ಶ್ರೀರಾಮ ಮತ್ತು ಆದಿಶಂಕರ ಪದಗಳ ಬಳಕೆಗೆ ಅರ್ಹತೆ ಇರಬೇಕು.

ಶ್ರೀರಾಮ ಮತ್ತು ಆದಿಶಂಕರ ಪದಗಳ ಬಳಕೆಗೆ ಅರ್ಹತೆ ಇರಬೇಕು.

ಜನ್ಮನಾಮವನ್ನು ನೀಡುವಾಗ ಕುಲಗುರು ವಶಿಷ್ಠರು ಹುಟ್ಟಿದ ಮಗು ಯಾರೆಂಬುದನ್ನು ತಮ್ಮ ಅಪರೋಕ್ಷ ಜ್ಞಾನದಿಂದ ತಿಳಿದು ಅಷ್ಟಾಕ್ಷರೀ ಮತ್ತು ಪಂಚಕ್ಷರೀ ಮಹಾಮಂತ್ರಗಳ ಬೀಜಾಕ್ಷರಗಳನ್ನು ಸಂಯೋಜಿಸಿ “ರಾಮ” ಎಂಬ ಹೆಸರನ್ನು ಸೃಷ್ಟಿಸಿದರು.

ಎಳೆಯ ಮಗು ಶ್ರೀರಾಮನೇ ಬೆಳೆದ ಬಿಲ್ವಿದ್ಯೆಗಾರರಿಗಿಂತ ಸಬಲ ಸಶಕ್ತನೆಂಬುದನ್ನು ಪರೋಕ್ಷ ಧೇನಿಸಿ ವಿದ್ಯೆನೀಡುವ ನೆಪದಲ್ಲಿ ತನ್ನಾಶ್ರಮಕ್ಕೆ ಕರೆದೊಯ್ದು ಮುಂದೆ ವಿದೇಹದಲ್ಲಿ ರಾಮನಿಂದ ಶಿವಧನುಸ್ಸಿನ ಹೆದೆಯೆತ್ತಿಸಿ ಮುರಿಸಿದವರು ಬ್ರಹ್ಮರ್ಷಿ ವಿಶ್ವಾಮಿತ್ರರು.

ರಾಮಾಯಣವೆಂಬ ರಾಮಜೀವನದ ಒಂದು ಪಾತ್ರವಾಗಿ ನಂತರ ಅದನ್ನೇ ಕೃತಿಯಾಗಿ ಬರೆದ ಆದಿಮಹಾಕವಿ ವಾಲ್ಮೀಕಿ ರಾಮನನ್ನು ಅರಿತಿದ್ದರು.

ಪುತ್ರಕಾಮೇಷ್ಠಿಯಾಗದ ಫಲವಾಗಿ ರಾಜರ್ಷಿ ದಶರಥ ಕೌಸಲ್ಯೆಯಲ್ಲಿ ಪಡೆದ ಮಗು ಶ್ರೀರಾಮ. ರಾಮ ಹಿರಿಯಮಗನೆಂದೋ ಸುಂದರನೆಂದೋ ಅವನಿಗೆ ಪಟ್ಟಾಭಿಷೇಕ ನಡೆಸಲು ತೀರ್ಮಾನಿಸಿದ್ದಲ್ಲ. ರಾಮನಿಗಿದ್ದ ವಿಶೇಷ ಅರ್ಹತೆ ಮತ್ತು ಸಾಮರ್ಥ್ಯಗಳು ದಶರಥನ ಅನುಭವಕ್ಕೆ ನಿಲುಕಿದ್ದವು.

ಮಗ ಕೇವಲ ತನ್ನ ಖಾಸಗೀ ಸ್ವತ್ತಲ್ಲ. ಅವನು ಲೋಕಾಭಿರಾಮ ಎಂಬುದನ್ನರಿತವಳು ತಾಯಿ ಕೌಸಲ್ಯೆ.

