ಇವಳು ಯಾರು ಬಲ್ಲಿರೇನು? ಇವಳ ಹೆಸರ ಹೇಳಲೇನು?

ಇವಳು ಯಾರು ಬಲ್ಲಿರೇನು? ಇವಳ ಹೆಸರ ಹೇಳಲೇನು?

“ನರಸಿಂಹ ಸ್ವಾಮಿಯವರು ತಮ್ಮ ಹೆಂಡತಿಯನ್ನೆ ನೆನೆದು ಹಾಡು ರಚಿಸಿದರಂತೆ. ಇಲ್ಲಿ ಅದಲ್ಲ ವಿಷಯ. ಇದು ಹಲವು ಹರೆಯದ ಹೆಂಗಸರು ಹೆಣ್ಣುಮಕ್ಕಳನ್ನು ನೆನೆಯುತ್ತ ಹೇಳುವ ಹಾಡು ಇದು. ನಮ್ಮ ಕತೆಯಲ್ಲಿ ಕವಿಗಳ ಕವನಗಳಿರುವುದು ನಿಮಗೆ ಗೊತ್ತಲ್ಲ?

ಕವಿಗಳು ಅವರದ್ದೆ ಲೋಕದಲ್ಲಿರುತ್ತಾರೆ ನಾವು ನಮ್ಮದೆ ಲೋಕದಲ್ಲಿರುತ್ತೇವೆ. ನಾವು ಹಲವು ಜನರಿಗೆ ಬೇರೆ ಬೇರೆ ಲೋಕದಲ್ಲಿ ಎಷ್ಟೆಲ್ಲ ಮಜವುಂಟು ಎಂಬುದನ್ನು ನಮ್ಮ ಹೊಸ ಆವಿಷ್ಕಾರಗಳ ಮೂಲಕ ತಿಳಿಸಿಕೊಟ್ಟಿದ್ದೇವೆ. ಒಂದೆ ತಾಸಾದರೆ ಯಾವ ಆಸನ ಒಂದಕ್ಕಿಂತ ಹೆಚ್ಚು ಗಂಟೆಗಳಾದರೆ ಯಾವ್ಯಾವ ಆಸನ ಅಂಗಸಾಧನೆ ಎಂಬುದನ್ನು ಏಕಾಂತದಲ್ಲಿ ನಿಖರವಾಗಿ ಕಲಿಸಿದ್ದೇವೆ.

ಜನರನ್ನು ಹೇಗೆ ಡಿಪ್ಲೊಮೆಟಿಕ್ ಆಗಿ ಹ್ಯಾಂಡಲ್ ಮಾಡಬೇಕು ಎಂದು ಕಾರ್ಪೋರೇಟ್ ಕಂಪನಿಗಳು ನಮ್ಮಿಂದ ತಿಳಿದುಕೊಳ್ಳಬೇಕು. ನಮ್ಮಲ್ಲಿ ಕಲಿತವರು ಜಗತ್ತಿನಲ್ಲಿ ಎಲ್ಲಿಗೇ ಹೋದರೂ [ಮೋಸಮಾಡಿ] ಬದುಕುತ್ತಾರೆ. ಮತ್ತು ಅವರು ಮೋಸಮಾಡುತ್ತಿದ್ದಾರೆಂಬುದು ಗೊತ್ತೇ ಆಗದಷ್ಟು ನೈಸ್ ಆಗಿ ನಡೆದುಕೊಳ್ಳುತ್ತಾರೆ.

