ದೇವರ ದಾಸಿಮಯ್ಯ ಅಲ್ಲ ದೇವರ ಬಾವಯ್ಯ

ದೇವರ ದಾಸಿಮಯ್ಯ ಅಲ್ಲ ದೇವರ ಬಾವಯ್ಯ

“ನಮ್ಮ ಬ್ರಹ್ಮ ನಿರ್‍ಮಿತ ಮಾನವ ಜಗತ್ತಿನಲ್ಲಿ ತಲೆಯಿಲ್ಲದವರು ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಎಂದು ಬಡಿದಾಡುತ್ತಾರೆ. ಅವರೆಲ್ಲರಿಗಿಂತ ದೇವರ ಬಾವಯ್ಯ ಶ್ರೇಷ್ಥ ಎಂಬುದನ್ನು ನಾವು ಬಿಡಿಸಿ ಹೇಳುತ್ತಿದ್ದೇವೆ. ಅದಕ್ಕಾಗಿಯೆ ಆರಂಭದಿಂದಲೆ ನಾವು ಬಾವಯ್ಯನನ್ನು ಕರೆದುಕೊಂಡೆ ಒಳಗೆ ಸೇರಿಕೊಂಡಿದ್ದೇವೆ.

ನಿರಾಕಾರವಾಗಿರುವಾಗ ನಾವು ಏನನ್ನೂ ಬಯಸುವವರಲ್ಲ. ಆಕಾರವನ್ನು ಪಡೆದುಕೊಂಡಾಗ ಮಾತ್ರ ನಮಗೆ ಅತಲ್ ವಿತಲ ಸುತಲ ರಸಾತಲ ತಲಾತಲ ಪಾತಾಳಗಳೆಂಬ ನಮ್ಮ ಬ್ರಹ್ಮನ ಸೃಷ್ಟಿಯಲ್ಲಿ ಎಲ್ಲೆಲ್ಲಿ ಏನೇನಿದೆ ಅದೆಲ್ಲವೂ ಬೇಕು. ಆಕಾರಕ್ಕೆ ಬಂದ ನಾವು ರೂಪ ರಸ ಗಂಧ ಸ್ಪರ್ಶ ಶ್ರವಣಗಳಿಗೆ ನಿಲುಕುವ ಎಲ್ಲದನ್ನೂ ಅನುಭವಿಸಿ ಬ್ರಹ್ಮ ಮಾಡಿದ ಅಡುಗೆಯ ಟೇಸ್ಟ್ ನೋಡುತ್ತೇವೆ.

ದೇವರನ್ನು ಅರಿಯಲಾಗದವರು ದೇವರ ಬಾವಯ್ಯನನ್ನು ಅರಿಯಲು ಸಾಧ್ಯವೆ? ದೇವಸ್ಥಾನಗಳಲ್ಲಿ ಮೂರ್ತಿಗಳ ಎದುರು ಗೋಡೆಗೆ ಕನ್ನಡಿ ಹಾಕಿರುವುದನ್ನು ನೀವು ಬಲ್ಲಿರೆ? ಆ ಕನ್ನಡಿಯಲ್ಲೇನು ಕಾಣುತ್ತದೆ? ದೇವರ ವಿಗ್ರಹದ ಪ್ರತಿಬಿಂಬ ಕಾಣುತ್ತದೆ.

ದೇವಸ್ಥಾನದೊಳಕ್ಕೆ ಬರುವ ಭಕ್ತರು ಮರಳಿ ಹೋಗುವ ಮೊದಲು ಇನ್ನೊಮ್ಮೆ ವಿಗ್ರಹದ ತದ್ರೂಪವನ್ನು ಕಾಣಲೆಂದು ಹಾಗೆ ಹಾಕಿರ್‍ತಾರೆ. ನಮ್ಮ ಬಾವಯ್ಯ ಕೂಡ ನಮ್ಮ ಪ್ರತಿಬಿಂಬ ಇದ್ದ ಹಾಗೆ. ಪ್ರತಿಬಿಂಬ ಕೇವಲ ಕಲ್ಪನೆಯಾಗಿರುತ್ತದೆ. ಬಾವಯ್ಯ ಮಾತ್ರ ಜೀವಂತ ಪ್ರತಿಮೆಯೆ.