ರಾವಣ ರಾಜ್ಯದಲ್ಲಿ ಇದ್ದುಬಂದು ಅನ್ಯರ ಕಣ್ಣಿನಲ್ಲಿ ಶೀಲಶಂಕಿತಕ್ಕೊಳಗಾದ ಮಡದಿಯನ್ನು ತನ್ನಲ್ಲೇ ಇರಿಸಿಕೊಳ್ಳಲು ರಾಜಾಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಾನೆಂದಾಗಬಾರದು ಎಂಬ ಕಾರಣಕ್ಕೆ ರಜಕನ ದನಿಗೂ ಬೆಲೆಗೊಟ್ಟ ಶ್ರೀರಾಮನ ಆಂತರ್ಯವಾದವಳು ಅನುರೂಪ ಸತಿ ಸೀತೆ.

ಹೆಜ್ಜೆಯ ನೆರಳಿನಲ್ಲಿ ಹೆಜ್ಜೆಯಿಟ್ಟು ಅಣ್ಣ ತನ್ನಿಂದ ಬೇರಲ್ಲವೆಂಬ ದಿವ್ಯಾನುಭೂತಿಯನ್ನು ಪಡೆದು ಅಣ್ಣನನ್ನು ಅನುಸರಿಸಿ ಅರೆಕ್ಷಣ ಅಣ್ಣನನ್ನು ಬಿಟ್ಟರಲಾರನಾದರೂ ಅಣ್ಣನಾಜ್ಞೆಯಂತೆ ದೇಹವನ್ನು ತೊರೆದವ ಲಕ್ಷ್ಮಣ.

ಅಣ್ಣನ ಮಮತೆ ವಾತ್ಸಲ್ಯಗಳನ್ನೂ ಶಕ್ತಿ ಸಾಮರ್ಥ್ಯಗಳನ್ನೂ ಅರಿತು ಪಾದುಕಾ ಪಟ್ಟಾಭಿಷೇಕ ನಡೆಸಿ ರಾಮನ ಪ್ರತಿನಿಧಿಯಾಗಿ ಅವ ಬರುವವರೆಗೆ ರಾಜ್ಯಭಾರ ನಡೆಸಿದವ ಭರತ.

ಸಕಲವನ್ನೂ ಬಲ್ಲನಾದರೂ ಪರಿಸ್ಥಿತಿಯ ಒತ್ತಡದಲ್ಲಿ ಯಾವ ಮಾತನ್ನೂ ಆಡದೇ ಅಣ್ಣನನ್ನೇ ಮೈ-ಮನ ತುಂಬಿಕೊಂಡಿದ್ದ ಶತ್ರುಘ್ನ.

ರಾಮನ ರಾಜವೈಶಿಷ್ಟ್ಯವನ್ನೂ ಅನನ್ಯ ಸಲ್ಲಕ್ಷಣವನ್ನೂ ತ್ರಿಕರಣ ಶುದ್ಧಿಯನ್ನೂ ಕಂಡು ಅನುಭವಿಸಿ ಬುಡದಿಂದ ಕೊನೆವರೆಗೆ ಮತ್ತು ನಂತರದ ಯುಗಗಳಲ್ಲೂ ರಾಮನಿಲ್ಲದೆ ಬದುಕಲಾರನೆಂದು ಅವನ ದಾಸ್ಯವನ್ನೇ ಕೈಂಕರ್ಯವಾಗಿ ಸ್ವೀಕರಿಸಿದ ವಿಶೇಷ ಕಪಿ ಹನುಮ. ದ್ವಾಪರದಲ್ಲಿ ಕೃಷ್ಣರೂಪದಿಂದಿದ್ದ ದೇವರನಲ್ಲಿ ರಾಮನನ್ನು ತೋರುವವರೆಗೂ ಒಪ್ಪಿಕೊಳ್ಳದಿದ್ದ ಮಹಾನುಭಾವ.

ನಂತರ ಶಬರಿ, ವಿಭೀಷಣ, ಗುಹ ಮತ್ತು ಸ್ವತಃ ರಾವಣ.