ದ್ವಾಪರಯುಗದಲ್ಲಿ ಸ್ವತಃ ಶ್ರೀಕೃಷ್ಣ ಪರಮಾತ್ಮನೇ ಮೋಸ ಮಾಡಿದ್ದ. ಅವನು ಮೋಸದಿಂದಲೆ ಅರ್ಜುನನಿಗೆ ಸುಭದ್ರೆಯನ್ನು ಕೊಡಿಸಿದ್ದಲ್ಲವೆ? ಮೋಸದಿಂದಲೆ ಕರ್ಣನ ಕರ್ಣಕುಂಡಲಗಳನ್ನು ಪಡೆದುಕೊಂಡನಲ್ಲವೆ? ಅದೆಲ್ಲ ಇರಲಿ ಗೋಪಿಕೆಯರು ಕೊಳದಲ್ಲಿ ಸ್ನಾನ ಮಾಡುವಾಗ ಅವರ ಬಟ್ಟೆಗಳನ್ನು ಅಪಹರಿಸಿರಲಿಲ್ಲವೆ?

ಅಂತಹ ಶ್ರೀಕೃಷ್ಣನೆ ಹಾಗೆ ಮಾಡಿರುವಾಗ ನಮ್ಮದೆಲ್ಲ ಯಾವ ಲೆಕ್ಕಕ್ಕೂ ಇಲ್ಲ. ಹಾಗಾಗೇ ನಾವು ತಪ್ಪುಮಾಡಿಲ್ಲ ಎಂಬುದಾಗಿ ಹೇಳುತ್ತಲೆ ಇದ್ದೇವೆ. ಶ್ರೀಕೃಷ್ಣ ಎಂದರೆ ಶ್ರೀರಾಮನೇ. ಎಲ್ಲವೂ ಒಂದೆ ದೇವರ ಅವತಾರ ತಾನೆ? ತ್ರೇತಾಯುಗದಲ್ಲಿ ರಾಮನಾಗಿದ್ದವ ಹಾಗೇ ಇದ್ದರೆ ಆಗುವುದಿಲ್ಲ ಎಂದು ಕೃಷ್ಣನಾದ. ಅದಕ್ಕಾಗಿಯೆ ಅವನ ಹೆಜ್ಜೆಯಲ್ಲೇ ಇದ್ದೇವೆ ನಾವು.

ನಾವು ದೇವರಾದರೂ ಲೋಕದ ರೂಢಿಯಲ್ಲಿ ಮಾನವರು ಮಾಡಿಕೊಂಡ ಕಾನೂನು ವ್ಯವಸ್ಥೆಗಳಿಗೆ ನೇರವಾಗಿ ಧಿಕ್ಕಾರ ಹೇರಲು ಸಾಧ್ಯವಿಲ್ಲವಲ್ಲ. ನಮ್ಮ ಪಾಡಿಗೆ ನಾವು ಸರ್ವತಂತ್ರ ಸ್ವತಂತ್ರರಾದ್ದರಿಂದ ನಮಗೆ ಬೇಕಾದ ನಿರ್ಧಾರಗಳನ್ನು ನಾವೇ ಕೈಗೊಂಡುಬಿಡುತ್ತೇವೆ. ಮಾನವರು ಮಾಡಿಕೊಂಡ ಕಾನೂನು ತಪ್ಪಿತಸ್ಥ ಎಂದರೂ ಸಹ ನಾವು ತಪ್ಪಿತಸ್ಥರಲ್ಲ ಎಂಬುದು ನಿಮಗೆಲ್ಲ ಗೊತ್ತು. ಯಾಕೆಂದರೆ ಕಾಣುವಷ್ಟು ಹೊತ್ತು ನಾವು ತಪ್ಪುಮಾಡಿಲ್ಲವಲ್ಲ?