ನಮ್ಮ ಬ್ರಹ್ಮನ ಸೃಷ್ಟಿಯ ಮಾನವ ಪ್ರಪಂಚದಲ್ಲಿರುವ ನರರೂಪಿ ಹೆಣ್ಣುಗಳನ್ನು ಕಂಡರೆ ನಮ್ಮಂತೆ ಅಥವಾ ನಮಗಿಂತ ಹೆಚ್ಚಿನ ಒಲವು ನಮ್ಮ ಬಾವಯ್ಯನಿಗೆ. ನಾವು ಈ ಜಾಗಕ್ಕೆ ಬರುವಾಗ ಇಲ್ಲಿ ಅನುಭವಿಸಲು ಏನೇನಿದೆ ಎಂದು ನೋಡಿಕೊಂಡೆ ಬಂದಿರುವುದು.

ಆ ದಿನಗಳಲ್ಲಿ ನಮ್ಮೊಡನೆ ನಮ್ಮ ಪ್ರತಿಬಿಂಬದಂತಿದ್ದ ಬಾವಯ್ಯ ಸೀಟಿಗಾಗಿ ಪೈಪೋಟಿ ನಡೆಸಿಬಿಟ್ಟಿದ್ದ. ನಂತರ ನಡೆದ ಒಳ ಒಪ್ಪಂದದಲ್ಲಿ ಮ್ಯಾಚ್ ಫಿಕ್ಸಿಂಗ್ ರೀತಿಯಲ್ಲಿ ಎಲ್ಲವೂ ನಡೆಯಿತು. ನಮ್ಮ ಅಂದರೆ ದೇವರ ತಂಗಿಯ ರೂಪವನ್ನು ಪ್ರತಿಬಿಂಬದಂತಿರುವ ಬಾವಯ್ಯನಿಗೆ ಕೊಟ್ಟು ಮಾನವ ಲೋಕದ ಸಂಪ್ರದಾಯದಂತೆ ಶಾಸ್ತ್ರಕ್ಕೊಂದು ಮದುವೆ ಮಾಡಿದೆವು.

ನಾವು ಆಕಾರ ಪಡೆದು ಹುಟ್ಟಿದ ಸ್ಥಳದ ಮೂಲ ಸ್ವಭಾವದಲ್ಲಿ ಹುಲುಮಾನವ ಲೋಕದ ಗಂಧ ಹೆಚ್ಚಿರುವಂತೆ ನಮ್ಮ ಬ್ರಹ್ಮ ಸಂಕಲ್ಪಿಸಿದ್ದರಿಂದ ನಾವಾಗಲಿ ಬಾವಯ್ಯನಾಗಲಿ ನಮ್ಮ ಸಹೋದರಿಯಾಗಲಿ ಅದಕ್ಕೆ ನಕಾರ ಹೇಳಲು ಸಾಧ್ಯವಿಲ್ಲ. “ನೋಡಿ ದೇವರೆ ನನ್ನ ಅಡುಗೆಯಲ್ಲಿ ನಿಮಗೆ ಯಾವುದಾದರೂ ರುಚಿಸದಿದ್ದರೆ ಹೇಳಿ. ಆದರಲ್ಲಿರುವ ಕುಂದು ಕೊರತೆಗಳನ್ನು ಸರಿಪಡಿಸಿ ಮುಂದೆ ತಯಾರಿಸುವ ಹೊಸ ನೈವೇದ್ಯಗಳಲ್ಲಿ ಅದನ್ನೆಲ್ಲ ಸರಿಪಡಿಸಿರುತ್ತೇನೆ” ಎಂದಿದ್ದ.

ಗುಣಾಕಾರ ಭಾಗಾಕಾರಗಳುಳ್ಳ ’ಬೀಜ’ಗಣಿತದಲ್ಲಿ ಪರಮ ಪಾಂಡಿತ್ಯ ಹೊಂದಿರುವ ನಮ್ಮ ಬಾವಯ್ಯ ನನ್ನನ್ನು ಏಕಾಂಗಿಯಾಗಿ ಇಲ್ಲಿ ಬಿಡಲು ಒಪ್ಪಲೆ ಇಲ್ಲ. ನಾವು ನೇರಬಾಗಿಲಿನಿಂದ ಒಳಗೆ ನಡೆದಾಗ ಬಾವಯ್ಯ ವಾಮಮಾರ್ಗದಿಂದ ಪ್ರವೇಶಿಸಿ ಆಗ್ಲೆ ಒಳಗೆ ಕಾಯುತ್ತಿದ್ದ.