ಇವರೆಲ್ಲ ರಾಮನನ್ನು ಅರಿತಷ್ಟು ನಾವು ಅರಿತಿಲ್ಲ. ಅರಿಯಲು ಸಾಧ್ಯವೂ ಅಗುವುದಿಲ್ಲ. ರಾಮ ಎಂಬ ಪದ ಬಳಕೆಗೂ ಒಂದು ಅರ್ಹತೆ ಬೇಕು. ನನ್ನ ಹಿರಿಯರು ನನಗೆ ರಾಮಚಂದ್ರ ಎಂದು ಹೆಸರಿಟ್ಟರೂ ಆ ಹೆಸರಿಗೆ ನಾನು ಅರ್ಹನಲ್ಲ. ಯಾಕೆಂದರೆ ಉದರ ನಿಮಿತ್ತ ವೃತ್ತಿಗಳನ್ನು ಹುಡುಕಿ ದೇಶಾಂತರ ತಿರುಗಿದ ನಾನು ಅನಿವಾರ್ಯವಾಗಿ ಸುಳ್ಳು ಹೇಳದಿರಲಿಲ್ಲ.

ಪತ್ನಿ/ಪತಿ ಒಬ್ಬಳ/ನ ಹೊರತು ಇನ್ಯಾರನ್ನೂ ಮನಸ್ಸಿನಲ್ಲೂ ಕಾಮಿಸುವುದಿಲ್ಲ ಎಂಬುದು ಜನಸಾಮಾನ್ಯರ ಅಪ್ಪಟ ಸುಳ್ಳು. ಜೀವನದ ಯಾವುದೋ ಗಳಿಗೆಗಳಲ್ಲಿ ರೂಪಕ್ಕೋ ವ್ಯಕ್ತಿತ್ವಕ್ಕೋ ಸಹಾಯಕ್ಕೋ ಮನಸೋತ ವಿರುದ್ಧ ಲಿಂಗಿಗಳು ದೈಹಿಕ ಕೃತಿಯಲ್ಲಿ ಅದನ್ನು ನಿಯಂತ್ರಿಸಿದರೂ ಎಲ್ಲೋ ಒಮ್ಮೊಮ್ಮೆ ಬಯಕೆಗಳ ದಾಸರಾಗಿ ಮನದಲ್ಲೇ ಒಂದು ಕ್ಷಣ ಕಾಮಿಸಿರಬಹುದು. ತ್ರಿಕರಣದಲ್ಲಿ ಮನಸ್ಸು ಕೂಡ ಒಂದು. ಸಾಮಾನ್ಯನಾದ ನಾನು ಸಹ ಇದರಿಂದ ಮುಕ್ತನಲ್ಲ. ರಾಮ ಎಂಬ ವ್ಯಕ್ತಿತ್ವದಲ್ಲಿ ಜಾಗೃತ್ ಸುಷುಪ್ತಿ ಮತ್ತು ಸ್ವಪ್ನವೆಂಬ ಮೂರೂ ಅವಸ್ಥೆಗಳಲ್ಲಿ ಇದು ನಡೆದಿರಲಿಲ್ಲ. ಈ ಕಾರಣಕ್ಕಾಗಿಯೂ ನನಗೆ ರಾಮಚಂದ್ರ ಎಂಬ ಹೆಸರನ್ನು ಬಳಸುವ ಅರ್ಹತೆಯಿಲ್ಲ. ಇಷ್ಟೆಲ್ಲ ಅಥವಾ ಇದಕ್ಕೂ ಹೆಚ್ಚಿಗೆ ಅರಿತ ನಾವೇ ರಾಮನ ಸರ್ವತೋಮುಖ ಮತ್ತು ವಿಶ್ವತೋಮುಖ ಸಾಮರ್ಥ್ಯವನ್ನು ಅರಿಯಲು ಸಾಧ್ಯವಾಗದಾಗ ಬುದ್ಧಿಜೀವಿಗಳೆಂಬ ಆದಿವಾಸಿಗಳ ಬ್ರೀಡ್‍ನವರು ರಾಮನನ್ನು ಅರಿಯಲು ಸಾಧ್ಯವೇ ಇಲ್ಲ.