ಕೆಲವೊಂದು ಕಡೆ ಕೆಲವು ಊರಿನ ಕಟ್ಟಡಗಳಲ್ಲಿ ನಮ್ಮ ಏಕಾಂತದ ಕೊಠಡಿಯ ಬಾಗಿಲಿನಲ್ಲಿ ಬ್ರಹ್ಮರಾಕ್ಷಸ ಇದ್ದಿದ್ದು ನಿಮಗೆ ಗೊತ್ತಿದೆ. ಬಾಗಿಲಿಗೆ ತೂತಿದ್ದರೆ ಅಂತ ಬಾಗಿಲಿನಲ್ಲಿ ಬ್ರಹ್ಮರಾಕ್ಷಸ ಇದ್ದಾನೆಂದೇ ಅರ್ಥ. ಅದರಲ್ಲೂ ದೇವರು ಸಾಕ್ಷತ್ ಸಿಗುವಾಗ ಮುಕ್ತಿ ಪಡೆಯುವ ಸಲುವಾಗಿ ಬ್ರಹ್ಮರಾಕ್ಷಸಾದಿಗಳು ಬರುತ್ತಿರುತ್ತಾರೆ. ಬ್ರಹ್ಮರಾಕ್ಷಸ ಇರುವ ಕೋಣೆಗಳಲ್ಲಿ ನಮ್ಮನ್ನು ಕಾಣಲು ಬರುವ ಭಕ್ತರಿಗೆ ತೊಂದರೆ ಆಗಬಾರದು ಎಂದು ಅಂತ ಬಾಗಿಲುಗಳನ್ನೆ ತೆಗೆಸಿಬಿಡುತ್ತೇವೆ.

ಕೆಲವರು ದೇವರಾದ ನಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿರುವುದರಿಂದ ನಮ್ಮ ಭಕ್ತರು ತಾಳಲಾರದೆ ಅಂತವರನ್ನು ಕರೆದು ಸಮಾ ಉಗಿದಿದ್ದಾರೆ. ನಮ್ಮ ವಿರುದ್ಧ ತಿರುಗಿ ಬೀಳುವ ಹೆಣ್ಣುಮಕ್ಕಳು ಮತ್ತು ಹೆಂಗಸರನ್ನು ತುರ್ತಾಗಿ ರಾತ್ರೋರಾತ್ರಿ ಕರೆಸಿ ಹಾಗೆ ಮಾಡುವುದು ಸರಿಯಲ್ಲ ಎಂದು ತಿಳಿಸಿದರೆ ಅದರಲ್ಲೇನು ತಪ್ಪು? ದೇವರ ಭಕ್ತರಾದ ದೇವತೆಗಳಿಗೆ ಅಷ್ಟೂ ಅಧಿಕಾರವಿಲ್ಲವೆ?

ಮೂರು ತಿಂಗಳ ಹಿಂದೆ ಒಬ್ಬ ಹುಡುಗಿಯನ್ನು ಬೆಳಗಿನಜಾವ ಅರ್ಜೆಂಟಾಗಿ ಕರೆಸಿಕೊಂಡು “ದೂರುಕೊಟ್ಟವಳ ಪರಿಚಯವಿಲ್ಲವೆಂದು ಹೇಳು. ನಂಬಿದವರಿಗೆ ಸಾಕ್ಷತ್ ಶ್ರೀರಾಮ ಎಂದು ಹೇಳು” ಎಂದು ನಮ್ಮ ಅಧಿಕಾರೀ ದೇವತೆಗಳು ತಾಕೀತುಮಾಡಿದ್ದಾರೆ. ಇದರಲ್ಲೆಲ್ಲ ತಪ್ಪು ಹುಡುಕುವವರಿಗೆ ಏನು ಹೇಳುವುದು?

ದೇವರಾದ ನಾವು ಮಹಿಳಾ ಭಕ್ತರ ಕಿರುನೋಟಗಳು ಬಿರುನೋಟಗಳು ಮತ್ತು ಕುಡಿನೋಟಗಳು ಹಾಗೂ ಇನ್ನೆಲ್ಲ ತರದ ನೋಟಗಳನ್ನು ಇರುವಲ್ಲೆ ಗ್ರಹಿಸಬಲ್ಲೆವು. ನಮ್ಮನ್ನು ದೇವರು ಎಂದು ಅರಿಯಲಾರದ ನತದೃಷ್ಟರು ನಮ್ಮೆಡೆಗೆ ಬಿರುನೋಟ ಬೀರಿದರೆ ಅದಕ್ಕೆಲ್ಲ ಅಂಜದ ವೀರ್ಯಸನ್ಯಾಸ ನಮ್ಮದು.