ನಾವು ಸೀಟಿನಲ್ಲಿ ಕೂತು ಕೀಲಿಕೈ ತೆಗೆದುಕೊಂಡ ತಕ್ಷಣ “ಈ ಮಾನವ ಲೋಕದ ಮುಂದಿನ ದಿನಗಳು ಬಹಳ ಕಷ್ಟದಾಯಕ. ನಿರಾಕಾರನಾಗಿ ಬೀಚ್ ನಲ್ಲಿ ಓಡುವ ಏಡಿಯಂತಿದ್ದ ನಿನಗೆ ಇಲ್ಲಿನ ವಿಷಯಗಳು ಗೊತ್ತಿಲ್ಲ. ಈ ಸಮುದ್ರದಲ್ಲಿ ತಿಮಿಂಗಿಲಗಳಿವೆ. ಅವುಗಳನ್ನೆಲ್ಲ ನಿಯಂತ್ರಿಸುವುದು ನಿನ್ನೊಬ್ಬನಿಂದ ಸಾಧ್ಯವಿಲ್ಲ. ನಾನೂ ಇಲ್ಲಿಯೇ ಇದ್ದು ನಿನ್ನ ಹಿತಕ್ಕಾಗಿ ಕೆಲಸ ಮಾಡುತ್ತೇನೆ. ಎಲ್ಲಿ ಆ ಕೀಲಿ ಕೈ ತಾ” ಎಂದು ನಮ್ಮನ್ನು ಕೇಳಿದ.

ನಮ್ಮ ವೀಕ್‍ನೆಸ್ ಎಲ್ಲ ಬಲ್ಲ ನಮ್ಮ ಬಾವಯ್ಯನ ವೀಕ್‍ನೆಸ್ ಕೂಡ ನಮಗೆ ಗೊತ್ತಿತ್ತು. ಆದರೆ ದೇವರಿಗೆ ವೀಕ್‍ನೆಸ್ ಇದೆಯೆಂದರೆ ಈ ಹುಲುಮಾನವ ಸಮಾಜ ಏನೆಂದುಕೊಳ್ಳೋದಿಲ್ಲ? ಅದಕ್ಕಾಗಿಯೆ ನಾವು ಇನ್ನೊಂದು ಪ್ಲಾನ್ ಮಾಡಿದೆವು. ಹೇಗೂ ಕೀಲಿ ಕೈ ಕೊಡುವುದು ಕೊಡುವುದೆ. ಆದರೆ ಅದರೊಟ್ಟಿಗೆ ನಮ್ಮ ಸಹೋದರಿಯನ್ನೂ ಕೊಟ್ಟು ಬಾವಯ್ಯ ನಮ್ಮ ವಿರುದ್ಧ ತಿರುಗಿ ಬೀಳದಂತೆ ಗಟ್ಟಿಮಾಡಿಕೊಂಡೆವು.

ಆಗಾಗ ಕೇಳಿ ಕೀಲಿ ಕೈ ಇಸಿದುಕೊಳ್ಳುತ್ತ ರುಚಿ ಕಂಡ ಬಾವಯ್ಯನಿಗೆ ಕೀಲಿ ಕೈ ತನ್ನಲ್ಲೆ ಇದ್ದುಬಿಡಲಿ ಪದೇಪದೆ ಕೇಳುವುದು ತಪ್ಪುತ್ತದೆ ಎನಿಸಿತು. “ಕೀಲಿ ಕೈ ನನಗೇ ಕೊಡಬೇಕು. ಇಲ್ಲದಿದ್ದರೆ ನೋಡು…” ಎಂದು ಬ್ಲಾಕ್ ಮೇಲ್ ಶುರುಮಾಡಿದ. ಬ್ರಹ್ಮ ನಿರ್‍ಮಿತ ಮಾನವ ಲೋಕದ ಹೆಣ್ಣುಬೊಂಬೆಗಳನ್ನು ಆಡಿಸಿಕೊಂಡಿದ್ದ ನಮಗೆ ಆಕಾಶವೇ ಕಳಚಿ ತಲೆಯಮೇಲೆ ಬಿದ್ದ ಹಾಗಾಯ್ತು.