ತ್ರಿಕರಣ ಶುದ್ಧಿಯಿಲ್ಲದ ಹೆಣ್ಣುಬಾಕ ತಾನೇ ರಾಮನೆಂದರೆ ಅದನ್ನೇ ನಂಬುವ ಜನರಲ್ಲಿ ಯಾವ ಗಾಢಾಂಧಕಾರವಿರಬಹುದು? ಹೆಣ್ಣುಬಾಕರ ಕುರಿತು ಮತ್ತು ಸ್ವೇಚ್ಛಾಚಾರದ ಕುರಿತು ನಮ್ಮ ಇಮ್ಮಡಿ ವಿಶ್ವೇಶ್ವರಯ್ಯನವರು ಅನ್ಯರ ಬಾಯಲ್ಲಿ ನಿಯಮಗಳನ್ನು ಹೇಳಿಸಿ ನಮ್ಮ ಮುಂದಿಡುತ್ತಾರೆ. ಕೃತಿಯಲ್ಲಿ ಸಮಾಜದ ಹಿತರಕ್ಷಣೆಯನ್ನು ಕಡೆಗಣಿಸಿ ರಿವರ್ಸ್ ಗೇರಿನಲ್ಲಿ ಗಾಡಿ ಓಡಿಸಿ ಹೆಣ್ಣುಬಾಕನ ಹಿತಸಂರಕ್ಷಣಾ ಎಂಜಿನೀಯರಿಂಗ್ ಕಮಿಟಿಯಲ್ಲಿ ತಾವೇ ಪ್ರಮುಖಪಾತ್ರವಾಗಿಬಿಡುತ್ತಾರೆ.

ಸಮ್ಯಕ್+ನ್ಯಾಸ=ಸನ್ಯಾಸ [ಸಮ್ಯಕ್=ಸರಿಯಾದ; ನ್ಯಾಸ=ತ್ಯಜಿಸುವುದು ಅಥವಾ ಸನ್ಯಾಸ=ಸರಿಯಾದದ್ದನ್ನು ತ್ಯಜಿಸುವುದು] ಯಾವ ರೀತಿಯ ಬದುಕು ಸುಲಭವೋ ಸರಳವೋ ಮತ್ತು ಲೌಕಿಕ ಸುಖೋಪಭೋಗ ಲಾಲಿತ್ಯಗಳಿಂದ ಪ್ರೇರಿತವೋ ಅಂತಹದ್ದನ್ನು ತ್ಯಜಿಸುವುದು. ಸನ್ಯಾಸಿಗೆ ತಾನು ಮತ್ತು ತನ್ನದು ಎಂಬ ಎರಡರಲ್ಲೂ ಆಸಕ್ತಿಯಿರುವುದಿಲ್ಲ. ದೈಹಿಕ ಅಲಂಕಾರ ಆಡಂಬರ ಪಟಾಲಮ್ಮು ಬಿಲ್ಡಪ್ಪು ಯಾವುದೂ ಬೇಕಾಗುವುದಿಲ್ಲ. ಎಲ್ಲದರ ಮಧ್ಯದಲ್ಲಿದ್ದೂ ಅವರು ನೀರಸರು ಮತ್ತು ನಿರ್ಲಿಪ್ತರು. ಕಂಚಿ ಪರಮಾಚಾರ್ಯರು, ರಮಣ ಮಹರ್ಷಿಗಳು, ವರದಹಳ್ಳಿ ಶ್ರೀಧರ ಸ್ವಾಮಿಗಳು, ಶೃಂಗೇರಿ ಚಂದ್ರಶೇಖರ ಭಾರತಿಗಳು ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಇವರ್ಯಾರೂ ತಾವು ದೇವರೆಂದಾಗಲೀ ದೇವರ ಅವತಾರವೆಂದಾಗಲೀ ಹೇಳಿಕೊಳ್ಳಲಿಲ್ಲ.

ಧೃತಿಃ ಕ್ಷಮಾ ದಮೋಸ್ತೇಯಂ ಶೌಚಮಿಂದ್ರಿಯನಿಗ್ರಹಃ
ಧೀರ್ವಿದ್ಯಾ ಸತ್ಯಮಕ್ರೋಧೋ ದಶಕಂ ಧರ್ಮ ಲಕ್ಷಣಂ (ಮನು ಸ್ಮೃತಿ)