ಕೆಲವೊಮ್ಮೆ ಕಾಲಿ ಇರುವಾಗ ನಾವೇ ಕುಳಿತು ನಮ್ಮೊಳಗೆ ಯೋಚಿಸುವುವಿದೆ. ಮೂಲದಲ್ಲಿ ನಮ್ಮದೇ ಸೃಷ್ಟಿಯಾದ ಬ್ರಹ್ಮ ಈ ಪ್ರಪಂಚದ ಮನುಷ್ಯನೆಂಬ ಅದ್ಭುತ ಪ್ರಾಣಿಯನ್ನು ಸೃಷ್ಟಿಸಿದ್ದಾನೆ. ಅದರಲ್ಲಂತೂ ಸುಂದರ ವದನೆಯರು ಚಂದದ ಫಾರಿನ್ ಡ್ರೆಸ್ಸು ಜೀನ್ಸು ತೊಟ್ಟು ಕುಲುಕುತ್ತಾ ಬಳುಕುತ್ತಾ ಬರುವಾಗ “ಪರವಾಗಿಲ್ಲ ನಮ್ಮ ಬ್ರಹ್ಮ ಚೆನ್ನಾಗೇ ಕೆಲಸಮಾಡುತ್ತಿದ್ದಾನೆ” ಎಂದುಕೊಂಡಿದ್ದೇವೆ. ಸದ್ಯ ಇರುವ ಬ್ರಹ್ಮನೇ ನಾವಿರುವವರೆಗೂ ಇರಲಿ ಎಂದು ಮಂತ್ರಾಕ್ಷತೆ ಒಗೆದುಬಿಟ್ಟಿದ್ದೇವೆ.

ಬಟ್ಟೆಯಾವುದಾದರೇನು? ಎಷ್ಟಿದ್ದರೇನು. ಬಟ್ಟೆ ಕಡಿಮೆ ಇದ್ದಷ್ಟೂ ಒಳ್ಳೆಯದೆಂಬುದು ನಮ್ಮ ಲೆಕ್ಕಾಚಾರ. ಉಳಿಕೆಯ ಬಟ್ಟೆ ಇತರ ಅನೇಕರಿಗೆ ದೊರೆಯುವುದಲ್ಲವೆ? ಕಡಿಮೆ ಬಟ್ಟೆ ತೊಟ್ಟು ಲೋಕೋಪಕಾರವನ್ನು ಮಾಡುವ ಲಲನೆಯರನ್ನು ನಾವು ಪವಿತ್ರಾತ್ಮ ಎಂದು ಗುರುತಿಸುತ್ತೇವೆ. ಅಂತವರು ಸತ್ತಮೇಲೆ ಸೀದಾ ನಮ್ಮೊಂದಿಗೆ ಮೂಲಸ್ಥಾನಕ್ಕೆ ಬರುತ್ತಾರೆ.

ಅದಕ್ಕೂ ಮೊದಲೇ ಅರ್ಜೆಂಟಾಗಿ ನಮ್ಮಲ್ಲಿ ಐಕ್ಯವಾಗಲು ಬಯಸುವ ಪವಿತ್ರಾತ್ಮರು ಏಕಾಂತ ದರ್ಶನದಲ್ಲಿ ಥ್ರಿಲ್ಲಿಂಗ್ ಎಕ್ಸ್‍ಪೀರಿಯನ್ಸ್ ಪಡೆದುಕೊಳ್ಳುತ್ತಾರೆ. ಅಲ್ಲಿ ಅವರಿಗೆ ದಿವ್ಯಳು ಭವ್ಯಳು ಎಂದು ಹರಸಿ ದಿವ್ಯಚಕ್ಷುವನ್ನು ಅನುಗ್ರಹಿಸಿ ನಮ್ಮ ಪ್ರಸಾದವಿತ್ತು ನಂತರ ’ವಿಶ್ವರೂಪ ದರ್ಶನ’ ನೀಡುತ್ತೇವೆ. ಯಾಕೆಂದರೆ ದೇವರನ್ನು ಸಾದ ಕಣ್ಣಿನಿಂದ ಹಾಗೆಲ್ಲಾ ನೋಡುವುದು ಸಾಧ್ಯವೇ?