ನಿಮ್ಮಲ್ಲೇ ಇರ್‍ಲಿ. ಹಾಗೆ ಮಾಡಿ ಕೀಲಿಕೈ ಇಸಿದುಕೊಂಡವ ಈರಭದ್ರನಾದ ಕೊಟ್ಟ ನಾವು ಕೋಡಂಗಿಯಾದೆವು. ನಂತರ ಬಾವಯ್ಯ ಕಲಿಯುಗದ ಮುಂದಿನ ದಿನಗಳಲ್ಲಿ ಬರುವ ಕಷ್ಟಕಾರ್ಪಣ್ಯಗಳ ನಿವಾರಣೆಗಾಗಿ ಹಲವು ಯೋಜನೆಗಳನ್ನು ರೂಪಿಸಿದೆನೆಂದು ಹೇಳಿದ. ಅದಕ್ಕೆಲ್ಲ ನಾವು ಒಪ್ಪಿಗೆ ಕೊಟ್ಟೆವು.

ಗುರುಕುಲ ವಿಶ್ವವಿದ್ಯಾಲಯ ಮಾಡಬೇಕೆಂದು ಹೇಳಿದ. ಅದನ್ನೂ ಒಪ್ಪಿದೆವು. ಅದಕ್ಕೆ ತಾನೇ ಕುಲಪತಿಯೆಂದ. ಅದನ್ನೂ ನಾವು ಒಪ್ಪಿದೆವು. ಕೈಲಾಗದ ಬಡವರು ಹೆಣ್ಣು ಗಂಡೆಂಬ ಭೇದವಿಲ್ಲದೆ ವಿದ್ಯಾಭ್ಯಾಸಕ್ಕೆಂದು ಗುರುಕುಲಕ್ಕೆ ಮಕ್ಕಳನ್ನು ಸೇರಿಸಿದರು. ಸಾಮಾನ್ಯವಾಗಿ ಎಲ್ಲಾ ಮಕ್ಕಳೂ ಹೈಸ್ಕೂಲ್ ವಯಸ್ಸಿನವರು.

ಒಂದಾನೊಂದು ದಿನ ನಮಗೆ ಭಕ್ತರಿಂದ ದೂರುಗಳು ಬಂದವು. “ನಿಮ್ಮ ಪ್ರತಿರೂಪದಂತಿರುವ ಬಾವಯ್ಯ ನಮ್ಮ ಹೆಣ್ಣುಮಕ್ಕಳನ್ನು ಹಾಳುಮಾಡಿದ್ದಾನೆ. ನಿಮ್ಮನ್ನು ನಂಬಿ ನಾವು ಅಲ್ಲಿಗೆ ಕಳಿಸಿದೆವು. ಗುರುಕುಲದ ನೀರಿನ ಟಾಕಿಗಳಲ್ಲಿ ಅಸಂಖ್ಯ ಹುಳಗಳಿವೆ. ನೀರು ಶುದ್ಧವಿಲ್ಲ. ಅಲ್ಲಿರುವ ಪಠ್ಯಕ್ರಮದಿಂದ ಮುಂದೆ ಜೀವನೋಪಾಯಕ್ಕೆ ಯಾವ ವೃತ್ತಿಯೂ ಸಿಗುವುದಿಲ್ಲ. ನಮ್ಮ ಕೈಲಿ ಓದಿಸಲಾಗುತ್ತಿಲ್ಲ ಎಂದು ಭಕ್ತಿಯಿಂದ ಅಲ್ಲಿಗೆ ಸೇರಿಸಿದ್ದೆವಷ್ಟೆ. ಈಗ ನೋಡಿದರೆ ನಿಮ್ಮ ಬಾವಯ್ಯ ದೊಡ್ಡ ಬಹುಮಾನವನ್ನೆ ಕೊಟ್ಟಿದ್ದಾನೆ. ನಾವೆಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಬಂದಿದ್ದೇವೆ” ಎಂದರು.

ನಮ್ಮ ಬಾವಯ್ಯ ಹಾಕಿದ ಬೀಜ ಹಲವು ಕಡೆ ಮೊಳೆಯುವುದರಲ್ಲಿತ್ತು. ದೂರನ್ನು ದೂರದಿಂದಲೆ ಕೇಳಿದ ಬಾವಯ್ಯ ಅಲ್ಲಿಂದಲೆ ಹನುಮ ಲಂಕೆಗೆ ಹಾರಿದಂತೆ ಹಾರಿ ಹಾರಿ ಹಾರಿ ಹಾರಿ ಬಂದು ನಮ್ಮನ್ನು ತಲುಪಿದ. “ಅದಕ್ಕೆಲ್ಲ ಮದ್ದರೆಯಬೇಕು. ನಾನು ಮರೆಯಲ್ಲಿ ನಿಂತು ಪ್ಲಾನ್ ಹೇಳುತ್ತೇನೆ. ನೀನು ಅದರಂತೆ ಮಾಡಿಬಿಡು” ಎಂದ. ಅವನು ಹೇಳಿದ ಹಾಗೆ ಅವನ ತಾಳಕ್ಕೆ ತಕ್ಕಂತೆ ಮಾನವ ಆಕಾರದಲ್ಲಿದ್ದ ನಾವು ನರ್ತಿಸಿದೆವು.