ಇದು ಸನ್ಯಾಸಿಯಾಗುವವನಿಗಿರಬೇಕಾದ ಪ್ರಥಮ ಅರ್ಹತೆ. ಜೊತೆಗೆ ವೈರಾಗ್ಯವಿರಬೇಕು. ಪಾರಮಾರ್ಥಿಕತೆಯಲ್ಲಿ ಆಸಕ್ತಿಯಿದ್ದು ಇಂದ್ರಿಯಗಳನ್ನು ಒಳಮುಖವಾಗಿ ತಿರುಗಿಸಿಕೊಳ್ಳಬೇಕು. ಇದಕ್ಕಾಗಿ ಸನ್ಯಾಸಿಯಾದವ ಪ್ರತಿದಿನ ಬ್ರಾಹ್ಮೀ ಮುಹೂರ್ತಕ್ಕೂ ಮುನ್ನ ಅಷ್ಟಾಂಗಯೋಗವನ್ನು ಕೈಗೊಳ್ಳಬೇಕು. ಸನ್ಯಾಸಿಗೆ ಹೇಳಲ್ಪಟ್ಟ ಆಹಾರವನ್ನು ಹೇಳಿದ ಪ್ರಮಾಣದಲ್ಲಿ ಮಾತ್ರ ತೆಗೆದುಕೊಳ್ಳಬೇಕು. ಐಶಾರಾಮಿ ಕಾರಲ್ಲಿ ಓಡಾಡುವಾಗ ಮುಷ್ಠಿತುಂಬ ಗೋಡಂಬಿ ದ್ರಾಕ್ಷಿ ಎತ್ತಿಕೊಳ್ಳುತ್ತ ತಿನ್ನುವುದಲ್ಲ. ಈರುಳ್ಳಿ ಉಪ್ಪಿಟ್ಟು ತಿನ್ನುವುದಂತೂ ಅಲ್ಲವೇ ಅಲ್ಲ.

ಸನ್ಯಾಸಕ್ಕೆ ನಿಯಮಗಳಿವೆ. ಅದರಲ್ಲೂ ಶಂಕರ ಪರಂಪರೆಗೆ ಶಂಕರರೇ ಹೇಳಿದ ನಿಯಮಗಳಿವೆ. ನಿಮ್ಮ ಎದೆ ಗಟ್ಟಿ ಹಿಡಿದುಕೊಳ್ಳಿ. ಶಂಕರರು ಸ್ಥಾಪಿಸಿದ್ದು ಕೇವಲ ನಾಲ್ಕು ಆಮ್ನಾಯ ಮಠಗಳನ್ನು ಮಾತ್ರ. ಉಳಿದೆಲ್ಲವೂ ನಂತರದ ದಿನಗಳಲ್ಲಿ ನಡೆದ ಬೆಳವಣಿಗೆಗಳಲ್ಲಿ ಹುಟ್ಟಿಕೊಂಡು ತಮ್ಮ ಸುತ್ತ ಕತೆಗಳನ್ನು ಕಟ್ಟಿಕೊಂಡವು. ವಿಷಯ ಹೀಗಿದ್ದರೂ ಯತಿಯೊಬ್ಬ ಸರಿಯಾದ ಯತಿಧರ್ಮ ಪಾಲಿಸಿದರೆ ಅವನಿಗೆ ವಿಶೇಷ ಶಕ್ತಿ ಲಭಿಸುತ್ತದೆ ಎಂಬುದು ಸಾಬೀತಾಗಿದೆ.

ಛಿನ್ನ ವಿಚ್ಛಿನ್ನ ಅವಿಚ್ಛಿನ್ನ ಎಂಬುದೆಲ್ಲ ಕೇವಲ ಮ್ಯೂಜಿಕ್ಕಿಗೆ ಯಾವುದೋ ಚಿಕ್ಕ ಪರ್ಕುಶನ್ ಇದ್ದಂತೆ. ಗೊತ್ತಾಯ್ತಲ್ಲ? ಅದು ಅಮುಖ್ಯ. ಸುದೀರ್ಘಕಾಲ ಪರಂಪರೆ ಖಾಲಿ ಬೀಳಲಿಲ್ಲ ಎಂದರೆ ಅದು ಅವಿಚ್ಛಿನ್ನದಂತೇ ಪರಿಗಣಿತ. ಹೆಪ್ಪಿಗೆ ಹುಂಡು ಮಜ್ಜಿಗೆ ಇದ್ದರೆ ಸಾಕು. ಕೆಲವು ಮನೆಗಳಲ್ಲಿ ಹೆಪ್ಪು ಹಾಕುವ ಮಜ್ಜಿಗೆಗೂ ಒಂದು ಅವಿಚ್ಛಿನ್ನ ಪರಂಪರೆಯೆ ಇರುತ್ತದೆ. ಹಾಗಂತ ಶುಚಿತ್ವದಲ್ಲಿರುವ ಅನ್ಯರ ಮಜ್ಜಿಗೆಯನ್ನು ತಂದು ಹೆಪ್ಪು ಹಾಕಿದರೆ ಮೊಸರು ತಯಾರಾಗುವುದಿಲ್ಲವೇ?