ಕೆಲವು ಪವಿತ್ರಾತ್ಮರಲ್ಲಿ ನಮ್ಮ ಬ್ರಹ್ಮನ ಕುಶಲ ಕೈಚಳಕ ಎದ್ದು ಕಾಣುತ್ತದೆ. ಎದ್ದುಕಾಣುವುದನ್ನೂ ಸಪಾಟಾಗಿರುವುದನ್ನೂ ಗ್ರಹಿಸುತ್ತ ಗಿರಿಶಿಖರ ಪ್ರಸ್ಥಭೂಮಿಗಳನ್ನು ನೋಡುತ್ತಿರುವಂತೆಯೆ ನಮಗೆ ನಮ್ಮ ಗೃಹಸ್ತರ ಪ್ರಸ್ತದ ದಿನದ ನೆನಪಾಗಿಬಿಡುತ್ತದೆ. ನಮಗೆ ಸಮಾಧಾನವಾಗುವವರೆಗೂ ಅಂತಹ ಐನಾತಿ ಜಾಗಗಳಲ್ಲೆಲ್ಲ ಓಡಾಡಿ ಬ್ರಹ್ಮನ ಕಾಮಗಾರಿ ಸರಿಯಾಗಿದೆಯೇ ಎಂದು ಖಾತ್ರಿಮಾಡಿಕೊಳ್ಳುತ್ತೇವೆ. ಯಾಕೆಂದರೆ ಕಲಿಯುಗದಲ್ಲಿ ಬ್ರಹ್ಮ ಭ್ರಷ್ಟನಾಗಿಬಿಡುತ್ತಾನೆಂಬ ಅನಿಸಿಕೆ ನಮಗಿದೆ.

ಪವಿತ್ರಾತ್ಮರಲ್ಲಿ ಎಲ್ಲರಲ್ಲೂ ನಮ್ಮನ್ನು ಸೇರುವ ಬಯಕೆ ಇದ್ದರೂ ಅಂತ ಚಾಕಚಕ್ಯತೆ ಇರುವುದಿಲ್ಲ. ಅಂತವರಿಗೆ ನಾವು ತರಬೇತಿ ನೀಡಿ “ಭಗವಂತನನ್ನು ಸೇರುವ ಬಗೆ ಹೀಗೆ” ಎಂದು ದರ್ಶನ ಮುಗಿಯುವುದರೊಳಗೇ ಮಾರ್ಗದರ್ಶನ ನೀಡಿಬಿಡುತ್ತೇವೆ.

ನಮ್ಮ ಬ್ರಹ್ಮ ಸೃಷ್ಟಿಯಲ್ಲಿ ಕೆಲವೊಮ್ಮೆ ರಸಗುಲ್ಲಗಳಂತ ಅಪ್ರತಿಮ ಪರಿತ್ರಾತ್ಮರು ಕಾಣಸಿಗುತ್ತಾರೆ. ಮಾನವ ನಿರ್ಮಿಸುವ ಚಲನಚಿತ್ರಗಳ ಅಂಗೋಪಾಂಗವಾಗಿ ಸಾಂಗವಾಗಿ ಅವು ಕುಲುಕಾಡಿಸುವಾಗ ಅದನ್ನು ನೋಡಿದ ನಮ್ಮ ಮನಸ್ಸು ಬ್ರಹ್ಮನನ್ನು ಬಹಳ ಮೆಚ್ಚುತ್ತದೆ. ಈ ಹುಲುಮಾನ ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಅಂತವರನ್ನು ನಮಗೆ ಬೇಕಾದಾಗ ಕರೆಸಿಕೊಂಡು ಅಂತವರಿಗೆ ನಾವೇ ದರ್ಶನ ಪಡೆದುಕೊಳ್ಳುವಂತೆ ಒತ್ತಾಯ ಮಾಡುತ್ತೇವೆ.