ಭಕ್ತರ ಸಮೂಹಗಳ ಪ್ರಮುಖರನ್ನೆಲ್ಲ ಬದಲಾಯಿಸಿದೆವು. ಗುರುಕುಲದಲ್ಲಿದ್ದ ಬಡ ಹೆಣ್ಣುಮಕ್ಕಳಲ್ಲಿ ಮೊಳೆಯುತ್ತಿರುವ ಬೀಜಗಳನ್ನು ಅಲ್ಲಲ್ಲೆ ಮೊಳೆಯದಂತೆ ವ್ಯವಸ್ಥೆ ಮಾಡಿದೆವು. ಅವರ ಪಾಲಕರು ತಗಾದೆ ತೆಗೆಯದಂತೆ ನಮ್ಮ ತಾಲಿಬಾನ್ ಪಡೆಯ ಬೆದರಿಕೆಯೊಡ್ಡಿ ಜಬರ್ದಸ್ತು ಮಾಡಿಬಿಟ್ಟೆವು. ದೇವರ ಬಾವಯ್ಯನಿಂದ ಬೀಜ ಬಿತ್ತಿಸಿಕೊಳ್ಳಲು ಪಡೆದುಬಂದಿರಬೇಕೆಂಬುದು ಆ ಹುಲುಮಾನವರಿಗೆ ಅರ್ಥವಾಗದೆ? ಛೆ.

ಈ ನಡುವೆ ನಮ್ಮ ಸಂಸ್ಥೆಯ ಲೌಕಿಕ ವ್ಯವಹಾರಗಳಲ್ಲಿ ಹಲವು ವ್ಯತ್ಯಾಸಗಳು ಕಂಡುಬರುತ್ತಿವೆ ಎಂದು ಇನ್ನೂ ಕೆಲವು ಭಕ್ತರು ದೂರಲು ಶುರುಮಾಡಿದರು. ಯೋಜನೆಗಳಿಂದ ಸಂಗ್ರಹವಾದ ಮಾನವ ಲೋಕದ ಹಸಿರು ಕೆಂಪು ನೋಟುಗಳೆಲ್ಲಿ ಹಲವು ಮಂಗಮಾಯವಾಗುತ್ತಿವೆ ಎಂವ ಸುದ್ದಿ ಹಬ್ಬಿತ್ತು. ಲೌಕಿಕ ಆಡಳಿತಕ್ಕೆ ನೇಮಿಸಲ್ಪಟ್ಟ ನಿವೃತ್ತ ವಯಸ್ಸಿನ ಗಣ್ಯರೊಬ್ಬರು ಬಿಟ್ಟುಹೋದರು.

ನಮ್ಮ ಒತ್ತಾಯಕ್ಕೆ ಆಮೇಲೆ ಮತ್ತೆ ಅವರು ಮರಳಿ ಬಂದರೂ ಅವರಿಗೆ ಸಮಾಧಾನವಿಲ್ಲವೆಂಬುದು ನಮಗೆ ಗೊತ್ತು. ಅವರನ್ನು ಸಮಾಧಾನ ಪಡಿಸಬೇಕು ಎಂದರೆ ಲೌಕಿಕ ವ್ಯವಹಾರಗಳು ಸರುಯಾಗಬೇಕು. ಲೌಕಿಕ ವ್ಯವಹಾರಗಳು ಸರಿಯಾಗುವುದು ಬಾವಯ್ಯನಿಗೆ ಇಷ್ಟವಿಲ್ಲ.