ಲೌಕಿಕರನ್ನು ಧರ್ಮಮಾರ್ಗದಲ್ಲಿ ಮುನ್ನಡೆಸುವ ಯತಿಯೇ ಧರ್ಮಬಾಹಿರನಾದರೆ ಅವನಲ್ಲಿ ಉಳಿಕೆಯ ಜನಸಾಮಾನ್ಯರಲ್ಲಿರುವ ಆತ್ಮ ಶಕ್ತಿಯೂ ಇರುವುದಿಲ್ಲ. ಪೀಠಗೀಟ ಎಲ್ಲ ಬರೆ ಬೊಗಳೆ. ಯಾವ ಪೀಠವೇ ಆದರೂ ಕೂಡ್ರುವ ವ್ಯಕ್ತಿ ಕಚ್ಚೆಹರುಕನಾದರೆ ಪೀಠದ ಕತೆ ನೆಗೆದುಬಿದ್ದು ಹೋಗುತ್ತದೆ. ಕೆಂಪು ಅಕ್ಷತೆಯನ್ನು ಕ್ವಿಂಟಾಲುಗಟ್ಟಲೆ ಕಲಸಿ ಮೊಗೆದು ಕೊಡುತ್ತಲೆ ಇರಬಹುದಷ್ಟೆ. ಮಹಾನ್ ತಪಸ್ವಿಗಳು ನಮ್ಮಿಂದ ಮನನೊಂದರೆ ಅದೇ ನಮಗೆ ಶಾಪವಾಗುವುತ್ತದೆಯೆ ಹೊರತು ತಪಸ್ಸೆ ಇಲ್ಲದ ಭಕಗಳು ಕೊಡುತ್ತೇವೆಂದು ಬೆದರಿಸುವ ಯಾವ ಶಾಪವೂ ಯಾರಿಗೂ ತಾಗುವುದಿಲ್ಲ.

ಆದಿಶಂಕರರ ಹೆಸರನ್ನು ಬಳಸಿಕೊಂಡು ಎಷ್ಟು ಜನ ಬದುಕುತ್ತಿಲ್ಲ? ಅಂತವರ ಹೆಸರುಗಳ ಹಿಂದಿರುವ ಶಂಕರಾಚಾರ್ಯ ಪದವನ್ನು ತೆಗೆದುಹಾಕಿ ನೋಡಿ. ಕೆಲವು ಹೆಸರುಗಳಿಗೆ ಕವಡೆ ಕಾಸಿನ ಮೌಲ್ಯವೂ ಇರುವುದಿಲ್ಲ.

ಸ್ಕೈಪ್ ಮೂಲಕ ನನ್ನ ಭಾಷಣದಲ್ಲಿ ಇದನ್ನೆಲ್ಲ ಕೇಳಿದ ಕವಳದ ಗೋಪಣ್ಣ”ರಾಮು ಅಯ್ಯಯ್ಯೋ ಅಜೀರ್ಣಾಗೊತೋ ಯಂಗೆ” ಅಂದ. ಮುಂದುವರಿದು “ಕಿರೀಟೋತ್ಸವಕ್ಕೆ ಜಾನಪದ ಕಲಾವಿದರು ಸೋಮನ ಕುಣಿತದೋರು ಹಲಗೆಯವ್ರು ಕಂಸಾಳೆ ಗೊರವರ ಕುಣಿತ ಇಂಗ್ಲೀಷ್ ಬ್ಯಾಂಡು ಹಾಲಕ್ಕಿ ಸುಗ್ಗಿ ಎಲ್ಲಾ ಈಗಿಂದ್ಲೇ ಒಂದೊಂದಾಗಿ ಬುಕ್ ಮಾಡಲಡ್ಡಿಲ್ಯನಾ?” ಕೇಳಿ ಪಕಪಕ ನಕ್ಕ.

Thumari Ramachandra

source: https://www.facebook.com/groups/1499395003680065/permalink/1594472124172352/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s