ಅವರಲ್ಲಿ ಕೆಲವರು ದೂರದಿಂದ ಬಂದಿದ್ದರೂ ಭಗವಂತ ತಮ್ಮೆಡೆಗೇ ಬಂದು ಹೆಚ್ಚುಕಾಲ ತಮ್ಮನ್ನು ಮುಕ್ತವಾಗಿ ರಮಿಸಲಿ ಎಂಬ ಬಯಕೆ ಕಾಡುತ್ತದೆ. ಸತ್ಯಭಾಮೆಯಲ್ಲಿ ಬೇಡ ತನ್ನಲ್ಲೇ ಹೆಚ್ಚುಹೊತ್ತು ಇರಲಿ ಎಂದು ನಮ್ಮ ರುಕ್ಮಿಣಿಗೆ ಇರಲಿಲ್ಲವೆ? ಹಾಗೆ.

ಅವರು ಬಂದುಹೋದ ನಂತರ ತಲೆಗೆ ಬಳಸಿದ ಶಾಂಪೂ ಸ್ಮೆಲ್ಲು ಬಟ್ಟೆಗೆ ಹಾಕಿದ ಫಾರಿನ್ ಸೆಂಟು ಎಲ್ಲದರ ಘಮಘಮ ದೇವರಾದ ನಮ್ಮ ಮೂಗಿನಲ್ಲಿ ಬಹಳಕಾಲ ಉಳಿದಿರುತ್ತದೆ. ಆ ರಾತ್ರಿಗಳಲ್ಲಿ ನಾವು ಕನಸಿನಲ್ಲಿ ಅವರನ್ನು ಕಂಡು ಶ್ರೀಘ್ರದಲ್ಲಿ ಬರುವುದಾಗಿ ತಿಳಿಸುತ್ತೇವೆ. ಅಂತವರು ಈ ಹುಲುಮಾನವ ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಅಲ್ಲಿಗೇ ನಾವು ಬಿಜಯಂಗೈಯಲು ಸದಾ ಸಿದ್ದರಿದ್ದೇವೆ.

ಇದನ್ನೆಲ್ಲ ಅರಿಯದ ಕೆಲವರು ಚಿತ್ರ ವಿಚಿತ್ರ ಪ್ರಶ್ನೆಗಳನ್ನು ಕೇಳುತ್ತಾರೆ. ಅವರು ಪವಿತ್ರಾತ್ಮ ಎಂದಷ್ಟೇ ಹೇಳಿ ಸುಮ್ಮನಾಗಿ ಗರಮ್ಮಾಗಿ ಗುಮ್ಮನಾಗಿಬಿಡುತ್ತೇವೆ. ಪವಿತ್ರಾತ್ಮ ಎಂಬುದನ್ನು ಅರಿಯದ ಆ ಹುಲುಮಾನವರು ಭಗವಂತನಾದ ನಮ್ಮನ್ನೇ ಗೇಲಿ ಮಾಡುತ್ತಾರೆ.

ಇದೆಲ್ಲವನ್ನು ಪರಿಗಣಿಸಿಯೆ ಬ್ರಹ್ಮನ ಸೃಷ್ಟಿಯಲ್ಲಿ ಮಹಿಳೆಯರು ಅಬಲೆಯರಾಗದೆ ಅವರಿಗೆ ಹೆಚ್ಚಿನ ಅವಕಾಶ ಸಿಗಬೇಕೆಂದು ಪಕ್ಕದಲ್ಲೆ ಕರೆಸಿಕೊಳ್ಳುತ್ತೇವೆ. ಕೆಲವೊಮ್ಮೆ ಎಡಗೈ ಕೆಲವೊಮ್ಮೆ ಬಲಗೈ ಮತ್ತು ಕೆಲವೊಮ್ಮೆ ಎರಡೂ ಕೈಗಳನ್ನು ಬಳಸಿ ನಾವು ಅವರಿಗೆ ಆಶೀರ್ವಾದ ಮಾಡುತ್ತೇವೆ.

