಿ ಅಲ್ಲಿಂದಾಚೆಗೂ ಹಬ್ಬತೊಡಗಿತು. ಜನ ತಮ್ಮ ಜಮೀನಿನಲ್ಲೂ ಕಳ್ಳತನವಾಗದಂತೆ ಸಿಗಂದೂರಿಗೆ ಹರಕೆ ಹೊತ್ತರು. ಸಿಗಂದೂರಿನ ವಿಷಯ ಬಾಯಿಂದ ಬಾಯಿಗೆ ಹಬ್ಬಿ ಭಕ್ತರು ಹೆಚ್ಹಾದರು. ದೇವಿ ಹಾಗೆ ಮಾಡುತ್ತಾಳೆ ಹೆಗೆ ಮಾಡಿಬಿಡುತ್ತಾಳೆ ಎಂಬ ಭಯವೇ ಕಳ್ಳತನವನ್ನು ನಿವಾರಿಸಿತು.

ಯಾವುದೋ ಊರಿನಿಂದ ಯಾರನ್ನೋ ಕರೆತಂದ ವಾಹನ ಚಾಲಕರಿಗೂ ಈ ದೇವಸ್ಥಾನದ ಪರಿಚಯವಾಯಿತು. ’ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಚಾಲಕನೊಬ್ಬ ಅರಿತರೆ ಅಷ್ಟೂ ಚಾಲಕರು ಅರಿತಂತೆ’ ಎಂಬ ಹೊಸಗಾದೆ ಮಾಡಬಹುದು. ಆ ಚಾಲಕ ಹೋಗಿ ಹೋಳಿದ್ದೇ ಸೈ ರಾಜ್ಯದಲ್ಲಿ ಎಲ್ಲೆಲ್ಲಿಗೋ ಸುದ್ದಿ ಹಬ್ಬಿತು.

ಅಷ್ಟರಲ್ಲಿ ಚೌಡಿಯನ್ನು ಪೂಜಿಸುತ್ತಿದ್ದ ಮನೆತನದವರು ಮತ್ತು ಅದಕ್ಕೆ ಹೊಸದಾಗಿ ಮಂತ್ರಗಳ ಮೂಲಕ ಪೂಜಿಸಲು ಸೇರಿಕೊಂಡವರೂ ಸೇರಿ ಹಲವಾರು ತರದ ಸ್ಟಿಕ್ಕರು ಫೋಟೊಗಳನ್ನು ತಯಾರಿಸಿ ಮಾರಿದರು. ವಾಹನ ಚಾಲಕರು “ಈ ವಾಹನಕ್ಕೆ ಸಿಗಂದೂರು ದೇವಿಯ ಕಾವಲಿದೆ” ಎಂಬ ಸ್ಟಿಕ್ಕರು ಅಂಟಿಸಿಕೊಂಡರು.

ಶರಾವತಿಯ ಜಲಾಶಯದ ವಿಹಂಗಮ ನೋಟ ಮತ್ತು ನಿತ್ಯ ಹರಿದ್ವರ್ಣದ ಪಶ್ಚಿಮ ಘಟ್ಟದ ಕಾಡುಗಳ ರಮ್ಯ ದೃಶ್ಯಾವಳಿಗಳ ಸುದ್ದಿ ಬಾಯಿಂದ ಬಾಯಿಗೆ ಹಬ್ಬಿ ಮಕ್ಕಳಿಗೆ ರಜವಿರುವಾಗ ಪ್ರವಾಸಕ್ಕೆ ಬರುವವರು ಹೆಚ್ಚಿದರು.

ಹೀಗೆ ಶುರುವಾದ ಜನಜಾತ್ರೆಗೆ ತುಂಡೇ ಇಲ್ಲ. ಒಟ್ನಲ್ಲಿ ಅವರವರ ಭಾವಕ್ಕೆ ಅವರವರ ಭಕ್ತಿಗೆ ತಕ್ಕಂತೆ ದೇವರು ಫಲ ಕೊಡುತ್ತಾನೆಂಬುದು ಗೊತ್ತಾಗುತ್ತದೆ. ಅದು ಸಿಗಂದೂರಾದರೂ ಇರಬಹುದು ಬೇರೆ ಯಾವುದಾದರೂ ಆಗಬಹುದು.

ಚೌಡಿಗೆ ಸಾಮಾನ್ಯವಾಗಿ ಕುರಿ ಕೋಳಿಗಳ ಬಲಿ ಕೊಡುವುದಿಲ್ಲ. ಅದು ದೇವಿಯ ಅತಿಕ್ಷುದ್ರ ರೂಪಗಳಿಗೆ ಸಲ್ಲುತ್ತದೆ. ಆದರೆ ಇಲ್ಲಿ ಕುರಿ ಕೊಳಿಯನ್ನೂ ಬಲಿಕೊಡುವುದರಿಂದ ಇದು ಚೌಡಿಯೇ ಅಥವಾ ಯಾವುದೋ ಕ್ಷುದ್ರ ದೇವತೆಯೇ ಎಂಬುದು ಗೊತ್ತಾಗುವುದಿಲ್ಲ. ಈಗಲೂ ಬಿರುಬೇಸಗೆಯಲ್ಲಿ ನೀರು ಕಡಿಮೆಯಾದಾಗ ಗದ್ದೆ ಹಾಳಿಯ ಪಕ್ಕದ ಚೌಡಿ ಕಲ್ಲು ಹಾಗೇ ಇರುವುದು ಕಾಣಿಸುತ್ತದೆ. ಮೂಲ ಅಲ್ಲಿದೆ ಕಾಸು ಇಲ್ಲಿದೆ.

Thumari Ramachandra

source: https://www.facebook.com/groups/1499395003680065/permalink/1600385950247636/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s