ಬಾವಯ್ಯನಷ್ಟೆ ಅಲ್ಲ. ನಾವು ಹುಟ್ಟಿದ ಸ್ಥಳದವರಿಗೂ ಅದೆಲ್ಲ ಇಷ್ಟವಿಲ್ಲ. “ಇರುವಷ್ಟು ದಿನ ನೆಮ್ಮದಿಯಿಂದ ಜೈಕಾರ ಹಾಕಿಸಿಕೊಂಡು ಇರಬಾರದೆ ದೇವರೆ?” ಎಂದು ಅವರೆಲ್ಲ ಕೇಳಿದರು. ಹೀಗಾಗಿ ನಾವು ಲೌಕಿಕ ವ್ಯವಹಾರದಲ್ಲಿ ಹೆಚ್ಚಿಗೆ ತಲೆಹಾಕಲಿಲ್ಲ. ನಮ್ಮ ತಲೆ ಬೇರೆ ವಿಷಯಾಸಕ್ತ ವಾಗಿತ್ತಲ್ಲ? ನೆನಪುಮಾಡಿಕೊಳ್ಳಿ ಬ್ರಹ್ಮನ ಟೇಸ್ಟು….

ನಾವು ಟೇಸ್ಟ್ ನೋಡಿದ ನಂತರ ಕೆಲವೊಮ್ಮೆ ಬಾವಯ್ಯ ತಾನೂ ನೋಡಬೇಕೆಂದ. ಹೊಸ ನೈವೇದ್ಯ ಕಂಡಾಗ ನಮಗಿಂತ ಮೊದಲೆ ರುಚಿನೋಡಿ “ನೀನೂ ಬೇಕಾದರೆ ನೋಡು” ಎಂದ. ಅದರಲ್ಲಿ ನಾವು ಮ್ಯೂಚ್ವಲ್ ಅಂಡರ್ ಸ್ಟ್ಯಾಂಡಿಂಗ್ ಬಾಂಡಿಂಗ್ ಮಾಡಿಕೊಂಡೆವು.

ಬಾವಯ್ಯ ಮತ್ತು ನಾವು ಮ್ಯೂಚ್ವಲ್ ಆದ ಮೇಲೆ ಸುತ್ತ ನಮ್ಮ ಸೇವೆಗೆ ಇರುವವರೆಲ್ಲ ಅರ್ಥಮಾಡಿಕೊಂಡರು. “ನಿಮ್ಮ ಬೆಳವಣಿಗೆಗೆ ಸಹಕಾರ ನೀಡುತ್ತೇವೆ” ಎಂದು ನಾವು ಮತ್ತು ನಮ್ಮ ಬಾವಯ್ಯ ಸೇರಿ ಅಭಯದಾನ ನೀಡಿದಮೇಲೆ ಅವರೆಲ್ಲ ನಮ್ಮ ಅನುಕೂಲಕ್ಕೆ ತಕ್ಕಂತೆ ಕೆಲಸ ಮಾಡತೊಡಗಿದರು. ನಾವೆಂದರೆ ಬೇರೆಯಲ್ಲ ನಮ್ಮ ತದ್ರೂಪ ಬಾವಯ್ಯನೆಂದರೆ ಬೇರೆಯಲ್ಲ. ನಮ್ಮ ದೂರುವ ಹುಲುಮಾನವರು ನಮ್ಮೊಳಗಿನ ಈ ಮಹತ್ವವನ್ನು ಅರ್ಥಮಾಡಿಕೊಂಡಿಲ್ಲ.

ಬಾವಯ್ಯನಂತ ಶ್ರೇಷ್ಠ ‘ವಿಧ್ವಂಸ’ನನ್ನು ಜೊತೆಗಿರಿಸಿಕೊಂಡಿದ್ದಕ್ಕೆ ನಮ್ಮನ್ನು ಕಂಡರಾಗದ ಕೆಲವು ಹುಲುಮಾನವರು ಏನೇನೋ ಹೇಳುತ್ತಾರೆ. ಅಂಥವರು ನಮ್ಮ ಶಾಪಕ್ಕೆ ಪಾತ್ರರಾಗುತ್ತಾರೆ ಎಂಬುದು ನಮಗೆ ಗೊತ್ತಿದೆ. ನಾವಾಗಲೀ ನಮ್ಮ ಬಾವಯ್ಯನಾಗಲೀ ಅದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ.ಯಾಕೆಂದರೆ ಸೀಟು ಮತ್ತು ಕೀಲಿ ಕೈ ಇರುವವರೆಗೂ ನಾವು ಸರ್ವತಂತ್ರ ಸ್ವತಂತ್ರರು.”

Thumari Ramachandra

source: https://www.facebook.com/groups/1499395003680065/permalink/1599367323682832/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s