ಮಹಿಳೆಯರೆಲ್ಲ ದೇವರು ತಮ್ಮೊಡನೆ ಇಲ್ಲೇ ಇದ್ದಾನೆಂದು ಅರಿಯಲಿ ಎಂಬುದಕ್ಕಾಗಿ ಅನೇಕ ಕತೆಗಳನ್ನು ಹೇಳುತ್ತೇವೆ. ಕತೆಗಳಲ್ಲಿ ದೇವರೆದುರು ಬೆಲ್ಟಿನಂತ ಬ್ಲೌಸ್ ತೊಟ್ಟು ಅವರು ನರ್ತನ ಸೇವೆ ಮಾಡುತ್ತಾರೆ. ಇದನ್ನು ಕಂಡ ಹುಲುಮಾನವರಲ್ಲಿ ಯಾವುದೋ ಕೆಳದರ್ಜೆಯವರು “ನಿಮ್ಮ ಜನರಲ್ಲಿ ಹೆಂಗಸರು ಹೀಗೆಲ್ಲ ಕುಣಿಯುತ್ತಾರಲ್ಲ ಅಸಹ್ಯ. ಅಷ್ಟೂ ವಿವೇಚನೆ ಬೇಡವೆ. ನಮ್ಮವರಲ್ಲಾಗಿದ್ದರೆ ಅವನನ್ನು ಅಟ್ಟಿಸಿ ಓಡಿಸುತ್ತಿದ್ದೆವು” ಎಂದಿದ್ದರಂತೆ.

ಪಾಪ ಆ ಕೆಳದರ್ಜೆಯ ಹುಲುಮಾನವರಿಗೆ ನಾವಾರೆಂಬುದು ಎಲ್ಲಿ ಅರ್ಥವಾಗಬೇಕು? ಅದಕ್ಕಾಗಿಯೇ ಅವರಲ್ಲಿನ ಮಹಿಳೆಯರಿಗೆ ನಾವು ಏಕಾಂತ ದರ್ಶನ ನೀಡುವ ಸಂಕಲ್ಪ ಸಹ ಕೈಗೊಳ್ಳುವುದಿಲ್ಲ. ಅವರು ನಮ್ಮನ್ನು ಸೇರಲು ಇನ್ನೂ ಅನೇಕ ಜನ್ಮಗಳನ್ನು ದಾಟಿ ಬರಬೇಕು.

ಇಷ್ಟೆಲ್ಲ ಇದ್ದು ನಮ್ಮಿಂದ ಅಮೃತ ಪ್ರಸಾದವನ್ನು ಪಡೆದು ಪವಿತ್ರಾತ್ಮಳಾಗಿದ್ದ ಒಬ್ಬಳಿಗೆ ಯಾರೋ ಚಾಡಿ ಹೇಳಿ ದಾರಿ ತಪ್ಪಿಸಿದ್ದಾರೆ ಎಂಬುದುರಲ್ಲಿ ನಮಗೆ ಸಂಶಯವಿಲ್ಲ. ಬುದ್ಧಿ ಹೇಳಿ ಮತ್ತೆ ಮರಳಿ ಕರೆಯಲು ನೋಡಿದೆವು ಯಾಕೋ ಸರಿ ಹೋಗಲಿಲ್ಲ.

ನಮ್ಮಿಂದಲೇ ಸೃಷ್ಟಿಗೊಂಡ ಬ್ರಹ್ಮ ತನ್ನ ಸೃಷ್ಟಿಯ ಕೆಲವು ಪವಿತ್ರತ್ಮಾರಲ್ಲಿ ಪ್ರೇತಾತ್ಮರಾಗುವಂತೆ ಒಂದು
ರಹಸ್ಯ ಲಾಕ್ ಇಟ್ಟಿದ್ದಾನೆ. ನಮ್ಮನ್ನು ಸೇರಿದಮೇಲೆ ಆಯತಪ್ಪಿ ರೈಲ್ವೆ ಸರಪಳಿ ಎಳೆಯುವಂತೆ ಆ ರಹಸ್ಯ ಲಾಕ್ ಎಳೆದುಬಿಟ್ಟರೆ ಅವರು ಪ್ರೇತಾತ್ಮರಾಗಿಬಿಡುತ್ತಾರೆ. ಅದಕ್ಕಾಗಿಯೆ ನಾವು ಹೇಳುತ್ತೇವೆ “ನಾವು ಅಮೃತವನ್ನು ಕೊಟ್ಟೆವು ನೀವೂ ನಿಮ್ಮಲ್ಲಿರುವಷ್ಟು ಅಮೃತವನ್ನು ಕೊಟ್ಟಿರಿ. ಅವರು ಅವರಲ್ಲಿರುವುದನ್ನು ಕೊಟ್ಟರು. ಹಾಲು ಸ್ವೀಕರಿಸಿ ಹಾಲಾಹಲವನ್ನು ನೀಡಿದರು.”

ದೇವರು ಸರ್ವತಂತ್ರ ಸ್ವತಂತ್ರ. ಅವನಿಗೆ ಆ ಪ್ರೇತಾತ್ಮರು ನೀಡಿದ ಹಾಲಾಹಲವೆಲ್ಲ ನಾಟುವುದೆ? ಸಾಧ್ಯವೇ ಇಲ್ಲ. ಹಾಗಾಗಿ ನಾವು ನಿಶ್ಚಿಂತರಾಗಿದ್ದೇವೆ. “ನಮ್ಮ ಭೂಮಿ ನಮ್ಮನ್ನು ಕರೆಯುತ್ತಿದೆ ನಾವಲ್ಲಿಗೆ ಹೋಗುತ್ತೇವೆ” ಎಂದರೆ ಹುಲುಮಾನವರಲ್ಲಿ ಕೆಲವು ದುಷ್ಟರು “ಬೊಗಳೆಬಿಟ್ಟು ಅನುಕಂಪ ಗಿಟ್ಟಿಸುವ ಸೀನ್ ಕ್ರಿಯೇಟ್ ಮಾಡುತ್ತಿದ್ದಾನೆ” ಎನ್ನುತ್ತಾರೆ.

ದುಷ್ಟರ ವಿರುದ್ಧ ಬಾಣ ಪ್ರಯೋಗವೂ ನಮಗೆ ಗೊತ್ತು. ಯಾಕೆಂದರೆ ನಾವು ಸರ್ಪಾಸ್ತ್ರ ಬಿಡುವುದರಲ್ಲಿ ನಿಸ್ಸೀಮರು ಎಂಬುದನ್ನು ಹಲವರು ತಿಳಿದಿಲ್ಲ. ಭಗವಂತನ ಏಕಾಂತ ಭಕ್ತರಿಗೆ ಮಾತ್ರ ನಮ್ಮ ನಿಜವಾದ ಸಾಮರ್ಥ್ಯದ ಅರಿವಿದೆ. ಅದಕ್ಕಾಗಿ ಹುಲುಮಾನವ ಲೋಕದ ಯಾವುದಕ್ಕೂ ನಾವು ಜಗ್ಗದೆ ಬಗ್ಗದೆ ನರಸಿಂಹ ಸ್ವಾಮಿಗಳ ಹಾಡನ್ನು ಇಂದಿನ ಕತೆಯಲ್ಲಿ ಸೇರಿಸಿಕೊಂಡಿದ್ದೇವೆ.”

Thumari Ramachandra

source: https://www.facebook.com/groups/1499395003680065/permalink/1598881377064760/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s